‘ಬಿಡುಗಡೆಯ ಭಾಗ್ಯ’ ಸಣ್ಣಕತೆ

ಅವಳನ್ನು ನಿರ್ಲಕ್ಷಿಸದೇ ಇದ್ದಿದ್ದರೆ ತಾನು ಮತ್ತು ತನ್ನ ಮಕ್ಕಳು ಇನ್ನು ಸ್ವಲ್ಪ ದಿನ ಸುಖವಾಗಿರುತ್ತಿದ್ದೆವು ಎಂದುಕೊಂಡು ಹೃದಯ ಭಾರವಾಯಿತು. ಹೆಂಡತಿಯೆಂದರೆ ಬರೀ ಮನೆಗನಸದವಳಲ್ಲ, ಇದು ಅರ್ಥವಾಗುವಷ್ಟರಲ್ಲಿ ಆಕೆ ನಮ್ಮೊಂದಿಗಿರಲಿಲ್ಲ. ಕತೆಗಾರ ಸಂಪಿಗೆ ವಾಸು ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಅವನ ಪತ್ನಿ ಸತ್ತು ನಾಲ್ಕು ದಿನ ಕಳೆದಿವೆ. ಅಂತ್ಯಕ್ರಿಯೆಗೆ ಬಂದ ಸಂಬಂಧಿಕರು ಒಬ್ಬೊಬ್ಬರಾಗಿ ತೆರಳಿದರು. ಕೊನೆಗೆ ಅವನು ಮತ್ತು ಅವನ ಮಕ್ಕಳು ಮಾತ್ರ ಆ ಮನೆಯಲ್ಲಿ ಉಳಿದರು.
ಅವಳು ಅವನೊಂದಿಗಿಲ್ಲ ಎನ್ನುವ ಕಟುಸತ್ಯವನ್ನು ಅವನಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅವನನ್ನು ಮತ್ತು ಅವನ ಮಕ್ಕಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳವಳು. ಅವಳು ಎಂದೂ ಮನೆ ಬಿಟ್ಟು ಹೋಗುತ್ತಿರಲಿಲ್ಲ.

ತನ್ನ ತವರುಮನೆಗೆ ಹೋದರೂ ಇವರ ಬಗ್ಗೆಯೇ ಯೋಚಿಸಿ ಬೇಗನೆ ವಾಪಸು ಬರುತ್ತಿದ್ದಳು. ನಿಜವಾಗಿ ಅವಳು ತವರಿಗೆ ಹೋಗುವುದು ಅವನಿಗೆ ಇಷ್ಟವಿರಲಿಲ್ಲ. ಅಡುಗೆ ಮತ್ತು ಇತರ ಕೆಲಸಗಳನ್ನು ಮಾಡಬೇಕಲ್ಲಾ ಎಂಬ ಸ್ವಾರ್ಥ ಅಲ್ಲಿತ್ತು ಎಂದು ಬೇರೆ ಹೇಳಬೇಕಾಗಿಲ್ಲ. ರಜಾ ದಿನಗಳಲ್ಲಿ ಅವನು ಮತ್ತು ಮಕ್ಕಳು ಟಿವಿ ನೋಡಿ ಖುಷಿ ಪಡುತ್ತಿದ್ದರೆ ಅವಳು ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರಲ್ಲಿಯೋ, ಇನ್ನಾವುದೋ ಮನೆಗೆಲಸಗಳಲ್ಲಿ ನಿರತಳಾಗಿರುತ್ತಿದ್ದಳು.

ಒಂದೊಮ್ಮೆ ಅವಳು ಟಿವಿ ನೋಡಲು ಇವರೊಂದಿಗೆ ಕುಳಿತರೂ, ಮಕ್ಕಳು ‘ಅಮ್ಮಾ… ನೀರು, ‘ಅಮ್ಮಾ…ತಿನ್ನಲು ಏನಾದರೂ ತನ್ನಿ..’ ಎಂದು ಮತ್ತೆ ಅಡುಗೆ ಮನೆಗೆ ಕಳುಹಿಸುತ್ತಿದ್ದರು.
ಹೇಳಿಸಿಕೊಳ್ಳದೆ, ಕೇಳದೆ ಎಲ್ಲಾ ಕೆಲಸಗಳನ್ನು ಅರ್ಥಮಾಡಿಕೊಂಡು ಮಾಡುತ್ತಿದ್ದಳು. ಆದರೆ ಅವಳ ಇಷ್ಟಗಳ ಗುರುತಿಸಲು ಸಾಧ್ಯವಾಗಲಿಲ್ಲ. ಅವಳನ್ನು ಚಲನಚಿತ್ರಗಳಿಗೆ ಅಥವಾ ಪ್ರವಾಸಗಳಿಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಅವಳು ಬಾಯಿ ತೆರೆದು ತನಗೆ ಏನು ಬೇಕು ಎಂದು ಯಾವತ್ತೂ ಕೇಳಲಿಲ್ಲ.

ಕಛೇರಿಯಿಂದ ತಡವಾಗಿ ಬಂದರೂ ಬೇಸರಸಿಕೊಳ್ಳುತ್ತಿರಲಿಲ್ಲ. ಹಾಲಿನವನ ಹಣ. ಪೇಪರ್ ಹಣ, ಕರೆಂಟ್ ಬಿಲ್, ಮಕ್ಕಳ ಫೀಸ್ ಕಟ್ಟೋದು ತುಂಬಾ ನೆನಪಾಯಿತು. ಬಿಪಿ ಮಾತ್ರೆ, ಶುಗರ್ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಲು ನೆನಪಿಸುತ್ತಿದ್ದಳು. ಈಗ ನೆನಪಿಸಲು ಅವಳೇ ಇಲ್ಲ.  ರಾತ್ರಿ ಎಲ್ಲಾ ಕೆಲಸ ಮುಗಿಸಿ ಮಲಗಿದಾಗ  ಮಲಗಲು ಪ್ರಯಾಸ ಪಡುತ್ತಿದ್ದ ಅವಳನ್ನು ಗಮನಿಸಲೇ ಇಲ್ಲ.

ಕೊನೆಗೆ ಎದೆನೋವು ಹೃದಯಾಘಾತದ ರೂಪದಲ್ಲಿ ಬಂದು ಅವಳನ್ನು ಸೆಳೆದುಕೊಂಡು ಹೋಗುವವರೆಗೂ ಅವನಿಗೆ ಅದನ್ನು ಗುರುತಿಸಲಾಗಲಿಲ್ಲ. ಮನೆಯಲ್ಲಿ ಎಲ್ಲವೂ ಹೊಸದು. ಅಡುಗೆ ಮನೆಯಲ್ಲಿ ಏನಿದೆಯೋ ಗೊತ್ತಿಲ್ಲ. ಬೆಳಗ್ಗೆಯಿಂದ ತಿಂದ ತಟ್ಟೆ, ಪಾತ್ರೆ ಎಲ್ಲಾ ಸಿಂಕ್‌ನಲ್ಲಿ ಬಿದ್ದಿವೆ. ಮಕ್ಕಳು ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವಳು ಮಾಡುತ್ತಿದ್ದ ಕೆಲಸಗಳೆಲ್ಲವೂ ಆಗ ಸುಲಭದವು ಎನಿಸಿತ್ತು. ಆದರೀಗ ಹೊರೆ ಎನಿಸುತ್ತಿದೆ.

ಮಕ್ಕಳು ತಮಗೆ ಬೇಕಾದ ನೂಡಲ್ಸ್ ತಿಂದು ಖಾಲಿ ಪಾಕೆಟ್ ಗಳನ್ನು ಎಲ್ಲೆಂದರಲ್ಲಿ ಎಸೆದಿದ್ದರು. ಪಾತ್ರೆಗಳನ್ನೆಲ್ಲ ತೊಳೆದ ನಂತರ ಫ್ರಿಡ್ಜ್ ನಲ್ಲಿದ್ದ ಸೇಬು ಹಣ್ಣನ್ನು ತಿಂದು ಭಾರವಾದ ಹೃದಯದಿಂದ ಬೆಡ್ ರೂಮಿನತ್ತ ನಡೆದ.

ಲೈಟ್ ಆಫ್ ಮಾಡಿ ಮಲಗುವ ಮುನ್ನ ಗೋಡೆಗೆ ನೇತು ಹಾಕಿದ್ದ ಅವಳ ಚಿತ್ರ ನೋಡಿ ಕಣ್ಣಲ್ಲಿ ನೀರು ತುಂಬಿ ಬಂತು. ಅವಳನ್ನು ನಿರ್ಲಕ್ಷಿಸದೇ ಇದ್ದಿದ್ದರೆ ತಾನು ಮತ್ತು ತನ್ನ ಮಕ್ಕಳು ಇನ್ನು ಸ್ವಲ್ಪ ದಿನ ಸುಖವಾಗಿರುತ್ತಿದ್ದೆವು ಎಂದುಕೊಂಡು ಹೃದಯ ಭಾರವಾಯಿತು.

ಕೊನೆಗೂ ಅವಳಿಗೆ “ಬಿಡುಗಡೆಯ ಭಾಗ್ಯ” ದೊರಕಿತಲ್ಲಾ ಎಂಬ ಚಿಕ್ಕ ಸಂತೋಷ ಮನದ ಮೂಲೆಯೊಂದರಲ್ಲಿ ಮೂಡಿ ನಿಟ್ಟುಸಿರು ಬಿಟ್ಟ. ಹೆಂಡತಿಯೆಂದರೆ ಬರೀ ಮನೆಗನಸದವಳಲ್ಲ,
ಪ್ರತಿ ಗಂಡನೂ ತನ್ನ ಹೆಂಡತಿಗೆ ಆಸೆ ಆಕಾಂಕ್ಷೆಗಳು ಇರುತ್ತವೆ ಎಂಬುದನ್ನು ಅರಿತು ನಡೆದರೆ ಒಳಿತು.


  • ಸಂಪಿಗೆ ವಾಸು, ಬಳ್ಳಾರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading