ಬದುಕಿಗೊಂದು ಸೆಲೆ (ಭಾಗ – ೧೭)

ಗಣೇಶನ ಪುಟ್ಟ ಬಾಯಿ “ಅತ್ಯಂತ ಕಡಿಮೆ ಮಾತನಾಡು” ಎಂದು ಹೇಳಿದರೆ ಆತನ ಮೊರದಗಲದ ಕಿವಿಗಳು “ಬೇರೆಯವರು ಹೇಳುವುದನ್ನು ಹೆಚ್ಚು ಕೇಳಿಸಿಕೋ” ಎಂದೂ….ಅದೂ ನೀನು ಮಾತನಾಡುವುದಕ್ಕಿಂತ ಹೆಚ್ಚು ಹೆಚ್ಚು ಒಳ್ಳೆಯ ವಿಚಾರಗಳನ್ನು ಕೇಳುವ ಮೂಲಕ ನಿಮ್ಮ ಜ್ಞಾನವನ್ನು ಅನುಭವವನ್ನು ವಿಸ್ತರಿಸಿಕೊ ಎಂದು ನಮಗೆ ಹೇಳುತ್ತದೆ. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ ಕುರಿತು ಇಂದಿನ ಲೇಖನದಲ್ಲಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ… 

ಗಣಪತಿ, ಗಜಾನನ, ಗಣೇಶ, ಗಣನಾಯಕ, ವಿನಾಯಕ, ಲಂಬೋದರ, ವಕ್ರತುಂಡ, ಮಹಾಕಾಯ ಎಂದು ನೂರೆಂಟು ಹೆಸರುಗಳಿಂದ ನಾವು ಭಕ್ತಿಯಿಂದ ಕರೆಯುವ ಪೂಜಿಸುವ ಮತ್ತು ಆ ಬಾಲವೃದ್ಧರಾದಿಯಾಗಿ ಎಲ್ಲರೂ ಪ್ರೀತಿಸುವ ದೈವ ಗಣಪತಿ.ಪಾರ್ವತಿಯ ಮಾಯದ ಮಗನಾಗಿ ತಾಯಿಯು ಸ್ನಾನ ಗೃಹಕ್ಕೆ ಹೋದಾಗ ಮನೆಯನ್ನು ಕಾಯುತ್ತಿದ್ದು, ಸಾಕ್ಷಾತ್ ಪರಶಿವನನ್ನು ಮನೆಯ ಒಳಗೆ ಹೋಗಲು ಬಿಡದೆ ಇದ್ದು ಶಿವನಿಂದ ಶಿರ ಕತ್ತರಿಸಲ್ಪಟ್ಟನು. ಮತ್ತೆ ತಾಯಿ ಪಾರ್ವತಿಯ ಕೋರಿಕೆಯ ಮೇರೆಗೆ ದೇವಾದಿ ದೇವ ಮಹಾದೇವನು ಉತ್ತರ ದಿಕ್ಕಿಗೆ ತಲೆ ಮಾಡಿ ಸತ್ತು ಬಿದ್ದಿರುವ ಆನೆಯ ತಲೆಯನ್ನು ತಂದು ಮಗುವಿನ ಮುಂಡಕ್ಕೆ ಜೋಡಿಸಿ ಗಜಾನನನ್ನಾಗಿಸಿ ಖುದ್ದು ಶಿವನೇ ಬಾಲಕನಲ್ಲಿ ಪ್ರಾಣ ಪ್ರತಿಷ್ಠೆ ಮಾಡಿ ಆತನನ್ನು ತನ್ನ ಶಿವಗಣಗಳಿಗೆ ನಾಯಕನನ್ನಾಗಿಸಿದ ಎಂಬುದು ನಾವೆಲ್ಲರೂ ಓದಿರುವ ಪುರಾಣದ ಕಥೆ.

ಅದೆಷ್ಟೇ ಗಣಪತಿಯ ಹುಟ್ಟು ಮತ್ತು ಶಿರ ಜೋಡಿಸಿದ ಕುರಿತು ಬುದ್ಧಿಜೀವಿಗಳೆನಿಸಿಕೊಂಡವರು ವ್ಯಂಗ್ಯ ಮಾಡಿದರೂ ಕೂಡ ಕನಿಷ್ಠ ಧಾರ್ಮಿಕ ಪ್ರಜ್ಞೆಯುಳ್ಳ ಜನರು ತಮ್ಮ ಮನೆಗಳಲ್ಲಿ ಪೂಜೆಯನ್ನು ಕೈಗೊಳ್ಳುವಾಗ ಯಾವುದೇ ವಿಘ್ನಗಳು ಬಾರದಿರಲಿ ಎಂದು ಗಣೇಶನನ್ನು ಪೂಜಿಸುತ್ತಾರೆ. ಆದ್ದರಿಂದಲೇ ಗಣೇಶನಿಗೆ ”ಪ್ರಥಮ ಪೂಜಿತ’ ಎಂದು ಕರೆಯುತ್ತಾರೆ. ವಿಘ್ನವನ್ನು ಪರಿಹರಿಸುವ ವಿಘ್ನ ವಿನಾಯಕನಾಗಿ, ವಿಘ್ನೇಶ್ವರನಾಗಿ ಆತ ನಮ್ಮ ಮನೆ ಮನಗಳಲ್ಲಿ ಒಡ ಮೂಡಿದ್ದಾನೆ.

ಫೋಟೋ ಕೃಪೆ : google

ಇನ್ನು ಮಕ್ಕಳ ಪಾಲಿಗೆ ಗಣಪತಿ ಒಬ್ಬ ಫ್ರೆಂಡ್, ಫಿಲಾಸಫರ್, ಗೈಡ್ ಎಂದು ಅವರು ಭಾವಿಸಿಕೊಂಡಿದ್ದರೆ ಅದರಲ್ಲಿ ತಪ್ಪಿಲ್ಲ. ಅದರಲ್ಲೂ ಇತ್ತೀಚಿನ ದಶಕಗಳಲ್ಲಿ ಗಣೇಶನ ಕಾರ್ಟೂನ್ ಚಿತ್ರಗಳು ಮತ್ತು ಚಲನಚಿತ್ರಗಳು ಗಣೇಶನನ್ನು ಮಕ್ಕಳಿಗೆ ಮತ್ತಷ್ಟು ಆಪ್ತವಾಗಿಸಿವೆ. ಅದೇನೋ ಗಣಪತಿಯ ಪುಟ್ಟದಾದರೂ ಗುಂಡು ಗುಂಡಾಗಿರುವ ದೇಹ, ಮುದ್ದಾದ ಆನೆಯ ಮುಖ ಮಕ್ಕಳನ್ನು ಆಕರ್ಷಿಸಿದರೆ ಗಣೇಶ ಕೂಡ ತಮ್ಮಂತೆ ಪುಟ್ಟ ಮಗು ಎಂಬ ಭಾವ ಅವರಲ್ಲಿ ಸ್ಟುರಿಸಬಹುದೇನೋ. ಬಹುಶಹ ಅಜ್ಜ, ಮಗ, ಮೊಮ್ಮಗ, ಮರಿ ಮೊಮ್ಮಕ್ಕಳು ಹೀಗೆ ಪ್ರತಿ ತಲೆಮಾರಿನ ಮಕ್ಕಳು ಕೂಡ ತಂತಮ್ಮ ಚಿಕ್ಕ ವಯಸ್ಸಿನಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಏಕೈಕ ದೈವಿ ಗುಣಗಳ ಆಗರ ಗಣೇಶ ಎಂದರೆ ತಪ್ಪಿಲ್ಲ ಅಲ್ವೇ?

ಎಲ್ಲ ವಿದ್ಯೆಗಳ ಅಧಿದೇವತೆಯಾಗಿರುವ ಇಂತಹ ಗಣೇಶನಿಗೆ ವಿದ್ಯಾ ದೇವತೆ ಎಂದು ಕೂಡ ಕರೆಯುತ್ತಾರೆ. ಒಂದು ಆಖ್ಯಾಯಿಕೆಯ ಪ್ರಕಾರ ಗಣೇಶನಿಗೆ ವಿಶ್ವಕರ್ಮನು ಶಿರವನ್ನು ಜೋಡಿಸುವಾಗ ತನ್ನ ಮಕ್ಕಳಾದ ಸಿದ್ದಿ ಬುದ್ಧಿಯರನ್ನು ಆತನಿಗೆ ಕೊಟ್ಟು ಮದುವೆ ಮಾಡಿದನು. ಪೂಜಿಸುವವರಿಗೆ ಅವರ ಕಾರ್ಯದಲ್ಲಿ ಸಿದ್ಧಿಯಾಗುವ ಮತ್ತು ಅವರ ಬುದ್ಧಿ ಚುರುಕಾಗುವ ಕಾರಣವೇ ಗಣೇಶನನ್ನು ಪೂಜಿಸುವ ಆರಾಧಿಸುವ ಜನರಿಗೆ ಆತ ಅಭಯಪ್ರದನು, ಸಂಕಟ ನಿವಾರಕನು ಆಗಿದ್ದಾನೆ…. ಆದ್ದರಿಂದಲೇ ಆತನನ್ನು ಸಂಕಷ್ಟಹರ ಎಂದು ಕೂಡ ಕರೆಯುತ್ತಾರೆ.

ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವಂತೆ ಮಾಡಪ್ಪ ಎಂದು ಕೇಳುವ, ಪಾಸು ಮಾಡಿಸು ಎಂದು ಕೇಳುವ ಮೂಢ ಭಕ್ತರು ಕೂಡ ಗಣೇಶನಿಗೆ ಇದ್ದಾರೆ. ತಾವು ಓದದೇ ಇದ್ದರೂ ಬರೆಯದೆ ಇದ್ದರೂ ಪರೀಕ್ಷೆಯಲ್ಲಿ ತಮ್ಮನ್ನು ಪಾಸು ಮಾಡಲಿ ಎಂದು ಆಶಿಸುವ ಹಾಗೆ ಪಾಸಾಗದೇ ಇದ್ದಾಗ ಅದೇ ಗಣಪತಿಯನ್ನು ದೂಷಿಸುವ ಮೌಡ್ಯತೆ ಅವರಲ್ಲಿದೆ. ಶಾಪ ಕೊಡುತ್ತಾನೆ ಎಂದು ಮತ್ತೆ ಕೆನ್ನೆಗೆ ಬಡಿದುಕೊಂಡು ತಪ್ಪಾಯಿತು ಎಂದು ಕೇಳಿಕೊಳ್ಳುವ ಭಯದ ಭಕ್ತಿ ಕೂಡ ಅವರಿಗಿದೆ.

ಗಣೇಶನ ದೈಹಿಕ ಆಕಾರವು ಹಲವಾರು ವಿಷಯಗಳನ್ನು ಪ್ರತಿನಿಧಿಸುವ ಮೂಲಕ ನಮಗೆ ಕೆಲವು ಸ್ಪಷ್ಟ ಸಂದೇಶಗಳನ್ನು ನೀಡುತ್ತದೆ. ಗಜಾನನ… ದೇಹಕ್ಕಿಂತ ತುಸು ದೊಡ್ಡದೇ ಎನಿಸುವ ಆತನ ತಲೆ “ಯಾವಾಗಲೂ ಹಿರಿದಾದುದನ್ನು ಯೋಚಿಸು” ಎಂದು ನಮಗೆ ಹೇಳುತ್ತದೆ. ಉನ್ನತ ವಿಚಾರಧಾರೆಗಳು ವ್ಯಕ್ತಿಯ ವ್ಯಕ್ತಿತ್ವಕ್ಕೆ ಕಳಶಪ್ರಾಯವಾಗಿರುತ್ತದೆ ಎಂಬ ಮಾತನ್ನು ಗಣೇಶನ ದೊಡ್ಡ ತಲೆಯು ಪ್ರತಿನಿಧಿಸುತ್ತದೆ.

ಗಣೇಶನ ಪುಟ್ಟ ಬಾಯಿ “ಅತ್ಯಂತ ಕಡಿಮೆ ಮಾತನಾಡು” ಎಂದು ಹೇಳಿದರೆ ಆತನ ಮೊರದಗಲದ ಕಿವಿಗಳು “ಬೇರೆಯವರು ಹೇಳುವುದನ್ನು ಹೆಚ್ಚು ಕೇಳಿಸಿಕೋ” ಎಂದೂ….ಅದೂ ನೀನು ಮಾತನಾಡುವುದಕ್ಕಿಂತ ಹೆಚ್ಚು ಹೆಚ್ಚು ಒಳ್ಳೆಯ ವಿಚಾರಗಳನ್ನು ಕೇಳುವ ಮೂಲಕ ನಿಮ್ಮ ಜ್ಞಾನವನ್ನು ಅನುಭವವನ್ನು ವಿಸ್ತರಿಸಿಕೊ ಎಂದು ನಮಗೆ ಹೇಳುತ್ತದೆ.

ಏಕದಂತ,ವಕ್ರತುಂಡ ಎಂದು ಕರೆಯಲ್ಪಡುವ ಗಣಪತಿಗೆ ಇರುವ ಒಂದು ಹಲ್ಲು “ಒಳ್ಳೆಯದನ್ನು ಉಳಿಸಿಕೊಳ್ಳುವ ಕುರಿತು ನಮಗೆ ಎಚ್ಚರಿಸಿದರೆ ಮುರಿದ ಇನ್ನೊಂದು ಹಲ್ಲು ಕೆಟ್ಟದ್ದನ್ನು ಸಾರಾಸಗಟಾಗಿ ತಿರಸ್ಕರಿಸು, ಕಳೆದುಕೋ ಮುರಿದು ಹಾಕು” ಎಂಬುದನ್ನು ಪ್ರತಿನಿಧಿಸುತ್ತದೆ.

ಲಂಬೋದರ ಎಂದು ಕರೆಸಿಕೊಳ್ಳುವ ಗಣೇಶನ ದೊಡ್ಡ ಡೊಳ್ಳು ಹೊಟ್ಟೆಯು “ಜೀವನದಲ್ಲಿ ಬರುವ ಎಲ್ಲಾ ಕಷ್ಟ ಸುಖಗಳನ್ನು, ನೋವು ನಲಿವುಗಳನ್ನು, ಏರಿಳಿತಗಳನ್ನು ಅರಗಿಸಿಕೊಂಡು ಬಾಳು” ಎಂಬುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಜೀವನ ಎಂದ ಮೇಲೆ ಅವೆಲ್ಲವೂ ಇದ್ದದ್ದೇ ಅಲ್ಲವೇ? ಬದುಕಿನಲ್ಲಿ ಕೇವಲ ಸುಖವಿರಲಿ, ಕಷ್ಟ ಬೇಡ ಎಂದಾಗಲಿ, ನೋವೆಲ್ಲಾ ದೂರವಾಗಲಿ ನಲಿವಷ್ಟೇ ನನಗಿರಲಿ ಎಂಬಂತೆ ಬದುಕನ್ನು ಸಾಗಿಸಲು ಸಾಧ್ಯವಿಲ್ಲ ಅಲ್ಲವೇ?

ಫೋಟೋ ಕೃಪೆ : google

ಗಜಾನನನ ಪುಟ್ಟ ಪುಟ್ಟ ಕಣ್ಣುಗಳು “ಅತ್ತ್ಯಗತ್ತ್ಯವಾದ ವಿಷಯಗಳ ಮೇಲೆ ಮಾತ್ರ ನಮ್ಮ ಗಮನ ಸದಾ ಇರಲಿ” ಎಂಬುದನ್ನು ಸೂಚಿಸುತ್ತದೆ. ಅನಗತ್ಯ ವಿಷಯಗಳು, ವಸ್ತುಗಳತ್ತ ಚಿತ್ತಹರಿಸುವುದು ಬೇಡ ಎಂಬುದನ್ನು ಮಾರ್ಮಿಕವಾಗಿ ಸೂಚಿಸುವ ಗಣೇಶನ ಪುಟ್ಟ ನಯನಗಳು “ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಕುರಿತು ಚಿಂತಿಸಲು ನಮಗೆ ನಿರ್ದೇಶಿಸುತ್ತವೆ.

ಪಾಶಾಂಕುಶಧರ ಎಂದು ಕರೆಯಲ್ಪಡುವ ಗಣೇಶನ ಕೈಯಲ್ಲಿರುವ ಪಾಶವು “ಪ್ರೀತಿ ಪಾತ್ರರೊಂದಿಗೆ ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕಾದ ಅಗತ್ಯತೆಯ ಅರಿವನ್ನು” ಮೂಡಿಸುತ್ತದೆ. ಮೂಲತಃ ಮನುಷ್ಯ ಸಂಘ ಜೀವಿ. ಸಾಮಾಜಿಕವಾಗಿ ಬದುಕುವ ಆತ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕಾದ ಅನಿವಾರ್ಯತೆ ಇದ್ದು ಅದಕ್ಕೆ ಬೇಕಾದ ಬದ್ಧತೆ ಮತ್ತು ಮಾನಸಿಕ ನಿಯಂತ್ರಣಗಳು ಆತನಿಗಿರಲಿ ಎಂಬುದನ್ನು ಸಾಂಕೇತಿಕವಾಗಿ ಸೂಚಿಸುವ ಪಾಶ ಮತ್ತು ಅಂಕುಶಗಳನ್ನು ಗಣೇಶ ಹೊಂದಿರುವನು.

ಗಣೇಶನ ಹಿರಿದಾದ ಸೊಂಡಿಲು ದಕ್ಷತೆಯ ಸಂಕೇತ. ಎಲ್ಲಾ ಒಳ್ಳೆಯ ವಿಚಾರಗಳನ್ನು ಅರಗಿಸಿಕೊಳ್ಳುವ, ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಬೇಕಾಗುವ ದೃಢತೆ ಮತ್ತು ಹೊಂದಾಣಿಕೆಯ ಮನೋಭಾವವನ್ನು ನಾವು ಹೊಂದಿರಬೇಕು ಎಂಬುದನ್ನು ಗಣೇಶನ ಸೊಂಡಿಲು ಪ್ರತಿಪಾದಿಸುತ್ತದೆ. ಬದುಕು ಒಡ್ಡುವ ಕಹಿ ಅನುಭವಗಳನ್ನು ಹಿರಿದಾದ ದೃಢತೆಯಿಂದ ನುಂಗಿಕೊಂಡು ಹೊಂದಿಕೊಳ್ಳಬೇಕು ಎಂಬುದು ಇದರ ಅರ್ಥವಾಗಿದೆ.

ಮೂಷಿಕ ವಾಹನ ಎಂದು ಕರೆದುಕೊಳ್ಳುವ ಅಗಾಧ ದೇಹದ ಗಣೇಶನಿಗೆ ಪುಟ್ಟ ಇಲಿ ವಾಹನವಾಗಿದ್ದು ಈ ಇಲಿಯು ನಮ್ಮಲ್ಲಿರುವ ಅತಿಯಾದ ಆಸೆ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಮನುಷ್ಯನಿಗೆ ಆಸೆಗಳಿರಬೇಕು ಆದರೆ ಅತಿ ಆಸೆ ಒಳ್ಳೆಯದಲ್ಲ. ಅಂತಹ ಅತಿ ಆಸೆಯು ಮನಸ್ಸಿನಲ್ಲಿ ಇಲ್ಲದ ತಳಮಳಗಳನ್ನು ಅಲ್ಲೋಲಕಲ್ಲೋಲಗಳನ್ನು ಸೃಷ್ಟಿಸಿ ನಮ್ಮ ಮೇಲೆ ಸವಾರಿ ಮಾಡುತ್ತದೆ. ಇಂತಹ ಆಸೆ ಆಕಾಂಕ್ಷೆಗಳನ್ನು ನಾವು ಸವಾರಿ ಮಾಡಬೇಕು ಅಂದರೆ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ನಮಗೆ ಮೂಷಿಕದ ರೂಪದ ಆಸೆಗಳನ್ನು ಅವುಗಳನ್ನು ಸವಾರಿ ಮಾಡುವ ಗಣೇಶನ ಹಾಗೆ ನಾವೂ ಕೂಡ ನಮ್ಮ ಬದುಕಿನಲ್ಲಿ ಇರಬೇಕು.

ಮೋದಕ ಹಸ್ತ ಎಂದು ಕರೆಸಿಕೊಳ್ಳುವ ಗಣೇಶ. ನಮಗೆ ಆತನ ದೇಹದ ಅಂಗಗಳು ಸೂಚಿಸುವ ಸಾಂಕೇತಿಕ ಲಕ್ಷಣಗಳನ್ನು ನಾವು ನಮ್ಮದಾಗಿಸಿಕೊಂಡರೆ ಅದಕ್ಕೆ ಪ್ರತಿಫಲವಾಗಿ ನಮಗೆ ಬದುಕಿನಲ್ಲಿ ಯಶಸ್ಸು ಸಮೃದ್ಧಿ ದೊರೆಯುತ್ತದೆ ಎಂಬುದನ್ನು ಮೋದಕದ ರೂಪದಲ್ಲಿ ತೋರುತ್ತಾನೆ. ಮಕ್ಕಳು ಏನಾದರೂ ಒಳ್ಳೆಯ ಕೆಲಸ ಮಾಡಿದಾಗ ನಾವು ಅವರಿಗೆ ಚಾಕಲೇಟ್ ಅನ್ನು ಕಾಣಿಕೆಯಾಗಿ ನೀಡುವುದಿಲ್ಲವೇ ನಮ್ಮ ಬದುಕಿನ ಉತ್ತಮ ನಡಾವಳಿಗಳಿಗೆ ನಾವು ಗಣೇಶನಿಂದ ಮೋದಕವನ್ನು ಪ್ರಸಾದದ ರೂಪದಲ್ಲಿ ಆಶೀರ್ವಾದದ ರೂಪದಲ್ಲಿ ಪಡೆಯುತ್ತೇವೆ ಎಂಬುದು ಇದರ ಅರ್ಥ.

ಸ್ನೇಹಿತರೆ, ಪ್ರತಿ ವರ್ಷ ನಮಗೆ ಸಡಗರ, ಸಂಭ್ರಮವನ್ನು ತಂದುಕೊಡುವ ಗಣಪತಿ ಹಬ್ಬವನ್ನು ಆಡಂಬರದಿಂದ ಆಚರಿಸದೆ ಅರ್ಥಪೂರ್ಣವಾಗಿ ಆಚರಿಸೋಣ. ಪಂಚಮಹಾಭೂತಗಳಲ್ಲಿ ಬೆರೆತು ಹೋಗುವಂತಹ ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ಮನೆಗೆ ತರೋಣ. ಯಾವುದೇ ರಾಸಾಯನಿಕಗಳ ಲೇಪನವಿಲ್ಲದ, ಕೃತಕವಾದ ಬಣ್ಣಗಳನ್ನು ಬಳಸಿಲ್ಲದ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹವನ್ನು ಸ್ಥಾಪಿಸಿ ಕುಟುಂಬದ ಎಲ್ಲಾ ಸದಸ್ಯರೊಡನೆ ಒಡಗೂಡಿ ಸರಳವಾಗಿ ಪೂಜೆಗೈಯೋಣ.

ಪರಿಸರಕ್ಕೆ ಹಾನಿಯಾಗದಂತೆ ಹಬ್ಬವನ್ನು ಆಚರಿಸುವ ಮೂಲಕ ಗಣೇಶನ ಅನುಗ್ರಹ ನಮಗೆ ದೊರೆಯಲಿ ಎಂದು ಬೇಡಿಕೊಳ್ಳೋಣ.

ಹಿಂದಿನ ಸಂಚಿಕೆಗಳು :


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW