‘ನದಿ ತೀರದ ಲಹರಿ’ ಕವನ – ಹೆಚ್. ಪಿ. ಕೃಷ್ಣಮೂರ್ತಿ

‘ಕುಳಿತಲ್ಲೆ ಮೌನ…..ಎಷ್ಟು ಹೊತ್ತು, ಕಂಗಳಲೇ ಕವಿತೆ ಓದಿಕೊಳ್ಳುವುದು!?’… ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಕವನದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ನಾವು ಕೂತ ಆ ನದಿಯ ತಟ
ಒದ್ದೆ ನೆಲ
ಕಡ್ಡಿ ಹಿಡಿದ ನನ್ನ ಕೈ
ಅವಳ ಹೆಸರನೇ ಗೀಚುತಿತ್ತು

ಅವಳ ನಶೆ ಏರಿಸಿಕೊಂಡ
ಎದೆಯ ಭಾವಗಳು
ಹುಚ್ಛೆದ್ದು ಲಹರಿಗೆ ಬಿದ್ದು
ಸಂಜೆಯ ರಸ ಘಳಿಗೆಯ ಸವಿ
ಹೀರುತಿತ್ತು

ಕೆಂಪು ರೇಶಿಮೆ ಲಂಗದ ಹುಡುಗಿ
ಹಾವ ಭಾವದ ಭಿನ್ನಾಣ ಬೆಡಗಿ
ಅವಳಧರದ ಸವಿ ಜೇನ
ರಸ ಘಳಿಗೆಯ ಕವಳಕ್ಕೆ
ನನ್ನಧರಗಳು ಅದುರಿ ಹಾತೊರೆಯುತಿತ್ತು

ಸಂಜೆಯ ತಂಗಾಳಿಗೆ ಅವಳ ಮುಂಗುರುಳು
ಮುತ್ತಿಕ್ಕುತಿದ್ದವು ಅವಳದೇ ಕೆನ್ನೆಗೆ
ನೋಡುತ್ತ ಕುಳಿತವನ ಹೊಟ್ಟೆಯುರಿಗೆ
ಮತ್ತಷ್ಟು ತುಪ್ಪ ಸುರಿದು

ಬಟ್ಟಲ ಕಂಗಳಲೇ ಮೋಹಕ ನಗೆ ಬೀರಿ
ಸೂಜಿಯಲಿ ದಾರ ತೂರಿದಂತೆ
ಸದ್ದಿಲ್ಲದೇ ಎದೆಯಲಿ ಪ್ರೀತಿಯ ಬೀಜ ಬಿತ್ತಿ
ಹೊಸ ಕಾವ್ಯವಾಗಿ ಬೆಳೆದಿದ್ದಳು ಆಗಲೆ

ಕುಳಿತಲ್ಲೆ ಮೌನ…..ಎಷ್ಟು ಹೊತ್ತು
ಕಂಗಳಲೇ ಕವಿತೆ ಓದಿಕೊಳ್ಳುವುದು!?
ಮೌನ ಮುರಿದೆ ನಾನು
ಇದನೇ ಕಾಯುತ್ತಿದ್ದಳು ತಾನೂ
” ಹಾಡುವೆಯ ” – ಎಂದೆ, ಹಾಡುವೆ ಎಂದವಳೇ
‘ ಯಾವ ಮೋಹನ ಮುರಲಿ ಕರೆಯಿತು….’
ಅವಳ ಕೋಗಿಲೆಯ ಕಂಠಕೆ ಮನ
ವಿವಶವಾಯಿತು
ನದಿಯ ಜುಳು ಜುಳುವೂ ಹಿಮ್ಮೇಳವಾಯಿತು

ಸಂಜೆಯಾದಂತೆಲ್ಲ ರವಿ
ನದಿಯೊಡಲು ಸೇರಿಕೊಳ್ಳುತಲಿದ್ದ
ಆವರಿಸುತಿದ್ದoತೆ ಕತ್ತಲು
ಅಂಜಿಕೆ, ಲಜ್ಜೆಗಳ ಮರೆತು
ಇಬ್ಬರ ಮನಗಳೂ ಆದವು ಬೆತ್ತಲು!


  • ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW