‘ಕುಂಟು ಶೆಟ್ಟರ ಹೋಟೆಲ್’ ಎಂದೇ ಪ್ರಖ್ಯಾತಿ ಪಡೆದಿರುವ ಸಾಗರ ಪೇಟೆಯ ಹೆಸರಾಂತ ಬಸಪ್ಪ ಶೆಟ್ಟರ ಜೈಹಿಂದ್ ಹೋಟೆಲ್. ನಾಟಿ ಕೋಳಿ ಅಕ್ಕಿರೊಟ್ಟಿ ಅವರ ಹೋಟಲ್ ಸಿಗ್ನೇಚರ್ ರೆಸಿಪಿ. ಆ ಕಾಲದಲ್ಲಿ ಸಾಗರಕ್ಕೆ ಬರುತ್ತಿದ್ದ ಗಣ್ಯಾತಿಗಣ್ಯರ ಅಚ್ಚುಮೆಚ್ಚಾಗಿದ್ದ ಊಟವಾಗಿತ್ತು. ಈ ಹೋಟೆಲ್ ಕುರಿತು ಅರುಣ್ ಪ್ರಸಾದ್ ತಪ್ಪದೆ ಮುಂದೆ ಓದಿ…
ಸಾಗರ ಪಟ್ಟಣದ ಬಿ.ಹೆಚ್. ರಸ್ತೆಯ ಕುಂಟು ಶೆಟ್ಟರೆಂದೇ ಪ್ರಸಿದ್ದರಾದ ಶೆಟ್ಟರ ನಾಟಿ ಕೋಳಿಯ #ಜೈಹಿಂದ್ ಹೋಟೆಲ್ ಪಡೆದಷ್ಟು ಪ್ರಸಿದ್ಧಿ ಈ ವರೆಗೆ ಯಾವುದೇ ಹೋಟೆಲ್ ಅಲ್ಲಿ ಪಡೆದಿಲ್ಲ. ಅಕ್ಕಿರೊಟ್ಟಿ ನಾಟಿಕೋಳಿ ಸಾರಿನ ಆಕಾಲದ ಸುಪ್ರಸಿದ್ಧ ಹೋಟೆಲ್ ಇದು.
ನಾಟಿಕೋಳಿ ಮಸಾಲೆ ತಿರುವ ಕಲ್ಲಿನಲ್ಲಿ ರುಬ್ಬುವುದು, ಕಟ್ಟಿಗೆ ಒಲೆ ಬಳಕೆಯ ದೇಸಿ ಹೋಟೆಲ್ ಇದಾಗಿತ್ತು. ಈಗಿನ ಸಾಗರದ ಮಧ್ಯ ಬಸ್ ಸ್ಟ್ಯಾಂಡ್ ನಲ್ಲಿ ಬಾರ್ನಸ್ ಅವರ ಬಾಡಿಗೆ ಕಟ್ಟಡದಲ್ಲಿ ಶೆಟ್ಟರ ಈನಾಟಿ ಕೋಳಿ ಹೋಟೆಲ್ ಕೆಲವು ದಶಕಗಳ ಕಾಲ ಸುಪ್ರಸಿದ್ಧ ಆಗಿತ್ತು.
ಈ ಶೆಟ್ಟರಿಗಾಗಿಯೇ ನಾಟಿ ಕೋಳಿ ಸಾಕುವವರು ಸಾಗರ ತಾಲ್ಲೂಕಿನ ಹೆಗ್ಗೋಡು ಮತ್ತು ಆವಿನಳ್ಳಿ ಭಾಗಗಳಲ್ಲಿ ಇದ್ದರು. ಇಲ್ಲಿನ ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಮಲೆನಾಡಿನ ಮೂರು ತಾಲ್ಲೂಕುಗಳಾದ ಸಾಗರ, ಹೊಸನಗರ ಮತ್ತು ಸೊರಬ ತಾಲ್ಲೂಕಿನ ಜನರಿಗೆ ಆಕಷ೯ಣೀಯ ಹೋಟೆಲ್ ಇದು ಆಗಿತ್ತು.

12 ಅಡಿ ಅಗಲ 50 ಅಡಿ ಉದ್ದದ ಬಾನ೯ಸ್ ಕುಟುಂಬದ ಮಾಲೀಕತ್ವದ ಸಣ್ಣ ಕಟ್ಟಡದ ಜಾಗದಲ್ಲಿ ಇವರ ಹೋಟೆಲ್ ಸುಮಾರು 3 ದಶಕ ಪ್ರಖ್ಯಾತಿ ಪಡೆದಿತ್ತು. ಸುಂದರ ಮೈಕಟ್ಟಿನ ಬಿಳಿ ವರ್ಣದ ಎತ್ತರದ ಆಳು ಶೆಟ್ಟರು ಸದಾ ಬಾಯಲ್ಲಿ ಕವಳ ಜಗಿಯುತ್ತಾ ಇರುತ್ತಿದ್ದರು.
ಪಟ್ಟೆ ಪಟ್ಟೆ ಲುಂಗಿ ಮತ್ತು ಬಣದ ಬನಿಯನ್ ಅವರ ದಿರಿಸು ಅವರ ಕ್ಯಾಶ್ ಟೇಬಲ್ ತುಂಬಾ ಸಣ್ಣದು. 1996 ರ ನಂತರ ಇವರ ವೃದ್ಧಾಪ್ಯದಿಂದ ಮತ್ತು ಸದರಿ ಜಾಗದಲ್ಲಿ ಹೊಸ ಕಟ್ಟಡ ಕಾಮಗಾರಿಗಾಗಿ ಶೆಟ್ಟರು ಹೋಟೆಲ್ ತ್ಯಜಿಸಿದರಂತೆ.
ಅವರ ಮೂಲ ಊರಾದ ಕರಾವಳಿಯ ಕುಂದಾಪುರದ ಹಳ್ಳಿಯಲ್ಲಿ ಸುಸಜ್ಜಿತ ಮನೆ ಆಸ್ತಿ ಮಾಡಿದ್ದಾರೆ ಅಂತ ಜನ ಹೇಳುತ್ತಿದ್ದನ್ನ ಕೇಳಿದ್ದೆ. ನಂತರ ಈ ರೀತಿಯ ಹೋಟೆಲ್ ಸಾಗರದಲ್ಲಿ ಯಾವುದೂ ಬರಲಿಲ್ಲ ಬೆಂಗಳೂರಿನಲ್ಲಿ ಇಂತಹ ಹೊಸರೀತಿಯ ಹೋಟೆಲ್ ಗಳು ಪ್ರಸಿದ್ಧವಾಗಿದೆ.
ಸ್ಥಳಿಯವಾಗಿ ಬೆಳೆಸುವ ನಾಟಿ ಕೋಳಿ ಮತ್ತು ಸ್ಥಳಿಯವಾಗಿ ಬೆಳೆಯುವ ಅಕ್ಕಿ ಇದನ್ನು ಬಳಸಿ ಸ್ವಯಂ ಉದ್ಯೋಗ ಮಾಡುವ ಸಾಧ್ಯತೆ ಕೆಲವು ದಶಕದ ಹಿಂದೆಯೇ ಶೆಟ್ಟರು ತೋರಿಸಿ ಕೊಟ್ಟಿದ್ದಾರೆ. ಅವರು ನಡೆಯುವಾಗ ಸಣ್ಣದಾಗಿ ಕು೦ಟುತ್ತಿದ್ದರಿಂದ ಈ ಹೆಸರು ಅವರಿಗೆ ಬಂದಿತ್ತು. ಅದನ್ನು ಶೆಟ್ಟರೂ ವಿರೋಧಿಸಲಿಲ್ಲ. ಹಾಗಾಗಿ ಅದೇ ಅವರ ಖಾಯಂ ಹೆಸರಾಗಿತ್ತು.
ಈಗಲೂ ಅವರ ಮೂಲ ಹೆಸರು ಯಾರಿಗೆ ಕೇಳಿದರೂ ಗೊತ್ತಿಲ್ಲ.
ಶೆಟ್ಟರ ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಒಂದು ಕಾಲದಲ್ಲಿ ಸಾಗರಕ್ಕೆ ಬರುವ ಮಂತ್ರಿ ಮಹೋದಯರಿಂದ ಚಲನಚಿತ್ರ ನಟ- ನಟಿಯರವರೆಗೆ ಪ್ರಸಿದ್ದಿ ಪಡೆದಿತ್ತು. ಈಗಲೂ ಗೊತ್ತಿರುವವರು ಶೆಟ್ಟರನ್ನ ನೆನಪಿಸಿಕೊಳ್ಳುತ್ತಾರೆ.
ಈ ಶೆಟ್ಟರ ಬಗ್ಗೆ ಅಬಕಾರಿ ಗುತ್ತಿಗೆದಾರರೂ ಆಗಿದ್ದ ಈಗ ಸಾಗರದ ಇಕ್ಕೇರಿ ರಸ್ತೆಯ ಸಿಗಂದೂರೇಶ್ವರಿ ಪೆಟ್ರೋಲ್ ಬಂಕ್ ಮಾಲಿಕರಾದ #ನಾರಾಯಣರಾಯರು ಹೇಳಿದ್ದು, ರಾಷ್ಟ್ರೀಯ ಹೆದ್ದಾರಿ ಬರುವುದರಿಂದ ಶೆಟ್ಟರ ಹೋಟೆಲ್ ತೆಗೆಯಬೇಕೆಂಬ ಭಯದಿಂದ ಹೃದಯಾಘಾತದಿಂದ ಶೆಟ್ಟರು ಮೃತರಾದರೆಂದು ಮತ್ತು ಶೆಟ್ಟರ ನಿಧನದಿಂದ ಅವತ್ತು ಸಾಗರದ ವರ್ತಕರು ಅವರ ಗೌರವಾರ್ಥ ಸಾಗರ ಪೇಟೆ ಬಂದ್ ಮಾಡಿದ್ದರಂತೆ.
ಶೆಟ್ಟರ ಅಸಲಿ ಹೆಸರು ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಮತ್ತು ಮಾಜಿ ಮಂತ್ರಿಗಳಾದ # ಹರತಾಳು ಹಾಲಪ್ಪನವರು ತಿಳಿಸಿದ್ದಾರೆ ಶೆಟ್ಟರ ಅಸಲಿ ಹೆಸರು ಬಸಪ್ಪ ಶೆಟ್ಟರು ಅಂತೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
