ಬಾಸುಂದಿ ಮಹಿಮೆ : ಅರವಿಂದ ಕುಲಕರ್ಣಿ

ಹಾಸ್ಟೆಲ್ ಹುಡುಗರಿಗೆ ದಿನವೂ ಅನ್ನ ಬೇಳೆಸಾರು ತಿಂದು ಸಾಕಾಗಿತ್ತು. ಹಾಸ್ಟೆಲ್ ನಲ್ಲಿ ಬಾಸುಂದಿ ಸಿಹಿ ತಿಂಡಿ ಮಾಡಿದಾಗ ಹಾಸ್ಟೆಲ್ ಹುಡುಗರೆಲ್ಲಾ ಬಡಬಡಕೊಂಡು ತಿಂದರು ಆಮೇಲೆ ಆಗಿದ್ದೆ ಬೇರೆ… ಅರವಿಂದ ಕುಲಕರ್ಣಿ ಅವರ ಬಾಸುಂದಿ ಮಹಿಮೆಯನ್ನು ತಪ್ಪದೆ ಮುಂದೆ ಓದಿ…

ನಾನು ಧಾರವಾಡದಲ್ಲಿ ಕರ್ನಾಟಕ ಕಾಲೇಜ್ ನಲ್ಲಿ ಶಿಕ್ಷಣ ಪಡೆಯುವಾಗ ಕಾಲೇಜಿನ ಹಿಂದುಗಡೆ ಪಕ್ಕದಲ್ಲೇ ಇರುವ ಪಯೋನೀರ್ ವಸತಿ ನಿಲಯದಲ್ಲಿ ಪ್ರವೇಶ ಪಡೆದಿದ್ದೆ. ಇದೊಂದು ಹಳೆಯ ಕಾಲದ 30 ಜನ ಇರಬಹುದಾದ ಕಟ್ಟಡ. ಛತ್ತಿನ ಮೇಲೆ ಕರಿಯ ನಾಡ ಹಂಚು ಹೊಚ್ಚಲಾಗಿತ್ತು.  ಇದು ನಾನು ಹೇಳುವ ವಿಷಯ 1970 ನೇ ಇಸ್ವೀ ಸಂಗತಿ. ಲುಕ್ ಅಥವಾ ಶೋ ಏನೂ ಇರಲಿಲ್ಲ.

ಸೀನಿಯರ್ ಗೆ ಸಿಂಗಲ್ ರೂಮು ಮತ್ತು ಜೂನಿಯರಗೆ ಮೂರು ಜನ ಒಂದು ರೂಮಿನಲ್ಲಿ ಇರಬಹುದಾದ ವ್ಯವಸ್ಥೆ. ಈಗ ಆ ಹಾಸ್ಟೆಲ್ ಬಿಲ್ಡಿಂಗ್ ಅಲ್ಲಿ ಇಲ್ಲ. ಅಲ್ಲಿ ಏನೇನೋ ಬೇರೆ ಕಟ್ಟಡಗಳಾಗಿವೆ. ಸಮೀಪದಲ್ಲಿ ಉದಯ ಹಾಸ್ಟೆಲ್ ಕಟ್ಟಡ. ಅದು ತುಂಬಾ ಅಂದವಾದ ಮಲ್ಟಿ ಸ್ಟೋರಿಡ್ ಬಿಲ್ಡಿಂಗ್. ಅಲ್ಲಿ ಎಲ್ಲ ವ್ಯವಸ್ಥೆ ಚೆನ್ನಾಗಿರುವುದು, ಅನುಕೂಲ ಇರುವಂತಹದು.

ಮೊದಲ ಬಂದವರಿಗೆ ಆದ್ಯತೆ ಹೆಚ್ಚು. ನಮ್ಮ ಕೆಲವು ಗೆಳೆಯರು ಉದಯ ಹಾಸ್ಟೆಲ್ ದೊರಕಿಸಿಕೊಂಡಿದ್ದರು. ಶುಲ್ಕ  ಮಾತ್ರ ಎಲ್ಲ ಹಾಸ್ಟೇಲ್ ನವರಿಗೂ ಒಂದೇ ತರ. ನಮಗೆ ಅವರನ್ನು ನೋಡಿ ಇವರು ಎಂಥಹ ಸುದೈವೀ ಇದ್ದಾರೆ ಅನಿಸುತ್ತಿತ್ತು. ನಮ್ಮ ತಂದೆಯವರು ಬಂದಾಗ

“ನನಗೂ ಉದಯ ಹಾಸ್ಟೆಲ್ ಸಿಕ್ಕಿದ್ದರೆ ಎಷ್ಟು ಛಲೋ ಇತ್ತು ” ಅಂದೆ.

“ನೀನು ಇಲ್ಲಿ ಬಂದದ್ದು ಶಿಕ್ಷಣ ಪಡೆಯಲಿಕ್ಕೂ ?ಅಥವಾ ಹಾಸ್ಟೆಲ್ ನಲ್ಲಿ ಇರಲಿಕ್ಕೋ ? ಮೂರು ನಾಲ್ಕು ವರ್ಷ ಇರೋದು. ಹೊಂದಿಕೊಂಡು ಹೋಗು. ಛಲೋ ಅಭ್ಯಾಸ ಮಾಡು ,” ಉಳಕಿ ವಿಷಯ ತಲೆಗೆ ಹಚ್ಚಿಕೊಳ್ಳಬೇಡ”

ಅದರಂತೆ ಕಾಲೇಜಿಗೆ ಹೋಗಿ ಬರುತ್ತಿದ್ದೆ.

ಹಾಸ್ಟೆಲ್ ನಲ್ಲಿ ಊಟಕ್ಕೆ ಒಂದು ಮೆಸ್, ಅದಕ್ಕೆ ಒಬ್ಬರು ಕಂಟ್ರಾಕ್ಟರ್ ದಿನಾಲು ಎಲ್ಲ ವಿದ್ಯಾರ್ಥಿಗಳಿಗೆ ಎರಡು ಹೊತ್ತು ಊಟ ಕೊಡುವದು ಅವನ ಕೆಲಸ. ಆಗಿನ ಕಾಲದಲ್ಲಿ ತಿಂಗಳಿಗೆ 50 ರೂಪಾಯಿ ಮಾತ್ರ. ಪ್ರತಿ ತಿಂಗಳು ಕೊನೆಯ ರವಿವಾರ ಅವನು ಊಟದಲ್ಲಿ ಸ್ವೀಟ್ ಕೊಡಬೇಕು. ಹೀಗಾಗಿ ಪ್ರತಿ ತಿಂಗಳು ಬೇರೆ ಬೇರೆ ಸ್ವೀಟ್ ಆಗಿ ಊಟ ಸ್ಪೆಷಲ್ ಇರುತ್ತಿತ್ತು. ಗೆಳೆಯರೆಲ್ಲಾ ಇವತ್ತು ಈ ಸ್ವೀಟ್ ಇವತ್ತು ಈ ಸ್ವೀಟ್ ಅಂತಾ ಮೊದಲೆ ಸಂಭ್ರಮ ಪಡುತ್ತಿದ್ದರು.

ಹೀಗೆಯೇ ಒಂದು ಸಲ ಪುರಿ ಮತ್ತು ಬಾಸುಂದೆ ನಿರ್ಣಯ ಆಯಿತು. ಎಲ್ಲರೂ ಅದರ ಬಗ್ಗೆ ಮಾತಾಡಿದ್ದು ಸಂಭ್ರಮಿಸಿದ್ದು ಆಯಿತು. ಎಲ್ಲರೂ ಊಟಕ್ಕೆ ಕುಳಿತಾಗ ನಮ್ಮ ಗೆಳೆಯ ” ಪ್ರಭು” ಕೇಳಿದ ಬಾಸುಂದೆ ಎಲ್ಲಿ ತಂದೆಯೋ ಶಂಕ್ರಪ್ಪ..?

“ನಾನ ಹಾಲ್ ತಗೊಂಡ ಬಂದ ಮಾಡಿನರಿ . “ಬಾಸುಂದಿ ಕೊಂಡು ತಗೊಂಡು ಬಂದ್ರೆ ಪುರೋಟ ಆಗುದಿಲ್ಲರಿ” ಇರಲಿ ಎಂದು ಎಲ್ಲರೂ ಸಂತೋಷದಿಂದ ಪುರಿ ಬಾಸುಂದಿ ಸವಿದೆವು. ಶಂಕರಪ್ಪ ಎಲ್ಲರಿಗೂ ಆಗ್ರಹ ಮಾಡಿ ಬಡಿಸಿದ. ಮಾರನೇ ದಿನ ಬೆಳಿಗ್ಗೆ 4 ಗಂಟೆಗೆ ನನ್ನ ಹೊಟ್ಟೆ ಗಡ ಗಡ ಮಾಡಹತ್ತಿತ್ತು. ಬೇಗ ಬೇಗ ಟಾಯ್ಲೆಟ್ ಹತ್ತಿರ ಹೋದೆ. ಟಾಯ್ಲೆಟ್ ಹತ್ತಿರ ದೊಡ್ಡ ಸರತಿ ಸಾಲೆ ನಿಂತಿದೆ. ಇರುವ ಮೂರು ದೇಶಿ ಟಾಯ್ಲೆಟ್ ಫುಲ್ ಬ್ಯುಸಿಯಾಗಿತ್ತು.  ಅಂದು ಕಾಯೋದು ಎಷ್ಟು ಕಷ್ಟ ಅಂತ ಗೊತ್ತಾಯಿತು .

Hou long is one minute depends on which side of the door you are staying

ಎಲ್ಲರಿಗೂ ಭೇದಿ ಹತ್ತಿತ್ತು , ಎಲ್ಲರಿಗೂ ಗಡಿಬಿಡಿ, ಎಲ್ಲಾ ಕಡೆ ಬಾಸುಂದೇ , ಬಾಸುಂದಿಯದೆ ಸುದ್ದಿ. ‘ನಾ ಭಾಳ ತಿಂದಿಲ್ಲ , ನಾ ಸ್ವಲ್ಪ ತಿಂದೇನ’… ಇದ ಎಲ್ಲರ ಮಾತು. ಅದು ಏನಾದರೂ ಆದರೆ ಫಲಿತಾಂಶ ಮಾತ್ರ ಒಂದೇ ಗೆಳೆಯ ಕುಲಕರ್ಣಿ ಹೇಳಿದ ಇದು ಬಾಸುಂದೇ ಅಲ್ಲೋ ಮಾರಾಯಾ ಬಾಸುಂಡೆ , ಛಲೋ ಹೊಡ್ತಾ ಕೊಡತಾ ಇದೆ.

‘ ಆಹಾರದಲ್ಲಿ  ಕಲಬೆರಕೆಯಾಗಿದೆ. ಇದರಿಂದ ಎಲ್ಲರಿಗೂ ಹೊಟ್ಟೆ ಕೆಟ್ಟಿದೆ. ತೊಂದರೆ ಇಲ್ಲ, ಪರೀಕ್ಷೆ ಸಮೀಪ ಇದೆ ಕಾಳಜಿ ವಹಿಸಿರಿ’ ಎಂದು ಡಾ. ಬೊರಕರ ಬಂದು ಎಲ್ಲರಿಗೂ ಇಂಜೆಕ್ಷನ್, ಮಾತ್ರೆ ಕೊಟ್ಟರು.

ಹಾಸ್ಟೆಲ್ ವಾರ್ಡನ್ ಶ್ರೀ ವಿ ಬಾಲಕೃಷ್ಣ ಅವರು “ಇನ್ನ ಮೇಲೆ ನಿನಗೆ ಚೆನ್ನಾಗಿ ಬರುವ ಬೆಲ್ಲದ ಬ್ಯಾಳಿ ಮತ್ತು ಚಪಾತಿ ಮಾತ್ರ ಮಾಡಪಾ ” ಎಂದು ಶಂಕರೆಪ್ಪನಿಗೆ ಹೇಳಿ ಸಮಾಧಾನ ಮಾಡಿದರು. ಹಾಸ್ಟೆಲ್ ಎಂಥದೆ ಇರಲಿ, ಅನುಕೂಲತೆ, ಅನಾನುಕೂಲತೆ ಏನೇ ಇರಲಿ , ಅಲ್ಲಿ ಇರುವ ಅನೇಕ ಗೆಳೆಯರು ಪ್ರತಿಭಾವಂತರಾಗಿ ಒಳ್ಳೆಯ ಹುದ್ದೆ ಅಲಂಕರಿಸಿದ್ದು ಮಾತ್ರ ನೆನಪಿಡುವ ಸಂಗತಿ.


  • ಅರವಿಂದ ಕುಲಕರ್ಣಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW