ದಾನ ಎಂದಕೂಡಲೇ ಮೊದಲು ನೆನಪಾಗುವುದು ಮಹಾಭಾರತದ ದಾನಶೂರ ಕರ್ಣ. ಅವನನ್ನು ಬಿಟ್ಟರೆ ನಂತರದಲ್ಲಿ ಸುಮಾರು ೧೦೦೦ ವರ್ಷಗಳ ಹಿಂದೆ ಬಾಳಿ ಬದುಕಿದ್ದ “ದಾನಚಿಂತಾಮಣಿ” ಎಂದೇ ಹೆಸರಾಗಿದ್ದ ಅತ್ತಿಮಬ್ಬೆ. ಅತ್ತಿಮಬ್ಬೆ ಎಂಬ ಹೆಸರಿನ ಸ್ತ್ರೀ ರತ್ನದ ಜೀವನದ ಬಗ್ಗೆ ಕೆಲವು ವಿಷಯಗಳನ್ನು ತಿಳಿಯುವ ಸಣ್ಣ ಪ್ರಯತ್ನ.
ಈಗಿನ ಆಂಧ್ರಪ್ರದೇಶಕ್ಕೆ ಸೇರಿದ ವೆಂಗಮಂಡಲದ ಕಮ್ಮೆನಾಡಿನ ಪುಂಗನೂರು ಗ್ರಾಮದ ನಾಗಮಯ್ಯ ಜೈನ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಇವರ ಮಕ್ಕಳು ಮಲ್ಲಪಯ್ಯ ಮತ್ತು ಪೊನ್ನಮಯ್ಯ. ಇವರು ಕಲೆ ಮತ್ತು ಸಾಹಿತ್ಯಾಸಕ್ತರು ಹಾಗೂ ಸಾಹಿತಿಗಳಿಗೆ ಆಶ್ರಯದಾತರಾಗಿದ್ದವರು. ಈ ಇಬ್ಬರು ಅಣ್ಣ ತಮ್ಮಂದಿರ ಆಶ್ರಯದಲ್ಲಿಯೇ ರತ್ನತ್ರಯರಲ್ಲಿ ಒಬ್ಬನಾದ ಪೊನ್ನ ಶಾಂತಿಪುರಾಣ ಎಂಬ ಜೈನ ಮಹಾಗ್ರಂಥವನ್ನು ಬರೆದದ್ದು. ಪೊನ್ನಮಯ್ಯ ತನ್ನ ದೊರೆ ತೈಲಪನಿಗಾಗಿ ಕಾವೇರಿ ತೀರದ ಯುದ್ಧದಲ್ಲಿ ಮಡಿಯುತ್ತಾನೆ.
ತಂದೆ ಮಲ್ಲಪಯ್ಯ ತಾಯಿ ಅಪ್ಪಕಬ್ಬೆಯ ಮಗಳೇ ಈ ಅತ್ತಿಮಬ್ಬೆ. ಈಕೆಯತಂಗಿ ಗುಂಡಮಬ್ಬೆ. ಅತ್ತಿಮಬ್ಬೆ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿ ಹನ್ನೊಂದನೇ ಶತಮಾನದ ಪೂರ್ವಾರ್ಧ ದವರೆಗೆ ಬದುಕಿದರು ಎನ್ನಲಾಗಿದೆ.( ಕ್ರಿ.ಶ.೯೫೦) ಈಕೆ ತೈಲಪ ಚಕ್ರವರ್ತಿ ಅಹವಮಲ್ಲ ತೈಲಪ(೯೭೩-೮೮೭)ಮತ್ತು ಮಗ ಇರಿವ ಬೆಡಂಗ ಸತ್ಯಾಶ್ರಯ (೯೯೭-೧00೮)ರ ಕಾಲದಲ್ಲಿ ಇದ್ದರು ಎನ್ನಲಾಗಿದೆ. ಈಕೆ ಬಾಲ್ಯದಲ್ಲಿ ಚತುರೆ, ವಿನಯವಂತೆ, ವಿವೇಕಿಯಾಗಿದ್ದಳು ಹಾಗೂ ತನ್ನ ಅಣ್ಣಂದಿರಿಂದ ಕತ್ತಿವರಸೆ, ಬಿಲ್ವಿದ್ಯೆ, ಕುದುರೆಸವಾರಿಯನ್ನೂ ಕಲಿತಿದ್ದಳು.

ಫೋಟೋ ಕೃಪೆ : Twitter
ಅತ್ತಿಮಬ್ಬೆ ಹಾಗೂ ತಂಗಿ ಗುಂಡಮಬ್ಬೆ ಇಬ್ಬರನ್ನೂ ಚಾಲುಕ್ಯ ಚಕ್ರವರ್ತಿ ಅಹವಮಲ್ಲನ ಮಹಾಮಂತ್ರಿಯಾಗಿದ್ದ ಧಲ್ಲಪನ ಹಿರಿಯ ಮಗ ನಾಗಮಯ್ಯನಿಗೆ ಮದುವೆ ಮಾಡಿ ಕೊಟ್ಟಿದ್ದರು. ನಾಗಮಯ್ಯ ತಂದೆಯ ಮಂತ್ರಿಮಂಡಲದಲ್ಲಿಯೇ ಸೇನಾನಾಯಕನಾಗಿದ್ದನು. ಅತ್ತಿಮಬ್ಬೆಗೆ ಅಣ್ಣಿಗದೇವನೆಂಬ ಮಗ ಜನಿಸಿದನು.
ಅತ್ತಿಮಬ್ಬೆ ಇನ್ನೂ ಯೌವನದಲ್ಲಿ ಇರುವಾಗಲೇ ಗಂಡ ನಾಗಮಯ್ಯ ಮಾಡಿದನು. ಅತ್ತಿಮಬ್ಬೆಗೆ ಮಗ ಅಣ್ಣಿಗದೇವನ ಜವಾಬ್ದಾರಿಯನ್ನು ಹೊರಿಸಿ ತಂಗಿ ಗುಂಡಮಬ್ಬೆಯೂ ಸತ್ತು ಹೋಗುತ್ತಾಳೆ. ಒಬ್ಬಂಟಿಯಾದ ಅತ್ತಿಮಬ್ಬೆ ಮಗನ ಜವಾಬ್ದಾರಿಯ ಜೊತೆಗೆ ಗಂಡನ ಕೆಲಸದ ಜವಾಬ್ದಾರಿಯನ್ನು ನಿರ್ವಹಿಸಿ ರಾಜಕಾರಣದಲ್ಲಿ ತೈಲಪ ಚಕ್ರವರ್ತಿಗೂ ತಾಯಿಯಂತೆ ಸಲಹೆಯನ್ನು ನೀಡುತ್ತಿದ್ದಳು ಎನ್ನಲಾಗಿದೆ.
ತನ್ನ ಪತಿ ಹಾಗೂ ತಂಗಿಯನ್ನು ಕಳೆದುಕೊಂಡ ಅತ್ತಿಮಬ್ಬೆ ದುಃಖವನ್ನು ನುಂಗಿ ಧಾರ್ಮಿಕತೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಸರಳ ಜೀವನವನ್ನು ನಡೆಸಿದವಳು, ಪರೋಪಕಾರಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ ಆಕೆಯು ತನ್ನ ಜೀವನವನ್ನು ಕಲೆ ಹಾಗೂ ಧರ್ಮದ ಪುನರುಜ್ಜೀವನಕ್ಕೆ ಹೆಚ್ಚಿನ ಒತ್ತುಕೊಟ್ಟಳು. ಈ ಕಾರಣಕ್ಕಾಗಿಯೇ “ದಾನಚಿಂತಾಮಣಿ”ಎನ್ನುವ ಬಿರುದನ್ನು ಪಡೆದಳು.
ಅತ್ತಿಮಬ್ಬೆ ೧೦೦೭ ರಲ್ಲಿ ಲಕ್ಕುಂಡಿಯಲ್ಲಿ ವಿಶಾಲವಾದ ಜೈನ ಬಸದಿಯೊಂದನ್ನು ನಿರ್ಮಿಸಿದ್ದಲ್ಲದೆ ಅದರ ನಿರ್ವಹಣೆಗೆ ಬೇಕಾದ ಸಕಲ ದಾನ ದತ್ತಿಗಳನ್ನು ನೀಡಿದಳು. ೧೫೦೦ ರತ್ನಖಚಿತ ಬಂಗಾರದ ಜೈನ ಪ್ರತಿಮೆಗಳನ್ನು ಮಾಡಿಸಿ ಭಕ್ತರಿಗೆ ದಾನ ನೀಡಿದ್ದರು.
ಪೊನ್ನನ ಶಾಂತಿಪುರಾಣವನ್ನು ಓಲೆಗರಿಯಲ್ಲಿ ಸಾವಿರ ಪ್ರತಿಗಳನ್ನು ಮಾಡಿಸಿ ಆಸಕ್ತರಿಗೆ ವಿತರಣೆ ಮಾಡುವ ಮೂಲಕ ಕನ್ನಡದ ಮೊದಲ ಪ್ರಕಾಶಕಿ ಎನಿಸಿದಳು. ಈಕೆಯ ಆಶ್ರಯದಲ್ಲಿಯೇ ರನ್ನನ್ನು ಅಜಿತ ಪುರಾಣವನ್ನ ಬರೆದದ್ದು. ಹಾಗೂ ರನ್ನ ನಿಂದ ಇದೇ ಅಜಿತಪುರಾಣದ ಪ್ರವಚನವನ್ನೂ ಮಾಡಿಸಿದಳು. ಈ ಎಲ್ಲ ಧಾರ್ಮಿಕ ಕಾರ್ಯಗಳ ಜೊತೆ ಜೊತೆಗೆ ನಾಡಿನ ಹಲವೆಡೆ ಚೈತ್ಯಾಲಯಗಳನ್ನು ನಿರ್ಮಿಸಿದಳು ಮತ್ತು ಬೇಡಿದವರಿಗೆ ಇಲ್ಲ ಎನ್ನದಂತೆ ತನ್ನ ಸರ್ವಸ್ವವನ್ನೂ ದಾನಮಾಡಿದಾಕೆ ಈ ಅತ್ತಿಮಬ್ಬೆ.
ಈಕೆಯ ಸಮಾಜಮುಖಿ ಧಾರ್ಮಿಕ ಕಾರ್ಯಗಳನ್ನು ಮೆಚ್ಚಿ ಈಕೆಗೆ ಸಿಕ್ಕ ಬಿರುದುಗಳೂ ಕ್ಶಮ್ಮಿಯಿಲ್ಲ. ನಮಗೆಲ್ಲ ತಿಳಿದಂತೆ “ದಾನಚಿಂತಾಮಣಿ”ಯ ಜೊತೆಗೆ “ಕವಿವರ ಕಾಮಧೇನು, ಗಿಣದಂಕಕಾರ್ತಿ, ಜಿನಶಾಸನದೀಪಿಕೆ, ಗುಣದಖನಿ, ಅಕಲಂಕಚರಿತೆ, ಜೈನಶಾಸನ ರಕ್ಷಮಣಿ, ಸಜ್ಜನೈಕಚೂಡಾಮಣಿ” ಮುಂತಾದ ಬಿರುದುಗಳೂ ಈಕೆಗೆ ಸಿಕ್ಕ ಬಿರುದುಗಳು.
ರನ್ನನು ಅತ್ತಿಮಬ್ಬೆಯ ಪಾವಿತ್ರ್ಯತೆಯನ್ನು ಗಂಗಾನದಿಯ ನೀರಿಗೆ, ಬಿಳಿಯ ಹತ್ತಿಗೆ, ಕೊಪ್ಪಳದ ಪವಿತ್ರಬೆಟ್ಟಕ್ಕೆ ಹೋಲಿಸಿದ್ದಾನೆ.
ಅತ್ತಿಮಬ್ಬೆ ಬದುಕಿ ಸಾವಿರ ವರ್ಷಗಳಾಗಿದ್ದರಿಂದ ಕರ್ನಾಟಕ ಸರ್ಕಾರವು ೧೯೯೪ ನ್ನು ಅತ್ತಿಮಬ್ಬೆ ವರ್ಷವೆಂದು ಘೋಷಿಸಿತ್ತು. ಈಕೆಯ ಸ್ಮರಣಾರ್ಥ ಅತ್ತಿಮಬ್ಬೆ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿದೆ. ಇದುವರೆಗೆ ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾದವರು ವೈದೇಹಿ, ಶಾಂತಾದೇವಿ ಮಾಳವಾಡ, ಟಿ.ಸುನಂದಮ್ಮ, ಕಮಲಾಹಂಪನ, ಕಾಕೋಳು ಸರೋಜಾರಾವ್, ಮಲ್ಲಿಕಾ ಕಡಿದಾಳ್ ಮಂಜಪ್ಪ ಮುಂತಾದವರು.
- ವಸಂತ ಗಣೇಶ್ (ಲೇಖಕಿ, ಸಾಹಿತಿಗಳು)
