ಲೇಖಕಿ ಸವಿತಾ ಮಾಧವ ಶಾಸ್ತ್ರಿ ಅವರ ಮೂರನೇ ಕೃತಿಯೇ ಆತ್ಮಸಖಿ. ಮೊದಲೆರಡು ಕೃತಿಗಳಾದ “ಅರುಂಧತಿ” ಕಥಾ ಸಂಕಲನ ಮತ್ತು “ನೀರ್ ದೋಸೆ” ಹಾಸ್ಯ ಸಂಕಲನವು ಅವರ ಬರವಣಿಗೆಯ ಶೈಲಿ, ಕಥಾವಸ್ತುವಿನ ಗಟ್ಟಿತನ ಹಾಗೂ ನಿರೂಪಣೆಯ ಬಗ್ಗೆ ಓದುಗರಲ್ಲಿ ಭರವಸೆ ಮೂಡಿಸಿತ್ತು. ಆ ಭರವಸೆಯನ್ನು ಹೊಸ ಕಥಾ ಸಂಕಲನ “ಆತ್ಮಸಖಿ” ಯು ಇನಷ್ಟು ಹೆಚ್ಚಿಸಿದೆ. ಈ ಕೃತಿಯ ಕುರಿತು ಲೇಖಕಿ ಆಶ್ರಿತಾ ಕಿರಣ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಆತ್ಮಸಖಿ
ಲೇಖಕರು : ಸವಿತಾ ಮಾಧವ ಶಾಸ್ತ್ರಿ
ಪ್ರಕಾಶಕರು : ನ್ಯೂ ವೇವ್ ಬುಕ್ಸ್
ಪುಟಗಳು : 144 + 4
ಬೆಲೆ : ₹170/-
ಮೊದಲ ಮುದ್ರಣ : 2025
ಈ ಕೃತಿಯನ್ನು ಅವರು ಅಪಾರ ಆಸ್ಥೆಯಿಂದ ಓದುಗರ ಮಡಿಲಿಗೆ ಒಪ್ಪಿಸಿದ್ದಾರೆ ಎನ್ನುವುದನ್ನು ಇಲ್ಲಿನ ಕಥೆಗಳ ಮೂಲಕ ಅರಿಯಬಹುದು. ಮುಖಪುಟವು ಕೂಡ ಬಹಳಾ ಆಕರ್ಷಕವಾಗಿದೆ.

ಕಥೆಗಳ ಶೀರ್ಷಿಕೆಗಳು ಕುತೂಹಲ ಮೂಡಿಸಿದರೆ ಕಥೆಗಳು ಅರ್ಧ ಗೆದ್ದಂತೇ. ಈ ಪ್ರಯತ್ನವನ್ನು “ಆತ್ಮಸಖಿ” ಯಲ್ಲಿ ಸ್ಪಷ್ಟವಾಗಿ ಕಾಣಬಹುದು. 15 ಕಥೆಗಳನ್ನು ಒಳಗೊಂಡಿರುವ ಈ ಸಂಕಲನ ಓದುವಾಗ ಎಲ್ಲಿಯೂ ಆಕಳಿಸಿ ತೂಕಡಿಸುವಂತೆ ಮಾಡುವುದಿಲ್ಲ. ಪ್ರತಿಯೊಂದು ಕಥೆಯೂ ನಮ್ಮ ಸುತ್ತಮುತ್ತ ದಿನನಿತ್ಯ ಕಾಣುವ ಅಥವಾ ಕೇಳುವ ಘಟನೆಗಳನ್ನೇ ಪ್ರತಿನಿಧಿಸುತ್ತದೆ. ಸಾಮಾಜಿಕ ಕಾಳಜಿ, ಮಾನಸಿಕ ನೆಮ್ಮದಿ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಲೇಖಕಿ ತಮ್ಮ ಬರಹಗಳ ಮೂಲಕ ಎತ್ತಿ ಹಿಡಿದಿದ್ದಾರೆ.
ವೃದ್ಧಾಪ್ಯದಲ್ಲಿ ಒಂಟಿಯಾಗಿ ಜೀವನ ನಡೆಸುವುದು ಎಷ್ಟು ಕಷ್ಟಕರ ಎಂಬುದನ್ನು “ಮೋಹದ ಹೆಂಡತಿ ತೀರಿದ ಬಳಿಕ” ಎಂಬ ಭಾವನಾತ್ಮಕ ಕಥೆ ಸ್ಪಷ್ಟವಾಗಿ ಚಿತ್ರಿಸುತ್ತದೆ. ಪತ್ನಿಯ ಅಗಲಿಕೆಯ ನಂತರ ಗಂಡನ ಬದುಕಿನಲ್ಲಿ ಉಂಟಾಗುವ ಒಂಟಿತನ, ಅವಲಂಬನೆ, ಮಡದಿಯ ಮೌಲ್ಯದ ಅರಿವು ಇವೆಲ್ಲವೂ ಮನಮುಟ್ಟುವಂತೆ ಮೂಡಿಬಂದಿದೆ. ಕಥೆಯಲ್ಲಿನ ತಂದೆಯ ಪಾತ್ರ ನೈಜತೆಯಿಂದ ಕೂಡಿದ್ದು, ಅಂತ್ಯದಲ್ಲಿ ಅವರು ತೆಗೆದುಕೊಳ್ಳುವ ನಿಲುವು ಓದುಗರಲ್ಲಿ ನೆಮ್ಮದಿಯನ್ನು ಮೂಡಿಸುತ್ತದೆ.
“ಯಾವ ಜನ್ಮದ ಮೈತ್ರಿ” ಮತ್ತು “ಮುಕ್ತ” ಕಥೆಗಳು ಮದುವೆಯ ನಂತರದ ಬದುಕಿನ ನೋವು–ನಲಿವುಗಳನ್ನು ವಾಸ್ತವಕ್ಕೆ ಹತ್ತಿರವಾಗಿ ಕಟ್ಟಿಕೊಡುತ್ತವೆ. ಮದುವೆಯ ಕನಸು ಹೊತ್ತು ಹೊಸ ಬದುಕಿಗೆ ಕಾಲಿಡುವ ಹೆಣ್ಣುಮಕ್ಕಳ ಮನಸ್ಸಿನ ನೋವನ್ನು ಈ ಕಥೆಗಳು ತೆರೆದಿಡುತ್ತವೆ. ವಿಷಯ ಒಂದೇ ಆದರೂ ಪರಿಸ್ಥಿತಿಗಳು ವಿಭಿನ್ನ.ಅದನ್ನು ನಿರೂಪಿಸಿರುವ ಶೈಲಿ ಮೆಚ್ಚುವಂತದ್ದು.

ನಮ್ಮ ಬದುಕಿಗೆ ಹತ್ತಿರವಾದ ಕೆಲವು ವಸ್ತುಗಳ ಮೇಲೆ ನಾವು ವಿಶೇಷ ಪ್ರೀತಿ ಹಾಗೂ ಗೌರವ ತೋರುತ್ತೇವೆ. ಅವು ಕಷ್ಟಕಾಲದಲ್ಲಿ ಜೀವನ ನಿರ್ವಹಣೆಗೆ ಆಧಾರವಾಗಿದ್ದರೆ, ಅವನ್ನು ಮಗುವಿನಂತೆ ಜೋಪಾನ ಮಾಡುತ್ತೇವೆ. ತಮ್ಮ ಟೈಲರಿಂಗ್ ಮಿಷಿನ್ ನನ್ನು ಅತ್ತೆ ಜೀವಾಳದಂತೆ ಕಾಪಾಡಿಕೊಳ್ಳುವುದು ಸೊಸೆಯ ಅಸಮಾಧಾನಕ್ಕೆ ಕಾರಣವಾಗುತ್ತದೆ. ಇದನ್ನು ಚಿತ್ರಿಸುವ ಕಥೆ “ಆಸರೆ”. ತಾಯಿ–ಮಗನ ಬಾಂಧವ್ಯ ಇಲ್ಲಿ ಭಾವನಾತ್ಮಕವಾಗಿದೆ.
ಫಾರಿನ್ ಗೆ ಹೋಗುವ ಕನಸನ್ನು ಹೊತ್ತ ಶೋಭಾ ಳ ಕಥೆ “ಕನಸೊಂದಿದ್ದರೆ ಸಾಕೇ”. “ಸೆಕೆಂಡ್ ಇನ್ನಿಂಗ್ಸ್”, “ಅಸೂಯೆ ಬಿಡು ಮನವೇ”, “ಪವಿ ಟೈಲರ್”, “ನೀಲು”, “ರೀಲ್ಸ್ ರಾಣಿ” ಸೇರಿದಂತೆ ಉಳಿದ ಕಥೆಗಳು ವಿಭಿನ್ನ ಮನಸ್ಸುಗಳನ್ನು, ಆಸೆ–ಕನಸುಗಳನ್ನು ಅನಾವರಣಗೊಳಿಸುತ್ತವೆ. ಜೊತೆಗೆ ಮನುಷ್ಯನ ಸ್ವಭಾವ ಮತ್ತು ಸಮಾಜದ ದೃಷ್ಟಿಕೋನಗಳ ಮೇಲೂ ಬೆಳಕು ಚೆಲ್ಲುತ್ತವೆ.
ಒಟ್ಟಾರೆ, “ಆತ್ಮಸಖಿ” ಯಲ್ಲಿನ 15 ಕಥೆಗಳ ನಿರೂಪಣೆ ಹಾಗೂ ಪ್ರಸ್ತುತಪಡಿಸುವ ರೀತಿ ಸೊಗಸಾಗಿದೆ. ಪ್ರತಿಯೊಂದು ಕಥೆಯೂ ಒಂದೊಂದು ಅರ್ಥಪೂರ್ಣ ಸಂದೇಶವನ್ನು ನೀಡುತ್ತದೆ. ಸಮಾಜದ ಓರೆಕೋರೆಗಳನ್ನು ಕಥೆಗಳ ಮೂಲಕ ಹೇಳಹೊರಟಿರುವ ಪ್ರಯತ್ನ ಶ್ಲಾಘನೀಯ.
- ಆಶ್ರಿತಾ ಕಿರಣ್
