“ಈ ಇಂಗ್ಲಿಷ್ ಔಷಧಿಗಳಿಗೆಲ್ಲಾ ಸೈಡ್ ಇಫೆಕ್ಟ್ ಜಾಸ್ತಿ. ನಾನು ತಗೋಳ್ತಾ ಇರೋದು ಗಿಡಮೂಲಿಕೆ ಔಷಧಿ. ನಮ್ಮನೇ ದನಗಳಿಗೂ ನಾನು ನಾಟಿ ಔಷಧೀನೇ ಮಾಡಿಸೋದು” ಇದು ಕೆಲವು ರೈತರ ಅಭಿಪ್ರಾಯ. ಇದರ ಬಗ್ಗೆ ಡಾ.ಎನ್.ಬಿ.ಶ್ರೀಧರ ಅವರ ಒಂದು ಚಿಂತನ ಲೇಖನ .
ಔಷಧಿ ಅಂದರೆ ಪರಿಣಾಮವಿರುವ ಔಷಧಿಗೆ ಅಡ್ಡಪರಿಣಾಮ ಇದ್ದೇ ಇರುತ್ತದೆ. ಅಡ್ಡಪರಿಣಾಮಗಳಿಲ್ಲ ಅಂದರೆ ಅದಕ್ಕೆ ಪರಿಣಾಮವೂ ಇಲ್ಲ. ಇದು ಔಷಧಿಗಳಿಗೆಲ್ಲ ಇರುವ ಮಾತೃ ವೇದವಾಕ್ಯ!!. “ಔಷಧಿ ಎರಡೂ ಕರೆ ಕುಯ್ಯುವ ಗರಗಸ ಇದ್ದ ಹಾಗೇ. ಅದು ರೋಗವನ್ನು ವಾಸಿ ಮಾಡಬಲ್ಲದು. ಹಾಗೆಯೇ ಮನುಜನ ಶರೀರಕ್ಕೆ ಹಾನಿಯನ್ನೂ ಉಂಟು ಮಾಡಬಲ್ಲದು” ಎಂದು ಆಂಗ್ಲ ಗಾದೆಯಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಗಿಡಮೂಲಿಕೆಗಳ ಸಾಧಕ ಬಾಧಕಗಳೇನು ಎಂಬುದು ಮುಖ್ಯವಲ್ಲವೇ? ತಿಳಿದುಕೊಳ್ಳೋಣ.
ಭಾರತವು ಪುರಾತನ ಪರಂಪರೆಯಿಂದ ಗಿಡಮೂಲಿಕೆ ಔಷಧಿಗಳನ್ನು ಉಪಯೋಗಿಸುತ್ತಾ ಬಂದಿದೆ. ಪ್ರಪಂಚದಾದ್ಯಂತದ ಜನರು ಪ್ರತಿ ವರ್ಷ ಸಾವಿರಾರು ವಿವಿಧ ಗಿಡಮೂಲಿಕೆ ಔಷಧಿಗಳನ್ನು ಬಳಸುತ್ತಾರೆ. ಇದರ ಫಲವಾಗಿ ಈ ಗಿಡಮೂಲಿಕೆ ಔಷಧಿಗಳ ಉದ್ಯಮವು ಎಷ್ಟು “ಲಾಭದಾಯಕ” ವೆನಿಸಿದೆಯೆಂದರೆ, ವಿಶ್ವದಾದ್ಯಂತ ಈ ಉದ್ಯಮದ ಮೌಲ್ಯವು ₹ 7000 ಕೋಟಿಗೂ ಹೆಚ್ಚಿದೆ. ಮೊದಲು ಮನೆ ಮದ್ದು ಎಂದು ಉಪಯೋಗಿಸಲ್ಪಡುತ್ತಿದ್ದ ಈ ಉತ್ಪನ್ನಗಳು ಇಂದು ಉದ್ಯಮಗಳ ಕಣ್ಮಣಿಯಾಗಿವೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಹೌದು! ಉಧ್ಯಮಗಳು ಲಾಭ ಮಾಡಲೆಂದೇ ಇರುವುದು. ಆದರೆ ಅತಂಕದ ವಿಷಯವೆಂದರೆ ಈ ಗಿಡ ಮೂಲಿಕೆ ಔಷಧಿಗಳ ತಯಾರಿಕೆ, ಮಾರಾಟ ಮತ್ತು ಮಾರಾಟೋತ್ತರ ನಡುವಳಿಕೆಗಳ ಬಗ್ಗೆ ಸಾಕಷ್ಟು ಕಾನೂನುಗಳಿದ್ದರೂ ಅವುಗಳ ಪಾಲನೆಯ ಬಗ್ಗೆ ಬಗ್ಗೆ ಕಟ್ಟು ನಿಟ್ಟಾದ ನಿಯಂತ್ರಣ ಇಲ್ಲದೇ ಇಲ್ಲದಿರುವುದು. ಇದರಿಂದಲೇ ಈ ಗಿಡಮೂಲಿಕೆ ಔಷಧಿಗಳ ಹೆಸರಿನಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತುತ್ತಿರುವ ಹೊಸ ಹೊಸ ಕಂಪನಿಗಳು.
ಈ ಉದ್ಯಮದ ವ್ಯಾಪಕತೆಯು ಕಣ್ಣಿಗೆ ಕಾಣದಂತೇನೂ ಇಲ್ಲ; ಇವುಗಳ ಜಾಹಿರಾತುಗಳಂತೂ ದಿನಬೆಳಗಾದರೆ ಪತ್ರಿಕೆಗಳು, ನಿಯತಕಾಲಿಕೆಗಳು, ಹಲವಾರು ದೃಶ್ಯ ಮಾಧ್ಯಮಗಳಲ್ಲಿ ಕಂಡು ಬರುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಈ ಮಾರುಕಟ್ಟೆಯು ಗಣನೀಯ ವೇಗವನ್ನು ಗಳಿಸಿದೆ. ಇದರ ಜೊತೆಗಿರುವ ಪ್ರಮುಖ ಅಪಾಯವೆಂದರೆ, ಗ್ರಾಹಕರು ತಮಗರಿವಿಲ್ಲದೇ ಪರಿಶೀಲಿಸದ ಅಥವಾ ಅಧಿಕೃತವಲ್ಲದ ಪೂರಕ ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಸೇವಿಸುವ ಸಾಧ್ಯತೆ ಹೆಚ್ಚಾಗಿದೆ.ಮೂಲಿಕೆ ಮದ್ದುಗಳೆಲ್ಲಾ ಸುರಕ್ಷಿತ ಎಂಬ ಭ್ರಮೆ ಬೇಡವೇ ಬೇಡ. ಪರಿಣಾಮವಿರುವ ಯಾವುದೇ ಔಷಧಿಗೆ ಯಾವುದಾದರೊಂದು ಅಡ್ಡಪರಿಣಾಮ ಇದ್ದೇ ಇರುತ್ತದೆ ಎನ್ನುವುದು ಕಟು ಸತ್ಯ.

ಫೋಟೋ ಕೃಪೆ : zoicayurveda
ಆಧುನಿಕ ವಿಜ್ಞಾನದಿಂದ ತುಲನಾತ್ಮಕವಾಗಿ ದೂರವಿರುವ ಗಿಡ ಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧಿಗಳ ವಿಚಾರದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದ್ದು, ಅವು ಮಾರುಕಟ್ಟೆ ಪ್ರವೇಶಿಸುವ ಮೊದಲು ಕಠಿಣ ತಪಾಸಣೆಗೆ ಒಳಪಡುವುದಿಲ್ಲ ಎಂಬುದು ಬೆಚ್ಚಿಬೀಳಿಸುವ ಸತ್ಯ. ಕೇವಲ “ಇವು ಪಾರಂಪರಿಕ ಔಷಧಗಳು, ಪುರಾತನ ಕಾಲದಿಂದ ಬಳಕೆಯಲ್ಲಿವೆ; ಇವುಗಳಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬದು ಒಂದು ಸುಳ್ಳಿನ ಕಂತೆ. ಕೇವಲ ಇವು ಸುರಕ್ಷಿತ ಎಂಬ ನಂಬಿಕೆಯ ಮೇಲೆ ನಡೆಯುತ್ತಿರುವುದು ಮತ್ತು ಮಾರಾಟವಾಗುತ್ತಿರುವುದು ಅಪ್ರಿಯವಾದ ಸತ್ಯ.
ಹಾಗಿದ್ದರೆ ಹೇಗೆ ಈ ಗಿಡಮೂಲಿಕೆಗಳ ಉತ್ಪನ್ನಗಳು ರಹದಾರಿ ಪಡೆಯುತ್ತವೆ ಎಂಬುದನ್ನು ನೋಡೋಣ. ಭಾರತದಲ್ಲಿ ಶೇ ೮೦ ರಷ್ಟು ಹಳ್ಳಿಯ ಜನ ಗಿಡಮೂಲಿಕಾ ಔಷಧಿಗಳನ್ನು ಅವರ ವಿವಿಧ ಕಾಯಿಲೆಗಳ ಪ್ರಾಥಮಿಕ ಚಿಕಿತ್ಸೆಗೆ ಬಳಸುತ್ತಾರಂತೆ. ಆಯುಶ್ ಇಲಾಖೆಯ ಪ್ರಕಾರ ಸಧ್ಯ ಭಾರತದಲ್ಲಿ ೧೦೦೮೮ ಗಿಡಮೂಲಿಕೆ ಔಷಧಿ ತಯಾರಿಸುವ ರಹದಾರಿ ಪಡೆದಿರುವ ಕಂಪನಿಗಳಿದ್ದರೆ ಇವುಗಳಲ್ಲಿ ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ) ದ ಬಗ್ಗೆ ಅನುಮತಿ ಪಡೆದಿರುವವರು ೫೪೦೨ ಮಾತ್ರ. ಈ ಔಷಧಿಗಳ ತಯಾರಿಕೆಗೆ ರಹದಾರಿ ಪಡೆಯಲು ಮೂರು ಕೊಠಡಿಗಳಿರುವ ೧೨೦೦ ಚದರ ಅಡಿ ಕಟ್ಟಡ ಸಾಕು. ಇದರಲ್ಲಿ ಒಂದು ತಯಾರಿಕಾ ಕೊಠಡಿ, ಒಂದು ಸಂಗ್ರಹ ಕೊಠಡಿ ಮತ್ತು ಒಂದು ಕ್ವಾರಂಟೈನ್ ಕೊಠಡಿ ಇರಬೇಕು. ಒಂದು ಔಷಧಿ ತಯಾರಿಕೆಗೆ ಆಯುಶ್ ಮಂತ್ರಾಲಯದವರು ಸೂಚಿಸಿದ ಉಪಕರಣಗಳು, ಕೊಠಡಿಗಳು, ಸಂಬಂಧ ಪಟ್ಟ ವಿವಿಧ ದಾಖಲೆಗಳ ಸಮೇತ ಆಯಾ ರಾಜ್ಯದ ಆಯುಶ್ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಅಲ್ಲಿನ ಪರೀಕ್ಷಕರ ವರದಿಯಾದ ನಂತರ ರಹದಾರಿ ದೊರೆಯುತ್ತದೆ. ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ) ದ ಬಗ್ಗೆ ಮತ್ತೊಂದು ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬೇಕು. ಎಲ್ಲ ಕಡೆ ಇರುವಂತೆ ಇಲ್ಲಿಯೂ ಸಹ ಕೆಂಪು ಪಟ್ಟಿ ಅಧಿಕಾರಶಾಹಿ ಇತ್ಯಾದಿ ಅಡೆ ತಡೆ ಇದ್ದೇ ಇರುತ್ತದೆ.
ಉತ್ಪನ್ನ ತಯಾರಿಸುವ ಮೊದಲು ಅದರ ಬಗ್ಗೆ ಪುಸ್ತಕದಲ್ಲಿ ಪರಿಣಾಮದ ಬಗ್ಗೆ ಉಲ್ಲೇಖವಿರಬೇಕು. ಕಂಪನಿಯ ಏಕಮೇವ ಉತ್ಪನ್ನವಾಗಿದ್ದರೆ ಸರ್ಕಾರಿ ಆಸ್ಪತ್ರೆಗಳು ಅಥವಾ ಮಹಾವಿದ್ಯಾಲಯದಿಂದ ಆ ಉತ್ಪನ್ನದ ಬಗ್ಗೆ ಸಂಶೋಧನಾ ಲೇಖನಗಳು ಬೇಕು. ಆಗ ಈ ಔಷಧಿಯನ್ನು ಭಾರತಲ್ಲಿ ಮಾರಾಟ ಮಾಡಲು ತೊಂದರೆ ಇಲ್ಲ.

ಫೋಟೋ ಕೃಪೆ : foodnavigator-asia
ಅಮೇರಿಕಾ ಮತ್ತಿತರ ದೇಶಗಳಲ್ಲಿ ಇದನ್ನು “ಅಹಾರ ಪೂರಕ” (ಡಯಟರಿ ಸಪ್ಲಿಮೆಂಟ್) ಎಂದು ಮಾರಾಟ ಮಾಡಬಹುದು. ಇದಕ್ಕೆ ಆ ದೇಶದ ೧೯೭೪ ರ ನಿಯಮದಡಿ ಅವಕಾಶ ನೀಡಲಾಗಿದೆ. ಇದಕ್ಕೆ ಉತ್ಪನ್ನದ ಪರಿಣಾಮ ಮತ್ತು ಅಡ್ಡ ಪರಿಣಾಮದ ಬಗ್ಗೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ. ಆದರೆ ಅದನ್ನು ಔಷಧಿ ಎಂದು ಯಾವ ಕಾರಣಕ್ಕೂ ಹೇಳುವ ಹಾಗಿಲ್ಲ. “ಔಷಧಿ” ಎಂದರೆ ಅಹಾರ ಮತ್ತು ಔಷಧ ನಿಯಂತ್ರಣ ಆಡಳಿತ ( ಎಫ಼್ ಡಿ ಏ) ದ ವ್ಯಾಪ್ತಿಯಲ್ಲಿ ಬಂದು ಅತ್ಯಂತ ಕಠಿಣ ನಿಯಮದಡಿ ಬರುತ್ತದೆ. ಕಾರಣ ಅಮೇರಿಕಾಕ್ಕೆ ಬಹಳ ಗಿಡ ಮೂಲಿಕಾ ಉತ್ಪನ್ನಗಳು ರಪ್ತಾಗುತ್ತವೆ. ಚ್ಯವನ ಪ್ರಾಶದಂತ ಕೆಲವು ಉತ್ಪನ್ನಗಳು ಕೆನಡಾದಂತ ದೇಶದಲ್ಲಿ ಬ್ಯಾನಾಗಿದ್ದು ಅದರಲ್ಲಿ ಸತುವಿನಂತ ಹೆಚ್ಚಿನ ಭಾರ ಲೋಹಗಳಿವೆ ಎಂಬ ಅಂಶಗಳಿಗಾಗಿ.

ಫೋಟೋ ಕೃಪೆ : daily mirror
ಗಿಡ ಮೂಲಿಕೆ ಔಷಧಿಗಳಿಗೆ ಭಾರತದಲ್ಲಿ ಸದ್ಯಕ್ಕೆ ರಹದಾರಿ ಪಡೆಯುವುದರಿಂದ ಹಿಡಿದು ಗುಣಮಟ್ಟ ಕಾಪಾಡುವವರೆಗೆ ಹೆಚ್ಚಿನ ಕಟ್ಟು ಪಾಡುಗಳಿಲ್ಲ. ಭಾರತ ಸರ್ಕಾರದ ಅಧೀನದ ಆಯುಶ್ (ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪತಿ ಇಲಾಖೆ) ಸಹ ಈ ಗಿಡಮೂಲಿಕೆ ಉತ್ಪನ್ನಗಳ ಬಗ್ಗೆ ಅವು ನಮ್ಮದೇ ದೇಶದ ಪರಂಪರೆಯಿಂದ ಬಂದ ಪದ್ಧತಿ ಎಂದು ಮೃದುದೋರಣೆ ತಳದಿರಬಹುದು.
ಅಲ್ಲದೇ ವನಸ್ಪತಿ ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಮೂಲ ಗಿಡಮೂಲಿಕೆಗಳ ಭಾಗ, ಯಾವ ಋತುವಿನಲ್ಲಿ ಇವುಗಳ ಕಟಾವಣೆ ಮಾಡಬೇಕು, ಅರಣ್ಯದ ಅವಲಂಭನೆ, ಇವುಗಳ ಕೃಷಿ ಪದ್ಧತಿ, ಬೆಲೆ ನಿಗದಿ ಮಾಡುವಿಕೆ, ಇವುಗಳ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಇವುಗಳಲ್ಲಿ ಕೀಟನಾಶಗಳು ಮತ್ತು ಭಾರಲೋಹದ ಮಟ್ಟ ಕಡಿಮೆ ಮಾಡುವುದು, ಮೂಲ ವಸ್ತುವಿನ ಗುರುತು ಮಾಡುವುದು ಇವುಗಳ ಬಗ್ಗೆ ಗೊಂದಲದ ಗೂಡೇ ಇದ್ದು ಇದು ಸದ್ಯಕ್ಕಂತೂ ಬಗೆಹರಿಯುವ ಲಕ್ಷಣಗಳಿಲ್ಲ. ಆಯುಶ್ ಇಲಾಖೆ ಅನೇಕ ಮಾನದಂಡಗಳನ್ನು ನಿಗದಿ ಮಾಡಿದರೂ ಅನೇಕ ತಯಾರಿಕರಿಗೆ ಲೈಸನ್ಸ್ ಪಡೆಯುವುದು ಮತ್ತು ಅದರ ನವೀಕರಣ ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಅದನ್ನು ಸಂಪರ್ಕಿಸುವ ಅವಶ್ಯಕತೆ ಕಂಡು ಬಂದಿಲ್ಲ.
ಆಯುಶ್ ಇಲಾಖೆಯ ಪ್ರಕಾರ ೬೦೦ ವಿವಿಧ ಗಿಡಮೂಲಿಕೆಗಳು, ೫೨ ಖನಿಜಗಳು, ೫೦ ಪ್ರಾಣಿ ಉಪಪದಾರ್ಥಗಳು ಈ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಕಾರಣ ಯಾರು ಬೇಕಾದರೂ ಸುಲಭವಾಗಿ ರಹದಾರಿ ಪಡೆದು ಈ ಉತ್ಪನ್ನಗಳನ್ನು ತಯಾರಿಸಬಹುದು. ಅನೇಕ ಸಲ ಲೇಬಲ್ಲಿನ ಮೇಲೆ ಬರೆದ ಗಿಡ ಮೂಲಿಕೆ ಹಾಕಿರುವರೋ ಇಲ್ಲವೋ ಎಂಬುದೂ ಖಚಿತ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಲೋಪತಿ ಔಷಧಗಳ ತಯಾರಿಕೆ ವಿಷಯದಂತೆ ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ)ದಲ್ಲಿ ಉತ್ಪನ್ನಗಳ ತಯಾರಿಕೆ ಕಡ್ಡಾಯವಲ್ಲ. ಉತ್ಪನ್ನ ಕಳಪೆಯೆಂದಾದರೆ ದೂರು ನೀಡಬಹುದಾದರೂ ಸಹ ಅನೇಕ ಪದಾರ್ಥಗಳು ಒಂದು ಉತ್ಪನ್ನದಲ್ಲಿ ಇರುವುದರಿಂದ ಮತ್ತು ಇವೆಲ್ಲವು ಅದರಲ್ಲಿ ಇದೆಯೇ ಎಂಬುದನ್ನು ಅಳೆಯಲು ಯಾವುದೇ ಪ್ರಮಾಣೀಕೃತ ಪ್ರಯೋಗ ಪದ್ದತಿಗಳಿಲ್ಲ. ಇದರಿಂದ ಬಹುತೇಕ ತಯಾರಿಕೆದಾರರಲ್ಲಿ ಈ ಕಾನೂನಲ್ಲಿರುವ ಈ ಎಲ್ಲ ಕಂದಕ ಗಮನಿಸಿ ಮೋಸ ಮಾಡಲು ದಾರಿ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.
ಇತ್ತೀಚಿನ ದಿನಗಳಲ್ಲಿ ಅತ್ಯಂತ ಚರ್ಚೆಗೊಳಗಾದ ವಿಷಯವೆಂದರೆ ಈ ಗಿಡಮೂಲಿಕೆ ಉತ್ಪನ್ನಗಳನ್ನು ಔಷಧಿಯೆಂದು ಪರಿಗಣಿಸಬೇಕೆ ? ಅಥವಾ ಪರಂಪರಾಗತವಾಗಿ ಬಂದವೆಂಬ ಕಾರಣದಿಂದ ಅವುಗಳ ವಿಷಗುಣದ ಬಗ್ಗೆ ಪರೀಕ್ಷೆ ನಡೆಸುವುದು ಬೇಡವೇ? ಎಂಬ ಬಗ್ಗೆ. ಇದರ ಕುರಿತು ಚೈನ ಗಿಡಮೂಲಿಕೆ ಉತ್ಪನ್ನಗಳನ್ನು ಜಾಸ್ತಿ ಬಳಸುವ ಚೈನಾದ ವಿಜ್ಞಾನಿಗಳದ್ದು ಈ ನಿಟ್ಟಿನಲ್ಲಿ ಪ್ರತ್ಯೇಕ ಹೇಳಿಕೆ ನಮ್ಮ ಗಮನ ಸೆಳೆಯುತ್ತದೆ. ಅವರು “ ನಮ್ಮ ಗಿಡಮೂಲಿಕೆ ಉತ್ಪನ್ನಗಳನ್ನು ಔಷಧಿ ಎಂದುಕೊಂಡರೆ ಅವುಗಳನ್ನು ಪಾಶ್ಚಿಮಾತ್ಯ ಪದ್ದತಿಗಳ ಪ್ರಕಾರವೇ ಕಠಿಣ ಪರೀಕ್ಷೆಗೊಳಪಡಿಸಬೇಕು” ಎನ್ನುತ್ತಾರೆ. ಇವುಗಳು ಸುರಕ್ಷಿತ ಎನ್ನುವುದು ಉತ್ಪ್ರೇಕ್ಷೆಯಿಂದ ಹೇಳುವ ಹೇಳಿಕೆ. ಗಿಡಮೂಲಿಕೆ ಉತ್ಪನ್ನಗಳು ಉತ್ಪನ್ನಗಳು ಎನ್ನುವುದಾದರೆ ಓಇಸಿಡಿ ನಿಯಮಗಳ ಪ್ರಕಾರವೇ ಅವುಗಳ ಪರೀಕ್ಷೆ ನಡೆಯುವುದರಲ್ಲಿ ತಪ್ಪೇನಿದೆ?” ಎಂಬುದು. ಎಲ್ಲಾ ಔಷಧಿಗಳೂ ಅವುಗಳದೇ ಆದ ಅಡ್ಡಪರಿಣಾಮ ಹೊಂದಿವೆ. “ಔಷಧಿ ಎರಡೂ ಕರೆ ಕುಯ್ಯುವ ಗರಗಸ ಇದ್ದ ಹಾಗೇ. ಅದು ರೋಗವನ್ನು ವಾಸಿ ಮಾಡಬಲ್ಲದು. ಹಾಗೆಯೇ ಮನುಜನ ಶರೀರಕ್ಕೆ ಹಾನಿಯನ್ನೂ ಉಂಟು ಮಾಡಬಲ್ಲದು” ಎಂದು ಆಂಗ್ಲ ಗಾದೆಯಲ್ಲಿ ಹೇಳಲಾಗಿದೆ.

ಫೋಟೋ ಕೃಪೆ : pinterest
ಆದರೆ ಭಾರತೀಯರಲ್ಲಿ ಇದಕ್ಕೆ ಭಿನ್ನಾಭಿಪ್ರಾಯವಿದೆ. “ನಮ್ಮ ಪದ್ಧತಿ ಬಹಳ ಪುರಾತನವಾದದ್ದು.ಇದಕ್ಕೆ ೫೦೦೦ ವರ್ಷಗಳ ಇತಿಹಾಸವಿದೆ. ಇದನ್ನು ಅಲೋಪತಿ ಪದ್ಧತಿಯಲ್ಲಿ ಪರೀಕ್ಷೆಗೆ ಒಳಪಡಿಸುವುದು ಸರಿಯಲ್ಲ” ಎಂಬುದು. ಇದಕ್ಕೆ ತದ್ವಿರುದ್ಧವಾಗಿ ಒಂದಷ್ಟು ಜನ. ನಮ್ಮದು ಪುರಾತನ ಪದ್ಧತಿ ಎನ್ನುವುದು ಸರಿ. ಆದರೆ ಪುರಾತನ ಪದ್ಧತಿಯಾಗಿ ಇದು ಈಗ ಉಳಿದಿಲ್ಲ. ಬಹುತೇಕ ವಾಣಿಜ್ಯೀಕರಣವಾಗಿದೆ. ಲಾಭಕ್ಕಾಗಿಯೇ ಕೆಲವು ಕಂಪನಿಗಳು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅವುಗಳಿಗೆ ಕಠಿಣ ಪರೀಕ್ಷೆಗಳ ಕಡಿವಾಣ ಹಾಕಲೇಬೇಕು” ಎನ್ನುತ್ತಾರೆ ಅನೇಕರು.

ಫೋಟೋ ಕೃಪೆ : US News
ಉದಾಹರಣೆಗೆ ಅಮೇರಿಕಾದ ಎಫ್ ಡಿ ಎ ಇದು ೨೦೦೪ ರಲ್ಲಿ ಚೀನಾ ಮತ್ತು ಭಾರತದಿಂದ ಆಮದಾಗುವ ದೇಹತೂಕವನ್ನು ಕಡಿಮೆ ಮಾಡಲು ಬಳಸುವ ಎಫಿಡ್ರಾ ಗಿಡಮೂಲಿಕೆಯನ್ನು ಹೊಂದಿದ ಎಲ್ಲಾ ಉತ್ಪನ್ನಗಳನ್ನು ಬ್ಯಾನ್ ಮಾಡಿತು. ಕಾರಣ ಇಷ್ಟೇ. ಈ ಎಫಿಡ್ರಾ ಸಿನಿಕಾ ಎಂಬ ಗಿಡದ ಬಹುತೇಕ ಭಾಗಗಳಲ್ಲಿ ಎಫಿಡ್ರಿನ್ ಮತ್ತು ಅಂಫೆಟಮೈನ್ ಎಂಬ ಔಷಧಿ ಇದ್ದು ಇದು ನರಮಂಡಲದ ಉದ್ರೇಕಿಸಿ ವಿಷವನ್ನುಂಟು ಮಾಡಿ ಸುಮಾರು ೧೫೫ ಜನರನ್ನು ಮುಗಿಸಿತು ಎಂದು ಎಫ್ ಡಿ ಏ ವಾದ.
ಒಂದು ಗಿಡಮೂಲಿಕೆ ಮೂಲದ ಉತ್ಪನ್ನಗಳು ಸುರಕ್ಷಿತವೆಂದು ಎಲ್ಲರಿಂದ ಪರಿಗಣಿಸಲ್ಪಡುವುದಾದರೂ, ಮುಂಜಾಗ್ರತೆಯು ಅಗತ್ಯವಾಗಿದೆ. ಒಂದು ವಸ್ತುವಿನ ಲೇಬಲ್‌ನಲ್ಲಿ “ನೈಸರ್ಗಿಕ” ಎಂದು ಬರೆಯಲ್ಪಟ್ಟಿದ್ದ ಮಾತ್ರಕ್ಕೆ ಮುಂಜಾಗ್ರತೆ ವಹಿಸುವುದನ್ನು ಅಲಕ್ಷಿಸಬಾರದು. “ಸುರಕ್ಷಿತ” ಎಂಬುದು ಈ ಉತ್ಪನ್ನಗಳ ವಿಷಯದಲ್ಲಿ ಒಂದು ನಂಬಿಕೆ ಅಷ್ಟೇ. ಯಾವುದೂ ವೈಜ್ಞಾನಿಕ ಪದ್ಧತಿಯಲ್ಲಿ ಸಿದ್ಧವಾಗಿಲ್ಲ. ಇದರಲ್ಲಿ ವನಸ್ಪತಿಗಳ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಇವುಗಳು ತುಂಬಾ ಸುರಕ್ಷಿತ ಎಂಬುದು ಹಲವರ ನಂಬಿಕೆ. ಕೆಲವು ಗಿಡಮೂಲಿಕೆಗಳ ಉತ್ಪನ್ನಗಳ ವಿಷಯದಲ್ಲಿ ಇದು ನಿಜ ಕೂಡಾ. ಆದರೆ ಜೀವನದಲ್ಲಿ ನಂಬಿಕೆ ಹೊರತು ನಂಬಿಕೆಯೇ ಜೀವನವಾಗಬಾರದು. ಈ ಗಿಡಮೂಲಕ ಉತ್ಪನ್ನಗಳನ್ನು ಪ್ರಿಕ್ಲಿನಿಕಲ್ ಅಡ್ಡಪರಿಣಾಮಗಳ ಪರೀಕ್ಷೆಗೆ ಒಡ್ಡಲೇಬೇಕೆನ್ನುವುದು ನಿಜ.
ಒಂದು ವಿಚಾರ. ಇಷ್ಟೆಲ್ಲಾ ಇದ್ದರೂ ಈ ಗಿಡಮೂಲಿಕೆ ಔಷಧಿಗಳ ದರ ಸಾಮಾನ್ಯ ಜನರ ಕೈಗೆಟಕುವ ಹಾಗೆ ಇವೆಯೇ? ಖಂಡಿತಾ ಇಲ್ಲ. ಬಹುತೇಕ ಕಂಪನಿಗಳು ತಯಾರಿಸುವ “ನೈಸರ್ಗಿಕ” ಉತ್ಪನ್ನಗಳ ಬೆಲೆ ಸಾಮಾನ್ಯರಿಗೆ ಗಗನ ಕುಸುಮ. ಅಲ್ಪ ಸ್ವಲ್ಪ ಸಂಶೋಧನೆಗಾಗಿ ಮತ್ತು ಧಾರಾಳವಾಗಿ ಜಾಹಿರಾತಿಗಾಗಿ ಹಣ ಖರ್ಚು ಮಾಡುವ ಪ್ರತೀಷ್ಠಿತ ಗಿಡಮೂಲಿಕಾ ಉತ್ಪನ್ನಗಳ ತಯಾರಿಕಾ ಕಂಪನಿಗಳ ಉತ್ಪನ್ನಗಳ ಬೆಲೆಯಂತೂ ಸಾಮಾನ್ಯರ ಪಾಲಿಗೆ ಮುಗಿಲ ಮಲ್ಲಿಗೆ. ಹಾಗಿದ್ದರೆ ಯಾವ ರೀತಿಯಲ್ಲಿ ಈ ಉತ್ಪನ್ನಗಳು ಒಳ್ಳೆಯವು? ಉಪಯೋಗಿಸುವವರೇ ಈ ಕುರಿತು ವಿಚಾರ ಮಾಡಬೇಕು.
ಒಂದು ದೇಶಕ್ಕೆ ಸೀಮಿತವಾಗಿರದೇ ಜಗತ್ತಿನ ಸುಮಾರು ೫೬ ದೇಶಗಳಲ್ಲಿ ಜನರ ದೈನಂದಿನ ಬದುಕಿನಲ್ಲಿ ಉಪಯೋಗುತ್ತಿರುವ ವನಸ್ಪತಿ ಗಿಡಮೂಲಿಕೆಗಳ ಉತ್ಪನಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಈ ಉತ್ಪನ್ನಗಳ ಬಗ್ಗೆ ವಿಶ್ವ ಮಟ್ಟದ ಮಾನದಂಡ, ಸಮಯೋಚಿತ ಉಪಯೋಗ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ವನಸ್ಪತಿಗಳ ಉತ್ತಮ ತಳಿ ಬೀಜಗಳ ಲಭ್ಯತೆ, ಇವುಗಳ ಉತ್ತಮ ಕೃಷಿ ಪದ್ದತಿ, ಕಟಾವಣೆ ಪದ್ಧತಿ, ಶೇಖರಣಾ ಪದ್ಧತಿ, ಸಂಸ್ಕರಣೆ, ಕಚ್ಚಾ ವಸ್ತು ಮತ್ತು ವಾಣಿಜ್ಯ ಉತ್ಪನ್ನಗಳ ಕನಿಷ್ಠ ದರ ನಿಗದಿ ಮಾಡುವಿಕೆ, ವಾಣಿಜ್ಯ ಉತ್ಪಾದನೆ ಇವುಗಳ ಬಗ್ಗೆ ಗಮನ ಹರಿಸಿ ಜಾಗತಿಕ ಮಾನದಂಡ ರೂಪಿಸಬೇಕಾದ ಅವಶ್ಯಕತೆಯಿದೆ. “ವಿಶ್ವಗುರು” ಎಂದು ಕರೆಸಿಕೊಳ್ಳಲು ಉತ್ಸುಕವಾದ ಭಾರತವೇ ಈ ನಿಟ್ಟಿನಲ್ಲಿ ನಾಯಕತ್ವವಹಿಸಿ ಮೂಲಿಕೆ ಮದ್ದುಗಳನ್ನು ಮಾರಾಟಮಾಡಲು ಕಠಿಣ ನಿಯಮ ತಂದು ಅಗ್ನಿಪರೀಕ್ಷೆಗೆ ಒಡ್ಡಿ ಪುಟವಿಟ್ಟ ಬಂಗಾರದಂತೆ ಹೊರಬಂದು ಜನರ ಆರೋಗ್ಯದ ರಕ್ಷಣೆ ಮಾಡಲಿ ಎಂಬುದೇ ಈ ಲೇಖನದ ಉದ್ದೇಶ.

7. World Health Organization. 1998. Regulatory Situation of Herbal Medicines A Worldwide Review.
- ಡಾ.ಎನ್.ಬಿ.ಶ್ರೀಧರ
