‘ಹೂಲಿ ರಂಗ ಶಿಖರ’ 70 ರ ಅಭಿನಂದನಾ ಗ್ರಂಥ ಪರಿಚಯ

ಹೂಲಿಶೇಖರ್ ಅವರ “ಹೂಲಿ ರಂಗ ಶಿಖರ”  70 ರ ಅಭಿನಂದನಾ ಗ್ರಂಥ ಅವರ ಕೃತಿಯಲ್ಲಿ ಅವರ ಬಾಲ್ಯದಲ್ಲಿನ ಬಡತನದ ನೋವನ್ನು ಹಂಚಿಕೊಂಡಿದ್ದು, ಅಂದಿನ ವ್ಯವಹಾರಗಳಲ್ಲಿ ಬಳಸುತ್ತಿದ್ದ ರೊಕ್ಕದ ಹೆಸರುಗಳನ್ನು ಕೂಡ ತಿಳಿಸಿದ್ದಾರೆ. ಅಂದಿನ ಪ್ರಧಾನಿ ನೆಹರು ಅವರು ಉಪ್ಪಿಟ್ಟಿಗೆ ಬಳಸುವ ಡಾಲ್ಡ, ರವೆ ಹಾಗೂ ಹಾಲಿನ ಪುಡಿಗಳನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳುತ್ತಿದ್ದರೆಂದು ಕೃತಿಯಲ್ಲಿ ತಿಳಿಸಿದ್ದು ಅಚ್ಚರಿಯಾಯಿತು – ಹೆಚ್. ವಿ. ಮೀನ, ತಪ್ಪದೆ ಮುಂದೆ ಓದಿ…

ಪುಸ್ತಕ : “ಹೂಲಿ ರಂಗ ಶಿಖರ”  70 ರ ಅಭಿನಂದನಾ ಗ್ರಂಥ
ಸಂಪಾದಕರು : ಡಾ. ಮಹೇಂದ್ರ ಕುಮಾರ್ ಮತ್ತು ಬಿ.ಪಿ ನರೇಂದ್ರ ಬಾಬು.ಆರ್
ಬೆಲೆ : ೩೦೦ ರೂಪಾಯಿ

ಪ್ರಕಾಶನ : ಆಕೃತಿ ಕನ್ನಡ ಪ್ರಕಾಶನ
ಖರೀದಿಗಾಗಿ : 9880424461 / 9880144705

ಯಾವುದೇ ಹೊಗಳಿಕೆಗೆ ಮನ ಸೋಲದೆ ಶಾಂತಚಿತ್ತರಾಗಿ ತಮ್ಮ ಗುರಿಯ ಶಿಖರವನ್ನೇರಿದ ಶ್ರೀ ಹೂಲಿ ಶೇಖರ ಅವರಿಗೆ ನನ್ನ ನಮನಗಳನ್ನು ಅರ್ಪಿಸುತ್ತೇನೆ. ಶ್ರೀ ಹೂಲಿ ಶೇಖರ ಅವರ ಬಾಲ್ಯ, ಯೌವನ, ಸಂಸಾರದ ಜವಾಬ್ದಾರಿ, ಅವರ ಸರಳ-ಸಾಂಸ್ಕೃತಿಕ ಬದುಕು, ತಾಳ್ಮೆ, ಶಿಸ್ತು, ಕಾರ್ಯನಿಷ್ಠೆ ಹಾಗೂ ಬಡತನದಲ್ಲಿ ಅವರು ಅರಿತು ಕಲಿತ ಜೀವನದ ಮೌಲ್ಯಗಳನ್ನು ತಾಳ್ಮೆಯಿಂದ ಪಾಲಿಸಿ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಸಾಧನೆಗಳ ಶಿಖಿರವನ್ನೇರಿದ ಮಾರ್ಗಗಳ ಕುರಿತಾಗಿ ಸಮರ್ಪಣೆ ಈ ಹೂಲಿ ರಂಗ ಶಿಖರ-70 ರ ಆಭಿನಂದನ ಗ್ರಂಥ.

ತಂದೆ ಶ್ರೀ ಬಸಪ್ಪ ಗದಿಗೆಪ್ಪ ಹೂಲಿ ಹಾಗೂ ತಾಯಿ ಯಲ್ಲವ್ವ ಬಸಪ್ಪ ಹೂಲಿ ಅವರ ಪುತ್ರ ಶ್ರೀ ಹೂಲಿ ಶೇಖರ ಅವರು ಪ್ರಸಿದ್ಧ ರಂಗ ಭೂಮಿ ಕಲಾವಿದರು, ಸಾಹಿತಿಗಳು, ನಿರ್ದೇಶಕರು ಆಗಿದ್ದಾರೆ. ಇವರ ಸಾಂಸ್ಕೃತಿಕ ಜೀವನದ ಪ್ರಾರಂಭದ ಪಯಣವು ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಯ ದಾಂಡೇಲಿ ಅರಣ್ಯದ ಸುತ್ತ- ಮುತ್ತಲಿನ ಪ್ರದೇಶಗಳಲ್ಲಿ ಪ್ರಾರಂಭಗೊಂಡು, ನಂತರದ ದಿನಗಳಲ್ಲಿ ಬೆಂಗಳೂರಿಗೆ ಬಂದು ನೆಲೆಸಿ ಇಲ್ಲಿಯ ಜನರಿಗೆ ಪರಿಚಯವಾದರು. ಇವರ ಸಾಧನೆ ಅಪಾರ. ತಮ್ಮ ಕೆಲಸದಲ್ಲಿ ಮಾತ್ರ ಆಸಕ್ತಿ ವಹಿಸಿ ಸಾಧನೆಯ ಮುಗಿಲನ್ನು ಹತ್ತಿದ್ದ ಇವರು ಯಾವುದೇ ಪ್ರಚಾರ ಹಾಗೂ ಸನ್ಮಾನ ಪುರಸ್ಕಾರಗಳನ್ನು ಬಯಸಲಿಲ್ಲ. ಇವರ ಸ್ನೇಹಿತರು … “ಇವನು ಹೂಲಿ ಶೇಖರ ಅಲ್ಲ ಬದಲಿಗೆ “ಹುಲಿ ಶೇಖರ””ಎಂದು ಕರೆಯುವುದುಂಟು.

ಹೂಲಿ ಶೇಖರ ಅವರ ತಂದೆಯವರು ಹಲವಾರು ಕಾರಣಗಳಿಂದ ಯಾವುದೇ ಒಂದು ಸ್ಥಳದಲ್ಲಿ ನೆಲೆ ಇರಲಾಗದೆ ಬಾದಾಮಿ, ನರಗುಂದ,ರಾಮದುರ್ಗಾ, ಕಿತ್ತೂರಿನಲ್ಲಿಯೂ ಸ್ವಲ್ಪ ವರುಷಗಳ ಕಾಲ ಇದ್ದರು. ಹೀಗಾಗಿ ಇವರ ವಂಶದ ಬಳ್ಳಿಯನ್ನು ತಿಳಿದುಕೊಳ್ಳಲು ಬಹಳ ವರುಷಗಳು ಬೇಕಾದವು. ಹಲವಾರು ಸಂಪರ್ಕಗಳಿಂದ ಇವರ ವಂಶದವರು ವಿಜಯನಗರದವರೆಂದು ದಾಖಲಿಸಲಾಗಿದೆ. ಹೀಗೆ ಅನೇಕ ಊರುಗಳನ್ನು ಸುತ್ತಿ, ಕೊನೆಯಲ್ಲಿ ಇವರ ತಂದೆಯವರು ಇತಿಹಾಸಿಕ ತಾಣವಾದ ಹೂಲಿಕಟ್ಟೆಯಲ್ಲಿ ವಾಸಸ್ಥಳವಾಗಿ ನೆಲೆಹೂಡಿದರು.

ತಮ್ಮ ಬಾಲ್ಯದಲ್ಲಿ ಆಡು- ದನ-ಎಮ್ಮೆಗಳನ್ನು ಕಾಯಲು ಹೋಗುತ್ತಿದ್ದ ಹೂಲಿ ಶೇಖರ ಅವರು ವಾರಕ್ಕೆ ಎರಡು ರೂಪಾಯಿ ಕೂಲಿಯನ್ನು ಸಂಪಾದಿಸಿ, ಈ ಎರಡು ರೂಪಾಯಿಗಳನ್ನು ತಮ್ಮ ತಂದೆಯವರಿಗೆ ಕೊಡುತ್ತಿದ್ದರು. ಇದರ ಬದಲಿಗೆ ಅವರ ತಂದೆಯವರು ಏನಾದರೂ ತಿನ್ನು ಎಂದು ಸ್ವಲ್ಪ ಹಣವನ್ನು ಹೂಲಿ ಶೇಖರ ಅವರಿಗೆ ಕೊಡುತ್ತಿದ್ದರಂತೆ. ಹೀಗೆ ಒಂದು ದಿನ ಅಪ್ಪ ಕೊಟ್ಟ ನಾಣ್ಯವನ್ನು ಹಾವಾಡಿಗನ ಬುಟ್ಟಿಗೆ ಹಾಕಿ, ನಾಗರ ಹಾವಿಗೆ ಕೈ ಮುಗಿದರು. ಹೂಲಿ ಶೇಖರ ಅವರ ತಂದೆಯವರಿಗೆ ಈ ವಿಷಯ ಹೆಗೋ ಗೊತ್ತಾಗಿ, ಮಗನ ಮೇಲೆ ಕೋಪಗೊಂಡು ಮಗನಿಗೆ ಹೊಡೆದೇ ಬಿಟ್ಟರು. ಇದಕ್ಕೆ ಕಾರಣ ಆ ಕಾಸಿಗೆ ಅವರಿಗೆ ಶೆಟ್ಟರ ಅಂಗಡಿಯಲ್ಲಿ ಚಟಾಕು ಅಕ್ಕಿ ಬರುತ್ತಿತ್ತು. ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ ತಂದೆಯವರ ಪರಿಸ್ಥಿತಿ ಹಾಗಿತ್ತು.

ಹೂಲಿ ಶೇಖರ ಅವರು ತಮ್ಮ ಏಳನೇ ತರಗತಿ ಮುಗಿದ ನಂತರ ಮಾಧ್ಯಮಿಕ ಶಾಲೆಗೆಂದು ಬೆಳಗಾವಿಗೆ ಬಂದರು. ತಾಯಿಯ ಮರಣದ ನಂತರ ಹೂಲಿಯವರ ತಂದೆಯವರು ಹೂಲಿ ಕಟ್ಟೆಯನ್ನು ಬಿಟ್ಟು ನವಲಗುಂದ ತಾಲೂಕಿನ ಹನಶಿ ಗ್ರಾಮಕ್ಕೆ ಬಂದರು. ನಂತರದ ದಿನಗಳಲ್ಲಿ ಮೂರುಜನ ಮಕ್ಕಳು ಮೂರು ದಿಕ್ಕಿನಲ್ಲಿ ಇರುವ ಪರಿಸ್ಥಿತಿ ಉಂಟಾಯಿತು. ಹೂಲಿ ಶೇಖರರು ಬೆಳಗಾವಿಯಲ್ಲೇ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು.

ತಮ್ಮ ಕಾಲೇಜಿನ ಶಿಕ್ಷಣ ಮುಗಿಸಿ ಕೆಲಸಕೆಂದು ಹುಡುಕುತ್ತಿದ್ದ ಹೂಲಿ ಶೇಖರರು ಉತ್ತರ ಕನ್ನಡ ಜಿಲ್ಲೆಗೆ ಬಂದರು. ಸೂಪಾ, ದಾoಡೇಲಿ, ಅಂಬಿಕಾನಗರದ ಕಾಳಿ ಕಣಿವೆಗೆ ಬಂದು, ದಾoಡೇಲಿಯ ಕಾಡಿನಲ್ಲಿ ಸುಮಾರು 30 ವರುಷಗಳ ಕಾಲ ವಾಸಿಸಿದರು. ಇದೇ ಸಮಯದಲ್ಲಿ ಹೂಲಿ ಶೇಖರ ಅವರು ಕಾಶವ್ವ ಅವರೊಂದಿಗೆ ವಿವಾಹವಾದರು. ಬದುಕಿನ ಬಂಡಿ ಸಾಗುತ್ತಿದ್ದಾಗ ವಂಶೋದ್ಧಾರಕನ ಜನನವಾಯಿತು. ನಂತರ ಹಲವಾರು ಸ್ಥಳಗಳಲ್ಲಿ ನೆಲೆಸಬೇಕಾಯಿತು. ಕೊನೆಗೆ ದಾoಡೆಲಿಯನ್ನು ತೊರೆದು ಬೆಂಗಳೂರಿಗೆ ಬಂದರು. ಸಮಯ ಸರಿದಂತೆ ಬೆಂಗಳೂರಿನಲ್ಲಿ ಮಕ್ಕಳು ಮನೆಯನ್ನು ಕಟ್ಟಿದರು. ಬೆಂಗಳೂರಿನಲ್ಲಿ ತಮ್ಮ ಜೀವನದ ಮುಂದಿನ ಪಯಣವನ್ನು ಮುಂದುವರಿಸುತ್ತಿರುವ ಹೂಲಿ ಶೇಖರ ಅವರು….”ಇಲ್ಲಿಯ ಉಪ್ಪನ್ನು ತಿಂದು, ನೀರು ಗಾಳಿ ಕುಡಿದು, ವಂಶದ ಋಣದ ಭಾರವನ್ನು ಹೇರಿಸಿದ್ದೇನೆ. ಈ ಋಣವನ್ನು ತೀರಿಸಲು ಸಾಧ್ಯವಿಲ್ಲ” ಎಂದು ತಮ್ಮ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.

“ಪ್ರತೀ ಕುಟುಂಬದವರು ತಮ್ಮ ತಮ್ಮ ವಂಶದ ಬಳ್ಳಿಯ ಇತಿಹಾಸವನ್ನು ಹುಡುಕಿ, ವಂಶಸ್ಥರ ಬಗ್ಗೆ ತಿಳಿದುಕೊಳ್ಳುವ ಮನಸ್ಸನ್ನು ಮಾಡಬೇಕೆಂದು ಕೂಡ ಹೇಳಿದ್ದಾರೆ”.

ಹೂಲಿ ಶೇಖರ ಅವರು ತಮ್ಮ ಬಾಲ್ಯವನ್ನು ಕಳೆದ ಹಳ್ಳಿಯ ಮನೆಯ ಬಗ್ಗೆ, ಅಲ್ಲಿಯ ವಾತಾವರಣ, ಹಳ್ಳಿಯ ಪರಿಸರದ ವರ್ಣನೆಯನ್ನು ಓದಿ ಭಾವುಕಳಾದೆ. ಅವರ ಮನೆಯ ವರ್ಣನೆಯನ್ನು ಮಾಡುವಾಗ ಅವರು ಉಪಯೋಗಿಸಿದ ಅನೇಕ ಪದಗಳನ್ನು ಓದಿ ಅಚ್ಚರಿಗೊಂಡೆ. ಉದಾಹರಣೆ : ಮಣ್ಣಿನ ಬಾನ( ಬಕೆಟ್ಟು ) ಬೋಗೋಣಿ (ತಟ್ಟೆ ) ಗ್ವಾತದ ಗಡಿಗೆ (ದನದ ಮೂತ್ರವನ್ನು ಹಾಕಿಡುವ ಪಾತ್ರೆ ) ಸ್ವಾರಿ ( ಹಾಲು ಕಾಯಿಸುವ ಪಾತ್ರೆ ). ಎಲ್ಲವೂ ಮಣ್ಣಿನ ಪಾತ್ರೆಗಳೇ ಆಗಿದ್ದು, ಈ ಪಾತ್ರೆಗಳನ್ನು ಪೇರಿಸಿ ಇಡುವ ಜಾಗಕ್ಕೆ “ಅಡಕಲು ಗಡಗಿ ” ಎಂದು, ಮೋಟು, ಅನಸು, ಕವಣೆ, ಹೀಗೆ ಇನ್ನೂ ಅನೇಕ ಪದಗಳು ನನ್ನನ್ನು ಉತ್ತರ ಕರ್ನಾಟಕದ ಆಡು ಭಾಷೆಯನ್ನು ಕಲಿಯಲು ಮನ ಸೆಳೆಯಿತು. ತಮ್ಮ ಬಾಲ್ಯದಲ್ಲಿ ಆಡುತ್ತಿದ್ದ ಆಟಗಳ ರೋಚಕತೆಯನ್ನು ಕೂಡ ಹೂಲಿ ಶೇಖರ ಅವರು ವರ್ಣಿಸಿದ್ದಾರೆ.

ತಮ್ಮ ಬಾಲ್ಯದಲ್ಲಿ ಬಡತನದ ನೋವನ್ನು ಅನುಭವಿಸಿದ ಹೂಲಿ ಅವರು ಅಂದಿನ ವ್ಯವಹಾರಗಳಲ್ಲಿ ಬಳಸುತ್ತಿದ್ದ ರೊಕ್ಕದ ಹೆಸರುಗಳನ್ನು ಕೂಡ ತಿಳಿಸಿದ್ದಾರೆ. ಬಿಲ್ಟಿ ( ಗಟ್ಟಿ ದುಡ್ಡು, ತೂತಿನ ದುಡ್ಡು) ಒಂದಾಣೆ, ಚೌಲ (ಎರಡಾಣೆ), ಪಾವಲಿ ನಾಲ್ಕಾಣೆ, ಎಂಟಾಣೆ (ಅರ್ಧ ರೂಪಾಯಿ), ಹದಿನಾರಾಣೆ ಅಂದರೆ ಅರ್ಧ ರೂಪಾಯಿ. ಆ ದಿನಗಳಲ್ಲಿ ಹಸಿದು ಬಂದವರಿಗೆ ಹೊಟ್ಟೆ ತುಂಬುವಷ್ಟು ರೊಟ್ಟಿಯನ್ನು ಕೊಟ್ಟು ಸತ್ಕರಿಸುತ್ತಿದ್ದರು. ಎಂದಿಗೂ ರೊಟ್ಟಿಯ ಬದಲಿಗೆ ದುಡ್ಡನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಅಂದಿನ ಸಂಬಂಧಗಳ ಮೌಲ್ಯಗಳನ್ನು ತಿಳಿಸಿದ್ದಾರೆ.

ಹೂಲಿ ಶೇಖರ ಅವರು ಕುರಿಹಾಲನ್ನು ಬೆರೆಸಿದ ಬೆಲ್ಲದ ಚಹದ ಸವಿಯನ್ನು ನೆನೆಪಿಸಿಕೊಳ್ಳುತ್ತಾ, ಅಂದಿನ ಆಹಾರ ಪದ್ಧತಿಯ ಬಗ್ಗೆ ತಿಳಿಸಿದ್ದಾರೆ. “ನ್ಯಾರಿ ” ಅಂದರೆ ಬೆಳಗಿನ ಲಘು ಉಪಹಾರವೆಂದೂ, ಈ ದಿನಗಳಲ್ಲಿ ಬೆಳಗಿನ ತಿಂಡಿಗೆ “ಲಂಚ” ಎಂದು ಹೆಸರಿನಲ್ಲಿ ಕರೆಯುತ್ತಿದ್ದರಂತೆ. ನ್ಯಾರಿ ಪದ್ಧತಿಯಲ್ಲಿ ನೆಲುವಿನ ರೊಟ್ಟಿ, ಪುಂಡಿ ಪಲ್ಯೆ, ಅರೆದ ಖಾರ, ಸೇಂಗಾ ಎಣ್ಣೆಯನ್ನು ಹಾಕಿ ತಿನ್ನುತ್ತಿದ್ದರಂತೆ. ಇದರ ಜೊತೆಗೆ ಎರಡು ಹಸಿ ಮೆಣಸಿನಕಾಯಿ, ಒಂದು ಈರುಳ್ಳಿ, ನಾಲ್ಕು ತಂಗಳದ ರೊಟ್ಟಿಯನ್ನು ತಿಂದು ಒಂದು ತಂಬಿಗೆ ನೀರು ಕುಡಿದರೆ ಅವರ ನ್ಯಾರಿ ಅಂದರೆ “ತಿಂಡಿ” ಮುಗಿದಂತೆ. ಅಥವಾ ಜೋಳದ ನುಚ್ಚು ಸಗಟಿ ಮಾಡಿ, ಒಂದು ಗಂಗಾಳದಲ್ಲಿ ಹಾಕಿ, ಒಂದು ತಂಬಿಗೆ ಮಜ್ಜಿಗೆಯೊಂದಿಗೆ ಸೇವಿಸುತ್ತಿದ್ದರು. ಇದು ಹೂಲಿ ಅವರ ದಿನ ನಿತ್ಯದ ಉಪಹಾರ.

ಹೂಲಿಯವರು ಉಪ್ಪಿಟ್ಟಿನ್ನ ರುಚಿಯನ್ನು ಸವಿದದ್ದು ಅವರ ಶಾಲೆಯಲ್ಲಿ. ಅಂದಿನ ಪ್ರಧಾನಿ ನೆಹರು ಅವರು ಉಪ್ಪಿಟಿಗೆ ಬಳಸುವ ಡಾಲ್ಡ, ರವೆ ಹಾಗೂ ಹಾಲಿನ ಪುಡಿಗಳನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳುತ್ತಿದ್ದರಂತೆ. ರವೆ, ಡಾಲ್ಡ ಅಮೇರಿಕದಿಂದ ಬರುತ್ತಿತ್ತು ಎಂದು ತಿಳಿದು ನಾನು ಆಶ್ಚರ್ಯಗೊಂಡೆ. ಈ ವಿಷಯ ನನಗೆ ಗೊತ್ತೇಇರಲಿಲ್ಲ. ಅಂದಿನ ಅನೇಕ ವಿಶೇಷ ಹಾಗೂ ಆಚ್ಚರಿಯ ವಿಷಯಗಳ ಬಗ್ಗೆ ವಿಸ್ತಾರವಾಗಿ ವರ್ಣಿಸಿದ್ದಾರೆ

“ಬೆಳೆಸು” ಅಂದರೆ ಮೃದು ಹಾಲು ಕಾಳುಗಳ ತೆನೆಯನ್ನು ಕೆಂಡದಲ್ಲಿ ಅರ್ಧ ಸುಟ್ಟು ತಿನ್ನುವುದು. ಅದೆಷ್ಟು ರುಚಿಯಾದ ಆಹಾರ ಪದ್ಧತಿ. ಆಹಾ!..ನನಗೂ ತಿನ್ನಬೇಕೆಂಬ ಹಂಬಲ ಉಂಟಾಗುತ್ತಿದೆ.

ಹೀಗೆ ಹಳ್ಳಿಯ ಸೊಬಗನ್ನು ಆಹ್ಲಾದಿಸಿ, ಜೀವನದ ಕಷ್ಟಗಳನ್ನು ಅನುಭವಿಸಿ, ಜೀವನವನ್ನು ಕಟ್ಟಿಕೊಂಡ ಹೂಲಿಯವರು ಕರ್ನಾಟಕ ವಿದ್ಯುತ್ ನಿಗಮದಲ್ಲಿ 32 ವರ್ಷಗಳ ಸೇವೆಯನ್ನು ಸಲ್ಲಿಸಿ, ಕಾಳಿ ಜಲವಿದ್ಯುತ್ ಯೋಜನೆಯ ಸೂಪಾ ಬೊಮ್ಮನಹಳ್ಳಿ, ಕದ್ರಾ ಇನ್ನೂ ಹಲವಾರು ಸ್ಥಳಗಳಲ್ಲಿ ಆಣೆಕಟ್ಟುಗಳ ನಿರ್ಮಾಣ ಕಾಮಗಾರಿಗಳಲ್ಲಿ ಹಾಗೂ ನಾಗ್ ಝರಿ, ಸೂಪಾ ವಿದ್ಯುದ್ದಾಗರ ನಿರ್ಮಾಣ ಕಾಮಗಾರಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ನಮ್ಮ ರಾಜ್ಯಕ್ಕೆ ಸೇವೆಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ಮಾನ್ಯ ಮುಖ್ಯ ಮಂತ್ರಿಗಳ ಸಂವಹನಾ ಸಲಹೆಗಾರ ಕಚೇರಿಯಲ್ಲಿ ಸಂವಹನಾಧಿಕಾರಿಯಾಗಿ ಮೂರು ವರುಷ ಸೇವೆಯನ್ನು ಸಲ್ಲಿಸಿದ್ದಾರೆ.

ಇವರು ತಮ್ಮ 11 ನೇ ವಯಸ್ಸಿನಲ್ಲಿಯೇ ಶ್ರೀಮತಿ ಇಂದಿರಾಗಾಂಧಿ ಅವರ ಮುಂದೆ ಹಾಡಿದ್ದರು. ತಮ್ಮ ಬಾಲ್ಯದಲ್ಲಿ ಅಮಟೂರು ಬಾಳಪ್ಪ, ಬೀಗತ್ತಿ ಚನ್ನ ಬಸಪ್ಪ ಇಂತಹ ಐತಿಹಾಸಿಕ ಪಾತ್ರಗಳಿಂದ ಪ್ರಭಾವಗೊಂಡು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಬಿಂಬ ಪ್ರಶಸ್ತಿ, ಯುವನಿಕಾ ಪ್ರಶಸ್ತಿ, ರಂಗ ಸಂಪದ ಪ್ರಶಸ್ತಿ…… ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ಸಂದ ಗೌರವಗಳು…. ಕನ್ನಡ ಮಿತ್ರರು ಕೆ ಜಿ ಎಫ್, ರಂಗ ಗೆಳೆಯ, ರಂಗ ಭೂಮಿ….ಇನ್ನೂ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಇವಲ್ಲದೆ ರಂಗ ಸೇವೆಗೆ ಸಂದ ಗೌರವಗಳು….. ರಂಗ ಚೇತನ ರತ್ನ ಪ್ರಶಸ್ತಿ, ಉತ್ತರ ಕರ್ನಾಟಕ ಅಕ್ಷರ ಬ್ರಹ್ಮ ಪ್ರಶಸ್ತಿ ಇಂತಹ ಅನೇಕ ಪ್ರಶಸ್ತಿಗಳು ದೊರಕಿವೆ. ಇವರು ಜೋಕುಮಾರ ಸ್ವಾಮಿ ಕಲಾ ಬಳಗದ ಸ್ಥಾಪಕ ಅಧ್ಯಕ್ಷರು. ಇವರ ಸಾಧನೆಗಳು ಅಪಾರ. ಆಕಾಶವಾಣಿಗಾಗಿ ನಾಟಕ ರಚನೆ, ನಾಟಕ ಶಿಬಿರಗಳು ಹಾಗೂ ಇವರ ರಂಗ ಪ್ರದರ್ಶನಗಳ ಬಗ್ಗೆ, ಇವರು ಬರೆದ ನಾಟಕಗಳು ಹಾಗೂ ಪ್ರದರ್ಶನಗೊಂಡ ಸುಮಾರು 60 ನಾಟಕಗಳು ರಂಗದ ಮೇಲೆ ಯಶಸ್ವಿಯಾಗಿವೆ. ಇವರು ದೂರದರ್ಶನದ ಧಾರಾವಾಹಿಗಳಿಗೆ ಕಥೆ ಸಂಭಾಷಣೆಗಳನ್ನು ಬರೆದಿದ್ದು ಇವರ ಮೂಡಲಮನೆ, ಮಹಾನವಮಿ, ಗೆಳತಿ, ಕಿಚ್ಚು, ಕಾವ್ಯ, ಕಸ್ತೂರಿ, ಸೌಭಾಗ್ಯವತಿ, ಕಿನ್ನರಿ, ಕುಂತಿ ಗಂಗಾ ಪ್ರಮುಖ ಧಾರಾವಾಹಿಗಳು ಎಲ್ಲರ ಮೆಚ್ಚುಗೆಯನ್ನು ಪಡೆದಿವೆ. ಮೂಡಲ ಮನೆ ಧಾರಾವಾಹಿಗೆ ಸಂಭಾಷಣೆ ಶ್ರೇಷ್ಠ ಸಂಭಾಷಣಕಾರ ಎಂದು ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.

ಇವರ ಅಪಾರ ಸಾಧನೆಗಳ ಬಗ್ಗೆ ಓದಿ ತಿಳಿದ ನನಗೆ ಇವರ ಸರಳ ಸ್ವಭಾವ ಹಾಗೂ ಕೇವಲ ತಮ್ಮ ಕೆಲಸದ ಬಗ್ಗೆ ಮಾತ್ರ ಗಮನವಿಟ್ಟು ಗುರಿಯನ್ನು ಸಾಧಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವ ಇವರ ಬಗ್ಗೆ ಬಹಳ ಹೆಮ್ಮೆ ಹಾಗೂ ಗೌರವ ಹೆಚ್ಚಿತು. ಇವರ ಸ್ನೇಹಿತರು ಇವರನ್ನು “ಕಿರುತೆರೆಯ ರಾಕ್ಷಸ ಬರಹಗಾರ” ಎಂದು ಕರೆಯುವುದುಂಟು. ಇವೆಲ್ಲವನ್ನೂ ಓದಿದ ಮೇಲೆ ನಾನು ಒಂದು ನಿಮಿಷ ನಂಬದೇಹೋದೆ…. ಕಾರಣ ಇವರ ಸಾಧನೆಗಳ ಬಗ್ಗೆ ಹಾಗೂ ಇವರಿಗೆ ದೊರಕಿದ ಪ್ರಶಸ್ತಿಗಳ ಬಗ್ಗೆ ತಿಳಿಸಲು ಸುಮಾರು 10 ಪುಟಗಳೇ ಬೇಕಾಗಿವೆ. ಇಂತಹ ಮಹಾನ್ ವ್ಯಕ್ತಿಯ ಅಭಿನಂದನಾ ಗ್ರಂಥವನ್ನು ಓದುವ ಭಾಗ್ಯ ನನಗೆ ದೊರಕಿದ್ದು ನನ್ನ ಪುಣ್ಯ. ಗ್ರಂಥದ ಪ್ರತೀ ಒಂದು ಸಾಲಿನಲ್ಲೂ ಕನ್ನಡ ಪದಗಳ ಬಳಕೆ ಅತೀ ಉತ್ತಮವಾಗಿದೆ. ಹೂಲಿ ಶೇಖರ ಅವರ ಜೀವನದ ಎಲ್ಲಾ ಘಟನೆಗಳನ್ನು ಅದೆಷ್ಟು ಸುಂದರವಾಗಿ ಪೋಣಿಸಿ ವರ್ಣಿಸಿದ್ದಾರೆ ಎಂದರೆ ನನ್ನಂತ ಓದುಗರಿಗೆ ಅನೇಕ ಸಾಹಿತ್ಯ-ಸಾಂಸ್ಕೃತಿಕ ಮಾಹಿತಿಗಳನ್ನು ತಿಳಿಯಲು ಹಾಗೂ ಪ್ರಶಸ್ತಿ ಪುರಸ್ಕಾರಗಳಿಗೆ ಹಂಬಲಿಸದೆ ಮೌನವಾಗಿ ಜೀವನದ ಗುರಿಯನ್ನು ಗೆಲ್ಲಬೇಕು ಎಂದು ಅರಿಯಲು ಸುಲಭವಾಯಿತು.

ಕಥಾ ತಂತ್ರ ಎಂದರೇನು?ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನಿರೂಪಣಾ ಶೈಲಿ ಹೇಗಿರಬೇಕು? ಕಥೆ ಬರೆಯುವ ಮೊದಲು ಚಿಕ್ಕ ಕಥೆ ಮತ್ತು ದೊಡ್ಡ ಕಥೆಗಳು ಯಾವ ರೀತಿಯಲ್ಲಿರಬೇಕು ಎಂಬುದರ ಬಗ್ಗೆ ಬರಹಗಾರರು ಅರಿಯಬೇಕು ಎಂಬ ಕಿವಿಮಾತುಗಳನ್ನು ಕೂಡ ಹೇಳಿದ್ದಾರೆ. ಧಾರವಾಹಿಗಳಾದ ಮೂಡಲ ಮನೆ, ಮಹಾನವಮಿ, ಸೌಭಾಗ್ಯವತಿ, ಕಾವ್ಯ ಕಸ್ತೂರಿ ಮುಂತಾದ ಧಾರಾವಾಹಿಗಳು ಜನಪ್ರಿಯಗೊಂಡಿವೆ.

ಸುರಂಗ ಕಾಮಗಾರಿ, ಆಣೆಕಟ್ಟು ನಿರ್ಮಾಣ ಕಾಮಕಾರಿಯಲ್ಲಿದ್ದು ತಮ್ಮನ್ನು ಸಾಹಿತ್ಯ, ನಾಟಕ ಸಂಸ್ಕೃತಿಗಾಗಿ ಅನೇಕ ಸ್ನೇಹಿತರನ್ನು ಕಟ್ಟಿಕೊಂಡು ದುಡಿದಿದ್ದಾರೆ. ಇಂತಹ ಬಹುಮುಖ ಪ್ರತಿಭೆ ಹೂಲಿ ಶೇಖರ ಅವರಿಗೆ ದೇವರು ಆರೋಗ್ಯವನ್ನು ಕೊಟ್ಟು ನಮಗೆ ಮತ್ತಷ್ಟು ಮಾರ್ಗದರ್ಶನ ನೀಡಲಿ ಎಂದು ಪ್ರಾಥಿಸುತ್ತೇನೆ.

ಕನ್ನಡ ಸಾಹಿತ್ಯದ ಬಗ್ಗೆ ಅಲ್ಪ ಜ್ಞಾನ ಉಳ್ಳ ನನಗೆ ಮಹಾನ್ ಸಾಧಕರಾದ ಶ್ರೀ ಹೂಲಿ ಶೇಖರ ಅವರ ಈ ಅಭಿನಂದನಾ ಗ್ರಂಥದ ಬಗ್ಗೆ ಪರಿಚಯ ಮಾಡಿಸುವಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ಕ್ಷಮೆ ಇರಲಿ.

ಹೂಲಿ ಪರಂಪರೆಯನ್ನು ಎತ್ತಿ ಹಿಡಿದ ಶ್ರೀ ಹೂಲಿ ಶೇಖರ ಅವರ ಬಗ್ಗೆ ತಿಳಿಯಲು “ಹೂಲಿ ರಂಗ ಶಿಖರ” ಪುಸ್ತಕವನ್ನು ತಪ್ಪದೆ ಓದಿ.


  • ಹೆಚ್. ವಿ. ಮೀನ – ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW