ಜಗತ್ತಿನ ಪ್ರಖ್ಯಾತ ಉದ್ಯಮಿ ಕೇವಲ ಕೆಲವೇ ಕೋಟಿಗಳಷ್ಟು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡರು ಎಂದರೆ ನಂಬಲು ಸಾಧ್ಯವೇ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಆತ್ಮಹತ್ಯೆ ಆಯ್ಕೆಯೇ ಅಲ್ಲ’ ವಿಷಯದ ಕುರಿತು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಶಾಲೆಯೊಂದರಲ್ಲಿ ಶಿಕ್ಷಕಿ ಆಗಿರುವ ಓರ್ವ ಹೆಣ್ಣು ಮಗಳು ತನ್ನ ಗಂಡನ ಮನೆಯಲ್ಲಿ ಕಿರುಕುಳ ಅನುಭವಿಸಲಾಗದೆ ತನ್ನ ತವರಿನವರಿಗೆ, ಗಂಡನಿಗೆ ಪ್ರತ್ಯೇಕವಾಗಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಪತ್ರದಲ್ಲಿ ತನ್ನ ಗಂಡನಿಗೆ ‘ಅಡುಗೆ ಮಾಡಿದ್ದೇನೆ ಊಟ ಮಾಡಿ ‘ ಎಂದು ಬರೆದಿದ್ದು, ತನ್ನ ಪಾಲಕರಿಗೆ ಬರೆದ ಪತ್ರದಲ್ಲಿ ‘ನನ್ನ ಗಂಡನ ಮನೆಯವರಿಗೆ ನನ್ನ ದುಡಿಮೆಯ ಮೇಲೆ ಆಸೆ ಇದೆಯೇ ಹೊರತು ನನ್ನ ಬೇಕು ಬೇಡಗಳಲ್ಲ. ನಾನೊಂದು ದುಡಿಯುವ ಯಂತ್ರದಂತೆ ಅವರು ನನ್ನನ್ನು ಭಾವಿಸಿದ್ದಾರೆ’ ಎಂದು ದೂರಿರುವ ಆಕೆ ‘ನನ್ನ ಮಗ ಅವರ ಅಪ್ಪನಂತೆ ಆಗುವುದು ಬೇಡ, ಆತನನ್ನು ನೀವೇ ಸಾಕಿ ಸಲಹಿ ‘ ಎಂದು ತನ್ನ ಪಾಲಕರಿಗೆ ಹೇಳಿದ್ದಾಳೆ.
ಮತ್ತೋರ್ವ ಹೆಣ್ಣು ಮಗಳು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು ಆರಂಕಿಯ ಸಂಬಳವನ್ನು ಎಣಿಸುತ್ತಿದ್ದಳು. ಪತಿ ಪತ್ನಿಯರ ನಡುವಿನ ಹೊಂದಾಣಿಕೆ ಸಾಧ್ಯವಾಗದೆ ಆಕೆಯ ಮೊದಲನೆಯ ವಿವಾಹ ಮುರಿದು ಬಿತ್ತು….. ಇದರಿಂದ ಸಾಕಷ್ಟು ನೊಂದುಕೊಂಡ ಆಕೆ ಸ್ಥಳ ಬದಲಾವಣೆಯಾಗಲೆಂದು ದೂರದ ಊರಿಗೆ ವರ್ಗಾವಣೆಯಾಗಿ ಬಂದಳು. ತಂದೆ ತಾಯಿ ಆಕೆಗೆ ಮತ್ತೊಂದು ವಿವಾಹದ ಪ್ರಯತ್ನವನ್ನು ಮುಂದುವರೆಸಿದರು. ಈ ಬಾರಿ ಎಲ್ಲ ರೀತಿಯಿಂದಲೂ ನೋಡಿ ಆಕೆಗೆ ಒಪ್ಪಿಗೆಯಾದ ವ್ಯಕ್ತಿಯೊಂದಿಗೆ ಆಕೆಯ ವಿವಾಹವನ್ನು ಮಾಡಿದರು. ಆದರೆ ಇಲ್ಲೂ ಆಕೆಯ ದುರಾದೃಷ್ಟ ಆಕೆಯ ಬೆನ್ನನ್ನು ಬಿಡಲಿಲ್ಲ. ಮದುವೆಯಾದ ಕೇವಲ ಎರಡು ತಿಂಗಳಲ್ಲಿ ತನ್ನ ಎರಡನೆಯ ಪತಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಇರುವ ವಿಷಯ ಆಕೆಗೆ ತಿಳಿಯಿತು. ಈ ಕುರಿತು ಸದಾ ಗಂಡನೊಂದಿಗೆ ಚರ್ಚೆ, ವಾಗ್ವಾದ ನಡೆದು ಮುಂದಿನ ಒಂದೆರಡು ತಿಂಗಳಲ್ಲಿ ಆಕೆ ಮನೆಯವರಿಗೂ ತನ್ನ ಮಾನಸಿಕ ವ್ಯಥೆಯನ್ನು ತಿಳಿಸದೆ ಮನೆಯ ಕಿಟಕಿಗೆ ತನ್ನದೇ ದುಪಟ್ಟದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು.

ಮತ್ತೊಂದು ಪ್ರಕರಣದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿ ವಿದೇಶದಲ್ಲಿ ನೌಕರಿಯನ್ನು ಪಡೆದ ವ್ಯಕ್ತಿ ಒಬ್ಬ ಮದುವೆಯಾಗಿ ಅಲ್ಲಿಯೇ ನೆಲೆಸಿದ. ನಾಲ್ಕು ಬೆಡ್ರೂಮಿನ ದೊಡ್ಡ ಮನೆ, ಐಷಾರಾಮಿ ಕಾರು, ಒಳ್ಳೆಯ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಇದರ ಜೊತೆಗೆ ವಿಪರೀತ ಕ್ರೆಡಿಟ್ ಕಾರ್ಡ್ ಗಳ ಸೌಲಭ್ಯವನ್ನು ಪಡೆದುಕೊಂಡ ಸಾಲದ ಕಂತುಗಳು ಆತನಿಗಿದ್ದವು. ಒಂದೊಮ್ಮೆ ಅಮೆರಿಕದಲ್ಲಿ ಉದ್ಭವಿಸಿದ ಸಂಕಟದಲ್ಲಿ ಆತ ತನ್ನ ನೌಕರಿಯನ್ನು ಕಳೆದುಕೊಂಡನು. ತೀವ್ರ ಮಾನಸಿಕ ಆಘಾತಕ್ಕೆ ಒಳಗಾದ ಆತ ಮುಂದಿನ ಕೆಲವೇ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾದನು.
ಕಥೆ ಇಷ್ಟಕ್ಕೆ ಮುಗಿಯಲಿಲ್ಲ. ನಮ್ಮದೇ ಕರ್ನಾಟಕದ ನೆಲದಲ್ಲಿ ಹುಟ್ಟಿದ ಇಡೀ ಜಗತ್ತಿನಾದ್ಯಂತ ಕೆಫೆ ಕಾಫಿ ಡೇ ಗಳನ್ನು ಹುಟ್ಟು ಹಾಕಿದ.. ಆ ಮೂಲಕವೇ ಸಾವಿರಾರು ಕೋಟಿ ರೂಗಳ ವ್ಯವಹಾರವನ್ನು ಮಾಡಿ ಯಶಸ್ವಿಯಾಗಿ ಉದ್ಯಮವನ್ನು ಕಟ್ಟಿಕೊಂಡು ಒಂದಿಡೀ ತಲೆಮಾರಿನ ಜನರಿಗೆ ಅತ್ಯಂತ ಸಾಮಾನ್ಯ ವ್ಯಕ್ತಿಯು ಕೂಡ ಪ್ರಯತ್ನ ಪಟ್ಟರೆ ಗಗನವನ್ನು ಚುಂಬಿಸಬಹುದಾದ ಯಶಸ್ಸನ್ನು ಪಡೆಯಬಹುದು ಎಂಬ ಕನಸನ್ನು ಕಟ್ಟಿಕೊಟ್ಟ ಸಿದ್ದಾರ್ಥ್ ಕೂಡ ಆತ್ಮಹತ್ಯೆ ಮಾಡಿಕೊಂಡರು.
ಬಹುತೇಕ ಜಗತ್ತಿನ ಬಹಳಷ್ಟು ಸ್ತ್ರೀಯರು ಈ ರೀತಿಯ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ ಎಂಬುದು ಎಷ್ಟು ನಿಜವೋ ದೀಪದ ಕೆಳಗೆ ಕತ್ತಲೆ ಇರುತ್ತದೆ ಎಂಬುದು ಕೂಡ ಅಷ್ಟೇ ನಿಜ. ಸಾಯುವ ಮುನ್ನ ಪಾಲಕರಿಗೆ ತನ್ನ ಗಂಡನ ಮನೆಯವರ ನಡಾವಳಿಯ ಬಗ್ಗೆ ಹೇಳುವ ಹೆಣ್ಣುಮಗಳು ಅದಕ್ಕೂ ಮುನ್ನ ಕೂಡ ಈ ಕುರಿತು ತನ್ನ ಪಾಲಕರಿಗೆ ದೂರು ಹೇಳಿರಬಹುದು. ಸಾಮಾನ್ಯವಾಗಿ ಎಲ್ಲಾ ಪಾಲಕರು ಹೇಳುವ ಹಾಗೆ ಆಕೆಯ ಪಾಲಕರು ಕೂಡ ಹೊಂದಿಕೊಂಡು ಹೋಗು ಎಂದು ಹೇಳಿರಲೂಬಹುದು.. ಇದರರ್ಥ ಆಕೆ ಜೀವ ಕಳೆದುಕೊಳ್ಳಲಿ ಎಂದಲ್ಲ. ತನಗೆ ಕೆಲಸ ಮಾಡಲಾಗದೆ ಹೋದಾಗ ನಯವಾಗಿ ಆದರೆ ಅಷ್ಟೇ ದೃಢವಾಗಿ ತಿರಸ್ಕರಿಸುವ ಆಕೆಯ ಹಕ್ಕನ್ನು ಆಕೆಯಿಂದ ಯಾರೂ ಕಿತ್ತುಕೊಂಡಿರುವುದಿಲ್ಲ. ಅಷ್ಟಕ್ಕೂ ಆಕೆ ಅವರ ದೌರ್ಜನ್ಯದಿಂದ ಬೇಸತ್ತಿದ್ದರೆ ಸ್ವಂತ ದುಡಿಮೆಯನ್ನು ಹೊಂದಿದ್ದು ಬೇರೆ ಮನೆಯನ್ನು ಮಾಡಿಕೊಂಡು ತನ್ನ ಮಗುವಿನೊಂದಿಗೆ ವಾಸಿಸಬಹುದಿತ್ತು. ಬದುಕೇ ಬೇಡ ಎಂದು ಆರ್ಥಿಕವಾಗಿ ಸಬಲಳಾಗಿರುವ ಓರ್ವ ಮಹಿಳೆ ಸಾವಿನತ್ತ ಮುಖ ಮಾಡಲು ಇರುವ ಸಾಮಾಜಿಕ ಕಾರಣವಾದರೂ ಏನು??

ಜಗತ್ತಿನ ಪ್ರಖ್ಯಾತ ಉದ್ಯಮಿ ಕೇವಲ ಕೆಲವೇ ಕೋಟಿಗಳಷ್ಟು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡರು ಎಂದರೆ ನಂಬಲು ಸಾಧ್ಯವೇ. ಅವರು ತಮ್ಮ ಕಂಪನಿಯ ಅರ್ಧದಷ್ಟು ಶೇರುಗಳನ್ನು ಮಾರಿದ್ದರು ಅವರ ಸಾಲ ತೀರಿ ಹೋಗುತ್ತಿತ್ತು. ಹಾಗಿದ್ದರೆ ಚಾಣಾಕ್ಷತೆ ಮೈಯೆಲ್ಲಾ ಕಣ್ಣಾಗಿಸಿಕೊಳ್ಳುವ ವ್ಯವಹಾರಪರತೆ, ಕಳೆದುಕೊಂಡದ್ದೆಲ್ಲವನ್ನು ಮತ್ತೆ ಸಂಪಾದಿಸುವ ಧೈರ್ಯ ಎಲ್ಲವೂ ಇರುವ ವ್ಯಕ್ತಿ, ಶೂನ್ಯದಿಂದ ಮೇಲೆ ಬಂದ ವ್ಯಕ್ತಿ ತನ್ನದೇ ಬಲದಿಂದ ಒಂದು ಇಡೀ ಔದ್ಯೋಗಿಕ ಸಾಮ್ರಾಜ್ಯವನ್ನು ಕಟ್ಟಿದ ವ್ಯಕ್ತಿ ಸೋತದ್ದೆಲ್ಲಿ??
ಕಾರಣಗಳು ಏನೇ ಇರಲಿ, ಹೇಗೇ ಇರಲಿ ಸೋಲುತ್ತಿದ್ದೇನೆ ಎಂಬ ಹತಾಶ ಮನಸ್ಥಿತಿ ವ್ಯಕ್ತಿಯಲ್ಲಿ ಜೀವವನ್ನೇ ಕೊನೆಗಾಣಿಸಿಕೊಳ್ಳುವ ಮಟ್ಟಕ್ಕೆ ಒಯ್ಯುವವರೆಗೆ ಆತ ಹೇಗೆ ಸುಮ್ಮನಿದ್ದ? ಆತನ ಉದ್ಯಮ ಪ್ರಪಂಚ ಒಂದೇ ದಿನಕ್ಕೆ ಧರೆಗುರುಳಲು ಸಾಧ್ಯವೇ? ಆತನ ಔದ್ಯೋಗಿಕ ಸಲಹೆಗಾರರು ಎಲ್ಲಿ ಹೋಗಿದ್ದರು.? ಕುಟುಂಬಕ್ಕೆ ಆತನ ಉದ್ಯಮದಲ್ಲಾಗುತ್ತಿರುವ ಅಲ್ಲೋಲ ಕಲ್ಲೋಲ್ಲಗಳ, ಆತನ ಮಾನಸಿಕ ತುಮುಲಗಳ ಅರಿವಿತ್ತೇ?ಎಂಬ ಹತ್ತು ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.
ಸಣ್ಣಪುಟ್ಟ ಉದ್ಯಮಿಗಳು ಕೂಡ ಬಹಳಷ್ಟು ಬಾರಿ ತಮ್ಮ ಕುಟುಂಬದವರ, ಸ್ನೇಹಿತರ, ಹಣಕಾಸು ಆಪ್ತ ಸಹಾಯಕರ ಸಹಾಯವನ್ನು ಪಡೆದೇ ಪಡೆಯುತ್ತಾರೆ. ಅಂತದ್ದರಲ್ಲಿ ಜಗತ್ತಿನ ಪ್ರತಿಷ್ಠಿತ ಉದ್ಯೋಗವನ್ನು ಸೃಷ್ಟಿ ಮಾಡಿ ಕಾರ್ಪೊರೇಟ್ ವಲಯದಲ್ಲಿ ತಮ್ಮನ್ನು ತಾವೇ ಪರಿಚಯಿಸಿಕೊಂಡು ಯಶಸ್ವಿಯಾದ ಉದ್ಯಮಿ ಹಾಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಹುಡುಕಿದಾಗ ಉತ್ತರವಿಲ್ಲದೇ ಹೋಗುತ್ತದೆ.
ಕೆಲವೇ ದಶಕಗಳ ಹಿಂದೆ ನಮ್ಮ ಹಿರಿಯರು ಹತ್ತಾರು ಮಕ್ಕಳನ್ನು ಹೆತ್ತರೂ ಅದರಲ್ಲಿ ಅವರಿಗೆ ದಕ್ಕಿ ಉಳಿಯುತ್ತಿದ್ದವರು ಒಬ್ಬಿಬ್ಬರು ಮಾತ್ರ, ಮತ್ತೆ ಕೆಲ ಜನ ತಮ್ಮ ಮಕ್ಕಳನ್ನು ಯುದ್ಧ ನೆರೆ ಭೂಕಂಪ ಕೋಮುಗಲಭೆ ಸ್ವಾತಂತ್ರ್ಯ ಹೋರಾಟ ಮುಂತಾದವುಗಳಲ್ಲಿ ಕಳೆದುಕೊಂಡು ಕೂಡ ಬಂದದ್ದೆಲ್ಲ ಬರಲಿ ಭಗವಂತನ ದಯೆ ಹೊಂದಿರಲಿ ಎಂಬ ರೀತಿಯಲ್ಲಿ ತಮ್ಮ ಬದುಕನ್ನು ಸಾಗಿಸುತ್ತಿದ್ದರು.
ಆದರೆ ಇಂದಿನ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಚಿಕ್ಕ ಪುಟ್ಟ ವಿಷಯಕ್ಕೂ ನಮ್ಮ ಜೀವನದಲ್ಲಿ ಎಲ್ಲವೂ ಕಳೆದು ಹೋಯಿತು ಎಂಬಂತೆ ಭಾವಿಸುವ ಹತ್ತು ಹಲವು ಜನರಿದ್ದಾರೆ ಅವರಿಗೆ ಬದುಕನ್ನು ಎದುರಿಸುವ ಈ ಕೆಲವು ಸಲಹೆಗಳು ಉಪಯೋಗಕ್ಕೆ ಬರಬಹುದು ಎಂಬ ಆಶಯದಿಂದ ಕೆಳಗಿನ ಕೆಲ ಮಾತುಗಳನ್ನು ಹೇಳುತ್ತಿರುವುದು.
ಎಲ್ಲವೂ ನನ್ನ ಕೈ ಮೀರಿ ಹೋಗುತ್ತಿದೆ ಎಂಬ ಸಂಪೂರ್ಣ ಹತಾಶೆ ನಿಮ್ಮನ್ನು ಕಾಡಿದಾಗ, ಇನ್ನೇನು ಜೀವನವೇ ಮುಗಿದು ಹೋಯಿತು ಎಂದು ತೋರಿದಾಗ ಈ ಮಾತು ನಿಮ್ಮ ನೆನಪಿಗೆ ಬರಲಿ. ನಿಮ್ಮ ಕಣ್ಣ ಮುಂದಿನ ಪುಟ್ಟ ಜೀವಿಗಳು ನಿಮ್ಮನ್ನು ಅಚ್ಚರಿಯ ಕಂಗಳಿಂದ ವೀಕ್ಷಿಸುತ್ತಿದ್ದಾರೆ. ನೀವು ಸವಾಲುಗಳನ್ನು ಹೇಗೆ ಎದುರಿಸುತ್ತೀರಿ, ಪ್ರತಿ ಸೋಲಿನ ನಂತರ ಹೇಗೆ ಸಂಭಾಳಿಸಿಕೊಂಡು ಮತ್ತೆ ಎದ್ದು ನಿಲ್ಲುತ್ತೀರಿ, ಬದುಕಿನ ಹಾದಿ ಅತ್ಯಂತ ಕಠಿಣವಾಗಿದ್ದರೂ ಮುನ್ನಡೆಯುವುದನ್ನು ನಿಲ್ಲಿಸದೆ ಬದುಕಿನ ಬಂಡಿಯನ್ನು ಹೇಗೆ ಎಳೆಯುತ್ತೀರಿ ಎಂಬುದನ್ನು ಆ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ.

ಅವರು ಕೇವಲ ನೀವು ಯಾರು ಎಂಬುದನ್ನು ಅರಿಯಲು ಹಾಗೆ ಗಮನಿಸುವುದಿಲ್ಲ… ಅಂತಹ ಸಮಯದಲ್ಲಿ ನಿಮ್ಮ ಅದ್ಭುತ ಶಕ್ತಿ, ಸಾಮರ್ಥ್ಯಗಳನ್ನು ಅವರು ಗಮನಿಸುತ್ತಾರೆ.
ನೀವೇ ಅವರ ಮೊದಲ ನಾಯಕರಾಗಿರುತ್ತೀರಿ, ನೀವೇ ಅವರಿಗೆ ಮೊತ್ತ ಮೊದಲ ಮಾದರಿಯಾಗಿರುತ್ತೀರಿ ಮತ್ತು ಅವರಿಗೆ ಮಾರ್ಗದರ್ಶನ ತೋರುವ ದಿಕ್ಸೂಚಿಯಾಗಿರುತ್ತೀರಿ.
ನೀವು ಮುಂದೆ ಇಡುವ ಪ್ರತಿ ಹೆಜ್ಜೆಯೂ ಅದೆಷ್ಟೇ ಚಿಕ್ಕದಾಗಿರಲಿ, ಗಟ್ಟಿಯಾಗಿ ನಿಂತು ಹೋರಾಡುವ ನಿಮ್ಮ ಛಲವನ್ನು, ಬದ್ಧತೆಯನ್ನು ತೋರುತ್ತದೆ. ನೀವು ಹಿಂಬಾಲಿಸುವ ಪ್ರತಿಯೊಂದು ಕನಸು ಅವರಿಗೆ ಧೈರ್ಯವನ್ನು ತುಂಬುತ್ತದೆ ಮತ್ತು ನೀವು ಕೈ ಚೆಲ್ಲದ ಪ್ರತಿಯೊಂದು ಘಳಿಗೆಯೂ ಅವರಿಗೆ ಎಲ್ಲಿಯೂ ನಿಲ್ಲದೆ ಗುರಿಯನ್ನು ಮುಟ್ಟಬೇಕು ಎಂಬ ಪಾಠವನ್ನು ಹೇಳದೆಯೇ ಕಲಿಸಿಕೊಡುತ್ತದೆ.
ನೀವು ಕೇವಲ ನಿಮ್ಮ ಕನಸುಗಳನ್ನು ಮಾತ್ರ ನಿರ್ಮಿಸುತ್ತಿಲ್ಲ. ಬದಲಾಗಿ ನಿಮ್ಮ ಮಕ್ಕಳ ಕನಸುಗಳಿಗೆ ಪುಷ್ಟಿ ನೀಡುತ್ತೀರಿ ಅವುಗಳ ಕಲ್ಪನೆಯ ಹಕ್ಕಿಗೆ ರೆಕ್ಕೆಯನ್ನು ನೀಡಿ ಆಗಸದಲ್ಲಿ ಹಾರಲು ಅವಕಾಶ ಮಾಡಿಕೊಡುತ್ತೀರಿ.
ಕೇವಲ ನೀವು ನಿಮಗಾಗಿ ಮಾತ್ರ ಮುಂದೆ ಸಾಗುತ್ತಿಲ್ಲ ನಿಮಗಿಂತ ಹೆಚ್ಚು ನಿಮ್ಮನ್ನು ನಂಬಿದವರಿಗಾಗಿ ನಿಮ್ಮ ಮಕ್ಕಳಿಗಾಗಿ, ನಿಮ್ಮವರಿಗಾಗಿ ನೀವು ಮುಂದೆ ಸಾಗಲೇಬೇಕು. ಅವರು ಕೂಡ ನಿಮ್ಮಂತಾಗಲು ಆಶಿಸುತ್ತಾರೆ… ಎಲ್ಲಿಯೂ ನಿಲ್ಲದೆ ಗುರಿಯತ್ತ ಮುಂದೆ ಸಾಗುವುದನ್ನು ನಿಮ್ಮ ಮಕ್ಕಳಿಗೆ ತೋರಿಸಿ ಕೊಡುವ ವ್ಯಕ್ತಿ ನೀವಾಗಿರಿ.
Cowards die many times before their death the valliant never taste of death.. but once. ಹೇಡಿಯಾದ ವ್ಯಕ್ತಿ ಬದುಕಿನಲ್ಲಿ ಹತ್ತು ಹಲವು ಬಾರಿ ಹೆದರಿಯೇ ಸಾಯುತ್ತಾನೆ…. ವೀರನಾದವನು ಬದುಕಿನ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಅಂತಿಮವಾಗಿ ಮರಣ ಬಂದಾಗ ಮಾತ್ರ ಒಂದು ಬಾರಿ ಸಾಯುತ್ತಾನೆ…. ಎಂಬುದು ಈ ಮಾತಿನ ಅರ್ಥ.
ಆತ್ಮಹತ್ಯೆ ಹೇಡಿಯ ಕೊನೆಯ ಆಯ್ಕೆ. ನಿಜ ಹೇಳಬೇಕೆಂದರೆ ಅದೊಂದು ಆಯ್ಕೆಯೇ ಅಲ್ಲ. ಮನುಷ್ಯ ಗೆದ್ದು ಸಾಧಿಸುವುದಕ್ಕಿಂತ ಇದ್ದು ಸಾಧಿಸಬೇಕು… ಎಲ್ಲ ಸಂಕಷ್ಟಗಳನ್ನು ಎದುರಿಸಿ ಬದುಕಲು ಬೇಕಾಗುವುದೇ ನಿಜವಾದ ಧೈರ್ಯ. ಹಾಗೆ ಬದುಕಿನಲ್ಲಿ ಸೋತು ಸೋತು ಗೆಲ್ಲುವವನೇ ಯಶಸ್ವಿ ವ್ಯಕ್ತಿಯಾಗುತ್ತಾನೆ. ಅಂತಹ ಯಶಸ್ಸು ನಿಮ್ಮದಾಗಲಿ ಎಂದು ಆಶಿಸುವ.
- ವೀಣಾ ಹೇಮಂತ ಗೌಡ ಪಾಟೀಲ್ – ಮುಂಡರಗಿ, ಗದಗ
