ಅಪ್ಪ ಅಂದರೆ ಯಾರು?
ಅಪ್ಪ ಅಂದರೆ ನೀರು. ಪಂಚಭೂತಗಳನ್ನು ವರ್ಣಿಸುವಾಗ ಪ್ರಥ್ವಿ, ಅಫ್, ತೇಜ, ವಾಯು, ಆಕಾಶಗಳೆಂದು ಹೇಳುತ್ತಾರೆ. ಅಫ್ ಅಂದರೆ ನೀರು. ಈ ನೀರು ನಿಜವಾಗಿಯೂ ಜಗತ್ತಿನ ಜನಕವಾಗಿದೆ. ತಂದೆಯಾಗಿದೆ. ಹೇಗೆಂದರೆ-
ನೀರು ಇಲ್ಲದೆ ಯಾವ ಚರಾಚರ ಪ್ರಾಣಿಗಳೂ ಹುಟ್ಟಲಾರವು. ಈ ಭೂಮಿಯೂ ಕೂಡಾ ಮೊದಲು ಲಾವಾ ಎಂಬ ರಸದ ರೂಪದಲ್ಲಿಯೇ ಇತ್ತೆಂದೂ, ಆ ರಸವೇ ಕ್ರಮೇಣ ಆರಿಕೆಯಾಗಿ ಘನೀಕೃತವಾಗಿ ಈ ಭೂಮಿಯ ನಿರ್ಮಾಣವಾಯಿತೆಂದು ಭೂಗೋಲ ಶಾಸ್ತ್ರವು ಈಗಲೂ ಹೇಳುತ್ತದೆ. ಇದನ್ನೇ ಇನ್ನೂ ಆಳವಾಗಿ ಅಭ್ಯಾಸ ಮಾಡಿದರೆ ಮಣ್ಣು ಅಂದರೆ ಭೂಮಿ ಇಲ್ಲದೆ ಹಲವು ಪ್ರಾಣಿಗಳು ಜನಿಸುತ್ತವೆ. ಆದರೆ ನೀರು ಇಲ್ಲದೆ ಯಾವ ಪ್ರಾಣಿಗಳೂ ಜನಿಸಲಾರವು.
ಉದಾ- ಒಂದು ಪಾತ್ರೆಯಲ್ಲಿ ಒಂದಷ್ಟು ಕಡಲೆ ಕಾಳು ಹಾಕಿ ಎಷ್ಟು ದಿನ ಇಟ್ಟರೂ ಅವು ಹಾಗೆಯೇ ಇರುತ್ತವೆ. ಆದರೆ ಆ ಪಾತ್ರೆಯಲ್ಲಿ ಒಂದಷ್ಟು ನೀರು ಹಾಕಿಟ್ಟರೆ ಆ ಕಾಳು ಮೊಳಕೆಯೊಡೆಯಲು ಸುರು ಮಾಡುತ್ತವೆ. ಅಂದರೆ ನೀರು ಅಪ್ಪ. ಅಥವಾ ಜನಕ. ತೇವವಿಲ್ಲದ ಒಣ ಭೂಮಿಯಲ್ಲಿ ಕಾಳು ಹಾಕಿದರೂ ಮೊಳಕೆಯೊಡೆಯುವದಿಲ್ಲ. ಅಲ್ಲಿ ಜನಕನಾದ ನೀರು ಇಲ್ಲ ತೇವವಿದ್ದಲಿ ಕಾಳಿಗೆ ಜೀವ ಬಂದು ಮೊಳಕೆಯಾಗುತ್ತದೆ. ಹೆಣ್ಣು ಭೂಮಿ ಎಂದು ಬಲ್ಲವರು ಹೇಳುತ್ತಾರೆ. ಆದರೆ ಹೆಣ್ಣಿಂದ ಸಂತಾನೋತ್ಪತ್ತಿ ಸಾಧ್ಯವಿಲ್ಲ. ಅಪ್ಪನೆಂಬ ನೀರು ಬರಿದು ಸಂಯೋಗಗೊಂಡಾಗಲೇ ಜೀವ ಕೋಶ ಹುಟ್ಟಲು ಕಾರಣವಾಗುತ್ತದೆ.
ಅಂತೂ ನೀರು ಜಗತ್ತಿನ ತಂದೆಯಾಗಿದೆ. ಈ ತಂದೆಯಿಂದಲೇ ಮಗ ಎಂಬ ಪ್ರಾಣಿ ಹುಟ್ಟುತ್ತದೆ.
ಮಗ ಅಂದರೆ ಯಾರು?
ಮಗ ಎಂಬ ಪದದ ಸರಳ ಅರ್ಥ ಮಾಡಿದರೆ ‘ಮ’ ಅಂದರೆ ಮರಣ, ‘ಗ’ ಅಂದರೆ ಗಮನ. ಅಂದರೆ ಮರಣದ ಗಮನ ಅಂಥವಾ ಮರಣದ ಮುಂದುವರಿಕೆ. ಈ ಸಾವು ಮುಂದುವರಿಯಬೇಕಾದರೆ ಅದರ ಹಿಂದೆ ಹುಟ್ಟು ಕ್ರಿಯೆ ನಡೆದಿರಬೇಕು. ಹುಟ್ಟದೇ ಸಾಯಲು ಸಾಧ್ಯವಿಲ್ಲ. ಮರಣ[ಗಮನ]ವನ್ನು ಬೆನ್ನಿಗೆ ಕಟ್ಟಿಕೊಂಡು ಜನಿಸಿದವನೇ ಮಗ. ಹಾಗಾದರೆ ಹುಟ್ಟು ಎಲ್ಲಿದೆ? ಈ ಜನನ ಮತ್ತು ಮರಣದ ಸಂತೆಯೇ ಈ ಜಗ. ಅಂದರೆ ಜಗತ್ತು.
ಜಗತ್ತು ಅಂದರೆ ಯಾವುದು?
ಈಗ ಹೇಳಿದಂತೆ ‘ಜ’ ಅಂದರೆ ಜನನ. ‘ಗತ್ತು’ ಅಂದರೆ ತಾಳ. ಹುಟ್ಟಿದ್ದು ಸಾಯಲೇ ಬೇಕು. ಸೃಷ್ಟಿ ಮತ್ತು ಲಯ ಇದಕ್ಕೆ ಉದಾಹರಣೆ. ಅವು ತಮ್ಮದೇ ಆದ ತಾಳದಲ್ಲಿ ಅಂದರೆ ತಾಳಬದ್ಧವಾಗಿ ನಡೆಯುತ್ತವೆ. ಈ ಗತ್ತಿನ ರೂಪವೇ ಜಗತ್ತು. ಹುಟ್ಟಿದ ನಾನು, ನೀವು, ನಿಮ್ಮವರು, ನಮ್ಮವರು ಎಲ್ಲರೂ ಜಗತ್ತಿನ ತಾಳದಂತೆ ನಡೆಯಬೇಕು. ಅಂದರೆ ಸೃಷ್ಟಿ, ಲಯ ಇಲ್ಲಿಯೇ ನಡೆಯಬೇಕು. ಈ ಜೀವಾಂಶ ಎಲ್ಲರಲ್ಲೂ ಇರುತ್ತದೆ. ಜೀವಾಂಶ ಇರುವ ನಾನು ಆತ್ಮನೆಂದು ಕರೆಸಿಕೊಳ್ಳುತ್ತೇನೆ
ಹಾಗಾದರೆ ಆತ್ಮ ಅಂದರೆ ಯಾರು? ಮುಂದಿನ ವಾರ ಇದೇ ಆಕೃತಿ ಕನ್ನಡ ಮ್ಯಾಗಝಿನ್‌ನಲ್ಲಿ ಓದಿ.
#ಸಹತಯ #ಪಸತಕ