‘ಬೆಳಕ ಹುಡುಕಿ’ ಕವನ – ಕು.ಸ.ಮಧುಸೂದನ ರಂಗೇನಹಳ್ಳಿ

ಬೆಳಕ ಹುಡುಕಿ ಹೊರಟವರಿಗೆ ಸಹಸ್ರ ಸೂರ್ಯರೂ ಸಾಲರು, ಮನಸು ಮುಚ್ಚಿಕೊಂಡು ಕೂತ ಮನುಷ್ಯರಿಗೆ!…ಕವಿ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ಕವಿತೆಯ ಸುಂದರ ಸಾಲುಗಳು ಓದುಗರ ಮುಂದೆ ತಪ್ಪದೆ ಮುಂದೆ ಓದಿ…

ಬೆಳಕ ಹುಡುಕಿ
ಹಾಗೆ ಬೆಳಕು ಹುಡುಕಿ
ಹೊರಟವರೆಲ್ಲ ನಾಚುವಂತೆ
ಮಿಂಚುಹುಳುವೊಂದು
ಆ ಕತ್ತಲೆಯ ಕ್ಷಣದಲ್ಲಿ ಹಾದು ಹೋಯಿತು!

ಕಣ್ಣು ಕೋರೈಸುವ ಬೆಳಕಿರದಿದ್ದರೂ
ದಾರಿಗಾಣದೆ ದಿಕ್ಕೆಟ್ಟು ನಿಂತವನಿಗಷ್ಟು
ಆತ್ಮವಿಶ್ವಾಸ ತುಂಬಿತು.

ಬೆಳಕಲ್ಲಿ ಬೆತ್ತಲಾಗದೀ ಜಗದೊಳಗೆ
ಎಲ್ಲಿ ಕತ್ತಲಿಲ್ಲ ಹೇಳು
ಮನೆಯ ಪ್ರತಿ ಮೂಲೆಯೊಳಗೆ
ಮನಸಿನ ಸ್ವಂತ ಕೋಣೆಯೊಳಗೆ
ಹಾಗೆ ಹೊರಬಂದರೆ
ಬಕ್ಕಬೋರಲಾಗಿ ಬಿದ್ದ ಬಯಲೊಳಗೆ
ಅಷ್ಟೂ ದೇವರ ಗರ್ಭಗುಡಿಯೊಳಗೆ
ಮಸೀಧಿಮಂದಿರಗಳ ಅಂಗಳದೊಳಗೆ
ಇಗರ್ಜಿಗಳ ಶಾಂತ ಮೌನದೊಳಗೆ

ಸಭ್ಯ ಸಜ್ಜನರ ಮಹಲುಗಳೊಳಗೆ
ಖೈದಿಗಳ ಕೂಡಿಹಾಕಿದ ಕಾರಾಗೃಹದೊಳಗೆ
ಸ್ಮಶಾನದ ಗೋರಿಗಳ ಆಳದೊಳಗೆ
ಕಡಲಂತ ಕತ್ತಲಿಗೆ ಕೊನೆಯೆಲ್ಲಿ?

ಬೆಳಕ ಹುಡುಕಿ ಹೊರಟ
ಅಜ್ಞಾನಿಗಳ ಹುಡುಕಾಟದಲ್ಲಿ.
ಕತ್ತಲಿಗಿಂತ ಅಧಿಕ ಬೆಳಕುಂಟು
ಕಾಣುವ ಕಣ್ಣಿರುವವರಿಗೆ
ಸಹಸ್ರ ಸೂರ್ಯರೂ ಸಾಲರು
ಮನಸು ಮುಚ್ಚಿಕೊಂಡು
ಕೂತ ಮನುಷ್ಯರಿಗೆ!


  • ಕು.ಸ.ಮಧುಸೂದನ ರಂಗೇನಹಳ್ಳಿ – (ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿ ಎನ್ನುವ ಹಳ್ಳಿಯಲ್ಲ ನೆಲೆಸಿರುವ ಇವರು ‘ಸಂಗಾತಿ’ ಸಾಹಿತ್ಯದ ವೆಬ್ ಪತ್ರಿಕೆಯ ಸಂಸ್ಥಾಪಕರ, ಪ್ರಧಾನ ಸಂಪಾದಕರಾಗಿರುವ ಇವರು ಇದುವರೆಗು ನಾಲ್ಕು ಕವನ ಸಂಕಲನಗಳನ್ನು, ಎರಡು ಕಥಾ ಸಂಕಲನಗಳನ್ನು,ಎರಡು ರಾಜಕೀಯ ಬರಹಗಳ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading