ಷೇರು ಮಾರುಕಟ್ಟೆ ಎಂಬುದು ಈ ಜಗದ ನಿತ್ಯ ಸೋಜಿಗ!

ಷೇರು ಮಾರುಕಟ್ಟೆ ಎಂಬುದು ಆಕಾಶ. ಇದು ಜೂಜಲ್ಲ; ಆದರೆ ಜೂಜು. ಇದು ಅದೃಷ್ಟದಾಟವಲ್ಲ. ಆದರೆ ಅದೃಷ್ಟ. ಆಟವಂತೂ ಹೌದು; ಅವರವರ ಭಾವಕ್ಕೆ ತಕ್ಕಂತೆ, ಅವರವರ ಗ್ರಹಿಕೆಗೆ ನಿಲುಕಿದಂತೆ. ಕೆಲವರ ಜೇಬು ತುಂಬಿಸುತ್ತದೆ. ಹಲವರ ಜೇಬಿಗೆ ಕತ್ತರಿ ಹಾಕಿ ಬರಿದಾಗಿಸುತ್ತದೆ. ವಿಧಿ ವಿಪರೀತ ವಿಧಿಯಾಘಾತ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳಾದ ಕೆ. ರಾಜಕುಮಾರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಷೇರು ಮಾರುಕಟ್ಟೆ ಎಂಬುದು ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ. ದಿಢೀರೆಂದು ಏರಿದ ಮಾರುಕಟ್ಟೆ ಮತ್ತೆ ತನ್ನ ಸಹಜ ಗತಿ, ಲಯ ಮತ್ತು ಪಾತಳಿಗೆ ಇಳಿಯಲು ತವಕಿಸುತ್ತಿರುತ್ತದೆ. ಇಳಿಯಲು ಕಾರಣವೇ ಬೇಕಿಲ್ಲ; ನೆಪವಿದ್ದರೆ ಸಾಕು. ಏರಲೂ ಅಷ್ಟೇ. ಇಲ್ಲಿನ ಚಲನವಲನ ಧೃತ ಎಂಬ ತೀವ್ರ ಮತ್ತು ವಿಳಂಬಿತ್ ಖಯಾಲ್ ಗಳ ಮಿಶ್ರಣ. ಧೀರೂಭಾಯಿ ಅಂಬಾನಿ ಕಾಯಿಲೆ ಬಿದ್ದಾಗ ಸ್ಟಾಕ್ ಮಾರ್ಕೆಟ್ ಕುಸಿದಿದ್ದೇ ಕುಸಿದಿದ್ದು. ಸತ್ತ ಅನಂತರ ಮತ್ತಷ್ಟು ಕುಸಿಯಬೇಕಿತ್ತು ಅಲ್ಲವೇ? ಕುಸಿಯಲಿಲ್ಲ. ಎದ್ದಿದ್ದೇ, ಎದ್ದಿದ್ದು! ಈ ರೀತಿ ಹಲವು ಬೆರಗು ಮತ್ತು ವೈವಿಧ್ಯಗಳ ತಾಣವಿದು. ಇಲ್ಲಿ ಶ್ರೀಮಂತನೊಬ್ಬ ದಿವಾಳಿಯೂ ಆಗಬಹುದು. ಬಡವ ಬಲ್ಲಿದನೂ ಆಗಬಹುದು. ಹೊರಬೇಕಿಲ್ಲ; ಹೂಡಬೇಕಷ್ಟೇ.

ಬಾ ಧೀರರಿಗೇ ಈ ಕಾಲ, ನಿನಗುಂಟು ಜಯ, ನಿನಗುಂಟು ಜಯ. ರಿಸ್ಕು ಇಲ್ಲವೆ? ರಿಸ್ಕು ಇರುವ ಕಡೆಯಲ್ಲೇ ರಸ್ಕು ಇರುತ್ತದೆ. ಈ ತಂಟೆ ತಕರಾರು ಬೇಡವೆಂದರೆ ಬ್ಯಾಂಕು, ಅಂಚೆ ಕಚೇರಿ ಇದ್ದೇ ಇವೆ.

ಫೋಟೋ ಕೃಪೆ : google

ಷೇರು ಮೌಲ್ಯವೆಂಬುದು ನೀರ ಮೇಲಿನ ಗುಳ್ಳೆ. ಅದು ಒಡೆಯುವ ಮೊದಲೇ ನಗದೀಕರಿಸಿಕೊಳ್ಳ ಬೇಕು. ಈಗ ಮತ್ತೆ ಆರಂಭ ಸಮರದಾರಂಭ. ರಷ್ಯಾ ಉಕ್ರೇನ್ ಇರಾಕ್ ನಡುವಿನ ಯುದ್ಧಕ್ಕೆ ಇರಾಕ್-ಇಸ್ರೇಲ್ ಸಾಂಗತ್ಯ. ಅಮೆರಿಕ ಎಂಬ ನಾರದ ಮಹರ್ಷಿಯ ರಣಹಸಿವು ನೀಗುವ ಕಾಲ ಸನ್ನಿಹಿತ. ಹಾಗಾಗಿ ಮಾರುಕಟ್ಟೆ ಇತ್ತೀಚಿಗೆ ಭಾರಿ ಕುಸಿದಿತ್ತು. ನೆತ್ತರ ಕೋಡಿ ಹರಿದಿತ್ತು. ಅದು ಮೇಲೇರಲು ಯುದ್ಧದ ಕಾರ್ಮೋಡ ಚೆದುರಬೇಕು ಅಥವಾ ಅದಕ್ಕೊಂದು ಹುಸಿ ಸಾಂತ್ವನೆ, ಸಮಾಧಾನ ಬೇಕು. ಅದಕ್ಕೆ ‘ಕಾಲ’ ಎಂಬ ಮುಲಾಮನ್ನು ಹಚ್ಚಬೇಕು. ಹಚ್ಚಿದರಷ್ಟೇ ಆಗದು. ತಿಕ್ಕಬೇಕು; ತೀಡಬೇಕು.

ಒಂದು ಉದಾಹರಣೆ: ಎಂದಿನಂತೆ, ಎಲ್ಲರಂತೆ ಇನ್ಫೋಸಿಸ್’ನ ನಿದರ್ಶನವಿದಲ್ಲ. FSL ಎಂಬ ಕಂಪನಿಯ ಷೇರು ಮೌಲ್ಯವನ್ನು ಗಮನಿಸಿ. ನಾನು ಇಲ್ಲಿ ಹೂಡಿದಾಗ ಬಹುಶಃ 2007ರಲ್ಲಿ ಅದು ರೂ. 82/- ಇತ್ತು. ಅನಂತರ ರೂ. 72/-ಕ್ಕೆ ಕುಸಿಯಿತು. ಹಲವು ವರ್ಷಗಳ ಕಾಲ ಇಳಿತವೇ. ಏರಿಕೆ ಇತ್ತೀಚಿಗೆ ಒಂದೆರಡು ವರ್ಷದಿಂದ ಮಾತ್ರ. ಈಗ ಅದು ರೂ. 290/-ರ ಸನಿಹ ಸುಳಿಯುತ್ತಿದೆ! ಈ ಅವಧಿಯಲ್ಲಿ RCOM, PRATIBHA, IVRCL, VIDEOCON ಮುಂತಾದ ಕಂಪನಿಗಳು ಸರ್ವನಾಶವಾದವು. ಧಗಧಗಿಸಿ ಹೋದವು. ನಾಮಾವಶೇಷವಾದವು. ತೊಡಗಿಸಿದವರ ಹೂಡಿಕೆ ಪೂರ್ತಿ ಕರಗಿಹೋಯಿತು. ಅವರ ಆಸೆ ಕಮರಿಹೋಯಿತು. ಈ ಮಾರುಕಟ್ಟೆಯನ್ನು ಅತ್ತೆಗೊಂದು ಕಾಲ, ಆಂಟಿಗೊಂದು ಕಾಲ ಎನ್ನಬಹುದು!

ಇದು ಜೂಜಲ್ಲ; ಆದರೆ ಜೂಜು. ಇದು ಅದೃಷ್ಟದಾಟವಲ್ಲ. ಆದರೆ ಅದೃಷ್ಟ. ಆಟವಂತೂ ಹೌದು; ಅವರವರ ಭಾವಕ್ಕೆ ತಕ್ಕಂತೆ, ಅವರವರ ಗ್ರಹಿಕೆಗೆ ನಿಲುಕಿದಂತೆ. ಕೆಲವರ ಜೇಬು ತುಂಬಿಸುತ್ತದೆ. ಆಹಾ ರೋಮಾಂಚನ; ನಲ್ಮೆ ಸ್ಪಂದನ. ಭಲೇ ಅದೃಷ್ಟವೋ ಅದೃಷ್ಟ. ಹಲವರ ಜೇಬಿಗೆ ಕತ್ತರಿ ಹಾಕಿ ಬರಿದಾಗಿಸುತ್ತದೆ. ವಿಧಿ ವಿಪರೀತ ವಿಧಿಯಾಘಾತ. ವಿಧಿ ವಿಲಾಸವೆನೆ ಇದೇನಾ? ಆಗ ನೀ ಏನೇ ಮಾಡು ಹೆದರುವೆನೇನು, ಬಾಳುವೆನು ನೋಡು, ಬದುಕುವೆನು ನೋಡು ಎಂಬ ಎದುರುತ್ತರ ಕೊಟ್ಟ ಧೀರರಿಗೇನೂ ಕಡಿಮೆಯಿಲ್ಲ. ಇದು ಅವಕಾಶಗಳ ಸೀರುಂಡೆ. ಸಮಯ ನೋಡಿ ಬಾಚಿಕೊಳ್ಳಬೇಕು. ತಾಳಿದವನು ಬಾಳಿಯಾನು ಎಂಬುದು ಹಳೆಯ ಮಾತು. ಈಗ ಏನಿದ್ದರೂ ಗಾಳಿ ಬಂದಾಗ ತೂರಿಕೊಳ್ಳುವ ಕಾಲ.

ಷೇರು ಮಾರುಕಟ್ಟೆ ಎಂಬುದು ಆಕಾಶ. ಎಲ್ಲರಿಗೂ ಮುಕ್ತ. ಯಾರು ಬೇಕಾದರೂ ಅದರ ನೋಟವನ್ನು ತಮ್ಮದಾಗಿಸಿಕೊಳ್ಳಬಹುದು. ಕೆಲವರಿಗೆ ಅದು ಹುಣ್ಣಿಮೆ ಇರುಳು. ತುಂಬು ತಿಂಗಳಿನ ಮಲ್ಲಿಗೆ ಹಂಬು. ಹಲವರಿಗೆ ಅಮಾವಾಸ್ಯೆಯ ಕದ್ದಿಂಗಳು, ಕಾರಿರುಳು. ಕಾರ್ಗಾಲದ ರಾತ್ರಿ. ಹುಣ್ಣಿಮೆಯಲ್ಲ; ಹುಣಸೆ ಹುಳಿ! ಅದು ಅರಿಯದವರಿಗೆ ಗೋಡೆಯಂತೆ ಅಪಾರದರ್ಶಕ. ನೋಡಿದರೂ ಏನೂ ಕಾಣದು ಎನ್ನುವವರೂ ಇಲ್ಲದಿಲ್ಲ.

ಫೋಟೋ ಕೃಪೆ : google

ಇಲ್ಲಿಗೆ ಬರುವ ಮುನ್ನ ತುಸು ಅಧ್ಯಯನ, ಅಭ್ಯಾಸದ ಅಗತ್ಯ ಇದೆ. ನಿಜ. ಆದರೆ ಅದು ಕಾರ್ಯಸಾಧುವಲ್ಲ. ನೀರಿಗಿಳಿದೇ ಈಜು ಕಲಿಯಬೇಕು. ಹಾಗಾಗಿ ಸುಮಾರು ರೂ. 10,000/- ಗಳನ್ನು ಹಂಚಿಕೆ ಮಾಡಿ 4-5 ಒಳ್ಳೆಯ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿ. ಅದರ ಅನಂತರ ಮಾರುಕಟ್ಟೆಯಲ್ಲಿ ತೊಡಗಿಕೊಂಡು ಗಮನಿಸುತ್ತ ಹೋಗುವುದು ಒಳಿತು. ಆಗ ಇದು ಕಬ್ಬಿಣದ ಕಡಲೆಯಾಗದೆ, ಸುಲಿದ ಬಾಳೆಯ ಹಣ್ಣಾಗುತ್ತದೆ. ಹುಚ್ಚು ಹುಚ್ಚು ನಿರ್ಧಾರಗಳನ್ನು ತೆಗೆದುಕೊಂಡರೆ ಹಣ್ಣಲ್ಲ; ಹುಣ್ಣು. ಇದು ನಿತ್ಯವೂ ಸಂಭವಿಸುವ ಸತ್ಯಾವತಾರ. ಸತ್ಯ ಕೆಲವೊಮ್ಮೆ ಕಹಿ, ಖಾರ, ಉಪ್ಪು, ಒಗರು, ಸಪ್ಪೆ ಹೀಗೆ ಪಂಚರಸೋಪೇತ ಗಳಲ್ಲಿ ಒಂದಾಗಿರುತ್ತದೆ. ಅದು ಸಿಹಿಯೇ ಅಧಿಕವಾಗುಳ್ಳ ಮೃಷ್ಟಾನ್ನ ಭೋಜನವಾಗುವಂತೆ ಅಥವಾ ಎಲ್ಲವೂ ಸಮಪ್ರಮಾಣದಲ್ಲಿರುವ ಷಡ್ರಸಭೋಜನವಾಗುವಂತೆ ಮಾಡಿಕೊಳ್ಳುವ ಜಾಣ್ಮೆ ನಮಗಿರಬೇಕು. ನಾನು ಜಾಣನಲ್ಲ ಎಂಬ ಭಾವ ನಿಮ್ಮದಾದರೆ ಚಿಂತಿಸದಿರಿ. ಈಗ AI ಬಂದಿದೆ: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಕೃತಕ ಬುದ್ಧಿಮತ್ತೆ. ಅದು ಷೇರುಗಳ ಚಲನವಲನವನ್ನು ನಮಗೆ ತಿಳಿಸುತ್ತದೆ. ಇಡೀ ಜಗತ್ತಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥೆಯಾಗಿದೆ. ನಾನು ಭಾರತೀಯ ಎಂಬ ಅಭಿಮಾನದಿಂದ ಹೇಳುತ್ತಿರುವ ಮಾತಲ್ಲ. ಭಾವನೆಗಳಿಗೆ ಇಲ್ಲಿ ತಾವಿಲ್ಲ. ವ್ಯವಹಾರವೊಂದೇ ಇಲ್ಲಿನ ಧರ್ಮ. ಬನ್ನಿ; ತಲೆಬಾಚ್ಕೊಳ್ಳಿ. ಪೌಡರ್ ಹಾಕ್ಕೊಳ್ಳಿ. ಹಣವನ್ನೂ ಬಾಚಿಕೊಳ್ಳಿ. ಆದರೆ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಹಂಬಲ ಬೇಡ. ಏಕೆಂದರೆ ಮಾರುಕಟ್ಟೆ ಕನ್ನಡಿಯೊಳಗಿನ ಗಂಟಲ್ಲ; ಕೈಯಲ್ಲಿನ ದಂಟು. ಅದು ಚಂಚಲ. ಮಠದೊಳಗಣ ಬೆಕ್ಕು ಇಲಿಯನ್ನು ಕಂಡು ಪುಟನೆಗೆದಂತೆ. ಹಾಗಾಗಿ ವ್ಯಾವಹಾರಿಕ ಪ್ರಜ್ಞೆ ಇಟ್ಟುಕೊಂಡು ಮುನ್ನಡೆಯಬೇಕು. ಷೇರು ಮಾರುಕಟ್ಟೆಯನ್ನು ಹುಚ್ಚುಮುಂಡೆ ಮದುವೆ ಅಂತಾರೆ. ಇಲ್ಲಿ ಉಂಡವನೇ ಜಾಣ. ಜಾಣರಾಗಿ. ನಿಮ್ಮನ್ನು ಆರ್ಥಿಕ ಚೈತನ್ಯ ಆವರಿಸಿಕೊಳ್ಳಲಿ.

ಷೇರು ಮಾರುಕಟ್ಟೆಯನ್ನು ಇದಮಿತ್ಥಂ ಎಂದು ನಿಖರವಾಗಿ ವ್ಯಾಖ್ಯಾನಿಸಲು ಆಗದು. ಅದು ಪಂಚತಂತ್ರದಲ್ಲಿ ಬರುವ ಆನೆಯನ್ನು ಮುಟ್ಟಿದ ಐವರು ಕುರುಡರ ಕಥೆಯಂತೆ. ಒಬ್ಬನಿಗೆ ಉದರ, ಮತ್ತೊಬ್ಬನಿಗೆ ಸೊಂಡಿಲು, ಇನ್ನೊಬ್ಬನಿಗೆ ಕಿವಿ, ಉಳಿದವನಿಗೆ ಕಾಲು, ಪಾಪದವನಿಗೆ ಬಾಲ. ಒಟ್ಟಿನಲ್ಲಿ ಬಿಡಿಬಿಡಿಯಾಗಿಯೇ ಆನೆಯನ್ನು ಗ್ರಹಿಸುವಂತಾಯಿತು. ಸಮಗ್ರವಾಗಿ ಅದನ್ನು ದಕ್ಕಿಸಿಕೊಳ್ಳಲು ಆ ಐವರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಷೇರು ಮಾರುಕಟ್ಟೆಯೂ ಅಂತೆಯೇ. ಅದರ ಬಿಡಿ ಬಿಡಿ ನೋಟವಷ್ಟೇ ಲಭ್ಯ. ಎಲ್ಲ ಅನುಭವಗಳ, ಎಲ್ಲ ಗ್ರಹಿಕೆಗಳ ಒಟ್ಟು ಮೊತ್ತವದು. ಅದೊಂದು ಜಾಣ ಬಲ್ಲ ಕ್ರಮಕಲಿಕೆ. ಕಣ್ಣಿದ್ದೂ ಕುರುಡರಾಗದೆ, ಅವರಿವರ ನಂಬಿಕೆಯನ್ನು ಅವಲಂಬಿಸದೆ ಸ್ವತಃ ಅರಿತು ಮುಂದೆ ದಲಾಲ್ ರಸ್ತೆಯೆಡೆಗೆ ಸಾಗೋಣ.


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading