ಕವಿಯತ್ರಿ ಅನಸೂಯ ಜಹಗೀರದಾರ ಅವರ “ಆತ್ಮಾನುಸಂಧಾನ” ಗಜಲ್ ಕೃತಿಯ ಕುರಿತು ಕವಿ ನಾರಾಯಣಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕನ್ನಡದ ಸಾಹಿತ್ಯ ಲೋಕದಲ್ಲಿ ಗಜಲ್ ಕಾವ್ಯ ತನ್ನ ವಿಸ್ತಾರವನ್ನು ಹರಡಿಕೊಳ್ಳುತ್ತಿದೆ. ನೂರಾರು ಗಜಲ್ ಕವಿಗಳು ಕವಯಿತ್ರಿಯರು ಈ ಕಾವ್ಯದ ಮೋಹದ ಸೆಳೆತಕ್ಕೆ ಒಳಗಾಗಿ ಭಾವನೆಗಳ ಮಹಾಪೂರವನ್ನೇ ತಮ್ಮ ಷೇರ್ ಗಳಲ್ಲಿ ಬರೆಯುತ್ತಾ ಕಾವ್ಯ ಪ್ರೇಮಿಗಳ ಎದೆಯನ್ನು ಹೊಕ್ಕಿದ್ದಾರೆ. “ಆತ್ಮಾನುಸಂಧಾನ” ಗಜಲ್ ಕೃತಿಯನ್ನು ಬರೆದವರು ಕನ್ನಡ ಸಾಹಿತ್ಯಲೋಕದಲ್ಲಿ ಹಲವಾರು ಪ್ರಕಾರಗಳಲ್ಲಿ ಬರೆಯುತ್ತಾ ಕವಯತ್ರಿಯಾಗಿ, ಕಥೆಗಾರ್ತಿಯಾಗಿ, ಗಜಲ್ ಗಾರ್ತಿಯಾಗಿ” ಹಿಂದೂಸ್ತಾನಿ ಸಂಗೀತ ಕಲಾವಿದೆಯಾಗಿ, ಪ್ರೌಢ ಶಾಲಾ ಶಿಕ್ಷಕರಾಗಿ, ಸದಾ ಕ್ರಿಯಾಶೀಲ ವ್ಯಕ್ತಿ ಕನ್ನಡ ನೆಲದ ಸಾಹಿತ್ಯ ಗಟ್ಟಿ ಧ್ವನಿಯಾಗಿ ಹೊರ ಹೊಮ್ಮಿರುವ ಅದ್ಭುತ ಪ್ರತಿಭೆ ಶ್ರೀಮತಿ ಅನಸೂಯ ಜಹಗೀರದಾರ.
ಇವರು ಹಿಂದುಸ್ತಾನಿ ಸಂಗೀತ ಕಲಾವಿದೆಯಾಗಿ, ಕವಯತ್ರಿಯಾಗಿ, ಕಥೆಗಾರ್ತಿಯಾಗಿ, ಗಜಲ್ ಗಾರ್ತಿಯಾಗಿ ಪ್ರೌಢ ಶಾಲಾ ಶಿಕ್ಷಕರಾಗಿ, ಸದಾ ಕ್ರಿಯಾಶೀಲ ವ್ಯಕ್ತಿತ್ವ ಇರುವ ಇವರು, “ಒಡಲಬೆಂಕಿ – ೨೦೧೪ “ಆತ್ಮಾನುಸಂಧಾನ (ಗಜಲ್-೨೦೨೧) “ನೀಹಾರಿಕೆ” (ಹನಿಗವಿತೆಗಳು- ೨೦೨೧)) “ಅಸ್ಥಿಮಜ್ಜೆ” (ಕವನಸಂಕಲನ ೨೦೨೩) “ಪರಿವರ್ತನೆ’ (ಕಥಾಸಂಕಲನ-೨೦೨೩) ಮುಂತಾದ ಕೃತಿಗಳನ್ನು ಹೊರತಂದು ಕನ್ನಡ ಸಾಹಿತ್ಯಲೋಕದಲ್ಲಿ ಹಿರಿಯ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದಕ್ಕಿವೆ. ಡಾ.ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ , ಉಮಾಶಂಕರ ಪ್ರತಿಷ್ಠಾನ ಪ್ರೋತ್ಸಾಹಕ ಕಾವ್ಯ ಪ್ರಶಸ್ತಿ. ಆತ್ಮಾನುಸಂಧಾನ ಗಜಲ್ ಸಂಕಲನಕ್ಕೆ ಗಜಲ್ ಕ್ಷೇತ್ರದಲ್ಲಿನ ಸಾಧನೆಗಾಗಿ ಪುರಸ್ಕಾರ, ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ,೨೦೧೫ ರಲ್ಲಿ “ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ- ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ ಕರ್ನಾಟಕ ಸರ್ಕಾರದಿಂದ ೨೦೦೭.
ಗಜಲ್ ಕಾವ್ಯ ಕ್ಷೇತ್ರದಲ್ಲಿಯೂ ಕೂಡ ಅಪಾರವಾದ ಅನುಭವವನ್ನು ಹೊಂದಿರುವ ಅನುಸೂಯ ಜಗೀರದಾರ ರವರ ಗಜಲ್ ಸಂಕಲನ ಆತ್ಮಾನುಸಂಧಾನ ೨೦೨೧ ಬಿಡುಗಡೆಗೆಯಾಗಿದೆ. ಇತ್ತೀಚೆಗೆ ಇವರ ಗಜಲ್ ಕೃತಿಯನ್ನು ಓದುವ ಅವಕಾಶ ಸಿಕ್ಕಿತು.
ಆತ್ಮಾನುಸಂಧಾನವೆಂದರೆ ತನ್ನ ಆತ್ಮದೊಂದಿಗೆ ಅನುಸಂಧಾನ ಮಾಡುವುದು, ಆತ್ಮಪ್ರಜ್ಜೆಯೊಂದಿಗೆ ಧ್ಯಾನವನ್ನು ಮಾಡುವುದು ಎಂಬ ಅರ್ಥವನ್ನು ಕಲ್ಪಿಸುತ್ತದೆ. ಈ ಸಂಕಲನದಲ್ಲಿರುವ ಷೇರ್ ಗಳು ಮನಸ್ಸು, ಪ್ರೀತಿ , ಪ್ರೇಮ, ವಿರಹದ ಭಾವನೆಗಳ ಜೊತೆಯಲ್ಲಿಯೇ ಮನುಜ ಜೀವನದಲ್ಲಿ ಘಟಿಸುವ ಸನ್ನಿವೇಶಗಳು ಮಾನಸಿಕ ಸಂವೇದನೆಯ ಸಂವಹನವಾಗಿ ನಮ್ಮ ಮನಸ್ಸುನ್ನು ಸೆಳೆಯುತ್ತವೆ.
ಈ. ಕೃತಿಯಲ್ಲಿರುವ ಕೆಲವು ಗಜಲ್ ಷೇರ್ ಗಳನ್ನು ನೋಡುವುದಾದರೆ
ನಿಂತಿರುವ ನೆಲವೇ ನಡುಗಿ ಕುಸಿಯುವಾಗ ನೆಲೆಯ ಹುಡುಕುವುದು ಹೇಗೆ
ಧರೆಯೇ ಹತ್ತಿಕೊಂಡು ಉರಿಯುವಾಗ ತಂಪು ಅರಸಲೇನಿದೆ ಹೋಗಲಿಬಿಡು ಸಾಕಿ
ನಾವು ಜೀವಿಸುತ್ತಿರುವ ನೆಲವು ಪ್ರವಾಹದಿಂದಲೋ, ಭೂಮಿಯು ಕಂಪನವಾಗಿಯೋ, ಈ ಭುವಿಯೇ ಕುಸಿದು ಹೋಗುತ್ತಿರುವಾಗ ನಮ್ಮ ಜಾಗ ಇದು ನಮ್ಮ ಅಸ್ತಿಯಿದು ಎಂದು ಗುರುತಿಸಲ್ಪಡುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಹಾಕುತ್ತಾ, ಇಡೀ ಧರಣಿಯು ಬೆಂಕಿಗೆ ಆಹುತಿಯಾಗಿ ಕೆನ್ನಾಲಿಗೆಯಂತೆ ಇಡೀ ಭೂಮಂಡಲವನ್ನು ಸುಡುತ್ತಿರುವಾಗ ನಾವು ತಣ್ಣನೆಯ ತಂಪಾದ ಸ್ಥಳವನ್ನು ಹುಡುಕುವುದು ಸಾಧ್ಯವಿಲ್ಲ ಎಂದು ಸೊಗಸಾದ ಷೇರ್ ಗಳಿಂದ ಈ ಗಜಲ್ ಓದುಗರ ಮನದಾಳವನ್ನು ತಲುಪುತ್ತವೆ.

ನೀನಿಲ್ಲದ ಸಮಯ ದೀರ್ಘ ಮಾತನಾಡುತ್ತೇನೆ ನಿನ್ನೊಂದಿಗೆ
ನೀನು ಇದಿರಾದ ಹೊತ್ತು ಮೌನದ ಹೊಡೆತ ಹೇಗೆ ಇರಲಿ ಗೆಳತಿ
ಈ ಷೇರ್ ನಲ್ಲಿನ ಪ್ರೀತಿಸಿದ ಜೀವ ತನ್ನ ಪ್ರಿಯತಮೆ ಅಥಾವ ಪ್ರಿಯನಿಗೆ ಹೇಳುವ ಸಾಲುಗಳು. ಅಂದರೆ ಪ್ರೇಮಿಯು ತನ್ನ ಪ್ರಿಯತಮನಿಲ್ಲದ ಸಮಯದಲ್ಲಿ ಅವನೊಂದಿಗೆ ಕಲ್ಪನೆಯಲ್ಲೊ ಕನಸಿನಲ್ಲೊ ತಮ್ಮ ಪ್ರೀತಿಯ ಮಾತುಗಳು, ಜೊತೆಯಾಗಿ ನಡೆದ ಕ್ಷಣಗಳ ಕನವರಿಕೆ, ಮುಂದಿನ ಜೀವನದ ಪಯಣ ಮುಂತಾದ ವಿಷಯಗಳ ಬಗ್ಗೆ ಸುದೀರ್ಘವಾಗಿ ಸಂಭಾಷಣೆಯನ್ನು ಮಾಡುವ ಪ್ರೇಮಿ, ಅವನು ಎದುರಿಗೆ ಬಂದ ಕ್ಷಣದಲ್ಲಿ ಮೌನ ತಾಳುತ್ತಾಳೆ. ಮೊಗವು ಕಂಡ ಕ್ಷಣ ನಾಚಿಯಿಂದಲೋ, ಖುಷಿಯಿಂದಲೊ ಮಾತುಗಳೇ ಹೊರಡುವುದಿಲ್ಲ ಎಂಬ ಅರ್ಥಪೂರ್ಣ ಭಾವನೆಗಳನ್ನು ಇಲ್ಲಿ ಷೇರ್ ಗಳಾಗಿ ಕಟ್ಟಿದ್ದಾರೆ.
ಹಸ್ತದ ಮೂರೂ ಬೆರಳುಗಳು ತನ್ನತ್ತಲೇ ತೋರಿಸುತ್ತವೆ ತೋರು ಬೆರಳು ಮತ್ತೊಬ್ಬರ ಗುರಿಯಾಗಿಸುವುದು ತರವಲ್ಲಈ ಷೇರ್ ನಲ್ಲಿ ಗಜಲ್ ಕವಯಿತ್ರಿ ಮನುಜನ ಮನಸ್ಥಿತಿಯನ್ನು ಪ್ರಸ್ತುತ ಪಡಿಸುತ್ತಾರೆ. ಅಂದರೆ ಮನುಷ್ಯ ಬೇರೆಯವರ ತಪ್ಪುಗಳನ್ನು ಮಾತ್ರ ಎತ್ತಿ ತೋರಿಸುತ್ತಾರೆ. ತನ್ನ ತಪ್ಪನ್ನು ಒಪ್ಪಿಕೊಳ್ಳಲಾರ,
ಹೂ ಅರಳಿದ್ದು ಹೇಗೆಂದರೆ ಸಾಕ್ಷಿ ಇದೆಯೆ
ಮೋಹ ಜನಿಸಿದ್ದು ತಿಳಿಸೆಂದರೆ ಸಾಕ್ಷಿ ಇದೆ
ಪ್ರಕೃತಿಯು ಮನುಷ್ಯನಿಗೆ ಸಿಕ್ಕ ದೊಡ್ಡ ವರವಾಗಿದೆ. ಹೂವು ಅದು ಸಹಜವಾಗಿ ಯಾರ ಹಂಗು ಇಲ್ಲದೆ ಪ್ರಕೃತಿ ನಿಯಮಾನುಸಾರವಾಗಿ ಅರಳಿ ನಗುತ್ತದೇ. ಅಂತಹ ಹೂವು ಹೇಗೆ ಅರಳುತ್ತದೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷಿ ಇದೆಯೆ ಎಂದು ಕೇಳುತ್ತಾ, ಮನುಜನ ಮನದೊಳಗೆ ಹೇಗೆ ಮೋಹ ಜನಿಸಿತು ಎಂಬುದಕ್ಕೆ ಸಾಕ್ಷಿ ಪುರಾವೆ ತಿಳಿಸೆಂದರೆ ಅದನ್ನು ಹೇಗೆ ನಿರೂಪಿಸಲು ಸಾಧ್ಯ ಎಂದು ಮಾರ್ಮಿಕವಾಗಿ ಗಜಲ್ ಷೇರುಗಳನ್ನು ಬರೆದಿದ್ದಾರೆ.
ಎಡಬಲವೆಂದು ವಾದವಿವಾದಗಳಿವೆ ಕೇಳಬೇಕಿತ್ತು ಮಹಾತ್ಮ
ನಿನ್ನ ಚಿತ್ರದ ನೋಟು ಭ್ರಷ್ಟತೆಗೆ ಬಳಕೆಯಿದೆ ಅರಿಯಬೇಕಿತ್ತು ಮಹಾತ್ಮ
ಈ ಗಜಲ್ ಷೇರ್ ನಲ್ಲಿ ನಮ್ಮ ದೇಶದಲ್ಲಿ ಮಹಾತ್ಮ ನೆಂದೆ ಕರೆಯಲ್ಪಡುವ ಗಾಂಧಿಯವರ ಕಾಲವನ್ನು, ಅವರು ತನ್ನ ದೇಶದ ಪ್ರಜೆಗಳಿಗೆ ನೀಡಿದ ಮಹತ್ವದ ಸಂದೇಶಗಳನ್ನು ಅವರು ಕಂಡ ಕನಸನ್ನು ನೆನಪಿಸಿಕೊಳ್ಳುತ್ತಾ ಅವರು ಕಂಡಿದ್ದ ರಾಮ ರಾಜ್ಯದ ಕನಸು ಇಂದು ಯಾವ ಕಡೆಗೆ ಸಾಗುತಿದೆ ಎಂಬುದನ್ನು ಕಂಡು ಗಾಂಧಿಯವರಿಗೆ ಹೇಳುವ ಸಾಲುಗಳು ಅರ್ಥಪೂರ್ಣವಾಗಿವೆ. ನಾವೆಲ್ಲರೂ ಭಾರತೀಯರು ಸಹೋದರರು ಒಂದೇ ತಾಯಿಯ ಮಕ್ಕಳು ಎಂದು ನೀವು ನಂಬಿದ್ದಿರಿ. ಅದರೆ ಇಂದು ನಿನ್ನ ದೇಶದ ಪ್ರಜೆಗಳು ಎಡಪಂಥೀಯ ಬಲಪಂಥೀಯರಾಗಿ ವಿಭಾಗಗಳಾಗಿ ತಮ್ಮ ತಾವು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿ ಜಾತಿ ಧರ್ಮಗಳೆಂದು ಹೋರಾಡುತ್ತಿದ್ದಾರೆ. ನೀನು ಈ ದೇಹದ ಮಹಾತ್ಮ ನೆಂದು ನಿನ್ನ ಚಿತ್ರವಿರುವ ನೋಟವನ್ನು ಮುದ್ರಿಸಿ ಚಲಾವಣೆಗೆ ತಂದರು ಅದು ಹೆಮ್ಮೆ ಪಡುವ ವಿಷಯವಾಗಿತ್ತು. ಅದರೆ ಇಂದು ಅದೇ ನೋಟವನ್ನು ಲಂಚಗುಳಿತ ಭ್ರಷ್ಟಾಚಾರಕ್ಕಾಗಿ ಉಪಯೋಗಿಸುತ್ತಾರೆ ಎಂದು ಗಮನ ಸೆಳೆಯುವ ರೀತಿಯಲ್ಲಿ ಗಜಲ್ ಷೇರ್ ಗಳನ್ನು ಬರೆದಿದ್ದಾರೆ.
ನೀನಿಲ್ಲದ ರಾತ್ರಿ ಹೇಗೆ ಸರಿಯಿತೆಂದು ಕೇಳದಿರು ಸಜನಾ ಕಣ್ಣಾಲಿ ತುಂಬಿದ ನಿದ್ದೆ ಎಲ್ಲಿ ಹೋಯಿತೆಂದು ಕೇಳದಿರು ಸಜನಾ
ಪ್ರೀತಿಯ ಕಡಲು ಉಕ್ಕೇರುತಿದೆ ಎಲ್ಲಿರುವೆ
ಮೋಹದ ಅಮಲು ಮತ್ತೇರುತಿದೆ ಎಲ್ಲಿರುವೆ
ನನ್ನಿಂದ ದೂರವಾದದ್ದಕ್ಕೆ ಬೇಸರವಿಲ್ಲ ಬದುಕು ಪಾಠ ಕಲಿಸಿದ್ದಕ್ಕೆ ಬೇಸರವಿಲ್ಲ ಇನ್ನೂ ಮುಂತಾದ ಷೇರ್ ಗಳು ಓದುಗರ ಗಮನವನ್ನು ಸೆಳೆಯುತ್ತವೆ.
ಈ ಕೃತಿಯು ಉಮಾಶಂಕರ ಪ್ರತಿಷ್ಠಾನ ಹುಬ್ಬಳ್ಳಿ ಕಾವ್ಯ ಪ್ರಶಸ್ತಿಯನ್ನು ಪಡೆದ ಕೃತಿಯಾಗಿದ್ದು ಗುರು ಪ್ರಕಾಶನ ಕೊಪ್ಪಳ ಪ್ರಕಾಶನದಿಂದ ಹೊರತರಲಾಗಿದೆ. ಈ ಕೃತಿಗೆ ಹಿರಿಯ ಗಜಲ್ ಕಾರ ಅಲ್ಲಾಗಿರಿರಾಜ ಇವರ ಸೊಗಸಾದ ಮುನ್ನುಡಿ, ಬೆಳಗಾವಿ ಹಿರಿಯ ಸಾಹಿತಿಗಳಾಂತಹ ಸರಜೂ ಕಾಟ್ಕರ್ ರವರ ಚಂದದ ಬೆನ್ನುಡಿಯೊಂದಿಗೆ ಹಲವರು ಗಜಲ್ ಕಾರರ ಆಶಯ ನುಡಿಯೊಂದಿಗೆ ಪ್ರಕಟವಾಗಿದೆ.
ಮತ್ತಷ್ಟು ಗಜಲ್ ಸಂಕಲನಗಳ ಸಿದ್ದತೆಯಲ್ಲಿ ತೊಡಗಿರುವ ಅನಸೂಯ ಜಹಗೀರದಾರ ರವರು ಮತ್ತಷ್ಟು ಕೃತಿಗಳನ್ನು ಹೊರ ತರಲಿ ಮುಂದಿನ ಸಾಹಿತ್ಯ ಪಯಣವು ಉತ್ತಮವಾಗಿ ಸಾಗಲಿ ಎಂದು ಪತ್ರಿಕೆಯ ಪರವಾಗಿ ವೈಯಕ್ತಿಕವಾಗಿ ಹಾರೈಸಿ ಶುಭ ಕೋರುವೆ.
- ನಾರಾಯಣಸ್ವಾಮಿ – ಲೇಖಕರು ಮತ್ತು ವಕೀಲರು, ಬಂಡಹಟ್ಟಿ ಮಾಲೂರ್ ತಾಲ್ಲೂಕು.
