ರೆಕ್ಕೆ ಬಂತು. ಹಾರಿಹೋದ್ವು. ಹೇಳಿದ್ದು ಶಾಂತವ್ವಾ. ಶಕ್ತಿ ಇದ್ದಾಗ ದುಡಿದು ತನ್ನ ಮಕ್ಕಳಿಗೆ ವಿದ್ಯಾಕೊಡಸಿದ್ಲು. ವಯಸ್ಸಾದ ಕಾಲಕ್ಕೆ ಆಕೆಯನ್ನ ಭಿಕ್ಷೆಯೆತ್ತೋ ಹಾಗೆ ಮಕ್ಳು ಮಾಡಿದ್ರು…ಹಿರಿಯ ಕತೆಗಾರ್ತಿ ಸುಶೀಲಾ ದೇವಿ ಅವರ ಅರ್ಥಪೂರ್ಣ ಕತೆಯನ್ನು ತಪ್ಪದೆ ಮುಂದೆ ಓದಿ…
ಹರಿಹರಕ್ಕೆ ಹೆಂಡ್ತಿ, ಮಕ್ಕಳ ಜೊತೆ ಮಾವನ ಮನೆಗೆ ಬಂದವ ಎಲ್ಲರ ಜೊತೆಗೆ ಹರಿಹರೇಶ್ವರ ದೇವಾಲಯಕ್ಕೆ ಬಂದಿದ್ದೆ. ವಾಪಸ್ ಹೋಗುವಾಗ ಗುಡಿಯ ಹೊರಗೆ ಮೂರ್ನಾಲ್ಕು ಜನ ಭಿಕ್ಷಕರು ಕುಂತು “ಅಮ್ಮಾ ತಾಯೀ ಯಪ್ಪಾ ತಂದೇ ‘ದಾನ ಧರ್ಮ ಮಾಡಿ ಸೋಮೀ”. ಅಂತ ಸಿಲಾವರ್ ತಟ್ಟೆ ಹಿಡಿದು ಅಂಗಲಾಚುತ್ತಿದ್ದರು.
ಅಯ್ಯೋ ಅನ್ನಿಸಿ ಒಂದಿಷ್ಟು ಚಿಲ್ಲರೆ ಹಾಕುವಾಗ ಹರಕು ಸೀರೆ; ಬಿಳೀ ಕೂದಲ ಮುದುಕಿಯ ಮಕ ಪರಿಚಿತ ಅನ್ನಿಸಿ
” ನೀ ಯಾರವ್ವಾ?” ಅನ್ಬೇಕು, ಶಂಕ್ರು ಓಡಿಬಂದ.
“ಎಲ್ಲಾರೂ ಕಾಯಕ್ ಹತ್ಯಾರೆ. ಗಡಾನೇ ಬಾರಪಾ.” ಅಂತ ಎಳಕಂಡೇ ಹೋದ. ಕಾರು ಹತ್ತಿದೆ. ಅಲ್ಲಿಂದ ಎಲ್ಲರೂ ಬಾಗಳಿಗ್ರಾಮಕ್ಕೆ ಹೋದೆವು. ಬಾಗಳಿ ಕಲ್ಲೇಶ್ವರನಿಗೆ ಪೂಜೆ ಮಾಡಿಸಿ ಗುಡೀ ಎಲ್ಲ ಸುತ್ತಿ ದೇವರಿಗೆ ಅಡ್ಡ ಬಿದ್ದು ಎಲ್ಲರೂ ಒಂದ್ಕಡೆ ಕೂತಾಗ ಪಕ್ಕನೆ ನೆನಪಾತು. ಗುಡೀ ಎದುರು ಕುಂತಿದ್ದ ಮುದುಕಿ ನಮ್ಮ ಬಿಳಸನೂರಿನ ಲಿಂಗಣ್ಣನ ಹೆಂಡ್ತಿ ಶಾಂತವ್ವ. ನಮ್ಮವ್ವ ರತ್ನವ್ವ ಈ ಶಾಂತವ್ವ ಇಬ್ಬರೂ ಕುಂಬಳೂರಿಂದ ಬಿಳಸನೂರಿಗೆ ಲಗ್ನಾಗಿ ಬಂದೋರು. ಅವ್ವನ ಗೆಳತಿಯಾಗಿ ಶಾಂತವ್ವ ನಮ್ಮನಿಗೆ ಬರ್ತಿದ್ದಳು.
ಶಾಂತವ್ವ ಬಾರಿ ಗಟ್ಟಿಗಿತ್ತಿ ಹೆಣ್ಣು. ಆಕೆಯ ಗಂಡ ಲಿಂಗಣ್ಣನಿಗೆ ಟಿ.ಬಿ. ಕಾಯಿಲೆ ಆಗಿ ಬಳ್ಳಾರಿ ಆಸ್ಪತ್ರೆಗೆ ಸೇರಿದ್ದ. ಶಾಂತವ್ವ ಗಂಡನ ಜೊತೆ ಅಲ್ಲಿದ್ದಳು. ಕಾಯಿಲೆ ಜಾಸ್ತಿಯಾಗಿ ವರ್ಷಗಟ್ಟಲೆ ನರಳಿ ಲಿಂಗಣ್ಣ ಸತ್ತಾಗ ಊರೆಲ್ಲ “ಅಯ್ಯೋ” ಅಂದಿತ್ತು.
ಲಿಂಗಣ್ಣನ ಅಣ್ಣ ಶಿವಪ್ಪ ಆಸ್ಪತ್ರೆ ಖರ್ಚು, ತಿಥೀ ಖರ್ಚು ಎಲ್ಲ ಸೇರಿ ಸಾಲ ತೋರಿಸಿ ಎರಡೆಕರೆ ಹೊಲ; ಮನೆ ಬರೆಸಿಕೊಂಡು ಶಾಂತವ್ವನ್ನ ಆಕೀ ಮಕ್ಕಳನ್ನ ಬೀದಿಗೆ ತಳ್ಳಿದ್ದ. ಎಲ್ಲ ಕಾನೂನುಬದ್ಧವಾಗಿ ಕಾಗದ ಪತ್ರ ಮಾಡಿಸಿ ಶಾಂತವ್ವನ ಹೆಬ್ಬಟ್ಟೊತ್ತಿಸಿ ಮಕ್ಕಳನ್ನೂ ಒಪ್ಪಿಸಿ ಸಾಲದಪತ್ರ ಅದನ್ನು ತೀರಿಸಲು ಜಮೀನು ಮಾರಾಟ ಎಲ್ಲ ಮಾಡಿ ಹೊಲ ನುಂಗಿದ್ದ.
ಕಂಗಾಲಾದ ಶಾಂತವ್ವ ಹಿಡಿಮಣ್ಣು ತೂರಿ “ಯಾತ್ಯಾತ್ಕೋ ನನ್ನ ಹೆಬ್ಬಟ್ಟೊತ್ತಿಸಿ ಹೊಲ ನುಂಗಿದೇನೋ ಮಗನೇ . ರೆಟ್ಟೆ ಗಟ್ಟಿ ಅದಾವ. ದುಡಿದು ಮಕ್ಕಳನ್ನ ದಾರಿಗೆ ಅಚ್ತೀನಿ.
ನಂಗೆ ಮೋಸ ಮಾಡಿದ ನಿನ್ನ ವಂಶ ನಾಶವಾಗ.” ಅಂತ ಶಾಪ ಹಾಕಿದ್ದಳು. ಎಲ್ಲ ನೆನಪಾತು. ಅಲ್ಲಿಂದ ಹರಿಹರ ಸೇರಿ ಮೈಮ್ಯಾಗಳ ಚಿನ್ನ ಮಾರಿ ಒಂದು ಗುಡಿಸಲು ಹಾಕ್ಯಂಡು ಕಸಮುಸುರೆ ಕೂಲಿ ನಾಲಿ ಮಾಡಿ ಕೊನಿಗೆ ತರಕಾರಿ ಅಂಗಡಿ ಇಟ್ಟು ಹೆಂಗೋ ಬದುಕಿದಳು.
ದೊಡ್ಡೋನು ದೇವ್ರಾಜು ನನ್ನ ಜೊತಿಗೇ ಓದ್ತಿದ್ದ. ಮಕ್ಳನ್ನು ಓದ್ಸಿ ಇನ್ನೇನು ಚನ್ನಾಗದಾಳೆ ಅಂದ್ಕಂಡಿದ್ದೆ. ಆಕೀಗೆ ಇಂತಾ ಗತಿ ಯಾಕೆ ಬಂತಪ್ಪ ಶಿವನೇ ಅಂತ ಸಂಕಟಪಟ್ಟೆ.
ಹರಿಹರಕ್ಕೆ ವಾಪಸ್ ಬಂದು ಮಾವನ ಮನೇಲಿ ಎಲ್ಲರನ್ನೂ ಬಿಟ್ಟು ಒಬ್ಬನೇ ಗುಡೀ ಹತ್ರ ಬಂದೆ.
“ಶಾಂತವ್ವಾ” ಅಂದೆ..
ಮಕ ಅರಳಿಸಿ “ಅಯ್ ನಮ್ಮ ಶೇಖರಿ ಅಲ್ಲೇನ?”
ಚಂದಾಗಿದೀಯ ತಮ್ಮಾ?”ಅಂದಳು.
“ಅಲ್ಲವ್ವಾ ಮೂರು ಮಕ್ಳದಾವೆ. ಇಲ್ಯಾಕೆ ಕುಂತೆ?” ಅಂದೆ.
“ಎಲ್ಲಿಯ ಮಕ್ಳೋ ಶೇಖರಿ? ರೆಕ್ಕೆ ಬಂತು. ಹಾರಿಹೋದ್ವು.”
“ಈಗ ಅವರೆಲ್ಲದಾರೆ?” ಅಂದೆ.
“ದೇವ್ರಾಜು ಟೀಸಿಎಚ್ಚ್ ಮಾಡ್ದ. ಶೀಮಗ್ಗಿ ಜಿಲ್ಯಾಗೆ ಪರೀಕ್ಷೆ ಬರ್ದ. ಕೆಲಸ ಸಿಕ್ಕಿತು. ಶೀಮಗ್ಗಿ ಜಿಲ್ಯಾಗೆ ಎಲ್ಲೋ ಒಂದ್ಕಡೆ ಹಾಕಿದ್ರು.ಜತೀಗೆ ಕೆಲ್ಸ ಮಾಡಾ ಉಡ್ಗೀನ ಲಗ್ನಾಗಿ ಮಾವನ ಮನಿಯಾಗೇ ಅದಾನಂತೆ. ನನ್ನ ಬರಬೇಡ ರೊಕ್ಕ ಕಳಿಸ್ತೀನಿ ಅಂದ. ಕಳಿಸ್ಲಿಲ್ಲ. ಈರ್ಭದ್ರಿಗೆ ಧಾರವಾಡ ಜಿಲ್ಯಾಗೆ ಪೋಲೀಸ್ ಕಾನ್ಸ್ಟೇಬಲ್ ಆಗಿ ಕೆಲ್ಸ ಸಿಗ್ತು. ಯಾವೂರಾಗದಾನೆ ಅಂತ ತಿಳೀದು ತಮ್ಮಾ.”
“ಕಮಲ ಎಲ್ಲದಾಳೆ?” ಅಂದೆ.
ಆಕೀಗೆ ಬ್ಯಾಂಕ್ ನೌಕರಿ ಸಿಗ್ತು. ಕೋಲಾರದತ್ರ ಹಾಕಿದ್ರು. ಒಂದು ವರ್ಷ ರೊಕ್ಕ ಕಳಿಸಿದ್ಳು.ಅಲ್ಯಾರೋ ಆಂಧ್ರದ ಮಂದೀನ ಲಗ್ನ ಆದ್ಳಂತೆ ಆಂಧ್ರ ಪ್ರದೇಶದಾಗದಾಳಂತೆ. ಅಡ್ರೆಸ್ಸೂ ಕೊಡಲಿಲ್ಲ. ಲಗ್ನಕ್ಕೂ ಕರೀಲಿಲ್ಲ. ರೊಕ್ಕಾನೂ ಕಳಿಸ್ಲಿಲ್ಲ. ನಾನು ಅವ್ರನ್ನ ಸಾಕಿದೆ ತಮ್ಮಾ, ಅವ್ರು ನನ್ನ ಸಾಕ್ಲಿಲ್ಲಪ್ಪಾ.
ಆಗ ರೆಟ್ಟೀ ಗಟ್ಟಿ ಇದ್ವೋ ತಮ್ಮಾ. ಈಗ ರೆಟ್ಟೀ ಸೋತವೆ. ದುಡಿಯಾಕೆ ತ್ರಾಣ ಇಲ್ಲ. ಭಿಕ್ಷೆ ಬೇಡಿ ಹೊಟ್ಟೆ ತುಂಬಿಸ್ಕಂತಿದೀನಿ.”
ಅಯ್ಯೋ ಅನ್ನಿಸಿ ಜೇಬಿನಾಗಿದ್ದ ನೋಟುಗಳನ್ನು ಕೈಗಿಟ್ಟು ಕಣ್ಣೀರಿಟ್ಟು ಎದ್ದು ಬಂದೆ. ನಾನು ಬರುವ ದಾರಿಗೆ ಆಕಿ ಬೆನ್ನ ಹಿಂದಿನ ಲೈಟ್ಕಂಬ ಬೆಳಕು ಚೆಲ್ಲಿತ್ತು. ಬೀದಿಗೆ ಬಿದ್ದ ಬೆಳಕು ದೂರ ಆದಂತೆ ನನ್ನ ನೆರಳೂ ಉದ್ದ ಆಗಿತ್ತು!!!
- ಸುಶೀಲಾ ದೇವಿ – ಹಿರಿಯ ಕತೆಗಾರ್ತಿ, ಲೇಖಕರು.
