ಲೇಖಕಿ ಪಲ್ಲವಿ ಬಿ ಎನ್ ಅವರ ‘ಭೂಮ್ತಾಯಿ ಅಜ್ಜಿ ಆದ್ಲಾ’ ಕೃತಿಯ ಕುರಿತು ಲೇಖಕಿ ಫಾತಿಮಾ ರಲಿಯಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…
ಪುಸ್ತಕ : ಭೂಮ್ತಾಯಿ ಅಜ್ಜಿ ಆದ್ಲಾ
ಲೇಖಕರು : ಪಲ್ಲವಿ ಬಿ ಎನ್ (ಎಡೆಯೂರು ಪಲ್ಲವಿ)
ಪ್ರಕಾರ : ಮಕ್ಕಳ ಕಥಾಸಂಕಲನ
ಮೊನ್ನೆ ನಮ್ಮ ಹೆಜಮಾಡಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಲಿಟರೇಚರ್ ವರ್ಕ್ ಶಾಪ್ ಹಮ್ಮಿಕೊಂಡಿದ್ದರು. ನಾಲ್ಕರಿಂದ ಏಳನೆಯ ತರಗತಿಯ ಮಕ್ಕಳ ಮುಂದೆ ನಿಂತು ‘ಸಾಹಿತ್ಯ ಬದುಕನ್ನು ಅರಳಿಸುತ್ತದೆ’ ಅಂತೆಲ್ಲಾ ಮಾತಾಡಿದರೆ ಮಕ್ಳು ‘ಮೋಲೆಗ್ ಮರ್ಲ್’ (ಇವ್ಳಿಗೆ ಹುಚ್ಚು) ಅಂತ ಮುಖ ತಿರುಗಿಸಿಕೊಂಡು ಹೋಗಿಯಾರು ಅಂತ ಅನ್ನಿಸಿತು, ಮೇಲಾಗಿ ಆ ಪುಟ್ಟ ಮಕ್ಕಳನ್ನು ಎರಡೂವರೆ ಗಂಟೆಗಳ ಕಾಲ ಎಂಗೇಜ್ ಮಾಡಿಟ್ಟುಕೊಳ್ಳಬೇಕಾಗಿತ್ತು. ಆ ಕ್ಷಣಕ್ಕೆ ನೆನಪಾದ್ದು ಎಡೆಯೂರು ಪಲ್ಲವಿ ಅವ್ರ ‘ಭೂಮ್ತಾಯಿ ಅಜ್ಜಿ ಆದ್ಲಾ’ ಕಥಾ ಸಂಕಲನ.
ಸಂಕಲನದ ಹೆಸ್ರು ಹೇಳ್ತಿದ್ದ ಹಾಗೆ ಒಂದು ಮಗು ಭೂಮಿ ಅಮ್ಮ, ಅಜ್ಜಿ ಅಲ್ಲ ಅಂದಿತು. ‘ನಿಮ್ಗೆ ಮದುವೆ ಆಗಿದ್ಯಾ?’, ‘ನಿಜ್ವಾಗಿಯೂ ಮಗು ಇದ್ಯಾ?’, ‘ಎಷ್ಟು ಕೆ.ಜಿ ಇದ್ದೀರಿ?’ ಎನ್ನುವ ತರ್ಲೆ ಪ್ರಶ್ನೆಗಳಿಗೆಲ್ಲಾ ಉತ್ತರಿಸ್ತಾ, ನಡು ನಡುವೆ ‘ಜಾಸ್ತಿ ಮಾತಾಡ್ಬೇಡಿ’ ಅಂತ ಗದರಿಸ್ತಿದ್ದ ಟೀಚರ್ಸ್‌ಗೂ ಮಾತಾಡ್ಲಿ ಬಿಡಿ ಅಂತ ಹೇಳ್ತಾ, ಆ ಸಂಕಲನದ ‘ಆಗಸಕ್ಕೆ ಸೇರಿದ ಚಂದಿರ’ ಕಥೆಯ ಅರ್ಧ ಹೇಳಿ ಇನ್ನರ್ಧ ನೀವೇ ಮುಂದುವರೆಸಿ ಅಂತ ಸುಮ್ನಾದೆ.

ಒಂದೆರಡು ನಿಮಿಷ ಮೌನವಾದ ಮಕ್ಳು ಅವ್ರವ್ರ ಒಳೊಗೇ ಏನೇನೋ ಮಾತಾಡಿಕೊಳ್ಳೋಕೆ ಶುರು ಮಾಡಿದ್ರು, ನಾನು ನಂಗೂ ಅದಕ್ಕೂ ಸಂಬಂಧ ಇಲ್ದೇ ಇರೋ ತರ ಕಿಟಕಿ ಹೊರಗೆ ನೋಡ್ತಾ ಕೂತ್ಕೊಂಡೆ.
ಬಾನಲ್ಲಿದ್ದ ಚಂದಿರ ಬಾವಿ ಸೇರ್ತು, ಅಲ್ಲಿಂದ ಮುಂದೆ ಒಂದು ಪುಟ್ಟ ರಾಜಕುಮಾರಿಯ ಅರಮನೆ ಸೇರ್ತು ಮುಂದಿನ ಕಥೆ ನೀವೇ ಹೇಳಿ ಅಂತ ನಾನು ಸುಮ್ಮನಿದ್ದೆ. ಪ್ರತಿ ಮಗುವೂ ಒಂದೊಂದು ರೀತಿ ಕಲ್ಪಿಸಿಕೊಂಡು ಕಥೆ ಹೇಳಿತು. ಅದ್ರಲ್ಲಿ ಆರನೇ ತರಗತಿಯ ಹುಡುಗ ‘ಚಂದ್ರ ಅರಮನೇಲೇ ಇರ್ಲಿ, ಅದನ್ನು ಮೇಲಕ್ಕೆ ಕಳಿಸೋದೇ ಬೇಡ’ ಅಂದ. ನನಗೊಂಚೂರು ಕೆಣಕೋಣ ಅನ್ನಿಸಿ ‘ಅರಮನೇಲೇ ಇದ್ರೆ ನಿಂಗೆ ಆಕಾಶದಲ್ಲಿ ಚಂದ್ರ ಕಾಣ್ತಾನಾ? ಚಂದ್ರ ಇಲ್ದಿದ್ರೆ ಸೂರ್ಯನ ಬೆಳಕನ್ನು ಬಳಸ್ಕೊಂಡು ರಾತ್ರಿ ಹೊತ್ತು ಬೆಳಗೋರು ಯಾರು?’ ಅಂತ ಕೇಳ್ದೆ. ಆ ಹುಡುಗ ‘ಬಾವಿಲಿ ಬಿದ್ದ ಚಂದ್ರ ಬೆಳ್ಳಿಬಟ್ಟಲ ತರ ಹೊಳೀತಾನೆ ಅಂತಾದ್ರೆ ಅವ್ನು ಅರಮನೆಲಿ ಇದ್ರೂ ಹೊಳೀತಾನೆ, ಗುಡಿಸಲಲ್ಲಿ ಇದ್ರೂ ಹೊಳೀತಾನೆ, ಆಕಾಶದಲ್ಲಿ ಇದ್ರೂ ಹೊಳಿತಾನೆ, ಅಲ್ಲೇ ಇರ್ಲಿ ಬಿಡು, ಇಷ್ಟೊಂದೆಲ್ಲಾ ಯಾಕೆ ಯೋಚಿಸ್ಬೇಕು’ ಅಂದ, ಕಥೆ ಬೆಳೀಬೇಕಲ್ವಾ ಅದ್ಕೆ ಯೋಚಿಸ್ಬೇಕು ಅಂತ ನಾನು ಅಂದಿದ್ದಕ್ಕೆ ‘ಚಂದ್ರ ಆ ಹುಡುಗಿ ಸಾಯೋವರ್ಗೂ ಅಲ್ಲೇ ಇದ್ದ , ಅವ್ಳು ದೊಡ್ಡೋಳಾಗಿ ಅಜ್ಜಿ ಆಗಿ ಸಾಯುವಾಗ ಮತ್ತೆ ಅದನ್ನು ತಗೊಂಡು ಹೋಗಿ ಆಕಾಶದಲ್ಲಿಟ್ಳು’ ಅಂದು ಸುಮ್ನೆ ಕೂತ.
‘ಸ್ಪೈಡರ್ ಮ್ಯಾನ್ ತಗೊಂಡೋಗಿ ಆಕಾಶದಲ್ಲಿಟ್ಟು ಬರುತ್ತೆ, ‘ದೊಡ್ದಾಗಿ ಏಣಿ ಮಾಡಿ ಅದನ್ನು ಹತ್ಕೊಂಡು ಹೋಗಿ ಫೆವಿಕ್ವಿಕ್ ಗಮ್ ಗಮ್ ತಗೊಂಡು ಅಂಟಿಸಿದ್ರಾಯ್ತು’, ‘ಚಂದ್ರನ್ನ ರಾಕೆಟ್ ಮೇಲಿಟ್ಟು ಆಕಾಶಕ್ಕೆ ಕಳಿಸಿದ್ರಾಯ್ತು’ ಹೀಗೆ ಅವರ ಕಥೆ ಒಂದೊಂದು ಜಾಡು ಹಿಡಿದು ಹೋಗ್ತಿತ್ತು. ಒಂದು ಮಗು ‘ಈ ಕಥೆ ಬರ್ದೋರು ನಿಮ್ ಫ್ರೆಂಡಾ’ ಅಂತ ಕೇಳಿತು, ನಾನು ‘ಹೌದು’ ಅಂದೆ, ‘ಹಾಗಿದ್ರೆ, ಚಂದಿರ ನಮ್ಗೆ ಕಾಣೋವಷ್ಟು ಸಣ್ಣ ಇರುವುದಲ್ಲ, ಅದ್ಕೆ ಯಾರ ಮನೆಗೂ ಊಟಕ್ಕೆ ಬರ್ಲಿಕ್ಕೆ ಆಗುವುದಿಲ್ಲ ಅಂತ ಅವರತ್ರ ಹೇಳಿ’ ಅಂದ್ಳು.ಅವಳ ಧ್ವನಿಯಲ್ಲಿ ದೊಡ್ದಾಗಿ ನಮ್ಗೆ ಹೇಳೋಕೆ ಬಂದ್ರು ಅನ್ನೋ ಟೋನ್ ಇತ್ತು, ನಂಗೆ ನಗು ಬಂತು ನಾನು ಹೂಂ ಅಂದೆ, ಆಮೇಲೆ ‘ಕಥೆಯಲ್ಲಿ ಎಂತ ಬೇಕಾದ್ರೂ ಆಗ್ತದೆ, ಚಂದ್ರನೂ ಬರ್ತಾನೆ, ಬೇಕಿದ್ರೆ ಸೂರ್ಯನನ್ನೂ ಕರೆಸ್ಕೊಳ್ಬಹುದು’ ಅಂದೆ. ತುಸು ಹೊತ್ತು ಯೋಚಿಸಿದ ಅವ್ಳು ‘ಹಾಗಿದ್ರೆ ನಾನೂ ಕಥೆ ಬರೀಬಹುದಾ?’ ಕೇಳಿದ್ಳು. ಬರೀಬಹುದು ಅಂದೆ.

ಇಷ್ಟೆಲ್ಲಾ ಆಗುವ ಹೊತ್ತಿಗೆ ಎರಡೂವರೆ ಗಂಟೆ ಆಗಿತ್ತು, ಸೆಷನ್ ಮುಗಿದ ಮೇಲೆ ಮಕ್ಕಳು ಮೊಣಕೈ ಮೇಲೆ, ಪುಸ್ತಕದ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದರು, ಇದು ಸ್ನಾನ ಮಾಡುವಾಗ ಹೋಗಲ್ವಾ ಅಂತ ಕೇಳಿದ್ದಕ್ಕೆ ‘ಅದು ಸ್ಟೈಲಿಗೆ ಹಾಕ್ಸಿದ್ದು’ ಅಂತ ನಕ್ರು. ಒಂದು ಹುಡುಗನ ಹೆಸ್ರು ‘ತೇಜಸ್ವಿ’ ಅಂತಿತ್ತು, ಇದು ಕುವೆಂಪು ಮಗನ ಹೆಸ್ರು, ಇನ್ನೊಂದ್ಸಲ ಬಂದಾಗ ಅವ್ರು ಬರ್ದಿರೋ ಕಥೆ ಹೇಳ್ತೀನಿ ಅಂದೆ, ಅದ್ಕೆ ಅವ್ನು ‘ನನ್ನಪ್ಪ ಅಮ್ಮನಿಗೂ ಕುವೆಂಪು ಗೊತ್ತಿರ್ಬಹುದಾ?’ ಕೇಳ್ದ, ಗೊತ್ತಿರುತ್ತೆ ಕೇಳಿ ನೋಡು, ಗೊತ್ತಿಲ್ಲಾಂದ್ರೆ ನೀನು ಹೇಳು ಅಂದೆ, ಅವ್ನು ತಲೆ ಆಡಿಸಿದ. ಅಲ್ಲಿಂದ ನಂತ್ರ ಮಕ್ಳೆಲ್ಲಾ ಬಿಸಿಯೂಟ ಉಣ್ಣಲು ಹೋದ್ರು, ನಾನು ಸ್ಟಾಫ್‌ರೂಮಿಗೆ ಹೋದೆ, ಅಷ್ಟು ಹೊತ್ತಿಗೆ ‘ನಾನೂ ಕಥೆ ಬರೀಬಹುದಾ’ ಅಂತ ಕೇಳಿದ ಹುಡುಗಿ ಓಡಿ ಬಂದು ‘ನಾನು ನಾಯಿ ಮರಿಯದ್ದು ಕಥೆ ಬರೀತೇನೆ, ಆದ್ರೆ ಆ ನಾಯಿಮರಿಗೆ ಕೊಂಬುಸ ಇರ್ತದೆ, ಹಾಗೆ ಬರೀಬಹುದಲ್ವಾ’ ಕೇಳಿದ್ಳು. ಬರೀಬಹುದು ಅಂದು, ಮಕ್ಳು ಕಥೆ ಬರೆದ್ರೆ ನಂಗೆ ಕಳ್ಸಿ ಅಂತ ಟೀಚರ್ಸ್‌ಗೆ ಹೇಳಿ ಬಂದಿದ್ದೇನೆ.
ಕಥೆ ಬರ್ದಿದ್ದಾರಾ ಗೊತ್ತಿಲ್ಲ, ಕೊಂಬಿರೋ ನಾಯಿಮರಿ ಯಾರಿಗೆ ಹಾಯುತ್ತೆ ಅನ್ನೋದೂ ಗೊತ್ತಿಲ್ಲ.
- ಫಾತಿಮಾ ರಲಿಯಾ
