ಹೆಣ್ಣಿನ ಮಾನಸಿಕ ಒತ್ತಡಕ್ಕೆ ಇವೆ ನೂರು ಕಾರಣಗಳು

* ಶಾಲಿನಿ ಪ್ರದೀಪ

ನಾವು ಚಿಕ್ಕವರಿದ್ದಾಗ ಅಮ್ಮನಿಗೆ ಮನೆಯೇ ಒಂದು ದೊಡ್ಡ ಸಾಮ್ರಾಜ್ಯ. ಅಡುಗೆ ಮಾಡುವುದು, ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಜತೆಗೆ ಗಂಡನ ಬೇಕು ಬೇಡುಗಳ ಬಗ್ಗೆ ಗಮನ ಕೊಡುವುದು ಇತ್ಯಾದಿ. ಹಗಲು ಸಾಕಾಗುತ್ತಿರಲಿಲ್ಲ. ನಮ್ಮ ಸ್ನಾನದ ಕಡೆಗೆ ಗಮನ ಕೊಡುವುದು, ಬಟ್ಟೆ ಒಗೆಯುವುದು, ಒಣಗಿಸುವುದು, ಇಸ್ತ್ರಿ ಮಾಡುವುದು, ಸ್ಕೂಲಿಗೆ ಕಳಿಸುವುದು. ಮತ್ತೆ ಅಡುಗೆ, ಊಟ ಪಾತ್ರೆ ತೊಳೆಯುವುದು ಒಂದೇ ಎರಡೇ. ತಾನು ಯಾವಾಗ ಊಟ ಮಾಡುತ್ತಾಳೋ, ಯಾವಾಗ ಜೊಂಪು ನಿದ್ದೆ ಮಾಡುತ್ತಾಳೋ ಯಾವುದೂ ಅವಳ ಅರಿವಿಗೆ ಬರುತ್ತಿರಲಿಲ್ಲ.

ಇತ್ತ ಅಪ್ಪನಾದರೂ ನೆಮ್ಮದಿಯಿಂದ ಇದ್ದರೆ? ಅವರೂ ಅಷ್ಟೆ. ಬೆಳಿಗ್ಗೆ ಎದ್ದರೆ ಸಾಕು. ಸ್ನಾನ, ದೇವರಿಗೆ ಕೈಮುಗಿದು ಕಡ್ಡಿ ಹಚ್ಚುವುದು. ಅಮ್ಮ ಕೈಗೆ ಕೊಟ್ಟ ತಿಂಡಿಯ ಪ್ಲೇಟನ್ನು ಗಬಗಬನೆ ತಿಂದು ಖಾಲಿ ಮಾಡಿ, ನೀರು ಕುಡಿಯುವುದನ್ನು ಮರೆತು, ಆಫೀಸು ಬ್ಯಾಗು ಹಿಡಿದು ಹೊರಗೆ ಓಡಿದ್ದೇ ಬಂತು. ಹಿಂದಿನಿಂದ ಅಮ್ಮ ಮಧ್ಯಾನದ ಡಬ್ಬ ಹಿಡಿದುಕೊಂಡು ತಗಳ್ಳಿ ಎಂದು ಮೂರು ಹೇಳಿದಾಗಲೇ ಅವರ ಅರಿವಿಗೆ ಬಂದು ಅದನ್ನು ಬ್ಯಾಗಿಗಿಳಿಸಿ ಬರತೀನಿ ಬಾಯ್‌ ಅಂದದ್ದಷ್ಟೇ ನಮಗೆ ನೆನಪು. ಅಪ್ಪನ ಬೈಕು ಸದ್ದು ಮಾಡುತ್ತ ಹೋದದ್ದಷ್ಟೇ ಗೊತ್ತು. ಆಮೇಲೆ ಅಮ್ಮ ನಮ್ಮತ್ತ ತಿರುಗಿ ಏಳು ಸ್ನಾನ ಮಾಡು. ಸ್ಕೂಲಿಗೆ ಹೊತ್ತಾಗುತ್ತದೆ ಅನ್ನುತ್ತ ಉಸಿರು ಬಿಡುತ್ತ ಮನೆಯಲ್ಲ ಓಡಾಡುತ್ತಿದ್ದಳು. ಉಸಿರು ಬಿಡಲೂ ಸಮಯವಿಲ್ಲ ಅಮ್ಮನಿಗೆ ಅಂದುಕೊಂಡು ನಾವೇ ನಮ್ಮ ಕೆಲಸ ಮಾಡಿಕೊಳ್ಳುತ್ತಿದ್ದೆವು.

ಇತ್ತ ಅಪ್ಪ ಆಫೀಸು ಕೆಲಸ, ಮನೆಗೆ ಸಾಮಾನು ತಂದು ಹಾಕುವ ಕೆಲಸ, ಶೆಟ್ಟಿ ಅಂಗಡಿಯ ಲೆಕ್ಕ ಚುಕ್ತ ಮಾಡುವ ಧಾವಂತ, ನಮಗೆಲ್ಲಾ ಏನಾದರೂ ತಂದುಕೊಡುವ ಮಮಕಾರದ ಒತ್ತಡ. ಒಂದೋ- ಎರಡೋ. ಇವುಗಳ ನಡುವೆ ನಾವು ಯಾರ ಸಹಾಯವೂ ಇಲ್ಲದೆ ಹೋಂ ವರ್ಕನ್ನು ಮಾಡುವ ಆತುರದ ಒತ್ತಡ. ಮನೆಯಲ್ಲಿ ಎಲ್ಲರಿಗೂ ಅವರದೇ ಆದ ಒತ್ತಡಗಳು. ಚಿಂತೆಗಳು. ಇವುಗಳ ನಡುವೆ ಎಲ್ಲವನ್ನು ತಾನೇ ಮೂಟೆ ಕಟ್ಟಿ ತಲೆ ಮೇಲೆ ಹೊತ್ತು ನಿಂತ ಅಮ್ಮನ ಚಿಂತೆ, ಆಯಾಸ, ಇತ್ಯಾದಿಗಳು. ಎಲ್ಲವನ್ನು ನೋಡಿ ಗಾಬರಿಯಿಂದ ಅಮ್ಮನ ಹಿಂದೆಯೇ ಓಡುವ ನಮ್ಮ ಕಾಲುಗಳು.

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದರೆ ಸೈಯನ್ಸು ಓದುವುದು. ಮುಂದೆ ಅದು ಇಂಜನಿಯರೋ, ಡಾಕ್ಟರೋ, ಇಲ್ಲಾ ಸೈಂಟಿಸ್ಟೋ ಆಗಲು ದಾರಿಯಾಗುತ್ತದೆ. ಕಡಿಮೆ ಅಂಕ ಬಂದರೆ ಆರ್ಟ್ಸ ಓದುವುದು. ಕಾರಕೂನ, ಮಾಸ್ತರು, ವಕೀಲ, ದಲ್ಲಾಳಿ ಯಾವುದೂ ಆಗದಿದ್ದರೆ ರಾಜಕೀಯ ಸೇರಲು ದಾರಿಯಾಗುತ್ತದೆ. ಆದರೆ ಅಮ್ಮ ದಿನವಿಡೀ ಒದ್ದಾಡುವುದು ತನ್ನ ಮಕ್ಕಳು ಡಾಕ್ಟರ್‌, ಇಲ್ಲಾ ಇಂಜನಿಯರ್‌ ಆಗಬೇಕು ಎಂದು. ಶಿಕ್ಷಕ ಆಗಬೇಕು ಎಂದು ಯಾವ ಅಮ್ಮನೂ ಬಯಸುವುದಿಲ್ಲ. ಇಂಥ ಬಯಕೆಗಳು ಇತ್ತೀಚೆಗೆ ಎಲ್ಲ ಅಮ್ಮಂದಿರಿಗೂ ಸನ್ನಿ ಹಿಡಿದಂತಾಗಿದೆ. ಈ ವಿಷಯದಲ್ಲಿ ಅಪ್ಪ ವಾಸ್ತವವಾದಿ. ಮಕ್ಕಳು ಜಾಣರಾದರೆ ಅವರ ದಾರಿ ಅವರೇ ಹುಡುಕಿಕೊಳ್ಳುತ್ತಾರೆ. ಹೆಚ್ಚು ತಲೆ ಕೆಡಿಸಿಕೊಳ್ಳುವುದು ವೇಸ್ಟು ಅನ್ನುತ್ತಾರೆ. ಆದರೆ ಅಮ್ಮ ದಿನವಿಡೀ ಈ ವಿಷಯದಲ್ಲಿ ನಾಲ್ಕೂ ಹೊತ್ತು ಕೊರಗುತ್ತಾಳೆ. ಅಮ್ಮನ ಮಾತು ಮೀರಲಾರದ ಅಪ್ಪ ಕೇಳಿದ್ದಕ್ಕೆಲ್ಲ ದುಡ್ಡು ಕೊಡುವ ಏಟಿಎಂ ಆಗಿ ತಾನು, ತನ್ನ ಕೆಲಸ ಎಂದು ಸುಮ್ಮನಾಗುತ್ತಾರೆ. ಅಮ್ಮನಿಗೆ ಚಿಂತೆ ಗುಂಯ್‌ ಅನ್ನುವ ಹುಳು ಆಗಿ, ಕಿವಿ ಹೊಕ್ಕಂತಾಗಿ ನೆಮ್ಮದಿ ಕಳೆದುಕೊಳ್ಳುತ್ತಿರುತ್ತಾಳೆ.

ಅಮ್ಮನಿಗೆ ಕೇವಲ ಅಡುಗೆ ಬಂದರಷ್ಟೇ ಸಾಲದು. ಗಂಡಸು ಅನ್ನಿಸಿಕೊಳ್ಳುವ ಅಪ್ಪ ಹೊರಗೆ ಹತ್ತು ಕಡೆ ಸ್ನೇಹಿತರೊಂದಿಗೆ ಹೊಟೆಲ್ಲು, ರಿಸಾರ್ಟು ಅಂತ ಹೋಗುತ್ತಾರೆ. ಅಲ್ಲಿ ಥರಾವರಿ ತಿನಿಸು ಸಿಗುತ್ತವೆ. ಅಪ್ಪನ ಬಾಯಿರುಚಿ ಹೆಚ್ಚುತ್ತದೆ. ಅಡುಗೆ ಅಂದರೆ ಹೀಗಿರಬೇಕು ಎಂದು ಮನೆಗೆ ಬರುತ್ತಾರೆ. ಇಲ್ಲಿ ಎಲ್ಲವೂ ಹೋಮ್‌ ಮೇಡ್‌ ಆಗಿರುತ್ತದೆ. ವಾಣಿಜ್ಯದೂಟಕ್ಕೂ, ಮನೆಯ ಊಟಕ್ಕೂ ವ್ಯತ್ಯಾಸ ಇದ್ದೇ ಇರುತ್ತದೆ. ಅಲ್ಲಿ ಘಂ ಘಂ ವಾಸನೆಗೆ ಆದ್ಯತೆ. ಇಲ್ಲಿ ಶುಚಿ ಮತ್ತು ಆರೋಗ್ಯಕ್ಕೆ ಆದ್ಯತೆ. ಬಾಯಿ ರುಚಿಗೆ ಬೆಂಡಾದ ಅಪ್ಪ ಮನೆಗೆ ಬಂದು ಅಮ್ಮನ ಮೇಲೆ ಜೋರು ಮಾಡುತ್ತಾನೆ. ನಿನಗೆ ವಿದ್ಯಾರ್ಥಿ ಭವನದ ದೋಸೆ ಥರ ಮಾಡಲು ಬರುವುದಿಲ್ಲ. ಅಯ್ಯಂಗಾರಿ ಪುಳಿಯೊಗರೆ, ರಸಂ ಮಾಡಲು ಬರುವುದಿಲ್ಲ. ನೀ ಮಾಡಿದ ಅನ್ನ ಬೆಂದಿರುವುದಿಲ್ಲ ಎಂದು ಆರೋಪ ಮಾಡಲು ಸುರು ಮಾಡುತ್ತಾನೆ. ಅಮ್ಮನಿಗೆ ಒತ್ತಡದ ಮೇಲೆ ಒತ್ತಡಗಳು.

ಅಮ್ಮ ನನಗೆ ಪಾಸ್ತಾ ಬೇಕು, ನನಗೆ ನ್ಯೂಡಲ್ಸ ಬೇಕು. ಅಮ್ಮನಿಗೆ ರಸಂ ಮಾಡಲು ಬರುವುದಿಲ್ಲ. ಮೊಟ್ಟೆ ಹಾಕಿ ಕೇಕ್‌ ಮಾಡಬೇಕು. ಅಮ್ಮ ಅಪ್‌ಡೇಟ್‌ ಆಗಬೇಕು. ಎಂದು ನಾವೆಲ್ಲ ಕೂಗಾಡತೊಡಗಿದಾಗ ಅಮ್ಮ ಮಾನಸಿಕವಾಗಿ ಇನ್ನೂ ಒತ್ತಡಕ್ಕೆ ಸಿಲುಕುತ್ತಾಳೆ.

ಮಕ್ಕಳಿಗೆ ವಾರಕ್ಕೆ ಮೂರು ಸಲ ಸಂಗೀತ ಕ್ಲಾಸು. ಎರಡು ಸಲ ಗಣಿತ ಕ್ಲಾಸು. ಒಂದು ಕಿಲೋಮೀಟರ್‌ ಒಳಗೆ ಯಾವುದೂ ಇಲ್ಲ. ಆಟೋ ಹಿಡಿದು ಅಮ್ಮನೇ ಕರೆದೊಯ್ಯ ಬೇಕು. ಅಪ್ಪನಿಗೆ ಸಮಯ ಎಲ್ಲಿದೆ? ಬರುವಾಗ ತರಕಾರಿ ತರಬೇಕು. ಒಂದಷ್ಟು ರೇಶನ್ನೂ ತರಬೇಕು. ಯಾಕಂದರೆ ಅಪ್ಪನಿಗೆ ಸಮಯ ಎಲ್ಲಿದೆ?

ಗಂಡನ ಬ್ಯಾಂಕ ವ್ಯವಹಾರ, ಪೋಸ್ಟ ಕೆಲಸ, ವಿದ್ಯುತ್‌ – ನೀರು ಬಿಲ್ಲು ಕಟ್ಟುವುದು, ಅವರ ಬಟ್ಟೆ ಇಸ್ತ್ರಿ ಮಾಡುವುದು ಎಲ್ಲ ಅಮ್ಮನದೇ ಕೆಲಸ. ಯಾಕಂದರೆ ಅಪ್ಪನಿಗೆ ಸಮಯ ಎಲ್ಲಿದೆ? ಇದರ ಜೊತೆಗೆ ಅತ್ತೆ- ಮಾವರನ್ನು ಆಗಾಗ ಹೆಲ್ತ್‌ ಚೆಕಪ್‌ಗೆಂದು ಕರೆದೊಯ್ಯಬೇಕು. ಬ್ಲಡ್, ಯೂರಿನ್ನು ಚೆಕಪ್ಪು, ಬಿ.ಪಿ. ಶುಗರು ಎಂದೆಲ್ಲ ಅಲ್ಲಿ- ಇಲ್ಲಿ ಓಡಾಡಬೇಕು. ಎಲ್ಲ ಅಮ್ಮನೇ. ಯಾಕಂದರೆ ಅಪ್ಪನಿಗೆ ಸಮಯ ಎಲ್ಲಿದೆ? ಈ ಎಲ್ಲಾ ಧಾವಂತಗಳನ್ನು ನೀಗಿಸಿಕೊಳ್ಳಲು ಅಮ್ಮ ಮಾನಸಿಕವಾಗಿ ಹಾಗೂ ದೈಹಿಕವಾಗಿ ಫಿಟ್‌ ಆಗಿರಬೇಕು. ಅಮ್ಮ ಇರುವುದೇ ಬೇರೆಯವರ ಕೆಲಸ ಮಾಡಲು ಅಲ್ಲವೆ.

ಹೀಗೆ ಹೆಣ್ಣು ಹತ್ತಾರು ಜವಾಬ್ದಾರಿ ಹೊರಬೇಕು. ತನಗೆ ಬೇಡವೆಂದರೂ ಹತ್ತಾರು ದೋಣಿಗಳ ಮೇಲೆ ಅವಳು ಕಾಲಿಡಬೇಕಾಗುತ್ತದೆ. ಇದರಿಂದ ಆಕೆ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುವುದು ಅನಿವಾರ್ಯವಾಗುತ್ತದೆ. ಮನೆಯ ಬಲಗೈಯೇ ಅವಳು. ಅವಳೇ ಕುಗ್ಗಿದರೆ ಅದರ ಪರಿಣಾಮ ಸಂಸಾರದ ಮೇಲಾಗುತ್ತದೆ. ಅವಳೇ ಸೋತರೆ ಮನೆಯ ವಾತಾವರಣ ಹದಗೆಡುತ್ತದೆ. ಇದಕ್ಕೆ ಒಂದೇ ಪರಿಹಾರ. ಗಂಡಸು ಅಹಂ ಬಿಡಬೇಕು. ಮನೆ ಕೆಲಸ ಕೇವಲ ಅಮ್ಮನದು ಮಾತ್ರ ಅನ್ನುವಂತಿಲ್ಲ. ಎಲ್ಲ ಕೆಲಸಗಳೂ ಎಲ್ಲರದು. ಅಪ್ಪ ಹೊರಗೆ ದುಡಿದು ಬರುತ್ತಾರೆ ನಿಜ. ಆದರೆ ಹಾಗಂತ ಮನೆ ತನಗೆ ಸಂಬಂಧಿಸಿದ್ದಲ್ಲ ಎಂದು ಮೂಗು ಮುರಿದರೆ ಮುಂದೆ ಸಂಸಾರದ ನೆಮ್ಮದಿಯ ಮೂಗೇ ಮುರಿಯುವ ಸಾಧ್ಯತೆ ಹೆಚ್ಚು.

#ಹಣಣ

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW