ಇರಾಣ ಯುದ್ಧಕ್ಕೆ ಕಾರಣವೇನು?

ಇರಾಣದ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಇರಾದೆ ಅಮೇರಿಕಾಕ್ಕೆ ಇದ್ದರೂ ಯುದ್ಧ ಮಾಡಿ ಇಷ್ಟೆಲ್ಲ ನಷ್ಟ ಅನುಭವಿಸಿ ಅದನ್ನು ಸಾಧಿಸುವುದರಲ್ಲಿ ಯಾವ ಆರ್ಥಿಕ ಜಾಣತನವೂ ಇಲ್ಲ ಎನ್ನುವ ತರ್ಕ ಅಮೇರಿಕಾದ ಆರ್ಥಿಕ ತಜ್ಞರಿಗೆ ತಿಳಿದಿರಲಾರದ ಸಂಗತಿಯೂ ಅಲ್ಲ. ಇರಾಣ ಯುದ್ಧಕ್ಕೆ ಕಾರಣ  ರಾಜಕಾರಣವೋ ಅಥವಾ ಧರ್ಮಕಾರಣವೋ ? ಚಿಂತಕರಾದ ಶ್ರೀಪಾದ್ ಹೆಗಡೆ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಈಗ ನಡೆಯುತ್ತಿರುವ ಅಮೇರಿಕ ಮತ್ತು ಇಸ್ರೇಲ್ ವಿರುದ್ಧ ಇರಾಣ ಯುದ್ಧಕ್ಕೆ ಧಾರ್ಮಿಕ ಮೂಢ ನಂಬಿಕೆಯ ಒಂದು ಆಯಾಮವೂ ಇರುವುದನ್ನು ಅಲ್ಲಗಳೆಯಲಾಗುತ್ತಿಲ್ಲ. ಮೂವತ್ತು ವರ್ಷಗಳಿಂದ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿ ಇರಾಣನ್ನು ಹಣ್ಣುಗಾಯಿ ಮಾಡಿದ ಮೇಲೂ ಬಿಡದೆ ಕಳೆದ ವರ್ಷದ ಜೂನ್ ತಿಂಗಳಲ್ಲಿ ಅಮೇರಿಕಾ ಇರಾಣನ ಅಣು ಬಾಂಬ್ ತಯಾರಿಸುವ ಘಟಕದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣವಾಗಿ ಧ್ವಂಸ ಮಾಡಿದೆ ಎಂದು ಹೇಳಿ ಕೊಂಡಿತ್ತು.

ಇದಾಗಿ ಆರು ತಿಂಗಳು ಮುಗಿಯುತ್ತಿದ್ದಂತೆ ಮತ್ತೆ ಇರಾಣಿನ ಮೇಲೆ ಅಣು ಬಾಂಬ್ ತಯಾರಿಸುತ್ತಿದೆ ಎನ್ನುವ ಸುಳ್ಳು ಆರೋಪ ಹೊರಿಸಿ ಯುದ್ಧ ಆರಂಭಿಸಿತು. ಇದೊಂದು ಸುಳ್ಳು ಆಪಾದನೆಯೆಂದು ಪ್ರತಿಯೊಬ್ಬರಿಗೂ ಗೊತ್ತಾಗಿದ್ದರೂ ಬಹಿರಂಗವಾಗಿ ಅಮೇರಿಕ ಮತ್ತು ಅದರ ಮಿತ್ರ ದೇಶಗಳ ನಾಯಕರು ಒಪ್ಪಿಕೊಳ್ಳದಿರುವುದಕ್ಕೆ ಇರುವ ರಾಜಕೀಯ ಕಾರಣವೂ ಎಲ್ಲರಿಗೂ ತಿಳಿಯುವಂತಿದೆ. ಅಣು ಬಾಂಬು ಕಾರಣವಲ್ಲವಾದರೆ ಇರಾಣದ ಮೇಲೆ ಹಗೆ ಏಕೆ ? ಎನ್ನುವ ಪ್ರಶ್ನೆ ಏಳುತ್ತದೆ. ಏಕೆ ಅಲ್ಲಿನ ಸರಕಾರವನ್ನು ಉರುಳಿಸಬೇಕು ಎನ್ನುವ ಹಟ ಅಮೇರಿಕಕ್ಕೆ ? ಇರಾಣದಲ್ಲಿ ಡೆಮಾಕ್ರಸಿಯಿಲ್ಲ, ಸ್ತ್ರೀಯರಿಗೆ ಸ್ವಾತಂತ್ರ್ಯವಿಲ್ಲ ಇತ್ಯಾದಿ ಕಾರಣಗಳು ಅಮೇರಿಕಾಕ್ಕೆ ಮುಖ್ಯವಲ್ಲ ಏಕೆಂದರೆ ಗಲ್ಫ್ ದೇಶಗಳಲ್ಲಿ ಎಲ್ಲೂ ಡೆಮಾಕ್ರಸಿಯೂ ಇಲ್ಲ ಹಾಗೆಯೆ ಸ್ತ್ರೀಯರಿಗೆ ಸ್ವಾತಂತ್ರ್ಯವೂ ಇಲ್ಲ, ಆದರೆ ಅವರೆಲ್ಲರೊಡನೆ ಅಮೇರಿಕಾದ ಬಾಂಧವ್ಯ ಚೆನ್ನಾಗಿಯೇ ಇದೆ. ಹಾಗಾಗಿ ಇರಾಣದಲ್ಲಿ ಮಾತ್ರ ಡೆಮಾಕ್ರಸಿ ಇರಬೇಕು ಎಂದು ಬಯಸುವಷ್ಟು ಮೂರ್ಖರ ನಾಡು ಅಮೇರಿಕ ಆಗಿರಲಿಕ್ಕಿಲ್ಲ. ಇನ್ನು ತೈಲೋತ್ಪನ್ನಗಳ ಮೇಲೆ ಹಿಡಿತ ಸಾಧಿಸುವ ಸಂಗತಿಯ ಬಗ್ಗೆ ವಿಚಾರ ಮಾಡಿದಾಗ ಅಮೇರಿಕಕ್ಕೆ ತನ್ನಲ್ಲಿಯೇ ಸಾಕಷ್ಟು ತೈಲ ಸಂಪತ್ತಿದೆ ಅಲ್ಲದೆ ಇರಾಣವನ್ನು ಬಿಟ್ಟು ದೊಡ್ಡ ಪ್ರಮಾಣದಲ್ಲಿ ತೈಲವನ್ನು ಉತ್ಪಾದಿಸುವ ಗಲ್ಫ್ ದೇಶಗಳು ಅಮೇರಿಕದ ಮುಷ್ಠಿ ಯಲ್ಲಿಯೇ ಇವೆ. ಇರಾಣದಲ್ಲಿ ದೊಡ್ಡ ಈ ಪ್ರಮಾಣದಲ್ಲಿ ತೈಲ ನಿಕ್ಷೇಪವಿರಬಹುದಾದರೂ ಅಮೇರಿಕ ವಿಧಿಸಿದ ಆರ್ಥಿಕ ದಿಗ್ಬಂಧನದಿಂದಾಗಿ ಕಳೆದ ಎರಡು ದಶಕಗಳಿಂದ ಜಗತ್ತಿನ ತೈಲ ಮಾರುಕಟ್ಟೆಯಲ್ಲಿ ಅದರ ಪಾಲು ಕೇವಲ 1- 5% ಮಾತ್ರ. ಇರಾಣದ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಇರಾದೆ ಅಮೇರಿಕಾಕ್ಕೆ ಇದ್ದರೂ ಯುದ್ಧ ಮಾಡಿ ಇಷ್ಟೆಲ್ಲ ನಷ್ಟ ಅನುಭವಿಸಿ ಅದನ್ನು ಸಾಧಿಸುವುದರಲ್ಲಿ ಯಾವ ಆರ್ಥಿಕ ಜಾಣತನವೂ ಇಲ್ಲ ಎನ್ನುವ ತರ್ಕ ಅಮೇರಿಕಾದ ಆರ್ಥಿಕ ತಜ್ಞರಿಗೆ ತಿಳಿದಿರಲಾರದ ಸಂಗತಿಯೂ ಅಲ್ಲ. ತುರ್ತಾದ ಯಾವ ಆರ್ಥಿಕ ಮತ್ತು ರಾಜಕೀಯ ಕಾರಣಗಳು ಇರದೆ ಒಮ್ಮೆಲೆ ಅಮೇರಿಕ ಯುದ್ಧ ಕಣಕ್ಕಿಳಿದದ್ದೇಕೆ ? ಎನ್ನುವ ಪ್ರಶ್ನೆಗೆ ಇಸ್ರೇಲಿನ ಒತ್ತಾಯ ಎನ್ನುವ ಒಂದು ಉತ್ತರ ಹೊಳೆಯುತ್ತದೆ.

ಫೋಟೋ ಕೃಪೆ : ಅಂತರ್ಜಾಲ

1948 ರಲ್ಲಿ ಎರಡನೇಯ ಮಹಾಯುದ್ಧದ ನಂತರ ಇಸ್ರೇಲ ದೇಶದ ಸ್ಥಾಪನೆಯ ಹಿಂದೆ ಯುರೋಪಿನ ಬಹುತೇಕ ದೇಶಗಳಲ್ಲಿ ಮತ್ತು ಅಮೇರಿಕದಲ್ಲಿ ನೆಲಸಿದ್ದ ಗಣನೀಯ ಪ್ರಮಾಣದ ಯಹೂದಿ ಲಾಬಿಯ ಒತ್ತಡ ಇತ್ತಾದರೂ ಅಮೇರಿಕಾದ ಕ್ರಿಶ್ಚಿಯನ್ನರಲ್ಲಿದ್ದ ಧಾರ್ಮಿಕ ನಂಬಿಕೆಯ ಪಾತ್ರ ಇದಕ್ಕಿಂತ ದೊಡ್ಡದಾಗಿತ್ತು ಎನ್ನುವುದನ್ನು ಅರಿಯಬೇಕಿದೆ. ಈ ಧಾರ್ಮಿಕ ನಂಬಿಕೆ ಬೈಬಲ್ಲಿನಲ್ಲಿ ಹೇಳಲಾದ ಭವಿಷ್ಯ ವಾಣಿಗೆ ಸಂಬಂಧಿಸಿದ್ದು. ಏಸುವನ್ನು ಶಿಲುಬೆಗೇರಿಸಿದ ಅನಂತರ ಮೂರನೇಯದಿನದಂದು ಅಂದರೆ ಈಸ್ಟರ್ ಸಂಡೆಯಂದು ಆತ ಪುನರುತ್ಥರಿಸುತ್ತಾನೆ ಮತ್ತು ಯುಗದ ಆದಿಯಲ್ಲಿ ತಾನು ಮರಳಿ ಜೆರುಸಲೇಮಿನಲ್ಲಿ ಅವತರಿಸುತ್ತೇನೆ ಎಂದು ತನ್ನ ಶಿಷ್ಯರಿಗೆ ಹೇಳುತ್ತಾನೆ. ಅದನ್ನು second coming ಎನ್ನುತ್ತಾರೆ. ಹೀಗೆ ಏಸು ಮರಳಿ ಅವತರಿಸಲಿಕ್ಕೆ ಅಲ್ಲಿನ ನೆಲ ಸಿದ್ಧಗೊಂಡಿಬೇಕಾಗುತ್ತದೆ. ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಯಹೂದಿ ಜನರ ದೇಶವೊಂದು (ಇಸ್ರೇಲ್) ಆ ನೆಲದಲ್ಲಿ ಸ್ಥಾಪನೆಯಾಗ ಬೇಕು ಮತ್ತು ಭದ್ರವಾಗಿ ನೆಲೆಯೂರಿರಬೇಕು. ಬೈಬಲ್ ಕಾಲದಲ್ಲಿ ಇಸ್ರೇಲ್ ಎಷ್ಟು ದೊಡ್ಡದಿತ್ತೋ ಅಷ್ಟು ದೊಡ್ಡದಾಗಿ ಅದು ಸಶಕ್ತವಾಗಿರಬೇಕು. (ಬೈಬಲ್ ಕಾಲದಲ್ಲಿ ಯಹೂದಿಯರ ದೇಶ ಈಗಿನ ಸಿರಿಯಾ, ಲೆಬನಾನ್, ಜೋರ್ಡಾನ, ಇಜಿಪ್ತಿನ ಕೆಲ ಭಾಗಗಳನ್ನು ಒಳಗೊಂಡಿತ್ತು ಎನ್ನಲಾಗುತ್ತದೆ.) ಆಗ ಏಸು ಅವತರಿಸಿ ದುಷ್ಟರನ್ನೆಲ್ಲ ಸದೆ ಬಡಿದು ಧರ್ಮ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾನೆ. ಯಹೂದಿಯರೂ ಸೇರಿದಂತೆ ಜಗತ್ತಿನ ಜನರೆಲ್ಲರೂ ಕ್ರಿಶ್ಚಿಯನ್ ಧರ್ಮ ಸ್ವೀಕರಿಸುತ್ತಾರೆ. ಈ ನಂಬಿಕೆ ಇರುವುದು ಇಂದು ಅಮೇರಿಕದಲ್ಲಿ 8 ಕೋಟಿಯಷ್ಟು ಇರುವ Christian Zionists ರಲ್ಲಿ. ನಮ್ಮಲ್ಲಿ ಹಿಂದುತ್ವದ ಲಾಬಿ ಇರುವಂತೆ ಅಮೇರಿಕಾದ ರಾಜಕಾರಣದಲ್ಲಿ Christian Zionists ಬಹು ದೊಡ್ಡ ಲಾಬಿ ಇದೆ.

ಅದರಲ್ಲೂ ರಿಪಬ್ಲಿಕನ್ ಪಕ್ಷ ಬಹುತೇಕ ಇವರ ಹಿಡಿತದಲ್ಲಿದೆ (ಇದು ನಮ್ಮಲ್ಲಿ ಬಿಜೆಪಿ ಹೇಗೆ ಆರ್ ಎಸ್ ಎಸ್ ಹಿಡಿತದಲ್ಲಿದೆಯೋ ಆ ರೀತಿಯದು) ಇಸ್ರೇಲ್ ದೇಶ ಸ್ಥಾಪನೆಗೆ ಈ ಲಾಬಿ ಬಹು ಮುಖ್ಯ ಕಾರಣ. ಏಸುವಿನ ಪುನರುತ್ಥಾನವಾಗುವವರೆಗೆ ಇಸ್ರೇಲನ್ನು ಸುರಕ್ಷಿತವಾಗಿ ಕಾದು ಕೊಂಡು ಬರುವ ಜವಾಬ್ದರಿಯನ್ನೂ ಈ Christian Zionists ತಮ್ಮ ಮೇಲೆ ಹೊರಿಸಿ ಕೊಂಡಿದ್ದಾರೆ. ಆ ಕಾರಣಕ್ಕಾಗಿ ಇಸ್ರೇಲಿನ ಎಲ್ಲ ಅಪರಾಧಗಳಿಗೂ ಕಳೆದ 78 ವರ್ಷಗಳಿಂದ ಅಮೇರಿಕದ ಬೆಂಬಲ ದೊರೆತಿದೆ. ಅವರಿಗೆ ಬೇಕಾಗಿರುವುದು ಇಸ್ರೇಲ್ ತನ್ನ ನೆರೆಯ ಮುಸ್ಲಿಮ್ ರಾಷ್ಟ್ರಗಳನ್ನು ಸದೆ ಬಡಿದು ಏಸುವಿನ ಪುನರಾಗಮನವಾಗುವವರೆಗೆ ಬಲಿಷ್ಟವಾಗಿ ಅದು ನಿಲ್ಲ ಬೇಕಿದೆ. ಇಸ್ರೇಲಿನ ಯಹೂದಿಯರಿಗೆ ಈ ಏಸುವಿನಲ್ಲಾಗಲಿ ಅಥವಾ ಅವನ second coming ನಲ್ಲಾಗಲಿ ನಂಬಿಕೆಯಿಲ್ಲ ಆದರೆ ತಮ್ಮ ಜನರ ಭದ್ರತೆ ಮತ್ತುಸುಖ ಜೀವನಕ್ಕೋಸ್ಕರ ಅವರು ಈ ಎಲ್ಲ ಪ್ರದೇಶಗಳನ್ನೊಳಗೊಂಡ ಗ್ರೇಟರ್ ಇಸ್ರೇಲನ್ನು ಸ್ಥಾಪಿಸುವ ಕನಸು ಕಾಣುತ್ತಿದ್ದಾರೆ. ಇವರಿಬ್ಬರ ಉದ್ದೇಶ ಮೇಲ್ನೋಟಕ್ಕೆ ಒಂದೇ ಆಗಿದ್ದರೂ ಅದರ ಹಿಂದಿರುವ ಕಾರಣಗಳು ಬೇರೆ ಬೇರೆ. ಹಾಗೆ ನೋಡಿದರೆ ಇಸ್ಲಾಮ್ ಏಸುವಿನ ಪುನುರುತ್ಥಾನವನ್ನು ಮತ್ತು ಬೈಬಲ್ ಉಪದೇಶಗಳನ್ನು ನಂಬದಿದದ್ದರೂ ಏಸುವನ್ನು ಮುಹಮ್ಮದ ಪೈಗಂಬರರಿಗಿಂತ ಮೊದಲಿನ ಪ್ರವಾದಿ ಎಂದು ಒಪ್ಪುತ್ತದೆ. ಅವನ ಉಪದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಪ್ಪು ತಪ್ಪಾಗಿ ಅನುಷ್ಟಾನಕ್ಕೆ ತಂದಿದ್ದರಿಂದ ದೇವರು(ಅಲ್ಲಾಹು) ಪೈಗಂಬರರನ್ನು ಸರಿಯಾದ ಉಪದೇಶ ನೀಡುವುದಕ್ಕಾಗಿ ಕಳಿಸಿದ ಎನ್ನುವ ತರ್ಕ ಇಸ್ಲಾಮಿನದು.

ಈಗ ಕ್ರಿಶ್ಚಿಯನ ಮತ್ತು ಯಹೂದಿ ಧರ್ಮಗಳ ಸಂಬಂಧ ಇತಿಹಾಸದುದ್ದಕ್ಕೂ ಏರುಪೇರದದ್ದನ್ನು ನೋಡೋಣ: ಏಸುವನ್ನು ಶಿಲುಬೆಗೇರಿಸಲು ಯಹೂದಿ ಧರ್ಮಾಧಿಕಾರಿಗಳ ಪಿತೂರಿಯೇ ಕಾರಣವಾಗಿತ್ತು ಎಂದು ಶತಮಾನಗಳ ಕಾಲ (19 ನೇಯ ಶತಮಾನದ ಕೊನೆಯವರೆಗೂ) ಬಹುತೇಕ ಕ್ರಿಶ್ಚಿಯನ್ನರ ನಂಬಿಕೆಯಾಗಿತ್ತು. ಹಾಗಾಗಿ ಯಹೂದಿಯರನ್ನು ದ್ವೇಷಿಸಲಾಗುತ್ತಿತ್ತು. ಈ ಆರೋಪವನ್ನು ಹೊತ್ತ ಯಹೂದಿಯರನ್ನು ಜರುಸಲೇಮ್ ಮತ್ತು ಸುತ್ತುಮುತ್ತಲಿನ ಪ್ರದೇಶದಿಂದ ಓಡಿಸಲೋಸುಗ 1095 ದಲ್ಲಿ ಯುರೋಪಿನ ಕ್ರಿಶ್ಚಿಯನ್ನರೆಲ್ಲ ಒಂದಾಗಿ ದಾಳಿ ಮಾಡಿ ಯಹೂದಿಯರನ್ನು ಒಕ್ಕಲೆಬ್ಬಿಸಿದ್ದರು. (ಇದನ್ನು ಎರಡನೇಯ Crusade ಎನ್ನುತ್ತಾರೆ) ಇದರಿಂದಾಗಿ ನೆಲೆಯಿಲ್ಲದಂತಾದ ಯಹೂದಿಯರು ಕಾಲಕ್ರಮೇಣ ಯುರೋಪಿನ ತುಂಬೆಲ್ಲ ಹರಡಿ ಹೋಗಿದ್ದರು. ಆದರೆ ಕ್ರಿಶ್ಚಿಯನ್ ದೇಶಗಳಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತಿರಲಿಲ್ಲ, ಬಹಳಷ್ಟು ಕಡೆ ಅವರನ್ನು ಎರಡನೇಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿತ್ತು. ಇಬ್ಬರ ನಡುವೆ ಎಲ್ಲ ದೇಶಗಳಲ್ಲಿಯೂ ಆಗಾಗ ಕಲಹ ನಡೆಯುತ್ತಲೇ ಇರುತ್ತಿತ್ತು. ಹೀಗಿರುವಾಗ 1880 ರ ಸುಮಾರಿಗೆ ಯಹೂದಿಯರ Zionist Movement ಶುರುವಾಯಿತು. ಜಗತ್ತಿನ ಎಲ್ಲ ಯಹೂದಿಯರನ್ನು ಒಂದುಗೂಡಿಸಿ ಜರುಸಲೇಮ್ ನೆಲದಲ್ಲಿ ಇಸ್ರೇಲ್ ದೇಶ ಸ್ಥಾಪಿಸುವುದು ಇದರ ಉದ್ದೇಶವಾಗಿತ್ತು. ಅಷ್ಟರಲ್ಲಾಗಲೆ ಬೈಬಲ್ಲನ್ನು ಮರುವ್ಯಾಖ್ಯ್ಯಾನಿಸಿ ಏಸುವಿನ ಹತ್ಯೆ ಅವನು ಮಾನವ ಕುಲದ ಪಾಪಕ್ಕಾಗಿ ಮಾಡಿದ ತ್ಯಾಗವಾಗಿತ್ತೇ ಹೊರತು ಅದಕ್ಕೆ ಯಹೂದಿಯರು ಕಾರಣರಲ್ಲ, ಅವರು ಕೇವಲ ನೆಪ ಮಾತ್ರ ಆದ್ದರಿಂದ ಅವರು ತಪ್ಪಿತಸ್ತರಲ್ಲ ಎನ್ನುವ ವಿಚಾರ ಕ್ರಿಶ್ಚಿಯನ್ ಜಗತ್ತಿನಲ್ಲಿ ಪ್ರಚಾರಗೊಂಡು ಬೇರೂರಿತ್ತು. ಈ ಆಧಾರದ ಮೇಲೆ Christian Zionism 19 ನೇ ಶತಮಾನದ ಅಂತ್ಯ ಭಾಗದಲ್ಲಿ ಜನಿಸಿತು ಮತ್ತು ಯಹೂದಿಯರ Zionist Movement ಗೆ ಜೊತೆಯಾಯಿತು. ಮೊದಲನೇಯ ಮಹಾಯುದ್ಧ ಮುಗಿದು ಒಟ್ಟಾಮನ್ ಸಾಮ್ರಾಜ್ಯದ ವಶದಲ್ಲಿದ್ದ ಜರುಸಲೇಮಿನ ಸುತ್ತುಮುತ್ತಲಿನ ಪ್ಯಾಲೇಸ್ಟೈನ್ ಪ್ರದೇಶ ಬ್ರಿಟಿಶರ ವಶಕ್ಕೆ ಬಂದ ಕಾಲದಿಂದಲೇ ಯಹೂದಿಯರನ್ನು ಅಲ್ಲಿ ನೆಲೆಗೊಳಿಸುವ ಕಾರ್ಯಾಚರಣೆಗೆ ಚಾಲನೆ ಸಿಕ್ಕಿತು. 1920 ರಲ್ಲಿ 5 ಸಾವಿರಕ್ಕಿಂತಲೂ ಕಡಿಮೆ ಇದ್ದ ಯಹೂದಿಯರ ಸಂಖ್ಯೆ 1948 ರ ಹೊತ್ತಿಗೆ ಪ್ಯಾಲೆಸ್ಟೈನ್ ಪ್ರದೇಶದಲ್ಲಿ 6-8 ಲಕ್ಷಕ್ಕೆ ಏರಿತು. ಹಿಟ್ಲರ್ ಮಾಡಿದ ಯಹೂದಿಯರ ನರಮೇಧ ವಿಶ್ವದಾದ್ಯಂತ ಯಹೂದಿಯರ ಬಗ್ಗೆ ಅನುಕಂಪದ ಅಲೆ ಏಳುವಂತೆ ಮಾಡಿತು. ಇಸ್ರೇಲ್ ಸ್ಥಾಪನೆಯಾಯಿತು. ಪ್ಯಾಲೆಸ್ಟೈನಿಯರನ್ನು ಒಕ್ಕಲೆಬ್ಬಿಸುತ್ತಾ ಆ ಪ್ರದೇಶಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು ಮತ್ತು ಅದಿನ್ನೂ ಮುಗಿದಿಲ್ಲ. ಇರಾಣನ್ನು ದುರ್ಬಲಗೊಳಿಸಿ ಗ್ರೇಟರ್ ಇಸ್ರೇಲನ್ನು ಸ್ಥಾಪಿಸುವ ಕ್ರಿಯೆಗೆ ಬರುವ ಅಡೆತಡೆಯನ್ನು ನಿವಾರಿಸಿ ಕೊಳ್ಳುವುದು ಈಗ ನಡೆಯುತ್ತಿರುವ ಯುದ್ಧದ ಉದ್ದೇಶ ಏಕೆಂದರೆ ಉಳಿದೆಲ್ಲ ಶ್ರೀಮಂತ ಅರಬ್ ದೇಶಗಳು ಅಮೇರಿಕಾದ ಕೈಗೊಂಬೆಗಳಾಗಿ ತಮ್ಮ ರಕ್ಷಣೆಯ ಹೊಣೆಯನ್ನೂ ಅಮೇರಿಕಾಕ್ಕೆ ವಹಿಸಿ ಕೂತಿರುವಾಗ ಅವು ಇಸ್ರೇಲಿನ ರಾಜ್ಯ ವಿಸ್ತಾರದ ಆಕಾಂಕ್ಷೆಗೆ ಅಡ್ದ ಬರಲಾರವು, ಅಡ್ದಿ ಮಾಡುತ್ತಿರುವುದು ಇರಾಣ ಒಂದೇ. ಅದು ಪ್ಯಾಲೆಸ್ತೈನ್ ಪರ ಮತ್ತು ಇಸ್ರೇಲ್ ವಿರುದ್ಧ ಗಿರಿಲ್ಲಾ ಯುದ್ಧ ಪಡೆಗೆ ಬೆಂಬಲವಾಗಿ ನಿಂತಿದೆ. ಆದ್ದರಿಂದ ಇರಾಣವನ್ನು ನಾಶ ಮಾಡಿದರೆ ಇಸ್ರೇಲ್ ಬಲಗೊಂಡು ಬೈಬಲ್ಲಿನಲ್ಲಿ ಹೇಳಿದ second coming ಗೆ ಬೇಕಾದ ಪ್ರಮುಖ pre-condtion ಪೂರೈಸುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಅಮೇರಿಕಾದ ರಿಪಬ್ಲಿಕ್ ಪಕ್ಷ ಆರ್ಥಿಕ ನೀತಿಯಲ್ಲಿ ಮಾತ್ರ extreme ಬಲಪಂಥೀಯವಾಗಿರದೆ ಧಾರ್ಮಿಕ ಬಲ ಪಂಥೀಯ ಪಕ್ಷವೂ ಹೌದು. ವರ್ಷದಿಂದ ವರ್ಷಕ್ಕೆ extreme ಕ್ರಿಶ್ಚಿಯನ್ ಧಾರ್ಮಿಕ ಬಲ ಪಂಥೀಯರ ಹಿಡಿತವೂ ಆ ಪಕ್ಷದ ಮೇಲೆ ಹೆಚ್ಚಾಗುತ್ತಾ ಸಾಗಿ ಬಂದಿದೆ. ಟ್ರಂಪನ ಮಂತ್ರಿ ಮಂಡಳದಲ್ಲಿ Christian Nationalism ನ ಪ್ರತಿ ಪಾದಕರೇ ತುಂಬಿದ್ದಾರೆ. Make America Great again or MAGA ಎನ್ನುವುದು Christian Nationalism ನ ರಾಜಕೀಯ ರೂಪ ಅಷ್ಟೆ. ಇವರೆಲ್ಲ ಸೇರಿ ಟ್ರಂಪನಿಗೆ You are the chose one and you are annoited by Jesus ಎಂದು ನಂಬಿಸಿ ಭ್ರಮೆ ಹಚ್ಚಿಸಿದ್ದಾರೆ. (ಇದರರ್ಥ : ಏಸುವು ನಿನ್ನನ್ನು ತನ್ನ ಪುನರುತ್ಥಾನಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಲು ನಿಯೋಜಿಸಿದ್ದಾನೆ) ಈ ನಂಬಿಕೆ ಅಮೇರಿಕಾದ ಧಾರ್ಮಿಕ ವಲಯದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚ್ ಗಳಲ್ಲಿ ಕೆಲವು ಪಾದ್ರಿಗಳು ಮಾಡಿದ ಧರ್ಮೋಪದೇಶಗಳಲ್ಲಿ ಈ ವಿಚಾರ ಪ್ರಸ್ತಾಪವಾಗುತ್ತಿರುವುದನ್ನು ನೋಡಬಹುದಾಗಿದೆ. ಭಾರಿ ಧಾರ್ಮಿಕ ಬಲ ಪಂಥೀಯನಾದ ಅಮೇರಿಕಾದ ಈಗಿನ ರಕ್ಷಣಾ ಮಂತ್ರಿ ಫೀಟ್ ಹೆಗೆಸತ್ ಸೈನಿಕರಲ್ಲೂ ಈ ವಿಚಾರವನ್ನು ಬಿತ್ತುತ್ತಿದ್ದಾನೆ ಎನ್ನುವ ವಿಷಯವೂ ಬಹಿರಂಗವಾಗುತ್ತಿದೆ. ಸೈನಿಕರನ್ನುದೇಶಿಸಿ ಇದು ದೇವರ ಆದೇಶದಂತೆ ನಡೆಯುತ್ತಿರುವ ಯುದ್ಧ ಮತ್ತು ಅಧ್ಯಕ್ಷ ಟ್ರಂಪ್ ರನ್ನು ಆ ಕೆಲಸಕ್ಕಾಗಿ ದೇವರು ನಿಯೋಜಿಸಿದ್ದಾನೆ ಎಂದು ಹೇಳಿರುವ ವರದಿಯಾಗಿದೆ.

ಇರಾಣನ್ನು ದುಷ್ಟ ರಾಷ್ಟ್ರವೆಂದು ಅವನು ಬಣ್ಣಿಸುವುದು ಮತ್ತು ಯುದ್ಧಕ್ಕೆ ದಿನಕ್ಕೊಂದು ಕಾರಣ ಅಥವಾ ನೆಪ ಹೇಳುತ್ತಾ ಜಗತ್ತಿನ ಜನರೆದುರು ಇವನೊಬ್ಬ ತಲೆ ಸರಿಯಿಲ್ಲದವ ಎನಿಸಿ ಕೊಂಡಿರುವುದು, ಜೊತೆಗೆ ಮೆಲೆ ಉಲ್ಲೇಖಿಸಿದ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಟ್ರಂಪ್ ನಿಗೂ ತಾನು ದೇವರಿಂದ ಈ ಕೆಲಸಕ್ಕೆ ನಿಯೋಜನೆ ಗೊಂಡಿದ್ದೇನೆ ಎನ್ನುವ ಭ್ರಮೆಯಾಗಿರುವ ಸಾಧ್ಯತೆ ಇದೆ.


  • ಶ್ರೀಪಾದ್ ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading