‘ಅಶ್ವತ್ಥಾಮ ಹತಃ’ ಪುಸ್ತಕ ಪರಿಚಯ – ಪೂರ್ಣಿಮಾ ಮರಳಿಹಳ್ಳಿ

ಇಂಗ್ಲೀಷ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ ತಮ್ಮ‌ ನಿವೃತ್ತ ಜೀವನವನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಶಿಕ್ಷಕಿ ಸಿ ಬಿ ಶೈಲಾ ಜಯಕುಮಾರ ಅವರ ‘ಅಶ್ವತ್ಥಾಮ ಹತಃ’ ಪುಸ್ತಕದ ಕುರಿತು ಲೇಖಕಿ, ಶಿಕ್ಷಕಿ ಪೂರ್ಣಿಮಾ ಮರಳಿಹಳ್ಳಿ ಅವರು ಬರೆದ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ : ಅಶ್ವತ್ಥಾಮ ಹತಃ
ಲೇಖಕಿಯರು – ಸಿ ಬಿ ಶೈಲಾ ಜಯಕುಮಾರ
ಮುದ್ರಣ – ಪ್ರಥಮ
ಪ್ರಕಾಶಕರು – ಗೀತಾಂಜಲಿ ಪುಸ್ತಕ ಪ್ರಕಾಶನ
ಬೆಲೆ – ೧೩೦/

ಶಿಕ್ಷಕರಾದ ಮಾತೃ ಸ್ವರೂಪಿ, ಹಿರಿಯ ಬರಹಗಾರ್ತಿ, ಶೈಲಾ ಜಯಕುಮಾರ ಅವರು ಇತ್ತೀಚಿನ ಅಶ್ವತ್ಥಾಮ_ಹತಃ ಕೃತಿಯನ್ನು ಪರಿಚಯಿಸುತ್ತಿದ್ದಾರೆ ಶಿಕ್ಷಕಿ ಪೂರ್ಣಿಮಾ ಮರಳಿಹಳ್ಳಿ ಅವರು.

ಮೊದಲು ಲೇಖಕಿಯರ ಪರಿಚಯ ಮಾಡುವೆ : 

ತುಂಬಿದ ಕೊಡದ ತುಳುಕುವುದಿಲ್ಲ ಎಂಬ ನಾಣ್ಣುಡಿಗೆ ನೈಜ ಉದಾಹರಣೆಯೇ ಲೇಖಕಿಯರಾದ ಶ್ರೀಮತಿ ಶೈಲಾ ಜಯಕುಮಾರ ಅವರ ವ್ಯಕ್ತಿತ್ವ. ಬರವಣಿಗೆಯಲ್ಲಿ ಪ್ರೌಢಿಮೆ,ಮಾತಿನಲ್ಲಿ ಜಾಣ್ಮೆ, ನಡೆ ನುಡಿಯಲ್ಲಿ ಗಂಭೀರತೆ, ಸರಳತೆ, ಸೌಜನ್ಯತೆ ಸಂಪೂರ್ಣವಾಗಿ ಪ್ರಬುದ್ಧ ವ್ಯಕ್ತಿತ್ವ ಲೇಖಕಿಯರದ್ದು.

ಇಂಗ್ಲೀಷ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ ತಮ್ಮ‌ ನಿವೃತ್ತ ಜೀವನವನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಸಾಹಿತ್ಯಾಸಕ್ತರಿಗೆ ಇದೊಂದು ಸಂತಸದ ವಿಷಯ. ಮೊದಲ ಬಾರಿ ಲೇಖಕಿಯರ ಮಾತುಗಳನ್ನು ಕೇಳಿದ್ದ ನನಗೆ ಅವರ ಬರಹಗಳನ್ನು ಕಥಾಗುಚ್ಚದಲ್ಲಿ ಓದಿದಾಗ ನಿಜವಾಗಿಯೂ ಇವರ ಅಭಿಮಾನಿಗಳ ಬಳಗದಲ್ಲಿ ನಾನೂ ಒಬ್ಬಳಾದೆ.

ಲೇಖಕಿಯರ ಉತ್ತರೆಯ ಸ್ವಾಗತ, ಅಂತಃಕರಣದ ರಾಯಭಾರಿಗಳು, ಚಿರಂಜೀವಿಗಳು, ಏಕಸೂತ್ರದಲ್ಲಿ ಅನೇಕ ಈ ಎಲ್ಲ ಕೃತಿಗಳನ್ನು ಓದಿ ಇಷ್ಟಪಟ್ಟ ನನಗೆ ಅಶ್ವತ್ಥಾಮ ಹತಃ ಕೂಡಾ ತುಂಬಾ ಆಕರ್ಷಣೆ ಉಂಟುಮಾಡಿತ್ತು.ಕೈಗೆ ಸಿಕ್ಕ ದಿನವೇ ಅರ್ಧದಷ್ಟು ಓದಿದ್ದ ನನಗೆ ಉಳಿದರ್ಧ ಓದಿ ಮುಗಿಸಿದಾಗಲೇ ಸಮಾಧಾನ ಆಗಿದ್ದು.

ಕೃತಿ ಪರಿಚಯ :

* ಮೊದಲು ಆಕರ್ಷಕವಾದ ಮುಖಪುಟದ ವಿನ್ಯಾಸ.
* ನಂತರ ಕಥಾಗುಚ್ಚದ ಸಹೃದಯ ಓದುಗರಿಗೆ ಕೃತಿಯ ಅರ್ಪಣೆ.
* ನಮ್ಮ ಪುಸ್ತಕ ಅವಲೋಕನ ಗುಂಪಿನ ನಿರ್ವಾಹಕಿಯರು,ಸಾಹಿತ್ಯ ಪ್ರೇಮಿಗಳು ಆದ ಶ್ರೀಮತಿ ವೀಣಾ ನಾಯಕ್ ಮೆಡಂ ಅವರಿಂದ ಮುನ್ನುಡಿ. ಮುನ್ನುಡಿಯಲ್ಲಿ ಲೇಖಕಿಯರ ಪರಿಚಯದೊಂದಿಗೆ ಕಥಾಸಂಕಲನದ ೧೨ ಕಥೆಗಳ ಸಂಕ್ಷಿಪ್ತ ಸಾರವನ್ನು ತಿಳಿಯಬಹುದು.
* ಅದೇ ರೀತಿ ಶ್ರೀ ಲಕ್ಷ್ಮೀ ಭಟ್ ಅವರಿಂದ ಸದಾಶಯ ನುಡಿಗಳು.
* ನಂತರದಲ್ಲಿ ಲೇಖಕಿಯರ ಮನಸಿನ ಮಾತು.

ಲೇಖಕಿಯರ ಮನಸ್ಸಿನ ಮಾತು ಓದುಗರ ಮನಸ್ಸನ್ನೇ ನಾಟುತ್ತವೆ. ಬರವಣಿಗೆಯೇ ಒಂದು ಪ್ರಸವ,ಆದರೆ ಹುಟ್ಟುವ ಕೃತಿಗಳೆಂಬ ಕಂದಮ್ಮಗಳು ಆರೋಗ್ಯವಂತ ಆಗರಬೇಕು ಎಂದು ಕೃತಿಗಳ ಗುಣಾತ್ಮಕತೆ, ಮೌಲ್ಯದ ಬಗ್ಗೆ ಹೇಳಿದ ರೀತಿ, ಬಳಸಿದ ಉಪಮೇಯ ನಿಜಕ್ಕೂ ಇಷ್ಟವಾಗುತ್ತದೆ.

* ಮೊದಲ ಮೂರು ಕಥಾವಸ್ತು ಮಹಾಭಾರತದ ಮೂರು ಪಾತ್ರಗಳಾದ ಅಶ್ವತ್ಥಾಮ, ಮಹಾತಪಸ್ವಿ ಹಿಡಿಂಬೆ ಮತ್ತು ಧೃತರಾಷ್ಟ್ರನ ಅಂತಃಚಕ್ಷು ಸಂಜಯನ ಬಗ್ಗೆ ಇದೆ.ಈ ಪಾತ್ರಗಳ ಬಗ್ಗೆ ಓದುವಾಗ ಓದುಗರನ್ನು ಪರಕಾಯ ಪ್ರವೇಶ ಮಾಡಿಸುವುದು ಲೇಖಕಿಯರ ನಿರೂಪಣೆಯ ವಿಶೇಷತೆ.

ಸಂಜಯನಿಗೆ ಅರಮನೆಯಲ್ಲಿ ಇದ್ದೂ ಹೋರಾಟದ ಬದುಕೇ ಅನುಭವಿಸಬೇಕಾದ ಅನಿವಾರ್ಯತೆ. ಹದಿನೆಂಟು ದಿನಗಳ ಯುದ್ಧದಲ್ಲಿ ಬರೀ ಸಾವಿನ ಸುದ್ದಿಗಳು. ಸಂಜಯನಿಗೆ ಲಭಿಸಿದ ಈ ವಿಶಿಷ್ಟ ಶಕ್ತಿ ಸೌಭಾಗ್ಯವೋ,ದೌರ್ಭಾಗ್ಯವೋ ? ಆತನ ಮನಸಿನ ಉದ್ವೇಗ, ದ್ವಂದ್ವ,ತುಮುಲಗಳನ್ನು ಮಹಾಭಾರತ ಸಂಪೂರ್ಣ ಕಥೆಯ ಜೊತೆಗೆ ತಿಳಿಯಬಹುದು.

* ಕಥಾಸಂಕಲನ ಇತಿಹಾಸದ ಕಥೆಗಳೂ ಇವೆ. ಚಾಣುಕ್ಯ ಗುರುವಿನ ಸಹಾಯದಿಂದ ಚಂದ್ರಗುಪ್ತನು ನಂದರಾಜನನ್ನು ಸೋಲಿಸಿ ಭರತ ವರ್ಷದ ಮೊದಲ ಚಕ್ರಾಧಿಪತ್ಯ ಸಾಧಿಸುವ ಇತಿಹಾಸ ಮುಂದೆ ಗುರು, ಹಿಂದೆ ಗುರಿಯಲ್ಲಿದೆ. ಅದೇ ರೀತಿ ನ್ಯಾಯ ನಿರ್ಣಯ ಮತ್ತು ವಿಜಯನಗರದ ವೀರಪುತ್ರ ಕಥೆಗಳು ಇತಿಹಾಸವನ್ನು ಓದಲು ಆಸಕ್ತಿ ಮೂಡಿಸುತ್ತವೆ.

* ಈ ಕಥಾಸಂಕಲನದಲ್ಲಿ ನನಗೆ ಅತ್ಯಂತ ಇಷ್ಟವಾದ ಕಥೆ. “ಗುರುಪಥ – ಶಿವಪಥ”.ಸೋದರ ಮಾವ ಮತ್ತು ಅಳಿಯನ ಸಂಬಂಧ ಹೊಂದಿದ ಹರಿಹರ ಮತ್ತು ರಾಘವಾಂಕರ ನಡುವಿನ ಗುರು – ಶಿಷ್ಯನ ಬಾಂಧವ್ಯ ಓದುವಾಗ ಮೈ ನವಿರೇಳುತ್ತದೆ. ಪ್ರಸ್ತುತ ದಿನಗಳಲ್ಲಿ ಶಿಕ್ಷಕರು ಕಣ್ಣರಳಸಿ ಮಕ್ಕಳನ್ನು ನೋಡುವುದು ಕಾನೂನಿನ ರೀತಿ ಅಪರಾಧ. ಆದರೆ ಈ ಗುರು ಶಿಷ್ಯರ ಬಾಂಧವ್ಯ ಓದುವಾಗ ಹರಿಹರನಂತಹ ಗುರುವನ್ನು ಪಡೆದ ರಾಘವಾಂಕ ಅದೃಷ್ಟವಂತನೋ? ರಾಘವಾಂಕನಂತಹ ಶಿಷ್ಯನನ್ನು ಪಡೆದ ಗುರು ಹರಿಹರ ಅದೃಷ್ಟವಂತನೋ?? ನಿಜವಾಗಿಯೂ ಈ ಕಥೆಯನ್ನು ಓದಿಯೇ ಅನುಭವಿಸಬೇಕು.

* “ಒಂದು ಸಾವಿನ ಸುತ್ತ” ಕಥೆಯನ್ನು ಓದಿ ಮುಗಿಸುವ ಹೊತ್ತಿಗೆ ಮನಸ್ಸು ಮೂಕವಾಗುತ್ತದೆ. ಗೆಳತಿಯ ಸಾವು, ಕೊನೆಯಲ್ಲಿ ಸಿಗುವ ಗೆಳತಿಯ ಪತ್ರ ಓದುಗರನ್ನು ತುಂಬಾ ಭಾವುಕರನ್ನಾಗಿಸುತ್ತದೆ. ಬದುಕಿನ ಹೋರಾಟದಲ್ಲಿ ಇಂತಹ ಎಷ್ಟೋ ಹೆಣ್ಣು ಮಕ್ಕಳು ಬದುಕಲ್ಲಿ ಸಾವಿಗೆ ಶರಣಾಗಿ ತಮ್ಮ ಬವಣೆಗಳಿಗೆ ಸಾವೇ ಮುಕ್ತಿ ಎಂದು ನಿರ್ಧರಿಸುತ್ತಾರೆ.
ಎಲ್ಲರೂ ಓದಲೇಬೇಕಾದ ಕಥೆ ಇದು.

* “ನಿರ್ಧಾರ “ಕಥೆಯಲ್ಲಿ ವೃತ್ತಿಯಲ್ಲಿ ವೈದ್ಯಳಾದ ಸೌಮ್ಯಾ ಮೂರನೆಯ ಮಗುವನ್ನು ಪಡೆಯಲು ಇಷ್ಟವಿರದಿದ್ದರೂ ಕೊನೆಗೆ ಮೂರನೆಯ ಮಗುವಿಗೆ ತಾಯಿಯಾಗುತ್ತಾಳೆ.
ಹಾಗಾದರೆ ಅವಳ ಮನಃಪರಿವರ್ತನೆಗೆ ಹೇಗಾಯ್ತು?  ಇದನ್ನು ಓದಿಯೇ ತಿಳಿಯಬೇಕು. ಮನಸ್ಸಿನ ಉಯ್ಯಾಲೆಯ ಸ್ಥಿತಿಗೆ ಒಂದು ನಿರ್ಧಾರ ಕೊಡುತ್ತಾಳೆ ಸೌಮ್ಯಾ.

* ಅಷ್ಟೇ ಸುಂದರವಾದ ಇನ್ನೊಂದು ಕಥೆ “ತರ್ಕಕ್ಕೆ ಸಿಗದ ಬದುಕು “. ಬದುಕಿನಲ್ಲಿ ಶಿಸ್ತು, ನೈತಿಕತೆ ಇರದ ಬದುಕು ಹೇಗೆ ನರಕವಾಗುತ್ತದೆ ಎಂಬುದನ್ನು ಸಹಪಾಠಿಯೊಬ್ಬನ ಬದುಕಿನ ಕೊನೆಯ ಗಳಿಗೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ ಲೇಖಕಿ. ನಿಜವಾಗಿಯೂ ಇದು ತರ್ಕಕ್ಕೆ ಸಿಗದ ಬದುಕು ಎನಿಸುವಂತಹ ಘಟನೆ.

* “ಸಂತಸ ಅರಳುವ ಸಮಯ” ಕಥೆಯು ಇಂದಿನ ಯುವ ಜನತೆಗೆ ಸ್ಫೂರ್ತಿ ನೀಡುತ್ತದೆ. ಕೇವಲ ಯಂತ್ರಗಳಿಂದಲೇ ಬದುಕು ಎನ್ನುವ ದಿನಮಾನಗಳಲ್ಲಿ ಕೃಷಿಯಲ್ಲಿಯೂ ಸಾಧನೆ ಮಾಡುಬಹುದು ಎಂದು ನಿರೂಪಿಸುವ ಕಥೆ. ಕೃಷಿಯಲ್ಲಿ ಅನುಭವಿಸುವ ಲಾಭ,ನಷ್ಟ,ಸಾಲ ಹೀಗೆಎಲ್ಲವೂ ನೈಜವಾಗಿ ವಾಸ್ತವವನ್ನು ಬಿಂಬಿಸುವ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

* ಕೊನೆಯಲ್ಲಿ ಬರುವ “ದ್ವಂದ್ವ” ಕಥೆ ಚಿಕ್ಕದಾದರೂ ಶ್ರೇಷ್ಠ ಮೌಲ್ಯ ಬಿಂಬಿಸುತ್ತದೆ.ಈ ಕಥೆಯನ್ನು ನೈಜವಾಗಿ ನೋಡಿ, ಕೇಳಿರುವ ನನಗೆ ಮನಸ್ಸಿಗೆ ತುಂಬಾ ಆಪ್ತವೆನಿಸಿತು. ಮಾನವೀಯತೆಗಿಂತಲೂ ವೃತ್ತಿ ನಿಯಮಗಳು ಮೇಲು.ಕರ್ತವ್ಯ ಪ್ರಜ್ಞೆ ಮೂಡಿಸುವ ಈ ಕಥೆ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ.

********
ಒಂದಕ್ಕಿಂತ ಒಂದು ಸೊಗಸಾದ ಕಥೆಗಳು ಈ ಕೃತಿಯಲ್ಲಿ ಇವೆ. ಒಂದೇ ಸೂರ್ಯನಡಿಯಲ್ಲಿ ಎಂಬಂತೆ, ಒಂದೇ ಕೃತಿಯಲ್ಲಿ ಭಿನ್ನ ಅಭಿರುಚಿಗಳನ್ನು ಹೊಂದಿರುವ ಕಥೆಗಳು ಓದುಗರಿಗೆ ತಮಗೆ ಇಷ್ಟವಾದ ಭಕ್ಷ್ಯವನ್ನು ಹೆಚ್ಚು ಸವಿಯುವಂತೆ ಮಾಡುತ್ತದೆ.

ನಾನಂತೂ ಲೇಖಕಿಯರ ಕಥಾವಸ್ತುವಿಗಿಂತ ಅವರ ನಿರೂಪಣೆಯ ಶೈಲಿಯನ್ನು ಹೆಚ್ಚು ಅನುಭವಿಸುವವಳು. ಅದೇ ರೀತಿ ಈ ಕೃತಿಯನ್ನು ತುಂಬಾ ಇಷ್ಟಪಟ್ಟು ಓದಿರುವೆ.
ನೀವೂ ಓದಿ…ಅನುಭವಿಸಿ.

ಲೇಖಕಿಯರ ಲೇಖನಿಯಿಂದ ಇನ್ನಷ್ಟು ಇಂತಹ ಕೃತಿಗಳು ಮೂಡಿ ಬರಲಿ ಎಂದು ಹಾರೈಸುವೆ.


  • ಪೂರ್ಣಿಮಾ ಮರಳಿಹಳ್ಳಿ (ಶಿಕ್ಷಕಿ), ಧಾರವಾಡ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW