ಹದಿನಾರು ವರ್ಷಗಳ ಹಿಂದೆ ನಮ್ಮ ಗೃಹಪ್ರವೇಶದಲ್ಲಿ ಇಪ್ಪತೈದು ಸಾವಿರ ಖರ್ಚು ಮಾಡಿ ನಾನೂರು, ಐನೂರು ಜನಕ್ಕೆ ಊಟ ಮಾಡಿಸಿದ್ದೆವು. ಇಂದು ದೇವಸ್ಥಾನದ ಪೂಜೆಗೆ ಇಷ್ಟೊಂದು ಖರ್ಚುಮಾಡುತ್ತಿದ್ದೇವೆ. ಬಸವಣ್ಣನವರ ಕಾಯಕವೇ ಕೈಲಾಸವನ್ನು ಅನುಸರಿಸಿದರೆ ಸೂಕ್ತ – ಸ್ವರ್ಣಲತಾ ಎ ಎಲ್, ತಪ್ಪದೆ ಮುಂದೆ ಓದಿ…
ನಾವು ಅಷ್ಟಾಗಿ ನಮ್ಮ ಊರಿನ ದೇವಸ್ಥಾನಗಳಿಗೆ ಹೋಗುವುದಿಲ್ಲ,ಇದಕ್ಕೆ ಅಂಥ ಕಾರಣವೇನೂ ಇಲ್ಲ,ಹಾಗೆ ನೋಡಿದರೆ ದೇವಸ್ಥಾನಗಳಿಗೆ ಹೋಗುವುದೆಂದರೆ ನನಗೆ ಬಹಳ ಇಷ್ಟ. ವಿಗ್ರಹಗಳ ವಿನ್ಯಾಸ, ಗೋಪುರಗಳ ಕುಸುರಿ ಕೆಲಸಗಳನ್ನು ನೋಡುವುದರಲ್ಲೇ ಹೆಚ್ಚು ಆಸಕ್ತಿ. ದೇವರ ಸನ್ನಿಧಿಗೆ ಹೋದರೆ ಅಲ್ಲಿನ ಪೂಜಾರಿ ಮತ್ತು ಭಕ್ತರ ಅವತಾರಗಳನ್ನು ಕಣ್ಣಿಂದ ನೋಡಲಾಗುವುದಿಲ್ಲ, ಅನಿವಾರ್ಯವಾಗಿ ಹೋದಾಗ ಆದಷ್ಟು ನಮ್ಮ ಪಾಡಿಗೆ ನಾವು ಇದ್ದುಬಿಡುತ್ತೇವೆ. ಸ್ವಲ್ಪ ದಿನಗಳ ಹಿಂದೆ ಒಂದು ದೇವಸ್ಥಾನಕ್ಕೆ ಹೋಗಲೇ ಬೇಕಾಗಿ ಬಂತು.

ಅಲ್ಲಿ ಹೋದರೆ ನಮ್ಮ ಕರ್ಮಕ್ಕೆ ಸುತ್ತಮುತ್ತ ಇದ್ದವರಿಗೆಲ್ಲಾ ಮೈಮೇಲೆ ದೇವರು ಬಂದು ಬಿಡುವುದೆ. ಪೂಜೆ ಮಾಡಿಸಲು ಹೋದವರೆಲ್ಲಾ ಮೈ ಮೇಲೆ ದೇವರನ್ನು ಆವಾಹಿಸಿಕೊಂಡರು. ಮನರಂಜನೆ ಒಂದು ಕಡೆಯಾದರೆ ಹೆಂಗಸರೂ ಮೈ ಮೇಲೆ ಜ್ಞಾನವಿಲ್ಲದಂತೆ ಕುಣಿಯುವುದನ್ನು ನೋಡಿ ಇನ್ನಿಲ್ಲದ ಮುಜುಗರ. ನಮಗೆ ಬೇಕಾದವರೊಬ್ಬರು ಅಭಿಷೇಕ,ನೈವೇದ್ಯ,ದೇವರ ಮೆರವಣಿಗೆ(ದೇವಸ್ಥಾನದ ಆವರಣದಲ್ಲೇ) ಮುಂತಾದ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಬರಲೇಬೇಕೆಂದು ಆಗ್ರಹಪಡಿಸಿದ್ದರಿಂದ ದಂಪತಿಗಳಿಬ್ಬರೂ ಹೋಗಿದ್ದೆವು.ದೇವರ ಮೆರವಣಿಗೆ ಸಮಯದಲ್ಲಿ ಕುಚೇಷ್ಟೆಗಳು ಬೇರೆ ನಡೆಯುತ್ತವೆ.ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸುತ್ತಿರುವವರ ಮುಖದ ಬಳಿ ಹಿಡಿಯುವುದು.(ಕಳಸ ಅವರ ಮುಖಕ್ಕೆ ಚುಚ್ಚುವಂತೆ) ಎಲ್ಲರಿಗೂ ದೇವರು ಬಂದರೆ ಪೂಜಾರಯ್ಯನಿಗೆ ಸ್ಕೋಪ್ ಕಮ್ಮಿಯಾಗುವುದಿಲ್ಲವೆ ಅದಕ್ಕೆ,ಬೇರೆಯವರ ಮೈ ಮೇಲೆ ಬಂದ ಬೇರೆ ದೇವರುಗಳನ್ನು ಈತ ಹೀಯಾಳಿಸುವುದು.
ಅವತ್ತಿನ ಪೂಜಾ ಖರ್ಚು ಬರೋಬ್ಬರಿ ಹದಿನೇಳು ಸಾವಿರ.ನಮ್ಮ ಮನೆ ಗೃಹಪ್ರವೇಶದಲ್ಲಿ ,ಈಗ್ಗೆ ಹದಿನಾರು ವರ್ಷಗಳ ಹಿಂದೆ ಇಪ್ಪತೈದು ಸಾವಿರ ಖರ್ಚು ಮಾಡಿ ನಾನೂರು,ಐನೂರು ಜನಕ್ಕೆ ಊಟ ಮಾಡಿಸಿದ್ದೆವು.ಇಂದು ದೇವಸ್ಥಾನದ ಪೂಜೆಗೇ ಇಷ್ಟೊಂದು ಖರ್ಚು.
ನಮ್ಮ ಊರಿನಲ್ಲಿ ಮೂರು ಗ್ರಾಮ ದೇವತೆಗಳಿವೆ.ಮೂರು ದೇವಸ್ಥಾನಗಳೂ ಮುಜರಾಯಿ ಇಲಾಖೆಗೆ ಸೇರಿದ್ದು , ಪೂಜಾರಿಗಳಿಗೆ ಸಂಬಳ ಬರುತ್ತದೆ.ಇದರ ಜೊತೆಗೆ ಕೊಡುಗೆ ಜಮೀನೆಂದು ಪೂಜಾರಿಗಳಿಗೆ ಘನವಾದ ಆಸ್ತಿ ಇದೆ.ಅದರಲ್ಲೂ ಈಶ್ವರ ಸ್ವಾಮಿಯ ಪೂಜಾರಿಗಂತೂ ಊರ ಮುಂದೆಯೇ ಐದು ಎಕರೆ ಜಮೀನಿದೆ.ಇದಲ್ಲದೇ ಬೇರೆ ಕಡೆಗಳಲ್ಲೂ ಐದಾರು ಎಕರೆ ಇದೆ.ಈಗ ಪೂಜೆ ಮಾಡುತ್ತಿರುವ ಯುವ ಪೂಜಾರಿ,ತಂದೆಗೆ ಒಬ್ಬನೇ ಮಗ.ಘಂಟೆ ಅಲ್ಲಾಡಿಸಲೆಂದೇ ಆರು ಜನ ಹೆಣ್ಣು ಮಕ್ಕಳಾದ ಮೇಲೆ ಕಾದು,ಕಾದು ಹುಟ್ಟಿದವನು,ಅಮಾಯಕ.ಇಂಥವನನ್ನು ಊರ ಪೋಕರಿಗಳು ಸೇರಿ ಹಾದಿ ತಪ್ಪಿಸಿದರು.ಗುಡಿಗೆ ಬೆಳಿಗ್ಗೆ ಹೋದರೂ ರಾತ್ರಿಯ ಹೆಂಡದ ಘಮಲು ಹಾಗೇ ಇರುತ್ತದೆ. ಬೀಡಿಯ ವಾಸನೆ ಕಂಡರೂ ಹೇಸುತ್ತಿದ್ದವನು ಕುಡಿದೂ,ಕುಡಿದೂ ಇನ್ನೇನು ಜೀವನ ಮುಗಿಸುವ ಹಾದಿಲ್ಲಿದ್ದಾನೆ. ಇನ್ನೊಂದು ಗ್ರಾಮದೇವತೆ ಪೂಜಾರಿಯದೂ ಇದೇ ಕತೆ, ಇವನೇ ಈಶ್ವರನ ಪೂಜಾರಿಯನ್ನು ಹಾಳು ಮಾಡಿದವನು.ಇಂಥ ಪೂಜಾರಿಗಳ ಕೈಯಲ್ಲಿ ಘನವಾದ ಪೂಜೆ ಮಾಡಿಸಿ,ಮೋಕ್ಷ ಪಡೆಯುವ ಆಸೆ ನಮ್ಮೂರ ಜನಗಳದ್ದು.
ಈಗ ಜನಗಳ ಕೈಯಲ್ಲಿ ದುಡ್ಡು ಓಡಾಡುವುದರಿಂದ ಯಾರು ನೋಡಿದರೂ ದೇವರ ಕೈಂಕರ್ಯದಲ್ಲಿ ತೊಡಗಿರುವವರೆ. ನಾವಿರುವ ಕೊಪ್ಪಲಿನ ಸುಮಾರು ಹದಿನೈದು ಜನ ಅಯ್ಯಪ್ಪನ ಮಾಲೆ ಹಾಕಿಸಿಕೊಂಡು , ತಲಾ ಹದಿನೈದು ಸಾವಿರ ರೂ ಖರ್ಚು ಮಾಡಿದರು. ನಾಲ್ಕು ದಿಕ್ಕುಗಳಿಗೂ ಗ್ರಾಮಫೋನ್ ಗಳನ್ನು ಕಟ್ಟಿ,ಐದು ದಿನಗಳ ಕಾಲ ಅಬ್ಬರ ಮಾಡಿದರು. ಕೇಳಿದ್ದಕ್ಕೆ ನಮ್ಮನ್ನೆ ನಿಷ್ಠುರ ಮಾಡಿದರು. ಮೊದಲು ಗ್ರಾಮಫೋನ್ ಗಳ ಬಳಕೆಯನ್ನು ಸರ್ಕಾರ ರದ್ದು ಮಾಡಬೇಕು.
ಈಗ ರಾಜಕಾರಣಿಗಳು ಹೇರಳವಾಗಿ ಅಂದರೆ ಲಕ್ಷಗಳ ಲೆಕ್ಕದಲ್ಲಿ ದೇವಸ್ಥಾನಗಳಿಗೆ ದೇಣಿಗೆ ಕೊಡುವುದರಿಂದ ಗ್ರಾಮ ದೇವತೆ ದೇವಸ್ಥಾನಗಳ ಜೊತೆಗೆ ಒಂದೊಂದು ಊರಿನಲ್ಲಿ ಕನಿಷ್ಠ ಮೂರು ಬೇರೆ,ಬೇರೆ ದೇವಸ್ಥಾನಗಳ ನಿರ್ಮಾಣವಾಗುತ್ತಿವೆ.ಇನ್ನೂರು ಮನೆಗಳ ನಮ್ಮ ಊರಿನಲ್ಲಿ ಮೂರು ಗ್ರಾಮ ದೇವತೆಗಳ ಜೊತೆಗೆ ಸತ್ಯಮ್ಮ,ಎರಡು ಲಕ್ಷ್ಮಿ ದೇವಿ, ಮುಳ್ಳಕಟ್ಟಮ್ಮ, ಶನಿ ಮಹಾತ್ಮ,ಭೈರವೇಶ್ವರ ಹೀಗೆ ಐದಾರು ಗುಡಿಗಳಿವೆ. ಎಲ್ಲ ದೇವಸ್ಥಾನಗಳಿಗೂ ಭಕ್ತಾದಿಗಳು ಮೈಕ್ ಸೆಟ್ ದಾನ ಮಾಡಿರುತ್ತಾರೆ.ಜೊತೆಗೆ ಬ್ಯಾಂಡ್ ಸೆಟ್ ಬೇರೆ. ಬೆಳಿಗ್ಗೆ ಮತ್ತು ಸಂಜೆ ಪೂಜೆ ನಡೆಯುವಾಗ ಇವುಗಳ ಅಬ್ಬರ.ಹೊಸದಾಗಿ ದೇವಸ್ಥಾನ ಆರಂಭವಾದಾಗ ನಲ್ವತ್ತೆಂಟು ದಿನಗಳ ಪೂಜೆಯನ್ನು ಒಂದೊಂದು ಮನೆಯವರು ನಡೆಸಿಕೋಡುತ್ತಾರೆ.ಅವತ್ತಿನ ಪೂಜಾ ವೆಚ್ಚವಲ್ಲದೇ ಊರಿಗೆಲ್ಲಾ ಊಟವೂ ಇರುತ್ತದೆ.ಒಂದು ಕಾಲದಲ್ಲಿ ಅಂದರೆ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ತಿನ್ನುವ ಅನ್ನಕ್ಕೂ ತತ್ವಾರ, ಈಗ ಎಲ್ಲದಕ್ಕೂ ಆಡಂಬರ.
ಬಸವಣ್ಣನವರ ಕಾಯಕವೇ ಕೈಲಾಸದ ಸ್ಪೂರ್ತಿ ತತ್ವ ಇವರು ಯಾರಿಗೂ ಸಂದೇಶವಾಗದಿರುವುದು ಈ ನಾಡಿನ ದುರಂತ. ಈ ಕುರಿತು ಬಹಳ ಸಲ ಬರೆದಿದ್ದೇನೆ.ಮನೆ ಕಟ್ಟುವವರು,ಕಬ್ಬಿಣ ತುಂಬುವವರು,ಇಟ್ಟಿಗೆ ಸುಡುವವರು,ತುಂಬುವವರು,ತೆಂಗಿನ ಕಾಯಿ ಮಟ್ಟೆ ಅಂದರೆ ಸಿಪ್ಪೆ ತುಂಬುವವರು,ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಮಾಡುವವರು ಎಲ್ಲರೂ ಯುಪಿ,ಬಿಹಾರಿ,ರಾಜಾಸ್ತಾನಿಗಳು. ಹೊಟೇಲ್ ಕೆಲಸ ಮಾಡುವವರು ಈಶಾನ್ಯ ರಾಜ್ಯಗಳವರು.ಈಗ ಸದ್ಯಕ್ಕೆ ನಮ್ಮವರು ಆಟೋ ,ಕ್ಯಾಬ್ ಓಡಿಸುತ್ತಿದ್ದಾರೆ. ಮಾರ್ನೋಮಿಗೆ,ಉಪವಾಸಕ್ಕೆ,ಯುಗಾದಿಗೆ ಬಂದರೆ ಹದಿನೈದು ದಿನ ಹಳ್ಳಿಯಿಂದ ಕಾಲ್ತೆಗೆಯುವುದಿಲ್ಲ.ಬಹುಶ: ಟ್ಯಾಕ್ಸಿ,ಕ್ಯಾಬುಗಳೂ ಇವರ ಕೈತಪ್ಪಿ ಹೋಗಬಹುದು. ಆಮೇಲೆ ಇವರು ದೇವರಿಗೆ ಅಭಿಷೇಕ,ನೈವೇದ್ಯಗಳನ್ನು ಫುಲ್ ಟೈಂ ಮಾಡಿಕೊಂಡು ಇರಬಹುದು. ದುಡಿಮೆಯೇ ದೇವರು ಎಂಬ ನಾಣ್ನುಡಿ ಭೂಮಿ ಇರುವವರೆಗೂ ಸತ್ಯವೆ.
- ಸ್ವರ್ಣಲತಾ ಎ ಎಲ್
