ಬ್ರಾಂಡ್‌ ಹೋಟೇಲುಗಳು

ಇವತ್ತಿನ ಬೆಂಗಳೂರು ವಿಚಿತ್ರವಾಗಿದೆ. ಯಾರು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅದರಲ್ಲೂ ಇಡೀ ನಗರದ ಅಡುಗೇ ಮನೆಗಳು ಸರಿಯಾಗಿ ಒಲೆ ಉರಿಸುವುದಿಲ್ಲ. ಬಡತನದಿಂದ ಅಲ್ಲ. ವೇಗವಾಗಿ ಸಾಗುತ್ತಿರುವ ನಗರದ ಬದುಕು ನಗರಿಗರ ಜೀವನ ಪದ್ಧತಿಯನ್ನೇ ಬದಲಿದೆ. ಗೃಹಿಣಿಯರೇನಾದರೂ ಅಡುಗೆ ಮನೆಯಿಂದ ವಿರಾಮ ತಗೆದುಕೊಂಡರೆ ಸಾಕು. ಮನೆಯಲ್ಲಿ ಯಾರೂ ಉಪವಾಸ ಬೀಳುವುದಿಲ್ಲ. ಅವರ ಊಟ ತಿಂಡಿಗೆ ಏನೂ ತೊಂದರೆಯಾಗದು. ಅದಕ್ಕೆ ಕಾರಣ ಹೆಜ್ಜೆ ಹೆಜ್ಜೆಗೂ ಕಾಣ ಸಿಗುವ ಹೋಟೆಲುಗಳು. ದರ್ಶಿನಿಗಳು. ತಳ್ಳುಗಾಡಿಗಳು ಇತ್ಯಾದಿ. ಬಯಸಿದ ತಿಂಡಿ ಊಟ ಅಲ್ಲೆಲ್ಲ ಸಿಗುತ್ತದೆ. ಅವರವರ ಜೇಬಿಗೆ ತಕ್ಕ ಅನುಕೂಲ ಇದೆ ಇಲ್ಲಿ. ಬೆಂಗಳೂರಲ್ಲಿ ಇಪ್ಪತ್ತು ರೂಪಾಯಿಗೂ ಊಟ ಸಿಗುತ್ತದೆ. ಎರಡು ಸಾವಿರ ರೂಪಾಯಿಗೂ ಊಟ ಸಿಗುತ್ತದೆ.

ಮಧ್ಯಮ ವಗ೯ದವರಿಗೆ ಮತ್ತು ಮೇಲು ವಗ೯ದವರಿಗೆ ಬ್ರಾಂಡ್‌ ಹೋಟೇಲುಗಳು ಸಾಕಷ್ಟಿವೆ. ಅವು ಸ್ಪರ್ಧಾತ್ಮಕವಾಗಿ ಜನರನ್ನು ಆಕರ್ಷಿಸುತ್ತವೆ. ಕೆಳ ವರ್ಗದವರಿಗೆ ಕಾಕಾ ಹೋಟೇಲ್ ಗಳು, ಡಬ್ಬೀ ಹೊಟೆಲ್‌ಗಳು, ನಾಯ್ಡು ಹೋಟೆಲ್‌ಗಳು, ರಸ್ತೆ ಬದಿ ಹೊಟೆಲ್‌ಗಳು ಹೇರಳವಾಗಿವೆ. ಈಗೀಗ ಸರಕಾರೀ ಕ್ಯಾಟೀನು ಬೇರೆ ಸುರುವಾಗಿದೆ. ಒಟ್ಟಿನಲ್ಲಿ ಬೆಂಗಳೂರಿನ ಎಲ್ಲಾ ವಗ೯ದ ಜನರು ಮನೆಯಲ್ಲಿ ಒಲೆ ಹಚ್ಚಬೇಕು ಎಂಬುದೇನಿಲ್ಲ. ಹಚ್ಚಿದರೂ ವಿಧ ವಿಧ ತರಹ ಅಡುಗೆಯವರು ಸಿಗುತ್ತಾರೆ. ಚಪಾತಿ ಪಲ್ಯ ಮಾಡಿದರಿಷ್ಟು. ಅನ್ನ ಸಾರು ಮಾಡಿದರಿಷ್ಚು ಎಂದು ರೇಟು ಇಟ್ಟುಕೊಂಡು ಮನೆಗೇ ಬಂದು ಅಡುಗೆ ಮಾಡಿ ಕೊಟ್ಟು ಹೋಗುವವರೂ ಇದ್ದಾರೆ. ಇನ್ನು ಕೆಲವು ಹೊಟೆಲ್ಲುಗಳಿವೆ. ತೂಕಕ್ಕೆ ಹಾಕಿ ವೈವಿಧ್ಯಮಯ ಅಡುಗೆ ಮಾರುತ್ತವೆ. ಕಾಲು ಕೇಜಿ ಪಲ್ಯ, ಅರ್ಧ ಕೇಜಿ ಸಾಂಬಾರು, ಮುಕ್ಕಾಲು ಕೇಜಿ ಅನ್ನ ಖರೀದಿಸಿ ತಂದರೆ ಸಾಕು. ಗಂಡ ಹೆಂಡತಿ ಪಟ್ಟಾಗಿ ಉಂಡು ನಿದ್ದೆ ಹೊಡೆಯಬಹುದು. ಒಂದಷ್ಟು ಹೆಚ್ಚು ರುಚಿ ಬಯಸುವವರಿಗೆ ಆಂಧ್ರ ಸ್ಟೈಲ್‌ ಹೊಟೆಲ್‌ಗಳು ಕೈ ಮಾಡಿ ಕರೆಯುತ್ತವೆ. ಇತ್ತೀಚೆಗೆ ನಾರ್ಥ ಸ್ಟೈಲ್‌ ಹೊಟೆಲ್‌ಗಳೂ ನಗರಕ್ಕೆ ಕಾಲಿಟ್ಟಿವೆ. ಪಾನೀ ಪುರೀ, ಬೇಲ್‌ ಪುರೀ, ಸೇವ್‌ ಪುರೀ ನಮ್ಮೆಲ್ಲರ ನಾಲಿಗೆಗೆ ಒಂಥರ ರುಚಿ ಹತ್ತಿಸಿ ದೇಸೀ ಅಡುಗೆಗಳನ್ನು ಔಟ್‌ ಆಫ್‌ ಡೇಟ್‌ ಲಿಸ್ಟಿಗೆ ಸೇರಿಸಿವೆ. ಕೈತುಂಬ ರೊಕ್ಕ, ಇಚ್ಛೆಯನರಿವ ಹೊಟೆಲ್ಲುನವರು ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು ಅನ್ನುವಂತಾಗಿದೆ. ಇವತ್ತು ಬೆಂಗಳೂರಲ್ಲಿ ಬ್ರಾಂಡ್‌ ಎಂಬ ಪದ ಪ್ರತಿಷ್ಠೆಯ ವಿಷಯ ಆಗಿದೆ. ತೊಡುವ ಬಟ್ಟೆಗೆ ಬ್ರಾಂಡ್‌, ಉಣ್ಣುವ ಹೊಟೆಲ್ಲಿಗೆ ಬ್ರಾಂಡ್‌, ಸ್ನೇಹಕ್ಕೆ ಬ್ರಾಂಡ್‌, ಪಾರ್ಟಿಗಳೆಗೆ ಬ್ರಾಂಡ್‌ ಹೀಗೇ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಈ ಬ್ರಾಂಡ ಹುಚ್ಚಿನಲ್ಲಿ ನನಗೆ ಆದ ಒಂದು ಚಿಕ್ಕ ಅನುಭವವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಮ್ಮೊನೆಯಷ್ಚೆ ನಾವು ಮಕ್ಕಳು ಸಮೇತ ಕನಕಪುರ ರಸ್ತೆಯ ಶ್ರಿ ಶ್ರಿ ರವಿಶಂಕರ ಆಶ್ರಮದ ಬಳಿ ಇರುವ ಪ್ರಖ್ಯಾತ ಒಂದು ಬ್ರಾಂಡ್‌ ಹೋಟೇಲ್‌ ಗೆ ಹೋಗಿದ್ದೆವು. ಅದು ಬೆಂಗಳೂರಿನ ದೊಡ್ಡ ಹೆಸರಿನ ಹೊಟೆಲ್ಲು. ಅದರ ಹೆಸರು ಎಲ್ಲರಿಗೂ ಗೊತ್ತು. ಹೊಟೆಲ್ಲಿನ ಹೆಸರು ಇಲ್ಲಿ ಬೇಡ. ಬ್ರಾಂಡ್‌ ಅಂದರೆ ರುಚಿ ಯಾವತ್ತೂ ಮನೆ ಥರ ಇರುವುದಿಲ್ಲ. ಹೊಸ ಬಗೆಯ ರುಚಿ. ಅಲ್ಲಿಯೂ ಇಂಥದ್ದೇ ರುಚಿಯಾದ ಊಟ. ಹಾಗೇ ಭಜ೯ರಿ ಬಿಲ್ಲು ಕೂಡ. ಬ್ರಾಂಡ್‌ ಹುಚ್ಚು ಇರುವವರಿಗೆ ಎಷ್ಟೇ ದುಡ್ಡಿರಲಿ. ಬಿಲ್ಲೂ ಪ್ರತಿಷ್ಠೆಯದ್ದೇ ಇರುತ್ತದೆ. ಹಾಗೇ ಅಧ೯ಧ೯ ತಿಂದು ಬಿಟ್ಟು ಬರುವುದೂ ಈಗೀಗ ಹೊಸ ಟ್ರೆಂಡು ಆಗಿದೆ. ಪ್ರತಿಷ್ಟೆಯೂ ಆಗಿದೆ. ಅದರಲ್ಲೇ ಖುಷಿ ಕಾಣುತ್ತಾರೆ ನಮ್ಮ ಜನ. ಆದರೆ ನಮ್ಮದು ಅಧ೯ಮಧ೯ ತಿನ್ನುವ ಜಾಯಮಾನವಲ್ಲ. ತಟ್ಟೆಯನ್ನು ಗೀರಿ-ಗೀರಿ ತಿನ್ನುವ ಆಸಾಮೀಗಳು ನಾವು.

ಸರಿ. ಹೇಗೂ ಗುರೂಜಿಯ ಆಶ್ರಮದೊಳಗೆ ಸುತ್ತಾಡಿ ಕೊನೆಗೆ ಹೊಟ್ಟೆ ತಣಿಸಲು ಹೋಟೇಲ್‌ಗೆ ಹೋದೆವು. ಅಲ್ಲಿ ಕಾರು ಪಾರ್ಕಿಂಗ್‌ ವ್ಯವಸ್ಥೆ ಚನ್ನಾಗಿದೆ. ಕಾರನ್ನು ಅಲ್ಲಿಯೇ ಒಂದು ಕಡೆ ನಿಲ್ಲಿಸಿ ಅಲ್ಲಿಯೇ ಇದ್ದ ಒಂದು ಬ್ರಾಂಡ್‌ ಹೊಟೆಲ್ಲಿಗೆ ಹೋದೆವು. ಬ್ರಾಂಡ್‌ ಹೊಟೆಲ್‌ ಅಲ್ವ? ಎಲ್ಲಾ ಚನ್ನಾಗಿರುತ್ತೆ ಅಂದುಕೊಂಡು ಒಳಗೊಕ್ಕು ಸುತ್ತ ನೋಡಿದೆವು.

ನಮಗೆ ಅಚ್ಚರಿಯಾಯಿತು. ಜನರೇನೋ ತುಂಬಿದ್ದಾರೆ. ಅವರೆಲ್ಲ ನಮ್ಮ ಹಾಗೆ ವಿಜಿಟ್‌ ಮಾಡಲು ಬಂದವರು. ಅಲ್ಲಿತ್ತು ಥರಾವರಿ ನೋಟ. ಜನ ಟೇಬಲ್‌ ಇದ್ದ ಕಡೆ ನೊಣಗಳ ಹಾಗೆ ಮುಗಿಬಿದ್ದಿದ್ದರು. ಟೇಬಲ್‌ ಇದ್ದರೆ, ಖುಚಿ೯ಗಳಿಲ್ಲ. ಖುಚಿ೯ಗಳಿದ್ದರೆ ಟೇಬಲ್‌ಗಳಿಲ್ಲ. ಕೆಲವು ಟೇಬಲ್‌ಗಳ ಹತ್ತಿರ ಹತ್ತಾರು ಖರ್ಚಿಗಳು ಒಟ್ಟಾಗಿದ್ದವು. ಎಲ್ಲ ಗ್ರಾಹಕರ ಮರ್ಜಿ. ತಮಗೆ ಬೇಕಾದ್ದಲ್ಲಿ ಖುಚಿ೯ ಎಳೆದುಕೊಂಡು ಕೂಡುವುದು. ಅದನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಹೋಗುವುದು. ಮನೆಯಲ್ಲೂ ಮಾಡಿ ಗೊತ್ತಿಲ್ಲ. ಹೊರಗೆ ಹೇಗೆ ಇರಬೇಕು ಎಂದೂ ಗೊತ್ತಿಲ್ಲ. ಎಡಬಿಡಂಗಿ ಜೀವನ. ತಿಂದ ತಟ್ಟೆಗಳನ್ನು ಟೇಬಲ್‌ ಮೇಲೆ ಅಲ್ಲಲ್ಲೇ ಗುಡ್ಡೆ ಹಾಕಿ ಹೋಗಿದ್ದರು. ಅದು ಅಸಭ್ಯ ನಡವಳಿಕೆ ಎಂದು ಯಾರಿಗೂ ಅನಿಸಿರಲಿಲ್ಲ. ಬ್ರಾಂಡ ಹೊಟೆಲ್‌ ಸಿಬ್ಬಂದಿಗಳ ಆಲಸ್ಯಕ್ಕೋ, ಇಲ್ಲ ಶಿಸ್ತಿಲ್ಲದ ಉಡಾಫೆಗೋ ಖುಚಿ೯ಗಳು, ಮುಸುರಿ ತಟ್ಟೆಗಳು ಒಂದೆಡೆ ಹೇಗಂದರೆ ಹಾಗೆ ಬಿದ್ದಿದ್ದವು. ಹೆಸರಿಗೆ ಬ್ರಾಂಡ್‌ ಹೊಟೆಲ್ಲು. ನಾವೂ ಮನೆಯಲ್ಲಿ ಒಲೆ ಹಚ್ಚದೆ ಇವತ್ತು ಬ್ರಾಂಡ್‌ ಹೊಟೆಲ್ಲಿನಲ್ಲಿಯೇ ತಿಂಡಿ ತಿನ್ನಬೇಕು ಎಂಬ ಬಯಕೆಯಿಂದ ಹಾಗೇ ಬಂದಿದ್ದೆವು. ಟೇಬಲ್‌ ಸ್ವಚ್ಚ ಮಾಡುವ ಸಿಬ್ಬಂದಿಯನ್ನು ಹುಡುಕಿ ತಂದು ಟೇಬಲ್‌ ಸ್ವಚ್ಚ ಗೋಳಿಸಿದ ನಂತರ ನಾಲ್ಕು ಖುರ್ಚಿಗಳನ್ನು ನಾವೇ ಎಳೆತಂದು ಟೇಬಲ್ ಗೆ ಜೋಡಿಸಿಕೊಂಡೆವು. ಮಕ್ಕಳನ್ನು ಕೂಡಿಸಿ, ನಾನೂ ಅಲ್ಲಿಯೇ ಕೂತೆ. ಬ್ರಾಂಡ್‌ ಹೊಟೆಲ್‌ಗೆ ಬಂದಿದ್ದೇವೆ ಎಂಬ ಹಮ್ಮು ಆಗಲೇ ಅರ್ಧಕ್ಕೆ ಇಳಿದಿತ್ತು.

ಯಜಮಾನರು ಕೌಂಟರ್‌ ಕಡೆ ಹೋಗಿ ಎರಡು ಮಸಾಲಾ ದೋಸೆ, ಒಂದು ಚೌ ಚೌ ಬಾತ್, ಒಂದು ವಡೆಗೆ ಬಿಲ್ಲು ಹಾಕಿಸಿಕೊಂಡು ನಂತರ ತಿಂಡಿ ಕೌಂಟರ್‌ನತ್ತ ಹೋದರು. ನನಗೋ ಬ್ರಹ್ಮಾಂಡ ಹಸಿವು. ಸುತ್ತ ನೋಡುತ್ತ ಕೂತೆ. ನಮ್ಮ ನಂತರ ಬಂದ ಅದೆಷ್ಟೋ ಜನಕ್ಕೆ ಖುಚಿ೯ಗಳನ್ನು ಹುಡುಕುವುದೇ ದೊಡ್ಡ ಕೆಲಸವಾಗಿ ಹೋಗಿತ್ತು. ಅವರನ್ನು ನೋಡಿದ ನನಗೆ- ಆಹಾ… ಬ್ರಾಂಡ್‌ ಹೊಟೆಲ್ಲಿನಲ್ಲಿ ನನಗೆ ಖುರ್ಚಿ ಸಿಕ್ಕಿದ್ದೇ ಮಹಾ ಪುಣ್ಯ ಎಂಬ ಸಂಭ್ರಮ. ಅಲ್ಲಿಗೆ ಬಂದವರ ಪರದಾಟವನ್ನು ನೋಡುತ್ತ ಅಧ೯ಗಂಟೆ ಹೀಗೇ ಕೂತೆ.

ಇನ್ನೇನು ಹನುಮಂತ ಸಂಜೀವಿನಿ ಗುಡ್ಡ ಹೊತ್ತು ತಂದ ಹಾಗೆ ನಮ್ಮ ಯಜಮಾನರು ತಿಂಡಿಯ ಪ್ಲೇಟುಗಳನ್ನು ಹಿಡಿದು ಹಾರಿ ಬರುತ್ತಾರೆ ಎಂದು ಕಾಯ್ದೆ. ಕಾದೇ ಕಾದೆ. ಅರ್ಧ ಗಂಟೆಯಾದರೂ ಇವರು ಬರಲಿಲ್ಲ. ಅವರೂ ಇಲ್ಲ. ತಿಂಡಿಯೂ ಇಲ್ಲ. ನಾನು ಹೋಗಿ ನೋಡೋಣವೆಂದರೆ ಎದ್ದರೆ ಕೂತ ಖುರ್ಚಿಯೂ ಹೋದೀತೆಂಬ ಭಯ. ಆದರೂ ಮಕ್ಕಳನ್ನು ಖುರ್ಚಿ ಕಾಯಲು ಹೇಳಿ ಆತಂಕದಿದಂಲೇ ಎದ್ದು ತಿಂಡಿ ಕೌಂಟರಿನತ್ತ ನಡೆದೆ. ಅಲ್ಲಿನ ದೃಶ್ಯ ನೋಡಿ ಗಾಬರಿಯಾಯಿತು. ಅಲ್ಲಿ ಟೋಕನ್ನ ಹಿಡಿದು ನಾ ಮುಂದೆ ನೀ ಮುಂದೆ ಎಂದು ಜನ ಮುಗಿಬಿದ್ದಿದ್ದರು. ಎಲ್ಲರೂ ಸಿಂಗಲ್‌ ಯಾ ಡಬಲ್‌ ಡಿಗ್ರಿ ಹೋಲ್ಡರರು. ಬ್ರಾಂಡ್‌ ಹೊಟೆಲ್ಲಿಗೆ ಬಂದು ಅವರೆಲ್ಲ ಪೆಚ್ಚಾಗುವ ರೀತಿ ಕಂಡು ನಾನೂ ಪೆಚ್ಚಾಗಿ ಹೋದೆ. ನಮ್ಮ ಯಜಮಾನರು ಗುಂಪಿನಲ್ಲಿ ಗೋವಿಂದ ಆಗಿದ್ದರು. ಅವರನ್ನು ಈಚೆ ಎಳೆದು ತಂದರೆ ಮತ್ತೆ ಇವತ್ತು ನಮಗೆ ತಿಂಡಿ ಸಿಗುವುದಿಲ್ಲ. ಏನಾಗುತ್ತೋ ಆಗಲಿ. ಇನ್ನು ಮನೆಗೆ ಹೋಗಿ ಒಲೆ ಹೊತ್ತಿಸಲು ನನ್ನ ಕೈಲಿ ಸಾಧ್ಯವಿಲ್ಲ. ಗಾಂಧೀಜಿ ಹೇಳಿದ ‘ ಕರೋ… ಯಾ ಮರೋ’ ಎಂಬ ಮಾತು ನೆನಪಾಗಿ ಅದನ್ನು ನನ್ನ ಗಂಡನಿಗೆ ಅನ್ವಯಿಸಿ ನೋಡುತ್ತ ನಿಂತೆ. ನನ್ನ ಗಂಡ ಸಾಹಸ ಮಾಡಿದ್ದರು. ಅಷ್ಟೊತ್ತಿಗಾಗಲೇ ನನ್ನ ಗಂಡನ ಕೈಯಲ್ಲಿ ಎರಡು ಮಸಾಲ ದೋಸೆ ಕಾಣಿಸಿತು. ಕೂಡಲೇ ಓಡಿ ಹೋಗಿ ಸೀದಾ ಅವರ ಕೈಯಿಂದ ಮಸಾಲ ದೋಸೆ ತಟ್ಟೆಗಳನ್ನು ಎಳೆದುಕೊಂಡೆ.

‘ ನೀನು ಹೋಗಿ ಮಕ್ಕಳಿಗೆ ತಿನ್ನಿಸ್ತಾ ಇರು. ನಾನು ಚೌಚೌ ಬಾತ್, ವಡೆ ತಟ್ಟೆಗಾಗಿ ಕ್ಯೂ ಹಚ್ಚಬೇಕು’

ಎಂದು ಹೇಳಿ ತಿರುಗಿಯೂ ನೋಡದೆ ಆ ಗುಂಪಿನಲ್ಲಿ ಸೇರಿದರು. ನಾನು ಟೇಬಲ್ಲಿಗೆ ಬಂದೆ. ಮಕ್ಕಳು ಖುರ್ಚಿಗಳನ್ನು ಯಾರಿಗೂ ಕೊಡದೆ ಸರಿಯಾದ ಕಾವಲು ಮಾಡಿದ್ದರು. ಕೊನೆಗೆ ಯಜಮಾನರು ಚೌಚೌಬಾತ್‌-ವಡೆಗಳೊಂದಿಗೆ ಬಂದಾಗ ಕಪ್‌ ಗೆದ್ದಷ್ಟೇ ಸಂತೋಷ ಆಯಿತು ನನಗೆ. ಬ್ರಾಂಡ್‌ ಹೊಟೆಲ್ಲಿನಲ್ಲೂ ಇಂಥ ಅಧ್ವಾನ್‌ ವ್ಯವಸ್ಥೆ ಇರುತ್ತದೆಂದು ನನಗೆ ಗೊತ್ತಾದದ್ದು ಅವತ್ತೇನೆ.

‘ ನೋಡು ಮಾರಾಯಿತಿ…ನಿನಗೆ ಬೇರೆ ಏನಾದರೂ ತಿನ್ನುವ ಆಸೆ ಇದ್ದರೆ ನಾನ್ನಂತೂ ಆ ಕ್ಯೂನಲ್ಲಿ ನಿಲ್ಲಲ್ಲ. ಬೇಕಿದ್ದರೆ ಹೊರಗೆ ತಿನ್ನಸ್ತೀನಿ. ಈ ಕ್ಯೂ ನಲ್ಲಿ ನಿಂತು ಸಾಕಾಯಿತು ‘. ಅಂತ ಗಂಡ ಭಿಡೇ ಬಿಟ್ಟು ಹೇಳಿಬಿಟ್ಟರು. ‘ನೀವಷ್ಟೆ ಅಲ್ಲ. ನನಗೆ ಇಲ್ಲಿ ಖುಚಿ೯ ಕಾಯುವುದರಲ್ಲಿ ಸಾಕಾಗಿ ಹೋಯಿತು ‘ ಎಂದು ನನ್ನ ಕಷ್ಟನ್ನೂ ಹೇಳಿಕೊಂಡೆ.

ಸರಿ…ಈಗ ಬೇಗ ಪ್ಲೇಟಿಗೆ ಕೈ ಹಾಕು. ಇಲ್ದಿದ್ರೆ ಇನ್ಯಾರೋ ಬಂದು ದೋಸೆ ಎತ್ಕೊಂಡು ಹೋದ್ರೆ ಮುಗೀತು ಅಷ್ಟೆ. ಅನ್ನುತ್ತ ತಟ್ಟೆ ಕಡೆ ನೋಡುತ್ತೇವೆ. ಅಬ್ಬಬ್ಬ… ಏನಿದು? ವಡೆಯಷ್ಟೇ ಅಗಲ ಮಸಾಲೆ ದೋಸೆ ಸೈಜು. ಸೆಟ್‌ ದೋಸೆ ಥರ ದಪ್ಪ. ಇನ್ನು ಚೌಚೌಬಾತ್‌ ಸತ್ಯನಾರಾಯಣ ಸ್ವಾಮಿ ಪ್ರಸಾದವೇ ಆಗಿತ್ತು. ವಡೆ ಇನ್ನೂ ಚಿಕ್ಕ ಗಾತ್ರದ್ದು. ಗೋಲಿ ಗುಂಡದ ಥರ. ಇವರಿಗೆ ಮನುಷ್ಯರಿಗೆ ತಿಂಡಿ ಮಾಡಿ ಗೊತ್ತಿಲ್ಲ. ಇಲ್ಲಿ ಬರುವವರೆಲ್ಲ ಲಿಲಿ ಪುಟ್ಟರು ಅಂದುಕೊಂಡಿರಬೇಕು ಬ್ರಾಂಡ್‌ ಅಂಗಡಿಯವರು. ಹೋಗಲಿ ತಿಂಡಿಯ ರೇಟಾದರೂ ಕಮ್ಮಿಯೇ? ಬರೋಬರಿ ಟ್ಯಾಕ್ಸೂ-ಗೀಕ್ಸೂ ಅಂತ ಬರೆ ಎಳೆದು ಸರಿಯಾದ ಕುಲಾವಿ ಹೊಲೆದು ಕಟ್ಟಿದ್ದರು. ಇದಿಷ್ಟು ನಮ್ಮ ಮಕ್ಕಳಿಗೇ ಸಾಕಾಗುವುದಿಲ್ಲ. ಇನ್ನು ನಾವಿಬ್ಬರೂ ನೀರು ಕುಡಿದು ಏಳುವುದೇ ವಾಸಿ. ಎಷ್ಟು ಅನ್ಯಾಯ. ಬ್ರಾಂಡ್‌ ಲೆಕ್ಕದಲ್ಲಿಯೇ ಹಣ ಪೀಕಿದ್ದಾರೆ. ಕೊಡೋದು ನೋಡಿ. ದೇವರಿಗೆ ನೈವೇದ್ಯ ಕೊಟ್ಟ ಹಾಗೆ. ಇಂಗು ತಿಂದ ಮಂಗನಂತಾದ ನಾವು ನಾನೂರು ರೂಪಾಯಿ ಅಲ್ಲಿಯೇ ಕಕ್ಕಿದೆವು. ಮಕ್ಕಳ ಹೊಟ್ಟೆ ತುಂಬಿಸಿಕೊಂಡು ಖಾಲಿ ತಟ್ಟೆಗಳನ್ನು ನೋಡಿ ಜೋತೆಗೇ ತಂದಿದ್ದ ನಮ್ಮದೇ ನೀರು ಕುಡಿದು ಮೇಲೆದ್ದವು ಅಷ್ಟೇ ನಮ್ಮ ಹಿಂದಿದ್ದ ಖುರ್ಚಿಗಳು ಆಗಲೇ ಮಾಯ.

ಈ ಬ್ರಾಂಡ್‌ ಹೊಟೆಲ್ಲಿಗೆ ಇನ್ನು ಬರಲೇ ಬಾರದು. ಇನ್ನೊಮ್ಮೆ ಇಲ್ಲಿಗೆ ಬಂದಾಗ ಮನೆಯಲ್ಲೇ ಅನ್ನ ಮಾಡಿ ಅದಕ್ಕೆ ಒಂದಷ್ಟು ಹುಳಿ ಕಲಸಿಕೊಂಡು ಬಂದು ಇಲ್ಲಿಯೇ ತಿನ್ನಬೇಕು. ಹತ್ತು ಜನ ಹೀಗೆ ಮಾಡಿದರೆ ಅದೇ ಒಂದು ಬ್ರಾಂಡ್‌ ಆಗುತ್ತದೆ. ಇಂಥ ಬ್ರಾಡ್‌ ಹೊಟೆಲ್ಲುಗಳು ಹೊತ್ತು ನೋಡಿ ಕತ್ತು ಕೊಯ್ಯುವುದನ್ನು ನಿಲ್ಲಿಸಬೇಕಾದರೆ ಹಾಗೇ ಮಾಡಬೇಕು ಅಂದುಕೊಂಡೆ ರೋಷದಲ್ಲಿ. ಆದರೆ ಬರೀ ನನ್ನೊಬ್ಬಳಿಂದ ಅದು ಸಾಧ್ಯವಿಲ್ಲ. ಮನೆಯಲ್ಲಿ ಒಲೆ ಹಚ್ಚುವವರ ಸಂಖ್ಯೆ ಜಾಸ್ತಿ ಆದಾಗಲೇ ಇಂಥ ಮೋಸದ ಬ್ರಾಂಡ್‌ಗಳು ಮುಚ್ಚಲು ಸಾಧ್ಯ.

ಅಲ್ಲಿಂದ ಎದ್ದ ನಾವು ಕನಕ ಪುರ ರಸ್ತೆಯ ಸಾದಾ ಹೊಟೆಲ್ಲು ಅನ್ನಪೂರ್ಣ ಹೆಸರಿನ ತಾಣಕ್ಕೆ ಬಂದೆವು. ಸಣ್ಣ ಹೊಟೆಲ್ಲು. ಗಂಡ-ಹೆಂಡತಿ ಅಲ್ಲಿ ಎಲ್ಲವೂ. ಅಡುಗೆಯವ, ಸಪ್ಲಾಯರ್‌, ಕ್ಲೀನರ್‌ ಎಲ್ಲವೂ ಅವರೇ. ಹೊಟ್ಟೆ ಚುರುಗುಟ್ಟುತಿತ್ತು. ಇಂಥ ಸ್ಥಿತಿಯಲ್ಲೇ ಅನ್ನದ ಮಹತ್ವ ಗೊತ್ತಾಗುವುದು.

ಹೆಸರೇ ಹೇಳುವಂತೆ ಈ ಹೋಟೇಲನಲ್ಲಿ ಹೊಟ್ಟೆ ತುಂಬುವಷ್ಟು ತಿಂಡಿ,ಊಟ ಸಿಗುತ್ತದೆ. ಈ ಹೋಟೇಲ್‌ ನಲ್ಲಿ ತಟ್ಟೆ ಇಡ್ಲಿ ಮಾತ್ರ ಸೂಪರ್. ಒಂದು ತಟ್ಟೆಗೆ ಎರಡು ದೊಡ್ಡದಾದ ಇಡ್ಲಿಗಳು. ಜೊತೆಗೆ ಮೂರು ತರದ ಚಟ್ನಿ. ಆಹಾ ಮಲ್ಲಿಗೆಯಂಥ ಇಡ್ಲಿಗಳು.

ಇದನ್ನು ನೆನಸಿಕೊಂಡರೆ ಈಗಲೂ ಬಾಯಲ್ಲಿ ನಿರಾಡಿಸುತ್ತದೆ. ಅಷ್ಟು ರುಚಿಯಾದ-ಶುಚಿಯಾದ ಈ ಹೋಟೇಲ್‌ ಇರುವುದು ಕನಕಪುರ ರಸ್ತೆಯಲ್ಲಿ. ಹಾರೋಳ್ಳಿ ಮುಂಚೆಯೇ ಎಡಕ್ಕೆ ಸಿಗುತ್ತದೆ. ನೋಡಲು ಬ್ರಾಂಡ್‌ ಹೋಟೇಲ್‌ ನಷ್ಟು ಶೋಕಿ ಇಲ್ಲವಾದರು. ರುಚಿಯಲ್ಲಿ ಅದಕ್ಕಿಂತ ಏನೂ ಕಮ್ಮಿ ಇಲ್ಲ. ಚಟ್ನಿ, ಸಾಂಬಾರ್‌ ಖಾಲಿಯಾದರೇ ಸಾಕು. ದೊಡ್ಡದಾದ ಪಾತ್ರೆಯನ್ನು ಟೇಬಲ್‌ ಮೇಲೆ ತಂದಿಡುತ್ತಾರೆ. ಎನೇ ತಿಂದರೂ ಅಲ್ಲಿ ಹೊಟ್ಟೆ ತುಂಬುತ್ತದೆ. ಜೊತೆಗೆ ಬಿಲ್ಲು ಬ್ರಾಂಡ್‌ ತುಂಬಾನೇ ಕಮ್ಮಿ.

ಈಗ ನಾವು ಕನಕಪುರ ರಸ್ತೆಯಲ್ಲಿ ಪ್ರಯಾಣ ಬೆಳೆಸುವಾಗ ಬ್ರಾಂಡ್‌ ಹೊಟೆಲಿನತ್ತ ತಿರುಗಿಯೂ ನೋಡುವುದಿಲ್ಲ. ಸೀದಾ ಅನ್ನಪೂರ್ಣಕ್ಕೆ ಬರುತ್ತೇವೆ ತಪ್ಪದೆ.

ನಿಮ್ಮಲ್ಲೂ ಕೆಲವರಿಗೆ ನನ್ನ ತರಹ ಬ್ರಾಂಡ್‌ ಹೊಟೆಲ್ಲುಗಳಿಂದ ಆದ ಆವಾಂತರದ ಅನುಭವ ಆಗ್ಗಿದ್ದಲ್ಲಿ ನಮ್ಮೋಂದಿಗೆ ಹಂಚಿಕೊಳ್ಳಿ. ಆಕೃತಿ ಕನ್ನಡ ಮ್ಯಾಗಝಿನ್‌ ಅವನ್ನು ಪ್ರಕಟಿಸುತ್ತದೆ.

#ಹಗಉಟ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW