ಸಾವಿನ ಮನೆಯ ಬಾಗಿಲು ತಟ್ಟಿದಾಗ -ವಸಂತ ಗಣೇಶ್




ಒಬ್ಬ ಬೈಕ್ ರೈಡರ್ ಗೆ ಬೈಕ್ ಓಡಿಸುವುದು ರೋಚಕವಾದರೆ, ಅವನ ಮನೆಯವರಿಗೆ ಸಾವಿನ ಮನೆಯ ಬಾಗಿಲು ತಟ್ಟಿಬಂದಂತೆ. ಬೈಕ್ ಓಡಿಸುವುದು ತಪ್ಪಲ್ಲ. ಆದರೆ ನಿಮ್ಮ ಬರುವಿಕೆಗಾಗಿ ಮನೆಯ ಬಾಗಿಲಿನಲ್ಲಿ ಕಾಯುತ್ತಿರುವ ಜೀವಗಳ ಬಗ್ಗೆ ಎಂದೂ ಮರೆಯದಿರಿ ಎನ್ನುವ ಸಂದೇಶವನ್ನು ಬೈಕ್ ರೈಡರ್ ಗೆ ಈ ಕತೆಯ ಮೂಲಕ ಕತೆಗಾರ್ತಿ ವಸಂತ ಗಣೇಶ್ ಅವರು ನೀಡಿದ್ದಾರೆ. ಮುಂದೆ ಓದಿ…

ಆತ ರಾಕೇಶ್ ದ್ವಿವೇದಿ, ಕಾರಿನ ಹಿಂದಿನ ಸೀಟಿನಲ್ಲಿ ಒರಗಿ ಆರಾಮವಾಗಿ ಕುಳಿತಿದ್ದಾನೆ. ಬೆಂಗಳೂರಿನಿಂದ ಹಾಸನದತ್ತ ಹೋಗುವ ಕುಣಿಗಲ್ ರಸ್ತೆಯಲ್ಲಿ ಕಾರು ನಿಧಾನ ಗತಿಯಲ್ಲಿ ಚಲಿಸುತ್ತಿದೆ. ಸಮಯ ಬೆಳಗಿನ ೭.೩೦, ರಸ್ತೆ ಖಾಲಿ ಇದ್ದಾಗ್ಯೂ ೪೦ ರ ವೇಗ ಮಿತಿ ಮೀರದಂತೆ ಡ್ರೈವರ್ ಗೆ ಆಜ್ಞೆ ಮಾಡಿದ್ದಾನೆ ದ್ವಿವೇದಿ. ಬಿಸಿ ರಕ್ತದ ಯುವಕರು ಆದರೆ ವೇಗವಾಗಿ ಓಡಿಸುತ್ತಾರೆ ಎಂದೇ ಸುಮಾರು  ೫೦ ವಯಸ್ಸಿನ ಸಿದ್ದಯ್ಯನನ್ನು ನೇಮಿಸಿಕೊಂಡಿದ್ದಾನೆ ಕಾರು ಚಾಲಕನಾಗಿ.

ಫೋಟೋ ಕೃಪೆ : motorbikewriter

ಪಕ್ಕದಲ್ಲಿ ಝುಯ್… ಝುಯ್… ಎಂದು ಜೋರಾಗಿ ಶಬ್ದ ಮಾಡುತ್ತಾ ವಿವಿಧ ಬಣ್ಣದ, ಬಗೆ ಬಗೆಯ ಬೈಕ್ ಗಳನ್ನ ಅಡ್ಡಾದಿಡ್ಡಿ ಓಡಿಸುತ್ತಾ ಹೋಗುತ್ತಿದ್ದಾರೆ ಸವಾರರು ಚಿತ್ರ ವಿಚಿತ್ರ ಹೆಲ್ಮೆಟ್ ಧರಿಸಿ. ಈತನ ಕಾರು ಮಾತ್ರ ನಿಧಾನವಾಗಿ ಹೋಗುತ್ತಿದೆ. ಈಗ ಪಕ್ಕದಲ್ಲಿ ಕಂಡ ಬೈಕ್ ಕ್ಷಣ ಮಾತ್ರದಲ್ಲಿ ಕಣ್ಣಿಗೂ ಕಾಣದಂತೆ ಮರೆಯಾಗುವುದನ್ನು ನೋಡುತ್ತಾ ಕುಳಿತಿದ್ದ ದ್ವಿವೇದಿ ತನ್ನ ದೇಹವನ್ನೇ ಒಮ್ಮೆ ನೋಡಿಕೊಂಡು ಮತ್ತೊಮ್ಮೆ ಪಕ್ಕದಲ್ಲಿ ಪೇರಿಸಿಟ್ಟುಕೊಂಡಿದ್ದ ಪುಸ್ತಕಗಳ ಬಾಕ್ಸನ್ನು ನೋಡಿ ದೊಡ್ಡದೊಂದು ನಿಟ್ಟುಸಿರು ಬಿಟ್ಟಿದ್ದ. ಕಾರಿನ ಮಿರರ್ ನಲ್ಲಿ ಇದನ್ನು ಕಂಡ ಡ್ರೈವರ್ ಸಿದ್ದಯ್ಯ ಒಡೆಯನನ್ನು ಕುರಿತು “ಯಾಕೆ ಸರ್ ಏನಾಯ್ತು ಏನೋ ನೋವಿನಲ್ಲಿ ಇದ್ದ ಹಾಗಿದೆ” ಎಂದಿದ್ದ.

“ಏನಿಲ್ಲ ಸಿದ್ದಯ್ಯ ಹಳೆಯದು ನೆನಪಾಯ್ತು” ಅಂದ ದ್ವಿವೇದಿ. “ನಂಗೆ ಹೇಳಬಹುದಾದರೆ ಹೇಳಿ ಸರ್ ಹೇಗೂ ಸ್ಪೀಡ್ ಓಡಿಸುವಂತಿಲ್ಲ” ಎಂದಿದ್ದ.

ಮತ್ತೊಂದು ನಿಟ್ಟುಸಿರು ತಾನಾಗೇ ಹೊರ ಬಂದಿತ್ತು, ನಂತರ ದ್ವಿವೇದಿ “ಹೇಳಬಾರದ್ದು ಏನೂ ಇಲ್ಲ, ಈಗ ಹೊರಟಿರುವುದು ಅದನ್ನು ಹೇಳಲೆಂದೆ”, ಹೇಳ್ತೀನಿ ಕೇಳು ಎಂದು ಹೇಳಲು ಆರಂಭಿಸಿದ್ದ.

ದ್ವಿವೇದಿ ಅವರು ಮೂಲತಃ ದೆಹಲಿಯವರಾದರೂ ಕೆಲಸಕ್ಕಾಗಿ ಬಂದಿದ್ದು ಬೆಂಗಳೂರಿಗೆ. ರಾಕೇಶ್ ಹಾಗೂ ರಾಜೇಶ್ ಇಬ್ಬರು ಮಕ್ಕಳು ಇವರ ತಂದೆ ತಾಯಿಗೆ. ಇಬ್ಬರೂ ಬುದ್ದಿವಂತರು. ರಾಜೇಶ್ ಎಂಬಿಬಿಎಸ್ ಎಂ.ಡಿ ಮಾಡಿ ಡಾಕ್ಟರ್ ಆಗಿ ವಿದೇಶದಲ್ಲಿ ನೆಲೆಸಿದ್ದ. ರಾಕೇಶ್ ದ್ವಿವೇದಿ ಕೂಡಾ ನಗರದ ಅತ್ಯುತ್ತಮ ಕಾಲೇಜಿನಲ್ಲಿ ಉತ್ತಮ ಶ್ರೇಣಿಯಲ್ಲಿ ಇಂಜಿನಿಯರಿಂಗ್ ಮುಗಿಸಿ, ಕ್ಯಾಂಪಸ್ ಸೆಲೆಕ್ಷನ್ ಅಗಿ ಬೆಂಗಳೂರಿನ ಎಂ ಎನ್ ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದ.



ಮೊದಲಿನಿಂದ ಬೈಕ್ ಓಡಿಸುವುದು ಎಂದರೆ ಬಹಳ ಖುಷಿ ರಾಕೇಶ್ ಗೆ. ಕಾಲೇಜು ವ್ಯಾಸಂಗದ ಅವಧಿಯಲ್ಲಿ ಸಮಯ ಸಿಗುತ್ತಿರಲಿಲ್ಲ, ಜೊತೆಗೆ ಅಪ್ಪ ಅಮ್ಮನ ಕಣ್ಗಾವಲಿನಲ್ಲಿ ಸ್ವಲ್ಪ ಕಷ್ಟವೆ ಆಗಿತ್ತು. ಆದರೆ ಈಗ ಕೆಲಸಕ್ಕೆಂದು ಬೆಂಗಳೂರು ಸೇರಿದ ಮೇಲೆ ವಾರಾಂತ್ಯದ ರಜಾ ದಿನಗಳಲ್ಲಿ ಬೈಕ್ ಓಡಿಸಲು ಮತ್ತೆ ಆರಂಭಿಸಿದ್ದ, ಅದರಿಂದ ಸಿಗುವ ಥ್ರಿಲ್ ಗಾಗಿ. ಆಗ ಪರಿಚಯವಾದವನು ರವೀಂದ್ರ ರಾಥೋಡ್ , ಇವನಂತೆಯೆ ಬೈಕ್ ರೇಸ್ ಪ್ರೇಮಿ. ಇಬ್ಬರ ಹವ್ಯಾಸವೂ ಒಂದೇ ಆದ್ದರಿಂದ ಗೆಳೆತನ ಬೆಳೆಯಿತು. ಇದ್ದ ಹಳೆಯ ಬೈಕ್ಗಳನ್ನು ಮಾರಿ ತಮಗಿಷ್ಟವಾದ ಹೊಸ ಸ್ಪೋರ್ಟ್ಸ್ ಬೈಕ್ ಗಳನ್ನು ಕೊಂಡಿದ್ದರು

ಶನಿವಾರ ಭಾನುವಾರ ಹಾಗೂ ಉಳಿದ ರಜಾದಿನಗಳಲ್ಲಿ ಇಬ್ಬರೂ ಬೆಳಗಿನ ಜಾವಕ್ಕೆ ಎದ್ದು ಪ್ರಾತರ್ವಿದಿಗಳನ್ನು ಮುಗಿಸಿ ತಮ್ಮ ತಮ್ಮ ಬೈಕ್ ಏರಿ ಹೊರಟರೆ ಅದೊಂದು ಮುಗಿಯದ ಪಯಣ. ಒಂದೊಂದು ವಾರ ಒಂದೊಂದು ದಾರಿಯಲ್ಲಿ ರೇಸ್ ಹೋಗುತ್ತಿದ್ದರು. ಅದರಲ್ಲಿ ಸಿಗುವ ರೋಚಕತೆಗೆ ಮರುಳಾಗಿ, ಮುಂದೆ ಅದೇ ಒಂದು ರೀತಿಯ ಹುಚ್ಚಾಗಿ ಪರಿಣಮಿಸಿತ್ತು. ಬೈಕ್ ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಸುಮಾರು ರಾಜ್ಯಗಳನ್ನು ಸುತ್ತಿದ್ದರು. ಮೂರು ನಾಲ್ಕು ವರ್ಷಗಳಲ್ಲಿ ಕೆಲಸದಲ್ಲಿ ಬಡ್ತಿ ಸಿಕ್ಕಿ, ಒಳ್ಳೆಯ ಪೋಸ್ಟ್, ಉತ್ತಮ ಸಂಬಳ ಎಲ್ಲವೂ ಸಿಕ್ಕಿತ್ತು. ಇಬ್ಬರಿಗೂ ಮದುವೆ ಕೂಡಾ ಆಗಿತ್ತು. ಕೆಲವೊಮ್ಮೆ ಪತ್ನಿಯರ ಇಚ್ಛೆಗೆ ವಿರುದ್ಧವಾಗಿ ಕೂಡಾ ಬೈಕ್ ರೇಸ್ ಹೋಗುತ್ತಿದ್ದರು ಇಬ್ಬರೂ.

ಈ ಮಧ್ಯೆ ರಾಕೇಶ್ ದ್ವಿವೇದಿಯ ಪತ್ನಿ ಚೊಚ್ಚಿಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ತವರಿಗೆ ಹೋಗಿದ್ದಳು. ಅಂದು ರವೀಂದ್ರ ರಾಥೋಡ್ ಕೂಡಾ ಏನೋ ಕಾರಣಕ್ಕೆ ಬರಲು ಸಾಧ್ಯವಾಗಲಿಲ್ಲ. ದ್ವಿವೇದಿ ಮಾತ್ರ ಎಂದಿನಂತೆ ಶನಿವಾರ ಬೆಳಗ್ಗೆಯೇ ಎದ್ದು ಹೊರಟಿದ್ದ ತನ್ನ ಬೈಕ್ ಏರಿ.ರಸ್ತೆ ಖಾಲಿ ಇದ್ದದ್ದರಿಂದ ಬೈಕ್ ಬಿಲ್ಲಿನಿಂದ ಬಿಟ್ಟ ಬಾಣದಂತೆ ಮುನ್ನುಗ್ಗಿತ್ತು. ಸ್ಪೀಡ್ ೧೦೦ ರ ಗಾಡಿ ದಾಟಿತ್ತು, ಮನಸ್ಸು ಥ್ರಿಲ್ ನ ಪ್ರತಿ ಕ್ಷಣವನ್ನೂ ಅನುಭವಿಸುತ್ತಿತ್ತು. ಏಳೆಂಟು ಕಿಲೋಮೀಟರ್ ಕ್ರಮಿಸಿರಬಹುದು, ಅದೇನಾಯಿತೋ ಗೊತ್ತಿಲ್ಲ, ರೋಡ್ ಡಿವೈಡರ್ ಗೆ ಬೈಕ್ ಗುದ್ದಿತ್ತು. ಬೈಕ್ ಒಂದು ಕಡೆ ಬಿದ್ದರೆ ದ್ವಿವೇದಿ ಮತ್ತೊಂದು ಕಡೆ ಬಿದ್ಗಿದ್ದ. ಹೆಲ್ಮೆಟ್ ಧರಿಸಿದ ಕಾರಣ ತಲೆಗೆ ಪೆಟ್ಟಾಗಿದೆ ಉಳಿದಿತ್ತು. ಎಡಗಾಲು ಮೂಳೆ ಮುರಿದರೆ ಬಲ ಕೈ ತಿರುಚಿತ್ತು, ಬೆನ್ನು, ಭುಜ ಎಲ್ಲೆಡೆ ಗಾಯವಾಗಿ ರಕ್ತ ಧಾರಾಕಾರವಾಗಿ ಹರಿಯುತ್ತಿತ್ತು.

ಫೋಟೋ ಕೃಪೆ : bestyamahamotorcycles

ಆ ನೋವಿನಲ್ಲೂ ದ್ವಿವೇದಿ ಮೊಬೈಲ್ ತೆಗೆದು ಹತ್ತಿರದ ಆಸ್ಪತ್ರೆಗೆ ಫೋನ್ ಮಾಡುವ ಪ್ರಯತ್ನ ಮಾಡಿದ್ದ. ಅದೇ ವೇಳೆಗೆ ಅಲ್ಲಿಗೆ ಬಂದ ಮತ್ತೊಬ್ಬ ಬೈಕ್ ಸವಾರ ದ್ವಿವೇದಿ ಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದ. ವಿಷಯ ತಿಳಿದ ತಂದೆ ತಾಯಿ ಒಡಿ ಬಂದಿದ್ದರು ದೆಹಲಿಯಿಂದ. ದಿನ ತುಂಬಿದ ಪತ್ನಿಗೆ ವಿಷಯ ತಿಳಿದು ಬಿಪಿ ಹೆಚ್ಚಾಗಿ, ಸಿಜೇರಿಯನ್ ಮಾಡಿದ್ದರು. ಆಕೆ ಉಳಿದದ್ದೇ ದೊಡ್ಡದಾಯಿತು. ಮಗುವಿಗೆ ತಿಂಗಳಾದ ನಂತರ ಬಂದು ಪತಿಯನ್ನು ನೋಡಿದ್ದಳು ಆಕೆ. ಆಕೆಯ ಪುಣ್ಯವೋ, ಮಗುವಿನ ಪುಣ್ಯವೋ ಅಂತೂ ದ್ವಿವೇದಿ ಬದುಕಿ ಉಳಿದಿದ್ದ.

ಆಕ್ಸಿಡೆಂಟ್ ಅದ ಮೇಲೆ ಸುಮಾರು ಆರು ತಿಂಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದ ದ್ವಿವೇದಿ. ಮೊದಲ ದಿನ ಗಾಯಗಳನ್ನು ಸ್ವಚ್ಚ ಮಾಡಿ, ನೋವು ಶಮನಕ್ಕೆ ಔಷಧಿ ಕೊಟ್ಟ ವೈದ್ಯರು ಐದು ಬಾಟಲ್ ಗಳಷ್ಟು ರಕ್ತದ ಅವಶ್ಯಕತೆ ಇದೆ ಎಂದಿದ್ದರು. ಆಸ್ಪತ್ರೆಯ ಸಿಬ್ಬಂದಿ ದ್ವಿವೇದಿ ಕೆಲಸ ಮಾಡುವ ಕಂಪನಿಗೆ ವಿಷಯ ತಿಳಿಸಿದ್ದರಿಂದ ಅವರೆಲ್ಲ ಸೇರಿ ರಕ್ತದ ವ್ಯವಸ್ಥೆ ಮಾಡಿದ್ದರು. ನಂತರ ಮೂರು ತಿಂಗಳ ಅವಧಿಯಲ್ಲಿ ಸುಮಾರು ಆರು ಆಪರೇಶನ್ ಗಳು ನಡೆದು, ಆರು ತಿಂಗಳ ನಂತರ ತನ್ನಷ್ಟಕ್ಕೆ ತಾನು ನಡೆದಾಡುವ ಹಾಗೆ ಅದ ಮೇಲೆ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದ.

ದ್ವಿವೇದಿಗೆ ಉತ್ತಮ ಕಂಪನಿಯ ಕೆಲಸ, ಮೆಡಿಕಲ್ ಇನ್ಶುರೆನ್ಸ್ ಇತ್ತು, ಮನೆಯಲ್ಲಿ ಕೂಡಾ ಆರ್ಥಿಕವಾಗಿ ತೊಂದರೆ ಇಲ್ಲದ ಕಾರಣ ಆರು ತಿಂಗಳಿನ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗಿತ್ತು. ಮರುಹುಟ್ಟು ಪಡೆದು ಬಂದಿದ್ದ. ಮತ್ತೆಂದೂ ಬೈಕ್ ಮುಟ್ಟುವುದಿಲ್ಲ, ಹೆಂಡತಿ ಮಗು ನಂಬಿದವರ ಜೀವನದ ಜೊತೆ ಆಟ ಆಡುವುದಿಲ್ಲ ಎಂದು ನಿರ್ಧರಿಸಿದ್ದ, ಹಾಗೆಯೇ ತನಗೆ ಕಾರು ಓಡಿಸಲು ಸಾಧ್ಯವಿದ್ದರೂ ಬೇಡವೆಂದು ನಿರ್ಧರಿಸಿ ಡ್ರೈವರ್ ನೇಮಿಸಿಕೊಂಡಿದ್ದ.

ಫೋಟೋ ಕೃಪೆ :  bestyamahamotorcycles

ಆಸ್ಪತ್ರೆಯಲ್ಲಿ ಆರು ತಿಂಗಳು ಕಳೆಯುವಾಗ ತಾನು ಅನುಭವಿಸಿದ ನೋವು, ಹಿಂಸೆ ಆಪರೇಶನ್ ಗಳ ಮೇಲೆ ಆಪರೇಶನ್ ಆಗುವಾಗ ತಾನಾಗೇ ಇದೆಲ್ಲವನ್ನೂ ಮೈಮೇಲೆ ಎಳೆದುಕೊಂಡೆ ಅನಿಸಿತ್ತು. ತನ್ನೆಲ್ಲ ನೋವು, ಹಿಂಸೆಗಳು ತನ್ನಿಂದ ತನ್ನ ಕುಟುಂಬದವರಿಗೆ ಅದ ಕಷ್ಟ, ಎಲ್ಲದಕ್ಕೂ ಅಕ್ಷರ ರೂಪ ಕೊಟ್ಟು ಬರೆಡಿಟ್ಟಿದ್ದ. ಅದರ ಜೊತೆಗೆ ಆಗಾಗ ಪತ್ರಿಕೆಗಳಲ್ಲಿ ಬೈಕ್ ರೇಸ್ ನ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡವರ, ಕೈ ಕಾಲು ಕಳೆದುಕೊಂಡವರ ಕಥೆಗಳನ್ನು ಸೇರಿಸಿದ್ದ.

ಅದರಲ್ಲಿ ೧೮ ನೇ ಹುಟ್ಟು ಹಬ್ಬಕ್ಕೆ ಹಟ ಹಿಡಿದು ಬೈಕ್ ತೆಗೆದುಕೊಂಡ ಕಾರ್ಪೊರೇಟರ ಮಗನೊಬ್ಬ ಅದೇ ದಿನ ಜಾಲಿ ರೈಡ್ ಹೋಗಿ ಬರುವೆ ಎಂದು ಹೋಗಿ ಹೆಣವಾಗಿ ಬಂದ ಕಥೆಯಿತ್ತು. ಮತ್ತೊಬ್ಬ ಬೈಕ್ ಸವಾರ ಆಕ್ಸಿಡೆಂಟ್ ಒಂದರಲ್ಲಿ ಕೈ ಕಾಲು ಕಳೆದುಕೊಂಡು ಪರರ ಆಶ್ರಯದಲ್ಲಿ ಜೀವನ ಸಾಗಿಸುತ್ತಿದ್ದವನ ಕತೆಯಿತ್ತು.

೨೮ ವರ್ಷದ ಆಗಿನ್ನೂ ವಿವಾಹವಾಗಿದ್ದ ಬೈಕ್ ಸವಾರ ಅಪಘಾತಕ್ಕೆ ಈಡಾಗಿ ಇಂದಿಗೂ ಜ್ಞಾನವಿಲ್ಲದೆ, ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ನರಳುತ್ತಿರುವ ಕಥೆಯೂ ಇತ್ತು.

೩೦ ವರ್ಷದ ಆಗಸ್ಟೀನ್ ಮೆದುಳಿಗೆ ಪೆಟ್ಟಾಗಿ ಇತ್ತ ಬದುಕಲೂ ಆಗದೆ ಅತ್ತ ಸಾಯದೆ, ಪರಿವಾರದವರು ಹಣ ಹೊಂದಿಸಲು ಆಗದೆ ಕಷ್ಟ ಪಡುತ್ತಿರುವ ವ್ಯಥೆಯ ಕಥೆಯೂ ಇತ್ತು.

 

ಫೋಟೋ ಕೃಪೆ : motorbikewriter

ಇದೆಲ್ಲವನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಪ್ರಕಟಿಸಿ ತನ್ನಂತೆ ಬೈಕ್ ರೇಸ್ ಹುಚ್ಚಿಗೆ ಬಿದ್ದು ವಾರಾಂತ್ಯದಲ್ಲಿ ಹೋಗುವ ಯುವಕರಿಗೆ ಅದರಿಂದ ಆಗಬಹುದಾದ ಪರಿಣಾಮಗಳನ್ನು ತಿಳಿಸಿ ಎಚ್ಚರಿಸಲು ನಿರ್ಧರಿಸಿದ್ದ. ಪ್ರತೀ ವಾರ ಒಂದೊಂದು ಸ್ಥಳಕ್ಕೆ ಹೋಗುವ ನಿರ್ಧಾರ ಮಾಡಿದ್ದ ದ್ವಿವೇದಿ ಕುಣಿಗಲ್ ರಸ್ತೆಯಿಂದ ಆರಂಭಿಸಿದ್ದ.

ಸಿದ್ದಯ್ಯನಗೆ ಕಥೆ ಹೇಳಿ ಮುಗಿಸುವ ವೇಳೆಗೆ ಕಾರು ಬೆಂಗಳೂರು ಹಾಸನ ರಸ್ತೆಯಲ್ಲಿ ಸಿಗುವ ಹೋಟೆಲ್ “ಸ್ವಾತಿ ಡೆಲಿಕೆಸಿ” ಹತ್ತಿರ ಬಂದಿತ್ತು. ಅಲ್ಲಿಗೆ ಇವರು ತಲುಪುವ ವೇಳೆಗೆ ಬೈಕ್ ಸವಾರಿ ಮುಗಿಸಿಕೊಂಡು ಬಂದ ಯುವಕರ ದಂಡು ಸಹ ತಿಂಡಿಗಾಗಿ ಸೇರಿತ್ತು. ಎಲ್ಲರನ್ನೂ ಕುರಿತು ಒಂದಿಷ್ಟು ಮಾತನಾಡಿ, ಬೈಕ್ ಸವಾರಿಯಿಂದ ತನ್ನ ಜೀವನದಲ್ಲಿ ನಡೆದ ಘಟನೆ ಹಾಗೂ ಅದರ ಜೊತೆಗೆ ಮತ್ತಷ್ಟು ಜನರ ಕಥೆಗಳನ್ನು ಬರೆದಿದ್ದ “ಸಾವಿನ ಮನೆಯ ಬಾಗಿಲು ತಟ್ಟಿದಾಗ” ಎನ್ನುವ ಹೆಸರಿನಲ್ಲಿ #ರೋಚಕಕ್ಷಣಗಳ_ ಬೆನ್ನತ್ತಿ” ಎನ್ನುವ ಅಡಿಬರಹ ಇರುವ ಪುಸ್ತಕವನ್ನು ಎಲ್ಲರಿಗೂ ಹಂಚಿದ್ದ.

ತನ್ನ ಸ್ಥಿತಿ ನೋಡಿ ಅಥವಾ ಬರೆದ ಪುಸ್ತಕ ಓದಿ ಒಬ್ಬ ಸವಾರನಾದರೂ ಎಚ್ಚೆತ್ತುಕೊಂಡರೆ ತಾನು ಮಾಡಿದ ಕೆಲಸ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿ ತನ್ನ ಕಾರು ಹತ್ತಿದ .


  • ವಸಂತ ಗಣೇಶ್ (ಲೇಖಕಿ, ಸಾಹಿತಿಗಳು)

Leave a Reply

Home
Search
Menu
Recent
About
×