‘ಬ್ಲಡ್‌ ಮನಿ’ ಸಣ್ಣಕತೆಗಳು

ಈ ದೇಶದ ಸಹವಾಸವೇ ಸಾಕಾಗಿದೆ, ಇಂಗ್ಲೀಷಿನಲ್ಲಿ ಮಾತಾಡಿದರೂ ಅದನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ಇಲ್ಲಿನವರಿಗಿಲ್ಲ” ಎಂದ ಪ್ರಜ್ವಲ್‌. ಯಾವ ತಪ್ಪೂ ಇರದ ಪ್ರಜ್ವಲ್ನಿಗೆ ಮರಣದಂಡನೆ ಶಿಕ್ಷೆ ಘೋಷಣೆಯಾಗಿತ್ತು. ಕೋರ್ಟ್ ನಲ್ಲಿ ತೀರ್ಪು ಕೇಳಿ ಶೀಲಾಳಿಗೆ ಜಂಗಾಲವೇ ಉಡುಗಿದಂತಾಯಿತು ಮುಂದೇನಾಯಿತು  ಕತೆಗಾರ್ತಿ ಗೀತಾ ಕುಂದಾಪುರ ಅವರ ಸತ್ಯಘಟನೆ ಆಧಾರಿತ ಕತೆಯನ್ನು ತಪ್ಪದೆ ಮುಂದೆ ಓದಿ…

ಪಕ್ಕದಲ್ಲಿ ಕಾಣಿಸುತ್ತಿದ್ದ ಗದ್ದೆ, ಮರ, ಗಿಡಗಳು ದೂರವಾಗುತ್ತಾ ಬಂದು ಕೊನೆಗೆ ಎಲ್ಲವೂ ಚುಕ್ಕಿಗಳಾಗಿ ಮರೆಯಾಗಿ ಸಮುದ್ರ ತೀರ ಕಾಣಿಸಿತು. ಕಡೆಗೆ ಅದೂ ಕಣ್ಮರೆಯಾಗಿ ಕೂಗಳತೆಯಲ್ಲಿ ಮೆರವಣಿಗೆ ಹೊರಟ ಮೋಡಗಳ ದಂಡು ಕಾಣಿಸಿತು, ಮೋಡಗಳನ್ನು ಹಿಡಿಯಲು ಕೈ ಚಾಚಿದಳು, ಕೈಗೆ ಕಿಟಕಿಯ ಗ್ಲಾಸು ತಾಗಿತು. ನಾರದ ಮುನಿ ಮೋಡಗಳ ಮಧ್ಯದಲ್ಲಿ ಓಡಾಡಿಕೊಂಡಿರುತ್ತಾನೆಂದು ಬಾಲ್ಯದಲ್ಲಿ ಓದಿದ ಕತೆಗಳಲ್ಲಿತ್ತು, ಹಾಗೆ ಎಲ್ಲಿಯಾದರೂ ಕಾಣಿಸಿಯಾನು ಎಂದು ಹಣಕಿದಳು.

“ವಾಟರ್‌ ಪ್ಲೀಸ್‌” ಎನ್ನುವ ಮಾತು ಕೇಳಿಸಿತು, ಹೊರಳಿದರೆ ಗಗನಸಖಿ ತಟ್ಟೆಯಲ್ಲಿ ನೀರು ಹಿಡಿದುಕೊಂಡು ಇವಳ ಮುಖವನ್ನೇ ನೋಡುತ್ತಿದ್ದಳು. ಯಾರೂ ಇಷ್ಟು ಉಪಚಾರ ಮಾಡಿದವರಿಲ್ಲ, ಬೇಡವಾಗಿದ್ದರೂ ನೀರಿನ ಲೋಟವನ್ನು ಬಾಯಿಗಿರಿಸಿಕೊಂಡಳು. ಮೊಬೈಲ್‌ ಓಪನ್‌ ಮಾಡಿ ಪ್ರಜ್ವಲನ ಮೆಸೇಜಿನ ಮೇಲೆ ಕಣ್ಣಾಡಿಸಿದಳು “ಶೀಲೂ…ನಾಲ್ಕೇ ನಾಲ್ಕು ಗಂಟೆ ಬೆಂಗಳೂರಿನಿಂದ ದಮಾಮ್ಗೆ, ಓಡಬೇಡ, ಹಾರಿಕೊಂಡು ಬಾ, ಹಾಂ… ವಿಮಾನದಲ್ಲಿ ಕೂತು ಹೆದರ್ಕೋಬೇಡ ಮರಿ” ನಗು ಬಂತು ಅವಳಿಗೆ, ಉತ್ತರವಾಗಿ “ನಾನೇನೂ ಹೆದರು ಪುಕ್ಕಳಲ್ಲ ಕಣೋ ನಮ್ಮ ತರೀಕೆರೆಯಲ್ಲೇ ಅತ್ಯಂತ ಧೈರ್ಯದ ಹುಡುಗಿ ನಾನು” ಹಾಗೆ ಬರೆದಿದ್ದರೂ ವಿಮಾನ ಮೇಲೇರುವಾಗ ಎದೆ ವೇಗವಾಗಿ ಹೊಡೆದುಕೊಂಡಿತ್ತು, ಎದುರಿಗೆ ಬರುವ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದರೆ!! ಇಲ್ಲಾ ಆಯ ತಪ್ಪಿ ವಿಮಾನ ಕೆಳಗೆ ಜಾರಿದರೆ!! ಅಲ್ಲಸಲ್ಲದ ಹೆದರಿಕೆಗಳು ಅವಳನ್ನು ದಾಳಿ ಇಟ್ಟವು, ಅವಳ ಹೆದರಿದ ಮುಖ ಕಂಡು ಪಕ್ಕದವ ನಕ್ಕಿದ್ದ.

ಕೂದಲೆಳೆಯೂ ಅಲುಗಾಡದಂತೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ವಿಮಾನ ಆಕಾಶದಲ್ಲಿ ಹಾರುತ್ತಿತ್ತು, ಎದುರಿಗಿರುವ ಮಾನಿಟರಿನಲ್ಲಿ ವಿಮಾನ ಅರಭಿ ಸುಮುದ್ರದ ಮೇಲೆ 35,000 ಅಡಿಗಳಷ್ಟು ಮೇಲಿದೆ ಎಂದು ತೋರಿಸುತ್ತಿತ್ತು, ಆದರೆ ಅವಳ ಮನಸ್ಸು ತನ್ನೂರಾದ ತರೀಕೆರೆ ಸುತ್ತ ತಿರುಗುತ್ತಿತ್ತು.

ಚಿಕ್ಕವಳಿರುವಾಗಲೇ ತಂದೆ, ತಾಯಿ ಕಾರ್‌ ಅಕ್ಸಿಡೆಂಟಿನಲ್ಲಿ ತೀರಿ ಹೋಗಿ ತರೀಕೆರೆಯಲ್ಲಿರುವ ಚಿಕ್ಕಪ್ಪ, ಚಿಕ್ಕಮ್ಮನ ಗೂಡು ಸೇರಿದ್ದಳು. ಚಿಕ್ಕಪ್ಪನಿಗೆ ಎರಡು ಗಂಡು ಮಕ್ಕಳು, ಸಿಡುಕು ಮುಖದ ಚಿಕ್ಕಮ್ಮ ಆಗಾಗ ಗುಡುಗಿದರೂ ಹೆಣ್ಣು ಮಕ್ಕಳಿಲ್ಲದ ಚಿಕ್ಕಮ್ಮ ಅವಳ ಮೇಲೆ ಪ್ರೀತಿ ಉಕ್ಕಿ ತಲೆಗೆ ಎಣ್ಣೆ ಹಚ್ಚಿ ತಿಕ್ಕಿ ಸ್ನಾನ ಮಾಡಿಸುತ್ತಿದ್ದರು, ದೊಸೆಯ ಮೇಲೆ ಚೂರೂ ಹೆಚ್ಚೇ ತುಪ್ಪ ಹಾಕುತ್ತಿದ್ದರು. ಇವಳು ತಾನು ಹೆತ್ತ ಮಗಳಲ್ಲ ಎನ್ನುವ ಆಲೋಚನೆ ಬಂದಾಗ ಕೈಗೆ ಸಿಕ್ಕಿದ್ದರಲ್ಲಿ ಹೊಡೆದು ಸಿಟ್ಟು ತೀರಿಸುತ್ತಿದ್ದರು. ಚಿಕ್ಕಮ್ಮನ ಸಿಟ್ಟು, ಪ್ರೀತಿಯನ್ನು ಒಟ್ಟೊಟ್ಟಿಗೆ ಉಂಡವಳು ರೆಪ್ಪೆ ಮಿಟಿಕಿಸುವುದರಲೆಂಬಂತೆ ದೊಡ್ಡವಳಾದಳು, ಡಿಗ್ರಿ ಮುಗಿಸಿ ಆಡಿಟರ್‌ ಆಫೀಸಿನಲ್ಲಿ ಕೆಲಸಕ್ಕೆ ಸೇರಿದಳು. ಸುಂದರಿಯಾದ ಅವಳಿಗೆ ಹತ್ತಾರು ಸಂಬಂಧಗಳು ಹುಡುಕಿಕೊಂಡು ಬಂದವು, ಏಕೋ ಇಷ್ಟವಾಗದೆ ಎಲ್ಲವನ್ನು ಮುಲಾಜಿಲ್ಲದೆ ದೂರ ತಳ್ಳಿದಳು. ಕಡೆಗೆ ಸೌದಿಯ ದಮಾಮ್ನಲ್ಲಿರುವ 6 ಅಡಿ ಎತ್ತರದ ಎಣ್ಣೆಗಪ್ಪು ಬಣ್ಣದ ಪ್ರಜ್ವಲ್‌ನ ಸಂಬಂಧ ಬಂತು, ವಾಟ್ಸಪ್‌ ಕಾಲ್‌, ವಿಡಿಯೋ ಕಾಲ್‌ ನಲ್ಲಿ ಸಂದರ್ಶನ ಮುಗಿಯಿತು, ನಗುತ್ತಾ ಮಾತಾಡುವ ಪ್ರಜ್ವಲ್‌ ಅವಳಿಗೆ ಇಷ್ಟವಾದ. 4-5 ತಿಂಗಳಲ್ಲಿ ಮದುವೆಯೂ ಆಯಿತು.

ಮದುವೆಯಾಗಿ ಮದರಂಗಿ ಅಳಿಸುವ ಮುನ್ನವೇ ಪ್ರಜ್ವಲ್ ದಮಾಮ್ಗೆ ವಿಮಾನ ಹತ್ತಿದ್ದ, ಅದರೊಂದಿಗೆ ಇನ್ನಾರು ತಿಂಗಳೊಳಗೆ ವೀಸಾ ಸಿಗುತ್ತದೆ, ಕರೆಸಿಕೊಳ್ಳುತ್ತೇನೆ ಎನ್ನುವ ಪ್ರಾಮಿಸ್‌ ಬೇರೆ ಕೊಟ್ಟಿದ್ದ. 6 ತಿಂಗಳಲ್ಲದಿದ್ದರೂ 7-8 ತಿಂಗಳೊಳಗೆ ವೀಸಾ, ಟಿಕೆಟ್‌ ಬಂದಿತ್ತು.

ಶೀಲಾಳನ್ನು ಕರೆದುಕೊಂಡು ಹೋಗಲು ಏರ್ಪೋರ್ಟಿಗೆ ಪ್ರಜ್ವಲ್ ಬಂದಿದ್ದ. ಮರಳುಗಾಡಿನ 1 ಬಿಎಚ್‌ಕೆ ಮನೆಯಲ್ಲಿ ಅವರ ಸಂಸಾರ ಶುರುವಾಯಿತು. ಪ್ರಜ್ವಲನಿಗೆ ಕನ್ಸಟ್ರಕ್ಶನ್‌ ಕಂಪೆನಿಯಲ್ಲಿ ಕೆಲಸ, ಆಫೀಸ್‌ ಕೆಲಸವಾದರೂ ಕೆಲವೊಮ್ಮೆ ಸೈಟಿಗೆ ಹೋಗಬೇಕಿತ್ತು, ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ, ರಾತ್ರಿ ಮಾತ್ರ ಮನೆಗೆ ಬರುವಾಗ 7 ಗಂಟೆ ಕಳೆದಿರುತ್ತಿತ್ತು. ಕಿಟಕಿಗಳೇ ಇಲ್ಲದ ಮರಳುಗಾಡಿನ ಮನೆಯಲ್ಲಿ ಎತ್ತ ತಿರುಗಿದರೂ ಗೋಡೆಗಳೇ ಕಾಣಿಸುತ್ತಿದ್ದವು ಅವಳಿಗೆ. ಅಪ್ಪಿ ತಪ್ಪಿ ಬಾಗಿಲು ತೆರೆದರೆ ಉರಿ ಬಿಸಿಲು, ನುಣ್ಣಗೆ ಶೇವ್‌ ಮಾಡಿದಂತಿರುವ ರೋಡಿನ ಮೇಲೆ ಹುಚ್ಚು ಸ್ಪೀಡನಲ್ಲಿ ಓಡುವ ಕಾರುಗಳು. ದೊಡ್ಡದು, ಸಣ್ಣದು ಎನ್ನುತ್ತಾ ಹಲವು ತರಹದ ಕಾರುಗಳಿದ್ದರೂ ಬೈಕ್‌, ಸ್ಕೂಟರ್‌, ಸೈಕಲ್‌ ಯಾಕಿಲ್ಲ? ಇನ್ನೊಮ್ಮೆ ಭಾರತಕ್ಕೆ ಹೋಗಿ ಬರುವಾಗ ತನ್ನ ಸ್ಕೂಟರ್‌ ತರಬೇಕು, ಕಡೆಗೆ ತರುವುದಾದರೂ ಹೇಗೆ ಸೂಟ್ಕೇಸಿನಲ್ಲಿ ತುಂಬಿಸಿಕೊಂಡು ತರಲಾದೀತೇ? ತನ್ನ ಆಲೋಚನೆಗೆ ತಾನೇ ನಕ್ಕಳು, ಪ್ರಜ್ವಲನ ಹತ್ತಿರ ದೊಡ್ಡ ಕೆಂಪು ಬಣ್ಣದ ಕಾರಿತ್ತು, ಅದರೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡು ಊರಿಗೆ ಕಳುಹಿಸಿ ಸಂತೋಷಪಟ್ಟಳು. “ಪ್ರಜೂ… ನಂಗೂ ಕಾರ್‌ ಡ್ರೈವ್‌ ಹೇಳ್ಕೋಡೋ, ಬೇಗ ಕಲ್ತಕೊತಿನಿ, ನಂಗೂ ಡ್ರೈವಿಂಗ್‌ ಗೊತ್ತು, ತರೀಕೆರೆಯ ಎಲ್ಲಾ ರೋಡಿನಲ್ಲಿ ಹೋಂಡಾ ಸ್ಕೂಟರ್‌ ಓಡಿಸ್ತಿದ್ದೆ” ಎಂದು ಆಗಾಗ ಅವನನ್ನು ಕೇಳುತ್ತಿದ್ದಳು, ಅವನೋ “ಇದು ನಿನ್ನ ತರೀಕೆರೆಯಲ್ಲ, ಇಲ್ಲಿ ಏನಾದರೂ ಅಕ್ಸಿಡೆಂಟ್‌ ಆಗಿ ಯಾರಾದರೂ ಸತ್ತರೆ ಸೀದಾ ಗಲ್ಲುಗಂಬಕ್ಕೆ ಏರಿಸುತ್ತಾರೆ” ಎಂದು ಹೆದರಿಸುತ್ತಿದ್ದ.

“ಶೀಲೂ, ಗೊತ್ತೇನೇ ನಿಂಗೆ ನಮ್ಮ ಆಫೀಸಿನಲ್ಲಿ 25-30 ದೇಶದ ಜನರಿದ್ದಾರೆ, ಪಾಕಿಸ್ತಾನದವರೂ ಇದ್ದಾರೆ ಕಣೇ, ನನ್ನ ಪಕ್ಕ ಕುಳಿತುಕೊಳ್ಳೋದು ಸುಡಾನ್‌ ದೇಶದ ಇಬ್ತಿಸಾಮ್‌, ಅವಳು ಹರುಕು, ಮುರುಕು ಇಂಗ್ಲೀಷಿನಲ್ಲಿ ಮಾತಾಡ್ತಾಳೆ, ಪಾಪದವಳು, ನನ್ನ ಹತ್ರ ಏನನ್ನೂ ಮುಚ್ಚಿಡದೆ ಹೇಳ್ತಾಳೆ ಕಣೇ, ಅವಳಿಗೆ ಇಂಗ್ಲೀಷ್‌ ಸ್ಪೆಲ್ಲಿಂಗಿನದ್ದೇ ದೊಡ್ಡ ತಾಪತ್ರಯ, ಅವಳಿಗೆ ಸ್ಪೆಲ್ಲಿಂಗ್‌ ಹೇಳಿಕೊಟ್ಟು, ಹೇಳಿಕೊಟ್ಟು ನಂಗೆಲ್ಲಿ ಮರ್ತು ಹೋಗತ್ತೇನೋ ಅನ್ನೋ ಭಯ ಕಣೇ”.

ಗಂಡ ಆಫೀಸಿನ ಸುದ್ಧಿ ಹೇಳಿದಾಗಲೆಲ್ಲಾ ಇಬ್ತಿಸಾಮ್‌ಳ ಸುದ್ಧಿ ಹೆಚ್ಚು, ಹೆಚ್ಚು ನುಸುಳುವುದನ್ನು ಕೇಳಿ ಅವಳಿಗೆ ಹೊಟ್ಟೆಕಿಚ್ಚೋ, ಅನುಮಾನವೋ, ಮತ್ತೇನೋ ಶುರುವಾಯಿತು.
“ಅಲ್ರೀ ಇಬ್ತಿಸಾಮ್‌ ನೋಡೋಕೆ ಹೇಂಗಿದ್ದಾಳೆ, ಮದ್ವೆ ಆಗಿದ್ಯಾ ಹೇಗೆ?”

“ಹೆಂಗಸರ ಬುದ್ಧಿ ಅನ್ನೋದು ಇದಕ್ಕೇ, ಎಲ್ಲದ್ರಲ್ಲೂ ಅನುಮಾನ, ಅವಳ ಎತ್ತರ 5 ಅಡಿ, 6 ಇಂಚಾದರೂ ಇರಬಹುದು, ಎಣ್ಣೆಗಪ್ಪು ಬಣ್ಣ, ಗುಂಡು, ಗುಂಡಾಗಿದ್ದಾಳೆ, ಅವಳ ಗಂಡ ಅನ್ವರ್‌ನಿಗೆ ದಮಾಮ್‌ನಲ್ಲೇ ಕೆಲ್ಸ. ಮತ್ತೊಂದು ವಿಶೇಷ ಗೊತ್ತಾ? ಸುಡಾನಿನ ಇಬ್ತಿಸಾಮ್‌ ಸೀರೆ ಉಟ್ಕೊಂಡು ಆಫೀಸಿಗೆ ಬರ್ತಾಳೆ, ಸೀರೆ ನಮ್ಮ ತರಹನೇ ಇದ್ರೂ ಉಡೋ ರೀತಿ ಬೇರೆ ತರಹ, ತಲೆ ಮೇಲೆ ಸೆರಗು ಹೊದ್ಕೋತಾಳೆ, ಕೈಯಲ್ಲಿ ಯಾವತ್ತೂ ಮದುರಂಗಿಯ ಚಿತ್ತಾರ, ಮಾಡರ್ನೂ ಹೌದು, ಮೇಕಪ್‌, ಲಿಪಸ್ಟಿಕ್‌ ಎಲ್ಲಾ ಜೋರಾಗಿರುತ್ತೆ”.

ಪ್ರಜ್ವಲನ ವಿವರಣೆಯ ಆದಾರದ ಮೇಲೆ ಇಬ್ತಿಸಾಮ್‌ಳನ್ನು ಮನದಲ್ಲಿ ಕಲ್ಪಿಸಿಕೊಂಡಳು, ಮೊದಲು ಅನುಮಾನವಿದ್ದರೂ ಕಡೆಗೆ ಗಂಡನ ಮಾತಿನಲ್ಲಿದ್ದ ಪ್ರಾಮಾಣಿಕತೆಯಿಂದ ಅವಳಿಗೆ ಸಮಾಧಾನವಾಯಿತು.

“ಪ್ರಜ್ವಲ್ ನಾನೂ ಕೆಲ್ಸಕ್ಕೆ ಸೇರ್ತೀನಿ, ಎಷ್ಟು ದಿನ ಅಂತ ಈ ಗೋಡೆ ನೋಡ್ಕೊಂಡು ಇರೋದು? ಒಬ್ಬಳೇ ಇದ್ದಾಗ ಈ ಗೋಡೆಗಳೂ ನಂಗೆ ಹೆದರಿಸುತ್ತವೆ” ಎಂದವಳು ಪೇಪರ್‌ನಲ್ಲಿ ಬಂದ ಜಾಹಿರಾತು ತೋರಿಸಿ, ಒಂದೆರಡಕ್ಕೆ ಫೋನ್ ಮಾಡಿರುವುದಾಗಿಯೂ ಹೇಳಿದಳು.

ಕೆಲ ದಿನಗಳಲ್ಲಿ ಶೀಲಾಗೆ ಇಂಟರ್ವೂಗೆ ಕರೆ ಬಂತು, ಒಂದೆರಡು ಸಂದರ್ಶನ ಮುಗಿಸುವಷ್ಟರಲ್ಲಿ ಶೀಲಾಗೆ ಕಂಪೆನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಇಬ್ಬರೂ ಒಟ್ಟಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಜೀವನ ನಿರಾಳವಾಗಿ ಸಾಗುತ್ತಿತ್ತು, ಇಬ್ಬರೂ ದುಡಿಯುವುದರಿಂದ ಬ್ಯಾಂಕ್‌ ಬ್ಯಾಲೆನ್ಸ್‌ ಸಹ ಏರುತ್ತಿತ್ತು, ಇನಕಮ್‌ ಟ್ಯಾಕ್ಸ್‌ ಇಲ್ಲದ ಸಂಬಳ ಸ್ವಲ್ಪ ಹೆಚ್ಚೇ ಸಂತೋಷ ಕೊಡುತ್ತಿತ್ತು. ವಾರಕ್ಕೊಮ್ಮೆ ಇಬ್ಬರೂ ತಮ್ಮ, ತಮ್ಮ ಮನೆಗೆ ಫೋನ್‌ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು.

ಒಂದು ರಾತ್ರಿ ಸೀಟಿ ಹೊಡೆಯುತ್ತಿದ್ದ ಕುಕ್ಕರನ ಬಾಯಿ ಮುಚ್ಚಿಸಿ ಎಂದಳು “ಪ್ರಜ್ವಲ್ ನಿನ್ನೆ ನನ್ನ ಫ್ರೆಂಡ್‌ ರೂಪ ಫೋನ್‌ ಮಾಡಿದ್ದಳು, ಸಪೂರ ಉದ್ದಕ್ಕೆ ಇದ್ದಳಲ್ಲ, ನೀವು ಅವಳಿಗೆ ಪರಕೆ ಕಡ್ಡಿಯೋ, ಮತ್ತೇನೋ ಎಂದು ಹೇಳಿದರಲ್ಲ ಅವಳೇ.. ಅವಳ ಗಂಡ ಬೆಂಗಳೂರಿನಲ್ಲಿ ಪ್ರಾಪರ್ಟಿ ಡೀಲರ್‌, ಒಂದು ಸೈಟ್‌ ತೆಗೊಳ್ಳೇ ಅಂತ ಹೇಳಿದಳಪ್ಪ, ಜಾಗ ಖರೀದಿಸಿದರೆ ಅದಕ್ಕೆ ವ್ಯಾಲ್ಯೂ ಇದೆ ಎಂದಳು, ಅವಳು ಹಾಗೆಲ್ಲಾ ಸುಳ್ಳು ಹೇಳೋಲ್ಲ, ರಿಜೆಸ್ಟ್ರೇಶನ್‌ ಎಲ್ಲಾ ಸೇರಿ 70 ಲಕ್ಷ ಆಗುತ್ತೆ ಎಂದಳಪ್ಪ”.

“ಶೀಲೂ.. ಅಲ್ವೇ ಅಷ್ಟೊಂದು ಹಣ ಎಲ್ಲಿಂದ ತರೋದು? ನಂದೂ, ನಿಂದೂ ಸೇವಿಂಗ್‌ ಸೇರ್ಸಿದ್ರೆ 30-35 ಲಕ್ಷ ಆಗ್ಬಹುದು, ಉಳಿದದ್ದು ಎಲ್ಲಿ ಕದಿಯಲಿ ಹೇಳು? ಉಳಿದ ಹಣಕ್ಕೆ ಬ್ಯಾಂಕ್‌ ದರೋಡೆಯೇ ಮಾಡ್ಬೇಕು, ಮಾಡೋದಿದ್ರೆ ಮಾಡು, ನಂಗಂತೂ ಆಗಲಪ್ಪ” ಎಂದ.

ಅವಳಿಗೆ ನಿರಾಶೆಯಾಯಿತು, ಆದ್ರೂ ಆಗಾಗ ಹೇಳುವುದನ್ನು ಬಿಡಲಿಲ್ಲ. ಪ್ರಜ್ವಲನಿಗೂ ಜಾಗದ ಮೇಲಿನ ಆಸೆ ಬಲಿಯಿತು, ಅಲ್ಲಿನ ಬ್ಯಾಂಕ್‌ ಒಂದರಲ್ಲಿ ಸಾಲ ತೆಗೆದು ಜಾಗ ಖರೀದಿಸಿದರು. ಜಾಗ ಖರೀದಿಸಿದ ಒಂದೆರಡು ತಿಂಗಳಲ್ಲಿ ಶೀಲಾ ಬಸುರಿಯಾದಳು.

“ಇಬ್ತಿಸಾಮ್‌ ಬಹಳ ಬೇಜಾರಿನಲ್ಲಿದ್ದಾಳೆ ಕಣೇ, ಮದ್ವೆಯಾಗಿ 7-8 ವರ್ಷವಾದ್ರೂ ಬಸುರಿಯಾಗಿಲ್ಲವಂತೆ, ಮೊನ್ನೆಯಂತೂ ಅತ್ತು ಇಂಡಿಯಾದಲ್ಲಿರುವ ಬಾಬಾಗಳ ಹತ್ರ ಔಷಧಿ ತೆಗೊಂಡ್ರೆ ಬಸುರಿಯಾಗ್ಬಹುದು ಅಂತ ಯಾರೋ ಹೇಳಿದ್ರಪ್ಪ, ಇಂಡಿಯಾಗೆ ಕರೆದುಕೊಂಡು ಹೋಗು ಅಂತ ಒಂದೇ ಸಮನೆ ಹಟ ಹಿಡಿಯುತ್ತಿದ್ದಾಳೆ” ಎಂದ.

ಶೀಲಾಗೆ ರೇಗಿತು, “ಅಲ್ರೀ ಊರನಲ್ಲಿರುವವರೆಲ್ಲರ ಚಿಂತೆ ನಿಮ್ಮ ತಲೆಯ ಮೇಲೆಯೇ ಇದ್ದ ಹಾಗಿದೆ, ಅವಳೇನು ನಿಮ್ಮ ತಂಗಿನಾ? ಮಾವನ ಮಗಳಾ? ಅಷ್ಟೊಂದು ಚಿಂತಿಸೋಕೆ, ಅವರು ಗಂಡ, ಹೆಂಡತಿ ಏನಾದ್ರೂ ಮಾಡ್ಕೋತಾರೆ” ಎಂದಳು.

“ಅಲ್ವೇ ಮನುಷತ್ವ ಅನ್ನೋದು ಸ್ವಲ್ಪವಾದ್ರೂ ಇರ್ಬೇಕು ತಾನೇ? ನಿನ್ನ ಹಂಗೆ ಅವಳೂ ಹೆಣ್ಣು, ಅವಳಿಗೆ ಮಗುವಾಗಿಲ್ಲ ಅನ್ನೋ ತಲೆ ಬಿಸಿ ಒಂದ್ಕಡೆ, ಗಂಡ ಬೇರೆ ಮದ್ವೆ ಮಾಡ್ಕೋತಾನೆ ಅನ್ನೋ ಹೆದರಿಕೆ ಮತ್ತೊಂದು ಕಡೆ” ಎಂದ.

“ಅದಕ್ಕೆಲ್ಲಾ ಮಂಡೆ ಬಿಸಿ ಮಾಡ್ಕೋಬೇಡಿ, ನಿಮ್ಮ ಮಗಳು ಏನೋ ಅಂತಿದ್ದಾಳೆ, ಕೇಳಿ” ಎನ್ನುತ್ತಾ ತನ್ನ ಹೊಟ್ಟೆಯ ಮೇಲೆ ಅವನ ಮುಖವನ್ನು ಇರಿಸಿ ಅವನ ಬೇಸರವನ್ನು ಓಡಿಸಲು ನೋಡಿದಳು.

ಮತ್ತೊಂದೆರಡು ವಾರ ಪ್ರಜ್ವಲ್ ಚಿಂತೆಯಲ್ಲಿ ಇದ್ದಂತೆ ಅವನ ಹಣೆಯ ಹುಬ್ಬು ಸದಾ ಗಂಟಿಕ್ಕಿಕೊಂಡಿರುತ್ತಿತ್ತು, ಮಾತಾಡಿಸಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ, ಶೀಲಾ ತನ್ನ ಕೆಲಸದ ಗಡಿಬಿಡಿಯಲ್ಲಿ ಏನೆಂದು ಕೇಳಲೂ ಹೋಗಲಿಲ್ಲ.

ಉಣ್ಣುತ್ತಿದ್ದ ಅನ್ನದಲ್ಲಿ ಕಲ್ಲು ಹುಡುಕುವಂತೆ ಬಟ್ಟಲಲ್ಲಿದ್ದ ಅನ್ನವನ್ನು ಆಚೀಚೆ ಮಾಡುತ್ತಿದ್ದ ಪ್ರಜ್ವಲ್ ತಲೆ ಎತ್ತಿ “ಇಬ್ತಿಸಾಮ್‌ಳ ಗಂಡ ಬೇರೊಂದು ಮದ್ವೆ ಮಾಡ್ಕೊಂಡಿದ್ದಾನಂತೆ, ಇವಳು ವಾಪಸ್ಸು ಸುಡಾನ್‌ಗೆ ಹೊರಟಿದ್ದಾಳೆ ಕಣೇ” ಎಂದ, ಹಾಗೆನ್ನುವಾಗ ಅವನ ಗಂಟಲು ಕಟ್ಟಿ ಬಂತು. ಶೀಲಾಳಿಗೆ ಮಾತ್ರ ನಿರಾಳವೆನಿಸಿತು, ಅವಳು ಅವಳ ದೇಶಕ್ಕೆ ಹೋದ ಮೇಲಾದರೂ ಗಂಡ ತನ್ನ, ಮತ್ತು ಹುಟ್ಟಲಿರುವ ಮಗುವಿನ ಬಗ್ಗೆ ಕಾಳಜಿ ತೋರಿಸಬಹುದೇನೋ ಎನಿಸಿತು, ಎರಡು ನಿಮಿಷ ಬಿಟ್ಟು ಇಬ್ತಿಸಾಮ್‌ಳ ಬಗ್ಗೆ ಸ್ವಲ್ಪ ಬೇಸರವೂ ಆಯಿತು.
–‌
ಆಫೀಸಿನಲ್ಲಿ ಕೆಲಸ ಮಾಡ್ತಿದ್ದ ಶೀಲಾಳ ಮೊಬೈಲಿಗೆ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಅನಾಮಧೇಯ ಕರೆಯೊಂದು ಬಂತು, ಎತ್ತಲೋ, ಬೇಡವೋ ಎಂದುಕೊಂಡವಳು ಕಡೆಗೆ ಹಸಿರು ಬಟನ್‌ ಒತ್ತಿ ರಿಸೀವ್‌ ಮಾಡಿದಳು. ಅತ್ತಲಿಂದ ಬಂದ ಗಂಭೀರ ಧ್ವನಿ “ನೀವು ಪ್ರಜ್ವಲ್ ಅವರ ಮಿಸೆಸ್‌ ಅಲ್ವಾ? ನಾನು ಅವನ ಕಲೀಗ್‌ ಸುಂದರ್‌ ಅಂತ, ನಮ್ಮ ಕಲೀಗ್‌ ಇಬ್ತಿಸಾಮ್‌ ಮೃತ ಪಟ್ಟಿದ್ದಾಳೆ, ಅಕ್ಸಿಡೆಂಟ್‌ ಕೇಸ್‌, ಸ್ಪಾಟ್‌ ಡೆತ್‌, ಕಾರ್‌ ಡ್ರೈವ್‌ ಮಾಡುತ್ತಿದ್ದ ಪ್ರಜ್ವಲನನ್ನು ಪೊಲೀಸರು ವಿಚಾರಣೆಗಾಗಿ ಸ್ಟೇಷನ್ನಿಗೆ ಕರೆದುಕೊಂಡು ಹೋಗಿದ್ದಾರೆ. ನೀವು ಹೆದರಿಕೊಳ್ಳಬೇಡಿ, ನಾವು ನೋಡಿಕೊಳ್ಳುತ್ತೇವೆ” ಎಂದು ಫೋನಿಟ್ಟ.

ಹೆದರಿಕೊಳ್ಳಬೇಡಿ ಎಂದೇನೋ ಹೇಳಿದರು, ಗಂಡ ಪೋಲೀಸ್‌ ಸ್ಟೇಷನಲ್ಲಿದ್ದರೆ ಯಾವ ಹೆಂಡತಿ ಹೆದರಿಕೊಳ್ಳುವುದಿಲ್ಲ? ಅದರ ಮೇಲೆ ಅಕ್ಸಿಡೆಂಟ್‌, ಡೆತ್‌ ಬೇರೆ ಆಗಿದೆ, ನಿಜವಾಗಿ ಏನು ನಡೆದಿರಬಹುದೆಂದು ಗೊತ್ತಾಗದೆ ಚಡಪಡಿಸಿದಳು. ಅವಳು ಹೆದರಿಕೊಳ್ಳುತ್ತಿದ್ದರೆ ಹೊಟ್ಟೆಯಲ್ಲಿದ್ದ ಐದು ತಿಂಗಳ ಮಗು ಒದ್ದಾಡಿ ಕೈಕಾಲು ಬಡಿದಂತಾಯಿತು, ಹೇಗೋ ಆಫೀಸಿನಿಂದ ಮನೆ ತಲುಪಿದಳು.

ರಾತ್ರಿ 9 ಗಂಟೆಯ ಹೊತ್ತಿಗೆ ಮತ್ತೆ ಸುಂದರನ ಫೋನ್‌ ಬಂತು “ಬಾಬೀ… ಕೇಸು ಸ್ವಲ್ಪ ಕ್ಲಿಷ್ಟವಾಗಿದೆ. ಇಬ್ತಿಸಾಮ್‌ ಸುಡಾನಿಗೆ ವಾಪಸ್ಸು ಹೋಗುವವಳಿದ್ದಳು, ಪ್ರಜ್ವಲ್ ಅವಳನ್ನು ಏರ್ಪೋಟಿಗೆ ಬಿಡಲು ಹೋಗಿದ್ದನಂತೆ, ಈ ಕೆಲಸ ಅವನು ಮಾಡುವುದು ಬೇಡವಾಗಿತ್ತು, ದಾರಿಯಲ್ಲಿ ಇಬ್ತಿಸಾಮ್‌ ಕೂತಿದ್ದ ಡೋರ್‌ ತೆರೆದು ಅವಳು ಕೆಳಗೆ ಬಿದ್ದಿದ್ದಾಳೆ, ಕಾರ್‌ 110ರ ಸ್ಪೀಡನಲ್ಲಿದ್ದು ಇಬ್ತಿಸಾಮ್‌ಳ ಸ್ಪಾಟ್‌ ಡೆತ್‌ ಆಗಿದೆ. ಡೋರ್‌ ಹೇಗೆ ತೆರೆದುಕೊಂಡಿತು ಎನ್ನುವುದೇ ಸಸ್ಪೆನ್ಸ್‌, ಡೋರ್‌ ಏನಾದರೂ ಲೂಸ್‌ ಇತ್ತಾ? ಸರಿಯಾಗಿ ಲಾಕ್‌ ಆಗೋದಿಲ್ವಾ? ನೀವು ಯಾವತ್ತೂ ಅದೇ ಜಾಗದಲ್ಲಿ ಕುಳಿತುಕೊಳ್ಳೋದಲ್ವಾ”?

“ಇಲ್ಲಪ್ಪ, 5-6 ವರ್ಷ ಹಳೆಯ ಸೆಕೆಂಡ್‌ ಹ್ಯಾಂಡ್‌ ಕಾರನ್ನು ಖರೀದಿಸಿದ್ದು, ಹೊಸ ಕಾರಲ್ಲದಿದ್ದರೂ ಚೆನ್ನಾಗಿಯೇ ಇತ್ತು”

“ಇದರಲ್ಲಿ ಪ್ರಜ್ವಲನ ತಪ್ಪೇನು ಇಲ್ಲ, ಒಂದೆರಡು ದಿನಗಳಲ್ಲಿ ಅವನನ್ನು ರಿಲೀಸ್‌ ಮಾಡಬಹುದು, ಏನಾದರೂ ಬೇಕಿದ್ದರೆ ಹೇಳಿ ಸಂಕೋಚ ಪಡಬೇಡಿ” ಎಂದ ಸುಂದರ್. ಊಟ ಮಾಡಲು ಮನಸ್ಸು ಬರಲಿಲ್ಲ, ಊರಿಗೆ ಫೋನ್‌ ಮಾಡಿ ಚಿಕ್ಕಮ್ಮನಿಗೆ ವಿಷಯ ಹೇಳಿಕೊಂಡು ಅತ್ತಳು, ಚಿಕ್ಕಮ್ಮ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನೀನು ಹುಟ್ಟಿದ ಗಳಿಗೆಯೇ ಹಾಗಿರಬೇಕು, ಒಂದಲ್ಲ ಒಂದು ಕಷ್ಟ ತಪ್ಪಿದ್ದಲ್ಲ ಎಂದಾಗ ಅವಳ ದುಃಖ ಇಮ್ಮಡಿಯಾಯಿತು.

ಪೇಪರಿನವರು ಇದನ್ನು ದೊಡ್ಡ ಸುದ್ಧಿಯಾಗಿ ಮುಖಪುಟದಲ್ಲೇ ಪ್ರಕಟಿಸಿದರು, ಆಫೀಸಿಗೆ ಹೋದವಳು ಎಲ್ಲರ ಪ್ರಶ್ನೆಗಳನ್ನು ಎದುರಿಸಲಾಗದೆ ರಜೆ ಹಾಕಿ ವಾಪಸ್ಸು ಬಂದಳು. ಗಂಡನ ಆಫೀಸಿನ ಯಾರ ಪರಿಚಯವೂ ಇರಲಿಲ್ಲ, ಸುಂದರ್‌ ಮಾತ್ರ ಗೊತ್ತು. ಮತ್ತೊಂದು ದಿನದ ಪೇಪರಿನಲ್ಲಿ ಇಬ್ತಿಸಾಮ್‌ಳ ಗಂಡನ ಹೇಳಿಕೆ ಪ್ರಕಟವಾಗಿತ್ತು, ಅದರಲ್ಲಿ ಪ್ರಜ್ವಲನೇ ತನ್ನ ಹೆಂಡತಿಯನ್ನು ಕೊಂದಿರುವ ಅನುಮಾನವಿದೆ ಎಂದ. ತನ್ನ ಹೆಂಡತಿಗೂ, ಪ್ರಜ್ವಲನಿಗೂ ಅನೈತಿಕ ಸಂಬಂಧವಿತ್ತು, ಅದನ್ನು ಮುಚ್ಚಿಡಲು ಹೀಗೆ ಮಾಡಿರಬಹುದು ಎಂದ. ತನಗೆ ನ್ಯಾಯ ಒದಗಿಸಬೇಕೆಂದು ಸ್ಟೇಷನ್ನಿನಲ್ಲಿ ಗೋಗೊರೆದ ಎನ್ನುವ ಸುದ್ಧಿಯೂ ಪ್ರಕಟವಾಯಿತು. ಅವನ ಹೇಳಿಕೆ ಕೇಸಿಗೆ ದೊಡ್ಡ ಟ್ವಿಸ್ಟ್‌ ಸಿಕ್ಕಿ ಕೊಲೆಯ ಕೇಸಾಗಿ ಪ್ರಜ್ವಲನ ಮೇಲೆ ಬರುವ ಸಾಧ್ಯತೆ ಇತ್ತು.

ಘಟನೆ ನಡೆದು ಒಂದು ವಾರದ ನಂತರ ಶೀಲಾಳಿಗೆ ಗಂಡನನ್ನು ಜೈಲಿನಲ್ಲಿ 10 ನಿಮಿಷಗಳ ಕಾಲ ಭೇಟಿಯಾಗಲು ಅನುಮತಿ ನೀಡಿದರು. ಜೈಲಿನ ಕಿಟಕಿಯಲ್ಲಿ ಗಂಡನನ್ನು ಕಂಡಾಗ ಬಿಕ್ಕಳಿಕೆ ಬಂದು ಮಾತಾಡಲಾಗಲಿಲ್ಲ. “ಶೀಲೂ … ನೀನು ಹೇಳ್ದ ಹಾಗೆ ಇಬ್ತಿಸಾಮ್‌ಳಿಂದ ದೂರ ಇದ್ದಿದ್ರೆ ಚೆನ್ನಾಗಿರ್ತಿತ್ತು, ಅವಳನ್ನು ಏರ್ಪೋರ್ಟಿಗೆ ಬಿಟ್ಟು ಬರೋಕೆ ಹೋಗಿದ್ದೆ, ಕಾರಿನ ಬಾಗಿಲು ಹೇಗೆ ತೆರೆದುಕೊಂಡಿತು ಎನ್ನುವುದೇ ಸಸ್ಪೆನ್ಸ್‌!! ಅವಳು ತುಂಬಾ ದುಃಖದಲ್ಲಿದ್ದಳು, ಊರಿನಲ್ಲೂ ಅವಳ ಸ್ಥಿತಿ ಚೆನ್ನಾಗಿಲ್ಲ ಎಂದಿದ್ದಳು, ಅವಳೇ ಕಾರಿನ ಬಾಗಿಲು ತೆಗೆದುಕೊಂಡು ಹಾರಿರಬೇಕು, ಅವಳ ಗಂಡ ಹೇಳ್ದ ಹಾಂಗೆ ನಂಗೂ ಅವಳಿಗೂ ಯಾವ ಸಂಬಂಧವೂ ಇರಲಿಲ್ಲ ಕಣೇ, ನೀನಾದ್ರೂ ನನ್ನ ನಂಬ್ತಿ ತಾನೇ? ಅವನು ಯಾವುದೋ ಉದ್ದೇಶದಿಂದ ಹಾಗೆ ಹೇಳ್ತಿದಾನೆ” ಎಂದ.

“ಪ್ರಜ್ವಲ್ ನಿಮ್ಮನ್ನ ನಂಬ್ತೀನಿ, ಆದ್ರೆ ಅವಳ ಗಂಡ ನೀವು ಕೊಲೆ ಮಾಡಿದಿರಾ ಅಂತ ಕೇಸ್‌ ಹಾಕೋಕೇ ಹೊರಟಿದ್ದಾನಂತೆ”.

ಹೌದೆನ್ನುವಂತೆ ತಲೆಯಾಲ್ಲಾಡಿಸಿದವನು “ಇದೊಂದು ಸಿರಿಯಸ್‌ ಕೇಸ್‌ ಆಗ್ತಾ ಇದೆ, ನೀನು ಊರಿಗೆ ಹೋಗ್ಬಿಡು, ಎಲ್ಲಾ ಸರಿಯಾದ ಮೇಲೆ ಊರಿಗೆ ಬರ್ತೀನಿ, ಈ ದೇಶದ ಸಹವಾಸವೇ ಸಾಕಾಗಿದೆ, ಇಂಗ್ಲೀಷಿನಲ್ಲಿ ಮಾತಾಡಿದರೂ ಅದನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ಇಲ್ಲಿನವರಿಗಿಲ್ಲ” ಎಂದ, ಆಗೋಲ್ಲವೆಂಬಂತೆ ತಲೆಯಲ್ಲಾಡಿಸಿದಳು. ಅಷ್ಟರಲ್ಲಿ 10 ನಿಮಿಷ ಕಳೆದಿತ್ತು, ಪೋಲಿಸರಿಬ್ಬರು ಪ್ರಜ್ವಲನನ್ನು ಕರೆದುಕೊಂಡು ಹೋದರು.

ಜೈಲಿನಲ್ಲಿ, ಕೋರ್ಟಿನಲ್ಲಿ, ಏನೇನು ನಡೆಯುತ್ತಿದೆಯೆಂದು ಅವಳು ಯಾರನ್ನೂ ಕೇಳಬೇಕಾಗಿರಲಿಲ್ಲ, ಪೇಪರಿನಲ್ಲಿ ಸಿರಿಯಲ್‌ ತರಹ ಸುದ್ಧಿ ಪ್ರಕಟವಾಗುತ್ತಿತ್ತು, ದಿನ ಕಳೆದಂತೆ ಪ್ರಜ್ವಲ್ ಕೊಲೆಗಡುಕ, ವಿಲನ್‌ ಎಂಬಂತಹ ವಾತಾವರಣ ಸೃಷ್ಟಿಯಾಯಿತು. ಇಬ್ತಿಸಾಮ್‌ಳ ಗಂಡ ತನ್ನ ಹೆಂಡತಿಯನ್ನು ಕೊಲೆ ಮಾಡಿದನೆಂದು ಪ್ರಜ್ವಲ್ ಮೇಲೆ ಕೇಸ್‌ ಹಾಕಿದ. ಪ್ರಜ್ವಲ್ ಪರ ವಾದಿಸಲು ಒಬ್ಬ ಪಬ್ಲಿಕ್‌ ಪ್ರಾಸಿಕ್ಯೂಟರನ್ನು ನಿಯಮಿಸಿದರು. ಈಜಿಪ್ಷಿಯನ್ ಪ್ರಾಸಿಕ್ಯೂಟರ್‌ ಮನೆಗೆ ಬಂದು ಶೀಲಾಳನ್ನು ಮಾತಾಡಿಸಿದ, ಅರ್ಧಂಬರ್ಧ ಇಂಗ್ಲೀಷ್‌ ಮಾತಾಡುವ ಅವನಿಗೆ ಶೀಲಾ ಹೇಳಿದ್ದೇನೆಂದು ಎಷ್ಟು ಅರ್ಥವಾಯಿತೋ ದೇವರೇ ಬಲ್ಲ. ಕೋರ್ಟಿನಲ್ಲಿ ಹಿಯರಿಂಗ್‌ ಶುರುವಾಯಿತು, ಎಲ್ಲವೂ ಅರೆಬಿಕ್‌ ಭಾಷೆಯಲ್ಲೇ ನಡೆಯುತ್ತಿತ್ತು, ಒಂದೆರಡು ಬಾರಿ ಕೋರ್ಟಿಗೆ ಹೋದ ಶೀಲಾ ಕಡೆಗೆ ಹೋಗುವುದನ್ನೂ ನಿಲ್ಲಿಸಿದಳು.

ಘಟನೆಯ ಸಿರಿಯಸ್‌ನೆಸ್‌ ನೋಡಿ, ಬಹಳ ಬೇಗ ಹಿಯರಿಂಗ್‌ ಮುಗಿದು ಘಟನೆ ನಡೆದ ಮೂರು ತಿಂಗಳಿಗೇ ತೀರ್ಪು ಬಂತು. ಜಡ್ಜ್‌ ಪ್ರಜ್ವಲನೇ ಇಬ್ತಿಸಾಮ್‌ಳನ್ನು ಕೊಂದಿದ್ದು, ಅವರಿಬ್ಬರ ನಡುವೆ ಗೆಳೆತನವೋ, ಅನೈತಿಕ ಸಂಬಂಧವೋ ಇತ್ತು, ನಂತರ ಅವರಿಬ್ಬರ ನಡುವೆ ಜಗಳ ನಡೆದು, ಸಿಟ್ಟಿನಲ್ಲಿ ಪ್ರಜ್ವಲ್ ಇಬ್ತಿಸಾಮ್‌ಳನ್ನು ಕಾರಿನಿಂದ ತಳ್ಳಿದ ಎಂದರು. ತಪ್ಪಿಗೆ ಶಿಕ್ಷೆಯಾಗಿ ಅಲ್ಲಿನ ಶರಿಯಾ ಕಾನೂನಿನಂತೆ ರಕ್ತಕ್ಕೆ ರಕ್ತ ಕೊಡಬೇಕು, ಅಂದರೆ ಪ್ರಜ್ವಲನಿಗೆ ಮರಣದಂಡನೆ ಶಿಕ್ಷೆ ಎಂದರು. ಆದರೆ ಇಬ್ತಿಸಾಮ್‌ಳ ಗಂಡ ಬಯಸಿದರೆ ರಕ್ತದ ಬದಲು ಬ್ಲಡ್‌ ಮನಿ ತೆಗೆದುಕೊಳ್ಳಬಹುದು, ಬ್ಲಡ್‌ ಮನಿ 2 ಮಿಲಿಯನ್‌ ಸೌದಿ ರಿಯಾಲ್ಸ್‌, ಇದನ್ನು ಕೊಡಲು ಪ್ರಜ್ವಲನ ಕಡೆಯವರಿಗೆ 15 ದಿನಗಳ ಸಮಯಾವಕಾಶ ಇರುವುದಾಗಿಯೂ ಹೇಳಿದರು.

ಶೀಲಾಳಿಗೆ ಜಂಗಾಲವೇ ಉಡುಗಿದಂತಾಯಿತು, ಯಾವ ತಪ್ಪೂ ಇರದ ಪ್ರಜ್ವಲ್ನಿಗೆ ಮರಣದಂಡನೆ!!! ದೇವರು ಇದ್ದಾನೆಯೇ? ಹಾಂ ಮರಣದಂಡನೆ ತಪ್ಪಿಸಿಕೊಳ್ಳಬೇಕೆಂದರೆ 2 ಮಿಲಿಯನ್‌ ಸೌದಿ ರಿಯಾಲ್ಸ್‌ ಅಂದರೆ ಸುಮಾರು 4.5 ಕೋಟಿ ರೂಪಾಯಿ ಕಟ್ಟಬೇಕು. ಅಷ್ಟೊಂದು ಹಣ ಎಲ್ಲಿಂದ ತರಲಿ? ಸುಂದರ್‌ ಫೋನ್‌ ಮಾಡಿ “ಬಾಬಿ… ಹೇಗಾದರೂ ಮಾಡಿ ಹಣ ಒಟ್ಟು ಮಾಡೋಣವಂತೆ, ನೀವೂ ನಿಮ್ಮ ಸಂಬಂಧಿಕರಿಂದ, ಫ್ರೆಂಡ್ಸನಿಂದ ಹಣ ಸೇರಿಸಿ, ನಿಮ್ಮ ಹತ್ತಿರವೂ ಪ್ರಾಪರ್ಟಿ, ಗೋಲ್ಡ್‌ ಏನಾದರೂ ಇದ್ರೆ ಮಾರಾಟ ಮಾಡಿ, ಹೇಗಾದರೂ ಮಾಡಿ ಪ್ರಜ್ವಲನನ್ನು ಉಳಿಸಿಕೊಳ್ಳೋಣ, ಆದ್ರೆ ಎಲ್ಲವೂ ಅರ್ಜೆಂಟಾಗಿ ಆಗ್ಬೇಕು, ನಿಧಾನ ಮಾಡುವಂತೆಯೇ ಇಲ್ಲ” ಎಂದ.

ಶೀಲಾಳಿಗೆ ಎಂಟು ತಿಂಗಳು ತುಂಬಿ ಹೊಟ್ಟೆ ಬೇರೆ ಭಾರವಾಗಿತ್ತು, ಮಗು ಹೊಟ್ಟೆಯಲ್ಲಿ ಓಡಾಡುವುದು ಚೆನ್ನಾಗಿ ಗೊತ್ತಾಗುತ್ತಿತ್ತು, ಈ ಹೊತ್ತಿಗೆ ಪ್ರಜ್ವಲ್ ಹತ್ತಿರವಿದ್ದರೆ ಎಷ್ಟು ಸಂತೋಷ ಪಡುತ್ತಿದ್ದನೋ, ಈಗ ಅವನು ಮಗುವಿನ ಮುಖ ನೋಡುವುದೇ ಅನುಮಾನವಾಗುತ್ತಿದೆ, ತನ್ನ ವಿಧಿ ಹೀಗೇಕಾಯಿತು? ಹತ್ತಿರದವರು ಯಾವತ್ತೂ ದೂರವಾಗುತ್ತಾರೆ. ಹಣ ಒಟ್ಟು ಮಾಡಲು ಪ್ರಯತ್ನಿಸಲೇಬೇಕು ಎಂದುಕೊಂಡು ಬೆಂಗಳೂರಿನಲ್ಲಿ ಖರೀದಿಸಿದ ಪ್ರಾಪರ್ಟಿಯನ್ನು ಮಾರಿದಳು, ಮದುವೆಯಲ್ಲಿ ಹಾಕಿದ್ದ ಅಲ್ಪ, ಸ್ವಲ್ಪ ಚಿನ್ನವನ್ನು ಮಾರಲು ಹೊರಟಳು, ಆಫೀಸ್ ಸ್ಟಾಫ್ ಸ್ವಲ್ಪ ದುಡ್ಡು ಒಟ್ಟು ಮಾಡಿ ಕೊಟ್ಟರು. ಸುಂದರ್‌ ಫೋನ್‌ ಮಾಡಿ ಆಫೀಸಿನವರೆಲ್ಲಾ ಸೇರಿ ಸುಮಾರು 39 ಲಕ್ಷ ರೂಪಾಯಿ ಒಟ್ಟು ಮಾಡಿರುವುದಾಗಿ ಹೇಳಿದ, ಹಾಗೆಯೇ ಸೌದಿಯಲ್ಲಿರುವ ಭಾರತೀಯ ಸಂಘಗಳು ದುಡ್ಡು ಒಟ್ಟು ಮಾಡುತ್ತಿವೆ ಎಂದ.

ಎಲ್ಲಾ ಸೇರಿಸಿ ಸುಮಾರು 2 ಕೋಟಿಯಷ್ಟು ಹಣ ಒಟ್ಟಾಯಿತು, ಹಣವನ್ನು ಸುಂದರನೇ ಹ್ಯಾಂಡಲ್‌ ಮಾಡುತ್ತಿದ್ದ. ಕೋರ್ಟು ಕೊಟ್ಟ 15 ದಿನಗಳ ಗಡುವಿಗೆ 1 ದಿನ ಬಾಕಿ ಇತ್ತು. ಶೀಲಾ ಗಂಡನನ್ನು ನೋಡಲು ಜೈಲಿಗೆ ಹೋದಳು, ಅವನನ್ನು ನೋಡುವುದು ಇದೇ ಕಡೆಯ ಬಾರಿ ಎನಿಸುತ್ತಿತ್ತು. ನಿಸ್ತೇಜವಾಗಿದ್ದ ಪ್ರಜ್ವಲ್‌ನಿಗೆ ಅವಳನ್ನು ನೋಡುತ್ತಲೇ ಕಣ್ಣೀರು ತುಂಬಿ ಬಂತು. “ಶೀಲೂ… ಜೀವನವೆಂದರೆ ಇಷ್ಟೇ ಕಣೇ, ನನ್ನ ವಿಧಿಯಲ್ಲಿ ಹೀಗೆಯೇ ಬರೆದಿತ್ತು, ಹಾಗೆಯೇ ಆಯಿತು, ಇರಲಿ ಬಿಡು. ನನ್ನ ಹಾಗಿರುವ ಮಗಳು ಹುಟ್ಟುತ್ತಾಳೆ” ಮುಖವನ್ನು ಪಕ್ಕಕ್ಕೆ ತಿರುಗಿಸಿ ಕಣ್ಣಿರು ಒರೆಸಿಕೊಂಡು, ಮುಖದಲ್ಲಿ ನಗುವನ್ನು ಬಲವಂತವಾಗಿ ತಂದುಕೊಂಡು “ಹಾಂ…ನನ್ನ ಮಗಳಿಗೆ ಇದೆಲ್ಲಾ ಕತೆ ಹೇಳುತ್ತಾ ಕೂರಬೇಡ, ಸುಮ್ಮನೆ ನಿನ್ನಪ್ಪ ಅಕ್ಸಿಡೆಂಟಲ್ಲಿ ತೀರಿಕೊಂಡ ಎನ್ನು, ಅಲ್ವೇ ಹುಡ್ಗಿ.. ಸುಮ್ಮನೆ ನನ್ನ ಬಗ್ಗೆ ಆಲೋಚನೆ ಮಾಡ್ತಾ, ಅಳ್ತಾ ಇರ್ಬೇಡ ಗೂಬೆ. ಮದ್ವೆಗೆ ಮುಂಚೆ ಒಬ್ಬ ಹುಡುಗ ನಿಂಗೆ ಲೈನ್‌ ಹೊಡೆಯುತ್ತಿದ್ದ ಎಂದಿದ್ದೆಯಲ್ಲ? ಅವನಿಗಿನ್ನೂ ಮದ್ವೆಯಾಗಿಲ್ಲ ಇರ್ಬೇಕು ನೋಡು, ಸ್ವಲ್ಪ ಮೆಳ್ಳೆಗಣ್ಣಾದರೇನಂತೆ ಅವನನ್ನೇ ಮದ್ವೆ ಆಗು, ನನ್ನನ್ನ ಸತಾಯಿಸಿದ ಹಾಗೆ ಅವನನ್ನ ಸತಾಯಿಸ್ಬೇಡ, ನಿನ್ನ ಹಳೆಯ ಹೋಂಡಾ ಸ್ಕೂಟರ್‌ನಲ್ಲಿ ತರೀಕೆರೆಗೆ ಒಂದು ಸುತ್ತು ಬಾ, ಎಲ್ಲಾ ಸರಿಯಾಗುತ್ತೆ ” ಈ ಹೊತ್ತಿನಲ್ಲೂ ಗಂಡನ ತಮಾಷೆ ಕೇಳಿ ಅಳ್ಬೇಕೋ, ನಗ್ಬೇಕೋ ತಿಳಿಯಲಿಲ್ಲ, ಸುಮ್ಮನಿದ್ದು, ಗಂಡನನ್ನು ಕಣ್ಣಿನಲ್ಲೇ ತುಂಬಿಕೊಂಡಳು, ಅವರಿಬ್ಬರ ನಡುವೆ ಮೌನ ಆವರಿಸಿತು, ಸ್ವಲ್ಪ ಹೊತ್ತಿಗೆ ಪೊಲೀಸರು ಪ್ರಜ್ವಲನನ್ನು ಕರೆದುಕೊಂಡು ಹೋದರು.

ಅಂದಿಗೆ ಕೋರ್ಟು ಕೊಟ್ಟ ಹದಿನೈದು ದಿನದ ಗಡುವು ಮುಗಿದಿತ್ತು, ಕೋರ್ಟು ಪ್ರಜ್ವಲನ ಮರಣದಂಡನೆ ಖಾಯಂಗೊಳಿಸುವುದಿತ್ತು. ಶೀಲಾ ಯಾವ ಭಾವನೆಯೂ ಇಲ್ಲದೆ ಶೂನ್ಯವನ್ನು ದೃಷ್ಟಿಸುತ್ತಾ ಕುಳಿತಿದ್ದಳು, ಮುಂದೇನು ಎಂಬ ಪ್ರಶ್ನೆಯೂ ಅವಳ ಮುಂದಿರಲಿಲ್ಲ.

ಸಾಯಂಕಾಲ ಸುಮಾರು 6 ಗಂಟೆಯಾಗಿರಬಹುದು, ಕಾಲಿಂಗ್‌ ಬೆಲ್‌ ಸದ್ದಾಯಿತು, ಬಾಗಿಲು ತೆರೆಯಲು ಮನಸ್ಸು ಬರಲಿಲ್ಲ, ತನ್ನ ಅದೃಷ್ಟದ ಎಲ್ಲಾ ಬಾಗಿಲುಗಳು ಮುಚ್ಚಿರುವಾಗ ಮನೆಯ ಬಾಗಿಲು ತೆರೆದೇನು ಪ್ರಯೋಜನ ಎನಿಸುತ್ತಿತ್ತು. ನಾಲ್ಕಾರು ಬಾರಿ ಕಾಲಿಂಗ್‌ ಬೆಲ್‌ ಸದ್ದಾದ ನಂತರ ಬಾಗಿಲು ತೆರೆದಳು. ಎದುರಿಗೆ ಪ್ರಜ್ವಲ್‌ ನಿಂತಿದ್ದ, ಕುತ್ತಿಗೆಯಲ್ಲಿ ಹೂವಿನ ಹಾರ, ಅವನೊಟ್ಟಿಗೆ 4-6 ಗಂಡಸರಿದ್ದರು. ಮುಂದೆ ಬಂದ ಸುಂದರ್‌ “ಬಗವಾನ್‌ ಕಿ ಘರ್‌ ಮೇ ದೇರ್‌ ಹೇ, ಅಂದೇರಾ ನಹಿ ಹೇ.. ಬಾಬಿ, ಪವಾಡ ನಡೆದು ಬಿಡ್ತು….” ಎನ್ನುತ್ತಾ ಪ್ರಜ್ವಲನ ಬಿಡುಗಡೆಯ ಹಿಂದೆ ನಡೆದ ಘಟನೆ ವಿವರಿಸಿದ, ಪ್ರಜ್ವಲ್‌ ಮತ್ತು ಶೀಲಾಳ ಕತೆ ಕೇಳಿದ ಸೌದಿಯಲ್ಲಿ ಬ್ಯೂಸನೆಸ್‌ ಮಾಡುತ್ತಿರುವ ಭಾರತೀಯ ಉದ್ಯಮಿಯೊಬ್ಬರು ಕೊನೆ ಗಳಿಗೆಯಲ್ಲಿ ಕಡಿಮೆ ಬಿದ್ದ ಹಣವನ್ನು ಕೊಟ್ಟಿರುವುದಾಗಿಯೂ, ಇಬ್ತಿಸಾಮಳ ಗಂಡ ಯಾವ ಮುಲಾಜೂ ಇಲ್ಲದೆ ಖುಷಿ, ಖುಷಿಯಲ್ಲಿ ಹಣ ತೆಗೆದುಕೊಂಡಿರುವುದಾಗಿಯೂ, ಅವನು ಕೇಸು ಹಾಕಿದ ಉದ್ದೇಶವೇ ಹಣ ಎನ್ನುತ್ತಾ ಅನ್ಯಾಯದಿಂದ ದಕ್ಕಿಸಿಕೊಂಡ ಹಣ ಅವನಿಗೂ ಒಳ್ಳೆಯದಾಗೋಲ್ಲ ಬಿಡಿ ಎಂದ. ತನ್ನ ಮಾತನ್ನು ಮುಂದುವರಿಸಿದ ಸುಂದರ್‌…ಹಣ ಪಾವತಿಸಿದ ಕೂಡಲೆ ಜಡ್ಜ್‌ ಪ್ರಜ್ವಲನನ್ನು ಬಿಡುಗಡೆ ಮಾಡಲು ಆದೇಶ ನೀಡಿದರು, ಪೋಲಿಸರು ಕೆಲವು ಗಂಟೆಗಳ ಫಾರ್ಮೇಲಿಟಿಸ್‌ ಮುಗಿಸಿ ಬಿಡುಗಡೆ ಮಾಡಿದರು ಎಂದ, “ಬಾಬೀ… ಆಗಲೇ ನಿಮಗೆ ಫೋನ್‌ ಮಾಡಿ ಹೇಳಬಹುದಿತ್ತು, ಆದರೆ ಸರಪ್ರೈಸ್‌ ಆಗಲಿ ಎಂದು ಸುಮ್ಮನಿದ್ದೆ” ಎಂದ. ಶೀಲಾ ಮಾತಾಡಲಿಲ್ಲ, ಮಾತುಗಳು ಕಣ್ಣೀರ ರೂಪದಲ್ಲಿ ಹರಿದು ಬಂತು. ಬಂದವರು ಸ್ವಲ್ಪ ಹೊತ್ತಿದ್ದು ಹೊರಟರು.

ಎಷ್ಟು ಹೊತ್ತು ಪ್ರಜ್ವಲ್‌ ಮತ್ತು ಶೀಲಾ ಒಬ್ಬರನ್ನೊಬ್ಬರು ನೋಡುತ್ತಾ ಕುಳಿತಿದ್ದರೋ ಕಡೆಗೆ ಪ್ರಜ್ವಲ್‌ ಶೀಲಾಳ ಹೊಟ್ಟೆಗೆ ಕಿವಿ ಇಟ್ಟು ಮಗಳ ತುಂಟಾಟವನ್ನು ಆಲಿಸಲು ಪ್ರಯತ್ನಿಸಿದ.
ಘಟನೆ ನಡೆದ ಒಂದು ವಾರಕ್ಕೆ ಇಬ್ಬರೂ ಕೈ, ಕೈ ಹಿಡಿದುಕೊಂಡು ಬೆಂಗಳೂರಿನ ವಿಮಾನ ಹತ್ತಿದರು.


  • ಗೀತಾ ಕುಂದಾಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW