ಭಾವನೆಗಳು ಬೆಸಗೊಂಡರೆ

ಅಜ್ಜಿಯ ಒಡಲಿನಲ್ಲಿ ಕೆಂಡದಂತಹ ನೋವಿತ್ತು. ಆ ನೋವು ಅವರ ನಗುಮೊಗದಲ್ಲಿ ಕಾಣಿಸಲಿಲ್ಲ. ಆದರೆ ಅದು ಅವರ ಒಡಲಿನಲ್ಲಿದ್ದ ನೋವನ್ನು ಹಂಚಿಕೊಂಡಾಗ ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಹೋಯಿತು. ಮನಸ್ಸಿನಲ್ಲಿ ಆಗುವ ಅಲ್ಲೋಲ ಕಲ್ಲೋಲಗಳನ್ನು ಹೊರಹಾಕುವ ಮಾರ್ಗವೆಂದರೆ ಭಾವನೆಗಳು. ಮಾಲಾ.ಮ. ಅಕ್ಕಿಶೆಟ್ಟಿ ಅವರ ಲೇಖನವನ್ನು ತಪ್ಪದೆ ಓದಿ…

ತತ್ತ ಕ್ಷಣವೇ ಸ್ಪುಟಿಸುವ ಕೆಲವೊಂದು ಭಾವನೆಗಳು ಮರೆಯಲಾಗದ ನೆನಪನ್ನು ಬಿಚ್ಚಿಡುತ್ತವೆ. ಘಟನೆ ನಡೆದ ಆ ಸಂದರ್ಭ, ವ್ಯಕ್ತಿ, ಸಮಯ ಎಲ್ಲವೂ ಹಾಗೆಯೇ ಉಳಿದು ಬಿಡುತ್ತದೆ ಸ್ಮ್ರತಿ ಪಟ್ಟಣದಲ್ಲಿ ಅಚ್ಚಳಿಯದೇ.

ಆರು ವರ್ಷದ ಆ ಚಿಕ್ಕ ಮಗು ದಿನಾಲು ಶಾಲೆಯಿಂದ ಬಂದ ತಕ್ಷಣ ಸ್ವಲ್ಪ ಏನಾದರೂ ತಿಂದು ಮನೆಯ ಹತ್ತಿರದಲ್ಲಿರುವ ಗಾರ್ಡನಿಗೆ ತನ್ನ ಅಜ್ಜಿ ಜೊತೆಯಲ್ಲಿ ಹೋಗುವ ಅಭ್ಯಾಸ. ಅಜ್ಜಿಯೂ ದಿನದ ಬೇಸರ ಕಳೆಯಲು, ಮೊಮ್ಮಗಳನ್ನು ಆಡಿಸಲು ಮತ್ತು ಗಾರ್ಡನ್ ನಲ್ಲಿ ಸಿಗುವ ಪರಿಚಿತ ಮತ್ತು ಅಪರಿಚಿತ ಸ್ನೇಹಿತರನ್ನು ಭೇಟಿಯಾಗಲು ಹೋಗುವ ರೂಢಿ.

ಹೀಗೆ ಒಂದಿನ ಹೋದಾಗ ಅಲ್ಲಿ ಒಬ್ಬ ಸಮವಯಸ್ಕ ಅಜ್ಜಿಯ ಭೇಟಿ ಇವರಿಗೆ ಆಗಿದೆ. ಆ ವೃದ್ಧೆಯು ಬೇರೆ ಊರಿನವರಿದ್ದು, ಇಲ್ಲಿ ಬರಿ 15 ದಿನಗಳ ಮಟ್ಟಿಗೆ ಯಾರದೋ ಸಂಬಂಧಿಕರ ಮನೆಗೆ ಬಂದವರು. ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ, ನಿವೃತ್ತಿ ಹೊಂದಿದವರು. ಜೀವನದ ನೋವು ನಲಿವುಗಳನ್ನು ಅತಿ ಸಮೀಪದಿಂದ ನೋಡಿ, ಅಗದೀ ಪಕ್ವವಾದ ಜೀವ ಅದು. ಏನೋ ಮರೆಯಲಿಕ್ಕೋ, ವಾತಾವರಣದ ಬದಲಾವಣೆಗೋ ಬಂದ ಅವರು ಸ್ವಲ್ಪ ವಿಭಿನ್ನ. ಇಬ್ಬರು ಅಜ್ಜಿಯರ ಸ್ನೇಹವನ್ನು ನೋಡಿ ಆ ಚಿಕ್ಕ ಮಗು ಕೂಡ ಇವರ ಗುಂಪಿನಲ್ಲಿ ಭಾಗಿಯಾಗಿದೆ. ತನ್ನ ದಿನದ ಆಟವನ್ನು ಮುಗಿಸಿ ತನ್ನ ಅಜ್ಜಿಯನ್ನು ಮನೆಗೆ ಕರೆದೊಯ್ಯಲು ಬಂದಾಗ ಹೊಸ ಅಜ್ಜಿಯ ಪರಿಚಯವಾಗಿ ಹೆಸರು, ತರಗತಿ ಇತ್ಯಾದಿಗಳ ವಿಷಯ ವಿನಿಮಯವಾಗಿ ಮಗು ತುಂಬಾ ಚೂಟಿ ಎಂಬ ಹೆಸರನ್ನು ಪಡೆದಿತ್ತು. ಹೀಗೆ ಆ ಹೊಸ ಅಜ್ಜಿಯ ಭೇಟಿ ಮರು ದಿನವೂ ಆಗಿತ್ತು. ಹಾಗೆಯೇ ಮಾತು ಮಾತಿನಲ್ಲಿ ಮಗು ತಾನು ಕಲಿತ ಐದು ವಚನಗಳಲ್ಲಿ ಒಂದು ವಚನವನ್ನು ಗುನಗುನಿಸುತ್ತಿತ್ತು.ಅದನ್ನು ಕೇಳಿದ ಅವರು “ಏನದು ಮತ್ತೊಮ್ಮೆ ಹೇಳು” ಅಂದಾಗ, “ಬರೀ ಒಂದು ವಚನ ಅಲ್ಲ ಅಜ್ಜಿ ನಾನು ಐದು ವಚನ ಬಾಯಿಪಾಠ ಮಾಡಿದ್ದೇನೆ ಮತ್ತು ಮೊನ್ನೆ ವಚನ ಸ್ಪರ್ಧೆಯಲ್ಲಿ ಹೇಳಿ ಸರ್ಟಿಫಿಕೇಟ್ ಗೆದ್ದಿದ್ದೇನೆ” ಎಂದಳು. ಅದಕ್ಕೆ ಅಜ್ಜಿ ” ಹಾಗಾದರೆ ಮತ್ತೊಮ್ಮೆ ಐದೂ ವಚನ ಹೇಳು” ಎಂದು ಕೇಳಿಕೊಂಡಿದ್ದಾರೆ. ತಕ್ಷಣ ಮಗು ತಾನು ಕಲಿತ ಐದೂ ವಚನಗಳನ್ನು ಹೇಳಿದೆ. ವೃತ್ತಿಯಲ್ಲಿ ಶಿಕ್ಷಕರಾಗಿದ ಅವರು ತುಂಬಾನೇ ಮೆಚ್ಚಿಕೊಂಡು ಸಣ್ಣ ವಯಸ್ಸಿಗೆ ಇಷ್ಟೊಂದು ಚೆನ್ನಾಗಿ ವಚನ ಹೇಳುತ್ತಾಳೆ ಎಂದು ಪ್ರಶಂಶಿಸಿ, ಮುದ್ದು ಮಾಡಿ, ನಾಳೆ ಆಕೆಗೊಂದು ಗಿಫ್ಟ್ ಕೊಡುತ್ತೇನೆ ಎಂದು ಹೇಳಿದಾಗ ಮಗುವಿಗೆ ಅತಿ ಆನಂದ. ಮನೆಗೆ ವಾಪಸ್ ಬಂದಾಗ ಮನೆಯವರೆಲ್ಲರಿಗೂ ತಾನು ಹೇಗೆ ವಚನ ಹೇಳಿದಳು, ಹೇಗೆ ಅಜ್ಜಿ ಪ್ರಶಂಶಿಸಿದರು ಮತ್ತು ಗಿಫ್ಟ್ ಕೊಡುವುದರ ಬಗ್ಗೆ ಎಲ್ಲ ವಿವರ ಹೇಳಿದಳು.

ಫೋಟೋ ಕೃಪೆ : google

ಮಗುವಿನ ಅಜ್ಜಿ ತಮ್ಮ ಮೊಮ್ಮಗಳನ್ನು ಹಾಗೆಯೇ ಹುರಿದುಂಬಿಸಲು ಅವರು ಗಿಫ್ಟ್ ಕೊಡುತ್ತೇನೆ ಎಂದು ಹೇಳಿರಬೇಕೆನಿಸಿತು. ಅದರಲ್ಲೂ ಮಕ್ಕಳೊಂದಿಗೆ ತಮ್ಮ ಬದುಕಿನ ಸಾಕಷ್ಟು ಸಮಯ ಕಳೆದವರು ಹಾಗೆ ಪ್ರೋತ್ಸಾಹಿಸಲು ಹೇಳಿರಬೇಕೆಂದು ತಿಳಿದು ಅವರೇನೂ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಮಗು ಮಾತ್ರ ಏನೋ ಗಿಫ್ಟ್ ಸಿಗುವುದೆಂದು ನಾಳೆಯನ್ನು ಕಾತುರದಿಂದ ಕಾಯಲು ಪ್ರಾರಂಭಿಸಿತು.

ಮಾರನೇಯ ದಿನ ಎಂದಿನಂತೆ ಗಾರ್ಡನ್ ಗೆ ಹೋದಾಗ ಹೊಸ ಅಜ್ಜಿ ಬಂದಿರಲಿಲ್ಲ. ಮಗುವಿಗೆ ತುಂಬಾ ನಿರಾಸೆ. ಆಟದ ಮಧ್ಯದಲ್ಲಿ ಮೇಲಿಂದ ಮೇಲೆ ಆ ಅಜ್ಜಿ ಬಂದಾರೆಂದು ಪರೀಕ್ಷಿಸುತ್ತಿದ್ದಳು. ಕಾದು ಕಾದು ಬೇಸತ್ತು ಮನೆಗೆ ವಾಪಸ್ ಬಂದಾಗಿತ್ತು.”ಅಜ್ಜಿ, ಆ ಅಜ್ಜಿ ಏಕೆ ಬಂದಿಲ್ಲ ಇವತ್ತು” ಎಂದು ತನ್ನಜ್ಜಿಯನ್ನು ಕೇಳಿದಾಗ, ” ಪುಟ್ಟಾ, ಎನಾದರು ಕೆಲಸವಿರಬೇಕು. ಅದಕ್ಕೆ ಬಂದಿರಲಿಕ್ಕಿಲ್ಲ” ಎಂದು ಹೇಳಿ ಸಮಾಧಾನ ಮಾಡಿದ್ದರು.

ಇದಾದ ನಂತರ ಮಾರನೆಯ ದಿನ ಗಾರ್ಡನ್ನಿನಲ್ಲಿ ಇವರಿಗಿಂತ ಮುಂಚೆ ಆ ಅಜ್ಜಿ ಅಲ್ಲಿದ್ದರು. ಅವರನ್ನು ನೋಡಿದವಳೇ ಹೋಗಿ “ಅಜ್ಜಿ, ನಿನ್ನೆ ಯಾಕೆ ಬಂದಿರಲಿಲ್ಲ” ನಾನು ಎಷ್ಟೊಂದು ಕಾಯ್ದೆ” ಎಂದೆಲ್ಲ ಹೇಳಿದಾಗ, “ಇಲ್ಲ ಅಮ್ಮಣ್ಣಿ, ನಿನ್ನೆ ಸ್ವಲ್ಪ ಮೈ ಹುಷಾರಿರಲಿಲ್ಲ ಗಾರ್ಡನ್ ಬರಲು ಆಗಲಿಲ್ಲ” ಎಂದಾಗ, “ಹೌದಾ?” “ಈಗ ಆರಾಮ್ ಇದ್ದೀಯಾ ಅಜ್ಜಿ” ಎಂದು ಕೇಳಿ, ಯಾರೋ ತನ್ನ ಗೆಳತಿ ಕರೆಯುತ್ತಿದ್ದಾಳೆಂದು ಓಡಿ ಆಟದಲ್ಲಿ ಮಗ್ನಳಾದಳು. ಅಜ್ಜಿ ಸ್ವಲ್ಪ ಸೋತಂತೆ ಕಂಡು, ಸುಸ್ತು ಅವರನ್ನು ಆವರಿಸಿತ್ತು.

ಫೋಟೋ ಕೃಪೆ : google

ನಿನ್ನೆ ದಿನ ಅವರು ಜ್ವರದಿಂದ ನಲುಗಿದ್ದರು. ಕುಳಿತು ಏಳುಕೂ ಆಗದೇ ಒದ್ದಾಡಿದ್ದರು. ಅದಕ್ಕಾಗಿಯೇ ಅವರು ಬಂದಿರಲಿಲ್ಲ. ಹೀಗಾಗಿ ಮಗುವಿಗೆ ಗಿಫ್ಟ್ ತರಲು ಆಗಿರಲಿಲ್ಲ.

ಅವತ್ತು ಏನ್ ಅನಿಸಿತೊ ಏನೋ ಅವರು ಒಂದೊಂದಾಗಿ ತಮ್ಮೆಲ್ಲ ದುಃಖಗಳನ್ನು ಬಿಚ್ಚಿಟ್ಟಿದ್ದರು. ಗಂಡನನ್ನು ಯೌವನದಲ್ಲಿ ಕಳೆದುಕೊಂಡರೆ,ಕೆಲವು ವರ್ಷದ ಹಿಂದೆ 35 ವರ್ಷದ ಮಗಳು ಕ್ಯಾನ್ಸರ್ ನಿಂದ ಹಾಗೂ ಒಂದು ವರ್ಷದ ಹಿಂದೆ 30 ವರ್ಷದ ಮಗನು ಜಾಂಡೀಸ್ ನಿಂದ ಆಕಸ್ಮಿಕವಾಗಿ ತೀರಿಕೊಂಡಿದ್ದ. ಇದನ್ನೆಲ್ಲಾ ಹೇಳಿದ ಅಜ್ಜಿ ಕಣ್ಣೀರಾದರೆ, ಕೇಳುತ್ತಿರುವ ಜೀವದ ಕಣ್ಣಲ್ಲೂ ಕಣ್ಣೀರು. ಕೆಲವು ಜನ ಮುಖದಲ್ಲಿ ಮಂದಹಾಸವನ್ನು ಹೊತ್ತಿದ್ದರೂ, ಹೊಟ್ಟೆಯಲ್ಲಿ ಉರಿಯುವ ಕೆಂಡವನ್ನೇ ಹೊತ್ತು ಅಡ್ಡಾಡುತ್ತಿದ್ದಾರೆನಿಸಿತು.

ಹೊತ್ತಾಯಿತೆಂದು ಮಗು ಅಜ್ಜಿಯ ಹತ್ತಿರ ಬಂದಾಗ, ಈ ಹೊಸ ಅಜ್ಜಿ ಮಾತಾಡಿಸಿ, ಮತ್ತೆ ಮುದ್ದು ಮಾಡಿ, ನೂರು ರೂಪಾಯಿಗಳನ್ನು ಆಕೆಯ ಕೈಯಲ್ಲಿಟ್ಟರು. ಬೇಡವೆಂದು ಮಗುವಿನ ಅಜ್ಜಿ ಹೇಳಿದರೂ ಕೇಳಲಿಲ್ಲ. “ನಾನು ಮಗುವಿಗೆ ಗಿಫ್ಟ್ ತರುತ್ತೇನೆಂದು ಹೇಳಿದ್ದೆ. ಅದನ್ನು ತರಲು ಆಗಲಿಲ್ಲ. ಅವಳಿಗೆ ಏನು ಬೇಕು ಅದನ್ನ ತೆಗೆದುಕೊಳ್ಳಲಿ” ಎಂದರು. ಮಗು ಖುಷಿಯಿಂದ ತೆಗೆದುಕೊಂಡಿತು. ಹತ್ತು ರೂಪಾಯಿ ಚಾಕ್ಲೆಟಿಗೆ ಆಸೆ ಪಡುವ ಮಗು ಮನಸ್ಸಿಗೆ ನೂರು ರೂಪಾಯಿ ಅಂತೂ ದೊಡ್ಡ ಸಂಖ್ಯೆಯೇ ಸರಿ.

ಬರೀ ನಾಲ್ಕು ದಿನದ ಭೇಟಿ ಯಾರೆಲ್ಲರನ್ನು ಪರಿಚಯಿಸಿ, ದುಃಖಗಳನ್ನು ಹಂಚಿಕೊಂಡು, ಕಣ್ಣೀರಾಗುವಂತೆ ಮಾಡಿದ್ದು ಜಗದ ವಿಸ್ಮಯ. ಎಲ್ಲೋ ಇದ್ದವರು, ಎಲ್ಲಿಯೋ ಬಂದು ಭಾವನೆಗಳ ವಿನಿಮಯದೊಂದಿಗೆ ನಾಲ್ಕು ದಿನಗಳಲ್ಲಿಯೇ ನಮ್ಮವರೆನ್ನುವಂತೆ ಮಾಡಿಬಿಡುತ್ತದೆ.


  • ಮಾಲಾ.ಮ. ಅಕ್ಕಿಶೆಟ್ಟಿ , ಬೆಳಗಾವಿ.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW