ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಇಷ್ಟು ಕೆಟ್ಟ ಹೆಸರು ಏಕೆ ಬಂದಿದೆ?. ಪಾಕಿಸ್ತಾನದಲ್ಲಿ ಇರುವವರಲ್ಲಾ ಕೆಟ್ಟವರೇ.. ಕ್ರೂರಿಗಳೇ? ಖಂಡಿತಾ ಇಲ್ಲ. ಪಾಕಿಸ್ತಾನದ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಡಲು ಮುಖ್ಯ ಕಾರಣ ಅಲ್ಲಿಯ ಪಂಜಾಬಿ ಮುಸ್ಲಿಮರು, ವಿಂಗ್ ಕಮಾಂಡರ್ ಸುದರ್ಶನ ಅವರ ಲೇಖನಿಯಲ್ಲಿ ಮೂಡಿದ ಲೇಖನೊಮ್ಮೆ ಓದಿ…
ಇವರಿಗೆ ಬಲೂಚಿಗಳು, ಸಿಂಧಿಯರು, ಬೆಂಗಾಲಿಗಳು ಎಂದರೆ ಎಲ್ಲಿಲ್ಲದ ಅಸಡ್ಡೆ, ಅವರ ಪ್ರಕಾರ ಇವರೆಲ್ಲಾ ದ್ವಿತೀಯ ದರ್ಜೆಯ ನಾಗರೀಕರು. ಅದೇ ಕಾರಣ ಸಿಂಧಿಯವರಾದ ಜುಲ್ಫಿಕರ್ ಅಲಿ ಭುಟ್ಟೊ ಮತ್ತು ಅವರ ಮಗಳು ಬೆನಝಿರ್ ಭುಟ್ಟೊಳನ್ನು ನಿರ್ದಯವಾಗಿ ಕೊಂದು ಮುಗಿಸಿದರು. ಈ ಅಪ್ಪ ಮಗಳು ಏನು ಹಾಲಿನಿಂದ ಮಿಂದೆದ್ದು ಬಂದವರಲ್ಲ.ಆದರೂ ಈ ಪಂಜಾಬಿಗಳ ಕ್ರೌರ್ಯಕ್ಕೆ ಸಿಲುಕಿದರಲ್ಲಾ ಎನ್ನುವ ಮರುಕವಂತೂ ಇದೆ.

ಫೋಟೋ ಕೃಪೆ : Yespunjab
ಸುಮಾರು ಎಪ್ಪತ್ತರ ದಶಕದಲ್ಲಿ, ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಆದದ್ದೂ ಅದೇ…ಪಂಜಾಬಿ ಮುಸ್ಲಿಮರ ಕ್ರೌರ್ಯದ ಅಟ್ಟಹಾಸ. ಪೂರ್ವ ಪಾಕಿಸ್ತಾನದಲ್ಲಿ ಬೆಂಗಾಳಿಗಳು, ನಾವು ಬೆಂಗಾಳಿಗಳು ಬಹುಸಂಖ್ಯಾತೆಯಲ್ಲಿದ್ದೇವೆ ಎಂದರೆ, ಸರಿ ಹಾಗಾದರೆ, ನಿಮ್ಮನ್ನು ಅಲ್ಪ ಸಂಖ್ಯಾತರನ್ನಾಗಿ ಮಾಡಿ ಬಿಡುತ್ತೇವೆ ಎಂದು ವ್ಯವಸ್ಥಿತವಾಗಿ ಬೆಂಗಾಲಿಗಳ ಸಾಮೂಹಿಕ ನರಹತ್ಯೆ ಮಾಡತೊಡಗಿದರು. ಬೆಂಗಾಲಿ ಆಡಳಿತಾಧಿಕಾರಿಗಳು, ಸೈನ್ಯಾಧಿಕಾರಿಗಳನ್ನು ಓಡಿಸಿಬಿಟ್ಟರು. Rape was an Army Policy.
೧೯೭೧ ರಷ್ಟು ಹೊತ್ತಿಗೆ ಅವರ ಪಾಪದ ಕೊಡ ತುಂಬಿತು. ಲಕ್ಷಗಟ್ಟಲೆ ನಿರಾಶ್ರಿತರು ಭಾರತಕ್ಕೆ ಹರಿದು ಬಂದರು. ಇನ್ನು ಕೈಕಟ್ಟಿ ಕೂರಲು ಸಾಧ್ಯವೇ ಇಲ್ಲ ಎನಿಸಿತು ಭಾರತ ಸರ್ಕಾರಕ್ಕೆ.
‘ಮುಕ್ತಿವಾಹಿನಿ’….ಸಿಡಿದೆದ್ದ ಬೆಂಗಾಳಿಗಳ ಗೆರಿಲ್ಲಾ ಪಡೆ ಮತ್ತು ಅವರಿಗೆ ಸಹಾಯಮಾಡಲು, ತರಬೇತಿ ಕೊಡಲು ಭಾರತದ ‘ಮಿತ್ರವಾಹಿನಿ’ ಹೆಗಲು ಕೊಟ್ಟಿತು. ಮುಕ್ತಿ ವಾಹಿನಿ ಮತ್ತು ಮಿತ್ತವಾಹಿನಿಗಳ ಮುಖ್ಯ ಕೇಂದ್ರ ಭಾರತದ ಗಡಿಪ್ರದೇಶದ ‘ಬೊಯಿರ’ ಎನ್ನುವ ಪ್ರದೇಶದಲ್ಲಿತ್ತು. ಪಾಕಿಸ್ತಾನಿ ಸೇನೆ ಇವರನ್ನು ಹೆದರಿಸಲು ಯುದ್ಧ ಟ್ಯಾಂಕುಗಳನ್ನು ಕಳುಹಿಸಿತು ಟ್ಯಾಂಕುಗಳು ಭಾರತದ ಗಡಿ ಪ್ರವೇಶಿಸಿದರೂ ಭಾರತದ ಸೇನೆ ಪ್ರತಿಕ್ರಿಯಿಸುತ್ತಿಲ್ಲವಲ್ಲಾ ಎಂದು ಇನ್ನೊಂದು ಹುಚ್ಚು ಸಾಹಸಕ್ಕೆ ಕೈಹಾಕಿತು ಪಾಕೀ ಸೇನೆ.

ಫೋಟೋ ಕೃಪೆ : AIR power asia
೨೨ ನವೆಂಬರ್ ೧೯೭೧ ರಂದು ಪಾಕಿಸ್ತಾನದ ವಾಯುದಳ ಮೂರು ಸೇಬರ್ ಜೆಟ್ ಯುಧ್ಧ ವಿಮಾನಗಳಿಂದ ಬೊಯಿರಾದ ಮೇಲೆ ಬಾಂಬುಗಳ ದಾಳಿ ಶುರುವಾಯಿತು. ಪಾಕಿಸ್ತಾನಿ ವಿಮಾನ ನಮ್ಮ ಭಾರತದ ಆಕಾಶದಲ್ಲಿ….ಆಗ ಕೆರಳಿತು ನೋಡಿ ಭಾರತೀಯ ವಾಯುಸೇನೆ.
ಸಮಯ ಮಧ್ಯಾಹ್ನ , ರಡಾರಿನಲ್ಲಿ ಎರಡನೇ ಬಾರಿಗೆ ಸೇಬರ್ ಜೆಟ್ಟುಗಳು ಭಾರತದ ಗಡಿಯ ಕಡೆ ಬರುತ್ತಿರುವುದು ಕಾಣಿಸಿತು. Scramble…Scramble….Scramble….
ಕಲ್ಕತ್ತಾದ ಏರ್ಪೋರ್ಟಿನಲ್ಲಾಗಲೇ ಸಜ್ಜಾಗಿ ನಿಂತಿದ್ದ ಭಾರತೀಯ ವಾಯುಸೇನೆಯ ನಾಲ್ಕು Gnat ವಿಮಾನಗಳು ಮೂರು ನಿಮಿಷದಲ್ಲಿ ಆಕಾಶ ಸೇರಿ ಗಡಿಯ ಕಡೆ ಶರವೇಗದಲ್ಲಿ ದೌಡಾಯಿಸಿದವು. ಒಂದು ವಿಮಾನದಲ್ಲಿ ನಮ್ಮ ಕರ್ನಾಟಕದ ಫ್ಲೈಟ್ ಲೆಫ್ಟಿನೆಂಟ್ ಗಣಪತಿಯವರಿದ್ದರು. ಕಲ್ಕತ್ತಾ ಏರ್ಪೋರ್ಟಿನ ಆಸುಪಾಸು ಇನ್ನು ಸ್ವಲ್ಪ ಹೊತ್ತು ಬೇರೆ ಯಾವ ವಿಮಾನಗಳೂ ಹಾರುವ ಹಾಗಿಲ್ಲ.
ಸಮಯ ೨.೪೮ ರಾಡಾರ್ ಕಂಟ್ರೋಲ್ ಕಾರ್ಯ ನಿರ್ವಹಿಸುತ್ತಿದ್ದ K B ಬಾಗಚಿಯವರು ಈ ನಾಲ್ಕು Gnat ವಿಮಾನಗಳನ್ನು ಗಡಿಯೆಡೆಗೆ ಬರುತ್ತಿದ್ದ ಪಾಕಿಸ್ತಾನಿ ವಿಮಾನಗಳಿಗೆ ಗೊತ್ತಾಗದಂತೆ ಮಾರ್ಗ ನಿರ್ದೇಶನ ಮಾಡಿದರು. ಇದ್ದಕ್ಕಿದ್ದಂತೆ ಗಣಪತಿಯವರ ಮುಂದೇ ಸ್ವಲ್ಪ ಬಲಕ್ಕೆ ಕಾಣಿಸಿಕೊಂಡವು ಸೇಬರ್ ಜೆಟ್ ವಿಮಾನಗಳು. ಕಂಡದ್ದೇ ತಡ, ವಿಮಾನದ Gun sight ನ ಮಧ್ಯಕ್ಕೆ ಬರುವಹಾಗೆ ಒಂದು ಏರೋಬ್ಯಾಟಿಕ್ ವಿನ್ಯಾಸವನ್ನು ರಚಿಸಿ ಗುಂಡಿನ ಮಳೆಗರೆದರು ಗಣಪತಿಯವರು ಪ್ರತಿ ಸೆಕೆಂಡಿಗೆ ೧೨೦ ಗುಂಡುಗಳು! ಕ್ಷಣಾರ್ಧದಲ್ಲೇ ಪಾಕೀಸ್ತಾನಿ ಜೆಟ್ಟುಗಳು ಪತನಗೊಂಡವು. ಪಾಕೀ ಪೈಲಟ್ಟುಗಳು ejection seat ನ ಮತ್ತು ಪ್ಯಾರಾಚೂಟಿನ ಸಹಾಯದಿಂದ ಕೆಳಗಿಳಿದು ಬಂದರು ಮತ್ತು ಕಾಯುತ್ತಿದ್ದ ಭಾರತೀಯ ಸೇನೆಯ ‘ಅತಿಥಿ’ ಗಳಾದರು. ಇದಲ್ಲವನ್ನೂ gun sight ಪಕ್ಕದಲ್ಲಿದ್ದ ಕ್ಯಾಮರದಲ್ಲಿ ಕ್ಲಿಕ್ಕಿಸಲಾಯಿತು.

Murder..Murder.. Murder… ಎಂದು ಮೂರು ಸಲ ರೇಡಿಯೋದಲ್ಲಿ ಗಣಪತಿಯವರು ಉದ್ಗರಿಸಿದ್ದು ಒಂದು ಕೋಡ್ ವರ್ಡ, ಅಂದರೆ ಮೂರೂ ವಿಮಾನಗಳನ್ನೂ ಪತನಗೊಳಿಸಲಾಗಿದೆ ಎಂದು. ಬರೀ ಹದಿನಾರು ನಿಮಿಷಗಳಲ್ಲಿ ಈ ಕಾರ್ಯಾಚರಣೆ ಮುಗಿಯಿತು. ಮುಂದೆ ನಡೆಯಲಿರುವ ಯುಧ್ಧಕ್ಕೆ, ಪೂರ್ವ ಪಾಕಿಸ್ತಾನದ ಪತನಕ್ಕೆ, ಬಾಂಗ್ಲಾದೇಶದ ಉದಯಕ್ಕೆ ಇದೊಂದು Curtain Riser.
ಹೀಗೆ ವಿಜಯೋತ್ಸವದಿಂದ ಕಲ್ಕತ್ತಾ ಏರ್ಪೋರ್ಟಿಗೆ ಮರಳಿದ ಈ ನಾಲ್ಕು ವಿಮಾನಗಳು ಮುಂದೆ ಮಾಡಿದ್ದೇನು ಗೊತ್ತೇ? ವಿಮಾನಗಳಲ್ಲಿ ಇನ್ನೂ ಸಾಕಷ್ಟು ಇಂಧನವಿದೆ ಇಷ್ಟು ಬೇಗ ಏಕೆ ಲ್ಯಾಂಡ್ ಮಾಡಬೇಕು ಎಂದು ಕಲ್ಕತ್ತಾದ ಬಾನಿನಲ್ಲಿ ಏರೋಬ್ಯಾಟಿಕ್ ಪ್ರದರ್ಶನಕ್ಕೆ ಅನುಮತಿ ಪಡೆದು ಆಕಾಶದಲ್ಲಿ ತಮ್ಮ ಕಲಾಪ್ರದರ್ಶನ ಮಾಡಿ ಇಡೀ ಕಲ್ಕತ್ತಾಕ್ಕೆ ತಮ್ಮ ವಿಜಯೋತ್ಸವವನ್ನು, ಸಾಹಸವನ್ನು ಅವರದೇ ಭಾಷೆಯಲ್ಲಿ ಬಿತ್ತರಿಸಿದರು!!
೨೨ ನವೆಂಬರ್ ೧೯೭೧ ರಂದು ಕನ್ನಡಿಗ #ಫ್ಲೈಟ್_ಲೆಫ್ಟಿನೆಂಟ್ _ಅಪ್ಪಚ್ಚು_ಗಣಪತಿ, ಭಾರತದ ಆಗಸದಲ್ಲಿ ನುಸುಳಿಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಮೊಟ್ಟಮೊದಲ ಸೇಬರ್ ಜೆಟ್ ವಿಮಾನವನ್ನು ಹೊಡೆದುರುಳಿಸುವ ಮೂಲಕ ಭಾರತ ಮತ್ತು ಪಾಕೀಸ್ತಾನದ ವಾಯು ಯುಧ್ಧಕ್ಕೆ ವೀಳ್ಯಕೊಟ್ಟರು. ನಂತರ ಡಿಸೆಂಬರ್ ೩ ಕ್ಕೆ ಭಾರತ ಪಾಕಿಸ್ತಾನದ ಮೇಲೆ ಅಧಿಕೃತವಾಗಿ ಯುಧ್ಧ ಘೋಷಣೆ ಮಾಡಿತು.
೧೯೭೧ ರ ಯುಧ್ಧದ ಮೂಲ ಉದ್ದೇಶವೇನೆಂದರೆ ಪಾಕಿಸ್ತಾನಿ ಸೈನಿಕರು ಅದರಲ್ಲೂ ಪಂಜಾಬಿ ಪಾಕಿಸ್ತಾನಿಗಳು ಅಂದಿನ ಪೂರ್ವ ಪಾಕಿಸ್ತಾನದ ಬಂಗಾಳೀ ನಾಗರೀಕ ಮೇಲೆ ನಡೆಸುತ್ತಿದ್ದ ದೌರ್ಜನ್ಯದಿಂದ ಅವರನ್ನು ಮುಕ್ತಗೊಳಿಸಲು ಮತ್ತು ಇದರಿಂದಾಗಿ ಸಾವಿರಾರು ಬಂಗಾಳೀ ನಿರಾಶ್ರಿತರ ಸಾಗರವೇ ಭಾರತಕ್ಕೆ ಹರಿದು ಬರುವುದನ್ನು ತಡೆಗಟ್ಟಲು. ೩ ಡಿಸೆಂಬರ್ ೧೯೭೧ ಭಾರತ ಅಧಿಕೃತವಾಗಿ ಪಾಕೀಸ್ತಾನದ ಮೇಲೆ ಯುದ್ಧ ಘೋಷಿಸಿತು. ಯುದ್ಧದಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಪೂರ್ವ ಪಾಕೀಸ್ತಾನದ ಸೈನ್ಯ, ಭಾರತೀಯ ಸೈನ್ಯಕ್ಕೆ ಶರಣಾಗತವಾಯಿತು. 93,000 ಪಾಕೀಸ್ತಾನದ ಸೈನ್ಯಾಧಿಕಾರಿಗಳು ಮತ್ತು ಸೈನಿಕರನ್ನು ಭಾರತೀಯ ಸೇನೆ ಯುದ್ಧ ಕೈದಿಗಳಾಗಿ ವಶಪಡಿಸಿಕೊಂಡಿತು.
ಪೂರ್ವ ಪಾಕಿಸ್ತಾನ ಬಂಗ್ಲಾದೇಶವಾಗಿ ಉದಯಿಸಿತು.
- ವಿಂಗ್ ಕಮಾಂಡರ್ ಸುದರ್ಶನ
(ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
