ರಂಗಭೂಮಿ ಕಲಾವಿದೆ ಮತ್ತು ಸಮಷ್ಟಿ ದೃಷ್ಟಿ



ರಂಗನಟಿಯರು ಇಂದಿಗೂ ನೂರಾರು ಬಗೆಯ ಸೂಕ್ಷ್ಮ ಸಂಕಟಗಳಲ್ಲಿ ನರಳುತ್ತಿದ್ದು, ಎಲ್ಲಾ ಮಹಿಳೆಯರಿಗೆ ಸಿಗುವ ಸಾಮಾಜಿಕ, ಸಾಂಸ್ಕೃತಿಕ ಮನ್ನಣೆ, ಸ್ಥಾನಮಾನ, ಅಗತ್ಯ ಅವಕಾಶಗಳು ಮತ್ತು ಶತಮಾನದಿಂದ ಅನುಭವಿಸುತ್ತಿರುವ ಶಾಪ ವಿಮೋಚನೆಗಾಗಿ ಕಾತುರದ ಕಣ್ಣುಗಳಿಂದ ಇಂದಿಗೂ ಅವರುಗಳು ಕಾಯುತ್ತಿದ್ದಾರೆ.

ನಾವು ಅಕ್ಷರಶಃ ನತದೃಷ್ಟರು ಮಾತ್ರವಲ್ಲ ಶಾಪಗ್ರಸ್ಥರು. ” ಪುರುಷ ಎನ್ನುವ ಹೆಸರೇ ಪವಿತ್ರ. ಅಂತಹ ಪಾವಿತ್ರ್ಯಕ್ಕೆ ಚ್ಯುತಿ ಬಾರದಂತೆ ಬಾಳಬೇಕು ಮಗಳೇ ” ಇದು ಹೆಸರಾಂತ ನಾಟಕಕಾರರೊಬ್ಬರು ತಮ್ಮ ನಾಟಕವೊಂದರಲ್ಲಿ ಬರೆದ ಡೈಲಾಗ್. ಗಂಡಸೊಬ್ಬನಿಗೆ ಎರಡನೇ ಹೆಂಡತಿಯಾಗಬೇಕೆಂದು ತಂದೆಯಾದವನು ಮಗಳಿಗೆ ನೀಡುವ ಉಪದೇಶಾಮೃತದ ಮಾತುಗಳು. ಅದನ್ನು ಉಲ್ಲೇಖಿಸುತ್ತಾ ನಮಗೆ ಸರ್ಕಾರ, ಸಂಘ, ಸಂಸ್ಥೆಗಳು ನೀಡುವ ಗೌರವ ಪುರಸ್ಕಾರಗಳಿಗೆ ನಮಗಂಟಿದ ಸಾಮಾಜಿಕ ಕಳಂಕದಿಂದ ಪಾರು ಮಾಡಲು ಸಾಧ್ಯವಾಗಿಲ್ಲ.

(ರಂಗಭೂಮಿ ಹೆಸರಾಂತ ಅಭಿನೇತ್ರಿ ನಾಡೋಜ ಕೆ. ನಾಗರತ್ನಮ್ಮ)

ನಾಟಕದವರು, ಕೆಲವು ಕಡೆ ಚಿಮಣಾ, ರಂಗಸಾನಿ ನಟಿ ಇನ್ನೂ ಕೆಟ್ಟದಾಗಿ ಕರೆಯುವ, ನೋಡುವ ಕಣ್ಣುಗಳಿಂದ ನಾವಿನ್ನೂ ಬಿಡುಗಡೆ ಪಡೆದಿಲ್ಲ. ನಮ್ಮೆದುರಿಗೊಂದು ಹಿಂದುಗಡೆ ಮತ್ತೊಂದು ರೀತಿಯಿಂದ ಸಮಾಜ ನಮ್ಮನ್ನು ಕಾಣುತ್ತಿದೆ. ಹೆಸರಾಂತ ಅಭಿನೇತ್ರಿ ನಾಡೋಜ ಕೆ. ನಾಗರತ್ನಮ್ಮ ಅವರು ವರ್ತಮಾನದ ರಂಗ ಕಲಾವಿದೆಯರ ಸಾಮಾಜಿಕ ಬದುಕಿನ ಸ್ಥಿತಿಗತಿ ಕುರಿತು ಹೇಳಿದ ಮಾತುಗಳಿವು. ಮುಂದುವರೆದು ಅವರೇ ಹೇಳುವಂತೆ ನಮ್ಮನ್ನು ಎರಡನೇ ದರ್ಜೆಯವರಂತೆ ನಾವು ದುಡಿಯುವ ರಂಗವ್ಯವಸ್ಥೆ ನೋಡಿಕೊಳ್ಳುತ್ತಿದೆ. ಹೌದಲೇ ರಂಗಿ-ಊದಲೇನ ಪುಂಗಿ, ನಿಶೆ ಏರಿಶ್ಯಾಳ ನವರಂಗಿ, ಮಬ್ಬ ಹಿಡಿಶ್ಯಾಳ ಮದರಂಗಿ… ಇಂತಹ ಅನೇಕ ನಾಟಕಗಳ ಹೆಸರುಗಳೇ ಹೆಣ್ಣಿನ ಶೋಷಣೆಗೆ ಪೂರಕವಾಗಿವೆ. ಅವಕಾಶವಾದಿ ಬಳಕೆಗಮ್ಯ ಗ್ರಾಹಕತ್ವ ಗುಣದಮಾತುಗಳು ಇಲ್ಲಿ ಅಕ್ಷರಶಃ ಅಪ್ರಸ್ತುತ.

ಅಷ್ಟೇಯಾಕೆ ” ಬಸ್ ಕಂಡಕ್ಟರ್ ” ಎಂಬ ಬಿ. ಆರ್. ಅರಿಶಿಣಗೋಡಿಯವರ ಸುಂದರ ಸಾಮಾಜಿಕ ನಾಟಕವು ಖಾನಾವಳಿ ‘ಚೆನ್ನಿ’ ಹೆಸರಲ್ಲಿ ಅದ್ವಾನಗೊಂಡಿದೆ. ನಾಟಕಕಾರ ಬರೆಯದೇ ಇರುವ ಅನೇಕ ಕೈಗಂಟು ಸಂಭಾಷಣೆಗಳಿಂದ ಇಡೀ ನಾಟಕದ ಆತ್ಮಕ್ಕೆ ಅಪಚಾರ. ಹೊಟ್ಟೆಪಾಡಿನ ನೆವದಲ್ಲಿ ಹೆಣ್ಣಿನ ಬಾಯಲ್ಲೇ ಅಸಭ್ಯ ಸಂಭಾಷಣೆಗಳನ್ನು ಹೇಳಿಸುವ ಇಲ್ಲವೇ ಹೇಳುವ ಮೂಲಕ ಮಹಿಳಾಪ್ರಜ್ಞೆಯ ಕೋಮಲಚಿತ್ತಕ್ಕೆ, ಭಾವ ಸಂವೇದನೆಗಳಿಗೆ ಬಲವಾದ ಪೆಟ್ಟು ಬೀಳುತ್ತಿವೆ. ಹೇಳಿಕೊಳ್ಳಲಾಗದ ಯಾತನೆಯಲ್ಲಿ ಆಕೆ ನರಳುತ್ತಿದ್ದಾಳೆ.

ಫೋಟೋ ಕೃಪೆ : Youtube

ದಶಕಗಳ ಹಿಂದಿನ ಕಾಲಮಾನಗಳಲ್ಲಿ ಅವಳು ಅನುಭವಿಸುತ್ತಿದ್ದ ಅಂತರಂಗದ ಅಳಲುಗಳು ತುಸು ಭಿನ್ನವಾಗಿದ್ದವು. ಶ್ರೀಮಂತನೊಬ್ಬನಿಗೆ ಎರಡನೇ ಪತ್ನಿಯಾಗಿ, ಇಲ್ಲವೇ ಉದ್ಯೋಗದ ರಂಗ ಸಾಹಚರ್ಯದಲ್ಲಿ ಲಿವಿಂಗ್ ಟುಗೆದರ್ ಲೈಫ್ ನಡೆಸಬೇಕಿತ್ತು. ನಟಿಯೊಬ್ಬಳು ಸುಂದರಿಯಾಗಿದ್ದು, ಆಕರ್ಷಕ ಅಭಿನಯ ನೀಡುತ್ತಿದ್ದರೆ ಕಂಪನಿ ಮಾಲೀಕರ ತಾರಾ ಪತ್ನಿಯೋ, ಉಪಪತ್ನಿಯೋ, ಮೂರನೇ ಹೆಂಡತಿಯಾಗಿ, ಒಮ್ಮೊಮ್ಮೆ ಇಟ್ಟುಕೊಂಡವಳಾಗಿ ಉಂಡ ನೋವುಗಳ ಬಹುದೊಡ್ಡ ಚಾರಿತ್ರಾರ್ಹ ಸಂಗತಿಗಳಿವೆ. ಆಧುನಿಕೋತ್ತರ ಕಾಲಘಟ್ಟದಲ್ಲಿ ರಂಗಕಲಾವಿದೆಯರು ಎದುರಿಸುತ್ತಿರುವ ಭಿನ್ನಬಗೆಯ ಬಿಕ್ಕಟ್ಟುಗಳು ಹತ್ತು ಹಲವು.

ಕಣ್ಮರೆಯಾಗುತ್ತಿರುವ ರಂಗ ಪರಂಪರೆಗಳ ಅಪರಿಚಿತ ಭಾವಸ್ಪಂದನೆ. ಸಿನಿಮಾ, ಸೀರಿಯಲ್ ಜಗತ್ತಿನ ಪ್ರಭಾವ ಮೀರದ ದುಃಸಾಧ್ಯದ ಸವಾಲುಗಳು. ಮತ್ತೊಂದೆಡೆ ಹಿರಿಯ ಕಲಾವಿದೆಯರ ಅನುಕರಣೆ. ಪುರುಷ ಅಹಂಕಾರದ ರಂಗಸಾಂಗತ್ಯ. ಈ ಎಲ್ಲ ಗೋಜಲು, ಗೊಂದಲಗಳ ನಡುವೆ ಆಕೆ ವಯಕ್ತಿಕ ಬದುಕಿನ ಕಡೆ ಗಮನ ಹರಿಸುವುದು ದುಃಸಾಧ್ಯದ ವಿಷಯ. ಅನೇಕ ಬಾರಿ ಸೂಕ್ತ ಬಾಳ ಸಂಗಾತಿ ಆಯ್ಕೆ ಕಗ್ಗಂಟಿನ ಸಂಗತಿಯೇ ಹೌದು. ಅವು ಅವಳ ಆಯ್ಕೆಯಾಗಿ ಉಳಿದಿಲ್ಲ. ಅವು ಅವನ ಆಯ್ಕೆಯಾಗಿವೆ. ಅಂತಹದ್ದೊಂದು ಅನಿವಾರ್ಯದ ಕೌಟುಂಬಿಕ ಪರಿಸರ ನಿರ್ಮಾಣ. ನಮಗೆ ಶೈಕ್ಷಣಿಕ ಓದಿನ ಅವಕಾಶಗಳು ಇಲ್ಲವೇಇಲ್ಲ ಎಂಬಷ್ಟು ಶೂನ್ಯ. ಸಮಕಾಲೀನ ವೃತ್ತಿರಂಗ ಭೂಮಿಯಲ್ಲಿ ಹುಡುಕಿದರೆ ಕೈ ಬೆರಳೆಣಿಕೆಯಷ್ಟು ಪದವೀಧರೆಯರು ಸಿಗಲಾರರು.

ಆಧುನಿಕ ರಂಗಭೂಮಿಯಲ್ಲಿ ವೈಯಕ್ತಿಕ ಬದುಕಿನ ಜೀವಪರ ಸಾಧ್ಯತೆಗಳ ಅನೇಕಾನೇಕ ಆಯ್ಕೆಯ ಕ್ಷಿತಿಜಗಳು ಅರಳಿರುತ್ತವೆ. ಇಲ್ಲಿ ನಾವು ಬದುಕುತ್ತಿರುವ ರಂಗನಿರಂತರ ವ್ಯವಸ್ಥೆ ಅದಕ್ಕೆ ವ್ಯತಿರಿಕ್ತ. ನಮ್ಮದು ವೃತ್ತಿಪರತೆ ಮತ್ತು ವೃತ್ತಿನಿರತೆಯನ್ನು ಏಕಕಾಲಕ್ಕೆ ಸಂಬಾಳಿಸಿಕೊಂಡು ಸಾಗುವ ರಂಗಪಯಣ. ಚೋಪಡಿ ಮಾತುಗಳದ್ದೇ ಭಾವಾಭಿವ್ಯಕ್ತಿ. ಸಾಮಾನ್ಯೀಕರಿಸಿ ನೋಡುವುದಾದರೆ ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಮಹಿಳೆಯೆಂಬುದೇ ಎರಡನೇ ದರ್ಜೆಯ ದೃಷ್ಟಿಕೋನ. ನಾವದಕ್ಕೆ ದೂರವಾಗಿಲ್ಲ ಹೆಚ್ಚು ಹತ್ತಿರ. ಆದರೆ ಕಿರುತೆರೆ, ಹಿರಿತೆರೆ, ಆಧುನಿಕ ರಂಗಭೂಮಿ ಕಲಾವಿದೆಯರಿಗೆ ಸಿಗುವ ಸೆಲೆಬ್ರಿಟಿ ಸ್ಥಾನಮಾನ, ಸೌಲಭ್ಯಗಳೇ ಬೇರೆ. ನಾವೆಷ್ಟೇ ಪ್ರತಿಭಾಶಾಲಿಯಾಗಿದ್ದರೂ ನಮಗೆ ದೊರಕುವ ಗೌರವಾದರಗಳು ಕನಿಷ್ಠ.

ವಿವಾಹಿತ ಮತ್ತು ಅವಿವಾಹಿತ ಕಲಾವಿದೆಯರ ಒಳಬಾಳಿನ ಗೋಳು ಹೇಳತೀರದು. ಒಂದು ಪರಾಧೀನ ಪರಿಸರದಲ್ಲಿ ನಮ್ಮ ರಂಗಕೈಂಕರ್ಯ. ಇಂತಹ ನೂರಾರು ಬಗೆಯ ಸೂಕ್ಷ್ಮ ಸಂಕಟಗಳನ್ನು ರಂಗನಟಿಯರು ಅನುಭವಿಸುತ್ತಿದ್ದಾರೆಂದು ಹೆಸರು ಹೇಳಲು ಬಯಸದ ಹುಬ್ಬಳ್ಳಿ ಮೂಲದ ಹೆಸರಾಂತ ಕಲಾವಿದೆಯ ಅಂತರಂಗದ ಅಳಲು.

ಒಟ್ಟಾರೆ ಅವರು ಸಾಂಸ್ಕೃತಿಕ ಮುಖ್ಯಧಾರೆಯಲ್ಲಿ ಗಂಭೀರವಾಗಿ ಪರಿಗಣಿತವಾಗುವ ದಿನಮಾನಗಳು ದಿನೆ ದಿನೇ ದೂರವೇ ಉಳಿಯುತ್ತಲಿವೆ. ಸಾಹಿತ್ಯ, ಸಂಗೀತ, ಇತರೆ ಲಲಿತಕಲೆಗಳಲ್ಲಿನ ಮಹಿಳೆಯರಿಗೆ ಸಿಗುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಮನ್ನಣೆ, ಸಂವೇದನಾಶೀಲ ಸ್ಥಾನಮಾನ, ಅಗತ್ಯ ಅವಕಾಶಗಳಿಗೆ, ಶತಮಾನದ ಶಾಪವಿಮೋಚನೆಗೆ ಕಾತರದ ಕನಸುಗಣ್ಣುಗಳಿಂದ ಇವರು ಕಾಯುತ್ತಿದ್ದಾರೆ.


  • ಮಲ್ಲಿಕಾರ್ಜುನ ಕಡಕೋಳ

(ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರಿಗೂ ಮತ್ತು ರಂಗಭೂಮಿಗೂ ಬಿಡಿಸಲಾಗದ ಸಂಬಂಧವಿದೆ. ಅವರು  ರಂಗ ಸಮಾಜ, ನಾಟಕ ಅಕಾಡೆಮಿ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ಶಾಲೆ ಸ್ಥಾಪನೆಯ ಹಿಂದೆ ಇವರ ಕಠಿಣ ಪರಿಶ್ರಮವಿದೆ. ‘ಬಾ ಅತಿಥಿ’ಯಂತಹ ಕಾರ್ಯಕ್ರಮವನ್ನು ಪರಿಚಯಿಸಿದ್ದು ಇವರ ಹೆಗ್ಗಳಿಕೆ. ‘ಯಡ್ರಾಮಿ ಸೀಮೆ’ ಕಥನಗಳ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. )

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW