ನಟ ಧರ್ಮೇಂದ್ರ ಅವರಿಗೆ ಈಗ 88 ವರ್ಷ. ಸೌಂದರ್ಯ ಮೀಮಾಂಸೆಯಲ್ಲಿನ ವಿಶಿಷ್ಟ ಅಧ್ಯಾಯ…ಕೆ. ರಾಜಕುಮಾರ್ ಅವರು ಧರ್ಮೇಂದ್ರ ಅವರ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
(ಒಂದು ವರ್ಣನಾತ್ಮಕ ಪ್ರಬಂಧ)
ಧರ್ಮೇಂದ್ರ; ಎಪ್ಪತ್ತರ, ಎಂಬತ್ತರ ದಶಕದಲ್ಲಿ ಬಾಲಿವುಡ್‌ನ ಬೆಳ್ಳಿತೆರೆಯ ಮೇಲೆ ಮಿನುಗಿದ ಪ್ರಖರ ನಕ್ಷತ್ರ. ಕನ್ಯಾಕುಮಾರಿಯರ, ಕಾಲೇಜು ಕಿಶೋರಿಯರ ಎದೆಯಲ್ಲಿ ಕೋಲಾಹಲವನ್ನು ಉಂಟುಮಾಡಿದ, ಅವರ ಮನದಾಳದ ಆಸೆಗಳನ್ನು ಪಾತಾಳ ಗರಡಿಯಂತೆ ಹೊರಕ್ಕೆಳೆದು ಅವರ ಬಯಕೆಗಳನ್ನು ಅನಾವರಣಗೊಳಿಸಿ ಮುಜುಗರಗೊಳಿಸಿದ ಸುರಸುಂದರಾಂಗ.
ಗಟ್ಟಿ ರಟ್ಟೆಗಳ, ನೀಳ ಭುಜಗಳ ಬಾಹುಬಲಿ ಈ ಧರ್ಮೇಂದ್ರ. ಕಬ್ಬಿಣವನ್ನೇ ಕಾಸಿ ಹೊಯ್ದಂತಹ ಮೀನಖಂಡಗಳು, ಬಲಿಷ್ಠ ತೊಡೆ, ಹರವಾದ ರೋಮಭರಿತ ಎದೆ, ತಿದ್ದಿ ತೀಡಿದ ನಾಸಿಕ. ಕನ್ಯೆಯರ ಎದೆಬಡಿತವನ್ನು ಹೆಚ್ಚಿಸಲು ಮತ್ತೇನು ಬೇಕಿತ್ತು? ಲೂಧಿಯಾನಾದ ಗರಡಿ ಮನೆಯಿಂದ ನೇರ ಎದ್ದು ಬಂದು ರಜತಪರದೆಯ ಮೇಲೆ ರಾರಾಜಿಸಿದವ ಈ ಸುಂದರ ಕಾಯ. ಈತನನ್ನು ನೋಡಿ ಬಯಕೆ ತೋಟದ ಬೇಲಿಯನ್ನು ಹಾರಲನುವಾದ ಪ್ರಮದೆಯರು ಅದೆಷ್ಟೋ ಮಂದಿ. ‘ಲಲ್‌ಕಾರ್’ನಲ್ಲಿ ಮೊದಲ ಬಾರಿಗೆ ಭಾರತೀಯ ತೆರೆಯ ಮೇಲೆ ನಾಯಕ ನಟನೊಬ್ಬ ಅರೆನಗ್ನನಾಗಿ ಕಾಣಿಸಿಕೊಂಡ. ಇದಕ್ಕೆ ಶ್ರೀಕಾರ ಸುತ್ತಿದ್ದು ಧರ್ಮೇಂದ್ರ.

ಆ ನ್ಯಾಯಕಾರಿ ಬ್ರಹ್ಮನು ಬಹಳ ಪುರುಸೊತ್ತಾಗಿ ಇವನನ್ನು ರೂಪಿಸಿರಬಹುದು. ತಿದ್ದಿ, ತೀಡಿರಬಹುದು. ಬಹುಶಃ ಜಕ್ಕಣ್ಣನಂತಹ ಕುಶಲಿಗ ಶಿಲ್ಪಿಯನ್ನು ಕರೆಸಿ ಅಂತಿಮ ಹಂತದ ಪ್ರಸಾಧನವನ್ನು ಮಾಡಿಸಿರಬಹುದು ಎಂಬ ಬಲವಾದ ನಂಬಿಕೆ. ಪ್ರಕೃತಿ ತನ್ನ ಚೆಲುವನ್ನೆಲ್ಲ ಹರಿಸಿ ಕಡೆದ ಸುಂದರ ಕೃತಿಯಾಗಿಬಿಟ್ಟ ಈ ನಟ.
ಅಭಿನಯ ಚಾತುರ್ಯ? ಮತ್ ಪೂಚಿಯೇ ಮಹಾರಾಜ್. ಪಾತ್ರವನ್ನು ಓವರ್‌ಪ್ಲೇ ಮಾಡುತ್ತಿರಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದದ್ದು ಎನಕು ತೆರಿಯಾದು. ಅಭಿನಯವನ್ನು ಅವನು ಎಂದೂ ಕೇರ್ ಮಾಡಿದವನೂ ಅಲ್ಲ; ಹತ್ತಿರ ಬಿಟ್ಟುಕೊಂಡವನೂ ಅಲ್ಲ. ಡಿಶುಮ್ ಡಿಶುಮ್. ಢಮಾರ್. ಢಮಾರ್. ಏಕ್ ಮಾರ್ ದೋ ತುಕಡ. ಅವನೇ ಬೇರೆ; ಅವನ ಸ್ಟೈಲೇ ಬೇರೆ. ಅಲ್ಲೊಮ್ಮೆ ಇಲ್ಲೊಮ್ಮೆ, ಆಗೊಮ್ಮೆ ಈಗೊಮ್ಮೆ, ಅಪವಾದ ಎಂಬಂತೆ ಚೆಂದದ ಅಭಿನಯ ನೀಡಿರುವುದೂ ಉಂಟು.
ಆದರೆ ಧರ್ಮೇಂದ್ರ ಬಾಲಿವುಡ್ಡಿನ ಕಿಂದರಿಜೋಗಿ. ಬೈಟ್ ಜಾ, ಬೈಟ್ ಗಯೀ; ಕಡೀ ಹೋಜಾ ಕಡೀ ಹೋಗಯೀ ಎಂದು ಪರವಶಗೊಂಡು ಆತನ ಆಣತಿಯನ್ನು ಪಾಲಿಸುತ್ತಿದ್ದ ನಾಯಕಿಯರು. ರೇಖಾ, ಜೀನತ್, ಹೇಮಾಮಾಲಿನಿ ಯಾರೇ ಇರಲಿ ಇದಕ್ಕೆ ಅಪವಾದವಲ್ಲ. ಅವರ ಪಾಲಿಗೆ ಧರ್ಮೇಂದ್ರ ಮೋಹನಾಂಗ ನವ ಚಿರಾನುರಕ್ತ. ಪಾಹಿ ಪಾಹಿ ಮಧುರಾಧರ ತಪ್ತ. ಅವನ ಮೋಹಕ ನಗೆಗೆ ಸಾಟಿಯೇ ಇಲ್ಲ. ಅದು ಥೇಟ್ ಮದನನ ಸುಮಶರ. ಪಂಚಪುಷ್ಪ ಬಾಣಗಳಲ್ಲಿ ಯಾವುದೆಂದಿರಾ? ನಿಶ್ಚಿತವಾಗಿ ಮಲ್ಲಿಕಾ ಶರ. ಮಲ್ಲಿಗೆಯ ಬಾಣ. ಅದೊಂದು ಗುರಿಯಿಟ್ಟು ಎಸೆದ ಸಮ್ಮೋಹನಾಸ್ತ್ರ. ಧರ್ಮೇಂದ್ರನನ್ನು ಬಿಟ್ಟರೆ ಇನ್ನಾರನ್ನು ಬಾಲಿವುಡ್ ಮೊದಲ ‘He-Man’ ಎಂದು ಹೇಳಲಾದೀತು?
ಬಾಲಕನಾಗಿದ್ದಾಗ ಅವನನ್ನು ತೆರೆಯ ಮೇಲೆ ನೋಡಿದ್ದು. ಏರು ಜವ್ವನದಲ್ಲಿದ್ದು ಲಕಲಕ ಹೊಳೆಯುತ್ತ ಕನ್ಯೆಯರ ಮನಸ್ಸಿಗೆ ದಾಂಗುಡಿಯಿಡುತ್ತಿದ್ದ ಧರ್ಮೇಂದ್ರ ಎಂಬ ಚಿನ್ನದ ಚೂರಿಯನ್ನು ನೋಟಕ್ಕೆ ದಕ್ಕಿಸಿಕೊಳ್ಳುವುದೇ ಒಂದು ಹಬ್ಬ ಎಂಬಂತಿದ್ದ ಅರವತ್ತರ ದಶಕವದು. ನೋಟಕ್ಕೆ ನೋಟ ಮಸೆಯುವುದರಲ್ಲಿ ನಿಷ್ಣಾತನಾಗಿದ್ದ ಸುಂದರಾಂಗ. ಸ್ಫುರದ್ರೂಪ ಎಂಬುದಕ್ಕೆ ಇವನನ್ನು ನೋಡಿಯೇ ಭಾಷ್ಯ ಬರೆಯಬೇಕಾಗಿದ್ದ ಕಾಲವದು.

ಧರ್ಮೇಂದ್ರ ಸ್ಫುರದ್ರೂಪಿ. ಸೌಂದರ್ಯ ಮೀಮಾಂಸೆಯಲ್ಲಿನ ವಿಶಿಷ್ಟ ಅಧ್ಯಾಯ. ಚೆಲುವ ಚೆನ್ನಿಗರಾಯ. ನಿಜಕ್ಕೂ ಭಾರತದ ಈ ಚೊಕರಾ ಗ್ರೀಕ್‌ವೀರನಂತೆ, ರಾ(ಜ)ಕುಮಾರನಂತೆ ಕಂಗೊಳಿಸಿದ್ದ. ಈ ಪೋರ ಖಂಡಿತ ಚಾಕೊಲೇಟ್ ಹೀರೋ ಆಗಿರಲಿಲ್ಲ. “ಬಯಲುಸೀಮೆಯ ಗಂಡು ಬಲುಗುಂಡು, ಜಗಮೊಂಡು, ಹೂಚೆಂಡು, ನನ್ನ ಸರದಾಗೆ ರಸಗುಂಡು” ಎಂಬ ಆರ್.ಎನ್. ಜಯಗೋಪಾಲ್ ಅವರ ಸಾಲುಗಳು ಜೀವತಳೆದು ಸಾಕ್ಷಾತ್ಕರಿಸುವಂತೆ ಮಾಡಿದ್ದವನು. ನಟನಾಗಿ ಪೆದ್ದು; ಸಂಸದನಾಗಿ ಮೊದ್ದು. ಸಂಸತ್ತಿನಲ್ಲಿ ಎಂದೂ ಎದ್ದು ನಿಂತು ಜನರ ಸಮಸ್ಯೆಗೆ ಬಾಯಾದದ್ದೇ ಇಲ್ಲ. ಹೀಗೆ ಹೇಳಲೇಬೇಕಾದ ಅನಿವಾರ್ಯ ತಂದಿಟ್ಟವನು ಈ ಧರಮ್!
ಹಸಿರು ಹುಲ್ಲು ಮಕಮಲ್ಲಿನ ಮೇಲೆ ಮುಂಜಾನೆಯ ಮಂಜು ಸುರಿದಂತೆ ಕಾಣುವ ಧರ್ಮೇಂದ್ರ. ಅಗದೀ ಫ್ರೆಷ್ ಈ ಸಹಜ ಸುಂದರ. ರಜತಪರದೆಯ ಮೇಲೆ ಕಂಡಾಗಲೆಲ್ಲ ಲಕಲಕಲಕ, ಥಳಥಳಥಳ ಬೆಳಕು. ಚಂದ್ರತಾರೆ ತೊಟ್ಟಿಲಲ್ಲಿ ತೂಗಿ ಹೊಳೆವ ಚಂದ್ರಮನಂತೆ ಸುಶೋಭಿತ ಈ ಪಂಜಾಬಿ ಪುರುಷಸಿಂಹ. ಅವನಿಗೆ ಅಭಿನಯ ಕೈಹಿಡಿಯದಿದ್ದರೂ ಅದೃಷ್ಟ ಕಚ್ಚಿಕೊಂಡಿತು. ನಿಜಜೀವನದಲ್ಲೂ ಸಹ. “ಕಿಸೀ ಶಾಯರ್ ಕೀ ಗಝ಼ಲ್ ಡ್ರೀಂಗರ್ಲ್” ಎಂಬಂತೆ ಇದ್ದವಳು ಹೇಮಾಮಾಲಿನಿ. ಹೇಮವಾರಿಯನ್ನು ಮೈಗೆ ಪೂಸಿಕೊಂಡಂತೆ ಭಾಸವಾಗುತ್ತಿದ್ದವಳು. ಇಂತಹ ದೈವೀಕ ಚೆಲುವಿನ ಕನ್ಯೆ ಕರುನಾಡಿನ ರಾಮನಗರದ ರಾಮದೇವರ ಬೆಟ್ಟದಲ್ಲಿ ಈತನು ಹೆಣೆದ ಬಲೆಗೆ ಬಿದ್ದಳು. ಪ್ಯಾರ್, ಇಷ್ಕ್, ಮೊಹಬ್ಬತ್ ಇವು ಮೂರೂ ಸೇರಿ ಪ್ರೀತಿ ಮುಪ್ಪುರಿಗೊಂಡಿತು. “ಕಾಮನೆ ಹೂವಾಗಿ ಬಣ್ಣ ಬಣ್ಣ ಅರಳಿ, ಇಳೆಯಲ್ಲಿ ಸುಖ ಸಿಕ್ಕಿತು” ಎಂಬ ಯುಗಳಗಾನದ ಅನುರಣನ ಬದುಕಿನುದ್ದಕ್ಕೂ.
ಧರ್ಮೇಂದ್ರ ಅವರಿಗೆ ಈಗ ಜೋಡಿ ಎಂಟು. ಅಂದರೆ 88 ವರ್ಷ. ಇಂದಿಗೂ ಹೇಮಾಮಾಲಿನಿ ಜೊತೆಗೆ ಅನುರೂಪದ ದಾಂಪತ್ಯ. ಇವರು ಹೆಜ್ಜೆಯಿಟ್ಟ ಎಡೆಯಲ್ಲೆಲ್ಲ ಸುಖ-ಸಂತೋಷ ಎಂಬುದು ಕಾಲುಮುದುರಿ ಬಿದ್ದುಕೊಂಡಿದೆ. ಹೀಗೆ ಇದುವರೆಗೂ ಥಂಡ ಥಂಡ ಕೂಲ್ ಕೂಲ್. ಮುಂದೆಯೂ ತಣ್ಣಗಿರಲಿ ಈ ಹಿರಿಯ ಜೀವ. ಇದನ್ನೇ ನಮ್ಮ ಹಿರಿಯರ ಮಾತಿನಲ್ಲಿ ಹೇಳಬೇಕೆಂದರೆ “ಯಾವುದಕ್ಕೂ ಕೇಳಿಕೊಂಡು ಬಂದಿರಬೇಕು!”
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು.
