ಹೃದಯಾಘಾತಕ್ಕೆ ಹೆದರದಿರಿ !

(ಈ ಲೇಖನವು ವಿವಿಧ ವೈಜ್ಞಾನಿಕ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಆದರೆ ಇದು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ)

ನಿನ್ನೆ ಮರಣ ಹೊಂದಿದ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂಧನಾ ಮತ್ತು ಇತ್ತೀಚೆಗೆ ಮರಣಹೊಂದಿದ ಪುನೀತ್ ರಾಜ್‍ಕುಮಾರ್ ಇವರ ಹೃದಯಾಘಾತದ ಮರಣ ಮತ್ತು ಅದನ್ನು ಮಾಧ್ಯಮಗಳು ಅತ್ಯಂತ ವೈಭವೀಕರಿಸಿ ಪ್ರಸಾರ ಮಾಡುತ್ತಿರುವುದು ಜನರಲ್ಲಿ ತಲ್ಲಣ ಹುಟ್ಟಿಸಿದೆ. ಆದರೆ ಕಾಳಜಿ ಬೇಕಾದರೂ ಸಹ ಗಾಬರಿಯಾಗುವ ಯಾವುದೇ ಅಗತ್ಯವಿಲ್ಲ. – ಡಾ.ಎನ್.ಬಿ.ಶ್ರೀಧರ, ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…

ಏನಿದು ಹೃದಯಾಘಾತ ?

ಹೃದಯಕ್ಕೆ ರಕ್ತ ಸಂಚಲನೆ ಹಠಾತ್ ಆಗಿ ಬಂದ್ ಆಗುತ್ತದೆ. ಇದರ ಫಲವಾಗಿ ಹೃದಯ ಸ್ತಂಭನ ಉಂಟಾಗಿ ಬಳಿಕ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ. ಇದನ್ನು ಹೃದಯಾಘಾತ ಎನ್ನುತ್ತಾರೆ.ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಹೃದಯದ ಜೀವಕೋಶಗಳು ಸಾಯುವುದು ಎಂದರ್ಥ, ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯುತ್ತಾರೆ.

ಮೊದಲೆಲ್ಲಾ ಹೃದಯಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳನ್ನು ಅದರಲ್ಲೂ ಈ ಹಾರ್ಟ್‌ ಅಟ್ಯಾಕ್‌ ಅನ್ನು ಸಾಮಾನ್ಯವಾಗಿ ವೃದ್ಧರ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ಅಂದರೆ ವಯಸ್ಸಾದವರಲ್ಲಿ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ವಯಸ್ಸಿನ ಯಾವುದೇ ಮಿತಿ ಇಲ್ಲದೇ ಹಠಾತ್‌ ಸಾವಿಗೆ ಕಾರಣವಾಗಿರುವ ಕೆಲ ಹೃದಯ ರೋಗಗಳು ಸಂಭವಿಸುತ್ತಿವೆ. ಅದಕ್ಕೆ ನಮ್ಮ-ನಿಮ್ಮ ಮುಂದೆ ಹಲವಾರು ನಿದರ್ಶನ ಕೂಡ ಇವೆ.

ಹೃದಯಾಘಾತವನ್ನು ಹೃದಯ ಸ್ಥಂಬನದಿಂದ (ಹಾರ್ಟ್ ಅಟ್ಯಾಕ್ ಮತ್ತು ಕಾರ್ಡಿಯಕ್ ಅರೆಸ್ಟ್) ಪ್ರತ್ಯೇಕಿಸುವುದು ಅವಶ್ಯವಿದೆ. ಪುನೀತ್ ರಾಜಕುಮಾರ್ ಸತ್ತಿದ್ದು ಹೃದಯ ಸ್ಥಂಭನದಿಂದ. ಹೃದಯಾಘಾತದಲ್ಲಿ ತೀವ್ರವಾದ ಎದೆನೋವು ಇರುತ್ತದೆ, ಉಸಿರಾಟದ ತೊಂದರೆ ಮತ್ತು ಉಸಿರಾಟ ಚಿಕ್ಕದಾಗುತ್ತದೆ. ಆದರೆ ಹೃದಯ ಸ್ಥಂಭನದಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ವಿದ್ಯುತ್ ಹರಿಯುವಿಕೆಯ ತೊಂದರೆಯಾಗಿ ಪ್ರಜ್ಞೆ ತಪ್ಪುತ್ತದೆ. ಹೃದಯ ಸ್ಥಂಬನ ಅತ್ಯಂತ ತೀವ್ರವಾಗಿದ್ದು ಬೇಗ ಸಾವು ಸಂಭವಿಸುತ್ತದೆ.

ಫೋಟೋ ಕೃಪೆ : google

ಹೃದಯಾಘಾತದ ಲಕ್ಷಣಗಳು:

 • ಎದೆಯ ಮಧ್ಯದಲ್ಲಿ ನೋವು
 • ಕುತ್ತಿಗೆ, ದವಡೆ, ಹಲ್ಲುಗಳು ನೋವು
 • ಅಸ್ವಸ್ಥತೆ
 • ಇದ್ದಕ್ಕಿದ್ದ ಹಾಗೆ ತಲೆಸುತ್ತುವುದು
 • ಉಸಿರಾಟದ ತೊಂದರೆ
 • ತಲೆತಿರುಗುವಿಕೆ,
 • ಮೂರ್ಛೆ
 • ಬೆವರುವುದು
 • ವಾಕರಿಕೆ
 • ವಾಂತಿ
 • ಎದೆಯುರಿ
 • ಸುಸ್ತು

ಹೃದಯಾಘಾತವಾದಾಗ ಎಡ ಭಾಗದ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಎಲ್ಲರಿಗೂ ಇದೆ ರೀತಿ ಆಗುತ್ತದೆ ಅಂತಲ್ಲ. ಕೆಲವರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ, ಭುಜಗಳಲ್ಲಿ ನೋವು ಬರಬಹುದು. ಈ ರೀತಿಯ ನೋವು ಕೆಲ ದಿನಗಳ ಮುಂಚೆಯೇ ಕಂಡು ಬರುಬಹುದು.

ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಸಹ ದೇಹ ಬೆವರಬಹುದು. ಉಸಿರಾಡಲು ಕಷ್ಟವಾಗುವುದು, ವಾಕರಿಕೆ, ತಲೆ ಸುತ್ತುವುದು, ವೇಗವಾದ ಎದೆ ಬಡಿತವೂ ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ. ಈ ರೀತಿ ಸಮಸ್ಯೆಗಳು ಹತ್ತು ನಿಮಿಷಗಳಿಗೂ ಹೆಚ್ಚು ಕಾಣಿಸಿಕೊಂಡಲ್ಲಿ ನಿರ್ಲಕ್ಷ್ಯ ವಹಿಸದೇ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಫೋಟೋ ಕೃಪೆ : verywell health

ಇತರ ಮಹತ್ವದ ಕಾರಣಗಳು :

ಆತಂಕ :

ನಮ್ಮ ಕೆಲಸ, ವೇಳಾಪಟ್ಟಿ, ಜೀವನಶೈಲಿ ಎಲ್ಲವೂ ನೇರವಾಗಿ ನಮ್ಮ ಆತಂಕಕ್ಕೆ ಕಾರಣವಾಗಿದ್ದು, ಈ ಆತಂಕ ನಮ್ಮ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆತಂಕ ಮತ್ತು ಹೃದಯರೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು 2015 ರಲ್ಲಿ ನಡೆಸಿದ ಅಧ್ಯಯನವು ಆತಂಕವು ಪರಿಧಮನಿಯ ಕಾಯಿಲೆಯ ಅಪಾಯವನ್ನು (ಸಿಎಡಿ) 21 ಪ್ರತಿಶತದಷ್ಟು ಮಾರಕವಾಗಿ ಪರಿವರ್ತಿಸುತ್ತದೆ ಎಂದು ಕಂಡುಹಿಡಿದಿದೆ. ಅಂದರೆ ಹೆಚ್ಚಾಗಿ ಯಾರು ಒತ್ತಡ, ಆತಂಕ, ಖಿನ್ನತೆಯಿಂದಾಲೇ ಜೀವನ ನಡೆಸುತ್ತಾರೋ ಅಂಥವರಲ್ಲಿ ಈ ಹೃದ್ರೋಗದ ಅಪಾಯ ಹೆಚ್ಚು.

ಬೆವರುವುದು :

ಯಾವುದಾದರೂ ದೈಹಿಕ ಕೆಲಸ ಮಾಡಿದರೆ ಸಹಜವಾಗಿ ಕೆಲವರು ಬೆವರುತ್ತಾರೆ. ಆದರೆ ಏನೂ ಮಾಡದೇ ಸುಖಾಸುಮ್ಮನೆ ಬೆವರಿದರೆ ಅದು ಸಾಮಾನ್ಯವಲ್ಲ. ಇದು ಭವಿಷ್ಯದ ಹಾರ್ಟ್‌ ಅಟ್ಯಾಕ್‌ ಸಂಕೇತ ಎನ್ನಲಾಗಿದೆ.‌ ಬೇಗ ಬೆವರುವುದು, ವ್ಯಕ್ತಿಯು ಯಾವುದೇ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸದಿದ್ದಾಗಲೂ ಬೆವರುವುದು ಹೃದಯಾಘಾತದ ಮೊದಲ ಚಿಹ್ನೆಗಳಲ್ಲಿ ಒಂದು.

ಕಾಲು ನೋವು :

ಕಾಲು ನೋವು ಅಂದರೆ ವಯಸ್ಸಾಗ್ತಿದೆ ಹೀಗಾಗಿ ಇದೆಲ್ಲಾ ಸಹಜ ಎಂದು ಭಾವಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ಈ ಲಕ್ಷಣವನ್ನು ಹೃದ್ರೋಗದ ಅನಿರೀಕ್ಷಿತ ಸಿಗ್ನಲ್ ಎನ್ನಲಾಗಿದೆ. ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ನೋವು ವಾಸ್ತವವಾಗಿ ಭವಿಷ್ಯದ ಹೃದಯಘಾತದ ಪ್ರಮುಖ ಲಕ್ಷಣಗಳಾಗಿವೆ ಎಂದಿದ್ದಾರೆ. ಆದರೆ ಈ ಕುರಿತು ಭಯಪಡದೇ ವೈದ್ಯರಲ್ಲಿ ತೋರಿಸಬೇಕು.

ಆಯಾಸ :

ಕೆಲಸ ಮಾಡಿ ದಿನದ ಕೊನೆಯಲ್ಲಿ ದಣಿವಾಗುವುದು ಸಹಜ, ಆದರೆ ದಿನಂಪ್ರತಿ ಇದೇ ಆಯಾಸ, ಸುಸ್ತು ಇದ್ದರೆ ಇದಕ್ಕೆ ಬೇರೆಯದ್ದೇ ಕಾರಣವಿರುತ್ತದೆ. ಹೀಗೆ ಹೃದಯಘಾತದ ಅಪಾಯದ ಲಕ್ಷಣಗಳಲ್ಲಿ ಈ ಆಯಾಸ ಕೂಡ ಒಂದು ಎನ್ನುತ್ತಾರೆ ವೈದ್ಯರು. ಯಾರಾದರೂ ತುಂಬಾ ದಿನಗಳಿಂದ ಆಯಾಸದಿಂದ ಬಳಲುತ್ತಿದ್ದರೆ, ವೈದ್ಯರನ್ನು ತಕ್ಷಣ ಭೇಟಿ.

ಹೊಟ್ಟೆಯ ತೊಂದರೆಗಳು :

ಹೃದ್ರೋಗದಿಂದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಹೊಟ್ಟೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಂಡು ಬರುತ್ತವೆ. ಹೃದಯರಕ್ತನಾಳದ ಸ್ಥಿತಿಯು ಹದಗೆಟ್ಟಾಗ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಸಂಭವಿಸುತ್ತವೆ. ಇದು ಮೊದಲಿಗೆ ಸಾಮಾನು ಹೊಟ್ಟೆ ನೋವು ಎಂದೆನಿಸಿದರೂ ಈ ಲಕ್ಷಣ ಹಾರ್ಟ್‌ ಅಟ್ಯಾಕ್‌ಗೆ ನೇರವಾಗಿ ಸಂಬಂಧಿಸಿದೆ.

ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ :

ಹೃದಯಾಘಾತ ಉಂಟಾದಾಗ ಒಂದೊಂದು ಕ್ಷಣವೂ ಅಮೂಲ್ಯವಾಗಿರುತ್ತದೆ. ಒಂದು ವೇಳೆ ಹೃದಯಾಘಾತವಾಗಿ ವ್ಯಕ್ತಿ ನೆಲಕ್ಕೆ ಕುಸಿದರೆ ಕೂಡಲೇ ಆಂಬ್ಯುಲೆನ್ಸಿಗೆ ತುರ್ತು ಕರೆ ಮಾಡಿ. ಚಲನವಲನ ಪರಿಶೀಲಿಸಿ ಮತ್ತು ಉಸಿರಾಟವನ್ನು ಗಮನಿಸಿ. ಆ ವ್ಯಕ್ತಿಯ ಎದೆಯನ್ನು ಜೋರಾಗಿ ಅದುಮಬೇಕು, ಜೋರಾಗಿ ಗುದ್ದಿದರೂ ಪರ್ವಾಗಿಲ್ಲ. ಸಾಧ್ಯವಾದರೆ ಅವರ ಬಾಯಿಗೆ ನಿಮ್ಮ ಬಾಯಿ ಇಟ್ಟು ಊದಿ. ಈ ರೀತಿ ಮಾಡುವುದರಿಂದ ಬದುಕುಳಿಯುವ ಸಾಧ್ಯತೆ ಹೆಚ್ಚು.

ಫೋಟೋ ಕೃಪೆ : google

ಹೃದಯದವನ್ನು ಆರೋಗ್ಯವಾಗಿರಿಸಿಕೊಳ್ಳಲು ಏನು ಮಾಡಬೇಕು?

ವ್ಯಾಯಾಮ: ಕೂತು ಕೆಲಸ ಮಾಡುವವರು ದೈಹಿಕ ವ್ಯಾಯಾಮದ ಕಡೆಗೆ ಗಮನ ಕೊಡಬೇಕು. ದಿನದಲ್ಲಿ ಅರ್ಧ ಗಂಟೆ ಕಡ್ಡಾಯವಾಗಿ ವ್ಯಾಯಾಮಕ್ಕೆ ಮೀಸಲಿಡಿ. ದೈಹಿಕ ವ್ಯಾಯಾಮ ಮಾಡುವುದರಿಂದ ಬೊಜ್ಜು ಮೈ ಕರಗುವುದು, ಫಿಟ್ನೆಸ್ ಹಾಗೂ ಆರೋಗ್ಯ ಪಡೆಯಬಹುದು.ಈಜು, ಯೋಗ, ಧ್ಯಾನ, ಪ್ರಾಣಾಯಮ ಮತ್ತು ಮುಖ್ಯವಾಗಿ ಆಹಾರದ ಕಡೆ ಗಮನ ಇಡಿ.
ಎದೆಯಲ್ಲಿ ನೋವು ಕಾಣಿಸಿ, ಮೈ ಬೆವರಿದರೆ ಹೆದರಬೇಡಿ ಜೋರಾಗಿ ಕೆಮ್ಮಬೇಕು, ಆಸ್ಪತ್ರೆಗೆ ಹೋಗುವವರೆಗೆ ಕೆಮ್ಮು ನಿಲ್ಲಿಸಬಾರದು.

ಹೃದಯಾಘಾತಕ್ಕೂ ವಯಸ್ಸಿಗೂ ಈಗ ಸಂಬಂಧವೇ ಇಲ್ಲ ಎನಿಸುತ್ತಿದೆ.

ಈ ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗ ಹಸುಳೆಯಿಂದ ಹಿಡಿದು ವಯೋವೃದ್ಧರವರೆಗೆ ಯಾವುದೇ ವಯಸ್ಸಿನವರು, ಯಾವುದೇ ಸಮಯದಲ್ಲಿ ಹೃದಯಾಘಾತದ ಅಪಾಯವನ್ನು ಎದುರಿಸುತ್ತಾರೆ.

ವಯಸ್ಸಿನ ಬಗ್ಗೆ ಯೋಚಿಸದೇ ಈಗ ಹೃದಯವನ್ನು ಕಾಳಜಿ ಮಾಡುವುದು ಮುಖ್ಯವಾಗಿದೆ. ಯಾವುದೇ ರೋಗ ಆಗಲಿ ಬಂದ ಮೇಲೆ ಆರೈಕೆ ಮಾಡಿಕೊಳ್ಳುವುದಕ್ಕಿಂತ ಬರುವ ಮುನ್ನ ಎಚ್ಚರ ವಹಿಸುವುದು ಮುಖ್ಯ.

ಇತ್ತೀಚೆಗೆ ಯುವ ವಯಸ್ಕರು ಹಠಾತ್ತನೆ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಆತಂಕ ಮೂಡಿಸಿವೆ. ಆರೋಗ್ಯವಂತ ವ್ಯಕ್ತಿಗಳು ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಶಾಲೆಗೆ ಹೋಗುವ ಮಕ್ಕಳು ಕೂಡ ಇದರಿಂದ ಹೊರತಾಗಿಲ್ಲ. ಕೋವಿಡ್ 19 ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಗಳಿಗೂ ಹೃದಯಾಘಾತದ ಹೆಚ್ಚಳಕ್ಕೂ ಸಂಬಂಧ ಇರಬಹುದು ಎಂಬ ಅನುಮಾನ ಮತ್ತು ಆರೋಪಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಸಂಶೋಧನೆಗಳು ನಡೆಯುತ್ತಿದ್ದು ಯಾವುದೇ ಆಧಾರ ಇಲ್ಲ. ವರ್ಷಕ್ಕೊಮ್ಮೆ ಅಥವಾ ಏನಾದರೂ ಲಕ್ಷಣಗಳು ಬಂದಾಗ ತಜ್ಞರಿಂದ ಹೃದಯದ ತಪಾಸಣೆ, ಕೊಲೆಸ್ಟಿರೆಲ್ ಇತ್ಯಾದಿಗಳ ತಪಾಸಣೆ, ವ್ಯಾಯಾಮ, ಉತ್ತಮ ಹವ್ಯಾಸಗಳು, ಉತ್ತಮ ಆಹಾರದ ಸೇವನೆ ಇತ್ಯಾದಿಗಳು ನಿಯಮಿತವಾಗಿ ಇದ್ದಲ್ಲಿ ಹೃದಯದ ತೊಂದರೆ ಹತ್ತಿರ ಸುಳಿಯದು.


 • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW