99 ರೂಪಾಯಿಗಳಿಗೆ ಒಂದೇ ಒಂದು ರೂಪಾಯಿಯನ್ನ ಸೇರಿಸಿದಾಗ ಹೇಗೆ 100 ರುಪಾಯಿಯಾಗಿದೆ ಎಂದೆನಿಸಿವುದೋ ಹಾಗೆ ಅಮೃತ ಎಂ ಡಿ ಅವರ ಕೃತಿಯು ನಮ್ಮ ಮನವ ತುಂಬಲು ಆ ಒಂದು ರೂಪಾಯಿಯಂತೆ ಇದೆ ಎಂದು ಹನು ಪಾಟಿಲವಾರು ಹೇಳುತ್ತಾರೆ. ಮುಂದೆ ಓದಿ…
“ಹೃದಯ ಮಂಡಲದೊಳು, ನನ್ನಅಂಗೈಯಲ್ಲಿರಿಸಿ ವಿಹರಿಸುವ ಪುಷ್ಪಕ ವಿಮಾನವಿದು..!! ”
ಬದುಕಿನ ಅವಶ್ಯಕತೆಗಳಲ್ಲಿ ಇದು ಕೂಡ ಒಂದಂತೆ, ಜೀವನಕ್ಕೆ ಉಡೊಗೊರೆಯಾಗಿ ಬರುವ ಈ ಕಲ್ಲು ಮುಳ್ಳುಗಳನ್ನ ಸಾಧಾರಣವಾಗಿ, ವಿನಮ್ರತೆಯಿಂದ ಸ್ವಿಕರಿಸುತ, ಅದೆ ಮುಳ್ಳುಗಳನ್ನೆ ದಾರಿಯನ್ನಾಗಿ, ಮಿತ್ರನನ್ನಾಗಿ, ಮಲಗುವ ಹಾಸಿಗೆಯನ್ನಾಗಿ ಮಾಡಿ ಪ್ರೀತಿಸುತ ಸಾಧನೆಯನ್ನ ಸರಳವಾಗಿ ಸಾಧಿಸಿ, ಗೆಲುವನ್ನ ಕೈಯಲ್ಲಿ ಹಿಡಿದು, ಒಣ ಜಂಬವಿಲ್ಲದೇ ನಿವೂ ಇದನ್ನ ಸಾಧಿಸಬಹುದು ಎನ್ನುವ ಭಾವದ ಚೈತನ್ಯವ ತುಂಬುವ ಸರಳ ಸುಂದರ ಮೇರು ಕೃತಿಗಳಲ್ಲಿ ಈ “ಭಾವನೆಗಳಿಲ್ಲದವಳ ಭಾವತೀರಯಾನ” ಕೂಡ ಒಂದು, ಅಂತ ಹೆಮ್ಮೆಯಿಂದ ಹೇಳುತ, ಮನಸಾರೆ ಸವಿಯುತ, ಆಸ್ವಾದಿಸುತ ಭಾವಗಳ ಪ್ರತಿ ಸಾಲಲಿ ಪೊಕ್ಕುತ ಆಳವಾಗಿ ಪರಾಮರ್ಶೀಸಿ ಇದೊಟ್ಟಿಗಿರುವ ನನ್ನ ಕೆಲವು ಅನಿಸಿಕೆ ಅನುಭವಗಳನ್ನ ಮನದಲಿ ಮನೆ ಮಾಡಿದ ಗಜಲ್ ಗಳೊಂದಿಗೆ ಮಾತಾಡುತ, ಹಾಗೂ ನಿಮ್ಮ ಜೊತೆ ನನ್ನ ಭಾವಗಳ ಹಂಚಿಕೊಳ್ಳುವ ಚಿಕ್ಕ ಪ್ರಯತ್ನ ಮಾಡಿದ್ದೆನೆ ಅಷ್ಟೇ..!!
ತತ್ವವು ಎಲ್ಲ ವಿಷಯಗಳ ತಾಯಿಯಂತೆ , ತನ್ನದೇಯಾದ ಸೈದ್ಧಾಂತಿಕ ನಿಲುವುಗಳನ್ನ ಆದರ್ಶಗಳನ್ನ, ನಿಯಮಗಳನ್ನ, ಹೊಂದಿದ್ದು “ತತ್ವವು ತಾಯಿಯಾಗಿ ತನ್ನ ಮಡಿಲಲ್ಲಿ ಮಲಗಿದ ಶಿಕ್ಷಣವನ್ನ ಮಗುವಂತೆ ಲಾಲನೆ ಪಾಲನೆ ಮಾಡಿ ಶಿಕ್ಷಣವನ್ನ ಗಟ್ಟಿಯಾಗಿಸಿ ಮಾನವರ ಎದೆಯಲಿ ಅಕ್ಷರದ ಬೀಜವ ಬಿತ್ತಿ ಮನುಷ್ಯತ್ವದ ಮೌಲ್ಯಗಳನ್ನ ಜೀವನದಲ್ಲಿ ತುಂಬುವು ಕಾರ್ಯವನ್ನ ಶಿಕ್ಷಣ ಮಾಡುವಂತೆ ಪ್ರೇರೇಪಿಸುತ್ತೆ ಈ ತತ್ವವು..!!
ಇನ್ನೂ ನಾವು ಬೆಳೆದ ಪರಿಸರದ ಆಧಾರದ ಮೇಲೆ, ನಾವು, ಕಲಿತ ವಿದ್ಯೆಯ, ಆಳವಾದ ಜ್ಞಾನದ ಆಧಾರದ ಮೇಲೆ ನಮ್ಮನ್ನ ನಾವು ಸಮಾಜದತ್ತ ಗುರುತಿಸಲು ಪ್ರಯತ್ನ ಪಡುತ್ತ ಜೀವನದ ಹೊಟ್ಟೆ ಹೊರೆಯಲು ನಾವು ಕಲಿತ ವಿದ್ಯೆಯನ್ನ, ಜ್ಞಾನವನ್ನ ಉಪಯೋಗಿಸಿ ಬದುಕಿಗೊಂದು ಅಡಿಪಾಯವ ಹಾಕಿ ಎಲ್ಲರಂತೆಯೇ ನಾವು ಎನ್ನುವ ಮಾತನ್ನ ನಿಜವಾಗಿಸುತ್ತೆವೇಯೇ ಹೊರತು ನಮ್ಮ ಜ್ಞಾನವನ್ನ ನಾವು ಪರಿಕ್ಷಿಸಿಕೊಂಡಾಗ ಹಾಗೂ ನಮ್ಮನ್ನ ನಾವೇ ಅಳತೆ ಮಾಡಿಕೊಂಡಾಗ ನಮ್ಮಲಿ ಹುಟ್ಟಿಕೊಳ್ಳುವ ಪ್ರಶ್ನೆಗಳು ಸಾವಿರಾರು..
ಈ ಜ್ಞಾನದ ಮುಂದೆ ನಾನೇಷ್ಟು ಚಿಕ್ಕವನು?? ಹಾಗಾದರೇ ಇಷ್ಟು ದಿನ ನಾನು ಬರದದ್ದು ಯಾರೊಬ್ಬರಿಗಾದರು ಉಪಯೋಗವಾಯಿತಾ?? ಎನ್ನುವ ಪ್ರಶ್ನೆಗಳು ಕಾಡದೇ ಇದ್ದರೇ ನಾವು ಬಾವಿಯ ಕಪ್ಪೆಗಳೇ ನಿಜ..
ಅಂತರಂಗದ ಅಕ್ಷಿ ತೆರೆದು ಓದಿದಾಗ ಮಾತ್ರ
ಆಳವಾದ ಅಧ್ಯಯನ ಸಾಧ್ಯ..
ಮುಳುಗದೇ ತಿಳಿಯದು ಇದರ ಆಳವ..
ಹಾಕುವರಾರಿಲ್ಲ ನಮಗೆ ಸೆಳೆಯುವ ಗಾಳವ..
ನಶೆ ತುಂಬಿದ ಮಧು ಬಟ್ಟಲು ಇಲ್ಲಿ
ಖಾಲಿಯಾಗುವುದೇ ಇಲ್ಲ ನೋಡಿ..
ಸಂಗೀತದಂತೆ ಸವಿ ಪಾನಕದ ಮಜ್ಜನವಿಲ್ಲಿ
ಬರಸೆಳೆದು, ಆತ್ಮಕೆ ನಗುವ ತುಂಬುವ ಮೋಡಿ..
ಇದ ಕುಡಿಯುತ ತನುವ ಮರೆಯದಿರಿ ಜೋಪಾನ..
ಕುಡಿಯದೇ ಇದ್ದರೇ ತಿಳಿಯದು ಅಮೃತಪಾನ..”
ಎಲ್ಲರಿಗೂ ಅವಕಾಶ ಲಭಿಸುವುದಿಲ್ಲ, ಹಾಗು ಸುಖಾ ಸುಮ್ಮನೆ ಕನ್ನಡ ಪುಸ್ತಕ ಪ್ರಾಧಿಕಾರವು ಸಹ ಒಪ್ಪುವುದಿಲ್ಲ, ಇದಕ್ಕೆ ಕಾರಣ ಒಂದೇ ಇಂದಿನ ದಿನಮಾನದಲ್ಲಿ ಹೆಜ್ಜೆಗೊಬ್ಬರು ಬೆಳೆಯುತಿರುವ ಕವಿಗಳು ತಮ್ಮ ಜೀವನದ ಅನುಭಗಳನ್ನ, ಕಷ್ಟ ಕಾರ್ಪಣ್ಯಗಳನ್ನ, ಸುಂದರ ಕ್ಷಣಗಳನ್ನ, ಪ್ರೀತಿಯನ್ನ, ಒಲವಿನ ಭಾವಗಳನ್ನ, ತಮಗಾದ ನಂಬಿಕೆ, ಮೋಸವನ್ನ ಅಕ್ಷರಮಾಲೆಯಲ್ಲಿ ಹೆಣೆಯುತ್ತಾರೆ.. ಅದು ತಮ್ಮ ತಮ್ಮ ಸ್ವಂತ ಜೀವನಕ್ಕೆ ಮಿಸಲಾದುದು.. ಇನ್ನೊಬ್ಬರನ್ನ ಮೆಚ್ಚಿಸಲು ಬರೆದದ್ದಾಗುತ್ತದೆಯೇ ಹೊರತು, ನಿನ್ನ ಬರಹ ಸಮಾಜದ ಒಳಿತಿಗಾ? ಒಬ್ಬ ವ್ಯಕ್ತಿ ಯ ವ್ಯಕ್ತಿತ್ವ ವಿಕಸನಕ್ಕಾ? ಅಥವಾ ನವ ಪೀಳಿಗೆಗೆ ಬದುಕುವ ಕಲೆಯನ್ನು ಸಾರುವ ಸಂದೇಶವಾ? ಅಥವ ನಾಕು ಗೋಡೆಗಳಿಂದಾಚೆಗಾದರೂ ಕಲಿಯುವ ಪಠ್ಯವೇ ಎಂದು ಚರ್ಚಿಸುವಾಗ ನಾವು ಎಷ್ಟು ನೀರಲ್ಲಿ ಇದ್ದಿವಿ ಎನ್ನುವುದು ನಮ್ಮ ಕಣ್ಣಿಗೆ ಕಾಣದೇ ಇರಲಾರದು..!! ನೆನಪಿರಲಿ ಕವಿ ಮನಸುಗಳೇ ನಿಸ್ವಾರ್ಥದ ಬರಹವು ಮಾತ್ರ ಆತ್ಮ ತೃಪ್ತಿಯ ತಂದುಕೊಡಬಲ್ಲದು.

ಈ ಸಂಕಲನದ ಎಲ್ಲ ಗಜಲ್ ಓದಿದ ನಂತರ ಯಾವುದು ಗಜಲ್ ಶ್ರೇಷ್ಠ ಹಾಗು ಯಾವುದು ಕಮ್ಮಿ ಇದೆ ಎಂದು ಹೇಳಲು ನನಗೂ ಆಗುತ್ತಿಲ್ಲ, ಇಲ್ಲಿ ನಾನು ಹೃದಯಲ್ಲಿ ಅಚ್ಚಳಿಯದೇ ಮನೆ ಮಾಡಿಕೊಂಡ ಕೆಲವೇ ಕೆಲವು ಗಜಲ್ ಸಾಲುಗಳನ್ನ (ಒಂದೊಂದು ಶೇರ್) ನಿಮ್ಮ ಮುಂದೆ ಬಿಚ್ಚಿಡಬಲ್ಲೇ.. ಯಾಕಂದರೆ ನನಗೂ ಭಯ ಈ ನಶೆಯಲ್ಲಿ ಯಾರು ಕಳೆದು ಹೋಗಬಾರದೆನ್ನುವ ಕಾಳಜಿ ಅಷ್ಟೇ ನನದು..!! (ಯಾರ ಬೇಡಾ ಅಂದೋರು ನಿಮ್ಮ ಕೈಯಲ್ಲಿ ಈ ಹೊತ್ತಿಗೆ ಬಂದಾಗ ಸಂಪೂರ್ಣವಾಗಿ ಭಾವಪರವಶರಾಗಿ)
ಗಜಲ್ – 01
***
“ಸುದಿನ ಬರುವುದು, ಸೃಷ್ಟಿಸಿ ಪಲ್ಲಕ್ಕಿ ಹೊತ್ತು ತರುವುದೆಲ್ಲ ಸುಳ್ಳು|
ನಿನ್ನ ಬದುಕಿಗೆ ನೀನಷ್ಟೆ ಶಿಲ್ಪಿ, ಕುಗ್ಗಿಸಿ ಹಿಗ್ಗಿಸಬೇಕಲ್ಲ ರಬ್ಬಾ||”
ಅದೊಂದು ಸುಂದರ ಸುಳ್ಳು, ಯಾರು ಕರೆದು ನಿನ್ನ, ಹಾಗೂ ನಿನ್ನ ಜೀವನಕ್ಕಾಗಿ ಮುಂದೆ ಬಂದು ಒಂದೊಳ್ಳೆ ಅವಕಾಶ ಕೊಟ್ಟು ನಿನ್ನ ಜೀವನವನ್ನ ನಿರ್ಮಿಸುತ್ತಾರೆ ಎನ್ನುವುದು.. ನಮ್ಮ ಕಾಲಮಲೇ ನಾವೇ ನಿಲ್ಲಬೇಕು ನಿನ್ನ ಬದುಕಿಗೆ ನೀನೇ ಶಿಲ್ಪಿ, ನಿನ್ನ ಭವಿಷ್ಯವು ನಿನ್ನ ಕೈಯಲ್ಲಿಯೇ ಇದೆ ಎಳು ಎದ್ದೇಳು ಎನ್ನುವ ಸಂದೇಶವನ್ನ ಸಾರಿ ಹೇಳುತ ಈ ಗಜಲ್ ಜೀವನದ ಸಾಧನೆಗಾಗಿ ಎದ್ದು ನಿಲ್ಲು ಅಂತ ಎಚ್ಚುರಿಸುತ್ತ ಸ್ವಾಮಿ ವಿವೇಕಾನಂದರ ನೆನಪನ್ನ ಮತ್ತೆ ಹೊತ್ತು ತರುತ್ತದೆ..
ಗಜಲ್ 02
***
ಕೋಟೆ ಕೊತ್ತಲಗಳ ಕಟ್ಟಿಸಿ ಸಂರಕ್ಷಿಸುವ ಶಕ್ತಳು ನಾನಲ್ಲ |
ಕುಡಿಕೆಯ ಗಂಜಿಯ ಮೃಷ್ಟಾನ್ನದವೆಂದ ಬಡವಳಂತೆಯೇ ನಾನು||
” ಅಂತರಂಗದ ಸ್ವಾಭಿಮಾನವ ಬಡಿದೆಬ್ಬಿಸಿ, ಮನವ ಕಲಕಿ, ಅತ್ಮದಲಿ ಮಲಗಿದ ಗುರುವನ್ನ ನಿಲ್ಲಿಸುವ ಕೆಲಸ ಮಾಡಿದೆ ಈ ಸಾಲುಗಳು (ಶೇರ್)” ಆಸೆ ಪಡುವುದಕ್ಕೂ ಮಿತಿಯಿದೆ, ಅರಮನೆಯ ಕಟ್ಟಿಸದಿದ್ದರೂ ಪರವಾಗಿಲ್ಲ ಗುಡಿಸಲ ಗಂಜಿಯನ್ನೇ ಅಮೃತವೆಂದು ಭಾವಿಸುವುದು ಇದೆಯಲ್ಲ ಸ್ವಾಭಿಮಾನಕ್ಕೆ ಚಿಂಗಾರಿ ಕೊಡುತ್ತದೆ..!!
ಗಜಲ್ 05
***
“ಊರೆಲ್ಲ ಅಲೆದರು ಆ ಪ್ರತ್ಯಕ್ಷ ದೇವರ ಕಾಣದಾದೆ|
ಬಸವಳಿವಳಿದು ನಿನ್ನ ಅಪ್ಪಿ ನಲಿದವಳು ನಾನು||”
” ಜನ್ಮ ಕೊಟ್ಟು, ನಮ್ಮನ್ನ ಭುವಿಗೆ ತಂದು ಮನುಷ್ಯನನ್ನಾಗಿ ಮಾಡಿ ಸುಖವ ಕೊಡುತ ನೋವ ನುಂಗುವ ತಾಯಿಯನ್ನ ದೇವರನ್ನಾಗಿ ಸಾರುವ ಈ ಸಾರುವ ಸಾಲುಗಳು, ನಮ್ಮಲ್ಲಿ ಭಕ್ತಿಭಾವವ ವ್ಯಕ್ತಿಯಲ್ಲಿ ತುಂಬುವ ಕೆಲಸ ಮಾಡಿದೆ ತಾಯಿಯ ಮಮತೆಯ ಸುಧೆಯನ್ನ ಅವಳ ತ್ಯಾಗ ಪ್ರೇಮವನ್ನ ಅರಿಯಲು ಪುಟ್ಟ ದಾರಿಯಂತೆ”
ಗಜಲ್ 09
***
“ಅಪೇಕ್ಷೆ ಇಲ್ಲದೆ ನಿರೀಕ್ಷೆ ಪಡದೆ ಗಾಣದ ಎತ್ತಿನಂತೆ ದುಡಿದವನು |
ಬೇಸಾಯ ಮಾಡುವುದು ನನ್ನ ಕಾರ್ಯವೆಂದು ಬದಕಿದವನು ರೈತ||”
ಕಟ್ಟೆ ಮೇಲೇ ಕುಳಿತು ಒಂದು ಚೂರು ಹರಟೆ ಹೊಡೆದರೇ ಸಾಕು ಎಲ್ಲಿಂದಾದರೂ ದುಡ್ಡು ಬರುತ್ತದಾ ನೋಡೋಣ ಎನ್ನುವ ಕಾಲದಲ್ಲಿ ನಿರೀಕ್ಷೆ ಅಪೇಕ್ಷೆ ಇಲ್ಲದೇ ದುಡಿಯುವುದೇನು ಇದೆಯಲ್ಲ ಇದು ರೈತನಿಂದ ಮಾತ್ರ ಸಾಧ್ಯ ಅದು ತನ್ನ ದೇಶಕ್ಕಾಗಿ, ನಾಡಿಗಾಗಿ ಅನ್ನ ಕೊಡುವ ರೈತನ ನಿಸ್ವಾರ್ಥ ಸೇವೆಯ ಅರಿವನ್ನ ನಮ್ಮಲ್ಲಿ ಮೂಡಿಸುವ ಕೆಲಸ ಮಾಡಿದೆ
ಗಜಲ್ 21
***
ಕಗ್ಗತ್ತಲೆಯ ಬೆತ್ತಲೆಯ ಸತ್ಯಗಳ ನೋಡಿ ನಲುಗುತ್ತಿವೆ ದೀಪಗಳು |
ಬೆತ್ತಲೆಯ ಮೈ ಮಾಟವ ಕಂಡು ನರಳುತ್ತಿವೆ ದೀಪಗಳು ||
“ಸತ್ಯದ ಬಟ್ಟೆಯ ಕದ್ದು ಧರಿಸಿದರೆ ಸುಳ್ಳೆಂದು ಸತ್ಯವಾಗದು, ಇಲ್ಲಿ ದೀಪಗಳು ಸತ್ಯದ ಹೊನಲುಗಳು ಕಳಚಿದ ಬಟ್ಟೆಗಾಗಿ ಅಳುತಿಲ್ಲ ಅವು.. ಸುಳ್ಳನ್ನೇ ಸತ್ಯವೆಂದು ಅರಿತವರನ್ನ ನೋಡಿ ಅಳುತಿವೆ ದೀಪಗಳು.. ಅಸತ್ಯದ ಮಮಕಾರದ ಬೂಟಾಟಿಕೆಯ ಹಿಂದಿರುವ ತಾರತಮ್ಯವ ನೋಡಿ ಅಳುತಿವೆ ದೀಪಗಳು.. ಸತ್ಯ ಸದ್ಗುಣ- ಸತ್ಚಾರಿತ್ರ್ಯವು ಉಳಿವು ಅವಸಾನದ ಅಂಚಿನಲ್ಲಿದೆ ಎಂದು ಹೇಳುವ ಈ ಶೇರ್ , ಇವತ್ತಿನ ಸಮಾಜ ಸತ್ಯದಿಂದ ದೂರವಾಗಿದೆ ಎಂದು ಹೇಳಬಯಸುತ್ತಿದೆ..!!”
ಗಜಲ್ 22
***
“ಒರಟು ಮಾತಿನ ಮೊಗವು ಕೆಟ್ಟದ್ದಲ್ಲ ನಯದ ಮಾತಿನ ರೂಪವು ಒಳಿತಲ್ಲ |
ಮೋಸ ಮಾಡಲು ಬಣ್ಣದ ಮಾತಿನ ಅವಶ್ಯಕತೆ ಬೇಕಂತೆ ರಬ್ಬಾ ||”
“ತಲೆ ಹೊಡೆದು ತಲೆಹಿಡಿದು ಕೂಡಿಟ್ಟಿರುವರು ಮೂರು ತಲೆಮಾರಿಗೆ|
ಬನ್ನನು ಜೀವತೆತ್ತುತ್ತಿರುವ ಕೂಳು ತುತ್ತಿಗೆ ಎಡಬಿಡದಂತೆ ರಬ್ಬಾ ||”
“ರಬ್ಬಾ ಅಂದರೆ ದೇವರು..

“ಅಂತರಂಗದ ರುಚಿಯ ಅರಿತಿದ್ದರೇ ಬಾಹ್ಯದ ಬಣ್ಣಕೆ ಮಾರು ಹೋಗುತ್ತಿರಲಿಲ್ಲ ರಬ್ಬಾ.. ಬಣ್ಣದ ಮಾತಿಗೆ ಬೆಲೆ ಕೊಡದೇ ಇದ್ದರೇ ಒಲವೆಂದು ಒಂಟಿಯಾಗಿರುತ್ತಿರಲಿಲ್ಲ ರಬ್ಬಾ.. ಆತ್ಮದ ಹಕ್ಕಂತೆ ಸ್ವಾಭಿಮಾನವು, ಅಹಂಕಾರದ ತುಣುಕಲ್ಲ ರಬ್ಬಾ.. ನಮ್ಮೊಳಗಿನ ಗುರುವನ್ನ ಬಡಿದೆಬ್ಬಿಸುವ ಪದಗಳಿವು ರಬ್ಬಾ.. ಮನವಿಂದು ರಾಜಕಾರಣದ ನಾಟಕ ನೋಡಿ ಚಪ್ಪಾಳೆ ತಟ್ಟಿ ಇತ್ತ ನಗದೇ ಅತ್ತ ಅಳದೇ ನೆಲಕಚ್ಚಿದೆ ಸಾಗುತಿದೆ ರಬ್ಬಾ”
ಇಂದಿನ ರಾಜಕಾರಣಿಗಳ ನೈಜತೆಯ ಬಿಚ್ಚಿಡುವ ಈ ಸಾಲುಗಳು ಯಾವ ಮಿಡಿಯ ಚಾನಲ್ ಗಳಿಗಿಂತ ಕಮ್ಮಿಯೇನು ಇಲ್ಲ.. ಭರವಸೆಯ ದಲ್ಲಾಳಿ ರೂಪದಲ್ಲಿ ವೋಟಿನ ತಟ್ಟೆ ಹಿಡಿದು ಬಿಕ್ಷೆ ಬೇಡಿ ಐದೇ ಐದು ವರ್ಷಗಳಲ್ಲಿ ಮೂರುನಾಲ್ಕೂ ತಲೆಮಾರಿನ ತನಕ ಈಡಿ ವಂಶವೇ ಕುಳಿತು ಉಣ್ಣುಲು ಬರುವ ಈ ರಾಜಕಾರಣಿಗಳು ದೇಶಕ್ಕೆ ಮಾರಕವೇ ಹೊರತು ಹಿತವಲ್ಲ ಎಂದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ..
ಗಜಲ್ 33
***
“ಲೇಖನಿ ಹಿಡಿಯಲಿಲ್ಲ ಆದ್ರೂ ನಾ ಬರೆಯಬೇಕು |
ಖಡ್ಗದ ಇರಿತ ಹಿಡಿತವಿಲ್ಲ ಆದ್ರೂ ನಾ ಬರೆಯಬೇಕು||”
“ಅನಕ್ಷರಸ್ಥರ ಹೃದಯದಲ್ಲಿ ಅಕ್ಷರ ತುಂಬುವ ಬರಹ.. ಬರೆಯಲು ಲೇಖನಿ ಕೈಯಲ್ಲಿರದಿದ್ದರೂ ಬರೆದು ಸಾಧಿಸಿ ಜೀವನ ಬೆಳಗಿಸಿಕೊಳ್ಳುವ ಈ ಹಠವು ಯಾವ ಸಾಧನೆಗೂ ಕಮ್ಮಿಯಿಲ್ಲ..!!” ನಮ್ಮ ಕಾಲಮೇಲೆ ನಾವು ನಿಲ್ಲಬೇಕು, ಹಾಗೂ ಪ್ರಯತ್ನ ಪಡಲೇಬೇಕು ಎನ್ನುವ ಈ ಸಾಲುಗಳೇನು ಕಣ್ಣಿಗೆ ಕಾಣದ ಶಿಕ್ಷಕನಂತೆಯೇ ಸರಿ?? “”
ಗಜಲ್ 35
***
“ಆತ್ಮ ಸೌಂದರ್ಯದ ಮುಂದೆ ಬಾಹ್ಯ ಸೌಂದರ್ಯ ತೃಣದ ಕಣಕ್ಕೂ ಸಮವಲ್ಲ |
ಹಣದ ವ್ಯಾಮೋಹ ನೆಲೆಸಿರುವ ಕಡೆ ಬಂಧುಗಳು ಪರಿಸಲು ಅಸಾಧ್ಯ ||”
ಈ ಸಾಲುಗಳ ವರ್ಣಿಪೆಯಲೋಸುಗ ನನಗೆ ಅಸಾಧ್ಯ, ಹುಟ್ಟಿನಿಂದ ಚಟ್ಟದ ವರೆಗೂ ಬರುವ ಸೌಂದರ್ಯವೆಂದರೆ ಅದೇ ಆತ್ಮ ಸೌಂದರ್ಯ!!.. ಮಿಕ್ಕವು ಕ್ಷಣಿಕ ಸುಖಗಳಾಗಿ ಬಂದಪ್ಪಿ ಪೋಗುವ ವಸ್ತುಗಳೇ ಹೊರತು ನಮ್ಮ ಜೊತೆಯಲಿ ನಿತ್ಯ ಉಳಿದುಕೊಳ್ಳುವುದಿಲ್ಲ.. ಬಾಹ್ಯಕ್ಕೆ ಭಕ್ತಿ ಇಲ್ಲ ಅಂತರಂಗವು ಆಳವಿಲ್ಲದ ನೆಲೆಯಂತೆ..!!
ಗಜಲ್ 36
***
ಕಾಲಕ್ಕೂ ಪಾಠ ಕಲಿಸುವಲ್ಲಿ ತಾಲೀಮು ಉಂಟು |
ಸಮಯವೇ ವೈರಿಯಾಗಿ ಕೊಲ್ಲುವಾಗ ನಲಿಯುತ್ತ ಬದುಕು||
ಸಮಯದ ಸದುಪಯೋಗ ಪಡೆಯಲು ತಾಲೀಮು ಅವಶ್ಯಕತೆ, ಸಮಯಕ್ಕೆ ಪಾಠ ಕಲಿಸಲು ತಾಲೀಮು ಅಂದರೆ ವ್ಯಾಯಾಮ ಬೇಕು.. ಅರ್ಥವಿಷ್ಟೆ “Practice makes man perfect” ಪ್ರಯತ್ನವಿಲ್ಲದೇ ಫಲವಿಲ್ಲ ಎನ್ನುವ ಸಂದೇಶವ ಅಡಗಿದೆ ಇದರಲ್ಲು.. ಒಂದು ವೇಳೆ ಕೆಟ್ಟ ಸಮಯ ಬಂದರೆ, ಕೊರಗಬೇಡ ನಲಿಯುತ್ತ, ನಗುತ್ತ ಸ್ವೀಕರಿಸು, ಜೀವನ ನಡೆಸು ಎನ್ನುವ ಸಾಲುಗಳು ಯುವ ಜನತೆಯಲ್ಲಿ ಸಾಧನೆಗಾಗಿ ಪ್ರಯತ್ನಿಸಲು ಛಲವ ತುಂಬುವ ಮಿತ್ರನಂತೆ..!!
ಗಜಲ್ 37 (ಕವಿ : ಲಿಂಜರಮಿ ಮಂಡ್ಯ)
***
“ಭರವಸೆಗಳು ಬೇಕು ಬಾಳಲಿ ಜೀಕಲು ಎಂದವಳು ನೀನೇ|
ಅನ್ಯಾಯಕ್ಕೆ ಸಿಡಿದೇಳು ಎಂದ ಧೈರ್ಯಮಯಿ ಅಮ್ಮ ||”
“ಜೋಕಾಲಿಯ ಆನಂದವನ್ನ ಪಡೆಯಲು ಬೆನ್ನಿನ ಹಿಂದೆ ತಳ್ಳುವ ಕೈಗಳು ಇಲ್ಲದಿದ್ದರೇ ಏನಂತೆ?? ಜೋಕಾಲಿಯ ಆನಂದ ಅಥವಾ ಬದುಕಿನ ಆನಂದವನ್ನ ನೀನೇ ಜೀಕುತ ಪಡೆಯಬೇಕು ಈ ಭರವಸೆಯ ಬೆಳಕಲ್ಲಿ.. ಒಂಟಿಯಾದನೆಂದು ಕೊರಗಬೇಡ ಸಾಧನೆ ಯಾವಾಗಲೂ ಒಂಟಿಯಾದಾಗಲೇ ದಕ್ಕುವುದು ಎನ್ನುವ ಸತ್ಯವನ್ನ ಸಾರುವ ಸಹಜತೆಯಿದು..!!
ಗಜಲ್ 42
***
” ಭ್ರೂಣದಲ್ಲೇ ಕೊಲ್ಲುವ ವಿಕೃತ ಮನಸಿಗರ ನಾಡಿದು |
ಸಾಧಿಸಲೇ ಬೇಕು ಎಂಬ ಹಠಕ್ಕೆ ಪ್ರಯತ್ನ ಸಾಕೆ? ||
“ಇಲ್ಲ ಸಾಧ್ಯವಿಲ್ಲ ಬರೀ ಪ್ರಯತ್ನ ಮಾಡಿದರೆ ಸಾಲದು ಸಾಧನೆಯ ಉತ್ತುಂಗದೊಳು ಕೆಂಡದ ಮಳೆಯಾದರು ಸಾಧನೆಯ ಶಿಖರವನ್ನ ಅಂಗೈಯಲ್ಲಿ ಇಟ್ಟುಕೊಳ್ಳುವ ಹುಂಬತನವಿರಬೇಕು ಆಗ ಗೆಲುವಿಗೆ ಮತ್ತೊಂದು ಹೆಸರು ನಿನ್ನಾದಾಗುತ್ತದೆ, ಆಗ ತಾಯಂದಿರ ಮಡಲಲ್ಲಿ ತಾಯಿಯೊಂದು ನಮಗಾಗಿ ಹುಟ್ಟುತಿರುವಳು ಎಂದು ಹಬ್ಬವ ಮಾಡಿ ಕುಣಿಯವಂತಿರಬೇಕು ನಿನ್ನ ಪ್ರಯತ್ನ..” ಆಗ ಹೆಣ್ಣುತನಕ್ಕೆ ಗೌರವ ನಿನೇ ತಂದು ಕೊಟ್ಟಂತೆ.. ಸಾಧನೆಗೆ ನಿನ್ನ ಹೆಸರೇ ಸಮನಾರ್ಥಕ ಪದವಾಗುತ್ತದೆ..!!
ಗಜಲ್ -52
***
“ನಿರಾಭರಣಗಳ ಒಡತಿಯಾಕೆ, ಆಡಂಬರವಿಲ್ಲದಾಕೆ|
ಅರ್ಹತೆ ಇಲ್ಲದಿದ್ದರು ದುಬಾರಿ ಇನಾಮ್ ನೀಡವ್ಳೆ||
” ಪ್ರಕೃತಿಯ ಒಡಲೇ ನಿಸ್ವಾರ್ಥದ ಗಣಿಯಂತೆ ಶಬರಿ |
ಇರಿದು ತುಳಿದು ಬದುಕುವ ನರನನ್ನು ಕ್ಷಮಿಸವ್ಳೆ||”
ಪ್ರಕೃತಿಯ ಪ್ರಜ್ಞೆಯ ಅರಿವಿಗೆ ಮತ್ತೊಂದು ಉದಾಹರಣೆ ಕೊಡಲು ಬಂದಿವೆ ಈ ಸಾಲುಗಳು, ಇದ ಅರಗಸಿಕೊಂಡರೆ ಪ್ರಕೃತಿಯಿಂದ ನಾವು ಕೃತಜ್ಞತಾ ಭಾವವು ಹುಟ್ಟದೇ ಇರದು”
ಉಸಿರನು ನೀಡಿ ಬದುಕಿಸಿ, ನೆರಳನು ನೀಡಿ ತಂಪನು ಸೂಸಿ, ಮನೆಯ ಕಟ್ಟಲು, ನೆಲೆಯ ಕೊಟ್ಟು, ಹೊಟ್ಟೆ ತುಂಬಲು ಹಣ್ಣುಗಳ ನೀಡುತ ತಾಯಿಯಂತೆ ಕಾಪಾಡುವ ಪ್ರಕೃತಿಗೆ, ನಿಸರ್ಗಕ್ಕೆ, ನಾವು ಕೊಡುವ ಕಷ್ಟ ಒಂದೇ ಎರಡೇ? ಕಷ್ಟವ ನೀಡಿದರೂ ನಿಸರ್ಗ ದೇವತೆ ನಮ್ಮನ್ನ ಕ್ಷಮಿಸಿ, ಕೈ ಹಿಡಿದು ನಡೆಸಿ, ಕಾಪಿಟ್ಟು ಬದುಕಿಸುತ್ತಾಳೆ.. ಅದಕ್ಕೆ ನಾವು ಪ್ರಕೃತಿಗೆ ಕೃತಜ್ಞರಾಗಿ ಋಣಿಯಾಗಿರಬೇಕು ನಿಸರ್ಗ ಪ್ರೇಮವ ತುಂಬುವ ಪದಗಳಿವು..!!”
ಗಜಲ್ -54
***
“ಯಾರಿಗೂ ಉತ್ತರಿಸುವ ಉಸಾಬರಿಯು ಸಂಗಡ ನಿನಗೆ ಬೇಡ |
ನಿನ್ನ ಬದುಕಿನ ಪುಟದಲ್ಲಿ ನಿನ್ನ ಅಂತರಾತ್ಮ ಒಪ್ಪಿದರೆ ನಲಿವುಂಟು ||”
“ಎಲುಬಿಲ್ಲದ ನಾಲಿಗೆಯ ಮಾತಿನ ನಂತರ ನಂಬಲು ಅರ್ಹವಿರುವ ಸಾಕ್ಷಿಯೇ ಮನಸ್ಸಾಕ್ಷಿ ಹಾಗು ಅಂತರಾತ್ಮ.. ನಿನ್ನ ನಿನು ಒಳ್ಳೆಯವನು, ತುಂಬಾ ಪರಿಶುದ್ಧನು, ಕಲ್ಮಶವಿಲ್ಲದ ವ್ಯಕ್ತಿ ಎಂದು ವಾದ-ವಿವಾದ ಮಾಡಿ ಗೆಲ್ಲುವ ಮಂಡು ಉಸಾಬರಿಯ ಜೊತೆ ನೀನಿರಬೇಡ, ನಿನ್ನನ್ನ ನೀನು ನಂಬಿದರೇ ಸಾಕು.. ನಿನಗಾಗಿ ನಿನು ಬದುಕು, ನಿನ್ನ ಅಂತರಾತ್ಮದಲಿ ನಿನು ನೈಜವಾಗಿರು, ಸತ್ಯವಾಗಿರು ಇದೊಂದೆ ನೀನು ನಿನಗಾಗಿ ಮಾಡುವ ಅಂತರಂಗ ಶುದ್ಧಿಯ ಕೆಲಸ ಅದೇ ನಿನಗೆ ಆನಂದವನ್ನ ತಂದು ಕೊಡುತ್ತದೆ ಎನ್ನುವ ಈ ಸಾಲುಗಳಿಗಾಗಿ ಮನವು ಪುಳಕಿತವಾಗಿ ಆನಂದಿಸದೇ ಇರದು..!!
ಗಜಲ್ – 58
***
ಬದುಕಿನಲ್ಲಿ ಬೇಕುಗಳ ಕಾವು ಬಹಳಷ್ಟಿದೆ ಮರೆಯದಿರು ಸಾಕಿ |
ನಿತ್ಯ ಹೋರಾಟದಲ್ಲಿ ನಲುಗುವ ಯಾತನೆಯಿದೆ ಕೊರಗದಿರು ಸಾಕಿ||
ಜೀವನದ ಜಂಜಾಟದಿ ಬೇಡಿಕೆಗಳ ಪಟ್ಟಿಯೇ ಇದೆ, ಅದರಂತೆ ನಡೆಸುವ ಬದುಕಿಗು ನಿತ್ಯ ಹೋರಾಡಬೇಕಿದೆ.. ಅವಶ್ಯಕತೆಯೊಳಗೆ ಸಿಲುಕಿ ನಲುಗುವ ಯಾತನೆ ಇದೆ ಕೊರಗಬೇಡ ಎಂದು ಎಚ್ಚಿರಿಸುತ್ತಿದೆ..!!
ಗಜಲ್ – 62
***
ಹಠಕ್ಕೆ ಬರೆದರೆ ಜಿದ್ದಿಗೆ ನಿಂತು ಗೀಚಿದರೆ ಕಾವ್ಯ ಎನಿಸುವುದೇ..?? |
ಮೆಚ್ಚಿಸಲಾರೆ, ಜೊತೆಯಿರುವ ಆಸೆ ಅದ್ಯಾಕೋ ಮುನಿಸು ಈ ಪದಗಳಿಗೆ ||
” ಬರಹದೊಡಲ ದಾಟಿ ಬಂದ ಪದಗಳೇ ಇರಬೇಕು ಇವು, ಬರೆಯುತ್ತೆನೆ ನಾನು ಎಂದು ಬರೆಯುವುದಲ್ಲ ಈ ಬರಹವ.. ಅವರಿವರಿಗಿಂತ ನಾನೇ ಮೇಲೆಂದು ಜಿದ್ದಿಗೆ ಬಿದ್ದು ನಿಂತು ಮನ ಬಂದಂತೆ ಗೀಚುವುದು ಅಲ್ಲ, ಗೀಚಿದರೂ ಅದು ಕಾವ್ಯವಾಗುವುದಿಲ್ಲ.. ಸ್ಪರ್ಧೆಗಿಳಿದ ಹಠದ ಒಂದು ತುಣಕಾಗುತ್ತದೆ ಅಷ್ಟೇ.. ಬರಹವು ಒಂದು ಆತ್ಮ ತೃಪ್ತಿಗೆ ಹೊರತು ಯಾರನು ಮೆಚ್ಚಿಸಲೋಸುಗವಲ್ಲ.. ಕನ್ನಡಮ್ಮನ ಶಬ್ದ ಭಂಡಾರವ ಕದ್ದು ಸಂಗ್ರಹಿಸಿದ ನಿಮ್ಮ ಮೇಲೇ ಪದಗಳೇ ಮುನಿಸಿಕೊಂಡಿರಬೇಕು ಅಮೃತ ಅವರೇ..!! ಸ್ವಾರ್ಥವಿಲ್ಲದೇ ಬರಹ ಬರೆಯುವ ಕಲೆಯನ್ನ ನವ ಯುಗದ ಕವಿಗಳಿಗೆ ಸಂದೇಶ ಸಾರುತ್ತಿದೆ ಶೆರ್ ಗಳು..
ಗಜಲ್ 64
***
ಬಿಡಬೇಡ, ಕುಗ್ಗಬೇಡ ನಿನ್ನದೇ ಬದುಕಿನ ಪಾಠವ ಮತ್ತೋರ್ವರು ಕಲಿಸುವರು|
ನಡೆದು ಬಂದ ಪಥ, ಉಸಿರು ನಿಲ್ಲೋವರೆಗೂ ಮರೆಯಲಾರದು ಮನವೇ||
ಸ್ವಾಭಿಮಾನವ ಕಳೆದುಕೊಂಡವರು ಮತ್ತೊಬ್ಬರಿಂದ ಪಾಠ ಕಲಿಯುವುದು ಸಹಜ, ಅದಕ್ಕೆ ಇನ್ನೊಬ್ಬರು ಬಂದು ನಮ್ಮ ಜೀವನದ ಪಾಠವ ಕಲಿಸುವಂತೆ ಮಾಡಿಕೊಳ್ಬೇಡಿ ಎನ್ನುತಿದೆ ಈ ಸಾಲು.. ಹಾಗು ಸಾಗಿ ಬಂದ ಜೀವನದ ಏರುಪೆರುಗಳನ್ನ ಮರೆಯಲು ಸಾಧ್ಯವಿಲ್ಲ ಮರೆಯಲು ಬೇಡಿ ಎನ್ನುತಿದೆ..
ಒಟ್ಟಾರೆಯಾಗಿ ಈ ಗಜಲ್ ಸಂಕಲನ ಯುವ ಜನತಗೆ ತಮ್ಮ ತಮ್ಮ ಏಳಿಗೆಗಾಗಿ ಎಚ್ಚೆತ್ತುಕೊಳ್ಳಲು ಸಹಾಯ ಮಾಡುತಿದೆ..
(ಅಂಬೆಗಾಲಿಡುತ ಬಿಳ್ಳುತ ಎಳುತ ಸಾಗಿ ಬರುವ ಪುಟ್ಟ ಕಂದಮ್ಮನಂತೆ ಈ ಚೊಚ್ಚಲ ಕೃತಿಯು ಅಲ್ಲಲಿ ಒಂದಡೆರಕ್ಷರಗಳ ದೋಷ ಉಂಟು)

(ಭಾವ ತೀರ ಯಾನ ಕವನ ಸಂಕಲನ ಕವಿಯತ್ರಿ ಅಮೃತ ಎಂ ಡಿ)
ನಮಗೆ ಸರ್ಕಾರ ಪ್ರೀ ಆಗಿ ಶಾಲೆ ಕಲಿಸುವುದು, ನಮ್ಮ ನಾಡಿಗಾಗಿ, ದೇಶಕ್ಕಾಗಿ, ಉತ್ತಮ ಗುಣಮಟ್ಟದ ಸಮಾಜಕ್ಕಾಗಿಯೇ ಹೊರತು ನಮ್ಮ ಹೊಟ್ಟೆ ಹೊರೆಯಲು ಅಲ್ಲ ಎಂದು ನಮಗೆ ನೆನಪಿದ್ದರೆ ಸಾಕು, ಹಣಕ್ಕಾಗಿ ಶಾಲೆಯ ಕಲೆಯಬೇಕೆಂದೆನಿಲ್ಲ, ಅದಕ್ಕೆಲ್ಲ ದಾರಿಗಳು ಸಾವಿರ ಉಂಟು.. ಇನ್ನೂ ಶಾಲೆಯ ಕಲೆತು ನೌಕರಿ ಪಡೆದರೇ ಸಾಕು ಜೀವನ ನಡೆದಿತು ಎಂದು ದುಡ್ಡು ಸುರಿಯುವ ಪಾಲಕರು ಒಂದು ಕಡೆಯಾದರೆ, ಇದರ ನಡುವೆ ಮಾನವೀಯ ಮೌಲ್ಯಗಳು, ನೈತಿಕತೆ, ನೈಜತೆಯು ಲೆಕ್ಕಕ್ಕೇ ಇಲ್ಲವಾಗಿದೆ..
ಅದಕ್ಕೆ ಪರಿಹಾರವಾಗಿ ಮನೆಯಿಂದಲೇ ಸಿಗಬೇಕಾದ ನೈತಿಕ ಶಿಕ್ಷಣವನ್ನ ಸರ್ಕಾರವು ಶಾಲೆಯ ಪಠ್ಯದಲ್ಲಿ ಇದೇ ಕಾರಣಕ್ಕಾಗಿಯೆ ಜೋಡಿಸಿರಬೇಕು ಅನಿಸತ್ತೆ..!!
ಇನ್ನು ಈ ಸಂಕಲನವು ಬರೀ ಜೀವನದ ಮಾರ್ಗದಲ್ಲಿ ಬರುವ ಕಲ್ಲು ಮುಳ್ಳುಗಳನ್ನ ಸರಿಸುವ ಕೆಲಸದ ಜೊತೆ ಜೊತೆಗೆ, ಅಲ್ಲಲ್ಲಿ ಪ್ರೇಮ, ನಿಸ್ವಾರ್ಥ, ಪ್ರೀತಿ ಎಂದರೇನು ಅದನ್ನ ಹೇಗೆ ಕಾಪಿಡಬೇಕು, ತ್ಯಾಗ, ಆಕ್ರಂದನ, ಪಿಸುಮಾತು, ಗೆಳೆತನ, ಸಂಭಂದ, ತಾಯಿಯ ಮಮತೆ, ಸಮಾಜದ ಬಿನ್ನಾಣ, ಬದಕಿನ ಡೊಂಕುಗಳು ತಿಡುವ ಕೆಲಸ, ಹೀಗೆ ಹತ್ತಾರು ವಿಷಯಗಳ ಸಮಗ್ರವಾಗಿ ಜೀವನ ನಡೆಸುವ ಕಲೆಯನ್ನ ನಮ್ಮಲ್ಲಿ ತುಂಬುವ ಕೆಲಸ ಮಾಡಿದೆ..!!
ಯಾವ ಸ್ವಂತಿಕೆಯಿಲ್ಲದೇ ನಿಸ್ವಾರ್ಥದಿಂದ ತಮ್ಮ ಸ್ವಂತ ಜೀವನದ ಆಗು ಹೋಗುಗಳ ಬದಿಗಿಟ್ಟು, ಒಳಿತನ್ನ ಬಯಸುವ, ಗುರಿ ಸಾಧನೆಗಾಗಿ ಸಮಯವನ್ನ ಮೀಸಲಿಡುವ, ಸಾಧನೆಗಾಗಿ ಶ್ರಮಿಸುವ ಕಲೆಯನ್ನ ತುಂಬುವ ಈ ಗಜಲ್ ಸಂಕಲನ ಇದೇ ಕಾರಣಕ್ಕಾಗಿಯೇ ಸರ್ಕಾರದ ಮೆಚ್ಚುಗೆ ಪಡೆದಿರಬೇಕು ಎಂದು ನಿಸ್ಸಂಶಯವಾಗಿ ಹೇಳಬಲ್ಲೆ..!!
ಮನದ ಆನಂದಕ್ಕಾಗಿ, ಉಲ್ಲಾಸಕ್ಕಾಗಿ, ಬೆಸರವಾದಾಗ ಒಂದು ಮುಗಳು ನಗುವಿಗಾಗಿ, ಇದನ್ನ ಓದಿ.. ಚನ್ನಾಗಿದೆ, ಸೂಪರ್, ಸೂಪರಬ್, ಅವೇಸಂ, ತುಂಬಾ ಚೆಂದವಿದೆ..
ಅದರಲ್ಲೂ ಒಂದು ಮಾತು “ಎಲ್ಲ ಪುಸ್ತಕಗಳನ್ನ ಓದಿ ಮುಗಿಸಿದ ನಂತರ ಇದನ್ನು ಕೂಡ ಒಂದು ಸಾರಿ ಓದಿದ್ದರೇ ಚನ್ನಾಗಿರುತ್ತಿತ್ತೇನೋ ಎಂಬ ಭಾವವು ನನ್ನ ಅನಿಸಿಕೆಗಳ ಆಲಿಸಿದ ಮೇಲೆ ನಿಮ್ಮಲಿ ಮೂಡದೇ ಇರದು. ಯಾಕೆಂದರೆ 99 ರುಪಾಯಿಗಳಿಗೆ ಒಂದೇ ಒಂದು ರೂಪಾಯಿಯನ್ನ ಸೇರಿಸಿದಾಗ ಹೇಗೆ 100 ರೂಪಾಯಿಯಾಗಿದೆ ಎಂದೆನಿಸಿವುದೋ ಹಾಗೆ ಈ ಕೃತಿಯು ನಮ್ಮ ಮನವ ತುಂಬಲು ಆ ಒಂದು ರೂಪಾಯಿಯಂತೆ ಎಂದು ಹೇಳಬಲ್ಲೆ..
ನನ್ನ ಮಾತಲ್ಲೇನಿದೆ..? ಸಮಾಜಕ್ಕೆ ಉತ್ತಮ ಸಂದೇಶವನ್ನ ಸಾರುವ ಸಲುವಾಗಿ, ಹಾಗು ಜನರು ಇದನ್ನ ಓದಿ ಗುಣಮಟ್ಟದ ಬದುಕ ಕಟ್ಟಿಕೊಳ್ಳಲಿ ಎನ್ನುವ ಸಲುವಾಗಿಯೇ ಪಠ್ಯರಹಿತವಾದ, ಹಾಗು ನಾಕೂ ಗೋಡೆಗಳಿಂದಾಚೆಗೂ ಕಲಿಕೆಯಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರವೇ ನಮ್ಮ ಕೈಯಲ್ಲಿ ಇದನ್ನಿರಿಸಲು ಅಮೃತ ಎಂ ಡಿ ಅವರ ಜೊತೆಯೇ ಕೈ ಜೋಡಿಸಿ ಸಹಾಯ ಹಸ್ತ ಚಾಚಿದೆ..
ಇನ್ನೂ ನಾವು ಅವರಿಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಬೇಕಷ್ಟೆ!!..
ಮುಂದಿನ ದಿನಮಾನಗಳಲ್ಲಿ ಗಜಲ್ ಸಾಹಿತ್ಯವು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರುತ ನಮ್ಮ ಭವಿಷ್ಯದ ಪೀಳಿಗೆಯ ಎಳಿಗೆಗಾಗಿ ಮೂಡಿ ಬರಬೇಕು ಎಂದು ಸರ್ಕಾರಕ್ಕೆ ಮನವಿ ಕೂಡ ಮಾಡಿಕೊಳ್ಳುತ್ತೇನೆ..
ಅಲ್ಲದೇ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಅಮೃತ ಅವರಿಂದ ಹೊರ ಬರಬೇಕು, ನಮ್ಮಂತ ಓದುಗರ ಹೃದಯ ತಟ್ಟುವ ಕೆಲಸ ಮತ್ತೆ ಮತ್ತೆ ನಡೆಯಬೇಕು ಎಂದು ಅಮೃತ ಎಂ ಡಿ ಅವರಲ್ಲಿ ಕೇಳಿಕೊಳ್ಳುತ್ತೆನೆ.
ಇದೊಂದು ಸಂಭ್ರಮ.. ಇದೊಂದು ಆನಂದ.. ಇದೊಂದು ಸಂತೋಷ.. ಇದೊಂದು ಚೆಂದನೆಯ ಭಾವ, ಕಳೆದುಕೊಳ್ಳಬೇಡಿ ಪಡೆದುಕೊಳ್ಳಿ..!! ಅಭಿನಂದನೆಗಳು ರೀ ಅಮೃತ ಅವರೇ..!!
Dedicating a #testimonial to ಭಾವನೆಗಳಿಲ್ಲದವಳ ಭಾವತೀರಯಾನ.
ಜೈ ಹಿಂದ್..!!
- ಹನು ಪಾಟೀಲ್ (ಭಾರತೀಯ ಸೇನೆ)
