ಬದುಕಿಗೊಂದು ಸೆಲೆ (ಭಾಗ-೪೩)

21-22 ರ ಹೊತ್ತಿಗೆ ಆರಂಕಿಯ ಸಂಬಳವನ್ನು ಪಡೆಯುವ ಬಹುತೇಕ ಯುವ ಜನತೆ ಪ್ರಾರಂಭದಲ್ಲಿ ಹಣಕಾಸನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗೊಂದಲಕ್ಕೊಳಗಾಗುವುದು ಸಹಜ. ವೀಣಾ ಹೇಮಂತ್ ಗೌಡ ಪಾಟೀಲ್ ಅಂಕಣದಲ್ಲಿ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’, ತಪ್ಪದೆ ಮುಂದೆ ಓದಿ…

ಈ ಹಿಂದೆ ತಂದೆಯ ಹಾದಿಯಲ್ಲಿ ಸಾಗುವ ಮಕ್ಕಳು ಕುಟುಂಬದ ಕುಲಕಸುಬನ್ನು ಮಾಡುತ್ತಿದ್ದರು. ಪಾಲಕರೊಂದಿಗೆ ಇದ್ದು ಅವರ ನುರಿತ ಮೇಲ್ವಿಚಾರಣೆಯಲ್ಲಿ ಪಾರಂಪರಿಕವಾಗಿ ಬಂದ ತಮ್ಮ ಕುಲಕಸುಬಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಿರಿಯರಿಂದ ಬಂದ ಆಸ್ತಿಪಾಸ್ತಿಗಳನ್ನು ನಿರ್ವಹಿಸುತ್ತಾ ಎಲ್ಲ ರೀತಿಯ ಹಬ್ಬ-ಹರಿದಿನ, ಜಾತ್ರೆ, ಉತ್ಸವಗಳನ್ನು ವಿದ್ಯುಕ್ತವಾಗಿ ಪಾಲ್ಗೊಳ್ಳುತ್ತಾ ತಮ್ಮ ಕುಟುಂಬವನ್ನು ಬೆಳೆಸುತ್ತಿದ್ದರು. ಇರುವುದರಲ್ಲಿಯೇ ನೆಮ್ಮದಿಯ ಹಾಗೂ ಸಂತೃಪ್ತಿಯ ಬದುಕು ಅವರದಾಗಿತ್ತು. ಕುಟುಂಬದಲ್ಲಿ ಎಲ್ಲರೂ ದುಡಿಯುತ್ತಿದ್ದುದರಿಂದ ಅದು ಕುಟುಂಬದ ಒಟ್ಟು ಆದಾಯವಾಗಿ ಮನೆಯ ಎಲ್ಲಾ ಖರ್ಚು ವೆಚ್ಚಗಳನ್ನು ಪಾಲಕರಿಗೆ ತೀರ ವಯಸ್ಸಾದ ಹಂತದಲ್ಲಿ ಅವರ ಮಾರ್ಗದರ್ಶನದಲ್ಲಿ ಮಕ್ಕಳೇ ಎಲ್ಲವನ್ನು ನಿರ್ವಹಿಸುತ್ತಿದ್ದರು.

ನಂತರ ಬಂದ ತಲೆಮಾರಿನ ಜನರಲ್ಲಿ ಕೆಲ ಜನರು ಓದಿ ಸರ್ಕಾರದ ಇಲ್ಲವೇ ಖಾಸಗಿ ಉದ್ಯೋಗಗಳನ್ನು ಅರಸಿ ತಮಗೆ ಕೆಲಸ ದೊರೆತ ಕಡೆ ತಮ್ಮ ವಲಸೆಯನ್ನು ಬದಲಿಸುತ್ತಾ ನಂತರ ಮದುವೆ, ಮಕ್ಕಳು, ಸಂಸಾರ ಎಂದು ತೊಡಗಿಕೊಳ್ಳುತ್ತಾ ಅಂತಿಮವಾಗಿ ನಿವೃತ್ತಿಯ ಸಮಯಕ್ಕೆ ತಮ್ಮ ಸ್ವಂತ ಊರಿನಲ್ಲಿ ಇಲ್ಲವೇ ಹತ್ತಿರದ ಶಹರದಲ್ಲಿ ಒಂದು ಮನೆಯನ್ನು ಕಟ್ಟಿಕೊಂಡು ನೆಲೆಸುತ್ತಿದ್ದರು. ವರ್ಷಕ್ಕೊಮ್ಮೆ ಬರುವ ದೊಡ್ಡ ಹಬ್ಬ, ಜಾತ್ರೆ, ಮದುವೆ ಮುಂಜಿ, ಅನಾರೋಗ್ಯ, ಸಾವು ಮುಂತಾದ ಕಾರ್ಯಕ್ರಮಗಳಿಗೆ ಊರಿಗೆ ಬಂದು ಹೋಗಲು ಮಾತ್ರ ಅವರಿಗೆ ಸಾಧ್ಯವಾಗುತ್ತಿತ್ತು. ತಮ್ಮ ಪಾಲಕರು ಇರುವವರೆಗೂ ಆಗಾಗ ಮನೆಯ ಖರ್ಚು- ವೆಚ್ಚಗಳಿಗೆ ಹಣ ಕಳುಹಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.

ಇದೀಗ ಮೂರನೇ ತಲೆಮಾರು ಉನ್ನತ ಶಿಕ್ಷಣವನ್ನು ಪಡೆದು ಪದವಿ ಮುಗಿಯುವ ಮುನ್ನವೇ ಕ್ಯಾಂಪಸ್ ಇಂಟರ್ವ್ಯೂಗಳಲ್ಲಿ ನೌಕರಿ ಪಡೆದು ಪದವಿ ಮುಗಿಯುತ್ತಲೇ ತಾವು ಆಯ್ಕೆಯಾದ ಕಂಪನಿಗಳಿಗೆ ದೊಡ್ಡ ಮೊತ್ತದ ಸಂಬಳದ ನೌಕರಿಗೆ ಹಾಜರಾಗುತ್ತಾರೆ. 21-22 ರ ಹೊತ್ತಿಗೆ ಆರಂಕಿಯ ಸಂಬಳವನ್ನು ಪಡೆಯುವ ಬಹುತೇಕ ಯುವ ಜನತೆ ಪ್ರಾರಂಭದಲ್ಲಿ ಹಣಕಾಸನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗೊಂದಲಕ್ಕೊಳಗಾಗುವುದು ಸಹಜ.

ನೌಕರಿ ದೊರೆತ ಮೊದಮೊದಲಲ್ಲಿ ಸ್ನೇಹಿತರೊಂದಿಗೆ ವೀಕೆಂಡ್ ಪಾರ್ಟಿ ಮಾಡುವುದು, ಟ್ರಿಪ್ ಹೋಗುವುದು ಈ ಹಿಂದೆ ಆಸೆ ಪಟ್ಟರೂ ಅವಕಾಶವಿಲ್ಲದ ಕಾರಣ ಕೊಳ್ಳಲು ಸಾಧ್ಯವಿಲ್ಲದ ಬಟ್ಟೆ ಬರೆಗಳನ್ನು ವಸ್ತುಗಳನ್ನು ಖರೀದಿಸಿ ತರುತ್ತಾರೆ. ತಮಗೆ ಇಷ್ಟವಾದ ಬೈಕ್ ಗಳನ್ನು ಖರೀದಿಸುವ, ಕಂತಿನಲ್ಲಿ ಕಾರನ್ನು ಖರೀದಿಸುವ ಮಕ್ಕಳು ಅದರಲ್ಲಿ ತಮ್ಮ ಪಾಲಕರನ್ನು ಸುತ್ತಾಡಿಸಿ ಸಂತಸ ಪಡುತ್ತಾರೆ.

ಮನೆಯಲ್ಲಿ ಆರ್ಥಿಕ ಅನುಕೂಲ ಇಲ್ಲದೆ ಇರುವ ಮಕ್ಕಳು ಕುಟುಂಬದ ಹೊರೆಯನ್ನು ಹೊತ್ತರೆ, ಮಕ್ಕಳ ವರಮಾನದ ಅಗತ್ಯವಿಲ್ಲದ ಮನೆಗಳ ಮಕ್ಕಳು ತಾವು ಸಂಪಾದಿಸುವ ಹಣವನ್ನು ಏನು ಮಾಡಬೇಕೆಂದು ಯೋಚಿಸಬೇಕಾದ ಪರಿಸ್ಥಿತಿ. ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಕೂಡ ಕೆಲವೊಮ್ಮೆ ಹಿಂಜರಿಯುವ ಪರಿಸ್ಥಿತಿ ಅವರದಾಗಿರುತ್ತದೆ. ಇನ್ನು ಅವರ ಪಾಲಕರಿಗೆ ತಮ್ಮ ಮಕ್ಕಳ ಮದುವೆ ಮಾಡಿ ಅವರಿಗೆ ಮೂಗುದಾರ ಹಾಕಬೇಕೆಂದುಕೊಳ್ಳಲು ಮಕ್ಕಳ ಚಿಕ್ಕ ವಯಸ್ಸು ಅಡ್ಡಿಯಾಗುತ್ತದೆ. ಗಂಡು ಮಕ್ಕಳಾದರೆ ಕನಿಷ್ಠ 27-28 ವರ್ಷವಾದರೂ ಆಗಲಿ, ಹೆಣ್ಣು ಮಕ್ಕಳಾದರೆ 24-25 ವರ್ಷವಾದರೂ ಕಳೆಯಲಿ ಎಂಬ ಕಾರಣಕ್ಕಾಗಿ ಪಾಲಕರು ಕೂಡ ಸುಮ್ಮನಾಗಿಬಿಡುತ್ತಾರೆ.

ಇಂತಹ ಸಮಯದಲ್ಲಿ ತಾವು ಸಂಪಾದಿಸುವ ಹಣ ಸರಿಯಾದ ನಿಟ್ಟಿನಲ್ಲಿ ಬಳಸುವ, ಹೂಡಿಕೆ ಮಾಡುವ ನಿಟ್ಟಿನಲ್ಲಿ ಯುವಜನತೆಗೆ ಕೆಲವು ಸಲಹೆಗಳು ಹೀಗಿವೆ.

ಸಮಾಜದಲ್ಲಿ ಇನ್ ಫ್ಲುಯೆನ್ಸರ್ ಎಂದು ಕರೆಸಿಕೊಳ್ಳುವ ಒಂದು ಪ್ರಭಾವಶಾಲಿ ಜನರ ಮಾಧ್ಯಮವಿದ್ದು ಬಹುತೇಕ ಯುವಜನತೆ ಅಂತಹ ಜನರ ಉಡುಗೆ, ತೊಡುಗೆ ಹಾಗೂ ಜೀವನ ಶೈಲಿಯನ್ನು ಅನುಕರಣೆ ಮಾಡುತ್ತಾರೆ. ಒಂದು ಹಂತದ ಅನುಕರಣೆ ಸಮ್ಮತ ಎನಿಸಬಹುದಾದರೂ ಸಂಪೂರ್ಣವಾಗಿ ಅವರನ್ನೇ ಹಿಂಬಾಲಿಸುವುದು ಸರಿಯಲ್ಲ.ನಾವು ಇರುವ ಸಮಾಜದಲ್ಲಿ ಅಂತಹ ಉಡುಗೆ ತೊಡುಗೆಗಳು ಸಮಂಜಸ ಎಂದು ತೋರದೆ ಹೋದಾಗ ಅಂತಹ ಉಡುಗೆ ತೊಡುಗೆಗಳ ಮೇಲೆ ಹಣ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕು.

ಹಣಕಾಸಿನ ಹೂಡಿಕೆಯ ಕುರಿತು ಅರಿವನ್ನು ಹೆಚ್ಚಿಸಿಕೊಳ್ಳಲು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಪತ್ರಿಕೆಗಳನ್ನು ಅಂಕಣಗಳನ್ನು ಓದಿ…ಆ ವಿಷಯದಲ್ಲಿ ತಜ್ಞರ ಚರ್ಚೆಗಳನ್ನು ಆಲಿಸಿ.

ನಿಮ್ಮ ಆದಾಯದ ಕನಿಷ್ಠ ಶೇಕಡ ಹತ್ತರಿಂದ ಇಪ್ಪತ್ತ ರಷ್ಟು ಹಣವನ್ನು ಸಣ್ಣಪುಟ್ಟ ಹೂಡಿಕೆಗಳಲ್ಲಿ ತೊಡಗಿಸಿ. ಕೌಟುಂಬಿಕ ಜವಾಬ್ದಾರಿಗಳು ನಿಮಗೆ ಇಲ್ಲದೇ ಹೋದರೆ ಇನ್ನೂ ಹೆಚ್ಚಿನ ಪ್ರಮಾಣದ ಹಣವನ್ನು ಬೇಕಾದಾಗ ಬಳಸಿಕೊಳ್ಳಲು ಅನುವಾಗುವಂತೆ ಎರಡು, ಮೂರು ಇಲ್ಲವೇ ಐದು ವರ್ಷಗಳ ಅವಧಿಯ ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ತೊಡಗಿಸಿ. ದೈನಂದಿನ ಬದುಕಿಗೆ ನಿಮ್ಮ ಹಣದ ಅವಶ್ಯಕತೆ ನಿಮ್ಮ ಪಾಲಕರಿಗೆ ಇರದೆ ಹೋಗಬಹುದು, ಆದರೆ ಒಡಹುಟ್ಟಿದವರ ವಿದ್ಯಾಭ್ಯಾಸ, ಕಾಯಿಲೆ-ಕಸಾಲೆ, ಮದುವೆ ಮತ್ತಿತರ ಖರ್ಚುಗಳಿಗೆ ನೀವಿಟ್ಟ ಇಡಿಗಂಟು ಸೂಕ್ತವಾಗಿ ಬಳಕೆಯಾಗಬಹುದು ಅಲ್ಲವೇ?

ನಿಮ್ಮ ಪ್ರತಿ ತಿಂಗಳ ಸಂಬಳವನ್ನು 50% +30% + 20 ಶೇಕಡ ಮಾದರಿಯಲ್ಲಿ ಆಯವ್ಯಯದ ಪಟ್ಟಿಯನ್ನು ಮಾಡಿ ಅದರಂತೆಯೇ ನಡೆದುಕೊಳ್ಳಿ. ಅನವಶ್ಯಕವಾಗಿ ನಿಮ್ಮ ಹಣ ಪೋಲಾಗದಂತೆ ಪ್ರತಿದಿನವೂ ನೀವು ಮಾಡುವ ಖರ್ಚು ವೆಚ್ಚದ ಕುರಿತು ಒಂದು ಪುಟ್ಟ ಡೈರಿಯಲ್ಲಿ ದಾಖಲಿಸಿ. ಹಣದ ಮುಗ್ಗಟ್ಟು ತೋರಿದಾಗ ಇಲ್ಲವೇ ಗೆಲ್ಲೋ ದಾರಿ ತಪ್ಪುತ್ತಿದೆ ಎಂದು ಅನಿಸಿದಾಗ ಹೀಗೆ ದಾಖಲಿಸಿದ ಮಾಹಿತಿಯನ್ನು ಒಮ್ಮೆ ತಿರುಗಿ ಹಾಕಿದಾಗ ನಿಮಗೆ ನಿಮ್ಮ ಹಣಕಾಸಿನ ವ್ಯವಹಾರದ ಕುರಿತ ಒಳನೋಟ ದೊರೆಯುತ್ತದೆ… ಆಗ ನೀವು ನಿಮ್ಮ ಅನವಶ್ಯಕ ಖರ್ಚು ವೆಚ್ಚಗಳ ಮೇಲೆ ಸೂಕ್ತವಾದ ಮಿತಿಗಳನ್ನು ಹಾಕಿಕೊಳ್ಳಲು ಸುಲಭವಾಗುತ್ತದೆ.

ನೀವು ಸಂಪಾದಿಸುವ ಹಣದಲ್ಲಿ ಕನಿಷ್ಠ ಮೂರನೇ ಒಂದು ಭಾಗವನ್ನು ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಸಹಾಯಕವಾಗಲಿ ಎಂಬ ಕಾರಣಕ್ಕಾಗಿಯೇ ನಿಮ್ಮ ಉಳಿತಾಯ ಖಾತೆಯಲ್ಲಿ ಹಾಕಿಡಿ.

ಹಣಕಾಸಿನಲ್ಲಿ ನಷ್ಟದ ಸಂಭವನೀಯತೆ ಕಡಿಮೆ ಇರುವ ಮತ್ತು ಹೂಡಿಕೆಯ ಮೊತ್ತದ ನಷ್ಟ ಸೀಮಿತವಾಗಿರುವ ಆಯ್ಕೆಗಳಲ್ಲಿ ನಿಮ್ಮ ಆದಾಯದ ಶೇಕಡ 7 ರಷ್ಟು ಹಣವನ್ನು ಹೂಡಿಕೆ ಮಾಡಿ. ಸಾಮಾನ್ಯವಾಗಿ ಸ್ಥಿರ ಆದಾಯದ ಬಾಂಡ್‌ಗಳು, ಸರ್ಕಾರಿ ಯೋಜನೆಗಳು (FDs), ಅಥವಾ ಕೆಲವು ನಿರ್ದಿಷ್ಟ ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆಗಳಲ್ಲಿ ಹಣವನ್ನು ತೊಡಗಿಸಬಹುದು.

ಇತರರ ಸಲಹೆಗಳನ್ನು ಪರಿಗಣಿಸಿ ಬೇಕಾಬಿಟ್ಟಿ ಸ್ಕೀಮುಗಳಲ್ಲಿ ಹಣ ಹೂಡಿಕೆ ಮಾಡಬೇಡಿ. ಯಾಮಾರುವ ಸಾಧ್ಯತೆಗಳು ಬಹಳ.

ಅಪ್ಪ, ಅಮ್ಮ, ಸಂಬಂಧಿಕರು ಕೊಟ್ಟ ಹಣವನ್ನು ಆರಾಮಾಗಿ ಖರ್ಚು ಮಾಡುವ ನಾವುಗಳು ಸ್ವಂತ ದುಡಿಯುವಾಗ ಆ ಹಣದ ಬೆಲೆ ಅರಿವಾಗುತ್ತದೆ…. ಅನವಶ್ಯಕ ಖರ್ಚು ಮಾಡಲು ಮನಸ್ಸು ಒಪ್ಪುವುದಿಲ್ಲ ಎಂದು ಹೇಳುವ ಬಹಳಷ್ಟು ಜನರನ್ನು ನಾವು ನೋಡುತ್ತೇವೆ. ನಮ್ಮ ಶ್ರಮವಹಿಸಿ ನಾವು ದುಡಿದ ಹಣವನ್ನು ಪೋಲು ಮಾಡಲು ಆಗುವುದಿಲ್ಲ ಎಂಬುದು ಬಹುತೇಕ ನಿಜ.ಖರ್ಚು ಮಾಡುವುದಾದರೂ ಯೋಚಿಸಿ…ವಿನಿಯೋಗಿಸಿ.


  • ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW