ಅಂದು ಉಡುಪಿ ಜಯರಾಂ, ಇಂದು ಮೂಗೂರು ಸುಂದರಂ

 ಭಾರತೀಯ ಚಿತ್ರರಂಗದ ಈ ಇಬ್ಬರು ಲೆಜೆಂಡ್ ನೃತ್ಯ ನಿರ್ದೇಶಕರನ್ನು ಕಾಡುವ ಮರೆವಿನ ಕಾಯಿಲೆಗೆ ಔಷಧಿ ಇಲ್ಲವೇ?…  ಖ್ಯಾತ ಸಿನಿ ಬರಹಗಾರರಾದ ಗಣೇಶ ಕಾಸರಗೋಡು ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಬರೋಬ್ಬರಿ 23 ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದ ಲೆಜೆಂಡ್ ನೃತ್ಯ ನಿರ್ದೇಶಕರಾದ ಉಡುಪಿ ಜಯರಾಂ ಅವರನ್ನು ಕಾಡುತ್ತಿದ್ದ ಮರೆವಿನ ಕಾಯಿಲೆಗೆ ಔಷಧವೇ ಇರಲಿಲ್ಲವೇ? ದುರಂತವೆಂದರೆ ಇದೇ ಮರೆವಿನ ಕಾಯಿಲೆ ಮತ್ತೊಬ್ಬ ಲೆಜೆಂಡ್ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಅವರನ್ನು ಕಾಡುತ್ತಿದೆ.

ಕೊನೆಯುಸಿರೆಳೆಯುವ ಕಾಲಕ್ಕೆ ನೃತ್ಯ ಲೋಕದ ಧ್ರುವತಾರೆ ಉಡುಪಿ ಜಯರಾಂ ಅವರ ನೆನಪಿನ ಶಕ್ತಿ ಪೂರ್ತಿ ಕುಂದಿ ಹೋಗಿತ್ತು. ಸಾಯುವ ತಿಂಗಳ ಹಿಂದೆಯಷ್ಟೇ ನಾನು ಈ ದಿಗ್ಗಜನನ್ನು ಚೆನ್ನೈನ ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಜಯರಾಂ ಅವರ ಕೊನೆಯ ದಿನಗಳ ಈ ದುರವಸ್ಥೆಯನ್ನು ಕಂಡು ನನಗೆ ಆಘಾತವಾಗಿತ್ತು. ಮರೆವು ಮಾತ್ರವಲ್ಲ, ಒಂದು ರೀತಿಯ ವಿಭ್ರಾಂತ ಸ್ಥಿತಿಯಲ್ಲಿ ನಮ್ಮ ಹೆಮ್ಮೆಯ ಈ ನೃತ್ಯ ನಿರ್ದೇಶಕರು ಮಾನಸಿಕ ಸ್ಥಿಮಿತ ಕಳೆದುಕೊಂಡು ಶೂನ್ಯ ಪ್ರಪಂಚದಲ್ಲಿ ಲೀನವಾಗಿದ್ದರು! ಅವರಿಗೆ ತಮ್ಮ ಹೆಸರಿನ ನೆನಪಿಲ್ಲ, ಹೆಂಡತಿಯ ನೆನಪಿಲ್ಲ, ಮಕ್ಕಳ ನೆನಪಿಲ್ಲ, ಮನೆ, ಮಠ, ಊರು, ಕೇರಿ, ಉದ್ಯೋಗ…ಯಾವುದೂ ನೆನಪಿರಲಿಲ್ಲ…ಇಂಥಾದ್ದೊಂದು ದಿನ ಸಂದರ್ಶನಕ್ಕಾಗಿ ನಾನು ಅವರನ್ನು ಭೇಟಿಯಾಗಿದ್ದೆ. ಅದೇ ಕೊನೆಯ ಸಂದರ್ಶನ! ಮಾತಿಲ್ಲ, ಕತೆಯಿಲ್ಲ. ಅಲ್ಲಿ ನಡೆದಿರುವ ವಿದ್ಯಮಾನಗಳನ್ನು ಅಕ್ಷರಗಳಲ್ಲಿ ಪೋಣಿಸಿ ‘ವಿಜಯಕರ್ನಾಟಕ’ ಓದುಗರ ಮುಂದಿಟ್ಟಿದ್ದೆ…
ಈಗ ನೋಡಿದರೆ ಮೂಗೂರು ಸುಂದರಂ ಅವರದ್ದೂ ಹೆಚ್ಚುಕಮ್ಮಿ ಅದೇ ಪರಿಸ್ಥಿತಿ!

ವರ್ಷಗಳ ಹಿಂದೆ ಇದೇ ಲೆಜೆಂಡ್ ಮೂಗೂರು ಸುಂದರಂ ಅವರು ನನ್ನನ್ನು ಹುಡುಕಿಕೊಂಡು ಜರಗನಹಳ್ಳಿಯ ‘ಅಮ್ಮನ ಮನೆ’ಗೆ ಬಂದಿದ್ದರು ಅಂದರೆ ನೀವು ನಂಬಲಾರಿರಿ! ಆದರೆ ಇದು ನಿಜ. ಅವರ ಪಟ್ಟ ಶಿಷ್ಯ ತುಮಕೂರಿನ ದೇವಾನಂದ ಅವರಿಗೆ ಗಂಟು ಬಿದ್ದು ನನ್ನ ಮನೆಗೆ ಬಂದದ್ದೊಂದು ನನ್ನ ಮಟ್ಟಿಗೂ ಅಚ್ಚರಿಯ ವಿಚಾರವೇ ಸರಿ! ಬಂದವರೇ ಅಪ್ಪಿ ಮುದ್ದಾಡಿದ ರೀತಿಯೂ ಅನನ್ಯ. ಮೆಟ್ಟಿಲು ಹತ್ತಿಕೊಂಡು ಮೇಲ್ಮಹಡಿಗೆ ಬಂದ ಸುಂದರಂ ಅವರು ಸೋಫಾದ ಮೇಲೆ ಕುಳಿತು ಆರಾಮವಾಗಿ ಎರಡು ಗಂಟೆಗಳ ಕಾಲ ಮಾತಾಡಿದ್ದರು. ಆಗ
‘ಟೀವಿ9’ನಲ್ಲಿದ್ದ ರಿಪೋರ್ಟರ್ ಭಾಗ್ಯಳನ್ನು ಕರೆಸಿ ಒಂದು ಅಪರೂಪದ ಸಂದರ್ಶನವನ್ನೂ ಮಾಡಿಸಿದ್ದೆ.

ಆದರೆ ಈಗೇನಾಗಿದೆ ನೋಡಿ : ಅಷ್ಟೊಂದು ಲವಲವಿಕೆಯಿಂದಿದ್ದ ಮೂಗೂರು ಸುಂದರಂ ಅವರು ಉಡುಪಿ ಜಯರಾಂ ಅವರಂತೆಯೇ ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡು ವಿಭ್ರಾಂತ ಸ್ಥಿತಿಯಲ್ಲಿದ್ದಾರೆ…

ನನಗಿದರ ಅರಿವಾದದ್ದು ಇತ್ತೀಚೆಗೆ. ಗೆಳೆಯ ಶ್ರವಣ ಲಕ್ಷ್ಮಣ್ ನೇತೃತ್ವದ ‘ದಿ ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ’ ಸಂಸ್ಥೆ ಕೊಡಮಾಡುವ ‘ಕರುನಾಡ ಕರ್ಣಾಟಕ ರತ್ನ’ ಪ್ರಶಸ್ತಿಯ ಆಮಂತ್ರಣ ಪತ್ರಿಕೆ ತಲುಪಿಸಲೆಂದು ಮೈಸೂರಿನ ಅವರ ಮನೆಗೆ ಹೋದಾಗ ನಾನು ಬೆಚ್ಚಿ ಬಿದ್ದದ್ದು ನಿಜ! ಅಂದು ಉಡುಪಿ ಜಯರಾಂ, ಇಂದು ಮೂಗೂರು ಸುಂದರಂ!

ತಮ್ಮ ಪತಿಯ ಈ ದುಃಸ್ಥಿತಿಯನ್ನು ನನ್ನ ಮುಂದೆ ಹೇಳಿಕೊಂಡವರು ಅವರ ಧರ್ಮಪತ್ನಿ ಮಹಾದೇವಮ್ಮ ಸುಂದರಂ. ಮನೆಯಲ್ಲಿ ಸುಂದರಂ ಅವರ ಮಕ್ಕಳಾದ ಪ್ರಭುದೇವ್, ಬಸವರಾಜ್, ನಾಗೇಂದ್ರಪ್ರಸಾದ್ ಇರಲಿಲ್ಲ. ಅವರವರು ಅವರವರ ಉದ್ಯೋಗದಲ್ಲಿ ಬಿಜಿಯಾಗಿದ್ದರು. ಆದರೆ ಅಪ್ಪನ ಮೇಲೊಂದು ನಿಗಾ ಇತ್ತು. ದಿನಾ ಒಂದೆರಡು ಸಲ ಕಾಲ್ ಮಾಡಿ ಅಪ್ಪನ ಆರೋಗ್ಯ ವಿಚಾರಿಸುತ್ತಿದ್ದರು.


ಇಷ್ಟಕ್ಕೂ ಮೂಗೂರು ಸುಂದರಂ ಅವರಿಗೆ ಆದದ್ದಾದರೂ ಏನು? ಎಲ್ಲವೂ ಸರಿಯಾಗಿತ್ತು. ದಿನಾ ಮೂಗೂರಿನ ತೋಟಕ್ಕೆ ಹೋಗಿ ಬರುತ್ತಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆಯೇ ಸಣ್ಣ ಮರೆವು ಕಾಡತೊಡಗಿತು. ದಿನಗಳೆದಂತೆ ಮರೆವು ಹೆಚ್ಚಾಯಿತು. ಏನೋ ಹೇಳಲು ಹೊರಡುತ್ತಾರೆ, ಮುಂದಿನದ್ದು ಮರೆತು ಹೋಗುತ್ತದೆ. ಒಂದು ತಿಂಗಳ ಕಾಲ ಹೀಗೆಯೇ ಮುಂದುವರಿದಾಗ ಪತ್ನಿ ಮಹಾದೇವಮ್ಮನಿಗೆ ಟೆನ್ಶನ್ ಶುರುವಾಗುತ್ತದೆ. ಮಕ್ಕಳಿಗೆ ವಿಷಯ ತಿಳಿಸುತ್ತಾರೆ. ತಮಗೆ ಗೊತ್ತಿರುವ ಔಷಧಿ ಕುಡಿಸುತ್ತಾರೆ. ಅವರಿವರು ಹೇಳಿದ್ದನ್ನೂ ಮಾಡುತ್ತಾರೆ. ಈ ಸ್ಥಿತಿಯಲ್ಲಿ ನಾವು ಅರೇಂಜ್ ಮಾಡಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎನ್ನುವ ಆತಂಕ ನಮ್ಮನ್ನು ಕಾಡತೊಡಗಿತು. ಆದರೆ ನಮ್ಮ ಊಹೆಗೂ ಮೀರಿ ಮೈಸೂರಿನಲ್ಲಿದ್ದ ಮೂಗೂರು ಸುಂದರಂ ಅವರು ಕುಟುಂಬ ಸಮೇತರಾಗಿ ಬೆಂಗಳೂರಿನ ಸಮಾರಂಭಕ್ಕೆ ಬಂದೇ ಬಿಟ್ಟರು! ಏನೇನೂ ಆಗಿಲ್ಲ ಎನ್ನುವಂತೆ ವೇದಿಕೆಯೇರಿ ಕುಳಿತು ಬಿಟ್ಟರು. ಶ್ರವಣ ಲಕ್ಷ್ಮಣ್ ವ್ಯವಸ್ಥೆಗೊಳಿಸಿದ್ದ ಗೌರವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ಮಾರನೇ ದಿನ ಖ್ಯಾತ ಮನೋವೈದ್ಯರಾದ ಡಾ| ಸಿ. ಆರ್.ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ಸುದ್ದಿ ಬಂತು. ಒಬ್ಬೊಬ್ಬರು ಒಂದೊಂದು ಸಲಹೆ ನೀಡಿ ಕನ್ಫ್ಯೂಸ್ ಮಾಡಿದ್ದನ್ನು ಮೈಸೂರು ತಲುಪಿದ ಮಹಾದೇವಮ್ಮ ಫೋನ್ ಮಾಡಿ ತಿಳಿಸಿದರು. ಈ ನಡುವೆ ಕೇರಳಕ್ಕೆ ಹೋಗಿ ಟ್ರೀಟ್ಮೆಂಟ್ ಕೊಡಿಸುವ ಬಗ್ಗೆ ಮಗ ಪ್ರಭುದೇವ್ ಫೋನ್ ಮೂಲಕವೇ ವ್ಯವಸ್ಥೆಗೊಳಿಸಿದ್ದಾರೆ.

ಒಟ್ಟಿನಲ್ಲಿ ಭಾರತೀಯ ಚಿತ್ರರಂಗದ ಈ ಮಹಾನ್ ನೃತ್ಯತಾರೆ ಮೂಗೂರು ಸುಂದರಂ ಆರೋಗ್ಯವಾಗಿ ನೂರಾರು ಕಾಲ ನಮ್ಮ ನಡುವೆ ಬಾಳಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತಿದ್ದೇನೆ…


  • ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading