ಒಬ್ಬ ತಂದೆ ಮಗನಿಗೆ ಬರಿಯುವ ಪತ್ರದಲ್ಲಿ ಒಂದು ಸಾಲು ಹೀಗಿರುತ್ತದೆ ‘ನಿನಗಿಂತ ಮೂರು ಪಟ್ಟು ವಯಸ್ಸಾಗಿರುವ ನಾನು ಬದುಕಿನ ಏಳು ಬೀಳುಗಳನ್ನು ಅರಿತಿದ್ದೇನೆ. ಬೇರೆಯವರ ತಪ್ಪುಗಳು ನಮಗೆ ಪಾಠವಾಗ ಬೇಕೇ ಹೊರತು ಆ ತಪ್ಪುಗಳೆಲ್ಲವೂ ನಮ್ಮದೇ ಆಗಿ ಅವುಗಳಿಂದ ನಾವು ಪಾಠ ಕಲಿಯುವ ಹೊತ್ತಿಗೆ ಬದುಕು ಮುಗಿದು ಹೋಗುತ್ತದೆ. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಮಗನಿಗೆ ಶಿಸ್ತಿನ ಪಾಠದ ಪತ್ರ’ ಕುರಿತು ಇಂದಿನ ಲೇಖನದಲ್ಲಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ಪ್ರೀತಿಯ ಮಗನೇ,
ಏನಿದು? ಮನೆಯಲ್ಲಿ ಇದ್ದ ಅಪ್ಪ ನನಗೆ ಪತ್ರ ಬರೆದಿದ್ದಾರೆ ಎಂದು ಕೊಳ್ಳಬೇಡ. ಈ ಪತ್ರವನ್ನು ನೀನು ಬಹು ಮುಖ್ಯ ಎಂದು ಪರಿಗಣಿಸಲಿ ಎಂದೇ ನಿನಗೆ ಬರೆದಿರುವ ಪತ್ರವಿದು.
ಮುಂಜಾನೆ ಬೇಗನೆ ಏಳಬೇಕು, ನಿತ್ಯ ಕರ್ಮಗಳನ್ನು ಪೂರೈಸಿ ಸ್ನಾನ ತಿಂಡಿ ಸಮಯಕ್ಕೆ ಸರಿಯಾಗಿ ಮಾಡಬೇಕು. ಅಂದಂದಿನ ಹೋಂವರ್ಕ್ ಗಳನ್ನು ಅವತ್ತೇ ಮಾಡಬೇಕು ಮನೆಗೆ ಸರಿಯಾದ ಸಮಯಕ್ಕೆ ಮರಳಬೇಕು ಎಂದೆಲ್ಲ ನಾನು ನಿನ್ನ ಮೇಲೆ ಶಿಸ್ತನ್ನು ಹೇರುತ್ತಿರುವೆ ಎಂದು ನೀನು ಭಾವಿಸುತ್ತಿರುವೆ. ಆದರೆ ಬದುಕಿನಲ್ಲಿ ಶಿಸ್ತನ್ನು ರೂಢಿಸಿಕೊಂಡರೆ ಮುಂದಿನ ಬದುಕಿನಲ್ಲಿ ಪಶ್ಚಾತಾಪ ಪಡುವುದು ಬೇಕಾಗಿಲ್ಲ ಎಂಬ ಕಾರಣಕ್ಕಾಗಿ ನಿನಗೆ ಈ ಪತ್ರ.
ಈಗಾಗಲೇ ನಿನ್ನ ಮೂರು ಪಟ್ಟು ವಯಸ್ಸನ್ನು ಹೊಂದಿರುವ ನಾನು ಬದುಕಿನ ಏಳು ಬೀಳುಗಳನ್ನು ಅರಿತಿದ್ದೇನೆ. ಬೇರೆಯವರ ತಪ್ಪುಗಳು ನಮಗೆ ಪಾಠವಾಗ ಬೇಕೇ ಹೊರತು ಆ ತಪ್ಪುಗಳೆಲ್ಲವೂ ನಮ್ಮದೇ ಆಗಿ ಅವುಗಳಿಂದ ನಾವು ಪಾಠ ಕಲಿಯುವ ಹೊತ್ತಿಗೆ ಬದುಕು ಮುಗಿದು ಹೋಗುತ್ತದೆ.
ಪಶ್ಚಾತಾಪ ಪಡುವುದು ನಂತರದ ಮಾತು, ಆದರೆ ನಾವು ಬದುಕಿನಲ್ಲಿ ಅಳವಡಿಸಿಕೊಳ್ಳುವ ಶಿಸ್ತು ನಮ್ಮನ್ನು ಪಶ್ಚಾತ್ತಾಪಕ್ಕಿಂತ ಹೆಚ್ಚು ಸಮರ್ಥವಾಗಿ ರೂಪಿಸುತ್ತದೆ. ಶಿಸ್ತಿಗಿಂತ ಹೆಚ್ಚು ನಮ್ಮನ್ನು ನೋಯಿಸುವುದು ಪಶ್ಚಾತ್ತಾಪ. ಈ ಮಾತು ನಿನಗೆ ಈಗ ಅರ್ಥ ಆಗದಿದ್ದರೂ ನಿನ್ನ ಮುಂದಿನ ಬದುಕಿಗೆ ಇದು ದಾರಿದೀಪವಾಗುತ್ತದೆ ಎಂಬ ಆಶಯದಿಂದ ಈ ವಿಷಯವನ್ನು ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಬಹಳಷ್ಟು ಜನರು ಇಂತಹ ವಿಷಯಗಳನ್ನು ತುಂಬಾ ತಡವಾಗಿ ಅರ್ಥಮಾಡಿಕೊಳ್ಳುತ್ತಾರೆ ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ… ನಿಜ ನಿನಗೆ ನಾನು ತಿಳಿಸುವ ಎಲ್ಲಾ ಮಾತುಗಳು ಶಿಸ್ತು ಎಂಬಂತೆ ಭಾಸವಾಗಬಹುದು. ಆದರೂ ಈ ಮಾತುಗಳನ್ನು ಕೇಳಿಸಿಕೋ ಶಿಸ್ತು ಪಾಲನೆಯ ಅವಧಿ ತುಂಬಾ ಕಡಿಮೆ ಸಮಯದ್ದು ಆದರೆ ಪಶ್ಚಾತ್ತಾಪದ ಅವಧಿ ಬಹಳ ಸುದೀರ್ಘವಾಗಿರುತ್ತದೆ. ನೀನು ಕಷ್ಟಪಟ್ಟು ಓದಿ, ಆಟೋಟಗಳಲ್ಲಿ ಮುಂದೆ ಬಂದು ಒಂದು ಹಂತದ ಯಶಸ್ಸನ್ನು ಬದುಕಿನಲ್ಲಿ ಪಡೆದು ನಿನ್ನ ಹೆತ್ತವರಿಗೆ ಮತ್ತು ಕುಟುಂಬಕ್ಕೆ ಸಹಾಯ ಮಾಡಲು ಆರಂಭಿಸಿದಾಗ ನಿನ್ನ ಬದುಕು ಸಾರ್ಥಕ ಎಂಬ ಭಾವ ನಿನ್ನದಾಗುತ್ತದೆ. ಅಕಸ್ಮಾತ್ ಈ ಸಮಯದಲ್ಲಿ ನೀನು ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಂಡು ವೃಥಾ ಕಾಲಹರಣ, ಹರಟೆ, ಮೊಬೈಲ್ಗಳಲ್ಲಿ ನಿನ್ನ ಸಮಯವನ್ನು ಹಾಳು ಮಾಡಿಕೊಂಡರೆ ಮುಂದೆ ನಷ್ಟವಾಗುವುದು ನಿನಗೆ ಎಂಬುದು ನೆನಪಿರಲಿ. ಇಂದು ನಿನಗೆ ನೀನು ಮಾಡಿಕೊಳ್ಳುವ ಪುಟ್ಟ ಸಹಾಯ ನಿನ್ನ ಮುಂದಿನ ಬದುಕಿನ ಯಶಸ್ವಿಗೆ ಅತ್ಯುತ್ತಮ ಮೆಟ್ಟಿಲಾಗುತ್ತದೆ. ನಿನ್ನ ಕೆಟ್ಟ ಹವ್ಯಾಸಗಳು ಮುಂದಿನ ಬದುಕಿನಲ್ಲಿ ಪಶ್ಚಾತಾಪದ ವಿನ ಮತ್ತೇನನ್ನೂ ತರುವುದಿಲ್ಲ.

ಫೋಟೋ ಕೃಪೆ : google
ಬದುಕಿನಲ್ಲಿ ಕಠಿಣ ಪರಿಶ್ರಮ ಜೀವನವನ್ನು ಸುಧಾರಿಸುತ್ತದೆ ಎಂದು ನಾವು ಅಂದುಕೊಳ್ಳುತ್ತೇವೆ ಆದರೆ ಪ್ರತಿದಿನದ ನಿರಂತರ ಶ್ರಮ ಅದಕ್ಕಿಂತ ಹೆಚ್ಚು ಉಪಯುಕ್ತತೆಗಳನ್ನು ತಂದುಕೊಡುತ್ತದೆ.
ಹಣವನ್ನು ಎರ್ರಾಬಿರ್ರಿ ಖರ್ಚು ಮಾಡುವುದು ಸುಲಭ ಆದರೆ ಹಾಗೆ ಖರ್ಚು ಮಾಡಿದ ಹಣವನ್ನು ಮತ್ತೆ ಸಂಪಾದಿಸುವುದು ಬಲು ಕಷ್ಟದ ಕೆಲಸ. ಇರುವುದೊಂದೇ ಜೀವನ ಎಂಜಾಯ್ ಮಾಡು ಗುರೂ… ಎಂದು ಹೇಳಲಾದರೂ ಒಂದಷ್ಟು ನಿನ್ನದೇ ಆದ ಉಳಿತಾಯದ ಹಣ ನಿನ್ನ ಬಳಿ ಇರಲೇಬೇಕು ಅಲ್ಲವೇ. ಆದ್ದರಿಂದ ಇಂದಿನಿಂದಲೇ ನಿನಗೆ ನಾವು ಕೊಡುವ ಹಣದಲ್ಲಿ ಕೊಂಚ ಉಳಿತಾಯ ಮಾಡು . ಅದರಲ್ಲಿ ನಿನ್ನಿಷ್ಟದ ವಸ್ತುವನ್ನು ಖರೀದಿಸು. ಹಾಗೆ ನಿನ್ನದೇ ಸ್ವಯಂ ಉಳಿತಾಯದ ಹಣದಿಂದ ಖರೀದಿಸಿದ ವಸ್ತುವಿನ ಮೌಲ್ಯ ನೂರು ಪಟ್ಟು ಹೆಚ್ಚಾಗುವುದು ಮತ್ತು ನಿನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡುವುದು. ಮುಂದಿನ ಬದುಕಿಗಾಗಿ ಕೊಂಚ ಹಣವನ್ನು ಉಳಿತಾಯ ಮಾಡುವುದು ಕೂಡ ನಮ್ಮ ಜವಾಬ್ದಾರಿ ಹಾಗೆ ಜವಾಬ್ದಾರಿಯುತವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ ನಮಗೆ ಗೌರವ ದೊರೆಯುತ್ತದೆ. ಯಾರಾದರೂ ತಮ್ಮ ಬಳಿ ಇರುವ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಹೆಚ್ಚಿನ ಅವಶ್ಯಕತೆ ಬಿದ್ದಾಗ ಹಣವನ್ನು ಸಾಲ ಕೇಳುವಾಗ ಅವರ ಮುಖದಲ್ಲಿನ ದೈನೇಸಿತನ ನಮಗೆ ಜಿಗುಪ್ಸೆ ಹುಟ್ಟಿಸುತ್ತದೆ. ಇರುವಾಗ ಉಳಿಸಿಕೊಳ್ಳದೆ ಈಗ ಹಣಕ್ಕಾಗಿ ಬೆನ್ನು ಬೀಳುತ್ತಾರೆ ಎಂಬ ಗೊಣಗುವಿಕೆಯನ್ನು ನೀನು ಕೇಳಿಯೇ ಇರುತ್ತೀ. ಆಗ ಸುತ್ತಲೂ ಹತ್ತು ಜನರಿದ್ದರೂ ಕೂಡ ಆತ ಒಬ್ಬಂಟಿಯಾಗಿ ಭಾಸವಾಗುತ್ತಾನೆ..ಅದು ಆತನ ಸ್ವಯಂಕೃತ ಅಪರಾಧ.
ಶಿಸ್ತು ನಿನ್ನನ್ನು ಮಾನಸಿಕವಾಗಿ ಬಲಿಷ್ಠನನ್ನಾಗಿಸಿದರೆ ಪಶ್ಚಾತಾಪ ನಿನ್ನನ್ನು ದುಃಖಕ್ಕೆ ಈಡು ಮಾಡುತ್ತದೆ. ಪ್ರತಿ ಬಾರಿಯೂ ಸರಿಯಾದ ಮಾರ್ಗವನ್ನು ನೀನು ಆಯ್ದುಕೊಂಡರೆ ಅದು ಖುದ್ದು ನಿನಗೆ ನೀನು ಮಾಡಿಕೊಳ್ಳುವ ಮಹದುಪಕಾರವಾಗುತ್ತದೆ. ನಿನ್ನ ಪಾಲಕರ ನೆಮ್ಮದಿಗೆ ಕಾರಣವಾಗುತ್ತದೆ. ಇಂದು ನಾನು ಹೇಳುವ ಮಾತುಗಳು ನಿನಗೆ ಕಠಿಣವೆಂದು ತೋರಿದರೂ ಪರವಾಗಿಲ್ಲ ನಿನ್ನ ಮುಂದಿನ ಬದುಕಿಗೆ ಅವು ಭರವಸೆಯ ಸಾಲು ದೀಪಗಳಾಗಿ ನಿನ್ನ ಬದುಕನ್ನು ಬೆಳಗುತ್ತವೆ ಎಂಬ ವಿಶ್ವಾಸ ನನಗಿದೆ.
ಒಂದು ಒಳ್ಳೆಯ ಓದು, ಪಾಲಕರಿಗೆ ಅನುಕೂಲವಾಗುವಂತಹ ಒಳ್ಳೆಯ ಕೆಲಸಗಳು ದೈನಂದಿನ ಬದುಕಿನಲ್ಲಿ ನೀನು ಅಳವಡಿಸಿಕೊಳ್ಳುವ ಶಿಸ್ತುಬದ್ಧ ನಡವಳಿಕೆ ನಿನ್ನ ಬದುಕಿಗೆ ಉತ್ತಮ ಮಾರ್ಗದರ್ಶನವನ್ನು ಸೂಚಿಸುತ್ತದೆ. ಆರಂಭದಲ್ಲಿ ಪಶ್ಚಾತ್ತಾಪ ಪಡುವುದು ಅಷ್ಟೇನೂ ಭಾರವೆನ್ನಿಸುವುದಿಲ್ಲ ನಿಜ, ಆದರೆ ನಂತರದ ದಿನಗಳಲ್ಲಿ ಅದು ನಿನ್ನನ್ನು ಕುಸಿಯುವಂತೆ ಮಾಡುತ್ತದೆ.
ಅತ್ಯಂತ ಶಿಸ್ತಿನಿಂದ ತನ್ನ ಬದುಕನ್ನು ರೂಪಿಸಿಕೊಂಡ ವ್ಯಕ್ತಿ ಜನರ ಗೌರವಕ್ಕೆ ಪಾತ್ರರಾಗುತ್ತಾರೆ. ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತಾರಷ್ಟೇ ಅಲ್ಲ… ಬದುಕು ಕೂಡ ಅವರನ್ನು ಗೌರವಿಸುತ್ತದೆ.
ವೃಥಾ ಕಾಲಹರಣ ಮಾಡುವವರನ್ನು ಸದಾ ಏನಾದರೂ ಒಂದು ನೆವ ಹೇಳಿ ತಪ್ಪಿಸಿಕೊಳ್ಳುವವರನ್ನು ಸಮಾಜ ಗೌರವಿಸುವುದಿಲ್ಲ. ಯಾರು ಉತ್ತಮವಾಗಿ ಕಾರ್ಯನಿರ್ವಹಿಸಿ ತಾವು ಕೊಟ್ಟ ಮಾತಿಗೆ ತಕ್ಕನಾಗಿ ನಡೆದುಕೊಳ್ಳುತ್ತಾರೋ ಅವರು ಸಾಮಾಜಿಕ ಮನ್ನಣೆಗೆ ಪಾತ್ರರಾಗುತ್ತಾರೆ. ಅವರ ಪಾಲಕರು, ಸಂಬಂಧಿಗಳು, ಶಿಕ್ಷಕರು ಮತ್ತು ಕುಟುಂಬದ ಎಲ್ಲರ ಪ್ರೀತಿ ಮತ್ತು ವಿಶ್ವಾಸಗಳಿಗೆ ಅವರು ಪಾತ್ರರಾಗುತ್ತಾರೆ.
ಪಶ್ಚಾತಾಪ ಎಂಬುದು ಬದುಕು ಎಂಬ ಬಲಿಷ್ಠ ಮರವನ್ನು ಕೂಡ ಆಂತರಿಕವಾಗಿ ನಿರಂತರ ಕೊರೆಯುವ ಗೆದ್ದಲಿನಂತೆ. ಬದುಕನ್ನು ಟೊಳ್ಳಾಗಿಸುತ್ತದೆ.
ಖುದ್ದು ತನ್ನ ಬದುಕಿನಲ್ಲಿ ಅರ್ಥಪೂರ್ಣ ಕೆಲಸಗಳನ್ನು ಕೈಗೊಳ್ಳದ ವ್ಯಕ್ತಿ ದೈಹಿಕವಾಗಿ ಆರ್ಥಿಕವಾಗಿ ಮಾನಸಿಕವಾಗಿ ಅಪರಿಪೂರ್ಣತೆಯನ್ನು ಹೊಂದಿದವನಾಗಿ ಭಾಸವಾಗುತ್ತಾನೆ. ಬೇರೆಯವರು ಮಾಡಿದ ಅರ್ಥಪೂರ್ಣ ಕೆಲಸಗಳು, ಅವರ ಯಶಸ್ಸು, ಅವರ ಕಾರ್ಯವೈಖರಿಯನ್ನು,ಯಶಸ್ವಿ ವ್ಯಕ್ತಿಗಳನ್ನು ಕಂಡಾಗ ಅವರು ಕೀಳರಿಮೆಯಿಂದ ಬಳಲುತ್ತಾರೆ ಈತನ ಪಾಲಿಗೆ ತಮಾಷೆಯ ವಸ್ತುವಾಗುತ್ತಾರೆ…. ಆತನ ಮಾತನ್ನು ಯಾರೂ ನಂಬುವುದಿಲ್ಲ ಇಲ್ಲವೇ ಪುರಸ್ಕರಿಸುವುದಿಲ್ಲ….ಆ ಮಾತು ಬೇರೆ, ಆದರೆ ಇಂತಹವರು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಸಾಂಕ್ರಾಮಿಕವಾದ ಮಾನಸಿಕತೆಯನ್ನು ಹರಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. .
ಇದಕ್ಕಿಂತ ಚೆನ್ನಾಗಿ ನಾನು ಕಾರ್ಯನಿರ್ವಹಿಸಬಹುದಿತ್ತು. ಆದರೆ ನನ್ನದೇ ವಿಸ್ಮತಿಯಿಂದ ಮಾಡಲು ಸಾಧ್ಯವಾಗಲಿಲ್ಲ ಎಂಬ ನೋವು ಎಲ್ಲಕ್ಕಿಂತ ಹೆಚ್ಚು ನೋವಿಗೆ ಕಾರಣ ವಾಗುತ್ತದೆ. ನಮ್ಮೆಲ್ಲರ ಬದುಕಿನಲ್ಲಿ ಒಂದಷ್ಟು ನೋವಿದೆ. ಶಿಸ್ತಿನ ನೋವಾಗಲಿ ಪಶ್ಚಾತ್ತಾಪವೇ ಇರಲಿ. ಮೊದಲನೆಯದು ನಮ್ಮನ್ನು ಬಲಿಷ್ಠರನ್ನಾಗಿಸಿದರೆ ನಂತರದ್ದು ನಮ್ಮನ್ನು ಶಾಶ್ವತವಾಗಿ ದುಃಖಿಗಳನ್ನಾಗಿಸುತ್ತದೆ.
ಆದ್ದರಿಂದ ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೋ. ನಿನಗೆ ಈಗ ಕಠಿಣ ಎನಿಸಿದರೂ ನಿನ್ನ ಮುಂದಿನ ಬದುಕಿನಲ್ಲಿ ಆ ಶಿಸ್ತು ನಿನ್ನನ್ನು ಯಶಸ್ಸಿನ ತುತ್ತ ತುದಿಗೆ ಕರೆದೊಯ್ಯುತ್ತದೆ ಎಂಬ ನಂಬಿಕೆ ನನ್ನದು. ನಿನ್ನ ಸಂತಸ ಮತ್ತು ಯಶಸ್ಸನ್ನು ಬಯಸುವ ನಿನ್ನ ಅಪ್ಪ.
ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ
