“ಪಾಳು ಗುಮ್ಮ” ಇದರ ಹೆಸರೇ ಹೇಳುವಂತೆ ನಿರ್ಜನ ಪ್ರದೇಶಗಳು, ಪಾಳು ಬಿದ್ದಂತಹ ಕೋಟೆಕೊತ್ತಲೆಗಳು ಇದರ ವಾಸಸ್ಥಾನ. ಶುದ್ಧ ನಿಶಾಚರಿ ಆದಂತಹ ಈ ಹಕ್ಕಿಯು ಸ್ಮಶಾನವನ್ನು ಸಹ ತನ್ನ ವಾಸಕ್ಕೆ ಯೋಗ್ಯವೆಂದು ಆರಿಸಿಕೊಳ್ಳುತ್ತದೆ. ಕಣಜಗೂಬೆ ಕುರಿತು ಪರಿಸರವಾದಿ, ಪರಿಸರ ಸಂರಕ್ಷಕ ಚಿದು ಯುವ ಸಂಚಲನ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಫೋಟೋಗಳು…
ನಮ್ಮ ದೊಡ್ಡಬಳ್ಳಾಪುರದ ಎಸ್ ಎಂ ಗೊಲ್ಲಹಳ್ಳಿಯ ಕೆರೆಯ ಆವರಣದಲ್ಲಿ ಸಂಚರಿಸುವಾಗ ನನ್ನ ಪಕ್ಕದಲ್ಲಿದ್ದ ಮರದಿಂದ ಹಾರಿ ದೂರದಲ್ಲಿದ್ದ ಹಲಸಿನ ಮರದ ಮೇಲೆ ಕೂರುತ್ತಲೆ ಇದು ಯಾವ ಹಕ್ಕಿಯಂದು..? ನನ್ನ ಮನಸ್ಸಿನಲ್ಲಿ ಮೂಡಿದ ಗೊಂದಲಕ್ಕೆ ನಾನೇ ನೋಡು ಕಣಜಗೂಬೆ ( ಪಾಳು ಗುಮ್ಮ ) ಎಂದು ತನ್ನ ಮುದ್ದಾದ ಮುಖವ ತೋರಿತು ಈ ಗೊಂಬೆ.
ಇದರ ಚಾಣಾಕ್ಷತನವನ್ನು ಇನ್ನಷ್ಟು ಬಲಪಡಿಸುವಂತೆ ಇರುವ ಇದರ ರೆಕ್ಕೆಗಳು ಸ್ವಲ್ಪವೂ ಶಬ್ದವೇ ಬರದಂತೆ ಇಲಿ, ಹೆಗ್ಗಣ, ಓತಿಕ್ಯಾತ ದಂತಹ ಸಣ್ಣ ಪ್ರಾಣಿಗಳ ಬೇಟೆಯನ್ನು ಯಶಸ್ವಿ ಮಾಡಲು ಸಹಕರಿಸುತ್ತದೆ. ನಾನು ಇದನ್ನು ಸಮಾಧಾನವಾಗುವವರೆಗೂ ಕಣ್ತುಂಬಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ ಈ ಗೂಬೆಯು ಸಹ ನನ್ನ ಕಣ್ತಪ್ಪಿಸಿಕೊಂಡು ಮರೆಯಾಗುವ ತಂತ್ರದಲ್ಲಿ ತೊಡಗಿತ್ತು ನಮ್ಮಿಬ್ಬರ ನಡುವಿನಲ್ಲಿ ಇಬ್ಬರು ಅನಿರೀಕ್ಷಿತ ಅತಿಥಿಗಳು ಬಂದರು. ಬಂದಕೂಡಲೇ ಈ ಪಾಳು ಗುಮ್ಮವನ್ನು ಎದುರಿಸುವ ಓಡಿಸುವ ಪ್ರಯತ್ನದಲ್ಲಿ ತೊಡಗಿದರು, ಹದ್ದಿನ ಗಾತ್ರದಲ್ಲಿದ್ದರೂ ಪಾಳು ಗುಮ್ಮವನ್ನು ಕಾಗೆಗಳು ಓಡಿಸುತ್ತವೆಯೇ…? ಇಲ್ಲ ಕಾಳಗ ಜೋರಾಗಿ ನಡೆಯಬಹುದು ಎಂದು ಊಹಿಸಿದೆ. ಕಾತುರದಿಂದ ವೀಕ್ಷಿಸುತ್ತಿದ್ದೆ ಆದರೆ ನನ್ನ ಊಹೆ ಸ್ವಲ್ಪಮಟ್ಟಿಗೆ ಹುಸಿಯಾಯಿತು ಕಾಗೆಗಳು ತಮ್ಮ ಬಲಪ್ರದರ್ಶನವನ್ನೂ ಚೆನ್ನಾಗಿಯೇ ಪ್ರದರ್ಶಿಸಲು ಮುಂದಾದವು.
ನನ್ನ ಕಣ್ಣಿಂದ ತಪ್ಪಿಸಿಕೊಳ್ಳಲು ಪಾರಾಗುತ್ತಿದ್ದ ಪಾಳು ಗುಮ್ಮ ಈ ಬಾರಿ ಕಾಗೆಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುವ ಪರಿಸ್ಥಿತಿ ಒದಗಿ ಬಂತು. ಕಾಗೆಗಳಿಂದ ತಪ್ಪಿಸಿಕೊಳ್ಳಲು ಒಂದೇ ಸಮನೆ ದೂರದ ಮರದ ಕಡೆಗೆ ಹಾರಿ ಕುಳಿತ ಗುಮ್ಮನಿಗೆ ಇನ್ನೊಂದು ಸಂಕಷ್ಟ ಬೆನ್ನು ಹತ್ತಿತ್ತು ಅದು ಎಲ್ಲಿತ್ತೋ ನಾನು ಕಾಣೆ ದೂರದಿಂದ ರಭಸವಾಗಿ ಬಂದ ಕೋಗಿಲೆಯು ಸಹ ತನ್ನ ಶಕ್ತಿ ಪ್ರದರ್ಶವನ್ನು ಮಾಡಿಯೇ ಬಿಟ್ಟಿದ್ದು. ಈ ಬಾರಿ ನನ್ನಿಂದ ಕಾಗೆಗಳಿಂದ ಕೋಗಿಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪಾಳು ಗುಮ್ಮ ಹಾರಿ ಯಶಸ್ವಿಯಾಗಿ ತುಂಬಾ ದೂರಕ್ಕೆ ಕಣ್ಮರೆಯಾಗಿ ಬಿಟ್ಟಿತು.
- ಚಿದು ಯುವ ಸಂಚಲನ (ಪರಿಸರವಾದಿಗಳು, ಲೇಖಕರು), ದೊಡ್ಡಬಳ್ಳಾಪುರ.
