ಜೀವನಕ್ಕೆ ಉತ್ಸಾಹ ತುಂಬಲು ದೊಡ್ಡ ದೊಡ್ಡ ಸೆಲೆಬ್ರೆಟಿಗಳೇ ಬೇಕಿಲ್ಲ. ನಮ್ಮ ಸುತ್ತಮುತ್ತಲಿರುವ ವಿಶೇಷ ವ್ಯಕ್ತಿಗಳಿಂದ, ಸಮಾಜದಿಂದ ಕಲಿಯಬಹುದು. ಅದನ್ನು ನೋಡುವ, ತಿಳಿದುಕೊಳ್ಳುವ ಮನಸ್ಥಿತಿ ನಮ್ಮಲ್ಲಿ ಇರಬೇಕಷ್ಟೆ. ತಪ್ಪದೆ ಮುಂದೆ ಓದಿ…
ದಿನ ಬೆಳಗ್ಗೆ ಎದ್ದಾಗ ದೇಹದಲ್ಲಿ ಒಂದಲ್ಲ ಒಂದು ಭಾಗನಾದ್ರೂ ಗೋಳಡ್ತಾ ಇರುತ್ತಿತ್ತು. ಎಲ್ಲವನ್ನು ಮರೆತು ಮುಂದೆ ಸಾಗೋಣ ಅನ್ಕೊಂಡ್ರೆ ದಿನಕ್ಕೊಬ್ಬರ ಶ್ರದ್ದಾಂಜಲಿ ಫೋಟೋಗಳು ನನ್ನನ್ನು ಇನ್ನಷ್ಟು ವೀಕ್ ಮಾಡುತ್ತಿತ್ತು. ಈ ಜಾಗದಲ್ಲಿ ನನ್ನ ಫೋಟೋ ಬಂದ್ರೆ ಅನ್ನೋ ಭಯ. ಆ ಭಯಕ್ಕೆ ಡಾಕ್ಟರ್ ಹತ್ರ ಹೋಗೋಣ ಅನ್ಕೊಂಡ್ರೆ ಡಾಕ್ಟರಪ್ಪಾ ಕೊಡೋ ದೊಡ್ಡ ಲಿಸ್ಟ್ ನೋಡಿ ಇನ್ನೂ ಭಯ ಆಗೋದು. ಯಾವುದು ಬೇಡ ಅಂತ ಮನೆಯಲ್ಲಿ ಕೂತ್ರೆ ಈ ಹಾಳಾದ ಮನಸ್ಸು ಕೇಳ್ಬೇಕಲ್ಲ ತರ ತರ ಒಂಥರಾ…ಆಡೋದು.
ಅದೇ ಗುಂಗಲ್ಲಿ ಇದ್ದ ನಾನು, ಮನಸ್ಸಿಗೆ ಸಮಾಧಾನ ಮಾಡಲು ಮಕ್ಕಳನ್ನು ಕ್ರಿಕೆಟ್ ಕ್ಲಾಸ್ ಬಿಡಲು ಹೋದೆ. ಎಲ್ಲ ಮಕ್ಕಳು ಕ್ರಿಕೆಟ್ ನಲ್ಲಿ ಉತ್ಸಾಹದಿಂದ ಆಡುತ್ತಿದ್ದರು. ಮಕ್ಕಳನ್ನು ಬಿಡಲು ಬಂದ ನನ್ನಂತವರು ಆ ಮೂಲೆ ಈ ಮೂಲೆ ಹಿಡಿದು ಕೂತಿದ್ದರು. ಅವರನ್ನು ನೋಡಿ ನನ್ನಂತೆ ಸೋತ ಮನಸ್ಸುಗಳು ಅಂದುಕೊಂಡೆ. ಮಧ್ಯೆ ಮಧ್ಯೆದಲ್ಲಿ ದೇಹದ ಸೆಳೆತದತ್ತ ಗಮನ ಹೋಗುತ್ತಿತ್ತು.ಆಗ ನನ್ನ ಚಿತ್ತ ಬೇರೆಡೆ ಹಾಕಿದೆ.
ಕ್ರಿಕೆಟ್ ಅಂದರೆ ಮಾಯಲೋಕ. ದೂರದಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಮೈದಾನದ ತುಂಬೆಲ್ಲ ಮಕ್ಕಳೇ ತುಂಬಿದ್ದರು. ಎಲ್ಲರ ಕಣ್ಣಲ್ಲೂ ಸಚಿನ್, ಕೊಯ್ಲಿ, ಪಾoಡ್ಯರಂತಾಗ ಬೇಕು ಎನ್ನುವ ದೊಡ್ಡ ಕನಸ್ಸುಗಳಿದ್ದವು. ಅವರ ಮಧ್ಯೆ 70 ಆಸು ಪಾಸಿನ ವ್ಯಕ್ತಿ ಮೇಲೆ ನನ್ನ ಗಮನ ಹರಿಯಿತು.

ನೆಟ್ ನೊಳಗೆ ಮಕ್ಕಳೆಲ್ಲ ಲೆದರ್ ಬಾಲ್ ಆಡುತ್ತಿದ್ದರು. ಅ ಬಾಲ್ ಏನಾದ್ರೂ ಆ ವ್ಯಕ್ತಿಯ ಮೇಲೆ ಬಿದ್ದರೇ ಏನು ಕತೆ? .ಅವರು ಕೋಚ? ಅಥವಾ ಅವರು ಯಾಕೆ ಅಲ್ಲಿದ್ದಾರೆ? ನಮ್ಮಂತೆ ಒಂದು ಮೂಲೆಯಲ್ಲಿ ಕೂರಬಹುದಿತ್ತಲ್ಲಾ?…ಹೀಗೆ ನನ್ನಲ್ಲಿ ಪ್ರಶ್ನೆಗಳು ಓಡಾಡುತ್ತಿತ್ತು. ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ನೆಟ್ ನಿಂದ ಹೊರಕ್ಕೆ ಬಂದು ನನ್ನ ಪಕ್ಕದಲ್ಲಿ ಕೂತರು. ನಾನು ವಾರೆಗಣ್ಣಲ್ಲಿ ನೋಡಿ “ಸರ್, ನಿಮ್ಮ ಹೆಸರು ಕೇಳಬಹುದೇ? ಅಂದೆ.
ನಗುತ್ತಾ… “ನಾನು ಶ್ರೀವತ್ಸ್, ನಾನು ಇಲ್ಲಿ ಕೋಚ್, ನಿಮ್ಮ ಮಕ್ಕಳು ಕ್ರಿಕೆಟ್ ಗೆ ಬರುತ್ತಾರಾ” ಅಂತ ಕೇಳಿ ಮಕ್ಕಳನ್ನು ಪರಿಚಿಸಿಕೊಂಡರು.
ಅಷ್ಟಕ್ಕೇ ಮಾತು ಮುಗಿದರೆ ಶಾಲಿನಿ ಬಾಯಿಗೆ ಅವಮಾನ ಮಾತು ಮುಂದುವರೆಸಿದೆ “ಸರ್, ನೆಟ್ಸ್ ನಲ್ಲಿ ಬಾಲ್ ಬಿದ್ರೆ ಕಷ್ಟ, ಹುಷಾರು”… ಅಂದೆ.
“ನಿಮ್ಮ ಕಾಳಜಿಗೆ ಧನ್ಯವಾದಗಳು. ನನ್ನ ಅರ್ಧ ಜೀವನ ಕ್ರಿಕೆಟ್ ನಲ್ಲಿಯೇ ಕಳೆದಿದ್ದೀನಿ. ಬಾಲ್ ಬರೋದು ಗೊತ್ತಾಗುತ್ತೆ. ನೋಡ್ತಾ ಇರ್ತೀನಿ”…ಎಂದು ಮುಗುಳ್ನಗೆ ಬೀರಿದರು.
“ಸರ್, ತಪ್ಪಾಗಿ ತಿಳಿಯೋಲ್ಲ ಅಂದ್ರೆ ನಿಮ್ಮ ವಯಸ್ಸು ಕೇಳಬಹುದಾ” ಸಂಕೋಚದಲ್ಲಿಯೇ ಕೇಳಿದೆ.
“ಜಾಸ್ತಿ ಇಲ್ಲಾ… ಸ್ವೀಟ್ 80 ಅಷ್ಟೇ”… ಅಂದರು. ಅವರಿಗಿಂತ ಅರ್ಧ ವಯಸ್ಸು ಕಮ್ಮಿ ಇದ್ರೂ ಗೋಳಾಡ್ತೀನಿ ಅಲ್ಲ, ಅಂತ ನನ್ನ ಮೇಲೆ ನಾಚಿಕೆಯಾಯಿತು.
“ನಿಮ್ಮ ಆರೋಗ್ಯದ ಗುಟ್ಟು ಕೇಳಿದ್ರೆ ಬೇಜಾರ್ ಆಗೋಲ್ವಾ?”… ಅಂದೆ.
“ಅದರಲ್ಲೇನು ಬೇಜಾರ್”… ಎಂದರು. ನಾನು ಅವರು ತಿನ್ನೋ ಆಹಾರ, ಫಿಟ್ನೆಸ್ ಬಗ್ಗೆ ದೊಡ್ಡ ಪಟ್ಟಿ ಕೊಡ್ತಾರೆ ಅಂದುಕೊಂಡೆ.

ಆದರೆ ಅವರು ಹೇಳಿದ್ದು ವಿಭಿನ್ನ ಉತ್ತರವಾಗಿತ್ತು. “ನಾನು ಯಾವತ್ತೂ ಕೂಡಾ ನನ್ನ ವಯಸ್ಸಿನ ಜನರ ಜೊತೆ ಬೆರೆಯೋಲ್ಲ. ನನಗೆ ನನ್ನ ವಯಸ್ಸಿನ ಸ್ನೇಹಿತರೇ ಇಲ್ಲಾ. ಯಾಕೆ ಗೊತ್ತಾ?”… ಎಂದಾಗ ಆಶ್ಚರ್ಯದಿಂದ ಅವರನ್ನೇ ನೋಡುತ್ತಿದ್ದೆ, ವಯಸ್ಸಾದವರನ್ನ ಅವರ ವಯಸ್ಸಿನವರೇ ಚನ್ನಾಗಿ ಅರ್ಥ ಮಾಡ್ಕೊತ್ತಾರೆ ಮತ್ಯಾಕೆ ಹೀಗೆ ಹೇಳಿದ್ರು ಅಂತ “ಯಾಕೆ ಸರ್”… ಎಂದು ಕುತೂಹಲದಿಂದ ಕೇಳಿದೆ.
“ನಮ್ಮ ವಯಸ್ಸವರ ಹತ್ರ ಆರಾಮ ಇದ್ದೀರಾ… ಅಂತ ಬಾಯಿ ಮಾತು ಕೇಳುವ ಹಾಗಿಲ್ಲ. ಆ ನೋವು, ಈ ನೋವು, ಶುಗರ್ ಲೆವೆಲ್ ಇಷ್ಟಿದೆ, ಬಿಪಿ ಇಷ್ಟಿದೆ, ಅಷ್ಟು ದುಡ್ಡು ಹೋಯ್ತು, ಹೀಗೆ ಬೇಡಾಗಿದ್ದನ್ನೆಲ್ಲ ಹೇಳಿ ಅವರ ನೆಗೆಟಿವ್ ಎನರ್ಜಿ ನನಗೆ ಹಾಕಿ ನಾನು ಕುಗ್ಗುವಂತೆ ಮಾಡ್ತಾರೆ. ಅದರ ಬದಲು ಅವರಿಂದ ದೂರ ಇದ್ದು ಮಕ್ಳು ಜೊತೆ ಈ ಕ್ರಿಕೆಟ್ ಗ್ರೌಂಡ್ ನಲ್ಲಿ ಸ್ವಲ್ಪ ಹೊತ್ತು ಕಾಲ ಕಳದ್ರೆ ಎಷ್ಟು ಸಂತೋಷ ಸಿಗುತ್ತೆ. ಜೀವನದಲ್ಲಿ ಉತ್ಸಾಹ ಮೂಡುತ್ತೆ ಅಲ್ವಾ”…ಎಂದು ಹೇಳಿ ಕೋಚಿಂಗ್ ಕೊಡಲು ನೆಟ್ಸ್ ಹತ್ರ ಹೋದರು. ಆದರೆ ಅವರ ಮಾತು ಅರ್ಥಪೂರ್ಣವಾಗಿತ್ತು.
ಅವರೊಂದಿಗೆ ಮಾತನಾಡಿದ ಮೇಲೆ ನನ್ನ ದೇಹದ ನೋವನ್ನೆಲ್ಲ ಮರೆತು ಹೋದೆ.
ಪ್ರತಿಯೊಬ್ಬರು ಒಂದಲ್ಲ ಒಂದು ದಿನ ಹೋಗಲೇಬೇಕು. ಹೋಗ್ತೀವಿ ಅಂತ ಇರೋ ಸಮಯವನ್ನ ಗೋಳಾಡೋದ್ರಲ್ಲಿ ಕಳದ್ರೆ ಅರ್ಥಹೀನ ಬದುಕಲ್ಲವೇ?… ಸಂತೋಷ ಇದ್ದಲ್ಲಿ ಜನ ಇರೋವುದಕ್ಕೆ ಇಷ್ಟ ಪಡುತ್ತಾರೆ. ದುಃಖ ಇದ್ದಲ್ಲಿ ಜನ ದೂರ ಇರತ್ತಾರೆ ಎನ್ನುವುದು ಸತ್ಯ. ಹಾಗಾಗಿ ಯಾವಾಗಲೂ ನಿಮ್ಮಿಂದ ಸಂತೋಷವನ್ನೇ ಹಂಚಿ…
- ಶಾಲಿನಿ ಹೂಲಿ ಪ್ರದೀಪ್
