ಒಂದು ಬಳಗ ಹೇಗಿರಬೇಕು ಎನ್ನುವುದನ್ನು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಸುಂದರವಾಗಿ ಕವಿತೆಯಲ್ಲಿ ಹೇಳಿದ್ದಾರೆ. ಅಗುಳ ಕಂಡರೆ ಬಳಿಗೆ ಕರೆಯುವ ಕಾಗೆಗಳ ಬಳಗದಂತಿರಬೇಕು ಸುಂದರ ಸಾಲುಗಳೊಂದಿಗೆ ಓದುಗರಿಗಾಗಿ ಸುಂದರ ಕವಿತೆ.ಮುಂದೆ ಓದಿ…
#ಬಳಗವಿರಬೇಕು ಕೊಳಗದಷ್ಟು
ಹಗೆ ಇಲ್ಲದೆ ನಗೆ ಬೀರುತಿರಬೇಕು
ಕಷ್ಟದಲಿ ಇಷ್ಟದಿಂದಪ್ಪುವ
ಮುಷ್ಟಿಹೃದಯ ತುಷ್ಟವಾಗಬೇಕು
#ಅಕ್ಕರೆಯಲಿ ಸಕ್ಕರೆಯಂತಿಹ
ಸೊಕ್ಕಿಲದೆ ಹಕ್ಕಿಯಂತಿರಬೇಕು
ದುಷ್ಟರಾಗದೆ ಕಷ್ಟದಲಾಗುವ
ಇಷ್ಟಪಡುವ ಪುಷ್ಟರಾಗಬೇಕು
ಸಂಬಂಧದಲ್ಲಿ ಬಂದಿಯಾಗಿ
ಗಂಧದಂತೆ #ಸುಗಂಧವಿರಬೇಕು
ಅಳಿವು ಬಂದಾಗ ಉಳಿಸಲೆನಿಸುವ
ಇಳೆಗೆ ಬೀಳುವ ಮಳೆಯಾಗಬೇಕು
ಅಗುಳ ಕಂಡರೆ ಬಳಿಗೆ ಕರೆಯುವ
ಕಾಗೆಗಳ ಬಳಗದಂತಿರಬೇಕು
ಹೊಗಳಿ ಅಟ್ಟಕೇರಿಸದೆ ತೆಗಳಿ
ಮನದ ಹುಳುಕ ತೆಗೆವಂತಿರಬೇಕು
ಕತ್ತಲಲ್ಲಿ ಬೆಳಕಾಗಿದ್ದು
ಹಿತ್ತಲ ಮದ್ದಿನಂತೆ ಜೊತೆಗಿರಬೇಕು
ಭ್ರಷ್ಟನು ನಿಕೃಷ್ಟನಾಗದೆ
ಉತ್ಕೃಷ್ಟ ಬಂಧುವಾಗಬೇಕು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
