‘ಚೌಚೌ ಬಾತ್’ ಅಂಕಣ (ಭಾಗ – ೩೯)

ಹೊಡೆತದ ರಭಸಕ್ಕೆ ಆ ಹುಡುಗನ ಹಣೆಯಲ್ಲಿ ಗಾಯವಾಗಿ ರಕ್ತ ಚಿಮ್ಮತೊಡಗಿತು.ಇನ್ನು ಅವಳನ್ನು ಹೀಗೆ ಬಿಟ್ಟಿದ್ದರೆ ಆ ಮಗುವನ್ನು ಕೊಂದೆ ಬಿಡುತ್ತಿದ್ದಳು. ಸರಿ ತಪ್ಪು ತಿಳಿಯದ ಏಳೆಂಟು ವರ್ಷದ ಮುಗ್ಧ ಬಾಲಕನಿಗೆ ಒಂದೆಡೆ ಕೂಡಿಸಿ ಸ್ವಲ್ಪ ತಿಳುವಳಿಕೆ ಕೊಟ್ಟಿದ್ದರೂ ಸಾಕಾಗಿತ್ತು. ಆದರೆ ಅವರ ಅಜ್ಜಿಗೆ ತನ್ನ ಪ್ರತಿಷ್ಠೆಯೇ ಮುಖ್ಯವಾಗಿತ್ತು . ಲೇಖಕಿ ಮತ್ತು ಶಿಕ್ಷಕಿಯಾದ ಸರ್ವಮಂಗಳ ಜಯರಾಮ್ ಅವರ ಶಿಕ್ಷಣ ವೃತ್ತಿ ಆರಂಭದ ದಿನಗಳನ್ನು ಮೆಲಕು ಹಾಕುವ ಇಂದಿನ ‘ಚೌಚೌ ಬಾತ್’ ಅಂಕಣದಲ್ಲಿ ‘ಮೌಲ್ಯ ಶಿಕ್ಷಣದ ಅಗತ್ಯತೆ’, ತಪ್ಪದೆ ಮುಂದೆ ಓದಿ…

ಪ್ರತಿ ವರ್ಷದಂತೆ ನಮ್ಮ ಪ್ರೌಢಶಾಲೆಯಲ್ಲಿ ಮಕ್ಕಳಿಗಾಗಿ ಒಮ್ಮೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಏರ್ಪಡಿಸಿದ್ದೆವು. ನಾಡಿನ ಪ್ರಖ್ಯಾತ ಶಿಕ್ಷಣ ತಜ್ಞರನ್ನು, ಮನಃಶಾಸ್ತ್ರಜ್ಞರನ್ನು, ಭಾಷಾ ಪಂಡಿತರನ್ನು, ಸಾಹಿತಿಗಳನ್ನು ಕರೆಸಿ ಮಕ್ಕಳಿಗೆ ಅವರಿಂದ ಪ್ರೇರಣದಾಯಕ ಹಿತ ವಚನಗಳನ್ನು ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣದ ಅಂಶಗಳನ್ನು ಹೇಳಿಸುವ ಕಾರ್ಯಕ್ರಮ. ಅಂದು ನಾಡಿನ ಪ್ರಖ್ಯಾತ ಮನಃ ಶಾಸ್ತ್ರಜ್ಞರೊಬ್ಬರು ನಮ್ಮ ಶಾಲೆಗೆ ಬಂದಿದ್ದರು. “ಥ್ಯಾಂಕ್ಯೂ ಟೀಚರ್” ಎಂಬ ಕೃತಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ಶ್ರೀಯುತ ಡಾ. ವಿರೂಪಾಕ್ಷ ದೇವರ ಮನೆಯವರು ಅಂದು ನಮ್ಮ ಶಾಲೆಗೆ ಅತಿಥಿಯಾಗಿ ಆಗಮಿಸಿದ್ದರು. ಸುಮಾರು ಎಂಟುನೂರು ಜನ ವಿದ್ಯಾರ್ಥಿಗಳಿಂದ ತುಂಬಿದ್ದ ಸಭಾಂಗಣವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟು ಜನ ವಿದ್ಯಾರ್ಥಿಗಳನ್ನು ಒಂದೆಡೆ ನೋಡಿ ಅವರು ಬಹಳ ಸಂತಸ ವ್ಯಕ್ತಪಡಿಸಿದರು.

ಅವರು ಮಾತನಾಡುತ್ತಾ ಮಕ್ಕಳ ಮಾನಸಿಕ ಬೆಳವಣಿಗೆಯ ಕುರಿತು ಹೇಳುತ್ತಿದ್ದರು. ಮಕ್ಕಳು ಯಾವ ರೀತಿ ಸೂಕ್ಷ್ಮ ಸಂವೇದನೆಗಳನ್ನು ಹೊಂದಿರುತ್ತಾರೆ, ಅವರು ಪರಿಸರಕ್ಕೆ ತಕ್ಕಂತೆ ಹೇಗೆ ಬದಲಾಗುತ್ತಾರೆ, ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಆಕರ್ಷಣೆಗಳು, ವಿಭಿನ್ನತೆಗಳು, ಕಾರಣಗಳು, ಪರಿಹಾರಗಳು, ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಅನುಸರಿಸಬೇಕಾದ ಸೂಕ್ತ ಕ್ರಮಗಳು, ಆರೋಗ್ಯಕರ ಆಹಾರ ಅಭ್ಯಾಸಗಳು,ಪರೀಕ್ಷಾ ಸಮಯದಲ್ಲಿ ಮಕ್ಕಳಲ್ಲಿ ಉಂಟಾಗುವ ಭಯ, ಗೊಂದಲ, ಆತಂಕ, ಗಾಬರಿ ಮುಂತಾದ ಭಾವನಾತ್ಮಕ ಸಂವೇದನೆಗಳನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳುವುದು, ಯಶಸ್ಸಿನ ಸೂತ್ರಗಳು ಯಾವುವು, ಪರೀಕ್ಷಾ ಸಮಯದಲ್ಲಿ ಹೇಗೆ ಸಮಯ ಪಾಲನೆ ಮಾಡುವುದು, ಗುರು ಹಿರಿಯರಲ್ಲಿ ಭಕ್ತಿ ಗೌರವ, ಕಿರಿಯರಲ್ಲಿ ಪ್ರೀತಿ, ಸುಳ್ಳು ಹೇಳದಿರುವುದು, ನಂಬಿಕೆ ವಿಶ್ವಾಸ ಉಳಿಸಿ ಕೊಳ್ಳುವುದು ಇವೇ ಮುಂತಾದ ಮಾನವೀಯ ಮೌಲ್ಯಗಳುಳ್ಳ ಸಂದೇಶಗಳನ್ನು ಮಕ್ಕಳಿಗೆ ಮನದಟ್ಟಾಗುವಂತೆ ಹೇಳುತ್ತಿದ್ದರು. ಮಕ್ಕಳೆಲ್ಲ ತದೇಕಚಿತ್ತದಿಂದ ತನ್ಮಯರಾಗಿ ಕೇಳುತ್ತಿದ್ದರು. ಆಗ ಅದೆಷ್ಟು ನಿಶಬ್ದ ವಾತಾವರಣವಿತ್ತೆಂದರೆ ಪಿನ್ ಡ್ರಾಪ್ ಸೈಲೆನ್ಸ್ ಎನ್ನುತ್ತಾರಲ್ಲ ಹಾಗೆ. ಡಾ. ವಿರೂಪಾಕ್ಷ ಸರ್ ಅವರ ನಿರೂಪಣಾ ಶೈಲಿಯೂ ಕೂಡ ಅಷ್ಟೇ ಆಕರ್ಷಣೀಯವಾಗಿತ್ತು. ಅಷ್ಟು ಜನ ಮಕ್ಕಳ ಗಮನವನ್ನು ಒಂದೆಡೆ ಹಿಡಿದಿಟ್ಟುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಮಕ್ಕಳು ಮೊದಲೇ ಕಪಿ ಚೇಷ್ಟೆ ಬೇರೆ ಅಂತದ್ದರಲ್ಲಿ ಮಂತ್ರ ಮುಕ್ತರಾದಂತೆ ನಿಶಬ್ದವಾಗಿ ಅವರ ಮಾತುಗಳನ್ನು ಆಲಿಸುತ್ತಿದ್ದರು.

ಆಗ ಇದ್ದಕ್ಕಿದ್ದಂತೆ ಮಕ್ಕಳು ಕುಳಿತಿದ್ದ ಕಾಂಪೌಂಡ್ ಗೋಡೆಯ ಕಡೆಯಿಂದ ಒಂದು ಕಲ್ಲು ತೂರಿ ಬಂತು. ಅದು ಒಬ್ಬ ಹುಡುಗನ ಸಮೀಪ ಬಂದು ಬಿತ್ತು. ತಕ್ಷಣವೇ ಗೋಡೆಯ ಕಡೆಯಿಂದ ಒಬ್ಬ ಸಣ್ಣ ಹುಡುಗನ ಕಿರುಚಾಟ ಕೇಳಿಸಿತು, ಮಕ್ಕಳೆಲ್ಲರೂ ಸಹಜ ಎಂಬಂತೆ ಆ ಕಡೆ ನೋಡಿದರು. ಒಬ್ಬ ಎಂಟು ಹತ್ತು ವರ್ಷದ ಸಣ್ಣ ಹುಡುಗ ಬೇಕಂತಲೇ ಗಲಾಟೆ ಮಾಡುತ್ತಿದ್ದ. ಕಾಂಪೌಂಡ್ ಗೋಡೆ ಹತ್ತಿ ವಿಚಿತ್ರವಾಗಿ ಕೂಗುವುದು, ಜೋರಾಗಿ ನಗುವುದು,ಧ್ವನಿಯನ್ನು ಅನುಕರಣೆ ಮಾಡಿ ಕಿರುಚುವುದು, ಆಗಾಗ ಸಣ್ಣ ಸಣ್ಣ ಕಲ್ಲುಗಳನ್ನು ಎಸೆಯುವುದು ಮಾಡುತ್ತಿದ್ದ. ಅಲ್ಲೇ ಸಮೀಪದಲ್ಲಿ ಇದ್ದ ಶಿಕ್ಷಕರು ಅವನಿಗೆ ಬುದ್ಧಿ ಹೇಳಿದರು. ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ ತೊಂದರೆ ಆಗುತ್ತದೆ, ಕೂಗಬೇಡ….. ದೂರ ಹೋಗು ಎಂದು ಹೇಳಿದರು. ಅವನು ಮಾತ್ರ ಪಟ್ಟು ಬಿಡಲೇ ಇಲ್ಲ. ಮಕ್ಕಳಲ್ಲಿ ಗುಸು-ಗುಸು ಪ್ರಾರಂಭವಾಯಿತು. ಅವನು ಯಾರೋ ಏನೋ ಯಾಕೆ ಈ ರೀತಿ ತೊಂದರೆ ಕೊಡುತ್ತಿದ್ದಾನೆ ಎಂಬುದನ್ನು ಅರಿಯದ ವಿರೂಪಾಕ್ಷ ಸರ್ ಮಕ್ಕಳ ಅವಧಾನವನ್ನು ಮತ್ತೊಮ್ಮೆ ಒಂದೆಡೆ ಕೇಂದ್ರೀಕರಿಸಲು ಹರ ಸಾಹಸ ಪಟ್ಟರು. ನಾವೆಲ್ಲಾ ಶಿಕ್ಷಕರು ಸೇರಿ ಮಕ್ಕಳ ಗಲಾಟೆ ನಿಯಂತ್ರಿಸಲು ಪ್ರಯತ್ನಿಸಿದೆವು. ಆ ಪುಟ್ಟ ಬಾಲಕ ತನ್ನ ತುಂಟಾಟವನ್ನು ಮುಂದುವರಿಸುತ್ತಲೇ ಹೋದ. ಆಗ ಒಬ್ಬ ಶಿಕ್ಷಕರು ಅವನಿಗೆ ಗೊತ್ತಾಗದಂತೆ ಕಾಂಪೌಂಡ್ ಗೋಡೆಯ ಹಿಂದಿನಿಂದ ಹೋಗಿ ಅವನನ್ನು ಎಳೆದುಕೊಂಡು ಬರುವಂತೆ ಮಕ್ಕಳಿಗೆ ಹೇಳಿದರು. ಆ ಹುಡುಗರು ಹೋಗಿ ಅವನನ್ನು ಎಳೆದು ತಂದರು. ಕಾರ್ಯಕ್ರಮ ಮುಗಿದ ನಂತರ ಅವನನ್ನು ವಿಚಾರಿಸಿದರಾಯಿತು ಎಂದುಕೊಂಡು ಎಲ್ಲಾ ಶಿಕ್ಷಕರು ಸುಮ್ಮನಾದೆವು.

ವಿರೂಪಾಕ್ಷ ಸರ್ ರವರು ಮಕ್ಕಳಿಗೆ ಇನ್ನು ಹತ್ತು ಹಲವಾರು ವಿಷಯಗಳ ಬಗ್ಗೆ ಹೇಳಬೇಕೆಂದಿದ್ದರು. ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದರು. ಆದರೆ ಈ ರೀತಿ ನಡೆದ ಅಹಿತಕರ ಘಟನೆಯಿಂದ ಅವರಿಗೆ ಖಂಡಿತವಾಗಿಯೂ ಬೇಸರವಾಗಿರುತ್ತದೆ. ಅರ್ಧ ಗಂಟೆ ಮುಂಚೆಯೇ ಅವರು ತಮ್ಮ ಸ್ಪೀಚ್ ಮುಗಿಸಿದರು. ನಂತರ ಆ ಹುಡುಗನನ್ನು ವಿಚಾರಿಸಲಾಗಿ ಅವನು ನಮ್ಮ ಶಾಲೆಯ ಅಡುಗೆ ಸಿಬ್ಬಂದಿಯೊಬ್ಬರ ಮೊಮ್ಮಗ ಎಂದು ತಿಳಿದು ಬಂದಿತು. ಸ್ವತಃ ವಿರೂಪಾಕ್ಷ ಸರ್ ರವರು ಆ ಹುಡುಗನನ್ನು ಹತ್ತಿರ ಕರೆದು ತಮಗೆ ತಿನ್ನಲು ಇಟ್ಟಿದ್ದ ಹಣ್ಣನ್ನು ಕೊಟ್ಟು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ? ಯಾವ ಶಾಲೆ ನೀನು ಎಂದು ನಿಧಾನವಾಗಿ ವಿಚಾರಿಸುತ್ತಿದ್ದರು. ಅವನ ಅಂದಿನ ಆ ರೀತಿಯ ವರ್ತನೆಗೆ ಕಾರಣವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅವನನ್ನು ಮಾತನಾಡಿಸುತ್ತಿದ್ದರು. ಅವನು ಉರ್ದು ಮಿಶ್ರಿತ ಕನ್ನಡದಲ್ಲಿ ಅಲ್ಪ ಸ್ವಲ್ಪ ಮಾತನಾಡುತ್ತಿದ್ದ. ಅವನ ಮುಖವು ಗಾಬರಿಯಿಂದ ಕೂಡಿತ್ತು. ನನ್ನನ್ನು ಇವರೆಲ್ಲಾ ಸೇರಿ ಹೊಡೆಯುತ್ತಾರೆಂಬ ಭೀತಿಯಲ್ಲಿ ಅವನಿದ್ದ. ತಾನು ಮಾಡಿದ್ದು ತಪ್ಪು ಎಂಬ ಪಶ್ಚಾತ್ತಾಪ ಕೂಡ ಅವನ ಮುಖದಲ್ಲಿ ಕಾಣುತ್ತಿತ್ತು.

ಅಷ್ಟರಲ್ಲಿ ಅವರ ಅಜ್ಜಿ (ನಮ್ಮ ಶಾಲೆಯ ಅಡುಗೆಯವರು) ಬಂದವಳೇ ಅವನನ್ನು ದರದರನ ಎಳೆದಾಡಿ ಬೆನ್ನಿಗೆ ದಬದಬನೇ ಗುದ್ದ ತೊಡಗಿದಳು. ಅಷ್ಟಕ್ಕೇ ಸಾಲದೆಂಬಂತೆ ತಲೆಕೂದಲು ಹಿಡಿದು ನೆಲಕ್ಕೆ ಬಗ್ಗಿಸಿ ಹಣೆಯನ್ನು ಚಚ್ಚ ತೊಡಗಿದಳು. “ನನ್ನ ಮರ್ಯಾದೆ ತೆಗೆಯಲಿಕ್ಕೆ ಹುಟ್ಟಿದಿಯ ಅಲ್ವಾ ಬೆವರ್ಸಿ ನೀನು” ಎಂದು ಕೂಗಾಡುತ್ತಾ ಕಾಲಿನಲ್ಲಿ ತುಳಿಯತೊಡಗಿದಳು. ಪಾಪ ಆ ಮಗುವಿನ ತಾಯಿ ಅಡ್ಡ ಬಂದು ಬಿಡಿಸಿದಳು ಆಕೆಗೆ ತನ್ನ ಮೊಮ್ಮಗನನ್ನು ಎಲ್ಲರ ಮುಂದೆ ಎಳೆದು ತಂದರೆಂದು ಶಿಕ್ಷಕರ ಮೇಲೆ ಕೋಪ ಬಂದಿತ್ತು. ಆ ಕೋಪವನ್ನು ತನ್ನ ಮೊಮ್ಮಗನ ಮೇಲೆ ಈ ರೀತಿಯಾಗಿ ತೀರಿಸಿಕೊಂಡಳು. ಆ ಮಗು ಇನ್ನೂ ಚಿಕ್ಕವನು, ಸರಿ ತಪ್ಪು ತಿಳಿಯದ ವಯಸ್ಸು, ನೀನು ಮಾಡಿದ್ದು ತಪ್ಪು ಮಗು ಆ ರೀತಿ ಗಲಾಟೆ ಮಾಡಿ ತೊಂದರೆ ಕೊಡಬಾರದು ಎಂದು ಹೇಳಿದ್ದರೆ ಸಾಕಾಗುತ್ತಿತ್ತು. ಆದರೆ ಆ ಪರಿ ಮಗುವನ್ನು ಶಿಕ್ಷಿಸುವ ಅಗತ್ಯ ಇರಲಿಲ್ಲ. ನನ್ನ ಮೊಮ್ಮಗ ಒಬ್ಬನೇ ಗಲಾಟೆ ಮಾಡಿದ್ನ , ಬೇರೆ ಯಾರೂ ಮಾತಾಡಲೇ ಇಲ್ವಾ. ಬಿಟ್ಟಿಗೆ ಸಿಕ್ಕಿದ್ದಾನೆ ಇವನು, ಕಳ್ಳನನ್ನು ಎಳೆದು ತಂದಂತೆ ಎಡೆದಾಡಿಕೊಂಡು ಬಂದಿದ್ದಾರೆ ಎಂದುಕೊಳ್ಳುತ್ತಾ ಅವನನ್ನು ಜಾಡಿಸಿ ಜಾಡಿಸಿ ಒದೆಯುತ್ತಿದ್ದಳು. ಅವಳ ರಭಸದ ಏಟಿಗೆ ಆ ಹುಡುಗನ ಹಣೆಯಲ್ಲಿ ಗಾಯವಾಗಿ ರಕ್ತ ಚಿಮ್ಮತೊಡಗಿತು. ಇನ್ನು ಅವಳನ್ನು ಹೀಗೆ ಬಿಟ್ಟಿದ್ದರೆ ಆ ಮಗುವನ್ನು ಕೊಂದೆ ಬಿಡುತ್ತಿದ್ದಳು.ಅಷ್ಟರಲ್ಲಿ ನಾವೆಲ್ಲ ಮಧ್ಯೆ ಪ್ರವೇಶಿಸಿ ಅಳುತ್ತಿದ್ದ ಮಗುವನ್ನು ಸಮಾಧಾನಗೊಳಿಸಿ ಅವರ ಅಜ್ಜಿಗೂ ಸ್ವಲ್ಪ ತಿಳುವಳಿಕೆ ಹೇಳಿ ಶಾಂತಗೊಳಿಸಿ ಕಳುಹಿಸಿಕೊಟ್ಟೆವು.ಈ ಘಟನೆಯಿಂದ ವಿರೂಪಾಕ್ಷ ಸರ್ ಗೆ ಬೇಸರವಾಗಿರುತ್ತದೆ.

ಸರಿ ತಪ್ಪು ತಿಳಿಯದ ಏಳೆಂಟು ವರ್ಷದ ಮುಗ್ಧ ಬಾಲಕನಿಗೆ ಒಂದೆಡೆ ಕೂಡಿಸಿ ಸ್ವಲ್ಪ ತಿಳುವಳಿಕೆ ಕೊಟ್ಟಿದ್ದರೂ ಸಾಕಾಗಿತ್ತು. ಆದರೆ ಅವರ ಅಜ್ಜಿಗೆ ತನ್ನ ಪ್ರತಿಷ್ಠೆಯೇ ಮುಖ್ಯವಾಗಿತ್ತು . ಎಲ್ಲರೆದುರು ತನ್ನ ಮರ್ಯಾದೆ ಹೋಯಿತು ಎಂದು ಭಾವಿಸಿ ಆ ಮಗುವನ್ನು ಹಿಂಸಿಸ ತೊಡಗಿದ್ದಳು, ಹಿಂಸೆಗೆ ಪ್ರತಿಯಾಗಿ ಮಗು ಪ್ರತಿ ಹಿಂಸೆಯನ್ನೇ ಕಲಿಯುತ್ತದೆ. ಅಷ್ಟು ಚಿಕ್ಕ ತಪ್ಪಿಗೆ ಆ ಮಗುವಿಗೆ ಅಷ್ಟು ತೀವ್ರ ಸ್ವರೂಪದ ಶಿಕ್ಷೆ ಬೇಕಾಗಿರಲಿಲ್ಲ. ಮನೆಯೇ ಮೊದಲ ಪಾಠಶಾಲೆ ಎಂದು ಹೇಳುತ್ತೇವೆ.ಹಾಗಾಗಿ ಮಗುವಿಗೆ ಮನೆಯಲ್ಲಿಯೇ ಉತ್ತಮ ಸಂಸ್ಕಾರ, ಸಂಸ್ಕೃತಿ,ನಡವಳಿಕೆ, ಉತ್ತಮ ಮಾತುಗಾರಿಕೆ ಕಲಿಸಬೇಕಾಗುತ್ತದೆ. ಪ್ರತಿಯೊಂದು ಸಣ್ಣ ಪುಟ್ಟ ತಪ್ಪಿಗೂ ಮಗುವನ್ನು ಹಿಂಸಿ ಸುತ್ತಾ ಹೋದರೆ ಮಗು ಮೊಂಡುತನಕ್ಕೆ ಒಗ್ಗಿ ಹೋಗುತ್ತದೆ. ಏಟು ಬಿದ್ದಷ್ಟು ರಚ್ಚೆ ಹಿಡಿಯುತ್ತದೆ. ಇಂತಹ ಸೂಕ್ಷ್ಮಗಳನ್ನೆಲ್ಲ ರೌದ್ರಾವತಾರ ತಾಳಿದ ಆ ಹೆಂಗಸಿಗೆ ಹೇಗೆ ಹೇಳುವುದು, ಮುಂಗೋಪ ಇರುವವರು ಸ್ವಲ್ಪ ತಾಳ್ಮೆ ವಹಿಸಿದರೂ ಮುಂದಾಗುವ ಅಪಾಯವನ್ನು ತಪ್ಪಿಸಬಹುದು.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಂ – ಶಿಕ್ಷಕಿ ಗೌರಿಬಿದನೂರು

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW