ಕವಿ ಶಂಕರಾನಂದ ಹೆಬ್ಬಾಳ ಅವರ ‘ಬಯಕೆಯ ಬೆನ್ನೇರಿ’ ಕವನವನ್ನು ತಪ್ಪದೆ ಮುಂದೆ ಓದಿ…
ಬೆಳ್ಳಕ್ಕಿಗಳ ಸಾಲಿನಲಿ
ನಿನ್ನ ಹೆಜ್ಜೆಗಳ ಗುರುತುಗಳ
ಹುಡುಕುತಿದ್ದೇನೆ..!
ಬೀಸುವ ಗಾಳಿಯಲಿ
ನಿನ್ನೊಲವಿನ ಸವಿಗಾನದಿ
ತೇಲುತಿದ್ದೇನೆ…!
ಹರಿವ ಜಲಧಾರೆಯಲಿ
ನಿನ್ನ ಪ್ರತಿಬಿಂಬವನು
ನೋಡುತಿದ್ದೇನೆ…!
ಅನುರಾಗದ ಆಮೋದದಿ
ನಲ್ಲೆಯ ನೂಪುರನಾದದಿ
ಕುಣಿಯುತಿದ್ದೇನೆ…!
ಇಂದ್ರಚಾಪದ ಮೇಲೆ
ಕಲ್ಯಾಣ ಮಂಟಪವ ಕಟ್ಟಿ
ಕಾಯುತ್ತಿದ್ದೇನೆ…!
ಬಯಕೆಯಂಬ ಭೃಂಗದ ಬೆನ್ನೇರಿ
ಜೀವನದಿ ಹೊಂಗನಸನು ಕಾಣುತ
ಕಳೆಯುತಿದ್ದೇನೆ…!
- ಶಂಕರಾನಂದ ಹೆಬ್ಬಾಳ
