ಗಣಪತಿ ಹಬ್ಬ ಎಂದೊಡನೆ ನೆನಪಿಗೆ ಬರುವುದು “ನಿಮ್ಮನೇಲಿ ಗಣಪತಿ ಕೂಡ್ಸಿದ್ದೀರಾ” ಎನ್ನುವ ಚಿಣ್ಣರ ಕಂಠದ ಕೂಗುಗಳು ಹೌದು. ಮನೆ ಮನೆಗೆ ಹೋಗಿ ಗಣಪತಿ ನೋಡುವ ಆ ಸಂಭ್ರಮ ಇಂದಿನ ದಿನಗಳಲ್ಲಿ ಕೇಳಲಿಕ್ಕಾದರೂ ಸಿಗುವುದುಂಟೇ? ಇಂದಿನ ಮಕ್ಕಳು ಅದನ್ನು ಊಹಿಸಲಾದರೂ ಸಾಧ್ಯವೇ ? ಸುಜಾತಾ ರವೀಶ್ ಅವರ ನೆನಪಿನಂಗಳದಲ್ಲಿ ಬಾಲ್ಯದ ಗಣೇಶ, ತಪ್ಪದೆ ಮುಂದೆ ಓದಿ….
ಹಿಂದಿನ ದಿನ ಗೌರಿ ಹಬ್ಬದ ಸಂಭ್ರಮ ಇನ್ನೂ ಮಾಸುವ ಮೊದಲೇ ಗಣಪತಿಯ ಉತ್ಸವದ ಸಂಭ್ರಮ ಶುರುವಾಗುತ್ತಿತ್ತು. ನೆನ್ನೆಯ ದೊಡ್ಡ ರಂಗೋಲಿ ಅಳಿಸಿ ಇಂದಿನ ಮತ್ತೊಂದು ದೊಡ್ಡ ರಂಗೋಲಿ ಹಾಕಿ ಬಣ್ಣ ತುಂಬಿ, ಅಂಗಳದಲ್ಲಿ ಬಿಡುತ್ತಿದ್ದ ತರತರದ ಹೂವುಗಳನ್ನು ಕೀಳುವುದರೊಂದಿಗೆ ದಿನ ಆರಂಭ .ನಮ್ಮ ಮನೆಯಲ್ಲಿ ನಮ್ಮ ತಂದೆ ಒಬ್ಬರೇ ಗಣಪತಿ ಪೂಜೆಯಾದ್ದರಿಂದ ಅರ್ಚಕರು ತುಂಬಾ ಬೇಗ ಬಂದು ಮಾಡಿಸಿ ಬಿಡುತ್ತಿದ್ದರು. ಹಾಗಾಗಿ ಹಜಾರ ಸಾರಿಸಿ ಗೌರಿ ಗಣೇಶರಿಗೆಂದು ಗೌರಿ ಹಿಂದಿನ ದಿನವೇ ತಯಾರಿಸಿದ ಮಂಟಪದಲ್ಲಿ ಮಣೆ ಹಾಕಿ ಗಣಪತಿ ಪೂಜೆ ಸಾಂಗವಾಗಿ ನಡೆಯುತ್ತಿತ್ತು .ಅಂದು ಕಡ್ಡಾಯವಾಗಿ ಇಡ್ಲಿ ಚಟ್ನಿ ಗಸಗಸೆ ಪಾಯಸ ತಿಂಡಿಗೆ. ಹಾಗಾಗಿ ಪಾಯಸಕ್ಕೆ ಚಟ್ನಿಗೆ ತಿರುವಿ ಕೊಡುವ ಕೆಲಸ ನನ್ನದು .ಪೂಜೆಯಾದ ನಂತರ ಪಂಚಾಮೃತವನ್ನು ಸವಿದು ತಿಂಡಿ ಆದ ಮೇಲೆ ಶುರು ಆಗಿಬಿಡುತ್ತಿತ್ತು ಹಬ್ಬದಡುಗೆಯ ಕೆಲಸ .ಎರಡು ಬಗೆಯ ಪಲ್ಯ ಕೋಸಂಬರಿ ವಾಂಗಿಬಾತು ಕರಿಗಡುಬು ಬೆಳಗಿನದೇ ಪಾಯಸ ಅನ್ನ ತೋವೆ ಸಾರು ಜೊತೆಗೆ ಹಿಂದಿನ ದಿನ ಆಂಬೊಡೆ ಮಾಡಿರುವುದರಿಂದ ಈ ದಿನ ಬಜ್ಜಿ. ಹೀರೇಕಾಯಿ, ಸೀಮೆ ಬದನೆಕಾಯಿ, ದಪ್ಪ ಮೆಣಸಿನಕಾಯಿ ಜೊತೆಗೆ ಮನೆಯಲ್ಲೇ ಬಿಡುತ್ತಿದ್ದ ಗುಬ್ಬಚ್ಚಿ ಬಾಳೆಲೆ ದೊಡ್ಡಪತ್ರೆ ಎಲೆಗಳ ಬಗೆಬಗೆಯ ಬಜ್ಜಿಗಳ ಸಾಂಗವಾಗಿ ಊಟವಾದ ನಂತರವೇ ಮಂಟಪದ ಮುಂದೆ ಅಲಂಕಾರ ರಂಗೋಲಿಗಳ ಕೆಲಸ. ಎಲ್ಲವನ್ನೂ ಮುಗಿಸಿ ನಾಲ್ಕು ಗಂಟೆಗೆ ಸಿದ್ಗವಾಗಿ ಗಣಪತಿ ನೋಡಲು ಹೊರಟು ಬಿಡುತ್ತಿದ್ದೆವು. ನೂರೊಂದು ಗಣಪತಿ ನೋಡಲೇ ಬೇಕೆಂಬ ಹಠ. ಎಲ್ಲರ ಮನೆ ಮುಗಿಸಿ ಬಂದು ಗಣಪತಿ ಆರತಿ ಸಂಭ್ರಮ. ಬೇರೆಯವರನ್ನು ಮನೆಗೆ ಕರೆದು ನಾವು ಅವರ ಮನೆಗೆ ಹೋಗಿ ಬಂದು ಶಮಂತೋಪಾಖ್ಯಾನ ಕೇಳಿ ಗಣಪತಿಯನ್ನು ವಿಸರ್ಜಿಸುವ ಮೂಲಕ ಹಬ್ಬಕ್ಕೆ ತೆರೆ. ಇಷ್ಟಾಗುವ ವೇಳೆಗೆ ರಾತ್ರಿ ಹನ್ನೊಂದು ಹೊಡೆದು ಬಿಟ್ಟಿರುತ್ತಿತ್ತು .ಆದರೂ ಆಯಾಸವಿಲ್ಲದ ಏನೋ ಸಂಭ್ರಮ.

ಇದರ ಜೊತೆಗೆ ಏರಿಯಾದಲ್ಲಿ ಗಣಪತಿ ಕೂಡಿಸುತ್ತಿದ್ದರು ದೊಡ್ಡದಾಗಿ ಮೈಕ್ ಹಾಕಿರುತ್ತಿತ್ತು. ಅಲ್ಲಿ ಗೊತ್ತಿರದ ಹಾಡುಗಳನ್ನು ಕೇಳುವ ಬರೆದುಕೊಳ್ಳುವ ಕೆಲಸ ಬೇರೆ. ಬೇರೆ ಬೇರೆ ಕಡೆ ಕೂಡಿಸಿದ ಗಣಪತಿ ಪೆಂಡಾಲ್ಗಳಲ್ಲಿ ಯಾವ ಯಾವತ್ತೂ ಯಾವ ಯಾವ ಕಾರ್ಯಕ್ರಮ ಎಂದು ತಿಳಿದುಕೊಳ್ಳುವ ಕುತೂಹಲ ಬೇರೆ. ಒಟ್ಟಿನಲ್ಲಿ ಗಣಪತಿ ಗೌರಿ ಹಬ್ಬ ಬಂದರೆ ಬರುತ್ತಿದೆ ಎಂದರೆ ಸಾಕು ಏನೋ ಹರ್ಷ ಹುಮ್ಮಸ್ಸು ಉಲ್ಲಾಸ .ಹೊಸ ಬಟ್ಟೆ ಬಳೆ ಟೇಪು ಸರಗಳ ಸಂಭ್ರಮ ಕಡಿಮೆ ಬೆಲೆಯದ್ದಾದರೂ ನಾವು ಪಡುತ್ತಿದ್ದ ಖುಷಿಯ ಮೌಲ್ಯ ಮಾತ್ರ ಹೆಚ್ಚೇ ಇರುತ್ತಿತ್ತು.
ಇಂದು ಅದೆಲ್ಲಾ ನೆನೆದಾಗ ಮನಸ್ಸಿನ ನೆಮ್ಮದಿ ಸಂತೋಷ ಸಂಭ್ರಮಕ್ಕೆ ಹಣ ಖಂಡಿತ ಕಾರಣವಲ್ಲ ಮನಸ್ಥಿತಿ ಮುಖ್ಯ ಎಂದು ಮನದಟ್ಟಾಗುತ್ತದೆ. ಅಂದಿಗಿಂತ ಹೆಚ್ಚು ಹಣ ಕೈಯಲ್ಲಿದೆ, ಹಬ್ಬಾನೇ ಬರಬೇಕಿಲ್ಲ ಹೊಸ ಬಟ್ಟೆ ಕೊಳ್ಳಲು ಹಾಕಿಕೊಳ್ಳಲು. ತಿಂಡಿಗಳು ಅಷ್ಟೇ ಬೇಕೆಂದಾಗ ಬೇಕಾದ ಬಗೆ ಹಣ ಒಂದು ಕೊಟ್ಟರೆ ಸಾಕು ಸಿಕ್ಕಿಬಿಡುತ್ತದೆ .ಆದರೆ ಆ ಸಂತೋಷ ಸಂಭ್ರಮ ಏನು ಮಾಡಿದರೂ ಸಿಗುತ್ತಿಲ್ಲ ಬರುತ್ತಿಲ್ಲ .
ಈಗಲೂ ಪೋಷಕರು ಮನಸ್ಸು ಮಾಡಿದರೆ ಸ್ವಲ್ಪ ಮಟ್ಟಿಗಾದರೂ ಹಬ್ಬದ ಸಂಭ್ರಮ ಸಂತಸಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಲು ಸಾಧ್ಯ .ಆ ನಿಟ್ಟಿನಲ್ಲಿ ಪ್ರಯತ್ನ ಪಡೋಣವೇ?
- ಸುಜಾತಾ ರವೀಶ್
