ಸಾಹಿತ್ಯ ಕ್ಷೇತ್ರದಲ್ಲಿ ‘ಬೀರಂ’ ಎಂದೇ ಹೆಸರುವಾಸಿಯಾಗಿರುವ ಬಿದಲೋಟಿ ರಂಗನಾಥ್ ರವರು ವಕೀಲಿಕೆಯನ್ನು ವೃತ್ತಿಯಾಗಿಸಿಕೊಂಡು ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡವರು. ಅವರ ಉರಿವ ಕರುಳ ದೀಪ ಕವನ ಸಂಕಲನದ ಕುರಿತು ಗಜಲ್ ಕಾರ ಜಬೀವುಲ್ಲಾ ಎಂ. ಅಸದ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಉರಿವ ಕರುಳ ದೀಪ(ಕವನ ಸಂಕಲನ)
ಕವಿ: ಬಿದಲೋಟಿ ರಂಗನಾಥ್
ಪ್ರಕಾಶಕರು: ನಿವೇದಿತ ಪ್ರಕಾಶನ, ಬೆಂಗಳೂರು
ಬೆಲೆ: ೧೦೦/-
ಮೊಬೈಲ್ ಸಂಖ್ಯೆ: ೯೯೬೪೯೧೬೧೯೧೦
_________
“ಉರಿವ ಕರುಳ ದೀಪ
ಊರಗಲ ನಾಲಿಗೆ ಚಾಚಿ
ಕತ್ತಲೆಯ ಮೈಯಲ್ಲಿನ ಮೈಲಿಗೆ ಸುಟ್ಟು
ನೆಲದ ನಡಿಗೆಯ ಮೇಲೆ
ಸಮತೆಯ ಹೂವಿನ ಹೆಜ್ಜೆ”
ಈ ತೆರನಾದ ವಿಭಿನ್ನ ಆಯಾಮದ, ಅನೂಹ್ಯ ಜಾಡಿನ ಗಂಭೀರ ಕವಿತೆಗಳ ಮೂಲಕವೇ ಪರಿಚಿತರಾದ ಸಹೃದಯರಾದ ‘ಬಿದಲೋಟಿ ರಂಗನಾಥ’ ಅವರು. ತಮ್ಮ ಕಾವ್ಯದ ಶಕ್ತಿಗೆ ನನ್ನ ಚಿತ್ರದ ಸೃಜನಶೀಲತೆಯ ಜುಗಲ್ಬಂದಿಗೆ ಕಾರಣರಾದವರು. ಉರಿವ ಕರುಳ ದೀಪ ಎಂಬ ಕವಿತೆಗೆ ರೂಪಕ ಕನ್ನಡಿಯಾದ ನನ್ನ ವರ್ಣಚಿತ್ರ ರಚನೆಯಾಗಿ ಮುಖಪುಟವಾಗಿದ್ದೆ ಹಾಗೆ.

ಸಾಹಿತ್ಯ ಕ್ಷೇತ್ರದಲ್ಲಿ ‘ಬೀರಂ’ ಎಂದೇ ಹೆಸರುವಾಸಿಯಾಗಿರುವ ಬಿದಲೋಟಿ ರಂಗನಾಥ್ ರವರು ವಕೀಲಿಕೆಯನ್ನು ವೃತ್ತಿಯಾಗಿಸಿಕೊಂಡು ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ಸಂಕಲನವು ಇವರ ಮೂರನೆಯ ಕೃತಿಯಾಗಿದ್ದು, ಜಿದ್ದಿಗೆ ಬಿದ್ದವರಂತೆ ದಿನಕ್ಕೊಂದು ಅರ್ಥವಿಲ್ಲದ ಸಾಲುಗಳ ಗೀಚಿ, ಅದನ್ನೇ ಕವಿತೆ ಎನ್ನುತ್ತಾ, ವರ್ಷಕ್ಕೊಂದು ವ್ಯವಧಾನವಿಲ್ಲದೆ ಜೀವವಿಲ್ಲದ ಕೃತಿಗಳನ್ನು ಪ್ರಕಟಿಸುವ ಹಲವರ ನಡುವೆ ನಾಲ್ಕು ವರುಷಗಳ ಧ್ಯಾನದ ನಂತರ ಅಂತರಂಗದಲ್ಲಿ ಜನ್ಮತಳೆದ ಕವಿತೆಗಳಿಗೆ ಮಾತ್ರ ಜೀವ ಕರುಣಿಸುವ, ಅರ್ಥ ತುಂಬಿ, ಲೋಕದ ಅರಿವಿಗೆ ನೀರೆರಿಯುವ ಬಿದಲೋಟಿ ರಂಗನಾಥ್ ನಂತಹ ಕವಿಗಳು ವಿರಳ.
“ಒಳಗೊಳಗೆ ಉರಿದು ಬೂದಿಯಾದೆ
ಉರಿಯುವಾಗ ನೀರು ಚಿಮುಕಿಸಲಿಲ್ಲ ಯಾರೂ
ಹೂಜಿಯಲಿ ನೀರು ಸುರಿಯಲು ಹೋದವರು
ಕನ್ನಡಿಯೊಳಗಿನ ಬಿಂಬವಾದರು.”
(ಚಂದ್ರಕಾಂತಿಯ ಬೆಳಕು)
ಬೀರಂ ರವರ ಕವಿತೆಗಳ ಕುರಿತು ಹಲವರ ವಿರೋಧಭಾಸಗಳಿವೆ! ಅವರ ಕವಿತೆಗಳು ಕವಿತೆಗಳೇ ಅಲ್ಲ, ಅರ್ಥವಾಗದ ರೂಪಕ ಹಾಗೂ ಪ್ರತಿಮೆಗಳ ಭಾರ ಹೊತ್ತ, ತಲೆ ಬುಡವಿಲ್ಲದ ಆಯಾಮಗಳ ನೆರಳಿನ ಅಲೆಮಾರಿ ಸಂಕೇತಗಳಂತೆ ಇವೆ ಅನ್ನುವವರಿದ್ದಾರೆ. ಅದು ಅವರವರ ಭಾವದ ಬವಣೆ ಎಂದೇ ನಾನು ಪರಿಗಣಿಸುವೆ. ಗಝಲ್, ಷಟ್ಪದಿಗಳಂತಹ ಕೆಲವು ಕಾವ್ಯ ಪ್ರಕಾರಗಳನ್ನು ಹೊರತುಪಡಿಸಿ, ಕವಿತೆಯ ರಚನೆಗೆ ಯಾವ ಮಾನದಂಡಗಳಿಲ್ಲ. ಯಾವ ನಿಯಮ – ನಿರ್ಬಂಧಗಳೂ ಸಲ್ಲ. ಯಾವ ಅಡೆತಡೆಗಳಿಲ್ಲದ, ಎಲ್ಲೆಗಳಿಲ್ಲದ ಸರ್ವ ಸ್ವತಂತ್ರ ಅಭಿವ್ಯಕ್ತಿಯಾಗಿರುವ ಕವಿತೆಯನ್ನು ಹೀಗೆ ಬರೆಯಬಾರದು ಅಥವಾ ಹೀಗೇ ಬರೆಯಬೇಕು ಎಂಬುವ ಹೇಳಿಕೆಗಳು ಎಷ್ಟು ಸರಿ?
ಭಾವ ತೀವ್ರತೆಯೇ ಕವಿಯೊಬ್ಬನ ಶಕ್ತಿ. ಆದರೆ ಒಂದು ಕೃತಿ ಒಬ್ಬ ಓದುಗನನ್ನು ಎಷ್ಟರಮಟ್ಟಿಗೆ ತೆರೆದುಕೊಳ್ಳುತ್ತದೆ ಅನ್ನುವುದು ಆಯಾ ಓದುಗನ ಅನುಭವ, ಆರ್ದತೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಪ್ರತಿಯೊಂದು ಕೃತಿಯೂ ಒಬ್ಬೊಬ್ಬರ ಪಾಲಿಗೂ ವಿಶಿಷ್ಟ, ವಿಭಿನ್ನ ಹಾಗೂ ತನ್ನದೇ ಅರ್ಥಗಳನ್ನು ಹೊರಡಿಸುತ್ತಾ ಹೋಗುತ್ತದೆ. ಈ ಹಂತದಲ್ಲಿ ಕವಿಗಿಂತ ಓದುಗ ಆಪ್ತವಾದ ಅನುಭೂತಿಯನ್ನು ಪಡೆಯಬಹುದಾಗಿದೆ. ಕವಿಗೆ ಕಾಣದ್ದನ್ನು ಓದುಗ ವಿಮರ್ಶಕನಾಗಿ ಕಾಣಿಸಬಹುದಾಗಿದೆ.
ಅರ್ಥ ಆಗುವ ಹಾಗೆ ಬರೆಯಬೇಕು ಅನ್ನುವುದನ್ನು ನಿರಾಕರಿಸಿದ, ಅರ್ಥ ಇರುವ ಹಾಗೆ ಬರೆಯಬೇಕು ಎಂದು ಪ್ರತಿಪಾದಿಸಿದ, ಕವಿತೆಯನ್ನು ಅರ್ಥ ಮಾಡಿಕೊಳ್ಳಲು ಓದುಗನೂ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ತಮ್ಮ ಕಾವ್ಯದಲ್ಲಿ ಅಪೂರ್ವ ಪ್ರತಿಮೆ, ರೂಪಕಗಳ ಮೂಲಕ ಕಾವ್ಯ ಕಟ್ಟಿದರು. “ಒಂದು ಶತಮಾನದ ಬಳಿಕವೂ ಅಷ್ಟೇ ಪ್ರೀತಿಯಿಂದ ಓದಿಸಿಕೊಳ್ಳುವ ಕಾವ್ಯ ಬರೆಯದವನು ಮಹಾಕವಿ ಆಗಲಾರ” ಅಂದಿದ್ದರು ‘ಅಡಿಗ’ರು.
ಸರಳವಾಗಿ ಬರೆಯಬೇಕು ಎಂಬುದು ಗದ್ಯಕಾರರ ಸಂಕಲ್ಪ. ಆದರೆ ಗದ್ಯದಲ್ಲಿ ಸರಳವಾಗಿ ಹೇಳಿದ್ದು ಒಂದು ಅನುಭವವಾಗಿ ನಮ್ಮನ್ನು ತಾಕುತ್ತದೆಯೇ? ಅದು ತುಂಬ ಬಿಡುವಿದ್ದಾಗ ಓದಿ ಮರೆತುಬಿಡುವ ಬರಹ ಮಾತ್ರ ಆಗಿಬಿಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಅಲ್ಲವೇ? ತುಂಬಾ ಸರಳವಾಗಿ ಹೇಳಿದಾಗ ಇಷ್ಟೇನಾ ಅನ್ನಿಸಿ ಇಡೀ ಅನುಭವದ ಗಾಢತೆಯೇ ನಮ್ಮನ್ನು ತಟ್ಟದೆ, ಅವರಿಸದೆ ಇರಬಹುದಲ್ಲವೇ?
ಅತ್ಯಂತ ಸರಳವಾಗಿ ಬರೆದ ಎ.ಕೆ. ರಾಮಾನುಜನ್ ಹಾಗೂ ಕೆ.ವಿ. ತಿರುಮಲೇಶರು, ಸಂಕೀರ್ಣವಾಗಿ ಬರೆದ ಗೋಪಾಲಕೃಷ್ಣಅಡಿಗ ಮತ್ತು ಬಿ.ಸಿ. ರಾಮಚಂದ್ರಶರ್ಮರು, ಕಾವ್ಯಕ್ಕೆ ನಿಷ್ಠವಾಗಿ ನಿಷ್ಠುರವಾಗಿ ಬರೆದ ಪಿ.ಲಂಕೇಶ್, ಕೆ.ಬಿ, ಬೋದಿಲೇರ್, ಬ್ರೇಕ್ಟ್, ಗಾಲಿಬ್, ಖಲೀಲ್ ಗಿಬ್ರಾನ್ ಹಾಗು ಹಲವು ಕವಿಗಳ ಕವಿತೆಗಳು ಮೊದಮೊದಲು ‘ಕವಿತೆಗಳೇ ಅಲ್ಲ’ ಎಂಬ ಹಣೆಪಟ್ಟಿಯನ್ನು ಧರಿಸಲಿಲ್ಲವೇ? ಇಂತಹ ಕವಿಗಳು ತಮ್ಮ ಜೀವಂತಿಕೆಯುಳ್ಳ ವಿಭಿನ್ನ ದೃಷ್ಟಿಕೋನದ ಮುಕ್ತ ಮಾರ್ಮಿಕ ಕಾವ್ಯಭಿವ್ಯಕ್ತಿಯಿಂದಲೇ ಇಂದಿಗೂ ಅಮೂರ್ತವಾಗಿ ನಮ್ಮೊಂದಿಗಿಲ್ಲವೇ?
ಅಷ್ಟಕ್ಕೂ ತನಗೆ ಬೇಕಾದ ಶೈಲಿಯನ್ನೂ, ಸಂಕೀರ್ಣತೆಯನ್ನೂ ಕಂಡುಕೊಳ್ಳುವುದು ಕಾವ್ಯವೇ ಅಲ್ಲವೇ? ಒಂದು ಒಳ್ಳೆಯ ಕವಿತೆಯನ್ನು ಅದರ ಸ್ವರೂಪದಿಂದಲೂ, ಮೈಯಿಂದಲೂ ಬೇರ್ಪಡಿಸಿ ನೋಡುವುದಕ್ಕೆ ಸಾಧ್ಯವೇ? ಹಾಗೆ ನೋಡಿದಾಗ ಅದು ಪದ್ಯವಾಗಿಯೇ ಉಳಿಯುತ್ತದೆಯೇ?
‘ಯು. ಆರ್. ಅನಂತಮೂರ್ತಿ’ ಅವರು ಹೇಳುತ್ತಾರೆ:
“ಪದ್ಯ ಪದವಿಲ್ಲದಿರಬೇಕು
ಹೆಜ್ಜೆ ಗುರುತು ಇಲ್ಲದೆ ಪಕ್ಷಿ ಹಾರುವಂತೆ
ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು
ಏರುವ ಚಂದ್ರನಂತೆ
ಹೇಳಕೂಡದು
ಇರಬೇಕು”.
ಗಿರೀಶ್ ಹತ್ವಾರ್(ಜೋಗಿ) ರವರು “ರೂಪಕಗಳ ಎದುರು ಸೊರಗಿದವರಿಗೆ ಶ್ರದ್ಧಾಂಜಲಿ” ಎಂದು ಒಂದು ಲೇಖನವನ್ನೇ ಬರೆದಿದ್ದಾರೆ. ಪದಗಳ ಮೂಲಕ ಹೇಳಬಹುದಾದದ್ದನ್ನು ಮೀರಿಯೂ ಏನನ್ನೋ ಹೇಳುವುದಕ್ಕೆ ಕವಿಯಾದವನ ಮನಸ್ಸು ತುಡಿಯಬೇಕು. ನಾವು ಎಷ್ಟು ವಾಚಾಳಿಗಳಾಗಿದ್ದೇವೆ ಎಂದರೆ ಬರೆದದ್ದೆಲ್ಲ ವಾಚ್ಯ ಅನಿಸುವುದಕ್ಕೆ ಶುರುವಾಗಿದೆ. ಇದನ್ನು ದಾಟಿ ಮುಂದುವರೆಯುವ ಅವಶ್ಯಕೆ ಹಾಗೂ ಅನಿವಾರ್ಯತೆ ಖಂಡಿತವೆವಿದೆ. ಕವಿತೆ ಎಂದಿಗೂ ಸಹ ಒಬ್ಬ ಕಲಾವಿದ ರಚಿಸಿದ ಚಿತ್ರದ ಹಾಗೆ ನಮ್ಮನ್ನು ಎದುರುಗೊಳ್ಳಬೇಕು. ಓದುಗನಾದವನು ಆ ಕಲಾಕೃತಿಯ ಮುಂದೆ ನಿಂತು ಅದನ್ನು ಅರ್ಥೈಸಿಕೊಳ್ಳಬೇಕಲ್ಲವೇ?
“ಕವಿತೆಯೆಂದರೆ
ನನ್ನೊಳಗಿನ ಅಂತರಾತ್ಮದ ಬೆಳಗು
ಬಯಲ ಬನಿ
ಬದುಕಿನ ಬೆವರು
ಅಲೆವ ನೆರಳು”
(ಕವಿತೆಯೆಂದರೆ)
ಬೀರಂ ರವರ ಕವಿತೆಗಳನ್ನು ಇಡಿಯಾಗಿ ಅವಲೋಕಿಸಿದಾಗ ಅವರು ತಮ್ಮ ಕಾವ್ಯ ರಚನೆಯಲ್ಲಿ ಎಲ್ಲಾ ಹಂತಗಳನ್ನು ದಾಟಿದಂತೆ ಕಾಣುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಮಿತಿಮೀರಿದ್ದಾರೆ ಎನ್ನಬಹುದು. ಹೌದು…! ಹಾಗೇ ಮಿತಿಮಿರುವುದಿದೆಯಲ್ಲ ಅದು ಎಲ್ಲರಿಂದ ಸಾಧ್ಯವಾಗುವುದಂತದ್ದಲ್ಲ. ಅದಕ್ಕಾಗಿ ಅರಿವಿನ ಅನುಭವವೆಂಬ ಅಂತರಂಗದ ಬೆಳಕಿನ ಹಾದಿಯಲಿ ನಿರ್ಲಿಪ್ತನಾಗಿ ಅಲೆದು, ದಣಿದು, ಧ್ಯಾನಿಸಿ, ಕಳೆದು, ಮತ್ತೆ ಹುಡುಕಿಕೊಂಡು ನವ ಕಾಣ್ಕೆ, ನವೀನಾ ಹೊಳಹುವಿನೊಂದಿಗೆ ಅವಿರ್ಭವಿಸಬೇಕು. ಮಿತಿಮೀರುವುದು ಕವಿಯ ಗುಣವಾಗಬೇಕು. ಕಾಣದ್ದನ್ನು ಕಾಣಿಸುವ, ಕೇಳದ್ದನ್ನು ಕೇಳಿಸುವ, ಯಾರೂ ನಡೆಯದ ದಾರಿಯಲ್ಲಿ ಹೆಜ್ಜೆ ಹಾಕುವ, ಯಾರೂ ಊಹಿಸದ ಆವರಣವನ್ನು ಸೃಷ್ಟಿಸುವ, ಭೂತ-ವರ್ತಮಾನ-ಭವಿಷ್ಯತ್ತಿನ ಕೊಂಡಿಗಳ ಬೆಸೆಯುವ ಸೃಜನಶೀಲತೆ ಅನಾಯಾಸವಾಗಿ ಒದಗಿರುವುದು ವೇದ್ಯವಾಗುತ್ತದೆ.

ಯಾವ ಕವಿಗೆ ಆಗಲಿ, ತನಗೆ ತನ್ನ ಮಿತಿಗಳು ತಿಳಿದಿರಬೇಕು. ಆ ಮಿತಿಗಳನ್ನು ದಾಟಿ ಅರಿವಿನ ಬಯಲನ್ನು ತಾಕಿದಾಗಲೇ ಪರಿಶುದ್ಧವಾದ, ಸಶಕ್ತವಾದ, ಸತ್ವವುಳ್ಳ, ಸಮರ್ಥವಾದ, ಸಮೃದ್ಧವಾದ ಪಕ್ವ ಕಾವ್ಯವನ್ನು ರಚಿಸಲು ಕವಿಗೆ ಸಾಧ್ಯವಾಗುವುದು. ಅಂತಹ ಕವಿತೆಗಳನ್ನು ನಾನು ಬಿದಲೋಟಿ ರಂಗನಾಥ್ ರವರ “ಉರಿವ ಕರುಳ ದೀಪ” ಸಂಕಲನದಲ್ಲಿ ಇಡಿಯಾಗಿ ಕಂಡೆ, ಖುಷಿಪಟ್ಟೆ, ಓದಿದೆ, ಆಸ್ವಾದಿಸಿದೆ. ಒಂದು ಅನಿರ್ವಚನಿಯಾ, ಅವರ್ಣನಿಯಾ ವಿಶಿಷ್ಠ ಅನುಭವಕ್ಕೆ, ವಿಭಿನ್ನ ಅನುಭಾವಕ್ಕೆ ನನ್ನನ್ನು ನಾನು ತೆರೆದುಕೊಂಡೆ.
“ಅಳುವ ಕಂದನ ತುಟಿಯು
ಬಯಲ ಬೆವರ ನೆಲದ ಮೇಲೆ
ನಡೆಯುತ್ತಿದೆ
ನಡೆಯುತ್ತಾ ನಡೆಯುತ್ತಾ
ಎಷ್ಟೊಂದು ಜನರು
ನಡೆಯುವ ದಾರಿಯಾದರೂ
ಮಸಿ ಕೈಯ ಗುರುತು ಹಚ್ಚಲಾರದೆ
ಗತಿಸಿ ಹೋದವು ಕಾಲ”
(ಮುಲಾಮು ಹುಡುಕುತ್ತಾ)
ಕವಿತೆ ಏನು ಹೇಳುತ್ತದೆ ಎನ್ನುವುದನ್ನು ಬೇರೆ ಮಾತುಗಳಲ್ಲಿ ಹೇಳಲು ಸಾಧ್ಯವಾದರೆ ಕವಿತೆ ಏಕೆ ಬರೆಯಬೇಕು? ಬರೆದಷ್ಟೇ ಸತ್ಯ! ಎತ್ತಿನಕಾರಕ್ಕೆ ಉಬ್ಬಿ ಸಿಡಿದೊಡೆದ ಕಪ್ಪೆಗಳ ಕಥೆಯಷ್ಟೇ ಇತಿಹಾಸ.
ಬಿ. ಸಿ. ರಾಮಚಂದ್ರ ಶರ್ಮ ರವರು ತಮ್ಮ ಕವಿತೆಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಓದುಗನಿಗೆ ಅರ್ಥವಾಗಬೇಕು ಎಂಬ ಕಾರಣಕ್ಕೆ ತಾನು ಹೇಳಬೇಕಾದದ್ದನ್ನು ಸರಳಗೊಳಿಸಿ ಹೇಳಲಿಲ್ಲ. ಈ ಬಗೆಯ ಕಾವ್ಯ ನಿಷ್ಠೆ, ನಿಷ್ಠುರ ನಿಲುವು ಎಲ್ಲಾ ಕವಿಗಳಲ್ಲೂ ಇರಬೇಕು. ಹತ್ತರಲ್ಲಿ ಒಬ್ಬರಾಗಿರುವುದಕ್ಕಿಂತ, ಒಂಟಿಯಾಗಿಯೇ ಉಳಿಯುವುದು ಉತ್ತಮ ಅಲ್ಲವೇ? ಅದು ಬಿದಲೋಟಿ ರಂಗನಾಥರಲ್ಲಿ ಕಂಡಿದ್ದೇನೆ.
“ಮಳೆಯ ನೋವಿನ ಜೋಳಿಗೆಗೆ
ಸಿರಿಯ ಗಂಟು ಕಟ್ಟಿ
ನಗುವ ಪೈರಿನಲಿ
ತೂಗುತಿಹುದು ಸುಳಿಗಾಳಿ
ಸೇರಗ ಮರೆಯಲಿ
ಸಾವಿರ ಪದಗಳ ಕಟ್ಟಿ
ಹೊಕ್ಕುಳ ಮೇಲಿನ ಬಿಸಿಯಲಿ”
(ಬೆವರ ಹೂ)
ಉರಿವ ಕರುಳ ದೀಪ ಸಂಕಲನದ ಕವಿತೆಗಳು ಒಂದೇ ಗುಕ್ಕಿಗೆ ಓದುವಂತಹ ಕವಿತೆಗಳಲ್ಲ! ಒಂದು ಕವಿತೆಯನ್ನು ಓದಿ ಅರ್ಥೈಸಿಕೊಂಡ ನಂತರವೇ ಮತ್ತೊಂದು ಕವಿತೆಗೆ ಕೈಹಾಕಬೇಕು, ಚಿಂತಿಸಬೇಕು, ಪ್ರತಿಮೆ ರೂಪಕಗಳ ಹೂರಣವನ್ನು ಬಿಡಿಸಿ ಅದರ ಅನರ್ಘ್ಯ ಸವಿಯನ್ನು ಆಸ್ವಾದಿಸಬೇಕು. ಏಕೆಂದರೆ ಕವಿತೆಯೊಂದರಿಂದ ಏರ್ಪಡುವ ಸಂವೇದನೆಯ ಆಳ, ವಿಸ್ತಾರ ಅನಂತವಾದುದು. ಆಗಸವನ್ನು ಮುಟ್ಟುವುದು ಹೇಗೆ ಸುಲಭವಲ್ಲವೋ ಅದೇ ರೀತಿಯಲ್ಲಿ ಬೀರಂ ರವರ ಕಾವ್ಯದ ಅಂತರಂಗದ ಅಮೂರ್ತ ಆತ್ಮವನ್ನು ತಾಕುವುದು ಸಹ ಅಷ್ಟೇ ಪ್ರಯಾಸದಾಯಕ; ಆದರೆ ಅಸಾಧ್ಯವಲ್ಲ.
ಕವಿಯಾದವನು ತನ್ನ ಮನದ ಮಾತಿಗೆ ಓಗೊಟ್ಟು ಹೃದಯದ ಮೌನಕ್ಕೆ ಕಿವಿಯಾಗಿ ಯಾವುದೋ ತನ್ಮಯತೆಯಲಿ ಮುಳುಗಿ, ಪರವಶನಾಗಿ ಧ್ಯಾನಿಸಿದಂತೆ ಕವಿತೆ ರಚಿಸುತ್ತಾನೆ. ‘ರಸಋಷಿ ಕುವೆಂಪು’ ಅವರು ಹೇಳಿದ್ದು ಇದನ್ನೇ ಅಲ್ಲವೇ?
“ದೇವರು ಋಜು ಮಾಡಿದನು ರಸವಶನಾಗುತ ಕವಿ ಅದ ನೋಡಿದನು”
ಎಂದು ಹೇಳಿದ್ದು.
“ಕ್ಷಣಗಳು ಮೀನಿನಂತೆ ಜಾರಿಯೋ, ಚಿಟ್ಟೆಯಂತೆ ಹಾರಿಯೋ ಹೋಗುವುದನ್ನು ಕವಿ ನೋಡುತ್ತಾ ಕೂರುತ್ತಾನೆ, ಅಸಹಾಯಕನಾಗಿ. ಆ ಅಸಹಾಯಕತೆಯಲ್ಲೇ ಕವಿತೆ ಹುಟ್ಟುತ್ತದೆ” ಎಂದು ಬರೆಯುತ್ತಾರೆ #ಜೋಗಿ.
“ಒಡಲುರಿಯ ಕನಸೊಂದು
ಚುಕ್ಕಿಗಳತ್ತ ಮುಖ ಮಾಡಿ
ಅರಳಿ ಮುತ್ತಾಗಿ
ಸಮುದ್ರದ ಮೇಲೆ ಬಿದ್ದ
ಕವನದ ಕರುಳ ತಂತಿ”
(ತೆರೆದ ಕಣ್ಣಿನ ಶಾಂತ ನದಿ)
….ಹೀಗೆಲ್ಲಾ ಕವಿತೆ ರಚಿಸುವಾಗ ಕವಿಯಾದವನು ಓದುಗನಿಗೆ ಇದು ತಲುಪುತ್ತದೆಯೇ ಎಂಬುವುದರ ಕುರಿತು ಅಲೋಚಿಸುವುದಿಲ್ಲ, ಈ ರೀತಿಯಲ್ಲಿ ಅಲೋಚಿಸಬಾರದು ಕೂಡ. ಹಾಗೆ ನೋಡಿದರೆ ಓದುಗರಿಗಾಗಿಯೇ ಬರೆದ ಕಾವ್ಯ ಅದು ಕಟ್ಟಿದ ಗೋಡೆಯಂತೆ. ಎಂದಾದರೂ ಬಿದ್ದು ಹೋಗಬಹುದು. ಆದರೆ ಯಾರ ಹಂಗಿಲ್ಲದೆ ಸರ್ವಸ್ವತಂತ್ರವಾಗಿ, ಮುಕ್ತವಾಗಿ ಕವಿಯ ಅರಿವಿನ ಗರ್ಭದಿಂದ ಪ್ರಸವ ಭಾಗ್ಯ ಪಡೆದು ಹುಟ್ಟಿದ ಕಾವ್ಯಕೆ ಆಯುಷ್ಯ ಹೆಚ್ಚು. ಅದು ಚಿರಾಯೂವೂ ಆಗಬಹುದು.
ಪ್ರಸ್ತುತ ಸಂಕಲನದಲ್ಲಿನ ಕವಿತೆಗಳು ಯಾರ ಸಲುವಾಗಿಯೂ ಏಕಾಏಕಿ ಕಟ್ಟಿದ ಕವಿತೆಗಳಾಗಿರದೆ, ಸೃಜನಶೀಲ ಮನಸ್ಸಿನ ಅನುಭವದ ಮೂಸೆಯಲ್ಲಿ ಅರಳಿದ ಕಾಡು ಮಲ್ಲಿಗೆಗಳಾಗಿವೆ. ಕೆಂಡ ಸಂಪಿಗೆಗಳಾಗಿವೆ. ದೇವಕಣಗಿಲೆಗಳಾಗಿವೆ. ಅನಾಮಿಕ ಹೆಜ್ಜೆ ಗುರುತುಗಳಾಗಿ ಮೂಡಿಬಂದಿವೆ.
“ಹಸಿವು ಕರೆಯುವ ಸದ್ದಿಗೆ
ಮೈಥುನವೂ ಹೆಣಭಾರವಾಗಿದೆ
ಕೂಡಲಾರದ ಉಕ್ಕೆಯಲಿ
ಕರುಣೆ ಸತ್ತು ಬಿದ್ದಿದೆ
ಹರಿದ ಬಟ್ಟೆಯೊಳಗೆ ಕನಸುಗಳು
ಮೂರ್ಛೆ ಹೋಗಿವೆ
ಹನಿ ನೀರೂ ಚಿಮುಕಿಸಲಾರದೆ.”
(ಸೂಜಿಗೂ ಸಿಗದವನ ಹೆಜ್ಜೆ ಗುರುತು)
ಬೀರಂ ರವರ ಅಸಂಗತ ಪ್ರತಿಮೆ-ರೂಪಕಗಳ ಕುರಿತು ಹೇಳಲೇ ಬೇಕು. ಇಲ್ಲಿನ ಕವಿತೆಗಳ ಒಳ ಹೊಕ್ಕು ನೋಡಿಡಾಗ ಕವಿ ಅದ್ಯಾವ ಜ್ಞಾನದ ಪಿಪಾಯಿಯ ಮದಿರೆ ಹೀರಿರುವನೋ ನಾ ಕಾಣೆ! ಏಕೆಂದರೆ ಪ್ರಪಾತದಿಂದ ಒಮ್ಮೆಲೆ ಅನಂತತೆಗೆ ಜಿಗಿಯುವ, ಅನಂತ ಅಗಸದಿಂದ ಕಡಲ ಕಿನಾರೆಯ ತೃಣ ಕಣವಾಗುವ, ಬದುಕಿನ ಕತ್ತಲ ದವಡೆಯ ನಡುವೆ ಬೆಳಕಿನ ಬೀಜವಾಗಿ ಅವಿತುಕೊಳ್ಳುವ, ಮತ್ತೆ ಮೊಳಕೆಯಾಗುವುದನ್ನು ನೋಡಿದರೆ ಬೆರಗು ಹುಟ್ಟುತ್ತದೆ.
ಮುಗಿಸುವ ಮುನ್ನ….
ಬಿದಲೋಟಿ ರಂಗನಾಥ್ ರವರ ಕವಿತೆಗಳಲ್ಲಿ ನಕಾರಾತ್ಮಕ ಅಂಶಗಳೇ ಇಲ್ಲವೆಂದಲ್ಲ, ಕವಿತೆಗಳಲ್ಲಿ ಬಳಸಿರುವ ನೆಲ, ಬೆಳಕು, ಕತ್ತಲು, ಅಲೆವ ಹತ್ತು ಹಲವು ಪ್ರತಿಮೆ ಹಾಗೂ ರೂಪಕಗಳು ಪುನರಾವರ್ತನೆಯಾಗಿ ಕ್ಲಿಷೆಯಾಗಿದೆ. ಜೊತೆಗೆ, ಬೀರಂರವರು ಕವಿತೆಯಲ್ಲಿ ಬಳಸಿದ ಪ್ರಾದೇಶಿಕ ನುಡಿಗಟ್ಟಿನ ಓಘ ಕವಿತೆಗಳಿಗೆ ಮೆರಗು ಕೊಟ್ಟಿದೆಯಾದರೂ ಇತರರಿಗೆ ಅರ್ಥವಾಗದ ಕೆಲ ಪದಗಳ ಅರ್ಥವನ್ನು ಕವಿತೆಯ ಕೆಳಗಡೆ ಹಂಚಿಕೊಳ್ಳಬೇಕಾಗಿತ್ತು.
ಉಪಸಂಹಾರ:
“ಒಂದೊಂದು ಕವಿತೆಯೂ ಭರವಸೆಯ ವ್ಯವಸಾಯ ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ”.
ಯಾರೂ ತುಳಿಯದ, ಹೆಜ್ಜೆ ಮೂಡದ ಹಾದಿಯಲ್ಲಿ ಭರವಸೆಯ ಹೊಸ ಹೆಜ್ಜೆ ಹಾಕುವುದರ ಮುಖಾಂತರ ಅಚ್ಚರಿ ಮೂಡಿಸುತ್ತಿರುವ ಬೀರಂ ರವರ ಕಾವ್ಯ ಕುಸುರಿಯ ಹೂಗಂಧ ಎಲ್ಲೆಡೆಗೆ ಪಸರಿಸಲಿ…
- ಜಬೀವುಲ್ಲಾ ಎಂ. ಅಸದ್ – ಮೊಳಕಾಲ್ಮುರು.
