‘ನೆನಪಿನ ಯಾನ’ ಕವಿತೆ

ಸವಿ ನೆನಪುಗಳ ಜೊತೆ ನಲಿದಾಡಿದೆ, ಕಹಿ ನೆನಪುಗಳ ಕಾಟಕೆ ಗೋಳಾಡಿದೆ… ಕವಿ ರವಿನಾಗ್ ತಾಳ್ಯ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಮನದ ಅಂಬಾರಿಯಲಿ ನೆನಪುಗಳ ಮೆರವಣಿಗೆ
ಅಚ್ಚಾದ ನೆನಪುಗಳ ಬಿಚ್ಚಿಡಲು ಸಾಲದೀ ಬರವಣಿಗೆ

ಜನಿಸಿದ ಮರುಕ್ಷಣವೆ ಜೊತೆಯಾದ ಸಂಗಾತಿ
ಉಸಿರು ನಿಲ್ಲುವ ತನಕ ಬೆಂಬಿಡದ ಜೊತೆಗಾತಿ

ನಾನೆಲ್ಲಿ ಒಬ್ಬಂಟಿ ನೆನಪಿರಲು ಜೊತೆಯಲ್ಲಿ
ಬದುಕಿನ ಪುಟಗಳ ತಿರು ತಿರುವಿ ಮನದಲ್ಲಿ

ಸವಿ ನೆನಪುಗಳ ಜೊತೆ ನಲಿದಾಡಿದೆ
ಕಹಿ ನೆನಪುಗಳ ಕಾಟಕೆ ಗೋಳಾಡಿದೆ

ನೆನಪುಗಳ ಕಚಗುಳಿಯೇ ನಗೆ ಹಬ್ಬವು
ನೆನಪುಗಳ ರೋಷಾಗ್ನಿಗೆ ಮನ ಪ್ರಕ್ಷುಬ್ದವು

ಹೃದಯಕಂಟಿದ ನೆನಪುಗಳೇ ಬಲು ರೋಮಾಂಚನ
ಎದೆಗೆ ತಿವಿದ ಗಾಯಕೆ ನಿತ್ಯ ನೋವಿನ ಅಭ್ಯಂಜನ

ವಿರಹದುರಿಯ ನೆನಪಿಂದ ತನುವ ನರಳಾಟ
ನೆನಪುಗಳ ತರಲೆ ಸಹಿಸಿ ಜೀವದ ಪರದಾಟ

ಬಿದ್ದು ಗೆದ್ದ ನೆನಪುಗಳೇ ಬದುಕಿಗೆ ಸ್ಪೂರ್ತಿ
ಪಾಠ ಕಲಿಸೋ ಕ್ಷಣಗಳೇ ಜೀವನ ಪೂರ್ತಿ

ಸವಿ ನೆನಪುಗಳೇ ಬದುಕಿಗೆ ಆಧಾರವು
ಕಹಿ ನೆನಪುಗಳ ಸೈರಣೆ ಪ್ರಯಾಸವು

ಪ್ರೀತಿ ಗೆದ್ದ ನೆನಪೇ ಬಲು ಮೋಹಕ
ಪ್ರೀತಿಯ ಅಗಲಿಕೆ ಬದುಕಿಗೆ ಸೂತಕ

ಅನುದಿನವು ಬಗೆ ಬಗೆ ನೆನಪುಗಳ ಆಲಿಂಗನ
ಕಾಡುವ ನೆನಪುಗಳ ಜೊತೆ ಮನದ ಮಿಲನ

ಸಿಹಿಯೋ ಕಹಿಯೋ ಮೆಲ್ಲೋಣ ಸಿಕ್ಕ ಪಾಲು
ಹಿಗ್ಗದೆ ಕುಗ್ಗದೆ ಬಾಳೋಣ ಅವ ಕೊಟ್ಟ ಬಾಳು

ನೆನಪುಗಳ ಜೊತೆ ಜೊತೆಗೆ ಈ ಜೀವನ
ನೆನಪುಗಳು ಅಳಿದ ಕ್ಷಣವೆ ಅವಸಾನ

ಮಾಸದ ನೆನಪುಗಳು ಅಚ್ಚಳಿಯದೆ ಅಚ್ಚಾಗಲಿ
ಮತ್ತೋರ್ವರ ಬಾಳ್ವೆಗೆ ದೀಪದ ಬೆಳಕಾಗಲಿ


  • ರವಿನಾಗ್ ತಾಳ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading