ಬದುಕಿಗೊಂದು ಸೆಲೆ (ಭಾಗ-೨೦)

ಬೆಳವಣಿಗೆ ಎಂದರೆ ಅತಿಯಾದ ಸುರಕ್ಷಿತತೆ ಮತ್ತು ಅನುಕೂಲಕರ ವಾತಾವರಣವನ್ನು ಕಲ್ಪಿಸಿ ಕೊಡುವುದಲ್ಲ. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ ಕುರಿತು ಇಂದಿನ ಲೇಖನದಲ್ಲಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ತುಸು ಆತಂಕ ಮತ್ತು ದುಗುಡವನ್ನು ಹೊತ್ತ ಓರ್ವ ಹೆಣ್ಣು ಮಗಳು ಪಾರ್ಕಿನ ಬೆಂಚೊಂದರ ಮೇಲೆ ಕುಳಿತು ತನ್ನ ಮೂರು ಮಕ್ಕಳು ಆಟವಾಡುವುದನ್ನು ನೋಡುತ್ತಿದ್ದಳು. ಅದೇ ಸಮಯದಲ್ಲಿ ಅಲ್ಲಿ ಹಾರಿ ಬಂದ ಹದ್ದು ಆಕೆಯ ಬಳಿಯೇ ಬಂದು ಕುಳಿತುಕೊಂಡಿತು.

ಅಮ್ಮ ನಿನ್ನನ್ನು ನೋಡಿದರೆ ನೀನು ತುಂಬ ಕಳವಳಗೊಂಡಿರುವೆ ಎಂದು ತೋರುತ್ತದೆ… ಯಾಕೆ ಎಲ್ಲವೂ ಸರಿಯಾಗಿದೆ ಅಲ್ಲವೇ? ಎಂದು ಕೇಳಿತು ಆ ಪಕ್ಷಿ. ನಿನ್ನ ಮಾತು ನಿಜ…ನನಗೆ ಭಯವಾಗುತ್ತಿದೆ. ನಾನು ನನ್ನ ಮಕ್ಕಳಿಗೆ ಜಗತ್ತಿನ ಎಲ್ಲಾ ಒಳ್ಳೆಯ ವಿಷಯಗಳನ್ನು ಕೊಡ ಮಾಡಲು ಬಯಸುತ್ತೇನೆ, ಆದರೆ ನನಗೆ ನಾನು ಅವರನ್ನು ಸರಿಯಾಗಿ ಬೆಳೆಸುತ್ತಿದ್ದೇನೆಯೇ ಇಲ್ಲವೇ ಎಂಬ ವಿಷಯದ ಕುರಿತು ಗೊಂದಲ ಇದೆ.

ಆಕೆಯ ಗೊಂದಲದ ಅರಿವಾದ ಹದ್ದು ಜಾಣ್ಮೆಯಿಂದ ಆಕೆಯೆಡೆ ನೋಡಿ ” ಅತ್ಯಂತ ಸುರಕ್ಷಿತವಾಗಿ, ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಕೊಡುವುದನ್ನು ಬೆಳೆಸುವಿಕೆ ಎಂದು ಹೇಳುವುದಿಲ್ಲ. ನನ್ನ ಪುಟ್ಟ ಮರಿಗಳು ಹುಟ್ಟಿದಾಗ ನನ್ನ ಗೂಡು ತುಂಬಾ ಮೆದು ಮತ್ತು ಸುರಕ್ಷಿತ ಎಂದು ತೋರುತ್ತದೆ ನಿಜ, ಆದರೆ ಒಂದೊಮ್ಮೆ ಮರಿಗಳು ಬೆಳೆದು ಅವುಗಳ ರೆಕ್ಕೆ ಬಲಿತ ಹೊತ್ತಿನಲ್ಲಿ ನಾನು ಗೂಡಿನಲ್ಲಿನ ಮೆದುವಾದ ಗರಿಗಳನ್ನು ತೆಗೆದು ಹಾಕಿ ಮುಳ್ಳುಗಳನ್ನು ಹಾಗೆಯೇ ಬಿಡುತ್ತೇನೆ. ಆ ಮುಳ್ಳುಗಳ ಸ್ಪರ್ಶದಿಂದ ಬೇಸರಪಡುವ ಮರಿಗಳು ತಮ್ಮ ರೆಕ್ಕೆಗಳನ್ನು ಅಗಲಿಸಿ ಹೊರಗೆ ಹಾರಲು ಪ್ರಯತ್ನಿಸುತ್ತವೆ. ಈ ರೀತಿ ಅನಾನುಕೂಲತೆಯನ್ನು ಕಲ್ಪಿಸುವುದರ ಮೂಲಕ ನಾನು ಅವು ಉತ್ತಮವಾಗಿ ಬದುಕಲು ಕಲಿಯುವ ಅವಕಾಶವನ್ನು ಕಲ್ಪಿಸಿ ಕೊಡುತ್ತೇನೆ. ಬೆಳವಣಿಗೆ ಎಂದರೆ ಅತಿಯಾದ ಸುರಕ್ಷಿತತೆ ಮತ್ತು ಅನುಕೂಲಕರ ವಾತಾವರಣವನ್ನು ಕಲ್ಪಿಸಿ ಕೊಡುವುದಲ್ಲ. ಗಾಬರಿಯಿಂದ ಆಕೆ ಹಾಗಾದರೆ ಮರಿಗಳು ಬಿದ್ದು ಹೋದರೆ ಎಂದು ಕೇಳಿದಳು.

ನಾನು ನನ್ನ ಮಕ್ಕಳನ್ನು ಆಕಾಶದಲ್ಲಿ ಹಾರಲು ಅನುವಾಗುವಂತೆ ಮೇಲಿನಿಂದ ಎಸೆಯುತ್ತೇನೆ. ಅವು ಹಾರದೆ ಹೋದಾಗ ನಾನು ಅವುಗಳನ್ನು ಹಿಡಿಯುತ್ತೇನೆ. ಹಾರಲು ಪ್ರಯತ್ನಿಸಲು ಹೇಳಿ ಮತ್ತೆ ಮೇಲೆ ಎಸೆಯುತ್ತೇನೆ… ಹೀಗೆ ಪದೇ ಪದೇ ಅವುಗಳನ್ನು ಹಾರಲು ಮೇಲೆ ಎಸೆದು ಅಂತಿಮವಾಗಿ ಅವು ಹಾರುವವರೆಗೂ ಅವರನ್ನು ಕಾಯುತ್ತೇನೆ. ಒಂದೊಮ್ಮೆ ರೆಕ್ಕೆ ಬಿಚ್ಚಿ ಅವರು ಗಗನದಲ್ಲಿ ಹಾರಿದರೆ ನನ್ನ ಜವಾಬ್ದಾರಿ ಅಲ್ಲಿಗೆ ಮುಗಿಯಿತು ನಾನು ಹಿಂದೆ ಸರಿಯುತ್ತೇನೆ.

ನಾನು ನನ್ನ ಮಕ್ಕಳು ನನ್ನ ಮೇಲೆ ಅವಲಂಬಿತವಾಗಿರುವಂತೆ ಕಲಿಸುವುದಿಲ್ಲ. ನನ್ನ ಮಕ್ಕಳು ನನ್ನಿಂದ ದೂರವಾಗಿ ಸ್ವತಂತ್ರವಾಗಿ ಇರಲಿ ಎಂದು ನಾನು ಬಯಸುತ್ತೇನೆ. ಮಕ್ಕಳಿಗೆ ನೋವಾಗದಂತೆ ನಾನು ಬೆಳೆಸುವುದಿಲ್ಲ ಮಕ್ಕಳು ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ನಾನು ಅವರನ್ನು ಬೆಳೆಸುತ್ತೇನೆ. ನೋವನ್ನು ಮೀರಿ ಬೆಳೆಯಲಿ ಎಂದು ಆಶಿಸುತ್ತೇನೆ… ಇಷ್ಟು ಹೇಳಿ ಹದ್ದು ಸುಮ್ಮನೆ ಕುಳಿತ ಹೊತ್ತಿನಲ್ಲಿ ಆ ಮೂರು ಮಕ್ಕಳ ತಾಯಿ ತನ್ನದೇ ಯೋಚನೆಗಳಲ್ಲಿ ಮಗ್ನಳಾದಳು. ನಂತರ ದೀರ್ಘವಾದ ನಿಟ್ಟುಸಿರನ್ನು ಹೊರ ಚೆಲ್ಲಿದ ಆಕೆ “ಹಾಗಾದರೆ ನಾನು ನನ್ನ ಮಕ್ಕಳನ್ನು ಹಾಗೆಯೇ ಬಿದ್ದು ಬಿಡಲಿ ಎಂದು ಬಿಟ್ಟು ಬಿಡಲೇ” ಎಂದು ಕೇಳಿದ.

“ಇದನ್ನು ಬೀಳುವುದು ಎಂದು ನೀನೇಕೆ ಅಂದುಕೊಳ್ಳುವೆ… ಇದೊಂದು ಕಲಿಕೆ. ನನಗೆ ಅದೆಷ್ಟೇ ನೋವಾದರೂ ಕೂಡ ನನ್ನ ಮಕ್ಕಳು ಹಾರಲು ಕಲಿಸಬೇಕಾದದ್ದು ನನ್ನ ಕರ್ತವ್ಯ ಎಂದು ಆ ಹದ್ದು ಹೇಳಿದಾಗ ಅರ್ಥವಾಯಿತು ಎಂಬಂತೆ ಆ ಹೆಣ್ಣು ಮಗಳು ತಲೆದೂಗಿದಳು.

ಬುದ್ಧಿಜೀವಿ ಎಂದು ಹೆಸರಾದ ಮನುಷ್ಯ ಜನ್ಮದಲ್ಲಿ ಹುಟ್ಟಿಯೂ ಕೂಡ ಅದೆಂಥ ಮೌಡ್ಯ ತನ್ನಲ್ಲಿ ಇತ್ತು ಎಂದು ಅರಿತಾಗ ಆ ಹೆಣ್ಣುಮಗಳ ಮೊಗದಲ್ಲಿ ನಗು ಮೂಡಿತು. ತನ್ನ ಬಳಿ ಓಡಿ ಬಂದ ತನ್ನ ಮಗುವನ್ನು ತಬ್ಬಿಕೊಂಡು ಆಕೆ ಹದ್ದನ್ನು ಕುರಿತು “ನಿನಗೆಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ನಿನ್ನಿಂದಾಗಿ ನಾನು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಬದುಕಿನ ಅತಿ ದೊಡ್ಡ ಪಾಠವನ್ನು ಕಲಿತೆ” ಎಂದು ಕೃತಜ್ಞತೆಯಿಂದ ಹೇಳಿದಳು.

ನಂತರ ಮಕ್ಕಳನ್ನು ಕರೆದುಕೊಂಡು ಮನೆಯತ್ತ ನಡೆದ ಆಕೆ ಕೇವಲ ಆತಂಕವನ್ನು ಹೊಂದಿದ ತಾಯಿಯಾಗಿರಲಿಲ್ಲ… ಬದಲಾಗಿ ತನ್ನ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಅರಿತ ಪ್ರಬುದ್ಧ ವ್ಯಕ್ತಿಯಾಗಿ ಬದಲಾಗಿದ್ದಳು ಎಂಬುದಕ್ಕೆ ಆಕೆಯ ನಡಿಗೆಯಲ್ಲಿ ಕಾಣುತ್ತಿದ್ದ ಆತ್ಮವಿಶ್ವಾಸವೇ ಸಾಕ್ಷಿಯಾಗಿತ್ತು.

ಕೇಳಿ ಸ್ನೇಹಿತರೆ, ನಿಮ್ಮ ಮಕ್ಕಳು ಮೇಲೆ ಹಾರಲಿ ಎಂದು ನೀವು ಬಯಸುವುದಾದರೆ ನೀವೇ ಎಲ್ಲವನ್ನು ಅವರಿಗೆ ಮಾಡಬೇಡಿ. ಅವರನ್ನು ಅತಿಯಾದ ಸುರಕ್ಷತೆಯಲ್ಲಿ ಬೆಳೆಸಬೇಡಿ… ಅವರು ಗಾಳಿಯಲ್ಲಿ ತೂರಾಡಲಿ, ಬದುಕಿನ ಸಂಘರ್ಷಗಳಲ್ಲಿ ಒದ್ದಾಡಲಿ ಮತ್ತು ಸೋಲಲಿ… ಹಾಗೆ ಅವರು ಸೋತಾಗ ಅವರಿಗೆ ನಿಮ್ಮ ಸಹಾಯ ಹಸ್ತವನ್ನು ಚಾಚಿರಿ. ಆದರೆ ಅವರ ಭಾರವನ್ನು ನೀವೇ ಹೊರಬೇಡಿ. ಭರವಸೆ ನೀಡಿ ಮತ್ತೆ ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೋತ್ಸಾಹಿಸಿ.

ಮಕ್ಕಳನ್ನು ನಿಜವಾಗಿಯೂ ನೀವು ಪ್ರೀತಿಸುವುದಾದರೆ ಅವರಿಗೆ ಜೀವನದ ಯಾವುದೇ ತೊಂದರೆಗಳು ಬಾದೆ ತರದಿರಲಿ ಎಂದು ರಕ್ಷಿಸುವ ಬದಲು ಅವರನ್ನು ಬದುಕಿನ ಎಲ್ಲಾ ಸವಾಲುಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಲು ಕಲಿಸಿ. ನೀವು ತೋರಿದ ಆಕಾಶದಲ್ಲಿ ಮಕ್ಕಳು ಹಾರುವುದು ಬೇಡ ಅವರು ತಮ್ಮದೇ ಆದ ಆಕಾಶವನ್ನು ಸೃಷ್ಟಿಸಿಕೊಳ್ಳಲಿ.

ಮಕ್ಕಳಿಗಾಗಿ ಸುರಕ್ಷಿತ ರಸ್ತೆಯನ್ನು ನಿರ್ಮಿಸದಿರಿ… ಯಾವುದೇ ರಸ್ತೆಯಲ್ಲಿ ಮಕ್ಕಳು ಓಡಾಡಲು ಅವರನ್ನು ಸಜ್ಜಾಗಿಸಿ ಎಂಬ ಜೋರ್ಡನ್ ಪೀಟರ್ಸನ್ ಮತ್ತು ಕಾರ್ಲ್ ಜಂಗ ರ ನುಡಿಗಳನ್ನು ಮುಂದುವರೆಸಿ ಮಕ್ಕಳು ಎಡವಲೇಬಾರದು ಎಂದು ಪ್ರತಿ ಹೆಜ್ಜೆಯನ್ನು ಹೇಳುವುದಾದರೆ ಪ್ರತಿ ಕಣ್ಣೀರು ಪ್ರತಿಯೊಂದು ಶ್ರಮ ಸಾರ್ಥಕವಾಗುವುದು ಮಕ್ಕಳು ತಮ್ಮ ಕಾಲ ಮೇಲೆ ತಾವು ಸ್ವತಂತ್ರವಾಗಿ ಜೀವನೋತ್ಸಾಹ ಮತ್ತು ಪ್ರೀತಿಯಿಂದ ಬದುಕನ್ನು ನಡೆಸಿದಾಗ ಮಾತ್ರ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು ಅಂತೆಯೇ ನಡೆಯಬೇಕು.

ನಮ್ಮ ಮಕ್ಕಳು ಬದುಕಿನಲ್ಲಿ ಎಡವಲೇಬಾರದು ಎಂಬ ಹಠ ಬೇಡ, ಜಾಗರೂಕತೆ ಕೂಡ ಬೇಡ. ಮಕ್ಕಳ ಹಾದಿಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅತಿಯಾದ ಸಹಾಯ ಬೇಡ.

ಇದಕ್ಕೆ ಪೂರಕವಾಗಿ ಮತ್ತೊಂದು ಕತೆ ನೆನಪಿಗೆ ಬರುತ್ತದೆ. ತಮ್ಮ ಮನೆಯಲ್ಲಿ ಗೂಡು ಕಟ್ಟಿರುವ ಹಕ್ಕಿಯೊಂದು ಪುಟ್ಟ ಪುಟ್ಟ ತತ್ತಿಗಳನ್ನು ಇಟ್ಟಿದ್ದು ಪ್ರತಿದಿನ ಅವುಗಳಿಗೆ ಕಾವು ಕೊಡುತ್ತಿತ್ತು. ಅದೊಂದು ದಿನ ತಾಯಿ ಹಕ್ಕಿಯು ಹೊರಗೆ ಹೋದಾಗ ಪ್ರತಿಯೊಂದು ಗೂಡಿನಿಂದ ಹೊರಗೆ ಬಿತ್ತು. ಆ ಮನೆಯ ಬಾಲಕನ ಕಣ್ಣು ಒಡೆಯದೇ ಇದ್ದರೂ ಆ ತತ್ತಿಯಲ್ಲಿದ್ದ ಪುಟ್ಟ ಮರಿ ಹಕ್ಕಿ ಹೊರಗೆ ಬರಲು ಪ್ರಯತ್ನಿಸುವುದು .ಕಾಣುತ್ತಿತ್ತು.. ಒಂದೆಡೆ ತತ್ತಿ ಬಿರುಕು ಬಿಟ್ಟಿದ್ದು ತತ್ತಿಯ ಒಳಗಡೆ ಮರಿ ಹಕ್ಕಿಯ ಗುದ್ದಾಟವನ್ನು ಕಂಡು ಬಾಲಕನ ಮನ ಕರಗಿತು. ಕೂಡಲೇ ತತ್ತಿಯ ಬಾಯನ್ನು ಅಗಲಗೊಳಿಸಿ ಮರಿ ಹಕ್ಕಿಯು ಹೊರಗೆ ಬರಲು ಅನುವು ಮಾಡಿಕೊಟ್ಟನು. ಆದರೆ ಹಾಗೆ ಹೊರಗೆ ಬಂದ ಮರಿ ಹಕ್ಕಿಯು ಕುಂಟುತ್ತಲೆ ಮುಂದೆ ಸಾಗಿತು. ಮರಿಯ ಕಾಲುಗಳಲ್ಲಿನ ಶಕ್ತಿ ಕುಂದಿದ್ದನ್ನು ನೋಡಿದ ಬಾಲಕನಿಗೆ ಬೇಸರವಾಯಿತು.

ಕೆಲ ಹೊತ್ತಿನ ಬಳಿಕ ಮನೆಗೆ ಬಂದ ತಂದೆಗೆ ಬಾಲಕ ನಡೆದ ವಿಷಯವನ್ನು ತಿಳಿಸಿದ. ಆಗ ತಂದೆಯು ಮಗನನ್ನು ಕೂರಿಸಿಕೊಂಡು ಮರಿ ಹಕ್ಕಿಯು ತತ್ತಿಯನ್ನು ತಾನೇ ಒಡೆದು ಬರಲು ಒದ್ದಾಡುತ್ತದೆಯಷ್ಟೇ? ಹಾಗೆ ಒದ್ದಾಡುವುದದಿಂದಲೇ ಅದರ ಕೈ ಕಾಲುಗಳು ಬಲಿಷ್ಠವಾಗುತ್ತಿದ್ದವು, ಆದರೆ ನೀನು ಅದಕ್ಕೆ ಸಹಾಯ ಮಾಡಲು ಹೋಗಿ ಅದು ಒದ್ದಾಡಲು ಸಾಧ್ಯವಾಗಲಿಲ್ಲ. ಅದರಿಂದಲೇ ಮರಿಯ ಕಾಲುಗಳ ಶಕ್ತಿ ಕುಂದುವಂತೆ ಆಯಿತು ಎಂದು ಸೂಕ್ಷ್ಮವಾಗಿ ತಿಳಿಸಿ ಹೇಳಿದಾಗ ಬಾಲಕನಿಗೆ ತನ್ನ ತಪ್ಪಿನ ಅರಿವಾಯಿತು. ಆದರೆ ಕಾಲ ಮಿಂಚಿಹೋಗಿತ್ತು.

ನೋಡಿದಿರಾ ಸ್ನೇಹಿತರೆ! ನಮ್ಮ ಅತಿಯಾದ ಕಾಳಜಿ ನಮ್ಮ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಇರಬೇಕೆ ಹೊರತು ಮಾರಕವಾಗಿ ಅಲ್ಲ ಎಂಬುದನ್ನು ಅರಿತು ಮಕ್ಕಳನ್ನು ಬೆಳೆಸೋಣ.

ಹಿಂದಿನ ಸಂಚಿಕೆಗಳು :


  • ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW