ಬೆಳಕಿನ ಮರಿಗಳು ನಾವೆಲ್ಲಾ

ಸಸ್ಯಹಾರಿಯಲ್ಲದ ಅನೇಕ ಪ್ರಭೇದಗಳ ಪ್ರಾಣಿಗಳಿದ್ದರೂ ಅವು ತಿನ್ನುವ ಮಾಂಸಾಹಾರವೂ ಸಸ್ಯಾಹಾರಿಯಾದ ಪ್ರಾಣಿಗಳಿಂದಲೇ ಬಂದಿರುತ್ತವೆ. ಅಂತಿಮವಾಗಿ ಅಹಾರ ಸರಪಳಿ ಬಂದು ತಲುಪುವುದು ಸಸ್ಯಗಳು ನಮಗೆ ಒದಗಿಸುವ ಧಾನ್ಯ, ಬೇಳೆಕಾಳು, ಎಣ್ಣೆಕಾಳು, ಹಣ್ಣು, ತರಕಾರಿ, ಸೊಪ್ಪು, ಗಡ್ಡೆ ಗೆಣಸು ಇತ್ಯಾದಿ ಸಸ್ಯೋತ್ಪನ್ನಗಳಿಗೆ ಆಗಿರುತ್ತದೆ. ಶ್ರೀಪಾದ ಹೆಗಡೆ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ….

ಭೂಮಿಯ ಮೇಲಿನ ಎಲ್ಲ ಜೀವಿಗಳಿಗೆ ಶಕ್ತಿಯನ್ನು ಕೊಡುವುದು ಸೂರ್ಯನ ಬೆಳಕು. ನಾವು ಅಹಾರದ ರೂಪದಲ್ಲಿ ತಿನ್ನುವುದು ಬೇರೆ ಏನಲ್ಲ, ಸೂರ್ಯನ ಬೆಳಕಿನಲ್ಲಿರುವ ಶಕ್ತಿಯನ್ನು. ಸೂರ್ಯನ ಗುರುತ್ವಾಕರ್ಷಣೆ ಹೇಗೆ ಭೂಮಿಯನ್ನು ಹಿಡಿದಿಟ್ಟಿದೆ, ಅದರಿಂದಾಗಿ ದಿನ ರಾತ್ರಿಗಳಾಗುತ್ತವೆ, ಭೂಮಿಯ ಮೇಲೆ ಜೀವ ಉದಯಿಸಲು ಬೇಕಾದ ಹದವಾದ ಉಷ್ಣತೆ ಮತ್ತು ವಾತಾವರಣವನ್ನು ಉಂಟು ಮಾಡುವಲ್ಲಿ ಸೂರ್ಯನ ಬೆಳಕು ಎಷ್ಟು ಮಹತ್ವ ಎಂಬಿತ್ಯಾದಿ ವಿಷಯಗಳನ್ನು ನಾವು ತಿಳಿದು ಬಲ್ಲೆವು. ಇಡಿ ಜೀವ ಜಗತ್ತಿಗೆ ಅಹಾರ ಬರುವುದು ಸಸ್ಯದಿಂದ ಮಾತ್ರ. ಸಸ್ಯಹಾರಿಯಲ್ಲದ ಅನೇಕ ಪ್ರಭೇದಗಳ ಪ್ರಾಣಿಗಳಿದ್ದರೂ ಅವು ತಿನ್ನುವ ಮಾಂಸಾಹಾರವೂ ಸಸ್ಯಾಹಾರಿಯಾದ ಪ್ರಾಣಿಗಳಿಂದಲೇ ಬಂದಿರುತ್ತವೆ. ಅಂತಿಮವಾಗಿ ಅಹಾರ ಸರಪಳಿ ಬಂದು ತಲುಪುವುದು ಸಸ್ಯಗಳು ನಮಗೆ ಒದಗಿಸುವ ಧಾನ್ಯ, ಬೇಳೆಕಾಳು, ಎಣ್ಣೆಕಾಳು, ಹಣ್ಣು, ತರಕಾರಿ, ಸೊಪ್ಪು, ಗಡ್ಡೆ ಗೆಣಸು ಇತ್ಯಾದಿ ಸಸ್ಯೋತ್ಪನ್ನಗಳಿಗೆ ಆಗಿರುತ್ತದೆ. ಇಲ್ಲಿ ನಾನು ಇದನ್ನು ಮಾಂಸಹಾರವನ್ನು ಕಡೆಗಣಿಸಿ ಸಸ್ಯಹಾರವನ್ನು ಎತ್ತಿ ಹಿಡಿಯುವ ಯಾವ ಉದ್ದೇಶದಿಂದಲೂ ಹೇಳುತ್ತಿಲ್ಲ. ಸಸ್ಯಹಾರವನ್ನು ತಿಂದ ಪ್ರಾಣಿಗಳು ತಮ್ಮ ಮೈಯಲ್ಲಿ ಸಸ್ಯಗಳಲ್ಲಿ ಆ ಪ್ರಮಾಣದಲ್ಲಿ ಕಾಣಲಾಗದ ಕೊಬ್ಬು, ಪ್ರೊಟೀನ್, ಕೆಲವು ವಿಟಾಮಿನಗಳನ್ನು ತಯಾರಿಸಿ ಶೇಖರಿಸಿ ಕೊಂಡಿರುತ್ತವೆ ಮತ್ತು ಅವುಗಳನ್ನು ತಿನ್ನುವುದರಿಂದ ಸಿಗುವ ಆರೋಗ್ಯದ ಲಾಭ ಇತ್ಯಾದಿ ಅಂಶಗಳನ್ನು ಅಲ್ಲಗಳೆಯುತ್ತಲೂ ಇಲ್ಲ. ಬೆಳಕಿನ ಶಕ್ತಿಯೇ ಜೀವ ಜಗತ್ತನ್ನು ಹೇಗೆ ತುಂಬಿ ಕೊಂಡಿದೆ ಎಂದು ಹೇಳುವುದು ನನ್ನ ಉದ್ದೇಶ.

ಅಂತಿಮವಾಗಿ ಸಸ್ಯಗಳು ತಯಾರಿಸಿದ ಉತ್ಪನ್ನಗಳೇ ನಮ್ಮ ಅಹಾರದ ಮೂಲ. ಸಸ್ಯಗಳು ಏನನ್ನು ಉಂಡು ಬೆಳೆಯುತ್ತವೆ ಮತ್ತು ಹಣ್ಣು-ಕಾಯಿ, ಧವಸ-ಧಾನ್ಯಗಳನ್ನು ತಯಾರಿಸುತ್ತವೆ ಎನ್ನುವ ವಿಷಯವಾಗಿ ನಮ್ಮಲ್ಲಿ ಸರ್ವೇ ಸಾಧಾರಣವಾದ ಒಂದು ತಪ್ಪು ತಿಳುವಳಿಕೆ ಇದೆ; ಸಸ್ಯಗಳು ಭೂಮಿ ಅಥವಾ ಮಣ್ಣಿನಲ್ಲಿರುವ ಸಾರಾಂಶವನ್ನು ಹೀರಿಕೊಂಡು ಬೆಳೆಯುತ್ತವೆ, ಬಿಸಿಲು ಮತ್ತು ಗಾಳಿ ನಿಮಿತ್ತ ಮಾತ್ರ ಎಂದು. ನಿಜವಾಗಿ ಸಸ್ಯಗಳಲ್ಲಿ ಪ್ರತಿಶತ 95 ರಷ್ಟು ಪ್ರಮಾಣದಲ್ಲಿ ತುಂಬಿ ಕೊಂಡಿರುವುದು ಅವು ಗಾಳಿಯಿಂದ ಪಡೆದ ಇಂಗಾಲಾಮ್ಲ, ಆಮ್ಲಜನಕದಂತಹ ಅನಿಲಗಳಲ್ಲಿ ಹಿಡಿದಿಟ್ಟು ಕೊಂಡಿರುವ ಸೌರ ಶಕ್ತಿ. ಶಾಲಾ ಕಾಲೇಜುಗಳಲ್ಲಿ ಸಸ್ಯಗಳು ನಡೆಸುವ ದ್ಯುತಿ ಸಂಶ್ಲೇಷಣೆ (photosynthesis) ಬಗ್ಗೆ ನಾವೆಲ್ಲ ಓದಿ ತಿಳಿದಿರುತ್ತೇವೆ, ಆದರೆ ಸಸ್ಯಗಳ ಮೈಯಲ್ಲಿ ಇಷ್ಟು ಹೆಚ್ಚು ಪ್ರಮಾಣದಲ್ಲಿ ಸೌರ ಶಕ್ತಿ ತುಂಬಿರುತ್ತದೆ ಎನ್ನುವ ವಿಷಯ ಮನದಟ್ಟಾಗಿರುವುದಿಲ್ಲ. ಸೌರ ಶಕ್ತಿಯನ್ನು ಉಪಯೋಗಿಸಿ ದ್ಯುತಿ ಸಂಶ್ಲೇಷಣೆ ನಡೆಸಿ ಅವುಗಳ ಎಲೆಗಳಲ್ಲಿ ಅದನ್ನು ಸಂಗ್ರಹಿಸುತ್ತವೆ ಎಂದು ಓದಿರುತ್ತೇವೆ. ಆದರೆ ಅಷ್ಟು ದೊಡ್ಡದಾಗಿ ಮತ್ತು ಎತ್ತರವಾಗಿ ಬೆಳೆಯುವ ಮರಗಿಡಗಳ ಕಾಂಡ ಕೊಂಬೆಗಳಲ್ಲಿಯೂ ತುಂಬಿರುವುದು ಎಲೆಗಳಿಂದ ಪೂರೈಕೆಯಾದ ಆಹಾರವೇ ಆಗಿರುತ್ತದೆ ಎನ್ನುವುದು ಸಾಮಾನ್ಯರಿಗೆ ಹೊಳೆದಿರುವುದಿಲ್ಲ. ಏಕೆಂದರೆ ಸಸ್ಯಗಳು ಮಣ್ಣಿನಿಂದ ಎದ್ದು ಬರುತ್ತವೆ ಮತ್ತು ನೆಲದೊಳಗೆ ಆಳದ ವರೆಗೆ ಬೇರು ಚಾಚಿರುತ್ತವೆ, ಇದರಿಂದ ಮರ ಗಿಡಗಳ ಸತ್ವವೆಲ್ಲವೂ ಮಣ್ಣಿನಲ್ಲಿರುವ ಪೋಷಕಾಂಶದಿಂದಲೇ ಬರುತ್ತವೆ ಎಂದು ಸ್ವಾಭಾವಿಕವಾಗಿ ಅಂದು ಕೊಂಡಿರುತೇವೆ. ಇದು ಭಾಗಶಃ ಮಾತ್ರ ಸತ್ಯ, ನೈಟ್ರೋಜನ್, ಪೊಟೇಶಿಯಮ್ ಮತ್ತು ಇತರ ಹಲವು ಬಗೆಯ ಖನಿಜಗಳನ್ನು ಸಸ್ಯ ಮಣ್ಣಿನಿಂದಲೇ ಪಡೆಯುತ್ತದೆ. ಆದರೆ ಒಂದು ಮರದ ತೂಕದಲ್ಲಿ ಇವುಗಳ ಒಟ್ಟೂ ಪ್ರಮಾಣ 5 % ಸಹ ದಾಟಿರುವುದಿಲ್ಲ. ಅಷ್ಟಾಗಿಯೂ ಸಸ್ಯಗಳ ಬೆಳವಣಿಗೆಯಲ್ಲಿ ಇವು ವೇಗವರ್ಧಕಗಳಾಗಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ ಎನ್ನುವುದನ್ನು ಅಲ್ಲಗಳೆಯಲಾಗದು.

ಹದಿನೇಳನೇಯ ಶತಮಾನದ ಮಧ್ಯ ಭಾಗದ ವರೆಗೆ ಸಸ್ಯಗಳು ಬೆಳೆಯುವುದೇ ಮಣ್ಣಿನಲ್ಲಿರು ಸತ್ವವನ್ನು ಹೀರಿಕೊಂಡು ಎಂದು ಎಲ್ಲರೂ ತಿಳಿದಿದ್ದರು. ವಾನ್ ಹೆಲ್ಮೊಂಟ್ ಎನ್ನುವ ಬೆಲೆಜಿಯಮ್ ವಿಜ್ಞಾನಿ (1580-1644) ಒಂದು ಪ್ರಯೋಗ ಮಾಡುತ್ತಾನೆ: 5 ಪೌಂಡ್ ತೂಕದ ಸಸ್ಯವೊಂದನ್ನು 200 ಪೌಂಡ್ ತೂಕದ ಒಣ ಮಣ್ಣಿನಲ್ಲಿ ನೆಟ್ಟು ಅದಕ್ಕೆ ದಿನಾಲೂ ಯಾವ ಖನಿಜಗಳ ಅಂಶಗಳಿಲ್ಲದ ಬಟ್ಟಿ ಇಳಿಸಿದ ಶುದ್ಧ ನೀರನ್ನು ಹುಯ್ಯುತ್ತಾ ಬೆಳೆಸುತ್ತಾನೆ. ಐದು ವರ್ಷಗಳ ನಂತರ ಆ ಸಸ್ಯವನ್ನು ಕಿತ್ತು ತೂಕ ಹಾಕಿದಾಗ ಅದು 169 ಪೌಂಡ್ ಆಗಿರುತ್ತದೆ. ಒಣ ಮಣ್ಣನ್ನು ತೂಗಿದಾಗ ಕೇವಲ 5 ಔನ್ಸಿನಷ್ಟು ಅದರ ತೂಕ ಕಡಿಮೆಯಾಗಿರುತ್ತದೆ. ಆದ್ದರಿಂದ ಸಸ್ಯ ಬೆಳೆಯುವುದೇ ನೀರಿನಿಂದ ಎನ್ನುವ ತೀರ್ಮಾನಕ್ಕೆ ಆತ ಬರುತ್ತಾನೆ. ಸಸ್ಯಗಳು ತನ್ನ ಸುತ್ತಲಿನ ಗಾಳಿಯಿಂದ ಇಂಗಾಲಾಮ್ಲ ಅನಿಲವನ್ನು ಮತ್ತು ಸೌರ ಶಕ್ತಿಯನ್ನು ಬಳಸಿ ದ್ಯುತಿ ಸಂಶ್ಲೇಷಣೆ ನಡೆಸಿ ಶಕ್ತಿಯನ್ನು ಪಡೆದುಕೊಳ್ಳುತ್ತವೆ ಎಂದು ತಿಳಿದು ಬಂದಿದ್ದು ಇದಾದ 150 ವರ್ಷಗಳ ನಂತರ. ಅನಂತರದ ಕಾಲದಲ್ಲಿ ವಾಲ್ ಹೆಲ್ಮೊಂಡ್ ಮಾಡಿದ ಪ್ರಯೋಗವನ್ನೆ ಮುಂದುವರಿಸಿ ಸಸ್ಯವನ್ನು ಒಣಗಿಸಿ ಅದರಲ್ಲಿರುವ ತೇವದ ಅಂಶವೆಲ್ಲಾ ಹೋದ ಮೇಲೆ ತೂಕ ಹಾಕಿ ನೋಡಲಾಗಿದೆ. ಇಂತಹ ಎಲ್ಲ ಪ್ರಯೋಗಗಳಿಂದ ತಿಳಿದು ಬಂದಿದ್ದೆಂದರೆ ಸಸ್ಯಗಳ ತೂಕದಲ್ಲಿ ನೂರರಲ್ಲಿ ಐದು ಪಾಲಿನಷ್ಟನ್ನು ಮಾತ್ರ ಮಣ್ಣಿನಿಂದ ಬಂದಿರುತ್ತವೆ ಎಂದು.

ಜೀವಂತ ಸಸ್ಯ ಮತ್ತು ಪ್ರಾಣಿಗಳ ತೂಕದಲ್ಲಿ ನೀರಿನ ಪಾಲು ದೊಡ್ಡದಾದರೂ ಶಕ್ತಿ ಸಂಚಯದ ಬಹು ಪಾಲು ಕಾರ್ಬೋಹೈಡ್ರೇಟ್ ರೂಪದಲ್ಲಿರುತ್ತವೆ ಮತ್ತು ಪಚನಕ್ರಿಯೆಯಿಂದ ಇವು ಶರೀರದ ಪ್ರತಿಯೊಂದು ಜೀವ ಕೋಶವೂ ಶಕ್ತಿಯಾಗಿ ಪಡೆಯುವ ಗ್ಲುಕೋಸ್ ಆಗಿ ಮಾರ್ಪಾಟಾಗುತ್ತದೆ. ನಮ್ಮೆಲ್ಲ ಚಲನವಲನ ಮತ್ತು ಚಟುವಟಿಕೆಗಳಿಗೆ ನಾವು ಬಳಸುವುದು ಇದೇ ಶಕ್ತಿಯನ್ನು. ಜೀವ ಪ್ರಪಂಚದ ಈ ಶಕ್ತಿಯ ಮೂಲವನ್ನು ಅರಸುತ್ತಾ ಹೋದರೆ ಕಟ್ಟ ಕಡೆಗೆ ಅದು ಸೌರ ಶಕ್ತಿಯ ಮೂಲಕ್ಕೆ ಬಂದು ತಲುಪುತ್ತದೆ. ಹಾಗಾಗಿ ನಿಸರ್ಗದಲ್ಲಿ ನಮ್ಮ ಹೊರಗೆ ಮತ್ತು ಒಳಗೆ ತುಂಬಿ ಕೊಂಡಿರುವ ಶಕ್ತಿ ಬೇರೆ ಬೇರೆ ರೂಪಗಳಲ್ಲಿ ಕಂಡು ಬಂದರೂ ಅವೆಲ್ಲವೂ ಬೆಳಕಿನ ಶಕ್ತಿಯೇ ಆಗಿದೆ. ಅಥವಾ ಇನ್ನೊಂದು ಅರ್ಥದಲ್ಲಿ ಬೆಳಕಿನ ಶಕ್ತಿಯನ್ನು ಬಿಟ್ಟು ಉಳಿದಾವ ಶಕ್ತಿಯೂ ಅಸ್ತಿತ್ವದಲ್ಲಿಲ್ಲ. ನಾನು ಈ ಮಾತನ್ನು ಅಧ್ಯಾತ್ಮಿಕ ಅರ್ಥದಲ್ಲಿ ರೂಪಕವಾಗಿ ಹೇಳುತ್ತಿಲ್ಲ ಬದಲಾಗಿ ಭೌತಿಕ ನೆಲೆಯಲ್ಲಿ ಮತ್ತು ನೇರವಾಗಿ ಹೇಳುತ್ತಿದ್ದೇನೆ.

ಬೆಳಕು ಶಕ್ತಿಯಾಗಿ ಜೀವ ಪ್ರಪಂಚವನ್ನು ಆವರಿಸಿ ಕೊಂಡಿರುವುದಷ್ಟೇ ಅಲ್ಲ, ಇದರ ವೇಗ ವಿಶ್ವದಲ್ಲಿ ಯಾವ ವಸ್ತುವೂ ಚಲಿಸಲಾಗದ ಗರಿಷ್ಟತಮ ವೇಗವಾಗಿರುವುದು ಕಾರ್ಯ -ಕಾರಣ ಸಂಬಂಧವನ್ನು ಬೆಸೆದು ಜೀವ ಪ್ರಪಂಚವನ್ನು ವ್ಯವಸ್ಥಿತವಾಗಿರಿಸವದಕ್ಕೂ ಕಾರಣವಾಗಿದೆ. ಹಾಗಾಗಿ ಬೆಳಕು ಬರಿ ಬೆಳಕಲ್ಲ ಮತ್ತು ಅದರ ವೇಗ ಕೇವಲ ಚಲನೆ ಮಾತ್ರವಲ್ಲ. ಈ ವಿಷಯವನ್ನು ಮುಂದೊಮ್ಮೆ ನೋಡೋಣ.


  • ಶ್ರೀಪಾದ ಹೆಗಡೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW