ಪದ್ಮಭೂಷಣ ಎಸ್ ಎಲ್ ಭೈರಪ್ಪನವರ ಕೃತಿಗಳಾದ ತಬ್ಬಲಿಯು ನೀನಾದೆ ಮಗನೇ, ಪರ್ವ, ಸಾರ್ಥ ಮತ್ತು ವಂಶವೃಕ್ಷ ಗಳು ಅಪಾರ ಜನ ಮೆಚ್ಚುಗೆಯನ್ನು ಗಳಿಸಿತ್ತು, ಇವರ ಬಹುತೇಕ ಕೃತಿಗಳು ಭಾರತೀಯ ತತ್ವಶಾಸ್ತ್ರದ ತಳಹದಿಯ ಮೇಲೆ ರೂಪಗೊಂಡಿದೆ. ಅವರಿಗೆ ಅಕ್ಷರನಮನ, ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ ಕುರಿತು ಇಂದಿನ ಅಂಕಣದಲ್ಲಿ, ತಪ್ಪದೆ ಮುಂದೆ ಓದಿ…
ಕನ್ನಡ ಭಾಷೆಯ ಅತಿ ಹೆಚ್ಚು ಮಾರಾಟವಾಗುವ ಕಾದಂಬರಿಗಳ ಕರ್ತೃ, ವೈವಿಧ್ಯಮಯ ವಿಷಯಗಳ ಕುರಿತು ಸಂಶೋಧನಾತ್ಮಕವಾಗಿ ಬರೆದ ನವ್ಯ ನವೋದಯ, ಬಂಡಾಯ, ದಲಿತ ಎಂಬ ಯಾವುದೇ ರೀತಿಯ ವಿಭಿನ್ನ ಸಾಹಿತ್ಯಕ ಹಣೆಪಟ್ಟಿಗೆ ಒಳಗಾಗದೆ ತಮ್ಮದೇ ಆದ ವಿಶೇಷ ಓದುಗ ವರ್ಗವನ್ನು ಸೃಷ್ಟಿಸಿಕೊಂಡ ಭೈರಪ್ಪನವರು ಬಾರದ ಲೋಕಕ್ಕೆ ತೆರಳಿದ್ದಾರೆ ಎಂಬ ವಿಷಯ ಅರಗಿಸಿಕೊಳ್ಳಲು ತುಸು ಕಹಿಯಾದರೂ ಅನಿವಾರ್ಯವಾಗಿ ವಿದಾಯ ಕೋರ ಬೇಕಾಗಿದೆ.
ಅಂದಿನ ಮೈಸೂರು ರಾಜ್ಯದ ಹಾಸನ ಜಿಲ್ಲೆಯ ಸಂತೇ ಶಿವರ ಗ್ರಾಮದ ಸಂತೆಶಿವರ ಲಿಂಗಪ್ಪಯ್ಯ ಭೈರಪ್ಪ ಎಂಬ ಹೆಸರಿನಲ್ಲಿ ಓದುಗರಿಗೆಲ್ಲ ಎಸ್ ಎಲ್ ಭೈರಪ್ಪ ಎಂದೆ ಪರಿಚಿತರಾದ ಇವರು ಹುಟ್ಟಿದ್ದು ಅದೇ ಗ್ರಾಮದಲ್ಲಿ. ತಂದೆ ಲಿಂಗಣ್ಣಯ್ಯ. ತಾಯಿಯನ್ನು ಮತ್ತು ಸಹೋದರರನ್ನು ಭೀಕರವಾದ ಪ್ಲೇಗ್ ರೋಗ ಬಲಿ ತೆಗೆದುಕೊಂಡಿತ್ತು.

ಬಡತನದ ಕಾರಣದಿಂದಾಗಿ ಅನಿವಾರ್ಯವಾಗಿ ವಿವಿಧ ಬಗೆಯ ವೃತ್ತಿಗಳನ್ನು ನಿರ್ವಹಿಸಿದ ಭೈರಪ್ಪನವರು ಮುಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿಗಳತ್ತ ಆಕರ್ಷಿತರಾದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿಗೆ ಹತ್ತಿರದ ಚನ್ನರಾಯಪಟ್ಟಣದಲ್ಲಿ ಪಡೆದ ಭೈರಪ್ಪನವರು ಮುಂದಿನ ಶಿಕ್ಷಣಕ್ಕಾಗಿ ಮೈಸೂರನ್ನು ಸೇರಿದರು. ಹೈಸ್ಕೂಲು ಶಿಕ್ಷಣದ ಸಮಯದಲ್ಲಿ ಸಂಬಂಧಿಯೊಬ್ಬರ ಮಾತಿಗೆ ಕಟ್ಟು ಬಿದ್ದು ಒಂದು ವರ್ಷ ಕಾಲ ಶಿಕ್ಷಣದಿಂದ ಕೊಂಚ ವಿರಾಮ ಪಡೆದುಕೊಂಡ ಅವರು ತನ್ನ ಸಂಬಂಧಿಯೊಂದಿಗೆ ಮುಂಬೈಯನ್ನು ಸೇರಿ ಅಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿದರು. ಅಲ್ಲಿಗೆ ಬಂದ ಸಾಧುಗಳ ಜೊತೆ ಸೇರಿ ಉತ್ತರ ಭಾರತದೆಡೆಗೆ ಪಯಣ ಬೆಳೆಸಿದ ಅವರು ಅಲ್ಲಿನ ಜೀವನದ ಪರಿಚಯ ಪಡೆದು ನಂತರ ಮರಳಿ ಮೈಸೂರಿಗೆ ಬಂದರು. ನಂತರ ತಮ್ಮ ಉಳಿದೆಲ್ಲ ಶಿಕ್ಷಣವನ್ನು ಮೈಸೂರಿನಲ್ಲಿಯೇ ಪೂರೈಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎ ಆನರ್ಸ ಪದವಿಯನ್ನು ಪೂರೈಸಿದ ಅವರು ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮುಂದೆ ಮಹಾರಾಜ ಸಯ್ಯಾಜಿ ರಾವ್ ಗಾಯಕವಾಡ್ ಅವರ ಕುರಿತಾದ ಸತ್ಯ ಮತ್ತು ಸೌಂದರ್ಯ ಎಂಬ ಕೃತಿಯ ಮೇಲೆ ಪಿ ಹೆಚ್ ಡಿ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಸಂಪಾದಿಸಿದರು.
ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಲ್ಲಿ, ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಮತ್ತು ದೆಹಲಿಯ ಎನ್ ಸಿ ಈ ಆರ್ ಟಿ ಗಳಲ್ಲಿ ಅವರು ಕಾರ್ಯನಿರ್ವಹಿಸಿದರು. ಅಂತಿಮವಾಗಿ ಮೈಸೂರಿನಲ್ಲಿ 1991ರಲ್ಲಿ ಅವರು ಸ್ಥಳೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.
1958 ರಲ್ಲಿ ‘ಭೀಮಕಾಯ’ ಎಂಬ ಅವರ ಮೊದಲ ಕೃತಿ ಬರೆದರಾದರೂ ಮುಂದೆ ಅದು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಕುಸ್ತಿಯಲ್ಲಿ ಆಸಕ್ತಿ ವಹಿಸಿದ ಯುವಕ ತನ್ನ ವೈಯುಕ್ತಿಕ ಮತ್ತು ಹರೆಯದ ಹುಮ್ಮಸ್ಸಿನ ತೆವಲುಗಳಿಗೆ ಬಲಿಯಾಗಿ ಮತ್ತೆ ಮೇಲೇಳುವ ಈ ಕೃತಿ ಕುಸ್ತಿಪಟುಗಳಿಗೆ ಇರಬೇಕಾದ ದೈಹಿಕ ಸಾಮರ್ಥ್ಯದ ಜೊತೆಗೆ ಸಂಯಮ, ಶಿಸ್ತು ಮತ್ತು ನಿರಂತರ ಕಲಿಕೆಯ ಕುರಿತ ಈ ಕಾದಂಬರಿ ಸಾಧಕರಿಗೆ ಮಾರ್ಗದರ್ಶಿಯಾಗಿತ್ತು.

ತಬ್ಬಲಿಯು ನೀನಾದೆ ಮಗನೇ, ವಂಶವೃಕ್ಷ, ಮತದಾನ, ನಾಯಿ ನೆರಳು ಮುಂತಾದ ಕೃತಿಗಳು ಚಲನಚಿತ್ರಗಳಾಗಿ ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. 1958 ರಿಂದ ಆರಂಭವಾದ ಅವರ ಸಾಹಿತ್ಯ ಕೃಷಿಯ ಪಯಣ ಅವರ ಜೀವಿತದ ಕೊನೆಯವರೆಗೂ ಸಾಗಿತ್ತು.
ವಂಶವೃಕ್ಷ ಕಾದಂಬರಿಯು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದರೆ, ಅವರ ದಾಟು ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೆರಡನ್ನು ಗಳಿಸಿತು. ಭಾರತೀಯ ಕಾವ್ಯ ಪರಂಪರೆಯ ಮಹಾಭಾರತದ ಕುರಿತಾದ ಮೌಲಿಕ ತತ್ವಗಳು, ಅಂದಿನ ಸಾಮಾಜಿಕ ಸಂರಚನೆ ಮತ್ತು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿದ ಅವರ ಪರ್ವ ಕೃತಿಯು ಅತಿ ಹೆಚ್ಚು ಓದುಗರನ್ನು ಅವರಿಗೆ ಗಳಿಸಿಕೊಟ್ಟಿತು ಎಂದರೆ ತಪ್ಪಿಲ್ಲ. ಈ ಕೃತಿಗಳನ್ನು ಕಟ್ಟಿಕೊಡುವಲ್ಲಿ ಅವರ ಸಂಶೋಧನೆ ಅಪಾರ. ಅಂದಿನ ಸಾಮಾಜಿಕ ಸಂರಕ್ಷಣೆಯ ಜೊತೆ ಜೊತೆಗೆ ಪ್ರಾಚೀನ ಅವಶೇಷಗಳ ಕುರಿತಾದ ಅಧ್ಯಯನದ ಮೂಲಕ ಅವರು ಅತ್ಯಂತ ಗಟ್ಟಿಮುಟ್ಟಾದ ಕಥನವನ್ನು ಕಟ್ಟಿಕೊಟ್ಟರು.
ಮಾನವೀಯ ಸಂವೇದನೆಗಳನ್ನು ಹೊರವಾಗುವ ತಂತು ಎಂಬ ಅವರ ಕಾದಂಬರಿ ಕೂಡ ಅಷ್ಟೇ ಮೆಚ್ಚುಗೆಯನ್ನು ಗಳಿಸಿತು. ‘ಸಾರ್ಥ’ ಎಂಬ ಕಾದಂಬರಿಯಲ್ಲಿ ಹಲವಾರು ಶತಮಾನಗಳ ಹಿಂದಿನ ಜನಜೀವನ, ವ್ಯಾಪಾರದ ಉದ್ದೇಶಕ್ಕಾಗಿ ದಕ್ಷಿಣ ಭಾರತದಿಂದ ಉತ್ತರ ಭಾರತದಡೆಗೆ ಪಯಣ ಬೆಳೆಸುವ ಸಾರ್ಥದ ತಂಡದೊಳಗೆ ಒಬ್ಬನಾಗಿ ಪಯಣ ಬೆಳೆಸುವ ಓರ್ವ ಬ್ರಾಹ್ಮಣ ವ್ಯಕ್ತಿ ಮುಂದೆ ಮಾಂತ್ರಿಕನಾಗಿ ತನ್ನ ಬದುಕನ್ನು ನಡೆಸುವ ನಿಟ್ಟಿನಲ್ಲಿ ಬದಲಾಗುವ ಮತ್ತು ಆ ನಿಗೂಢ ಜಗತ್ತಿನ ಸತ್ಯಗಳನ್ನು ಅರಿಯುವ ಅಂತಿಮವಾಗಿ ಅದರಿಂದ ಬೇರ್ಪಟ್ಟು ತನ್ನೂರಿಗೆ ಮರಳುವ ಆಶಯವನ್ನು ಹೊಂದುವ ಈ ಕಥಾನಕವು ಸಾರ್ಥ( ಸಾರ್ಥ ಎಂದರೆ ದೊಡ್ಡ ತಂಡ ಎಂದರ್ಥ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವ್ಯಾಪಾರೋದ್ದೇಶಕ್ಕಾಗಿ ತಂಡವಾಗಿ ಹೊರಡುವ ಸಾವಿರಾರು ಜನರ ಗುಂಪು. ಇದರಲ್ಲಿ ದೊಡ್ಡ ದೊಡ್ಡ ಚಿನ್ನ ಮುತ್ತು ರತ್ನದ ವ್ಯಾಪಾರಿ ಗಳಿಂದ ಹಿಡಿದು ಸಣ್ಣಪುಟ್ಟ ವ್ಯಾಪಾರಿಗಳವರೆಗೆ, ಜ್ಞಾನಾರ್ಜನೆಗೆ ಹೊರಡುವ ಬ್ರಾಹ್ಮಣ ವಟುಗಳು ಇವರೆಲ್ಲರಿಗೂ ಸಹಾಯ ಮಾಡುವ ಸೈನಿಕರು ಮತ್ತು ಕಾಲಾಳುಗಳು ಹೀಗೆ ಸಾವಿರಾರು ಜನರ ಗುಂಪು ಅವರ ಪ್ರತ್ಯೇಕತಾವಾದ, ಜಾತಿ ಮತ ಪಂಥಗಳ ಆಧಾರದಲ್ಲಿ ಆಹಾರ ತಯಾರಿಕೆ ಇವೆಲ್ಲವುಗಳ ಮೇಲೆ ಬೆಳಕನ್ನು ಚೆಲ್ಲುವ ಕಾದಂಬರಿ)ದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ.
ಅತ್ಯಂತ ವಿವಾದಕ್ಕೀಡಾದ ‘ಯಾನ’ ಎಂಬ ಇವರ ಕೃತಿಯಲ್ಲಿ ಅನ್ಯಗ್ರಹಕ್ಕೆ ಪಯಣ ಬೆಳೆಸುವ ಒಡಹುಟ್ಟಿದವರ ಕುರಿತಾದ ಕಥಾನಕ ನಮ್ಮ ನೈತಿಕ ಚಿಂತನೆಗಳನ್ನು ಒರೆಗೆ ಹಚ್ಚುತ್ತದೆ. ಸಾಂಪ್ರದಾಯಿಕ ಮೌಲ್ಯಗಳಿಂದ ತುಸು ಭಿನ್ನವಾಗಿರುವ ಅರಗಿಸಿಕೊಳ್ಳಲು ಸಾಧ್ಯವಾಗದ ಆದರೆ ಮುಂದೆ ಒಂದು ದಿನ ಸಂಭವಿಸಬಹುದಾದ ತಲ್ಲಣದ ಕುರಿತು ಬರೆದಿರುವ ಈ ಕೃತಿ ಎಸ್ ಎಲ್ ಭೈರಪ್ಪನವರ ಗಟ್ಟಿ ಗುಂಡಿಗೆಯ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ.
2017ರಲ್ಲಿ ಇವರು ಉತ್ತರ ಕಾಂಡ ಎಂಬ ಹೆಸರಿನಲ್ಲಿ ರಾಮಾಯಣ ಮಹಾಕಾವ್ಯದ ಕುರಿತಾದ ಕಾದಂಬರಿಯನ್ನು ಬರೆದಿದ್ದಾರೆ. 2021 ರಲ್ಲಿ ಇವರು ಬರೆದ ಎರಡನೆಯ ಕಾದಂಬರಿ ‘ಬೆಳಕು ಮೂಡಿತು’ ಕೃತಿಯು ಅವರು ಬರೆದ ಸುಮಾರು 62 ವರ್ಷಗಳ ನಂತರ ಪ್ರಕಟಗೊಂಡಿದೆ. ಒಟ್ಟು 25ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿರುವ ಭೈರಪ್ಪನವರ ಎಲ್ಲ ಕಾದಂಬರಿಗಳು ಓದುಗರಲ್ಲಿ ಸಂಚಲನವನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ.
ಭಾರತದ ಹಲವಾರು ಭಾಷೆಗಳಿಗೆ ಅನುವಾದ ವಾಗಿರುವ ಇವರ ಕೃತಿಗಳು ಇಂಗ್ಲಿಷಿಗೆ ಕೂಡ ಖ್ಯಾತ ಲೇಖಕರಾದ ಆರ್ ರಂಗನಾಥ್ ಅವರ ಅನುವಾದದಲ್ಲಿ ನಿಯೋಗಿ ಬುಕ್ಸ್ ನವರಿಂದ ಪ್ರಕಟಗೊಂಡಿವೆ. ಭಾಷಾಂತರವಾಗಿರುವ ತಮ್ಮ ಕೃತಿಗಳ ಮೂಲಕ ಎಸ ಎಲ್ ಭೈರಪ್ಪನವರು ಜಾಗತಿಕ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದಾರೆ.
ಅವರ ಕಾದಂಬರಿಗಳಲ್ಲಿ ಬರುವ ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಗಳು ಪ್ರೇಮ ಕಾಮ ದೈಹಿಕ ಪರಿಭಾಷೆಗಳ ಕುರಿತಾದ ಹಸಿ ಹಸಿಯಾದ ಚಿತ್ರಣ ವೈಯುಕ್ತಿಕವಾಗಿ ನನ್ನಂತಹ ಮತ್ತು ಸಾಂಪ್ರದಾಯಿಕ ಮನಸ್ಥಿತಿಯ ಓದುಗರಲ್ಲಿ ರೇಜಿಗೆಯನ್ನು ಉಂಟುಮಾಡಿದರೂ ಕೂಡ ಬದುಕಿನ ವಾಸ್ತವಿಕತೆಗೆ ಕೈಗನ್ನಡಿ ಹಿಡಿದಂತಿರುವ ಅವರ ಕೃತಿಗಳು ಓದಿಸಿಕೊಂಡು ಹೋಗುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ.
ಅತ್ಯಂತ ಹೆಚ್ಚು ಮಾರಾಟವಾಗುವ ಕೃತಿಗಳನ್ನು ಬರೆದಿರುವ ಖ್ಯಾತಿ ಕಳೆದ 25 ವರ್ಷಗಳಿಂದ ಎಸ್ ಎಲ್ ಭೈರಪ್ಪನವರ ಖಾತೆಯಲ್ಲಿದೆ. ಕಳೆದ ಒಂದು ದಶಕದಿಂದ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲದೆ ಇಂಗ್ಲಿಷ್ ಭಾಷೆಯಲ್ಲಿಯೂ ಅತಿ ಹೆಚ್ಚು ಮಾರಾಟವಾಗುವ ಕೃತಿಗಳ ರಚನೆ ಇವರ ಹೆಸರಿನಲ್ಲಿದೆ. ಹತ್ತು ಹಲವಾರು ಸಂಸ್ಕೃತದ ಕೃತಿಗಳನ್ನು ಕೂಡ ಭಾಷಾಂತರ ಮಾಡಿರುವ ಹೆಗ್ಗಳಿಕೆ ಭೈರಪ್ಪನವರದು.
ಭಾರತೀಯ ತತ್ವಶಾಸ್ತ್ರದ ತಳಹದಿಯ ಮೇಲೆ ರೂಪುಗೊಂಡಿರುವ ಇವರ ಕೃತಿಗಳಾದ ತಬ್ಬಲಿಯು ನೀನಾದೆ ಮಗನೇ, ಪರ್ವ, ಸಾರ್ಥ ಮತ್ತು ವಂಶವೃಕ್ಷ ಗಳು ಅಪಾರ ಜನ ಮೆಚ್ಚುಗೆಯನ್ನು ಗಳಿಸಿದರೂ ಹಲವಾರು ವಿವಾದಗಳಿಗೆ ಈಡಾಗಿದ್ದವು.

1996ರಲ್ಲಿ ಇವರ ವ್ಯಕ್ತಿ ಎಂಬ ಆತ್ಮ ಕಥನವು ಪ್ರಕಟವಾಗಿದ್ದು ತಮ್ಮ ಜೀವಿತದ ಕೊನೆಯವರೆಗೂ ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಭೈರಪ್ಪನವರು ವಯೋ ಸಹಜ ಕಾರಣಗಳಿಂದಾಗಿ ತಮ್ಮ 94ನೇ ವಯಸ್ಸಿನಲ್ಲಿ ಮೃತರಾಗಿದ್ದಾರೆ.
ಪದ್ಮಭೂಷಣ, ಪದ್ಮಶ್ರೀ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಇವರಿಗೆ ಸಂದಿದ್ದು, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಕೂಡ ಇವರ ಮುಕುಟವನ್ನು ಸೇರಿವೆ. ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಆಗಿ ಕೂಡ ಇವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಶಸ್ತಿಗಳ ಮಿತಿಯನ್ನು ಮೀರಿ ಬೆಳೆದ ಲೇಖಕ ಬಹುಶಹ ಎಸ್ ಎಲ್ ಭೈರಪ್ಪ ಅವರೇ ಇರಬೇಕು ಎಂದು ಅವರ ಕೃತಿಗಳ ವಿಮರ್ಶಕರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಎಸ್ ಎಲ್ ಭೈರಪ್ಪ ಅವರ ಸಾಹಿತ್ಯ ಕೃಷಿ ನಿರಂತರವಾಗಿ ನಡೆದಿದ್ದು ಇದೀಗ ಅವರ ಲೇಖನಿಗೆ ವಿರಾಮ ದೊರೆತಿದೆ.
ತಮ್ಮ ಕೃತಿಗಳ ಮೂಲಕ ಅತಿಹೆಚ್ಚಿನ ಪ್ರಮಾಣದಲ್ಲಿ ಜನರ ಮೆಚ್ಚುಗೆ, ಅಭಿಮಾನಗಳ ಜೊತೆ ಜೊತೆಗೆ ಅಸಹನೆ ಮತ್ತು ವಿರೋಧಗಳಿಗೆ ಪಾತ್ರರಾಗಿದ್ದ ಎಸ್ ಎಲ್ ಭೈರಪ್ಪನವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ ನಮ್ಮ ನೆನಪಿನ ಭಿತ್ತಿಗಳಲ್ಲಿ ಅಜರಾಮರರಾಗಿರುತ್ತಾರೆ, ಅವರ ಆತ್ಮಕ್ಕೆ ಶಾಂತಿಯನ್ನು ಕೋರುವ…
ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
