“ಆತ್ಮಸಾಕ್ಷಿಯ ಹಾವಳಿಗಳು” ಪ್ರಬಂಧ ಸಂಕಲನ ಪರಿಚಯ

ಹಿರಿಯ ಲೇಖಕರಾದ ವಿಜಯೇಂದ್ರ ಪಾಟೀಲ್ ಅವರ ‘ಆತ್ಮಸಾಕ್ಷಿಯ ಹಾವಳಿಗಳು’ ನಲ್ಲಿ ಒಟ್ಟು ಹನ್ನೆರಡು ಪ್ರಬಂಧಗಳಗಳಿವೆ. ಈ ಪುಸ್ತಕದಲ್ಲಿ ಲೇಖಕರು ಬೇರೆ ಬೇರೆ ಸಂದರ್ಭಗಳಲ್ಲಿ ತಾವು ಕಂಡುಂಡ ಅನುಭವವನ್ನು ಹಾಸ್ಯ ಹಾಗೂ ತಮ್ಮ ಭಾಷಾ ಪಾಂಡಿತ್ಯ ಮೂಲಕ ಓದುಗರಿಗೆ ಉಣಬಡಿಸಿದ್ದಾರೆ. ಲೇಖಕಿ ಪ್ರೀತಿ ಸಂಗಮ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಆತ್ಮಸಾಕ್ಷಿಯ ಹಾವಳಿಗಳು
ಲೇಖಕರು : ವಿಜಯೇಂದ್ರ ಪಾಟೀಲ್
ಪ್ರಕಾರ : ಲಲಿತ ಪ್ರಬಂಧಗಳ ಸಂಕಲನ

ಶ್ರೀ ವಿಜಯೇಂದ್ರ ಪಾಟೀಲ್ ಅವರ “ಆತ್ಮಸಾಕ್ಷಿಯ ಹಾವಳಿಗಳು” ಎಂಬ ಆಕರ್ಷಕ ಶೀರ್ಷಿಕೆಯಿಂದ ಅಲಂಕೃತವಾದ ಲಲಿತ ಪ್ರಬಂಧಗಳ ಸಂಕಲನವನ್ನೋದಿ ಅದನ್ನವಲೋಕಿಸಲೆಂದು ನನ್ನ ಆತ್ಮಸಾಕ್ಷಿ ಹೇಳಿದ್ದರಿಂದ ಅದನ್ನು ಬರೆಯಲು ಕುಳಿತಾಗ ಆ ಲಲಿತ ಪ್ರಬಂಧಗಳು ನನ್ನ ಕೈಗಳನ್ನು ಲುಲಿತವಾಗಿಸಿ (ಅಲುಗಾಡಿಸಿ) ನನ್ನ ಆತ್ಮಸಾಕ್ಷಿಗೆ ಹಾವಳಿ ಮಾಡಿದ್ದು ಸತ್ಯ.

ಆ ಹಾವಳಿ ನಡೆದಿದ್ದೇಕೆಂದರೆ…
ಅವರ ಅಗಾಧವಾದ ಭಾಷಾ ಪಾಂಡಿತ್ಯಕ್ಕೆ ಹಾಗೂ ಅದಕ್ಕೆ ತಕ್ಕಂತೆ ಅವರ ಉತ್ಕಟವಾದ ಬರಹದ ಶೈಲಿಗೆ ನಾನು ಮಾಡುವ ಅವಲೋಕನ ಪೂರ್ಣವಲ್ಲದಿದ್ದರೂ ಕೊಂಚವಾದರೂ ನ್ಯಾಯ ಒದಗಿಸಬಹುದೇ ಎಂಬ ಪ್ರಶ್ನೆಯೊಂದು ಧುತ್ತೆಂದು ನನ್ನ ಮಸ್ತಕದಲ್ಲಿ ಎದ್ದು ಕುಳಿತಾಗ ಅವರ ಬರಹದ ಬಗ್ಗೆ ಇದ್ದ ನನ್ನ ಭಾವಗಳು ಭಾಷೆಯಾಗಲು ಒದ್ದಾಡಿದವು. ಹಾಗಾಗಿ ಸ್ವಲ್ಪ ದಿನ ಬರೆಯದೇ ಸುಮ್ಮನಾಗಿಬಿಟ್ಟೆ. ಆದರೆ ಪುಸ್ತಕವನ್ನು ಸ್ವೀಕರಿಸಿಯಾದ ಮೇಲೆ ತಡವಾದರೂ ಚಿಂತೆಯಿಲ್ಲ, ಅದರ ಪರ ನನ್ನ ಮನದ ಭಾವನೆಗಳನ್ನು ಪ್ರಾಮಾಣಿಕವಾಗಿ ಒಂದೆರಡು ಸಾಲಿನಲ್ಲಾದರೂ ವ್ಯಕ್ತಪಡಿಸದಿದ್ದರೆ ಅದು ಕೃತಿಗೆ ಹಾಗೂ ಕೃತಿಕಾರರಿಗೆ ತೋರುವ ಗೌರವವಲ್ಲವೆಂದೆನಿಸಿ ಅವರ ಲಲಿತ ಪ್ರಬಂಧಗಳಗಳ ಅವಲೋಕನದ ಪ್ರಯೋಗ ಮಾಡಲು ಕೈಹಾಕಿದೆ. ಅವರ ಬರಹದ ಪ್ರೌಢಿಮೆಯನ್ನು, ವೈಭವವನ್ನು ವಿಶ್ಲೇಷಿಸುವುದಕ್ಕೆ ನಾನು ಪದಗಳ ಕೊರತೆಯಿಂದ ನರಳುವಂತಾದರೂ ಅಂತೂ ಇಂತೂ ಅವಲೋಕನ ಮುಗಿಸಿ ಅದರ ಪ್ರಯೋಗದ ಫಲದ ಕುರಿತು ಪೂರ್ವಗ್ರಹಪೀಡಿತವಾಗದೆ ಅದನ್ನೀಗ ನಿಮ್ಮ ಮುಂದೆ ಇಡುತ್ತಿರುವೆ.

ಅವರು ಬರೆದ ಲಲಿತ ಪ್ರಬಂಧಗಳ ಬಗ್ಗೆ ವಿಶ್ಲೇಷಿಸುವ ಮೊದಲು ಅವರ ಬರಹದ ಶೈಲಿ ಹೇಗಿದೆಯೆಂದು ಹೇಳಿಬಿಡುವೆ.

ಒಟ್ಟು ಹನ್ನೆರಡು ಪ್ರಬಂಧಗಳನ್ನೊಳಗೊಂಡ ಈ ಪುಸ್ತಕದಲ್ಲಿ ಲೇಖಕರು ಬೇರೆ ಬೇರೆ ಸಂದರ್ಭಗಳಲ್ಲಿ ತಾವು ಕಂಡುಂಡ ಅನುಭವವೆಂಬ ಗಟ್ಟಿ ಕೊಬ್ಬರಿಯನ್ನು ಹಾಸ್ಯವೆಂಬ ಬೆಲ್ಲದ ಜೊತೆ ಮಿಶ್ರಣ ಮಾಡಿ ತಮ್ಮ ಭಾಷಾ ಪಾಂಡಿತ್ಯವೆಂಬ ಒರಳಿನಲ್ಲಿ ನುಣ್ಣಗೆ ಅರೆದು ಹೂರಣವಾಗಿಸಿ, ಅದರಿಂದ ಲಲಿತ ಪ್ರಬಂಧಗಳೆಂಬ ಹೋಳಿಗೆ ತಯಾರಿಸಿ, ತಮ್ಮದೇ ವಿಶಿಷ್ಟವಾದ ಶೈಲಿಯಲ್ಲಿ ಆ ಹೋಳಿಗೆಯನ್ನು ಹದವಾಗಿ ಬೇಯಿಸಿ ತಮ್ಮ ಓದುಗರಿಗೆ ಹೋಳಿಗೆ ಊಟ ಮಾಡಿಸುತ್ತಾ ಹೋಗಿದ್ದಾರೆ.

ಹೋಳಿಗೆ 24 ವರ್ಷದಷ್ಟು ಹಳೆಯಾದಾಗಿದ್ದರೂ (ಈ ಪುಸ್ತಕದ ಮೊದಲ ಮುದ್ರಣ 2001 ರಲ್ಲಿ ಆಗಿದ್ದು) ಅದರ ಬಣ್ಣ, ರುಚಿ ಹಾಗೂ ಘಮ ಮಾತ್ರ ಇನ್ನೂ ಕಡಿಮೆಯಾಗಿಲ್ಲ, ಮುಂದೆಯೂ ಕಡಿಮೆಯಾಗುವುದಿಲ್ಲ.

ಏಕೆಂದರೆ ಈ ಬರಹದಲ್ಲಿ ಸಿಗುವ ಸೂಕ್ಷ್ಮ ಸಂದೇಶಗಳು ಎಲ್ಲ ಕಾಲಕ್ಕೂ ಅನ್ವಯಿಸುತ್ತವೆ. ಈ ಪ್ರಬಂಧಗಳನ್ನೋದಿ ಮನ ಹಗುರವಾಗುವಷ್ಟು ನಕ್ಕು ಕೊನೆಗೆ ಅವರು ವಾಸ್ತವವನ್ನು ಸೂಕ್ಷ್ಮವಾಗಿ ತಿಳಿಸುವ ರೀತಿಗೆ ‘ವಾಹ್ ‘ ಎಂಬ ಉದ್ಗಾರ ಬರದೇಯಿರದು, ಹೊಟ್ಟೆ ತುಂಬ ಹೋಳಿಗೆ ತಿಂದಷ್ಟು ತೃಪ್ತಿ ಆಗದೇಯಿರದು.

ಗಾಂಬೀರ್ಯ ಹಾಗೂ ವಿನೋದ ಒಂದೇ ನಾಣ್ಯದ ಎರಡು ಮುಖಗಳು. ಮುಖಗಳು ಬೇರೆ ಬೇರೆಯಾದರೂ ನಾಣ್ಯ ಒಂದೇ ಅಲ್ಲವೇ? ಅಂತೆಯೇ ಒಂದೇ ಪ್ರಬಂಧದಲ್ಲಿ ಇವೆರಡು ಮುಖಗಳ (ಗಂಭೀರತೆ ಮತ್ತು ಹಾಸ್ಯ) ಪ್ರವೇಶವಾದಾಗ ಎರಡನ್ನೂ ಹದವಾಗಿ ಮಿಳಿತಗೊಳಿಸಿ ಅದು ಒಂದೇ ಮುಖವೇನೋ ಎಂಬಂತೆ ಪ್ರಸ್ತುತಪಡಿಸುವುದು ಕ್ಲಿಷ್ಟಕರವಾದ ಕೆಲಸ.
ಲೇಖಕರು ಅದೆಷ್ಟು ಚಾಕಚಕ್ಯತೆಯಿಂದ ಇದನ್ನು ನಿಭಯಿಸಿದ್ದಾರೆಂದರೆ ಅದು ಹಾಲಿನಲ್ಲಿ ಸಕ್ಕರೆ ಬೆರೆಸಿದಂತಿದೆ. ಅದನ್ನು ಕುಡಿಯುವವರಿಗೆ ಹಾಲು ಹಾಗೂ ಸಕ್ಕರೆ ಎರಡರದ್ದೂ ಅನುಭವವಾದರೂ ಎರಡನ್ನೂ ಬೇರ್ಪಡಿಸಲಸಾಧ್ಯ ಹಾಗೂ ಬೇರೆಬೇರೆಯಾಗಿ ಸೇವಿಸಲಸಾಧ್ಯ.

ಹೀಗೆ ಹಾಸ್ಯದ ಚೌಕಟ್ಟಿನಲ್ಲಿ ಚಿಂತನೆಗೆ ಹಚ್ಚುವ ಸಂದೇಶವನ್ನು ಸಾರುವ ಇವರ ಶೈಲಿ ಅನನ್ಯವಾದದ್ದು. ಇದು ಅವರ ಬರಹದಲ್ಲಿ ನಾನು ಕಂಡ ಒಂದು ವಿಶೇಷತೆ.

ಕ್ಷಕಿರಣ ಬಿಟ್ಟು ನೋಡಿದರೆ ಇನ್ನೂ ಹಲವಾರು ವಿಶೇಷತೆಗಳು ಕಂಡುಬಂದರೂ ಅಚ್ಚರಿಯಿಲ್ಲ. ಇಷ್ಟಿದ್ದರೂ ಸ್ವಲ್ಪವೂ ಹಮ್ಮು ಬಿಮ್ಮಿಲ್ಲದ ತುಂಬಾ ತುಂಬಾ ಸರಳ ಸಜ್ಜನ ವ್ಯಕ್ತಿ. ಇದು ಖಂಡಿತಾ ಮುಖಸ್ತುತಿಯಲ್ಲ.

There is a saying that “Never judge a book by its cover”.
ನಿಜ, ಮುಂದುವರೆದು ನಾನು ಹೇಳುವುದೇನೆಂದರೆ you can always judge the book by its start.

ಪುಸ್ತಕದ ಆದಿ ಆಸಕ್ತಿದಾಯಕವಾಗಿದ್ದರೆ ಅದು ಅಂತ್ಯದವರೆಗೂ ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂಬ ನಂಬಿಕೆಯನ್ನು ಲೇಖಕರು ಹುಸಿಗೊಳಿಸಿಲ್ಲ. ಮೊದಲನೇ ಪ್ರಬಂಧದಲ್ಲಿಯೇ ಸಿಕ್ಸರ್ ಬಾರಿಸಿದ್ದಾರೆ. ಮುಂದೆಯೂ ಅದೇ ಸ್ಥಿರತೆಯನ್ನು ಕಾಪಾಡಿಕೊಂಡು ಕೊನೆವರೆಗೂ ಮೈದಾನದಲ್ಲಿದ್ದು ತಮ್ಮ ಹೆಸರನ್ನು ಅನ್ವರ್ಥವಾಗಿಸಿಕೊಂಡಿದ್ದಾರೆಂದರೆ ಉತ್ಪ್ರೇಕ್ಷೆಯಾಗದು.

ವಿಷಯಕ್ಕೆ ಬರೋಣ.

ಈ ಲಲಿತ ಪ್ರಬಂಧಗಳ ಸಂಕಲನದಲ್ಲಿರುವ ಹನ್ನೆರಡು ಪ್ರಬಂಧಗಳ ಪೈಕಿ ಏಳು ಪ್ರಬಂಧಗಳ ಪರಿಚಯವನ್ನು ಮಾಡಿರುವೆ. ಮೊದಲನೇ ಪ್ರಬಂಧದಲ್ಲಿ ಲೇಖಕರು ನಮ್ಮೆಲ್ಲರ ಮನೆಯಲ್ಲಿರುವ ಒಬ್ಬ ಅಜ್ಜನನ್ನು ಬಹು ಸೂಕ್ಷ್ಮವಾಗಿ ಹಾಗೂ ನವಿರಾದ ಹಾಸ್ಯದಲ್ಲಿ ಪರಿಚಯಿಸಿದ್ದಾರೆ. ಬನ್ನಿ, ಆ ಅಜ್ಜನ ಬಗ್ಗೆ ಲೇಖಕರು ಏನು ಹೇಳುತ್ತಾರೆ ನೋಡೋಣ.

“ಯಾರೂ ತನ್ನ ಮಾತು ಕೇಳದಿದ್ದರೂ ನಾಚಿಕೆಯಿಲ್ಲದ ಆ ಅಜ್ಜ ಎಲ್ಲರಿಗೂ ಉಪದೇಶಾಮೃತವನ್ನು ಉಣಿಸಿಯೇ ಉಣಿಸುತ್ತಾನೆ. ಏನನ್ನೂ ಅರಿಯದ ಪುಟ್ಟ ಮಗು ಯಾರ ಹಂಗಿಲ್ಲದೇ ಆಡುವಾಗ, ಅದು ತಪ್ಪು, ಇದು ಸರಿ, ಹಾಗೆ ಮಾಡಬೇಡ, ಹೀಗೆ ಮಾಡು ಎಂದು ಮನೆಯ ದೊಡ್ಡವರ ಮುಖಾಂತರ ಹೇಳಿಸುವ ಈ ಅಜ್ಜ ಮಕ್ಕಳ ಇಚ್ಛೆಗೆ ಕಡಿವಾಣ ಹಾಕುತ್ತಾನೆ. ಮಗು ದೊಡ್ಡದಾದ ಮೇಲೆ ಶಾಲೆಯಲ್ಲಿ ಮಾಸ್ತರರ ಮುಖಾಂತರ ಸುಳ್ಳು-ಸತ್ಯ, ವಿವೇಕ- ಅವಿವೇಕ, ಪ್ರಾಮಾಣಿಕತೆ – ಅಪ್ರಾಮಾಣಿಕತೆಯ ಪಾಠ ಹೇಳಿಸುವ ಈ ಅಜ್ಜ ಮಕ್ಕಳ ಮನದಲ್ಲಿ ಮೂಡಿದ್ದನ್ನು ಮಾಡಲು ಬಿಡದೇ ಹಂತ ಹಂತವಾಗಿ ಅವರನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಾನೆ.

ಹೀಗೆ ಮೊದಲೆಲ್ಲ ಬೇರೆಯವರ ಮುಖಾಂತರ ನಮ್ಮನ್ನೆಲ್ಲ ಬದಲಿಸುವ ಈ ಅಜ್ಜ ಮುಂದೊಂದು ದಿನ ತಾನೇ ಖುದ್ದಾಗಿ ನಮ್ಮ ಮನೆಯೊಳಗೇ ಬಂದು ಸ್ವಾತಂತ್ರ್ಯ ಕಾರ್ಯಾಚರಣೆ ನಡೆಸುತ್ತಾ, ಗತ್ತಿನಿಂದ ನಮ್ಮ ಬೇಕು ಬೇಡಗಳನ್ನು ನಿರ್ಧರಿಸುತ್ತಾ, ತನ್ನ ನಿರ್ಣಯವನ್ನು ನಮ್ಮ ಮೇಲೆ ಹೇರುತ್ತಾ, ನಮ್ಮನ್ನು ಆಗಾಗ ಕುಟುಕುತ್ತಾ ಇರುತ್ತಾನೆ.”

ಹೌದಲ್ವಾ! ಲೇಖಕರು ಹೇಳಿದ ಹಾಗೆ ನಮಗೂ ಆ ಅಜ್ಜ ಹೀಗೆಲ್ಲ ಮಾಡಿದ್ದಾನೆ, ಈಗಲೂ ಮಾಡುತ್ತಲಿದ್ದಾನೆ, ಮುಂದೆಯೂ ಮಾಡುತ್ತಲಿರುತ್ತಾನೆ. ಆ ಅಜ್ಜ ನಮಗೆಲ್ಲಾ ಚಿರಪರಿಚಿತನೇ. ಯಾಕೆಂದರೆ ಅವನು ನಮ್ಮ ಜೊತೆ ನಮ್ಮೆಲ್ಲರ ಮನೆಯಲ್ಲಿದ್ದಾನೆ. ಯಾರು ಹೇಳಿ ಈ ಅಜ್ಜ? ಗೊತ್ತಾಗಲಿಲ್ಲವೇ? ಆ ಅಜ್ಜ ಬೇರಾರೂ ಅಲ್ಲ ಅವನೇ ನಮ್ಮ ಆತ್ಮಸಾಕ್ಷಿ.

ಇದನ್ನು ಓದುತ್ತಾ, ಆತ್ಮಸಾಕ್ಷಿಯನ್ನು ಹೀಗೂ ಪರಿಚಯಿಸಬಹುದೇ ಎಂದು ಅಚ್ಚಾರಿಯಾಯ್ತು. ನನ್ನ ಅಜ್ಜ, ಅಂದರೆ ನನ್ನ ಆತ್ಮಸಾಕ್ಷಿ ಲೇಖಕರ ಜಾಣ್ಮೆಗೆ ತಲೆಬಾಗಿಸಿ ನಮಸ್ಕರಿಸೆಂದನು. ಅಜ್ಜನ ಈ ಉಪದೇಶಾಮೃತವನ್ನು ಶಿರಸಾವಹಿಸಿ ಪಾಲಿಸಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. That goes wihout saying ಅಲ್ವಾ.

ಅಜ್ಜನ ಬಗೆಗಿರುವ ಲೇಖಕರ ಅನಿಸಿಕೆಯನ್ನೋದಿ ತುಟಿಯಂಚಿನಲ್ಲಿ ನಗು ಉಕ್ಕುವದರ ಜೊತೆಗೆ ಸೂಕ್ಷ್ಮವಾದ ಹಾಗೂ ಗಹನವಾದ ವಿಚಾರವನ್ನು ಹಾಸ್ಯಮಯವಾಗಿ ಹೇಳಿದ ಅವರ ಚತುರತೆಗೆ ಶಿರಬಾಗುವುದಲ್ಲದೇ ಹಾಸ್ಯದ ಒರಳಿನಿಂದ ತೆಗೆದ ಸತ್ಯದ ತಿರುಳಿಗೆ ಅಹುದಹುದೆಂದು ತಲೆದೂಗುವಂತೆ ಕೂಡ ಮಾಡಿತು.

ಹೀಗೆ ಓದುಗರನ್ನು ಕ್ಲೀನ್ ಬೋಲ್ಡ್ ಮಾಡುವ ಆ ಪ್ರಬಂಧದ ಹೆಸರು, “ಆತ್ಮಸಾಕ್ಷಿಯ ಹಾವಳಿಗಳು”

ಹೀಗೆ ಜೀವನದುದ್ದಕ್ಕೂ ನಮ್ಮೆಲ್ಲರ ಮೇಲೆ ಆತ್ಮಸಾಕ್ಷಿಯೆಂಬ ಅಜ್ಜನ ಹಾವಳಿ ಹೇಗೆಲ್ಲ ಸಾಗುತ್ತಲೇ ಇರುತ್ತದೆ ಹಾಗೂ ಬದುಕನ್ನು ಸಹ್ಯವಾಗಿಸಿಕೊಳ್ಳಬೇಕಾದರೆ ಈ ಅಜ್ಜನ ಮಾತನ್ನು ನಾವು ಕೇಳಬೇಕೋ ಬೇಡವೋ? ಎಂದು ತಿಳಿಯಲು ಆ ಪ್ರಬಂಧ ಓದಿ ನೋಡಿ.

“ಒಳ್ಳೆಯತನದೊಂದಿಗಿನ ನನ್ನ ಪ್ರಯೋಗಗಳು” ಎಂಬ ಪ್ರಬಂಧದಲ್ಲಿ ಲೇಖಕರು ಹೇಗೆ ತಮ್ಮ ಬಾಲ್ಯದಲ್ಲಿ ಅತೀ ಒಳ್ಳೆಯತನದಿಂದ ಮೋಸಹೋದದ್ದು ಮತ್ತು ಸತ್ಯದ ದಾರಿಯನ್ನು ಹಿಡಿದು ನಡೆದಾಗ ಎಲ್ಲರ ಕಡೆಯಿಂದ ಹೇಗೆಲ್ಲ ಬೈಸಿಕೊಂಡರು ಎಂಬುದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ.

ತಮ್ಮ ಬಾಲ್ಯದಲ್ಲಿ ಒಂದು ಸಲ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಮುಂದೆ ತಮ್ಮ ನಿಜವಾದ ವಯಸ್ಸನ್ನು ಹೇಳಲು ಹೋಗಿ ಮನೆಯವರಿಂದ ಬೈಸಿಕೊಂಡ ಘಟನೆಯನ್ನು ಬಲು ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ. ಅಂದಿನಿಂದ ಪ್ರಯಾಣ ಮಾಡುವಾದ ಹೇಳಬೇಕಾದ ವಯಸ್ಸು, ಹುಟ್ಟು ಹಬ್ಬ ಆಚರಿಸಿಕೊಳ್ಳುವಾಗಿನ ವಯಸ್ಸು, ಶಾಲಾ ದಾಖಲಾತಿಯ ಪ್ರಕಾರದ ವಯಸ್ಸನ್ನು ಕಂಠಪಾಠ ಮಾಡಿ ಎಲ್ಲರ ಕಡೆಯಿಂದ ಶಭಾಷ್ ಎನಿಸಿಕೊಂಡ ವಿಚಾರ ನಗೆ ತರಸುವುದು.

ಈ ಹಾಸ್ಯದ ಜೊತೆಗೆ ಕೆಲವು ಕಿವಿಮಾತುಗಳನ್ನು ಕೂಡ ಸೂಕ್ಷ್ಮವಾಗಿ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ಬೆಲೆಬಾಳುವ ಸತ್ಯವನ್ನು ಕ್ಷುಲ್ಲಕ ವಿಷಯಕ್ಕೆಲ್ಲ ಬಳಸಬಾರದು ಮತ್ತು ಒಳ್ಳೆಯತನವನ್ನು ಜಿಪುಣತನದಿಂದ ಹಾಗೂ ಬುದ್ಧಿವಂತಿಕೆಯಿಂದ ಉಪಯೋಗಿಸಬೇಕು.

ವಯಸ್ಸಿನ ಕುರಿತು ಇದು ನಮ್ಮೆಲ್ಲರಿಗಾದ ಅನುಭವ ಅಲ್ಲವೇ? ನಮ್ಮ ಹುಟ್ಟಿದ ದಿನ ಮತ್ತು ತಿಂಗಳು ಯಾವಾಗಲೂ ಒಂದೇಯಿದ್ದರೂ ಹುಟ್ಟಿದ ವರ್ಷ ಮಾತ್ರ ಸಂದರ್ಭಕ್ಕೆ ತಕ್ಕ ಹಾಗೆ ಬದಲಾಗುತ್ತಾ ಇರುತ್ತದೆ. ಪ್ರಯಾಣ ಮಾಡುವಾಗ ಟಿಕೆಟ್ ರಹಿತ ಅಥವಾ ಅರ್ಧ ಟಿಕೆಟ್ ಸೌಲಭ್ಯ ಪಡೆಯಲು ಚಿಕ್ಕ ಮಕ್ಕಳು ಮತ್ತಷ್ಟು ಚಿಕ್ಕವರಾಗಬೇಕು, ವಯಸ್ಸು ಕಡಿಮೆಯಿದ್ದಿದ್ದರಿಂದ ಶಾಲೆಯಲ್ಲಿ ಪ್ರವೇಶ ಸಿಗದೇಯಿದ್ದಾಗ ಪ್ರವೇಶ ಪಡೆಯಲು ಇರುವ ವಯಸ್ಸಿಗಿಂತ ಸ್ವಲ್ಪ ದೊಡ್ಡವರಾಗಬೇಕು, ಹೆಣ್ಣುಮಕ್ಕಳಿಗೆ ಮದುವೆ ವಿಳಂಬವಾದರೆ ಮತ್ತೆ ಅವರು ಇರುವ ವಯಸ್ಸಿಗಿಂತ ಚಿಕ್ಕವರಾಗಬೇಕು. (ಜಾತಕದಲ್ಲಿ), ಜಾತಕದಲ್ಲಷ್ಟೇಯಲ್ಲ ಹುಡುಗಿಯರು (ಮದುವೆಯಾದ ಮೇಲೂ) ಇರುವ ವಯಸ್ಸಿಗಿಂತ ಸದಾಕಾಲ ಸ್ವಲ್ಪ ಚಿಕ್ಕವರಾಗಿಯೇ ಇರಲು ಬಯಸುತ್ತಾರೆ ಎನ್ನುವುದು ಬೇರೆ ಮಾತು. ಸರಿಯಾದ ವಯಸ್ಸನ್ನು ಮರೆಮಾಚುವುದು ಹುಡುಗಿಯರ ಜನ್ಮ ಸಿದ್ಧ ಹಕ್ಕು ಅದನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ.

“ನಾಮಕರಣ ಪುರಾಣ” ಎಂಬ ಇನ್ನೊಂದು ಪ್ರಬಂಧದಲ್ಲಿ ಹೆಸರುಗಳಲ್ಲಿರುವ ವೈರುಧ್ಯ ಹಾಗೂ ಅನ್ವರ್ಥಕಗಳು ಹಾಸ್ಯದ ಕಚಗುಳಿಯನ್ನಿಡುತ್ತವೆ. ಉದಾಹರಣೆಗೆ, ಕಸಮುಸರೆಯ ಆಳು ಧನಲಕ್ಷ್ಮಿ, ವಟವಟ ಮಾತನಾಡುವ ಮೂಕಾಂಬಿಕೆ, ಎಸ್.ಎಸ್.ಎಲ್,ಸಿ ಏಳು ಬಾರಿ ಕಟ್ಟಿರುವ ವಿದ್ಯಾಧರ, ವೇಟ್ ಲಿಫ್ಟಿಂಗ್ ಚಾಂಪಿಯನ್ ಕೋಮಲಾ. ಅಂತೆಯೇ ಅನ್ವರ್ಥಕಗಳಾದ ಭೂಮಿಯ ತೂಕದ ವಸುಧಾ, ಕಾಂಪೌಂಡ್ ನೆಗೆಯುವ ಬಾಲಾಂಜನೇಯ ಹಾಗೂ ಅವನಿಗೆ ಕಲ್ಲೆಸೆಯುವ ಹುಚ್ಚುರಾಯ, ಹಲವು ವರ್ಷಗಳಿಂದ ಮನೆಯನ್ನು ಹುಡುಕುತ್ತಲೇಯಿರುವ ಅನಿಕೇತ ಹೀಗೆ ಇನ್ನೂ ಅನೇಕ.

ಸಾಮಾನ್ಯವಾಗಿ ಕೆಟ್ಟ ಚಟಕ್ಕೆ ದಾಸರಾಗಿ ಹಣ ಕಳೆದುಕೊಂಡವರಿರುತ್ತಾರೆ. ಆದರೆ ಬ್ಯಾಂಕ ವ್ಯವಹಾರದ ಚಟದಿಂದ ಹಣ ಕಳೆದುಕೊಂಡ ಪಾಮರ ಗ್ರಾಹಕರ ಬಗ್ಗೆ ಹಾಗೂ ಬ್ಯಾಂಕ್ ಉದ್ಯೋಗಿಗಳನ್ನೇ ಬ್ಯಾಂಕ ಆಗಿ ಪರಿವರ್ತಿಸಿ ಅವರಲ್ಲಿಯೇ ಖಾತೆ ತೆರೆದು ವ್ಯವಹರಿಸುವ ಕುಚೋದ್ಯ ಗ್ರಾಹಕನ ಬಗ್ಗೆ “ಬ್ಯಾಂಕಿನಲ್ಲಿ ಹಾಸ್ಯ ಪ್ರಸಂಗಗಳು” ಎಂಬ ಪ್ರಬಂಧದಲ್ಲಿ ತುಂಬಾ ತಮಾಷೆಯಾಗಿ ಪ್ರಸ್ತುತಪಡಿಸಿದ್ದಾರೆ.

“ಸಾಲದ ಸಾಲ” ಎಂಬ ಬರಹದಲ್ಲಿ ಉಪಯೋಗಿಸಿದ ಪಂಚ್ ಲೈನ್ ಗಳು ತುಂಬಾ ಸೆಳೆಯುತ್ತವೆ. “ಸಾಲಯ ತಸ್ಮೈ ನಮಃ”, “ಸತ್ಯಕ್ಕೆ ಸಾವಿರಬಹುದು ಆದರೆ ಸಾಲಕ್ಕೆ ಸಾವಿಲ್ಲ” , “ಸಾಲ ಸಿಗುತ್ತದೆ, ಆದರೆ ಸಾಲವಿಲ್ಲದವನ ಮನೆಯ ಸಾಸಿವೆ ಸಿಕ್ಕದು” ಇವೆಲ್ಲ ತಮಾಷೆಯಾಗಿ ಕಂಡರೂ ಅಷ್ಟೇ ಸತ್ಯ ಕೂಡ.

ಕಂಪ್ಯೂಟರ ಬಂದ ಮೇಲೆ “ದೇಶ ಸುತ್ತು ಕೋಶ ಓದು” ಎಂಬ ಮಾತು ಅಷ್ಟು ಪ್ರಸ್ತುತ ವಾಗುವುದಿಲ್ಲ ಏಕೆಂದರೆ ಕೋಶದಿಂದ ಹಿಡಿದು ದೇಶದವರೆಗೆ ಕಂಪ್ಯೂಟರ್ ಪರದೆ ಮೇಲೆ ಕ್ಷಣಮಾತ್ರದಲ್ಲಿ ಮಾಹಿತಿ ಸಿಗುತ್ತದೆ. ಇದು ಆಲಸಿಗಳಿಗೆ, ಮೈಗಳ್ಳರಿಗೆ ವರದಾನವಾಗಿದೆ ಎನ್ನುತ್ತಾರೆ ಲೇಖಕರು. ಅವರ ಮನೆಯಲ್ಲಿ ಕೂಡ ಕಂಪ್ಯೂಟರ್ ದ್ದೇ ಕಾರುಬಾರು ಜೋರಾಗಿ ಸ್ವೀಟ್ ಹೋಮ್ ಹೋಗಿ ಕಂಪ್ಯೂಟರ್ ಹೋಮ್ ಆಗಿ ಪರಿವರ್ತನೆ ಆದ ಬಗೆಯನ್ನು ಚೆನ್ನಾಗಿ ಬಣ್ಣಿಸಿದ್ದಾರೆ.

ಕಂಪ್ಯೂಟರ್ ಕಂಪ್ಯೂಟರ್ ಎಲ್ನೋಡಿ ಕಂಪ್ಯೂಟರ್ ಎನ್ನುವ ಹಾಗೆ ಮನೆ ಬಿಟ್ಟು ತಮ್ಮ ಬ್ಯಾಂಕಿಗೆ ಹೋದರೆ ಅಲ್ಲಿಯೂ ಕಂಪ್ಯೂಟರ್ ದ್ದೇ ರಾಜ್ಯಭಾರ. ಇಂಟರ್ನೆಟ್ ಯುಗದಲ್ಲಿ ಎಲ್ಲವೂ ಆನ್ಲೈನ್ ನಡೆಯುವುದರಿಂದ ಮೊದಲಿನ ಹಾಗೆ ಬ್ಯಾಂಕಗಳಲ್ಲಿ ಜನಸಂದಣಿ ಕೂಡ ಕಡಿಮೆಯಾಗಿ ಬಿಕೋ ಎನ್ನುವ ವಾತಾವರಣ. ಇದರಿಂದ ಮನುಷ್ಯ ಸಂಬಂಧಗಳು ಕುಸಿಯುತ್ತಿವೆ ಎನ್ನುವ ಬೇಸರವನ್ನು ಹೊರಹಾಕುತ್ತಾರೆ “ಕಂಪ್ಯೂಟರಿನ ಕಟಕಟೆಯಲ್ಲಿ”

“ಒಬ್ಬ ಬೋಡನ ಆತ್ಮಕಥೆಯಲ್ಲಿ” ತಮ್ಮ ಬೋಡ ಗುರುಗಳ ತಲೆಯನ್ನು ಅತ್ಯಂತ ಹೊಳಪುಳ್ಳ ಗುರುಗ್ರಹಕ್ಕೆ ಹೋಲಿಕೆ ಮಾಡಿ ಅವರ ಶಾಪಕ್ಕೊಳಗಾಗಿ ಮುಂದೆ ತಾವು ಕೇಶವಿಲ್ಲದೆ ಅನುಭವಿಸಿದ ಕ್ಲೇಶದ ಆತ್ಮಕಥೆಯನ್ನು ಹೇಳುತ್ತಾ ಹಾಸ್ಯದ ಹೊಳೆ ಹರಿಸಿದ್ದಾರೆ.

ಇದರಂತೆ ಇನ್ನೂ 5 ಪ್ರಬಂಧಗಳು ಹಾಸ್ಯಕ್ಕೆ ಹಾಗೂ ಅವರ ಕೊಡುವ ಸಂದೇಶಕ್ಕೆ ಮೆರಗು ತಂದಿವೆ. ಅವುಗಳನ್ನು ಸ್ವತಃ ನೀವೇ ಓದಿ ಆನಂದಿಸಿದರೆ ಚೆನ್ನ.

ಈ ಪುಸ್ತಕದ ವಿಶ್ಲೇಷಣೆ ಮಾಡ್ತಾ ಇದ್ದ ಸಂದರ್ಭದಲ್ಲಿ ಲೇಖಕರ ಬಗ್ಗೆ ಒಬ್ಬರು ಹೇಳಿದ ಮಾತು ಏನೆಂದರೆ
“He is one of the finest writers.

ಪಾಟಿಚೀಲ ಹಿಡಿದು ವಿದ್ಯಾಶಾಲೆಗೆ ಹೋಗುತ್ತ ಅದರಲ್ಲಿ ವಿಜಯವನ್ನು ಗಳಿಸಿ ಇಂದ್ರ ಪದವಿಯನ್ನು ಪಡೆಯಬೇಕೆಂದುಕೊಳ್ಳುವವರೆಲ್ಲ ವಿಜಯೇಂದ್ರ ಪಾಟೀಲ ಅವರ ಪುಸ್ತಕವನ್ನು ಓದಲೇಬೇಕು” ಎಂದು.

ಆಹಾ! ಎಂತಹ ಮಾತು ಅಲ್ಲವೇ! ವಿಜಯೇಂದ್ರ ಪಾಟೀಲ ಸರ್ ಬಗ್ಗೆ ಹೀಗೆ ಹೊಗಳಿದ್ದು ಬೇರೆ ಯಾರೂ ಅಲ್ಲ ಖ್ಯಾತ ಹಾಸ್ಯ ಲೇಖಕರು, ಅಂಕಣಕಾರ ಹಾಗೂ ಪ್ರತ್ಯುತ್ಪನ್ನಮತಿಯಾದ (Talent of responding appropriately and instantaneously ) ಅಣಕು ರಾಮನಾಥ ಸರ್ ಅವರು. (ಪ್ರತ್ಯುತ್ಪನ್ನಮತಿ – ಪದಕೃಪೆ : ಶ್ರೀ ಶ್ರೀವತ್ಸ ಜೋಶಿ ಸರ್)

ವಿಜಯೇಂದ್ರ ಪಾಟೀಲ ಸರ್ ಅವರ ಬರಹವನ್ನು ಓದಿದವರೇ ಇಂದ್ರ ಪದವಿಯನ್ನು ಪಡೆಯುತ್ತಾರೆಂದರೆ ಇನ್ನು ಲೇಖಕರು ತಮ್ಮ ಬರಹದಿಂದ ಇಂದ್ರ ಪದವಿಗಿಂತ ಇನ್ನಾವ ಮಹೋನ್ನತವಾದ ಪದವಿಯನ್ನು ಪಡೆದಿರಲಿಕ್ಕಿಲ್ಲ!

ಇಂತಹ ಅತ್ಯುತ್ಕೃಷ್ಟ ಲೇಖಕರ ಬರಹವನ್ನು ನಾನು ಅವಲೋಕಿಸಿರುವೆಯೆಂದರೆ ಅದು ಸೂರ್ಯನಿಗೆ ಟಾರ್ಚ್ ಹಿಡಿಯುವ ಪ್ರಯತ್ನವಷ್ಟೇ.


  •  ಪ್ರೀತಿ ಸಂಗಮ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW