ನರಸಿಂಹಯ್ಯ ಅವರ ಅಪೂರ್ವ ಯಶೋಗಾಥೆ

ಹಿಂದುಳಿದ ಸಮುದಾಯದ ವ್ಯಕ್ತಿ ಸತತ ಪ್ರಯತ್ನದ ಮೂಲಕ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಒಂದು ತೋರುಗಂಭವಾಗಿ ಅವರ ನರಸಿಂಹಯ್ಯ ಅವರ ಆತ್ಮಚರಿತ್ರೆ ಇದೆ. ಈ ದೃಷ್ಟಿಯಿಂದ ಇದು ಎಲ್ಲರಿಗೂ ಒಂದು ಮಾದರಿ ಕೃತಿಯಾಗಿದ್ದು, ಈ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

N for nobody- Autobiography of an English teacher: C.D.N. ಹಿಂದುಳಿದ ಸಮುದಾಯದ ಬಾಲಕನ ಅಪೂರ್ವ ಯಶೋಗಾಥೆ.

ಕ್ಲೋಸ್ ಪೇಟೆ ( ರಾಮನಗರ) ಬಲಿಜ ಸಮುದಾಯದ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದ ವ್ಯಕ್ತಿಯ ಮಗನಾಗಿ ೧೯೨೧ ರಲ್ಲಿ ನರಸಿಂಹಯ್ಯ ಜನಿಸಿದರು, ತಮ್ಮ ಕುಟುಂಬದ ತ್ಯಾಗದ ಪರಿಣಾಮವಾಗಿ, ಉನ್ನತ ಇಂಗ್ಲೀಷ್ ವಿದ್ಯಾಭ್ಯಾಸ ಮಾಡಿ , ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ತೊಡಗಿ, ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ಹೊಂದಿದ ಅಸಾಮಾನ್ಯ ಸಾಹಸಗಾಥೆ ಮೇಲಿನ ಕೃತಿಯ ವಸ್ತು. ಇದನ್ನು ಐದು ಆಯಾಮಗಳಲ್ಲಿ ಗಮನಿಸಬಹುದು.

೧: ವಿದ್ಯಾರ್ಥಿಯಾಗಿ

೨: ಅಧ್ಯಾಪಕರಾಗಿ.

೩: ಪ್ರಾಂಶುಪಾಲರಾಗಿ

೪: ಸಾಂಸ್ಕೃತಿಕ ಸಾಹಿತ್ಯ ರಾಯಭಾರಿಯಾಗಿ.

೫: ಸಂಘಟಕರಾಗಿ.

೧: ವಿದ್ಯಾರ್ಥಿಯಾಗಿ: ಅ: ಬಾಲ್ಯದ ಶಿಕ್ಷಣ ಅವರ ಊರಿನಲ್ಲಿ ನಡೆಯಿತು. ಇಂಗ್ಲೀಷ್ ಭಾಷಾ ಮಾಧ್ಯಮದಲ್ಲಿ ಕಲಿತು ಪ್ರಥಮ ದರ್ಜೆಯಲ್ಲಿ ಎಸ್.ಎಸ್.ಸಿ ತೇರ್ಗಡೆ ಹೊಂದಿದರು. ಆಗ ಕಲಿಸಿದ ಇಂಗ್ಲೀಷ್ ಅಧ್ಯಾಪಕರು ಇವರಿಗೆ ಇಂಗ್ಲೀಷ್ ನಲ್ಲಿ ಗಟ್ಟಿಯಾದ ಬುನಾದಿ ಹಾಕಿದ್ದನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತಾರೆ. ಸ್ಥಳ ಪುರಾಣದೊಂದಿಗೆ ಸ್ವ ಚರಿತ್ರೆಯನ್ನು ದಾಖಲಿಸಿದ್ದಾರೆ.

ಬ: ಮುಂದಿನ ಅವರ ವಿದ್ಯಾಭ್ಯಾಸಕ್ಕಾಗಿ ಅವರು ಮೈಸೂರಿಗೆ ಬಂದರು. ಅಂದು ಪ್ರಾರಂಭವಾದ ಅವರ ಮೈಸೂರು ವ್ಯಾಮೋಹ ಕೊನೆಯವರೆಗೆ ಉಳಿಯಿತು. ಮಹಾರಾಜ ಕಾಲೇಜಿನಲ್ಲಿ ಈಗಲ್ ಟನ್.ರೋಲ್ಸ , ಎಸ್. ವಿ.ರಂಗಣ್ಣನವರ ಮತ್ತು ಎ.ಎನ್.ಮೂರ್ತಿರಾಯರು ಇವರಿಗೆ ಇಂಗ್ಲೀಷ್ ಸಾಹಿತ್ಯದ ದೀಕ್ಷೆ ನೀಡಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ.ದಲ್ಲಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾದರು.ಇಲ್ಲಿ ಮೈಸೂರಿನ ಸ್ಥಳ ಪುರಾಣವನ್ನು ತಮ್ಮ ಶೈಕ್ಷಣಿಕ ಚರಿತ್ರೆಯ ಜತೆಗೆ
ಬೆಸೆದಿದ್ದಾರೆ.

೨: ಅಧ್ಯಾಪಕರಾಗಿ ( ತಮ್ಮ ಹಿಂದುಳಿದ ಸಮುದಾಯದ ಮೀಸಲಾತಿಯಿಂದ) ಮಹಾರಾಜ ಕಾಲೇಜಿನಲ್ಲಿ ನೇಮಕಗೊಂಡರು. ಕೂಡಲೇ ಅವರನ್ನು ರೋಲ್ಸ್‌ ಮತ್ತು ಬಾಲಕೃಷ್ಣಯ್ಯನವರ ಶಿಫಾರಸ್ಸಿನ ಮೇರೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನ ಕ್ಕೆ ಕಳುಹಿಸಿದರು. ಅಲ್ಲಿ ಅವರಿಗೆ ಎಫ್ ಆರ್.ಲೀವಿಸ್ ಅವರ ಮಾರ್ಗದರ್ಶನ ದೊರೆಯಿತು. ಅದರಲ್ಲೂ ಸಾಹಿತ್ಯ ವಿಮರ್ಶೆಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ಅವಕಾಶ ನೀಡಿತು. ಜತೆಗೆ ಅಮೆರಿಕ ಸಾಹಿತ್ಯ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಫ್ ಆರ್.ಲೀವಿಸ್ ಅವರ ಶಿಫಾರಸ್ ನಿಂದ ಅವರು ಅಮೆರಿಕದ ರಾಕ್ ಫೆಲೋ ಆಗಿ ಆಯ್ಕೆಯಾದರು. ಅಲ್ಲಿ ಹೋಗಿ ತಮ್ಮ ಅಮೆರಿಕದ ಸಾಹಿತ್ಯ ಮತ್ತು ವಿಮರ್ಶೆ ಯ ಅಧ್ಯಯನ ಮಾಡಿದರು.

ಯಶಸ್ವಿಯಾಗಿ ಮುಗಿಸಿ ಮೈಸೂರಿಗೆ ಬಂದರು. ತಮ್ಮ ಅಧ್ಯಾಪನ ವೃತ್ತಿಯನ್ನು ಹೊಸ ಬೆಳಕಿನಲ್ಲಿ ಪ್ರಾರಂಭಿಸಿದರು. ಅದರ ಪರಿಣಾಮವಾಗಿ ಮಹಾರಾಜ ಕಾಲೇಜಿನಲ್ಲಿ ಹೊಸ ಶೈಕ್ಷಣಿಕ ಯೋಜನೆ ಕೈಗೊಂಡರು.ಟ್ಯುಟೋರಿಯಲ್ ಪದ್ದತಿಯನ್ನು ಪ್ರಾರಂಭಿಸಿದರು. ಇದಕ್ಕೆ ಮೊದಲಿಗೆ ಅಧ್ಯಾಪಕರಿಂದ ವಿರೋಧ ಬಂದರೂ, ವಿದ್ಯಾರ್ಥಿಗಳ ಉತ್ತಮ ಸ್ಪಂದನದಿಂದ ಕ್ರಮೇಣ ಜನಪ್ರಿಯವಾಯಿತು. ಏಳು ವರ್ಷಗಳ ಕಾಲ ಸೇವೆಯಲ್ಲಿ ಅತ್ಯುತ್ತಮ ಅಧ್ಯಾಪಕರಾಗಿ ಹೆಸರು ಪಡೆದರು. ಇದರಿಂದ ಅವರು ಕಿರಿಯ ವಯಸ್ಸಿನಲ್ಲಿ ಪ್ರಾಧ್ಯಾಪಕರಾಗಿ ಪದೋನ್ನತಿಯನ್ನು ಹೊಂದಿದರು.

೩: ಪ್ರಾಂಶುಪಾಲರಾಗಿ: ಅತ್ಯಂತ ಹಳೆಯ ಕಾಲೇಜ್ ನಲ್ಲಿ ಕಿರಿಯ ವಯಸ್ಸಿನ ಪ್ರಾಂಶುಪಾಲರಾಗಿ (೩೫ ನೆಯ ವಯಸ್ಸಿನಲ್ಲಿ) ಕುವೆಂಪು ನಂತರ ನೇಮಕಗೊಂಡರು. ಇದರಿಂದ ಅವರು ಹಲವು ವಿದ್ಯಾರ್ಥಿ ಕೇಂದ್ರಿತ ಉಪಕ್ರಮಗಳನ್ನು ಕೈಗೊಂಡರು. ಅವುಗಳಲ್ಲಿ ವಿದ್ಯಾರ್ಥಿಗಳ ಸಹಾಯದಿಂದ ಮಹಾರಾಜ ಕಾಲೇಜಿನ ಸುತ್ತ ಬೇಲಿ ಹಾಕಿದರು. ವಿದ್ಯಾರ್ಥಿಗಳು ಕೊಟ್ಟ ಹಣದಿಂದ ಅವರಿಗೆ ಹದಿನಾರು ರೂ ಗಳಲ್ಲಿ ಇಡಿ ವರ್ಷ ಮಧ್ಯಾಹ್ನದ ಊಟ ದೊರೆವಂತೆ ಮಾಡಿದರು. ಯು.ಜಿ.ಸಿ.ಯ ಅಧ್ಯಕ್ಷರಾದ ಸಿ.ಡಿ.ದೇಶಮುಖ್ ಅವರು ಕಾಲೇಜ್ ನೋಡಲು ಬಂದವರು ಆ ಊಟದ ರುಚಿ ನೋಡಿ , ಕಾಲೇಜ್ ಅಭಿವೃದ್ಧಿಗೆ ಒಂದು ಲಕ್ಷ ರೂಪಾಯಿ ಅನುದಾನ ಕೊಟ್ಟ ರು.ಯಾವುದೇ ರಾಜಕೀಯ ಒತ್ತಡಗಳಿಗೂ ಒಳಗಾಗದೆ ಪ್ರವೇಶಕ್ಕೆ ಗುಣಮಟ್ಟವನ್ನು ಮಾತ್ರ ಪರಿಗಣಿಸಿ ಹೊಸ ಇತಿಹಾಸ ನಿರ್ಮಾಣ ಮಾಡಿದರು. ಇದಕ್ಕಾಗಿ ಅವರು ಹಲವರ ವಿರೋಧವನ್ನು ಕಟ್ಟಿಕೊಳ್ಳಲು ಹಿಂಜರಿಯಲಿಲ್ಲ. ವಿದ್ಯಾರ್ಥಿ ಗಳು ಭ್ರಷ್ಟ ರಾದ ಕುಲಪತಿಯ ವಿರುದ್ಧ ಧರಣಿ ಹೂಡಿದಾಗ ಇವರು ಅವರ ಜತೆಗೆ ಸೇರಿ ಮುಖ್ಯ ಮಂತ್ರಿಗಳ ಕೆಂಗಣ್ಣಿಗೆ ಗುರಿಯಾದರು. ಅವರಿಗೆ ತಕ್ಕ ಉತ್ತರ ಕೊಟ್ಟರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೭೯ ರಲ್ಲಿ ನಿವೃತ್ತಿ ಹೊಂದಿದರು. ಆಗ ಅವರಿಗೆ ದೊರೆತ ಬೀಳ್ಕೊಡಿಗೆ ಉಪಕುಲಪತಿಗಳಿಂದ ಮೊದಲುಗೊಂಡು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳವರೆಗೆ ಹೃದಯ ಸ್ಪರ್ಶಿಯಾಗಿತ್ತು.

೪ : ಸಾಂಸ್ಕೃತಿಕ ಸಾಹಿತ್ಯ ರಾಯಭಾರಿಯಾಗಿ : ಎಫ್ ಆರ್.ಲೀವಿಸ್ ಸಾಹಿತ್ಯ ವಿಮರ್ಶಾವಿಧಾನ, ಎಮರ್ಸನ್ ಮತ್ತು ಥೋರೋರಿಂದ ದರ್ಶನವನ್ನು ರೂಪಿಸಿಕೊಂಡ ಅವರು, ಭಾರತೀಯ ಇಂಗ್ಲಿಷ್ ಸಾಹಿತ್ಯದ ತಮ್ಮ ಆಳವಾದ ಅಧ್ಯಯನ ಮಾಡಿ ದೇಶವಿದೇಶಗಳಲ್ಲಿ ಅದನ್ನು ಶೈಕ್ಷಣಿಕ ಶಿಸ್ತಿನ ಭಾಗವಾಗಿ ಅಧ್ಯಯನ ಮಾಡುವ ಅವಕಾಶ ಕಲ್ಪಿಸುವಲ್ಲಿ ಅವರದು ಮಹತ್ವದ ಯೋಗದಾನ . ಇಂಗ್ಲೆಂಡ್, ಅಮೆರಿಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳ ವಿಶ್ವ ವಿದ್ಯಾಲಯಗಳಿಂದ ಅವರಿಗೆ ಕರೆ ಬಂದಾಗಲೆಲ್ಲ , ಅಲ್ಲಿಗೆ ಹೋಗಿ ತಮ್ಮ ಭಾರತೀಯ ಸಾಹಿತ್ಯದ ಕುರಿತು ಉಪನ್ಯಾಸಗಳನ್ನು ನೀಡಿದರು. ಆ ಮೂಲಕ ಭಾರತೀಯ ಆಂಗ್ಲ ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಇದಲ್ಲದೆ ಅಮೆರಿಕಾ, ಆಸ್ಟ್ರೇಲಿಯಾ, ಕಾಮನ್‌ವೆಲ್ತ್ ಸಾಹಿತ್ಯಗಳನ್ನು ಭಾರತದ ವಿ.ವಿ.ಗಳಲ್ಲಿ ಶೈಕ್ಷಣಿಕ ಶಿಸ್ತಿನ ಭಾಗವಾಗಿ ಮಾಡಲು ಅವರು ಶ್ರಮವಹಿಸಿದರು . ಇದರಿಂದಾಗಿ ಇಂಗ್ಲಿಷ್ ಸಾಹಿತ್ಯವೆಂದರೆ ಬರಿ ಇಂಗ್ಲೆಂಡ್ ಸಾಹಿತ್ಯ ಎಂಬ ಸಂಕುಚಿತ ದೃಷ್ಟಿಯಿಂದ ಹೊರಗೆ ಬಂದು ವಿಶಾಲವಾದ ದೃಷ್ಟಿ ಪ್ರಾಪ್ತವಾಗಲು ಸಾಧ್ಯವಾಯಿತು. ಪ್ರತಿ ಸಾಹಿತ್ಯಕ್ಕೂ ತನ್ನದೆ ಆದ ವೈಶಿಷ್ಟ್ಯವಿದೆ ಎಂಬುದನ್ನು ಈ ಸಾಹಿತ್ಯಗಳ ತೌಲನಿಕ ಅಧ್ಯಯನದಿಂದ ಸ್ಥಾಪಿಸಲು ಸಾಧ್ಯವಾಯಿತು. ‌‌‌‌‌

೫: ಸಂಘಟನೆ: ೧೯೭೯ ರಲ್ಲಿ ಸೇವಾ ನಿವೃತ್ತಿಯ ನಂತರ ಅವರಿಗೆ ಹಲವಾರು ಆಮಿಷಗಳು ಬಂದರು ಅವುಗಳಿಗೆ ಬಲಿಯಾಗದೆ, ಪ್ರಿನ್ಸ್ ಟನ್ ಅಡ್ವಾನ್ಸ್ಡ್ ಸ್ಟಡೀಸ್ ನ ಮಾದರಿಯಲ್ಲಿ ಒಂದು ಅಪೂರ್ವ ಸಂಸ್ಥೆಯನ್ನು ಸ್ಥಾಪಿಸಿದ ಶ್ರೇಯಸ್ಸು ಅವರದು. ಅದೆ ಧ್ವನ್ಯಾಲೋಕ. ಭಾರತೀಯ ಕಾವ್ಯ ಮೀಮಾಂಸೆಯ ಅತ್ಯುನ್ನತ ಮೌಲ್ಯವಾದ ಧ್ವನಿಶಕ್ತಿಯನ್ನು ಆಧಾರಿತ ಪರಿಕಲ್ಪನೆ. ಅವರ ವಿಶ್ವ ಸಾಹಿತ್ಯ ಅಧ್ಯಯನ ಮಾಡಿದರೂ ನೆಲೆನಿಂತದ್ದು ಭಾರತೀಯ ಸಾಹಿತ್ಯದಲ್ಲಿ . ಅದು ಇಂದು ವಿಶ್ವಾದ್ಯಂತ ಪರಿಚಿತಗೊಂಡು ವಿದ್ವಾಂಸರ ಆಕರ್ಷಣೆಯ ಕೇಂದ್ರವಾಗಿ ಪರಿಣಮಿಸಿದೆ. ಇದಕ್ಕಾಗಿ ಅವರು ತಮ್ಮ ತನು ಮನ ದನಗಳನ್ನು ಸಮರ್ಪಣೆ ಮಾಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅದು ನಡೆಸಿದ ವಿಚಾರಸಂಕಿರಣಗಳಿಗೆ ಲೆಕ್ಕವಿಲ್ಲ.ಅದರಲ್ಲಿ ಪಾಲ್ಗೊಂಡ ವಿದ್ವಾಂಸರಿಗೂ. ಹೊಸ ಹೊಸ ಚಿಂತನೆಗಳಿಗೆ ಅದು ಇಂಬುಗೊಟ್ಟಿದೆ. ಹಲವಾರು ಮೌಲಿಕ ಕೃತಿಗಳನ್ನು ಪ್ರಕಟಿಸಿದ ಶ್ರೇಯಸ್ಸು ಅವರದು. ಅವರೊಂದಿಗೆ ಕಿರಿಯ ಮಗ ಸಂಜಯ್ ಈ ಸಾಹಸದಲ್ಲಿ ಸಹಯೋಗ ನೀಡಿ ಭಾರತೀಯ ಅಧ್ಯಯನ ಕೇಂದ್ರ ವನ್ನು ರೂಪಿಸುವಲ್ಲಿ ನೆರವಾದರು. ಕೊನೆಯ ಭಾಗದಲ್ಲಿ ಅವರ ಮಗನ ಬಹುಮುಖಿ ಪ್ರತಿಭೆಯ ಅನಾವರಣದೊಂದಿಗೆ , ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡ ಪುತ್ರಶೋಕ ಆರ್ದ್ರವಾಗಿ ಪ್ರಕಟಗೊಂಡು ಮಾನವೀಯವಾಗಿಸಿದೆ . ಈಗ ಅವರ ಹೆಸರಿನಲ್ಲಿ ಸಂಜಯ್ ವಿಚಾರ ಮಂಚದ ಮಂಟಪ ನಿರ್ಮಾಣ ಮಾಡಿದ್ದಾರೆ. ಅಲ್ಲಿ ಸಂಜೆಯಾದರೆ ಸಾಕು ನಾಟಕದ ತಾಲೀಮು ಮಾಡುವ ವಿದ್ಯಾರ್ಥಿ ಗಳ ಕಲರವ ಕೇಳಿಬರುತ್ತದೆ. ಲೇಖಕರ, ಕಲಾವಿದರ ಸಂದರ್ಶನ ಗಳೂ ನಡೆಯುತ್ತವಂತೆ. ಹಾಗಾಗಿ ಇಂದಿಗೂ ಅವರು ಜೀವಂತವಾಗಿದ್ದಾರೆ.

ಸಾಧನೆಗಳು:

೧; ಸಾವಿರಾರು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂವೇದನೆಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದು. ಅದರ ಪರಿಣಾಮ ವಿದ್ಯಾರ್ಥಿ ಗಳು ಅವರ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಕೃತಿಯ ಕೊನೆಯ ಭಾಗದಲ್ಲಿ ಅವರ ಮಗನ ಸಾವಿಗೆ ಸಂತಾಪ ಸೂಚಿಸಲು ಬಂದ ವಿದ್ಯಾರ್ಥಿ ” ನಾವೂ ನಿಮ್ಮ ಮಕ್ಕಳೇ” ಎಂದದ್ದು ಅವರು ವಿದ್ಯಾರ್ಥಿಗಳಲ್ಲಿ ಬಿತ್ತಿ ಬೆಳೆದ ಮಾನವೀಯ ಮೌಲ್ಯಗಳಿಗೆ ಜೀವಂತ ನಿದರ್ಶನವಾಗಿದೆ.

೨: ವಿಸ್ತಾರವಾದ ಮತ್ತು ವೈವಿಧ್ಯಮಯ ಸಾಹಿತ್ಯದ ಅಧ್ಯಯನದ ಅಭಿರುಚಿಯನ್ನು ತನ್ನ ವಿದ್ಯಾರ್ಥಿಗಳಲ್ಲಿ ರೂಪಿಸಿದ್ದು. ಅದಕ್ಕಾಗಿ ಆಡಳಿತ ಮತ್ತು ಶೈಕ್ಷಣಿಕ ಸವಾಲು ಗಳನ್ನು ಸಮರ್ಥವಾಗಿ ಎದುರಿಸಿದರು.

೩ ಇಂಗ್ಲಿಷ್ ಸಾಹಿತ್ಯ ಅಧ್ಯಯನಕ್ಕೆ ವಿಶಾಲವಾದ ಆಯಾಮವನ್ನು ಕಲ್ಪಿಸಿ ಅದಕ್ಕೆ ಶೈಕ್ಷಣಿಕ ಶಿಸ್ತಿನ ಮಾನ್ಯತೆ ಯನ್ನು ಒದಗಿಸಿದ್ದು.

೪: ಅವರ ಹಿಂದುಳಿದ ಸಮುದಾಯದ ಹಿನ್ನೆಲೆಯಲ್ಲಿ ಸತತ ಅಧ್ಯಯನದ ಮೂಲಕ ಅನನ್ಯವಾದ ಸಾಧನೆ ಮಾಡಿ ಎಲ್ಲರಿಗೂ ಇದು ಸಾಧ್ಯ ಎಂಬ ಮಾದರಿಯನ್ನು ಸೃಷ್ಟಿಸಿದರು.

೫: ದೇಶವಿದೇಶಗಳಲ್ಲಿ ಭಾರತೀಯ ಸಾಹಿತ್ಯದ ಅಧ್ಯಯನಕ್ಕೆ ಮಾನ್ಯತೆಯನ್ನು ತಂದುಕೊಟ್ಟ ಶ್ರೇಯಸ್ಸು ಅವರದು. ಮತ್ತು ಎಲಿಯಟ್, ಎಮರ್ಸನ್, ಥೋರೋ ಅವರ ಕಾವ್ಯದಲ್ಲಿ ಪ್ರಕಟವಾಗಿರುವ ಭಾರತೀಯ ದರ್ಶನವನ್ನು ಎತ್ತಿ ಹಿಡಿದು ತೋರಿಸಿದ್ದಾರೆ.

೬: ಅಪೂರ್ವವಾದ ಸಾಹಿತ್ಯ ವಿಮರ್ಶಾ ಕೃತಿಗಳ ರಚನೆ.

೭:ಲಿಟರರಿ ಕ್ರೈಟೀರಿಯನ್ ಎಂಬ ಸಾಹಿತ್ಯ ಅರೆವಾರ್ಷಿಕ ಪತ್ರಿಕೆಯನ್ನು ಹಲವು ಕಷ್ಟಗಳ ನಡುವೆ ಕೂಡ ಐದು ದಶಕಗಳಿಗೂ ಮಿಕ್ಕಿ ನಡೆಸಿದ ಅತ್ಯುತ್ತಮ ವಿಮರ್ಶೆ ಗೆ ವೇದಿಕೆ ಕಲ್ಪಿಸಿದ್ದು.

೮.ಇಷ್ಟೆಲ್ಲಾ ಸಾಧನೆ ಮಾಡಿದ ಅವರಿಗೆ ಹಲವಾರು ಪ್ರಶಸ್ತಿ ಗಳು ಹುಡುಕಿಕೊಂಡು ಬಂದವು .ಅವುಗಳಿಗೆ ಗರಿ ಇಟ್ಟಂತೆ ಭಾರತ ಸರ್ಕಾರ ಕೊಡುವ ಪದ್ಮಭೂಷಣ ಪ್ರಶಸ್ತಿ ೧೯೯೧ ರಲ್ಲಿ ದೊರೆಯಿತು.

 

ಮಿತಿಗಳೆಂದು ಕರೆಯಬಹುದಾದರೆ

೧: ಉದ್ಯೋಗಕ್ಕೆ ಹಿಂದುಳಿದ ಸಮುದಾಯದ ಮೀಸಲಾತಿಯನ್ನು ಬಳಸಿದ್ದು,

೨: ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ಹೋದುದಲ್ಲದೆ ವಿದ್ಯಾರ್ಥಿಗಳನ್ನು ತಡೆದದ್ದು. ಇದಕ್ಕೆ ಪ್ರಾಯಶ್ಚಿತ್ತವೋ ಎನ್ನುವಂತೆ ಸ್ವಾತಂತ್ರ್ಯ ಚಳವಳಿಯ ಇಬ್ಬರು ನೇತಾರರಾದ ಗಾಂಧಿಯವರ ಮಾತುಗಳನ್ನು, ಇಡಿ ಕೃತಿಯ ತುಂಬಾ ಸಕಾರಾತ್ಮಕ ವಾಗಿ ಉಲ್ಲೇಖ ಮಾಡಿದ್ದಾರೆ. ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾವನ್ನು ಸ್ವತಃ ಅವರೇ ಮೆಚ್ಚಿಕೊಳ್ಳುವಂತೆ ಸಂಪಾದನೆ ಮಾಡಿ ಕೊಟ್ಟದ್ದು- ಅವರಿಂದಾಗಲಿ ಮುಂದೆ ಅವರ ಮಗಳಿಂದಾಗಲಿ ಯಾವ ಲಾಭದ ಆಶೆಯು ಇಲ್ಲದೆ ತಮ್ಮ ಋಣಸಂದಾಯ ಮಾಡಿದ್ದು. ಐನ್ಸ್ಟೈನ್, ಟಿ.ಎಸ್.ಎಲಿಯಟ್, ರ ದರ್ಶನದ ವಿಶೇಷ ಕ್ಷಣಗಳನ್ನು ಆರ್ದ್ರ ವಾಗಿ ನಿರೂಪಿಸಿದ್ದಾರೆ.

ಹಿಂದುಳಿದ ಸಮುದಾಯದ ವ್ಯಕ್ತಿ ಸತತ ಪ್ರಯತ್ನದ ಮೂಲಕ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಒಂದು ತೋರುಗಂಭವಾಗಿ ಅವರ ಈ ಆತ್ಮಚರಿತ್ರೆ ಇದೆ. ಈ ದೃಷ್ಟಿಯಿಂದ ಇದು ಎಲ್ಲರಿಗೂ ಒಂದು ಮಾದರಿ ಕೃತಿ ಯಾಗಿದೆ. ತಮ್ಮ ತಂದೆಯವರ ಈ ಅಪೂರ್ವ ಪುಸ್ತಕವನ್ನು ಓದಲು ಅವಕಾಶ ಮಾಡಿಕೊಟ್ಟ ಅವರ ಸಮರ್ಥ ಉತ್ತರಾಧಿಕಾರಿ ಡಾ.ಎಸ್.ಎನ್ ಶ್ರೀನಾಥ ಅವರಿಗೆ ಕೇವಲ ಕೃತಜ್ಞತೆ ಹೇಳಿದರೆ ಸಾಕೆ?


  • ರಘುನಾಥ್ ಕೃಷ್ಣಮಾಚಾರ್ –  (ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW