‘ಅವಳ ಮನೆ’ ಕೃತಿ ಪರಿಚಯ – ಸುಮಾ ಭಟ್

ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ‘ಅವಳ ಮನೆ’ ಕೃತಿಯಲ್ಲಿ ಬದುಕಿನಲ್ಲಿ ಹಲವರಿಗೆ ಇರುವ ತಪ್ಪು ಕಲ್ಪನೆಯೆಂದರೆ ಸಿರಿತನ ಎಲ್ಲಾ ರೀತಿಯ ಸುಖ ಒದಗಿಸಿ ಬಿಡುತ್ತದೆ, ಬಡತನ ಸಂಕಷ್ಟಗಳ ಸರಮಾಲೆ ಎಂಬ ಭಾವನೆಗಳಿರುತ್ತದೆ. ಆದರೆ ಬದುಕಲ್ಲಿ ಸಿರಿತನ ಬಡತನಕ್ಕಿಂತಾ ಒಳ್ಳೆಯತನ, ಆತ್ಮೀಯತೆ, ಅನುನಯತೆ ಮುಖ್ಯ ಎಂಬುದು ಈ ಕಥೆಯ ಮೂಲಕ ಲೇಖಕಿ ತಿಳಿಸುತ್ತಾರೆ. ಕೃತಿಯ ಕುರಿತು  ಸುಮಾ ಭಟ್ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಅವಳ ಮನೆ
ಲೇಖಕರು: ತ್ರಿವೇಣಿ
ಪ್ರಕಾಶಕರು: ಸಾಯಿಗೀತ ಪ್ರಕಾಶನ
ಮರು ಮುದ್ರಣ: ೨೦೧೨
ಬೆಲೆ: ೮೦
ಪುಟಗಳು: ೧೫೮

ಬದುಕಿನಲ್ಲಿ ಹಲವರಿಗೆ ಇರುವ ತಪ್ಪು ಕಲ್ಪನೆಯೆಂದರೆ ಸಿರಿತನ ಎಲ್ಲಾ ರೀತಿಯ ಸುಖ ಒದಗಿಸಿ ಬಿಡುತ್ತದೆ, ಬಡತನ ಸಂಕಷ್ಟಗಳ ಸರಮಾಲೆ ಎಂಬ ಭಾವನೆಗಳಿರುತ್ತದೆ. ಆದರೆ ಬದುಕಲ್ಲಿ ಸಿರಿತನ ಬಡತನಕ್ಕಿಂತಾ ಒಳ್ಳೆಯತನ, ಆತ್ಮೀಯತೆ, ಅನುನಯತೆ ಮುಖ್ಯ ಎಂಬುದು ಈ ಕಥೆಯ ಮೂಲಕ ಲೇಖಕಿ ತಿಳಿಸುತ್ತಾರೆ. ನಮ್ಮದೇ ಆದ ಮನೆ ಅಂದರೆ ನಮ್ಮ ಇಚ್ಛೆಯಂತೆ ನಮಗಿಷ್ಟ ಬಂದಂತೆ ಇರುವ ಮನೆ ಪ್ರತಿಯೊಬ್ಬರ ಕನಸು. ಇಲ್ಲಿ ನಾಯಕಿ ತನಗಾಗಿ ಮನೆ, ಬಾಂಧವ್ಯ ಹೀಗೆ ಎಲ್ಲವನ್ನು ಎಲ್ಲರಂತೆ ಸಹಜವಾಗಿ ಆಸೆ ಪಟ್ಟಿದ್ದಳು. ಅದು ಅವಳಿಗೆ ದೊರಕಿತೇ ಇಲ್ಲವೇ ಎಂಬುದೇ ತ್ರಿವೇಣಿಯವರ “ಅವಳ ಮನೆ” ಕಥಾ ಹಂದರ.

ಹೊಳೆ ನರಸೀಪುರದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಸುಬ್ಬಣ್ಣ ಮತ್ತು ಭಾಗ್ಯಮ್ಮನವರದು ಬಡ ಕುಟುಂಬವಾಗಿತ್ತು. ಬಡಸ್ತಿಕೆಗೆ ಮಕ್ಕಳು ಹೆಚ್ಚು ಎಂದೋ…ಇಲ್ಲಾ ವಂಶೋದ್ಧಾರಕನ ಆಸೆಯಿಂದಲೋ ಈ ದಂಪತಿಗಳಿಗೆ ಶಾಂತ, ಶಾರದ, ಅನಂತ ಲಕ್ಷ್ಮಿ, ಸರೋಜಿ, ಸಾವಿತ್ರಿ ಎಂಬ ಐದು ಹೆಣ್ಣು ಮಕ್ಕಳಾದರೆ, ನರಸಿಂಹನೆಂಬ ಒಬ್ಬ ವಂಶೋದ್ಧಾರಕನಿದ್ದ. ಮನೆ ಪಾಠ ಹೇಳಿ ಅಂಗಡಿಯೊಂದರಲ್ಲಿ ಲೆಕ್ಕ ಬರೆಯುವ ಕೆಲಸದಲ್ಲಿ ಸುಬ್ಬಣ್ಣ ತೊಡಗಿದ್ದರೂ ಮನೆಯಲ್ಲಿ ಬಡತನವಿದ್ದೇ ಇತ್ತು. ಶಾಂತ ಮನೆಗೆಲಸಕ್ಕೆ ತಾಯಿಗೆ ನೆರವಾದರೆ…ಶಾರದಾ ಆರೋಗ್ಯದಲ್ಲಿ ಆಗಾಗ ತೊಂದರೆ… ಗಂಡಿನ ಅಪೇಕ್ಷೆಯಿದ್ದಾಗ ಹುಟ್ಟಿದ ಅನಂತಲಕ್ಷ್ಮಿ ಹೆಣ್ಣಾದ ಕಾರಣ ಅಲಕ್ಷ್ಯ…ಸರೋಜಿ ಬಡತನದಲ್ಲಿ ಬೆಳೆದರೂ ಚಂದವಿದ್ದರೆ… ನರಸಿಂಹ ಮನೆಯ ವಂಶೋದ್ಧಾರಕನೆಂಬ ಕಾರಣಕ್ಕೆ ಹೆಚ್ಚು ಮಾನ್ಯತೆ…ಸಾವಿತ್ರಿ ಹತ್ತು ತಿಂಗಳ ಕೈಗೂಸು.

ಮೈಸೂರಿನಲ್ಲಿದ್ದ ಸುಬ್ಬಣ್ಣನ ದೂರದ ಸಂಬಂಧಿ ರಾಮಸ್ವಾಮಯ್ಯ ಸಿರಿವಂತರಾದರೂ ಮಕ್ಕಳಿಲ್ಲದ ಕಾರಣ ಸುಬ್ಬಣ್ಣನ ಬಳಿ ಮಗುವೊಂದನ್ನು ದತ್ತು ಕೊಡಲು ಕೇಳುತ್ತಾರೆ. ಈ ವಿಷಯದ ಬಗ್ಗೆ ಸುಬ್ಬಣ್ಣ ಮಡದಿ ಭಾಗ್ಯಮ್ಮನ ಬಳಿ ಪ್ರಸ್ತಾಪಿಸಿದಾಗ ಮೊದಲು ನಿರಾಕರಿಸುತ್ತಾಳೆ. ಕೊಂಚ ಯೋಚಿಸಿದ ಮೇಲೆ ಒಂದು ಮಗುವಿನ ಜೀವನವಾದರೂ ದಡ ಸೇರುತ್ತದೆ ಮತ್ತು ಆ ಮಗುವು ಸಿರಿವಂತರ ಮನೆ ಸೇರುವುದರಿಂದ ಅದರ ಮೂಲಕ ನಮ್ಮ ಬಡತನದ ಬದುಕು ಸುಧಾರಿಸಬಹುದು ಎಂಬ ಆಲೋಚನೆ ಮೂಡಿದಾಗ ಭಾಗ್ಯಮ್ಮ ದತ್ತು ಕೊಡುವ ಸುಬ್ಬಣ್ಣನವರ ನಿರ್ಧಾರಕ್ಕೆ ಬೆಂಬಲ ನೀಡುತ್ತಾಳೆ.

ಮೈಸೂರಿನ ರಾಮಸ್ವಾಮಯ್ಯ ಮತ್ತು ನಾಗಮ್ಮ ದಂಪತಿಗಳು ಸುಬ್ಬಣ್ಣನವರ ಮನೆಗೆ ಬಂದು ಔಪಚಾರಿಕ ಮಾತುಕಥೆಯಾದ ಮೇಲೆ ಬಂದ ಮುಖ್ಯ ವಿಷಯದ ಮಾತಿಗಿಳಿಯುತ್ತಾರೆ. ನಾಗಮ್ಮ ಎಂಟು ತಿಂಗಳ ಚಿಕ್ಕ ಮಗುವಾದ ಸಾವಿತ್ರಿಯನ್ನು ದತ್ತು ನೀಡುವ ಬಗ್ಗೆ ಪ್ರಸ್ತಾಪ ಮಾಡಿದಾಗ, ಭಾಗ್ಯಮ್ಮನ ಮುಖದ ನೋವು ಅರಿತು ಅವರೇ ಯಾವುದಾದರೂ ಮಗುವನ್ನು ಕಳಿಸುವ ನಿರ್ಧಾರ ತೆಗೆದುಕೊಳ್ಳುವಂತೆ ದಂಪತಿಗಳಿಗೆ ಸೂಚಿಸುತ್ತಾರೆ. ಸಾವಿತ್ರಿ ಎಳೆಗೂಸು ಅದನ್ನು ಮಕ್ಕಳೇ ಹೆರದ ನಾಗಮ್ಮ ಸಂಭಾಳಿಸಲಾರರು ಎಂಬ ಯೋಚನೆಯಿಂದ ಸಾವಿತ್ರಿಯನ್ನು ಅವರಿಗೆ ದತ್ತು ನೀಡುವುದು ಬೇಡವೆಂಬ ನಿರ್ಧಾರಕ್ಕೆ ದಂಪತಿಗಳಿಬ್ಬರು ಬರುವಂತಾಗುತ್ತದೆ. ಒಂದೊಂದು ಮಗುವನ್ನು ಒಂದೊಂದು ಕಾರಣದಿಂದ ಕಳಿಸುವುದು ಬೇಡವೆಂದು ಚರ್ಚಿಸಿದ ದಂಪತಿಗಳು ಮಕ್ಕಳಲ್ಲಿ ಯಾರು ಹೋಗಲು ಇಚ್ಛಿಸುವರೋ ಅವರನ್ನೇ ಕಳಿಸುವುದೆಂಬ ತೀರ್ಮಾನಕ್ಕೆ ಬರುತ್ತಾರೆ.

ಮಕ್ಕಳು ಒಬ್ಬೊಬ್ಬರನ್ನೇ ಕೇಳಿದಾಗ ಯಾರೂ ಒಪ್ಪುವುದಿಲ್ಲಾ, ಆದರೆ ಬಟ್ಟೆ, ಊಟ ಇವುಗಳ ಆಸೆ ತೋರಿಸಿ ಬೆಲ್ಲದ ಚೂರಿನ ಆಸೆ ತೋರಿಸಿ ಕಡೆಗೆ ಸ್ವಲ್ಪ ಜೋರಾಗಿದ್ದ ಸರೋಜಿಯನ್ನು ಅವರೊಂದಿಗೆ ಹೋಗಲು ಒಪ್ಪಿಸುತ್ತಾರೆ. ನಾಗಮ್ಮ, ರಾಮಸ್ವಾಮಿ ದಂಪತಿಗಳೊಂದಿಗೆ ಕಾರಲ್ಲಿ ಹೊರಟ ಸರೋಜಿ ಅತ್ತರೂ ನಾಗಮ್ಮ ಸಂಭಾಳಿಸುತ್ತಾರೆ. ಸರೋಜಿ ತನ್ನ ಮನೆಯಿಂದ ಮೈಸೂರಿನ ಬಂಗ್ಲೆಗೆ ಬಂದ ನಂತರ ನಾಗಮ್ಮ ಅವಳನ್ನು ನಿಧಾನವಾಗಿ ತಿದ್ದಲಾರಂಭಿಸುತ್ತಾರೆ. ರಾಮಸ್ವಾಮಿ ವ್ಯವಹಾರಸ್ಥ ಅವರಿಗೆ ದತ್ತು ಪ್ರಕ್ರಿಯೆ ಒಲ್ಲದ ವಿಷಯ, ಆದರೆ ನಾಗಮ್ಮ ಹಠ ಹಿಡಿದು ಇದಕ್ಕೆ ಒಪ್ಪಿಸಿರುತ್ತಾರೆ.

ಮನೆಯಲ್ಲಿ ನರಸಿಂಹನೊಂದಿಗೆ ಎಲ್ಲದಕ್ಕೂ ಜಗಳಕ್ಕೆ ಹೊರಡುತ್ತಿದ್ದ ಈ ಪೋರಿ ಇಲ್ಲಿ ಮಂಕಾಗುತ್ತಾಳೆ. ರಾಮಸ್ವಾಮಿಯವರೊಂದಿಗೆ ಸರೋಜಿಗೆ ಆತ್ಮೀಯತೆ ಬೆಳೆಯದಿದ್ದರೂ ನಾಗಮ್ಮ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾಗಮ್ಮ ಅವಳನ್ನು ಹೊಳೆ ನರಸೀಪುರಕ್ಕೆ ಕರೆದುಕೊಂಡು ಹೋದಾಗ ಮೊದ ಮೊದಲು ತಂಗಿಯೊಂದಿಗೆ ಬೆರೆತರೂ ನಂತರದ ದಿನಗಳಲ್ಲಿ ಅವಳ ಅಕ್ಕ, ತಮ್ಮ ಎಲ್ಲರೂ ಅವಳಿಂದ ಅಂತರ ಕಾಯ್ದುಕೊಳ್ಳಲಾರಂಭಿಸುತ್ತಾರೆ. ನಾಗಮ್ಮ ಅವಳ ಅವಶ್ಯಕತೆ ಪೂರೈಸುವುದಲ್ಲದೇ ಅವಳೊಂದಿಗೆ ಆತ್ಮೀಯವಾಗಿದ್ದರೂ ಅವಳಿಗೆ ಪರಕೀಯತೆ ಕಾಡುತ್ತಿತ್ತು.

ಸರೋಜಿನಿಯನ್ನು ತಿದ್ದಿ ತೀಡಿ ನಗರದವರೊಂದಿಗೆ ವ್ಯವಹರಿಸುವ ಪರಿ ನಾಗಮ್ಮ ಹೇಳಿಕೊಟ್ಟಿದ್ದರಿಂದ ಸಿರಿವಂತಿಕೆಯ ಬದುಕಿಗೆ ಹೊಂದಿಕೊಳ್ಳುವತ್ತಾ ಅವಳು ಸಾಗಿದಳು. ಆದರೆ ಅತ್ತ ಸರೋಜಿ ಹೊಳೆ ನರಸೀಪುರಕ್ಕೆ ಹೋಗಲು ಇಷ್ಟಪಡದೆ ಇತ್ತ ಈ ಮನೆಯಲ್ಲೂ ಹಿಂಜರಿಕೆಯಿಂದ ಒಂಟಿಯಾಗುವಂತಾಗುತ್ತದೆ. ಎರಡು ವರ್ಷ ಕಳೆಯುವಷ್ಟರಲ್ಲಿ ಅವಳಲ್ಲಿ ಹಲವು ಮಾರ್ಪಾಡುಗಳು ಕಂಡವು, ಅದರಲ್ಲಿ ಮನೆ ಪಾಠಕ್ಕೆ ಬರುತ್ತಿದ್ದ ಮೇಷ್ಟ್ರು ಅಂದರೆ ಬೇಸರಿಸುತ್ತಿದ್ದವಳು ಅವರೊಂದಿಗೆ ಬೆರೆಯಲಾರಂಭಿಸಿದಳು. ಮನೆ ಪಾಠ ಹೇಳಲು ಬರುತ್ತಿದ್ದ ಮಾಧವ ಸರೋಜಿನಿಗೆ ಸಂಗೀತ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸುತ್ತಾರೆ.

ಅತ್ತೆ ಎಂದು ಕರೆಯುತ್ತಿದ್ದ ನಾಗಮ್ಮ ಮತ್ತು ಹೆತ್ತವಳು ಒಡಹುಟ್ಟಿದವರೊಂದಿಗೆ ಬರದ ಆತ್ಮೀಯತೆ ಮಾಧವ ಮಾಸ್ತರೊಂದಿಗೆ ಸರೋಜಿನಿಗೆ ಬೆಳೆಯುತ್ತದೆ. ಸರೋಜಿನಿಗೆ ಸಂಗೀತದ ಮೇಲಿರುವ ಆಸಕ್ತಿ ನಾಗಮ್ಮನವರ ಗಮನಕ್ಕೂ ಬರುತ್ತದೆ. ಎರಡು ವರ್ಷಗಳ ನಂತರ ಹೊಳೆ ನರಸೀಪುರಕ್ಕೆ ನಾಗಮ್ಮನವರ ಜೊತೆ ಸರೋಜಿ ಹೋದಾಗ ಭಾಗ್ಯಮ್ಮ ನಾಗಮ್ಮ ಇರದಾಗ ಸರೋಜಿಯನ್ನು ಮಾತಾಡಿಸುತ್ತಾ ನಿನ್ನೊಂದಿಗೆ ನರಸಿಂಹನನ್ನು ಕರೆದುಕೊಂಡು ಹೋಗಲು ಒತ್ತಾಯಿಸು ಎನ್ನುತ್ತಾರೆ. ತನ್ನ ಮಿತಿ ಅರಿತಿದ್ದ ಸರೋಜಿ ತಾಯಿಯನ್ನೇ ಕೇಳೆಂದು ತಾನು ಕೇಳಲಾರೆ ಎಂದಾಗ ಅವಳು ಸ್ವಾರ್ಥಿ ಹಾಗೆ ಹೀಗೆಂದು ಭಾಗ್ಯಮ್ಮ ದೂರಲಾರಂಭಿಸಿ ಬಿಡುತ್ತಾರೆ.

ಸರೋಜಿ ನರಸೀಪುರದಿಂದ ಮರಳಿ ಬಂದ ಮೇಲೆ ತಾಯಿ ನರಸಿಂಹನ ಓದಿನ ಸಲುವಾಗಿ ಮೈಸೂರಿಗೆ ಕರೆಸಿಕೊಳ್ಳುವ ಮತ್ತು ಶಾಂತಿಯ ಮದುವೆಗೆ ಸಹಕರಿಸಲು ಅವಳನ್ನು ಸಾಕುತ್ತಿರುವ ಸಿರಿವಂತರ ಬಳಿ ಕೇಳು ಎಂದು ಮೇಲಿಂದ ಮೇಲೆ ಪತ್ರ ಬರೆಯಲಾರಂಭಿಸುತ್ತಾರೆ. ನಾಗಮ್ಮ ಶಾಂತಿಯ ಮದುವೆಗೆ ಕರೆಯಲು ಸುಬ್ಬಣ್ಣ ದಂಪತಿಗಳು ಬಂದಾಗ ಮದುವೆಗೆ ಸಹಾಯ ನೀಡಿದರೂ ನರಸಿಂಹನನ್ನು ಇರಿಸಿಕೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿ ಬಿಡುತ್ತಾರೆ. ಆದರೆ ಸುಬ್ಬಣ್ಣ ದಂಪತಿಗಳು ಇದಕ್ಕೂ ಮಗಳು ಸರೋಜಿ ಹಠ ಹಿಡಿದು ಪ್ರಯತ್ನಿಸಿದ್ದರೆ ಆಗುತ್ತಿತ್ತು ಎಂಬ ಅಸಮಾಧಾನ ಪ್ರಕಟಿಸಿಯೇ ಹೊರಡುತ್ತಾರೆ. ಮದುವೆಗೆ ಹೋದಾಗಲು ಸರೋಜಿಗೆ ಬೇಸರವಾಗುವಂತೆ ನಡೆದುಕೊಂಡು ನರಸಿಂಹನನ್ನು ಕರೆಸಿಕೊಳ್ಳದಿರುವುದಕ್ಕೆ ಸರೋಜಿಯನ್ನು ಸ್ವಾರ್ಥಿ ಎಂದು ತಮ್ಮ ಅಸಹನೆ ವ್ಯಕ್ತಪಡಿಸುತ್ತಾರೆ.

ಸರೋಜಿ ನಡೆದ ಘಟನೆಗಳಿಂದ ನೊಂದು ಮತ್ತೆ ನರಸೀಪುರಕ್ಕೆ ಹೋಗುವುದೇ ಬೇಡವೆಂದು ತೀರ್ಮಾನಿಸಿ ಬಿಡುತ್ತಾಳೆ. ಸರೋಜಿಯನ್ನು ನಾಗಮ್ಮ ಗಂಡನೊಡನೆ ಜಗಳ ಕಾದು ಕಾಲೇಜಿಗೆ ಕಳಿಸಿದ್ದಲ್ಲದೇ ಸರೋಜಿಗೆ ಸಂಗೀತದಲ್ಲಿ ಅಭಿರುಚಿಯಿರುವ ಕಾರಣ ಅದನ್ನು ಕಲಿಸಲು ವ್ಯವಸ್ಥೆ ಮಾಡುತ್ತಾರೆ. ಸರೋಜಿ ವೀಣೆ, ಸಂಗೀತ ಎರಡೂ ಕಲಿಯಲಾರಂಭಿಸುತ್ತಾಳೆ. ಸರೋಜಿ ಹಲವಾರು ವರ್ಷಗಳ ನಂತರ ತನಗೆ ಪಾಠ ಮಾಡುತ್ತಿದ್ದು ಕೆಲಸದ ನಿಮಿತ್ತ ಬೇರೆ ಹೋಗಿದ್ದ ಮಾಧವ ಮೇಷ್ಟ್ರನ್ನು ಕಾಲೇಜಿನಲ್ಲಿ ಭೇಟಿ ಮಾಡುತ್ತಾಳೆ.

ಸರೋಜಿ ನಗರಕ್ಕೆ ನಾಗಮ್ಮನವರ ಮನೆಗೆ ದತ್ತು ಮಗಳಾಗಿ ಬಂದ ಮೇಲೆ ಅವಳನ್ನು ಕಾಡಿದ್ದಾದರೂ ಏನು??? ಹೆತ್ತವರಿಂದ ದೂರ ಇರಲು ಅಳುತ್ತಿದ್ದ ಅವರ ಯಾವ ಮಾತುಗಳಿಂದ ನೊಂದು ಬೆಳೆದ ಮೇಲೆ ಅವರಿದ್ದೆಡೆ ಹೋಗಲು ಹಿಂಜರಿಯುವಂತಾಗಿತ್ತು???

ಸರೋಜಿಗೆ ಸಾಕುತ್ತಿದ್ದವರ ಮನೆಯಲ್ಲಿ ಹೆಚ್ಚು ಹಣ ಸಿಗದ ಕಾರಣ ಕಾಲೇಜಿನಲ್ಲಿ ಸಹಪಾಠಿಗಳಿಂದ ಯಾವ ಟೀಕೆಗಳಿಗೆ ಗುರಿಯಾಗುವಂತಾಗುತ್ತದೆ??? ಮಾಧವ ಮೇಷ್ಟ್ರು ಸರೋಜಿಯ ಬಾಳಿನಲ್ಲಿ ಮತ್ತೆ ಬಂದಾಗ ಅವಳ ಸಂಗೀತಕ್ಕೆ ಯಾವ ರೀತಿ ಪ್ರೋತ್ಸಾಹ ನೀಡಿದರು???

ಮಾಧವ ಮತ್ತು ಸರೋಜಿಯ ಮಧ್ಯ ಪ್ರೀತಿ ಹೇಗೆ ಅರಳಿತು??? ಮಾಧವ ಮತ್ತು ಸರೋಜಿಯ ಪ್ರೀತಿಗೆ ರಾಮಸ್ವಾಮಯ್ಯ ಮತ್ತು ನಾಗಮ್ಮನವರ ಪ್ರತಿಕ್ರಿಯೆ ಏನಾಗಿತ್ತು???

ಹೆತ್ತವರಿಂದಲೂ ದೂರಾಗಿ ಸಾಕಿದವರ ಮನೆಯಲ್ಲೂ ಸಲಿಗೆ ಬೆಳೆಯದೇ ತೊಳಲಾಡುವ ಸರೋಜಿನಿಗೆ ಅವಳದೇ ಆದ ಮನೆ ಅಂದರೆ ಅವಳ ಮನೆ ದೊರಕುವುದೇ??? ಅರಿಯಲು ತ್ರಿವೇಣಿಯವರ “ಅವಳ ಮನೆ” ಕಾದಂಬರಿ ಓದಿ ನೋಡಿ.

ಕಾದಂಬರಿಯಲ್ಲಿ ನಾಗಮ್ಮನವರ ಹೃದಯ ವೈಶಾಲ್ಯತೆ ಮೆಚ್ಚುಗೆಯಾಗುತ್ತದೆ. ಆದರೆ ಸರೋಜಿನಿಯ ಸ್ಥಿತಿ ಕಂಡಾಗ ಬೇಸರವೂ ಆಗುತ್ತದೆ. ಹೆತ್ತವರಿಗೆ ತನ್ನ ಸ್ಥಿತಿ ವಿವರಿಸಲಾಗದೆ..ಸ್ನೇಹಿತರೊಡನೆ ಕಾಲೇಜಿನ ಬದುಕಿಗೆ ಒಗ್ಗಲಾರದೆ ಕಷ್ಟಪಡುವ ಸರೋಜಿನಿಯ ಮೇಲೆ ಅನುಕಂಪ ಮೂಡುತ್ತದೆ. ಮಾಧವ ಸರೋಜಿನಿಗೆ ನೀಡುವ ಪ್ರೋತ್ಸಾಹ ಇವೆಲ್ಲವೂ ಕಾದಂಬರಿಯಲ್ಲಿ ಗಮನ ಸೆಳೆಯುತ್ತದೆ. ಹೆಣ್ಣೊಬ್ಬಳ ಮಾನಸಿಕ ದ್ವಂದ್ವ, ತುಮುಲಗಳಿಗೆ ಕನ್ನಡಿ ಹಿಡಿದು ಲೇಖಕಿ ಇಲ್ಲಿ ತೋರಿದ್ದಾರೆನ್ನಬಹುದು.


  • ಸುಮಾ ಭಟ್

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW