ಬೆಂಗಳೂರಿನ ಬಿ.ಇ.ಎಂ.ಎಲ್ ಲಲಿತ ಕಲಾ ಸಂಘ. ಈಗ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಷ ಪೂರ್ತಿ ಹಮ್ಮಿಕೊಳ್ಳುತ್ತಿದೆ. ನಾಟಕ ರಚನಾ ಶಿಬಿರ, ಕಾವ್ಯ ಶಿಬಿರ, ನಾಟಕಗಳು ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುತ್ತಿದೆ. ಈಗಾಗಲೇ ಕವಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿಯವರು ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದು ಶ್ರೀಮತಿ ಸೀತಾ ಕೋಟೆ, ನಾಟಕಕಾರರಾದ ಹೂಲಿಶೇಖರ್, ರಾಜೇಂದ್ರ ಕಾರಂತ, ಸಂಗೀತ ನಿರ್ದೇಶಕರಾದ ಶಿವ ಸತ್ಯ, ಕಲಾ ಸಂಘದ ಸದಸ್ಯರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದೀಗ ಪ್ರಖ್ಯಾತ ಕನ್ನಡ ಕವಿ ಬೇಂದ್ರೆಯವರನ್ನು ಅರ್ಥ ಮಾಡಿಕೊಳ್ಳುವ ಅಪರೂಪದ ಕಾರ್ಯಕ್ರಮ ಬೇಂದ್ರೆ ದರ್ಶನ ಎಂಬ ಕಾರ್ಯಕ್ರಮವನ್ನು ಧಾರವಾಡದ ಕಲಾವಿದ ಶ್ರೀ ಅನಂತ ದೇಶಪಾಂಡೆ ಇಲ್ಲಿಯ ಬಿ.ವಿ.ಕಾರಂತ ವೇದಿಕೆಯಲ್ಲಿ ನಡೆಸಿಕೊಟ್ಟರು.
ಬೇಂದ್ರೆಯವರನ್ನೇ ಆವ್ಹಾನಗೊಳಿಸಿಕೊಂಡವರಂತೆ ಅವರ ಧ್ವನಿಯಲ್ಲೇ ಮಾತಾಡುತ್ತಿದ್ದ ದೇಶಪಾಂಡೆ ಡಾ.ಬೇಂದ್ರೆಯವರೇ ನಮ್ಮೆದುರು ಬಂದು ನಿಂತಂತೆ ಮಾಯಾಲೋಕ ಸೃಷ್ಟಿಸಿದರು. ಬೇಂದ್ರೆಯವರು ಯಾವ ಸಂದರ್ಭದಲ್ಲಿ ಯಾವ ಪದ್ಯಗಳನ್ನು ಬರೆದರೆಂದು ಅವರು ವಿವರಿಸಿದ ರೀತಿ ಅದ್ಭುತವಾಗಿತ್ತು. ಬೇಂದ್ರೆಯವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ದೇಶಪಾಂಡೆಯವರು ಪ್ರೇಕ್ಷಕರಿಗೆ ಬೇಂದ್ರೆಯವರನ್ನು ಅರ್ಥ ಮಾಡಿಸಿದ ರೀತಿ ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ಇಂದಿನ ಪೀಳಿಗೆಯವರು ಬೇಂದ್ರೆಯವರನ್ನು ಓದುವುದಕ್ಕಿಂತ ಮೊದಲು ದೇಶಪಾಂಡೆಯವರ ಈ ಕಾರ್ಯಕ್ರಮ ನೋಡಿದರೆ ಬೇಂದ್ರೆಯವರು ಇನ್ನಷ್ಟು ಸರಳರಾಗುತ್ತಾರೆ. ಹತ್ತಿರವಾಗುತ್ತಾರೆ. ಆಪ್ತತೆ ಹುಟ್ಟುತ್ತದೆ. ಕಾವ್ಯಾಸಕ್ತರೂ, ವಿದ್ಯಾರ್ಥಿಗಳೂ ನೋಡಲೇಬೇಕಾದ ಕಾರ್ಯಕ್ರಮ ಈ ಬೇಂದ್ರೆ ದರ್ಶನ.
#ಆಕತನಯಸ