ಖ್ಯಾತ ಲೇಖಕರಾದ ಕೆ.ವಿ.ನಾರಾಯಣ ಅವರ ‘ಬೇರು ಕಾಂಡ ಚಿಗುರು’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ಬೇರು ಕಾಂಡ ಚಿಗುರು
ಲೇಖಕರು : ಕೆ.ವಿ.ನಾರಾಯಣ
ಪ್ರಕಾಶನ : ವಿವೇಕ ಪ್ರಕಾಶನ
“ಅನ್ಯರೊರೆದುದನೆ ಒರೆದು ಬಿನ್ನಗಾಗಿದೆ ಮನವು ಬಗೆಯೊಳಗನೆ ತೆರೆದು”… ಎನ್ನುವ ಅಡಿಗರ ಪದ್ಯದಲ್ಲಿ “ಬಗೆಯೊಳಗನೆ ತೆರೆದು”ಎಂಬ ಶಬ್ದವನ್ನು ಬದಲಿಸಿ “ಕೃತಿಯೊಳಗನೆ ತೆರೆದು” ಎಂದು ಮಾಡಿದರೆ, ಅದು ತದ್ವತ್ತಾಗಿ ನನ್ನ ಮೆಚ್ಚಿನ ಮೇಷ್ಟ್ರ ಈ ಕೃತಿಯ ಮಹತ್ವವನ್ನು ಸೆರೆಹಿಡಿಯಬಲ್ಲದು.
ಕನ್ನಡ ಸಾಹಿತ್ಯದಲ್ಲಿ ಅಂತರ್ನಿಹಿತವಾಗಿರುವ ಜೈವಿಕ ಸಂಬಂಧದ ಅನ್ವೇಷಣೆಯನ್ನು ,ಅದರ ಒಡಲನೂಲಿನಿಂದ ನೇಯುವ ಕಾಯಕವನ್ನು, ಈ ಕೃತಿಯಲ್ಲಿ ಲೇಖಕರು ಕೈಗೊಂಡಿರುವುದು ಇದರ ವೈಶಿಷ್ಟ್ಯ. ಹೀಗೆ ಮಾಡುವಾಗ ಸಹಜವಾಗಿಯೇ ಈಗ ಪ್ರಚಲಿತವಿರುವ ಹೊರಗಿನ ಪ್ರಭಾವಗಳಿಂದ ಕೃತಿಯನ್ನು ಪ್ರವೇಶಿಸಿ, ಅದನ್ನು ವಿಶ್ಲೇಷಣೆಗೆ ಸಾಧನವನ್ನಾಗಿ ಮಾಡಿಕೊಳ್ಳುವ ವಿಧಾನವನ್ನು ಕನ್ನಡಿಗಳು ಸಾಕಿನ್ನು ಎಂದು ನಿರಾಕರಿಸಿದ್ದಾರೆ . ಇದಕ್ಕೆ ಭಾಷೆಯಲ್ಲಿ ಸಂಭವಿಸಿದ ಸಾಹಿತ್ಯ ಕೃತಿಯನ್ನು ,ಅದರ ಮೂಲಕವೇ ಪ್ರವೇಶ ಮಾಡಬೇಕು ಎಂಬ ಅವರ ನಂಬಿಕೆಯೇ ಕಾರಣ.ಆದ್ದರಿಂದಲೇ ಇಲ್ಲಿ ಅವುಗಳ ಆಕೃತಿ ಮತ್ತು ಪ್ರಕಾರಗಳಿಗೆ ಅವರ ಒತ್ತು ದೊರೆತಿದೆ. ಈ ಕೃತಿಯಲ್ಲಿ ಇರುವ ವಿಮರ್ಶೆಯ ಬರಹಗಳನ್ನು, ಕಾಲಾನುಕ್ರಮದಲ್ಲಿ ನೋಡಿದರೆ ಅವನ್ನು ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಎಂದು ವಿಂಗಡಿಸಬಹುದು.

ಪ್ರಕಾರಗಳ ದೃಷ್ಟಿಯಿಂದ ನೋಡಿದರೆ , ವಿಮರ್ಶೆ, ಕಾವ್ಯ, ( ಪ್ರಾಚೀನ, ಮಧ್ಯಕಾಲೀನ, ಆಧುನಿಕ) ಕಾದಂಬರಿ, ಸಣ್ಣಕಥೆ,ನಾಟಕ ಪ್ರಬಂಧಗಳನ್ನು ಕುರಿತ ವಿಮರ್ಶಾ ಬರಹಗಳು ಎಂದು ಗುರುತಿಸಬಹುದು. ಮೊದಲ ಭಾಗದಲ್ಲಿ ವಿಮರ್ಶೆಯ ಕುರಿತ ಬರಹಗಳಲ್ಲಿ ಶ್ರೀ( ಅವರ ವಿಮರ್ಶೆಯ ದುರಂತ ರಾವಣ ಮತ್ತು ಪಾರಸಿಕ ನಾಟಕ ಗ್ರೀಕ್ ಮೂಲದಿಂದ ಬಂದಿದೆ) , ಕುವೆಂಪು ವಿಮರ್ಶೆ, (ಅವರ ಪ್ರತಿಮೆ ಪ್ರತೀಕ ಭವ್ಯಾನುಭೂತಿ ಇತ್ಯಾದಿ ಅವರ ವಿಮರ್ಶಾ ಪರಿಕಲ್ಪನೆಗಳನ್ನು ಅವರ ಸೃಜನಶೀಲ ಕೃತಿಗಳೇ ಮೀರಿ ಬೆಳೆದಿವೆ )ಕುವೆಂಪು ಕೃತಿಗಳ ವಿಮರ್ಶೆ ಹೆಚ್ಚಿನವು, ವರ್ಣನಾತ್ಮಕವಾಗಿ, ಅವರ ಕೃತಿಗಳ ವಿಮರ್ಶೆ ಚರ್ವಿತ ಚರ್ವಣ.ಎಂ.ಜಿ.ಕೆ ಅವರ ” ಕೃತಿಗಳಲ್ಲಿ ಕೇಂದ್ರ ಪ್ರಜ್ಞೆ ಇಲ್ಲ”, ಕುರ್ತುಕೋಟಿ “ವಿವರಗಳಲ್ಲಿ ಸೊಕ್ಕುತ್ತವೆ” ಎಂಬ ಕುವೆಂಪು ವಿಮರ್ಶೆಗಳನ್ನು ಸಕಾರಣವಾಗಿ ನಿರಾಕರಿಸಿದ್ದಾರೆ, ತೀನಂಶ್ರೀ ಅವರ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕನ್ನಡ ಕಾವ್ಯದಿಂದ ಆರಿಸಿ ಕೊಟ್ಟ ಪದ್ಯಗಳೇ, ಅವರ ಕನ್ನಡ ಕಾವ್ಯ ಮೀಮಾಂಸೆಯ ಬೀಜ ಎಂದು ಗುರುತಿಸಿರುವುದು ಮಹತ್ವದ ಅಂಶ . ಅದರಂತೆ ಅವರು ಶ್ರೀಯವರ ಇಂಗ್ಲಿಷ್ ಗೀತೆಗಳ ಕುರಿತ ಛಂದೋಲಯಗಳ ಅಧ್ಯಯನ ಅವರ ಕೊಡುಗೆ. ಅವರ ಸಮಾಲೋಕ/ ಕಾವ್ಯ ಸಮೀಕ್ಷೆ ಕೃತಿಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಕಾವ್ಯಗಳಲ್ಲಿನ ಪ್ರಣಯದುರಂತವನ್ನು ಮೊದಲ ಬಾರಿಗೆ ಪತ್ತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು, ಎಂದು ಅದರ ಮಹತ್ವವನ್ನು ಉಲ್ಲೇಖ ಮಾಡಿದ್ದಾರೆ. ಪು.ತಿ.ನ ಅವರ ಲಘಿಮಾ ಕೌಶಲವನ್ನು ,ಭಾರತೀಯ ಕಾವ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವುದನ್ನು ಗುರುತಿಸಿದ್ದಾರೆ. ನವೋದಯ ಲೇಖಕರ ವಿಮರ್ಶಾ ಕೊಡುಗೆಯನ್ನು, ಅವರ ವಿಮರ್ಶಾ ವಿಧಾನಗಳ ಇತಿ ಮಿತಿಗಳನ್ನು, ವಸ್ತುನಿಷ್ಠವಾಗಿ ಪರಿಶೀಲನೆಗೆ ಈ ಭಾಗದಲ್ಲಿ ಒಳಪಡಿಸಲಾಗಿದೆ.
ಸಾಹಿತ್ಯ ಸಂಶೋಧನೆಯ ವಿಭಾಗದಲ್ಲಿ ಸಿ.ವೀರಣ್ಣ ಅವರ ‘ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆ’ಯ ಸಂಪುಟಗಳ ಕುರಿತು “ಚರಿತ್ರೆಯಲ್ಲಿ ಸಾಹಿತ್ಯವೋ ಸಾಹಿತ್ಯದ ಚರಿತ್ರೆಯೋ” ಎಂಬ ಮೂಲಭೂತ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಂತೆ ಮುಳಿಯ ತಿಮ್ಮಪ್ಪಯ್ಯ ಅವರ “ಸಮಸ್ತ ಭಾರತದಲ್ಲಿ ಸಮಕಾಲೀನ ಕರ್ನಾಟಕದ ಅರಸರ ಜೊತೆಗೆ ಮಹಾಭಾರತದ ಪಾತ್ರಗಳ ಸಮೀಕರಣವನ್ನು” ನಿರಾಕರಿಸಿದ್ದಾರೆ. ಎಂ.ಎಂ.ಕಲ್ಬುರ್ಗಿಯವರು ಸಂಪಾದನೆಯ ವಚನ ಸಂಪುಟಗಳ ಕುರಿತು ಬರೆಯುತ್ತಾ ,ಅವರು ಪಾಠಾಂತರಗಳನ್ನು ಅನಧಿಕೃತ ಎಂದು ಕೈ ಬಿಟ್ಟ ವಚನಗಳು ಮುಂದೆ ಅಧಿಕೃತ ಎಂದು ಗೊತ್ತಾದಾಗ ಈಗ ಆಯ್ಕೆ ಮಾಡಿದ ವಚನಗಳ ಸಂಪಾದನೆಗಳ ಭವಿಷ್ಯದ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾರೆ.
ಎರಡನೆಯ ಕಾವ್ಯದ ವಿಭಾಗದಲ್ಲಿ: ಪ್ರಾಚೀನ ಮಧ್ಯಕಾಲೀನ ಹಾಗೂ ಆಧುನಿಕ ಕಾವ್ಯದ ಮತ್ತು ಕವಿಗಳ ಕಾವ್ಯದ ಕುರಿತು ಬರೆದಿದ್ದಾರೆ. ಮೊದಲಿಗೆ ‘ಪಂಪನಲ್ಲಿ ದೇಸಿ ‘ಎನ್ನುವ ಬರಹ ಪ್ರಸಿದ್ಧವಾದ ಮಾರ್ಗ ದೇಸಿಗಳ ಪರಿಕಲ್ಪನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಮಾರ್ಗ ಎಂದರೆ ಸಂಸ್ಕೃತದಲ್ಲಿನ ಕಾವ್ಯ ಪದ್ಧತಿ ಎಂದು ದೇಸಿ ಎಂದರೆ ಅದಕ್ಕೆ ವಿರುದ್ಧವಾಗಿ ತಿರುಳು ಗನ್ನಡದ ಭಾಷೆ ಎಂದು, ಅದು ಪರಿಣಾಮಕಾರಿಯಾಗಿ ಪ್ರಕಟಗೊಂಡ ಭಾಗಗಳನ್ನು ಸಾಧಾರವಾಗಿ ನಿರೂಪಿಸಿ ,ಅವನ ವೈಶಿಷ್ಟ್ಯವನ್ನು, ಕಾಕು ಇತ್ಯಾದಿಗಳ ಬಳಕೆಯಲ್ಲಿ ಗುರುತಿಸಿದ್ದಾರೆ. ಅವರ ‘ಪಂಪನ ಕಾವ್ಯ ಮತ್ತು ಧರ್ಮ ‘ಎಂಬ ಬರಹದಲ್ಲಿ ಕಾವ್ಯ ಧರ್ಮ ಮತ್ತು ಜೈನಧರ್ಮಗಳು ಹಾಸುಹೊಕ್ಕಾಗಿರುವುದನ್ನು, ಭರತ ಮತ್ತು ಬಾಹುಬಲಿಯ ಪ್ರಸಂಗದಲ್ಲಿ ಅವನ ನಿರ್ಲಿಪ್ತ ವ್ಯಕ್ತಿತ್ವದ ಸ್ವರೂಪವನ್ನು ” ಅಯ್ಯನಿತ್ತುದಂ ಆನ್ ನಿನಗಿತ್ತೆನ್” ಎಂಬುದನ್ನು ಉಲ್ಲೇಖಿಸುವ ಮೂಲಕ ಅವನ ನಿರ್ಲಿಪ್ತ ಮನೋಧರ್ಮವನ್ನು ನಿರೂಪಿಸಿದ್ದಾರೆ.

ಮಧ್ಯಕಾಲೀನ ಕಾವ್ಯದಲ್ಲಿ ವಚನಕಾರರ ‘ಕಾಯಕ’ದ ಪರಿಕಲ್ಪನೆಯ ಮಿತಿಗಳನ್ನು ಗುರುತಿಸುತ್ತಾ, ಅದರಲ್ಲಿ ತೊಡಗಿರುವವರಿಗೆಲ್ಲ ಮಗ್ನತೆಯಿಂದ ಮಾಡುತ್ತಾರೆ/ ಮಾಡಿದರು ಎಂದು ನಿರೀಕ್ಷಿಸುವಂತಿಲ್ಲ ಎಂದಿದ್ದಾರೆ.ಅದಕ್ಕೆ ನಿದರ್ಶನವಾಗಿ ಟಾಲ್ಸ್ಟಾಯ್ ಹೇಳಿದ ಬ್ರೆಡ್ ಮಾಡಿದಂತೆ ನಟಿಸುವುದರಿಂದ, ಬ್ರೆಡ್ ಮಾಡಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ.ಆದರೆ ಕಾಯಕದಲ್ಲಿ ತೊಡಗಿರುವವರು” ಗುರು ಬಂದರೂ ತಿರುಗಿ ನೋಡಬಾರದು” ಎನ್ನುವ ವಚನವನ್ನಾಗಲಿ, ನುಲಿಯ ಚಂದಯ್ಯನ ವಚನ ಶಿವ ತನ್ನ ಬೆನ್ನು ಹತ್ತಿದಾಗ” ಹೋಗು ನಿನ್ನ ಭಕ್ತರ ಬಳಿಗೆ” ಎಂಬ ವಚನಗಳು ವ್ಯಕ್ತಪಡಿಸಿದ ಕಾಯಕದ ಮಗ್ನತೆಯನ್ನು ಗಮನಕ್ಕೆ ಇಲ್ಲಿ ತಂದುಕೊಂಡಿಲ್ಲ.
ಕನಕದಾಸರ ಕೀರ್ತನೆಗಳಲ್ಲಿ ‘ತಲ್ಲಣಿಸದಿರು’ ಎಂಬ ಪ್ರಸಿದ್ಧ ಕೀರ್ತನೆ, ಇಂದಿಗೂ ತಲ್ಲಣಕ್ಕೆ ಒಳಗಾದವರು, ತಮ್ಮ ಅನುಭವವನ್ನು ಅದರಲ್ಲಿ ಕಂಡುಕೊಳ್ಳಲು ಸಾಧ್ಯ ಎಂದು ,ಅದರ ಸಮಕಾಲೀನತೆಯನ್ನು ಗುರುತಿಸಿದ್ದಾರೆ. ಗೋವಿಂದ ಪೈ ಅವರ ನಂದಾದೀಪ ತೀವ್ರವಾದ ದು:ಖ ಶಮನಗೊಂಡ ರೂಪದಲ್ಲಿ ಪ್ರಕಟಿಸಿರುವುದು. ಅದರ ತೀವ್ರತೆಯನ್ನು ಒಳಗೊಂಡಿಲ್ಲ ಎಂದು ಅವರು ಕಾವ್ಯದ ಮಿತಿಯನ್ನು ಗುರುತಿಸಿದ್ದಾರೆ.
ಆಧುನಿಕ ಕಾವ್ಯದಲ್ಲಿ ಕೆ.ಎಸ್.ನ ಅವರ ಕಾವ್ಯ ‘ಮನೆಯಿಂದ ಮನೆಗೆ ‘ಕವನ, ಆಧುನಿಕ ಸಮಾಜದಲ್ಲಿ ವಿಘಟಿತಗೊಂಡ ಮಧ್ಯಮ ವರ್ಗದ ಕೌಟುಂಬಿಕ ಪಲ್ಲಟಗಳನ್ನು ಸೆರೆಹಿಡಿದಿದೆ, ಎಂದು ಸಮರ್ಥವಾಗಿ ತೋರಿಸಿಕೊಟ್ಟಿದ್ದಾರೆ.
ಜಿ.ಎಸ್.ಎಸ್ ಸಮಗ್ರ ಕಾವ್ಯಕ್ಕೆ ಬರೆದ ಮುನ್ನುಡಿಯಲ್ಲಿ, ಅವರ ಕಾವ್ಯ ನಡೆದು ಬಂದ ದಾರಿಯ ಮೇಲೆ ಬೆಳಕು ಚೆಲ್ಲಿ,ಅವರ ಕಾವ್ಯದ ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ .,ಅಲ್ಲದೆ ಅವರನ್ನು ‘ಸಮನ್ವಯ ಕವಿ’ ಎಂದು ಹಣೆಪಟ್ಟಿ ಹಚ್ಚುವುದನ್ನು ನಿರಾಕರಿಸಿದ್ದಾರೆ. ಕಾದಂಬರಿ ಪ್ರಕಾರದಲ್ಲಿ ಮೊದಲ ಘಟ್ಟದಲ್ಲಿ ಪ್ರಕಟವಾದ ಎಂ ಎಸ್ ಪುಟ್ಟಣ್ಣನವರ ‘ಮಾಡಿದ್ದುಣ್ಣೋ ಮಹರಾಯ’ದಲ್ಲಿ ಪ್ರಭುತ್ವದ ಅಸಹಾಯಕ ಸ್ಥಿತಿಯಿಂದ ಪ್ರಾರಂಭಮಾಡಿ, ಕಾರಂತರ ಕಾದಂಬರಿಗಳಲ್ಲಿನ ಆವರ್ತನಗಳ ಮೂಲಕ ಶಿಲ್ಪವನ್ನು ಗುರುತಿಸಿ, ಶಾಂತಿನಾಥ ದೇಸಾಯಿ ಅವರ ‘ಬೀಜ’ದಲ್ಲಿ ನಾಯಕ ಶ್ರೇಯಾಂಸ ತವರಿಗೆ ಮರಳಿದರೂ, ಒಂಟಿಯಾಗಿ ಇರಬೇಕಾದ ಕಥಾನಾಯಕನ ತಲ್ಲಣದೊಂದಿಗೆ, ಚದುರಂಗರ ‘ವೈಶಾಖ ‘ಕಾದಂಬರಿಯಲ್ಲಿನ ಲಕ್ಕನ ಪ್ರಜ್ಞಾ ಸ್ಪೋಟದವರೆಗೆ ಕನ್ನಡ ಕಾದಂಬರಿಯ ವಿಕಾಸವನ್ನು ವಿಶ್ಲೇಷಣೆ ಮಾಡಿದ್ದಾರೆ. ಪರ್ವ ಕಾದಂಬರಿಯ ಮೂಲಕ ಮೊದಲ ಬಾರಿಗೆ ಪಾತ್ರಗಳ ಅಂತರಂಗವನ್ನು ಹೊಕ್ಕು ಮಹಾಭಾರತವನ್ನು ಪುನಾರಚನೆ ಮಾಡಿದ ಶ್ರೇಯಸ್ಸು ಭೈರಪ್ಪನವರದು ಎಂದು ಅದನ್ನು ‘ಪುರಾಣ ಭಂಜನೆ ‘ಎಂದು ಆಪಾದಿಸಿರುವುದು ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ. ಚಂದ್ರಶೇಖರ ಕಂಬಾರರ “ಸಿಂಗಾರೆವ್ವ ಮತ್ತು ಅರಮನೆ “ಕಾದಂಬರಿಯಲ್ಲಿ ಭ್ರಮೆ ಮತ್ತು ವಾಸ್ತವಗಳ ಅನಾವರಣಮಾಡಿದ್ದಾರೆ.
ಕಥಾಲೋಕದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕಳೆದ ಶತಮಾನದ ಆರಂಭದಲ್ಲಿ ಉದ್ಘಾಟಿಸಿದ, ಕಥಾಲೋಕ ಕನ್ನಡ ಸಂಸ್ಕೃತಿಯ ವಕ್ತಾರರಾದರೂ, ಅವರಿಗಿಂತ ಚಿತ್ತಾಲರು ಭಿನ್ನ ದಾರಿಯಲ್ಲಿ ಸಾಗಿದ ಕನ್ನಡ ಕಥಾ ಸಾಹಿತ್ಯದ ಅನುಸಂಧಾನ ಮಾಡಿದ್ದಾರೆ.
ನಾಟಕಲೋಕದಲ್ಲಿ ಜಡಭರತರ ‘ಮೂಕಬಲಿ’, ರಾಮಚಂದ್ರ ಶರ್ಮ ಅವರ ‘ಸೆರಗಿನ ಕೆಂಡ’ ವಸ್ತುವಿನ ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ. ಕೊನೆಗೆ ವಿ.ಸಿ.ಯವರ ಪ್ರಬಂಧಗಳನ್ನು ಕುರಿತ ಬರಹ ಅವರ ಪ್ರಬಂಧಗಳ ಸ್ವರೂಪ ವೈಶಿಷ್ಟ್ಯಗಳನ್ನು ನಿರೂಪಿಸಿದ್ದಾರೆ.
ಈ ಕೃತಿಯ ಸಾಧನೆಗಳು:
೧: ಅನ್ಯರ ಮೂಲಕ ನಮ್ಮನ್ನು ಕಂಡು ಕೊಳ್ಳುವ ನೈಚ್ಯಾನುಸಂಧಾನದ ನಿರಾಕರಿಸಿರುವುದು.
೨: ಆನಂದವರ್ಧನನ ಧ್ವನಿ ಸಿದ್ಧಾಂತಕ್ಕೆ ಮನ್ನಣೆ ಕೊಟ್ಟಿರುವುದು
೩: ವಿಜ್ಞಾನದ ವಿದ್ಯಾರ್ಥಿಯಾಗಿ ,ತನ್ನ ಅಧ್ಯಯನ ಮುಂದುವರಿಸದೆ ಹೋದುದುಕ್ಕೆ ವಿಷಾದವಿದ್ದರೂ, ಅದನ್ನು ಸಂದೇಹಾತೀತ ಎಂದು ಒಪ್ಪಲು ನಿರಾಕರಿಸಿ, ಪಾವಿತ್ರ್ಯತೆ ಕಾಪಾಡಿಕೊಂಡು ಬರುವ ಅಗತ್ಯವನ್ನು ಪ್ರತಿಪಾದಿಸಿರುವುದು.
೪: ಕಥೆಗಾರನನ್ನು ನಂಬಬೇಡಿ ಕಥೆಯನ್ನು ನಂಬಿ ಎಂದು ಕೃತಿಯ ಸ್ವಾಯತ್ತತೆಯನ್ನು ಎತ್ತಿಹಿಡಿದಿರುವುದು.
೫: ಭಾಷಿಕ ನೆಲೆಯಲ್ಲಿ ಮೊದಲ ಬಾರಿಗೆ ಕೃತಿಯ ಒಳಹೊಕ್ಕು ಅನ್ವೇಷಣೆಯನ್ನು ನಡೆಸಿರುವುದು.
ಮಿತಿಗಳೆಂದು ಕರೆಯುವುದಾದರೆ:
೧. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆಗಳ ಮಾಯಕತೆಯನ್ನು ವಿವರಿಸಲು ಬೇಂದ್ರೆಯವರ ಉಲ್ಲೇಖದ ಪುನರುಕ್ತಿ( ರುದ್ರನನ್ನು ಶಿವನ್ನಾಗಿಸಿದ- ಇತ್ಯಾದಿ)
೨: ಕೃತಿಯುದ್ದಕ್ಕೂ ಅನ್ಯ ಪ್ರಭಾವಗಳನ್ನು, ಅನ್ಯ ಶಿಸ್ತುಗಳ ಬಳಕೆಯನ್ನು ನಿರಾಕರಿಸಿದ ಅವರು, ಮಾಸ್ತಿಯವರನ್ನು ವಿಜಯಮ್ಮ ಅವರ ಜೊತೆಗೆ ಮಾಡಿದ ಸಂದರ್ಶನದಲ್ಲಿ ಉದಾರವಾದಿ ಎನ್ನುವ ಪರಿಕಲ್ಪನೆಯನ್ನು ಬಳಸಿ ಪೇಚಿಗೆ ಸಿಲುಕಿದ್ದು ಸೋಜಿಗದ ಸಂಗತಿ.
೩: ಇಡೀ ಕೃತಿಯಲ್ಲಿ ಸಂಭೂತಿ ಎಂಬ ಪದವನ್ನು ಎರಡು ಸಲ ಬಳಸಿದ್ದಾರೆ.ಆದರೆ ಅರ್ಥ ಸ್ಪಷ್ಟವಾಗಿಲ್ಲ. ಮೇಲಿನ ಸ್ಥೂಲ ಸಮೀಕ್ಷೆಯಲ್ಲಿ, ಇಡೀ ಕನ್ನಡ ಸಾಹಿತ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು , ಕೃತಿಗಳ ಮೂಲಕವೆ, ಅವುಗಳ ವೈಶಿಷ್ಟ್ಯಗಳ ಅನ್ವೇಷಣೆಯನ್ನು ನಡೆಸಿ, ಕನ್ನಡ ಸಾಹಿತ್ಯದ ಅನನ್ಯತೆಯನ್ನು ಸ್ಥಾಪಿಸಿರುವುದು ಅವರ ಸ್ವೋಪಜ್ಞತೆಗೆ ಸಾಕ್ಷಿ .
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
