ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರು “ಯಶೋಧರ ಚರಿತೆ” ಯನ್ನು ಅಮೃತ ಮತಿಯನ್ನು ಕೇಂದ್ರವಾಗಿಸಿ ಚಲನಚಿತ್ರವಾಗಿಸುವ ಮೂಲಕ ಅಂತರರಾಷ್ಟ್ರೀಯ ಪ್ರೇಕ್ಷಕರ ಗಮನಕ್ಕೆ ತಂದಿರುವುದು ಅವರ ಶಿಷ್ಯರಾದ ನಮಗೆಲ್ಲಾ ಹೆಮ್ಮೆಯ ಸಂಗತಿ. ಪ್ರೀತಿಯ ಗುರುಗಳಾದ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪನವರಿಗೆ ಜನ್ಮದಿನದ ಶುಭಾಶಯಗಳು – ರಘುನಾಥ್ ಕೃಷ್ಣಮಾಚಾರ್
ತಮ್ಮ ‘ಅಮೃತ ಮತಿ’ ಚಲನಚಿತ್ರದ ಮೂಲಕ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದ ನಮ್ಮ ಮೇಷ್ಟ್ರು ಬರಗೂರು ರಾಮಚಂದ್ರಪ್ಪ ಅವರಿಗೆ ಅಭಿನಂದನೆಗಳೊಂದಿಗೆ ಕೆಲವು ನೆನಪುಗಳು:
೧೯೭೪: ನಾನು ಮತ್ತು ಗೆಳೆಯರಾದ ಗೀತಾಚಾರ್ಯ ಸರಕಾರಿ ಕಲಾ ಕಾಲೇಜು ಬೆಂಗಳೂರಿನಲ್ಲಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಾಗಿದ್ದೆವು.ಒಂದು ದಿನ ಆ ತರಗತಿಗೆ ತೆಳ್ಳನೆಯ ಉದ್ದದ ವ್ಯಕ್ತಿ ಪ್ರವೇಶ ಮಾಡಿದರು. ಕೂಡಲೇ ” ವ್ಯಾಕರಣ ಎಂದರೆ ಏನು ” ಎಂದು ಪ್ರಶ್ನಿಸಿದರು. ನಾನು ಕಣ್ಣು ಕಣ್ಣು ಬಿಟ್ಟೆ. ‘ಕ್ಯಾ ಕರನಾ” ಎಂದ ಅವರೆ ” ವಾಕ್ಯದ ಕರಣಗಳನ್ನು ಅಭ್ಯಾಸ ಮಾಡುವ ಶಾಸ್ತ್ರವೆ ವ್ಯಾಕರಣ” ಎಂದು ವ್ಯಾಖ್ಯಾನ ಮಾಡಿದರು. ಮರುದಿನ ಅವರು ನಾಪತ್ತೆ ಆದರು. ಎಲ್ಲಿ ಹೋದರು ಎಂದು ತಲೆ ಕೆಡಿಸಿಕೊಂಡದ್ದೆ ಲಾಭ. ಉತ್ತರ ಸಿಗಲಿಲ್ಲ. ಅಲ್ಲಿಯೇ ಬಿ.ಎ.ಮುಗಿಸಿ ಮತ್ತೆ ಕನ್ನಡ ಎಂ.ಎ ಮಾಡಲು ಜ್ಞಾನಭಾರತಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇರಿದೆ. ಆಗ ಮಾಯವಾಗಿದ್ದ ಬರಗೂರು ರಾಮಚಂದ್ರಪ್ಪ ಮತ್ತೆ ಇಲ್ಲಿ ಪ್ರತ್ಯಕ್ಷ ರಾಗಬೇಕೆ?
ಯಶೋಧರ ಚರಿತೆ- ಕಲಿಸಲು. ಹಿಂಸೆ- ಅಹಿಂಸೆಗಳ ಮುಖಾಮುಖಿಯನ್ನು, ಅಷ್ಟಾವಂಕನಿಗೆ “ಪಸಾಯದಾನ ಕೊಟ್ಟು ತನ್ನ ಗಂಡ ಅತ್ತೆಯನ್ನು ವಿಷದ ಲಡ್ಡುಗೆಯನ್ನು ತಿನ್ನಿಸಿ ಕೊಂದ ಅಮೃತಮತಿಯ ವಿಶಿಷ್ಟವಾದ ಕಥಾನಕವನ್ನು ವಿಮರ್ಶೆ ಮಾಡಿದ ನೆನಪು. ಅದರಲ್ಲೂ ಅವರು ಬಳಸಿದ ‘ ಇನ್ವಾಲ್ವಮೆಂಟ್ ಅಂಡ್ ಅವೇರನೆಸ್” ಪರಿಕಲ್ಪನೆಯನ್ನು ಆಧರಿಸಿ ವಿಶ್ಲೇಷಣೆ ಮಾಡಿದ್ದು ಬೆರಗು ಮೂಡಿಸಿತು.
ಪಂಚಪತಿವ್ರತೆಯರನ್ನು ಹೊರತು ಪಡಿಸಿ ಕನ್ನಡ ಸಾಂಸ್ಕೃತಿಕ ಲೋಕವನ್ನು ಕಾಡಿದ ಇಬ್ಬರು ಮಹಿಳೆಯರು ಅಕ್ಕಮಹಾದೇವಿ ಮತ್ತು ಅಮೃತಮತಿಯರು. ಐತಿಹಾಸಿಕ ವ್ಯಕ್ತಿಯಾಗಿ ಅಕ್ಕಮಹಾದೇವಿ ವಿವಿಧ ಬಗೆಯ ವ್ಯಾಖ್ಯಾನಗಳಿಗೆ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಂಡಿದ್ದರೆ.ಅಮೃತ ಮತಿ ಕೂಡ ನಮ್ಮ ಲೇಖಕ, ಲೇಖಕಿಯರನ್ನು ಕಾಡಿ ಅಭಿವ್ಯಕ್ತಿ ಪಡೆದಿದ್ದಾಳೆ.
ಅದರಲ್ಲಿ ಗಿರೀಶ್ ಕಾರ್ನಾಡರ ಹಿಟ್ಟಿನ ಹುಂಜ ನಾಟಕ ಮುಖ್ಯ.
ಈಗ ನನ್ನ ಮೇಷ್ಟ್ರು “ಯಶೋಧರ ಚರಿತೆ” ಯನ್ನು ಅಮೃತ ಮತಿಯನ್ನು ಕೇಂದ್ರವಾಗಿಸಿ ಚಲನಚಿತ್ರವಾಗಿಸುವ ಮೂಲಕ ಅಂತರರಾಷ್ಟ್ರೀಯ ಪ್ರೇಕ್ಷಕರ ಗಮನಕ್ಕೆ ತಂದಿರುವುದು ಅವರ ಶಿಷ್ಯರಾದ ನಮಗೆಲ್ಲಾ ಹೆಮ್ಮೆಯ ಸಂಗತಿ. ಅಭಿನಂದನೆ ಸರ್.
೧೯೭೯: ಬಂಡಾಯ ಸಾಹಿತ್ಯ ಸಂಘಟನೆಗೆ ಸೈದ್ಧಾಂತಿಕ ಬುನಾದಿ ಹಾಕಿದ ಶ್ರೇಯಸ್ಸು ಬರಗೂರು ರಾಮಚಂದ್ರಪ್ಪನವರಿಗೆ ಸಲ್ಲಬೇಕು. ಆಗ ನಡೆದ ಮೊದಲ ಸಮ್ಮೇಳನದ ಸಾಕ್ಷಿ ನಾನು.
ನಾಲ್ಕು ವರ್ಷಗಳ ಹಿಂದೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅದರಲ್ಲಿ “ಒಳನಾಡು ಮತ್ತು ಹೊರನಾಡ ಕನ್ನಡಿಗರು ಬೇರೆ ಬೇರೆ ಯಲ್ಲ” ಎಂಬ ಹೇಳಿಕೆ ನೀಡಿದರು. ಆದರೆ ಬರಿ ಹೇಳಿಕೆ ಯಾಗಿ ಉಳಿಯದೆ ಕಾರ್ಯ ರೂಪದಲ್ಲಿ ಬರಲು ಶ್ರಮಿಸಿದರು. ಅದರ ಪರಿಣಾಮವಾಗಿ ಇಂದು ಹೊರನಾಡಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ದೊರೆಯುತ್ತಿದೆ. ಇದರ ಶ್ರೇಯವು ನನ್ನ ಮೇಷ್ಟ್ರಿಗೆ ಸಲ್ಲಬೇಕು.
ಸಿನಿಮಾ ರಂಗದಲ್ಲಿ ಸ್ವಯಂ ಆಚಾರ್ಯರಾದ ಅವರು ಬೆಂಕಿ, ಬಣ್ಣದ ವೇಷ, ತಾಯಿ , ಯಂತಹ ಅಪೂರ್ವ ಸಿನೆಮಾಗಳನ್ನು ನಿರ್ದೇಶಿಸಿದರು. ಈಗ ನಿರ್ದೇಶಿಸಿದ ” ಅಮೃತಮತಿ” ಮತ್ತು ಅದಕ್ಕೆ ಅವರಿಗೆ ದೊರೆತ ಅಂತರರಾಷ್ಟ್ರೀಯ ಪ್ರಶಸ್ತಿ ಅವರ ಕಿರೀಟಕ್ಕೆ ಇನ್ನೊಂದು ಗರಿ. ಮತ್ತೆ ಅವರ ಯಶೋಧರ ಚರಿತೆಯ ತರಗತಿಯ ನೆನಪಾಗುತ್ತಿದೆ.
ಸದಾ ಚಿರಯುವಕರಂತೆ ಕಂಗೊಳಿಸುವ ಅವರನ್ನು ನಾನು ” ಏನಿದರ ರಹಸ್ಯ ” ಎಂದು ಒಮ್ಮೆ ಕೇಳಿದೆ.ಅದಕ್ಕೆ ಅವರು” ಅದನ್ನು ಕುರಿತು ತಲೆಕೆಡಿಸಿಕೊಳ್ಳದೆ ಇರುವುದರಿಂದ ಹೀಗೆ ಇದ್ದೇನೆ” ಎಂದರು.
ಕೇವಲ ನನ್ನ ಮೇಷ್ಟ್ರು ಆಗಿದ್ದ ಅವರು ಈಗ “ನಾಡೋಜ ” ರಾಗಿದ್ದಾರೆ ಎಂಬುದು ಅವರ ವ್ಯಕ್ತಿತ್ವದ ವಿಕಾಸದ ದ್ಯೋತಕವಾಗಿದೆ ”
- ರಘುನಾಥ್ ಕೃಷ್ಣಮಾಚಾರ್
