ದಿಢೀರ್ ಅತಿಥಿ ಸತ್ಕಾರ – ಸುಮ ಉಮೇಶ್

ಫೇಸ್ಬುಕ್ ಲ್ಲಿ ದಿನಕ್ಕೊಂದು ಬಣ್ಣ ಬಣ್ಣದ ಅಡುಗೆ ಮಾಡಿ ಪೋಸ್ಟ ಮಾಡುತ್ತಿದ್ದ ಲೀಲಾ ಮನೆಗೆ ಆಸೆ ಪಟ್ಟು ಫೇಸ್ಬುಕ್ ಗೆಳತಿಯರು ದಿಢೀರ್ ನೇ ಮನೆಗೆ ಹೋದಾಗ ಏನಾಯಿತು?!… ಒಂದು ಹಾಸ್ಯ ಬರಹ, ಜೊತೆಗೆ ಏನಾದ್ರು ಪೋಸ್ಟ್ ಮಾಡೋ ಮುಂಚೆ ತಲೆಗೆ ಕೆಲಸ ಕೊಡಿ ಎಂದು ಹೇಳುತ್ತಾರೆ ಹಾಸ್ಯ ಬರಹಗಾರ್ತಿ ಸುಮ ಉಮೇಶ್, ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…

ಸುಂದರವಾದ ತನ್ನ ಭಾವಚಿತ್ರಗಳನ್ನು ಮತ್ತು ವಿಧ ವಿಧದ ಭಕ್ಷ್ಯ ಭೋಜನಗಳ ಫೋಟೊಗಳನ್ನು ಫೇಸ್ಬುಕ್ ನಲ್ಲಿ upload ಮಾಡಿ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದ ಲೀಲಾಗೆ ಅಪಾರ ಅಭಿಮಾನಿ ಬಳಗ. ತಿಂಡಿಗಳ ಫೋಟೋ ನೋಡಿ ಎಲ್ಲರೂ ಜೊಲ್ಲು ಸುರಿಸುವವರೆ. ಯಾವ ರಂಭೆ ಊರ್ವಶಿ ಅನ್ನೋ ಕಾಮೆಂಟ್ಗಳಿಂದ ಉಬ್ಬಿ ಹೋದಳು ಲೀಲಾ. ಆಧುನಿಕ ನಳಪಾಕ ತಜ್ಞೆ ಅಂತ ಓದಿ ಖುಶಿ ಪಟ್ಟಳು.

ಇವಳ ಅಭಿಮಾನಿ ಬಳಗ ಒಂದಿನ ಇದ್ದಕ್ಕಿದ್ದ ಹಾಗೆ ಮನೇ ಹುಡುಕಿಕೊಂಡು ಬಂದೆ ಬಿಡೋದ.!!?

ಆ ದಿನ ಮನೆ ಕ್ಲೀನ್ ಮಾಡಲು ಎಲ್ಲಾ ಸಾಮಾನುಗಳನ್ನು ಹರಡಿಕೊಂಡು ಕೂತಿದ್ದ ಲೀಲಾ ಗೆಳತಿಯರನ್ನು ನೋಡಿ ದಂಗಾದಳು. ಅರೆ ವೀಣಾ, ಆಶಾ, ಸಂಧ್ಯಾ, ಆರತಿ, ಜ್ಯೋ.. ಏನ್ರೆ ಮಾ.. ಹೀಗೆ ಹೇಳದೆ ಕೇಳದೆ ಬಂದು ಬಿಡೋದಾ.. ಒಳಗೆ ಕೋಪ ಬರ್ತಾ ಇದೆ.. ಥೂ..ಇವರಿಗೆಲ್ಲ ಒಂದು ಫೋನ್ ಮಾಡಿ ಬರಲು ಏನಾಗಿತ್ತು. ಆದರೂ ತೋರಿಸಿ ಕೊಳ್ಳದೆ ಹಲ್ಲು ಕಿರಿದಳು.

ಫೋಟೋ ಕೃಪೆ : google 

ಲೀಲಾ..ನೀನು ಹಾಕುವ ಅಡುಗೆ ತಿಂಡಿ ಫೋಟೋ ನೋಡಿ ನಿಮ್ ಮನೆಯಲ್ಲೇ ಇವತ್ತು ಊಟಾ ಮಾಡಬೇಕು ಅಂತ ಬಂದು ಬಿಟ್ವಿ ಕಣೆ..ಅಯ್ಯೋ..ಇದೇನೇ..ನಿನ್ ಉದ್ದ ಕೂದಲು, ಕಪ್ಪನೆಯ ಕೇಶರಾಶಿ ಎಲ್ಲಾ ಎಲ್ಲಿ ಹೋಯಿತು. ತಲೆ ಯಾಕೋ ಬೆಳ್ಳಗೆ ಬೇರೆ ಕಾಣ್ತಾ ಇದೇ. ಉದ್ದ ಜಡೆ ಚಾಲೆಂಜ್ ನೀನೇ ತಾನೆ ಕೊಟ್ಟಿದ್ದು.

ಲೀಲಾ ತನ್ನ ಮೋಟು ಕೂದಲನ್ನು ಗಂಟು ಕಟ್ಟಿಕೊಳ್ಳುತ್ತ “ಹೆ.. ಹೆ.. ಅದೂ ಅದೂ.. ತುಂಬಾ dandruff ಆಗಿದೆ ಅಂತ ಕಟ್ ಮಾಡಿದೆ ಕಣ್ರೇ ಮ..ಮನೇ ಕ್ಲೀನ್ ಮಾಡ್ತಾ ಇದ್ದೇನೆ ನೋಡಿ.. ತಲೆ ಮೇಲೆ ಧೂಳು ಬಿದ್ದಿದೆ ಅಷ್ಟೇ. ನೀವೆಲ್ಲ ಕೂತಿರ್ರೇ..dress change ಮಾಡಿ ಬಂದು ಬಿಡ್ತೀನಿ ಅಂತ ತನ್ನ ಮಾಸಲು ನೈಟಿಗೆ ಕೈ ಒರೆಸಿಕೊಳ್ಳುತ್ತಾ ರೂಮ್ ಗೆ ಓಡಿ ಹೋದಳು

ಲೇ ಆಶಾ, ನನಗೇನೋ ಕುಚ್ ದಾಲ್ ಮೆ ಕಾಲ ಹೈ ಅನ್ನಿಸುತ್ತಿದೆ. ಅಡುಗೆ ಮನೆಯಲ್ಲಿ ಇವತ್ತು ಇವಳು ಅಡುಗೆ ಮಾಡಿದ ಲಕ್ಷಣ ಕಾಣಿಸುತ್ತಾನೆ ಇಲ್ಲ. ಬೆಳಿಗ್ಗೆ ಡೈನಿಂಗ್ ಟೇಬಲ್ ಪೂರ್ತಿ ತಿಂಡಿ ತಿನಿಸು ಇರುವ ಫೋಟೋಗಳನ್ನು ಯಾವುದೋ ಅಡುಗೆ ಗ್ರೂಪ್ ನಲ್ಲಿ ಹಾಕಿ ಇವತ್ತಿನ ಬೆಳಿಗ್ಗೆ ತಿಂಡಿ ಅಂತ ಹಾಕಿದ್ದಳು ಅಲ್ವಾ.

ಹುಂ ಕಣೆ..ನಾನು ನೋಡಿದೆ ಫೋಟೋ. ಫ್ರಿಡ್ಜ್ ನಲ್ಲಿ ಇಟ್ಟಿರಬಹುದು ಬಿಡ್ರೇ.

ಅಷ್ಟರಲ್ಲಿ ಲೀಲಾ ರೆಡಿಯಾಗಿ ಹೊರಗೆ ಬರುತ್ತಾಳೆ. ಇವರೆಲ್ಲಾ “ಲೀಲಾ, ಇವತ್ತು ಬೆಳಿಗ್ಗಿನ ನಿಮ್ ಮನೇ ತಿಂಡಿ ಫೋಟೋ ನೋಡಲು ತುಂಬ ಚೆನ್ನಾಗಿ ಕಾಣುತ್ತಿತ್ತು..ಇನ್ನೂ ರುಚಿ ಹೇಗಿರಬಹುದು ಅಂತ ಅನ್ನಿಸುತ್ತಿದೆ ಕಣೆ”.

ಲೀಲಾ “ಅದೂ… ಅದೂ.. ಎಷ್ಟೊಂದು ಮಾಡಿದ್ದೆ ಕಣೆ..ನಾನು ಡಯಟ್ ಮಾಡ್ತಾ ಇದ್ದೇನೆ ನೋಡು..ಹಾಗಾಗಿ ಮತ್ತೆ ಮತ್ತೆ ತಿನ್ನಲ್ಲ..ಚೂರು ರುಚಿ ನೋಡಿ ಎಲ್ಲಾ ನಮ್ ಮನೆ ಕೆಲಸದವಳಿಗೆ ಕೊಟ್ಟು ಬಿಟ್ಟೆ.. ಈಗ ಮತ್ತೆ ನಿಮಗೆಲ್ಲ ಅಡುಗೆ ಮಾಡ್ತೀನಿ..ನಂಗೇನೂ ಕಷ್ಟ ಆಗಲ್ಲಾ” ಎನ್ನುತ್ತಾ ಫ್ರಿಡ್ಜ್ ನಿಂದ ಒಂದು ಹೊರೆ ಸೊಪ್ಪು ತೆಗೆದಳು.

ಇವರೆಲ್ಲಾ ಸೋಫಾ ಮೇಲಿದ್ದ ಗೃಹ ಶೋಭಾ ತಿರುವಿ ಹಾಕುತ್ತಿದ್ದಾಗ, ಒಂದು ಪುಟದಲ್ಲಿ ಡೈನಿಂಗ್ ಟೇಬಲ್ ಮೇಲೆ ಜೋಡಿಸಿದ ತಿಂಡಿಗಳ ಫೋಟೋ ನೋಡಿ ಅವಾಕ್ಕಾದರು. ಅಲ್ಲಿ ಯಾರೋ ಬೇರೆಯವರ ಹೆಸರು ಇದ್ದಿದ್ದು ನೋಡಿ ತಮ್ಮಲ್ಲೇ ಗುಸುಗುಸು ಮಾತನಾಡಿ ತೆಪ್ಪಗೆ ಕೂತರು.

ಫೋಟೋ ಕೃಪೆ : google

ಲೀಲಾ “ಥೂ..ಇದೇನು ಸೊಪ್ಪು ಅಂತ ತಂದಿದ್ದಾರೋ ಕಣ್ರೀ.. ಯಾವ ಕೊಚ್ಚೆ ನೀರಿನಲ್ಲಿ ಬೆಳೆದಿದ್ದು ಗೊತ್ತಿಲ್ಲ..ಗಬ್ಬು ವಾಸನೆ ಬರ್ತಾ ಇದೆ..ನೀವೆಲ್ಲಾ ಏನೂ ತಿಳ್ಕೊಬೇಡಿ.. ಚೆನ್ನಾಗಿ ತೊಳೆದು ಮಸ್ಸೊಪ್ಪು ಮಾಡಿ, ಮುದ್ದೆ ಮಾಡಿ ಬಿಡ್ತೀನಿ. ರಾಗಿ ಹಿಟ್ಟು ಇದೆಯೋ ಇಲ್ವೋ ನೋಡ್ತೀನಿ..ಒಳಗೆ ಹೋಗಿ ಬಂದವಳು “ಲೇ ಆರತಿ..ಚೂರು ನಿನ್ ಸ್ಕೂಟಿ ತೆಗೆಯೆ.. ಫ್ಲೋರ್ ಮಿಲ್ ಗೆ ಹೋಗಿ ಬರೋಣ” ಎಂದಾಗ ಆರತಿ ಬೇರೆ ನಿರ್ವಾಹವಿಲ್ಲದೆ ತನ್ನ ಸ್ಕೂಟಿ ತೆಗೆದಳು. ಅಯ್ಯೋ..ನಾನು ಬಂದು ಸೊಪ್ಪು ಕ್ಲೀನ್ ಮಾಡಿ ಅಡುಗೆ ಮಾಡುವ ಹೊತ್ತಿಗೆ ತಡ ಆಗಬಹುದು..ನೀವ್ ಯಾರಾದರೂ ಸೊಪ್ಪು ಕ್ಲೀನ್ ಮಾಡಿ ಇಟ್ಟಿರೆ ಮ.. “ಎನ್ನುತ್ತಾ ಹೊರಟೆ ಬಿಟ್ಟಳು.

ಇವರೆಲ್ಲಾ “ಅಲ್ವೇ, ಇವಳೇನೋ ಗುಜರಾತಿ, ಪಂಜಾಬಿ, ಚೈನೀಸ್ ಡಿಷೆಸ್ ಮಾಡಿ ಕೊಡುತ್ತಾಳೆ ಅಂದ್ರೆ ಮೋಸೂಪ್ಪು ಮುದ್ದೆ ಅಂತಲ್ಲೆ. ಅದನ್ನು ನಮ್ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದಿತ್ತು ಅಲ್ವಾ” ಎಂದಾಗ ಇನ್ನೊಬ್ಬಳು “ಈಗ ಬಂದಿದ್ದು ಆಯ್ತು..ಇವಳು ಏನೇ ಮಾಡಿಕೊಟ್ಟರು ತಿನ್ನೋಣ ಸುಮ್ನೆ. ಇವಳು ದಿನ ಎಲ್ಲಿಂದ ಫೋಟೋ ತೆಗೆದು upload ಮಾಡೋದು ಅಂತ ಗೊತ್ತಾಯಿತಲ್ವಾ ” ಎಂದು ಕಿಸಕ್ ಅಂತಾಳೆ.

ಅಷ್ಟರಲ್ಲಿ ಲೀಲಾ ಸವಾರಿ ಬರುತ್ತೆ “ಉಸ್ಸಪ್ಪಾ.. ಸಾಕಾಯಿತು. ಇನ್ನು ಅಡುಗೆ ಬೇರೆ ಮಾಡಬೇಕು” ಎಂದಾಗ ಇನ್ನೊಬ್ಬ ಗೆಳತಿ “ಮಸ್ಸೋಪ್ಪು ನಾವೇ ಮಾಡಿ ಇಟ್ಟಿದ್ದೇವೆ..ನೀನು ಅನ್ನ ಮುದ್ದೆ ಮಾಡು ” ಎನ್ನುತ್ತಾರೆ.

ಅಯ್ಯೋ, ಬೆಳಿಗ್ಗೆ ಮೆಟ್ಟಿಲಿನಿಂದ ಜಾರಿ ಬಿದ್ದು ಮೊಣಕೈ ನೋವಾಗಿದೆ ಕಣ್ರೆ. ಮುದ್ದೆ ಹೇಗೆ ತಿರುವಲಿ..cooker ಹೇಗೆ ಇಳಿಸಲೀ..ಎಂದು ಹೆಚ್ಚೂ ಕಮ್ಮಿ ಅಳಲು ಶುರು ಮಾಡಿದಾಗ ಇವರೆಲ್ಲಾ ಗಾಬರಿಯಾಗಿ ಅಳಬೇಡ ಕಣೆ. ನಾವೇ ಮಾಡ್ತೀವಿ ಬಿಡು..

ಇಬ್ಬರು ಅನ್ನ ಮುದ್ದೆ ಮಾಡುವಾಗ “ರಾತ್ರಿಗೆ ಚಪಾತಿಯೇ ಆಗಬೇಕು ನಮ್ ಯಜಮಾನರಿಗೆ.. ಮಾಡಿ ಕೊಡಲಿಲ್ಲ ಅಂದ್ರೆ ಡೈವೋರ್ಸ್ ಮಾಡ್ತೀನಿ ಅಂತ ಹೆದರಿಸುತ್ತಾರೆ ..ಕೈ ನೋವು ಬೇರೆ..ಅಯ್ಯೊ..ನನ್ ಕಷ್ಟ ಯಾರೂ ಕೇಳೋರು ಇಲ್ವೇ ಅಂತ ಗೋಳಾಡುತ್ತಾಳೆ.

ಅಳಬೇಡ ಕಣೆ..ನಮ್ ಗೆಳತಿಗೆ ಡೈವೋರ್ಸ್ ಆಗಲು ನಾವು ಬಿಟ್ಟು ಬಿಡ್ತೀವ…ಒಂದೆರಡು ಚಪಾತಿ ತಾನೇ .ನಾನು ಮಾಡಿ ಇಡ್ತೀನಿ ಅಂತ ಒಬ್ಬಳು ಮುಂದೆ ಬರುತ್ತಾಳೆ.

ಒಂದೆರಡು ಅಲ್ಲ ಕಣೆ..ಒಂದ್ ಇಪ್ಪತ್ತು ಮಾಡಿ ಇಟ್ಟು ಬಿಡು..ನಂಗ್ ನಾಳೆಗು ಆಗುತ್ತೆ..ಅಂತ ಹಲ್ಲು ಕಿಸೀತಾಳೆ ಲೀಲಾ.

ಚಪಾತಿ, ಮುದ್ದೆ, ಅನ್ನ, ಮಸೊಪ್ಪು ಎಲ್ಲಾ ರೆಡಿ ಆದ ಮೇಲೆ ಎಲ್ಲರೂ ಕೂತು ಊಟಾ ಮಾಡುತ್ತಾರೆ. ಸಿಂಕ್ ನಲ್ಲಿ ಇದ್ದ ರಾಶಿ ಪಾತ್ರೆಯ ಕಡೆ ನೋಡುತ್ತಾ ಲೀಲಾ ಮೊಬೈಲ್ ಹಿಡಿದು “ಏನ್ ಕೆಂಪಿ..ನಾಳೆ ಬರಲ್ವಾ ನೀನು.. ಅಯ್ಯೋ ನನ್ ಗತಿ ಏನೂ.. ಇವತ್ತಿನ ರಾಶಿ ಪಾತ್ರೆ ಯಾರೂ ತೊಳೆಯುತ್ತಾರೆ. ಫ್ರೆಂಡ್ಸ್ ಕಣೆ ಬಂದಿರುವುದು..ಅವರೇನು ಅಮ್ಮ, ಅಕ್ಕ, ತಂಗಿ ನಾ ನಂಗೆ ಸಹಾಯ ಮಾಡಲು.. ಹೋಗಲಿ ಬಿಡು… ನನ್ ಕೈ ಮುರಿದು ಹೋದರು ಚಿಂತೆ ಇಲ್ಲ. ನಾನೇ ತೊಳೆದು ಕೊಳ್ತಿನೀ ಅಂತ ಹೇಳಿ ಫೋನ್ ಕಟ್ ಮಾಡುವ ನಾಟಕ ಆಡುತ್ತಾಳೆ.

ಇನ್ನೇನು ಇದು ನಮ್ ಪಾಲಿಗೆ ಬಂದೆ ಬರುತ್ತೆ ಅಂತ ಮೊದಲೇ ಗೊತ್ತಿದ್ದ ಗೆಳತಿಯರು ಪಾತ್ರೆ ತೊಳೆದು ಅಡುಗೆಮನೆ ಕ್ಲೀನ್ ಮಾಡಿ ಬರ್ತೀವಿ ಕಣೆ ಅಂತ ಹೊರಟು ಬಿಡುತ್ತಾರೆ.

ಮಾರನೇ ದಿನ ಫೇಸ್ಬುಕ್ ನಲ್ಲಿ ಲೀಲಾ ಪೋಸ್ಟ್. ಅತಿಥಿ ಸತ್ಕಾರ ನಮ್ಮ ಭಾರತದ ಸಂಪ್ರದಾಯ. ನನ್ನ ಕೈ ರುಚಿಯ ಗ್ರಾಮೀಣ ಶೈಲಿಯ ಅಡುಗೆ ತಿಂದು ತೃಪ್ತರಾದ ಗೆಳತಿಯರು ಅಂತ.

ಗೆಳತಿಯ wall ನಲ್ಲಿ “ಇದ್ದಕ್ಕಿದ್ದ ಹಾಗೇ ಯಾರ ಮನೆಗೂ ಹೋಗಬೇಡಿ..ಹೋಗಿ ನಿರಾಶರಾಗ ಬೇಡಿ” ಅನ್ನುವ ಸ್ಲೋಗನ್.


  • ಸುಮ ಉಮೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW